ಭಾಷೆ ಮತ್ತು ನದಿ

ಭಾಷೆ ಮತ್ತು ನದಿ

ಹಿಂದೆ ನದಿ ಪಾತ್ರದಲ್ಲಿ ಜನ ವಾಸಿಸುತ್ತಿದ್ದರು. ಅವರದೇ ಒಂದು ಜನಾಂಗವಾಗುತ್ತಿತ್ತು. ಅವರ ಸಮೂಹ ನಡವಳಿಕೆಗಳು ಕ್ರಮೇಣ ನಾಗರೀಕತೆಗಳಾಗಿ ಸಮಾಜ, ಸಹಕಾರ, ನೀತಿ ಸಂಹಿತೆಗಳು ಆಚಾರಕ್ಕೆ ಬಂದವು ಅಂದುಕೊಳ್ಳೋಣ. ಮಾನವ ಮೊದಮೊದಲು ಎರಡು ಕಲ್ಲನ್ನು ಕುಟ್ಟಿ ಬೆಂಕಿ ಹುಟ್ಟಿಸಿ ನಂತರ ಆಹಾರ ತಯಾರಿಸಲು ಕಲಿತ. ಅದು ಶಿಲಾಯುಗವಾಯ್ತು. ನಾಗರೀಕತೆ ಬೆಳೆಯುತ್ತಾ ಹೋದಂತೆ ಸುಧಾರಣೆಗಳಾಗುತ್ತಾ ಹೋದವು. ಹಾಗೆಯೇ ಮಾನವ ಪ್ರಬುದ್ಧವಾಗುತ್ತಾ ಹೋದ. ಎಲ್ಲೋ ಒಂದು ಕಡೆ ಬೆಟ್ಟದ ಕೊರಕಲಿನಲ್ಲಿ ಹುಟ್ಟಿದ ನದಿಯೂ ಹಾಗೆಯೇ. ಹಲವಾರು ಕಾಡು ಮೇಡು, ಊರು ಕೇರಿ ಬದಿಯಲ್ಲಿ ಹರಿದು ಹತ್ತು ಹಲವು ಮಂದಿಗೆ ನೀರುಣಿಸಿ ಕೆಲವು ಕಡೆ ಪ್ರಶಾಂತವಾಗಿ ಹರಿಯುತ್ತಾ ಕೆಲವು ಕಡೆ ಜಲಪಾತವಾಗಿ ಧುಮುಕುತ್ತಾ ತನಗೆ ದಾರಿ ಸಿಕ್ಕ ಕಡೆ ಸ್ವಾಭಾವಿಕವಾಗಿ ಹರಿಯುತ್ತಾ ಸಮುದ್ರವನ್ನು ಸೇರುತ್ತಾಳೆ. ಹುಟ್ಟಿದ ಮಗುವನ್ನೇ ತೆಗೆದುಕೊಳ್ಳಿ ಮೊದ ಮೊದಲು ಕೈ ಕಣ್ಣು ಸನ್ನೆಯಲ್ಲಿ ತನ್ನದೇ ಆದ ತೊದಲು ನುಡಿಯಲ್ಲಿ ಹೇಳಬೇಕಾದ್ದನ್ನು ಹೇಳುತ್ತಿರುತ್ತದೆ. ಕಾಲಕ್ರಮೇಣ ಅದಕ್ಕೆ ಅವರಿವರು ಮಾತನಾಡುವ ಶಬ್ದಗಳು ಕಿವಿಗೆ ಬಿದ್ದು ಯಾವ ಶಾಲೆಗೆ ಹೋಗುವ ಮೊದಲೇ ಸಲೀಸಾಗಿ ಒಂದು ಭಾಷೆಯನ್ನು ಕಲಿತು ಬಿಟ್ಟಿರುತ್ತದೆ. ಭಾಷೆಯನ್ನೂ ಇದೇ ರೀತಿ ಬೆಳೆದು ಬಂದಿತು ಎನ್ನೋಣವೇ?. ಮೊದಲು ಕೆಲವೇ ಮಂದಿ ಒಂದಷ್ಟು ಪದಗಳನ್ನು ಹುಟ್ಟಿಹಾಕುತ್ತಾರೆ. ಪದಗಳನ್ನು ಕೂಡಿಸುವ ನಿಯಮಗಳನ್ನು ಸೃಷ್ಟಿಸುತ್ತಾರೆ. ಕ್ರಮೇಣ ಅವರ ಸಂಖ್ಯೆ ವೃದ್ಧಿಸುತ್ತದೆ. ಜನರು ಭಾವನೆಗಳು, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಆಗಲೇ ಇರುವ ಪದಗಳು ಸಾಲದಾಗಿ ಕೆಲವು ಹೊಸ ಪದಗಳು ಹುಟ್ಟಿಕೊಳ್ಳುತ್ತವೆ. ಹೀಗೆ ಭಾಷೆಯೂ ನದಿಯಂತೆ ಕಾಲಕ್ರಮೇಣ ಹಲವು ಭಾಷೆಯ ಪದಗಳನ್ನು ತನ್ನೊಳಗೆ ಸೇರಿಸಿಕೊಳ್ಳುತ್ತಾ ಹತ್ತು ಹಲವು ಮಾರ್ಪಾಡನ್ನು ಮಾಡಿಕೊಳ್ಳುತ್ತಾ ಮುಂದುವರೆಯುತ್ತಾ ಹೋಗುತ್ತದೆ. ಆದ್ದರಿಂದ ಒಂದು ಭಾಷೆಯನ್ನು ಅದರ ಮೂಲವನ್ನು ಹುಡುಕಿ ಅಲ್ಲಿದ್ದಷ್ಟೇ ಪದಗಳು ನಮಗೆ ಸಾಕು ಎನ್ನುವುದು ಎಷ್ಟು ಸರಿ? ಇದು ಒಂದು ನದಿಯು ಹುಟ್ಟುವ ತಾಣದಲ್ಲಿ ಅಣೆಕಟ್ಟು ಕಟ್ಟಿ ಅಲ್ಲಿಗೇ ನೀರನ್ನು ನಿಲ್ಲಿಸುವಷ್ಟು ಮೂರ್ಖ ತನವಾದೀತು. ಆ ನದಿ ಹರಿಯಲೇಬೇಕು. ಅದು ನಿಯಮ. ಒಂದಲ್ಲಾ ಒಂದು ದಿನ ಕಟ್ಟಿದ ಕಟ್ಟೆಯನ್ನು ಮೀರಿ ಹರಿದು ಸಮುದ್ರ ಸೇರಲೇಬೇಕು. ನಮ್ಮ ಕನ್ನಡದಲ್ಲಿ ಇಂದಿಗೂ ಎಷ್ಟೋ ವಸ್ತುಗಳಿಗೆ ಸ್ವಂತ ಭಾಷೆಯ ಪದಗಳಿಲ್ಲ. ಹೃದಯ, ವರ್ತುಲ, ಜನಾಂಗ ಇತ್ಯಾದಿ ಪದಗಳು ನಮ್ಮ ಭಾಷೆಯವಲ್ಲ. ಅದನ್ನು ಬಳಸಲೇ ಬೇಡಿ. ಅದು ಅಪರಾಧ. ಒಂದು ವೇಳೆ ಬಳಸಲೇಬೇಕೆಂದಿದ್ದರೆ ಅವುಗಳನ್ನು ಕೈಸನ್ನೆ ಮಾಡಿ ತೋರಿಸಿ ಅಥವಾ ಚಿತ್ರ ಬಿಡಿಸಿ ತೋರಿಸಿ ಎಂದಂತಾದೀತು. ಆದ್ದರಿಂದ ಜನರಿಗೆ ಯಾವ ಪದಗಳು ಅನುಕೂಲವೆನಿಸುತ್ತದೋ ಅವರವರಿಗೆ ಬಿಟ್ಟು ಬಿಡುವುದು ಒಳ್ಳೆಯದು. ಅದು ಬಿಟ್ಟು ಆಡುವ ಭಾಷೆಗೂ ನಿಯಮ ಕಟ್ಟಳೆಗಳನ್ನು ತಂದರೆ ಹರಿಯುವ ನೀರಿಗೆ ಅಡ್ಡಕಟ್ಟಿದಂತಾದೀತು.

Rating
No votes yet

Comments