ಶಿಕ್ಷಣಸ್ಥ ದಲಿತರ ಹಾಡಿ ಕಳಸನಕೊಪ್ಪಕ್ಕೆ ಬೇಕಿದೆ ಜಲಸಾಕ್ಷರತೆಯ ಪೂರ್ಣಪಾಠ

ಶಿಕ್ಷಣಸ್ಥ ದಲಿತರ ಹಾಡಿ ಕಳಸನಕೊಪ್ಪಕ್ಕೆ ಬೇಕಿದೆ ಜಲಸಾಕ್ಷರತೆಯ ಪೂರ್ಣಪಾಠ

ಬರಹ

ಒಂದು ಮಾತು. ಕಳಸನಕೊಪ್ಪದ ಜನರ ಈ ಸೋಲಿನ ಕಥೆ ಇತರರಿಗೆ ಪಾಠವಾಗಲಿ. ಸುಧಾರಣೆಗೆ ನಾಂದಿ ಹಾಡಲಿ. ಇಂತಹ ಪರಿಸರ ಅಸ್ನೇಹಿ ಪ್ರಯೋಗಗಳು ನಿಲ್ಲಲಿ. ಪರ್ಯಾಯ ಪ್ರಯೋಗಗಳ ಚಿಂತನ-ಮಂಥನ ನಡೆಯಲಿ ಎಂಬ ಉದ್ದೇಶದಿಂದ ಈ ಲೇಖನ.
~.~.~.~.~.~

ಗಾಂಧೀಜಿಯ ಗ್ರಾಮ ಸ್ವರಾಜ್ಯ ನನಸಾಗಿ ಮತ್ತೆ ಕನಸಾಗುವತ್ತ ಸಾಗಿದ ಅಪರೂಪದ ಅಧೋಮುಖ ಬೆಳವಣಿಗೆ ನಿಮ್ಮ ಗಮನಕ್ಕೆ ಬಂದಿದೆಯೇ? ಕಳಸನಕೊಪ್ಪದ ಜನ ಸಕಾಲದಲ್ಲಿ ಜಲಸಾಕ್ಷರರು ಆಗದ್ದರಿಂದ ಈ ಅಧೋಮುಖ ಪ್ರಗತಿ ಕಾಣಿಸಿದೆ. ಇನ್ನಾದರೂ ಅವರು ‘ಜಲಯೋಧ’ ರು ಆಗಬೇಕಿದೆ.

‘ಕಳಸನಕೊಪ್ಪ’ ಗಾಂಧೀಜಿ ಕಂಡ ವಿಧಾಯಕ ಕಾರ್ಯಗಳ ಮಾದರಿ ಕ್ಷೇತ್ರ. ಗ್ರಾಮ ಸ್ವರಾಜ್ಯದ ಕಲ್ಪನೆ ಸಾಕಾರಗೊಳಿಸಿ ಉತ್ತರ ಕರ್ನಾಟಕ ಭಾಗದಲ್ಲೇ ‘ಕಲಶ’ಪ್ರಾಯ ಗ್ರಾಮ ಎನಿಸಿತ್ತು. ಗ್ರಾಮ ಭಾರತದಲ್ಲಿರುವ ಜನ ಆರ್ಥಿಕವಾಗಿ ಸ್ವಾವಲಂಬಿಗಳಾದರೆ ದೇಶದ ಅಭಿವೃದ್ಧಿ ಕಟ್ಟಿಟ್ಟದ್ದು ಎಂಬುದಕ್ಕೆ ತಾಜಾ ನಿದರ್ಶನವಾಗಿತ್ತು. ಇದು ೨೦೦೪-೦೫ನೇ ಸಾಲಿನ ಕಥೆ.

ರೇಷ್ಮೆ ಇಲಾಖೆಯ ತಾಂತ್ರಿಕ ಸಹಾಯ, ಕೃಷಿ ವಿಶ್ವವಿದ್ಯಾಲಯದ ವಿಜ್ನಾನಿಗಳ ಸಲಹೆ, ಸೂಚನೆಗಳು ಹಾಗು ಸ್ವಂತದ್ದೇ ಸಹಕಾರ ಸಂಘದಿಂದ ಲಭ್ಯವಿರುವ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಕ್ರೋಢೀಕರಿಸಿಕೊಂಡು ಇವರು ಸ್ವಾವಲಂಬಿ ಜೀವನ ನಡೆಸಿದಂಥವರು. ರೇಷ್ಮೆ ಇಲಾಖೆಯ ಹಿರಿಯ ಅಧಿಕಾರಿ ಡಿ.ಎಚ್.ಅಳಗುಂಡಗಿ ಅವರ ಮಾರ್ಗದರ್ಶನದಲ್ಲಿ ೩೫ ಕೊಳವೆ ಬಾವಿಗಳನ್ನು ಕೊರೆಯಿಸಿಕೊಂಡು ೬೦೦ ಎಕರೆ ನೀರಾವರಿ ಮಾಡಿಕೊಂಡವರು. ಅಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ರೇಷ್ಮೆ ಬೆಳೆದವರು. ಇವರಿಗೆ ದಶಕಗಳ ಕಾಲ ಇದೊಂದೇ ಉದ್ಯೋಗವಾಗಿತ್ತು. ಮಕ್ಕಳು ಮಹಿಳೆಯರು ಎಲ್ಲರೂ ಇದರಲ್ಲಿ ತೊಡಗಿಸಿಕೊಂಡಿದ್ದರು.

ಇಲ್ಲಿನ ‘ಕ್ವಾಲಿಟಿ ಕ್ಲಬ್ ಕೋ-ಆಪರೇಟಿವ್ ಸೊಸಾಯಿಟಿ’ ಅಧ್ಯಕ್ಷ ಶ್ರೀಕಾಂತ ದಾದುಗೋಳ ಅವರು ಇಲ್ಲಿನ ದಲಿತರ ಸ್ವಾವಲಂಬಿ ಜೀವನ ಹಾಗು ರೇಷ್ಮೆ ಕೃಷಿಯ ಸಾಧನೆಯನ್ನು ಇಂದಿಗೂ ಮನಸಾರೆ ಬಣ್ಣಿಸುತ್ತಾರೆ.

ಕಲಘಟಗಿ ಪಟ್ಟಣದಿಂದ ೩೦ ಕಿಲೊ ಮೀಟರ್ ಅಂತರದಲ್ಲಿರುವ ಗುಡ್ಡಗಾಡು ಪ್ರದೇಶದ ಮಧ್ಯದಲ್ಲಿ ಈ ಕಳಸನಕೊಪ್ಪ ಗ್ರಾಮವಿದೆ. ಅತ್ಯಂತ ಹಿಂದುಳಿದ ದಲಿತ ವರ್ಗಕ್ಕೆ ಸೇರಿದ ‘ಚಲವಾದಿಗಳು’ ಮಾತ್ರ ವಾಸಿಸುತ್ತಿರುವ ಗ್ರಾಮ. ಅದು ಶುದ್ಧ ದಲಿತರ ಹಾಡಿ. ಸಂಪೂರ್ಣ ಸಾಕ್ಷರತೆ ಹೊಂದಿ, ಸಾಂಪ್ರದಾಯಿಕ ಕೃಷಿ ಬಿಟ್ಟು, ರೇಷ್ಮೆ ಕೃಷಿ ಕೈಗೊಂಡು ಛಲದಿಂದ ಬದುಕು ಕಟ್ಟಿಕೊಂಡಿದ್ದರು. ಈ ಗ್ರಾಮದಲ್ಲಿ ಬೇರೆ ವರ್ಗದ ಒಂದು ಮನೆಯೂ ಇಲ್ಲ. ಬದಲಾಗಿ ಪರಿಶಿಷ್ಟ ಜಾತಿಗೆ ಸೇರಿದ ಚಲವಾದಿಗಳ ೭೦ ಕುಟುಂಬಗಳು ಇಲ್ಲಿ ಒಗ್ಗಟ್ಟಿನಿಂದ ಬಾಳು ಕಟ್ಟಿಕೊಂಡಿವೆ. ಪ್ರಮುಖ ಉದ್ಯೋಗ ರೇಷ್ಮೆ ಕೃಷಿ. ಸುಮಾರು ೬೦ ಎಕರೆ ಪ್ರದೇಶದಲ್ಲಿ ಹಿಪ್ಪು ನೇರಳೆ ಕೃಷಿ ಚಾಲ್ತಿಯಲ್ಲಿದೆ.

ಮಳೆ ನಂಬಿ ಕೇವಲ ೨ ಪೀಕುಗಳಿಗೆ ಶರಣಾಗಿ ತಲೆ ಮೇಲೆ ಕೈಹೊತ್ತು ಕುಳಿತ ಜನ ಇವರಲ್ಲ. ಗೋಧಿ, ಜೋಳ ಹಾಗು ಹತ್ತಿ ಬೆಳೆದು ಪೀಕಿಗಾಗಿ ಅವರು ಪರಿತಪಿಸಿದ್ದಿಲ್ಲ. ಸಾಂಪ್ರದಾಯಿಕವಾಗಿ ಕೊಡಮಾಡಲ್ಪಟ್ಟ ಗೋಮಾಳವನ್ನೇ ಅಭಿವೃದ್ದಿಪಡಿಸಿಕೊಂಡು ಹಿಪ್ಪು ನೇರಳೆ ಬೆಳೆದರು. ರೇಷ್ಮೆ ಇಲಾಖೆಯ ಅನುದಾನದ ಅಡಿಯಲ್ಲಿ ಕೊಳವೆ ಬಾವಿ ಹೊಡಿಸಿಕೊಂಡು ವರ್ಷವೊಂದಕ್ಕೆ ೪ ರೇಷ್ಮೆ ಬೆಳೆಗಳನ್ನು ಬೆಳೆದು ಲಕ್ಷಾಧಿಪತಿಗಳಾಗಿದ್ದವರು.

ಮೀಸಲಾತಿ, ಸಮಾನತೆ ನಮ್ಮ ಹಕ್ಕು ಎಂದು ಹೋರಾಟದ ಗೋಜಿಗೆ ಹೋಗದೇ ಸ್ವತಂತ್ರವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಂಡ ದಲಿತರೂ ಇದ್ದಾರೆ ಎನ್ನುವುದಕ್ಕೆ ಕಲಘಟಗಿ ತಾಲೂಕಿನ ಕಳಸನಕೊಪ್ಪದ ‘ಛಲವಾದಿ’ಗಳೆ ಸಾಕ್ಷಿ. ಇವರಿಗೆ ರಾಜಕೀಯ ಗೊತ್ತಿಲ್ಲ. ಸಮಾನತೆಯ ಹೆಸರಿನಲ್ಲಿ ಇವರೆಂದೂ ಬೀದಿಗಿಳಿದಿಲ್ಲ. ಶೋಷಿತ ವರ್ಗಕ್ಕೆ ಸೇರಿದ್ದರೂ ತಮ್ಮ ಬೇಕು-ಬೇಡಗಳನ್ನು ನಿಭಾಯಿಸುವಷ್ಟು ಸಮರ್ಥರು.

ಹೀಗಾಗಿ ಇದೊಂದು ಅಪ್ಪಟ ರೇಷ್ಮೆ ಗ್ರಾಮ. ಇವರ ಮನೆ, ಮನ ಎಲ್ಲವೂ ರೇಷ್ಮೆ. ಇವರು ಬೆಳೆದ ರೇಷ್ಮೆ ಬೆಂಗಳೂರು, ಮೈಸೂರು, ರಾಮನಗರ, ಶಿರಹಟ್ಟಿ ಹಾಗು ಶೀಡ್ಲಘಟ್ಟಕ್ಕೆ ಮಾರಾಟಕ್ಕೆಂದು ಹೋಗುತ್ತದೆ. ಕಳಸನಕೊಪ್ಪ ಗ್ರಾಮ ಬಹುಶ: ಬಹಳ ಜನರಿಗೆ ಗೊತ್ತಿಲ್ಲ. ಆದರೆ ಇವರು ಬೆಳೆದ ರೇಷ್ಮೆ ವಿದೇಶದಲ್ಲಿಯೂ ಹೆಸರು ಮಾಡಿತ್ತು. ಶ್ರೀಲಂಕಾ, ಟಿಬೇಟ್, ನೇಪಾಳ ಸೇರಿದಂತೆ ಹಲವು ದೇಶಗಳ ಕೃಷಿ ವಿಜ್ನಾನಿಗಳು ಹಾಗು ಕೃಷಿಕರು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ಗ್ರಾಮಕ್ಕೆ ಬಂದು ರೇಷ್ಮೆ ಕೃಷಿ ಪದ್ದತಿಯನ್ನು ಅಧ್ಯಯನ ಮಾಡಿದ್ದು ಕರ್ನಾಟಕದ ಹೆಮ್ಮೆಯೇ ಸೈ!

೨೦೦೬- ೦೮ನೇ ಸಾಲಿನ ವ್ಯಥೆ ಕೇಳಿ: ರೇಷ್ಮೆ ಕೃಷಿಗೆ ಕಳಸನಕೊಪ್ಪದ ಜನ ನಂಬಿದ್ದು ಕೊಳವೆ ಭಾವಿಗಳನ್ನು. ಪ್ರತಿಶತ ೬೦ ರಷ್ಟು ಕೊಳವೆ ಬಾವಿಗಳು ಬತ್ತಿವೆ. ಪ್ರತಿಶತ ೨೦ ರಷ್ಟು ಬಾವಿಗಳ ನೀರು ತಳಕಂಡರೂ ಮಾಲೀಕರ ಜೀವ ಹಿಡಿದಿವೆ. ೨೦ ರಿಂದ ೪೦ ಕುಟುಂಬಗಳು ರೇಷ್ಮೆ ಕೃಷಿಗೆ ಸಲಾಂ ಹೊಡೆದು ಸಾಂಪ್ರದಾಯಿಕ ಕೃಷಿ ಪದ್ದತಿಗೆ ಶರಣಾಗಿವೆ. ಗಾಯದ ಮೇಲೆ ಬರೆ ಎಳೆದಂತೆ ೧ ಕಿಲೋ ರೇಷ್ಮೆ ಗೂಡಿಗೆ ೧೦೦ ರುಪಾಯಿ ಬೆಲೆ ಕೃಷಿಕನಿಗೆ ದೊರಕುತ್ತಿದೆ! ಈ ರೇಷ್ಮೆ ಕೃಷಿಕರ ಒತ್ತಾಯವಿರುವುದು ಕನಿಷ್ಠ ೨೫೦ ರುಪಾಯಿ ೧ ಕಿಲೋ ರೇಷ್ಮೆಗೆ ಬೆಂಬಲ ಬೆಲೆ ಸರಕಾರ ಘೋಷಿಸಬೇಕು ಎಂಬುದು.

ಕಳೆದ ೨ ದಶಕಗಳಿಂದ ರೇಷ್ಮೆ ಕೃಷಿ ನಂಬಿ ಬದುಕು ಕಟ್ಟಿಕೊಂಡು ಬಂದ ಗ್ರಾಮದ ಹಿರಿಯ ಶಿವರುದ್ರಪ್ಪ ಬಾಲಪ್ಪ ಮುತ್ನಾಳ (೬೦) ಅವರ ಮನಸ್ಸು ಇಂದಿಗೂ ರೇಷ್ಮೆಯಿಂದ ಹಿಂದೆ ಸರಿದಿಲ್ಲ. ಅವರ ಹೊಲದ ಕೊಳವೆ ಬಾವಿ ಸಹ ಬತ್ತುವ ಹಂತದಲ್ಲಿದೆ. ಆದರೂ ಅಳಿದುಳಿದ ‘ಶಕ್ತಿ’ ಒಗ್ಗೂಡಿಸಿಕೊಂಡು ಒಬ್ಬರೇ ರೇಷ್ಮೆ ಧಣಿ ಸದ್ಯ ಉಳಿದಿದ್ದಾರೆ.

ಅವರ ಮಾತುಗಳಲ್ಲೇ ಕೇಳಿ: "ನಮ್ಮೂರ ನಸಲಿಗೆ ವರ ರೇಷ್ಮೆ. ಒಂದು ಬೆಳಿಗೆ ೫ ರಿಂದ ೬ ಸಾವಿರ ರುಪಾಯಿ ಉತ್ಪನ್ನ. ವರ್ಷಕ್ಸ ೪ ಬೆಳಿ. ಮಳೆಗಾಲದಾಗ ಒಂದ ಬೆಳಿ ಖೋತಾ ಆದ ವೇಳ್ಯಾ ಹೆಚ್ಚು. ಬರಬರ್ತ ಊರಾಗ ನೀರಿನ ಬರ ಶುರುವಾಗೈತಿ. ಹಿಪ್ಪು ನೆರಳಿ ಬೆಳ್ಯಾಕ ನೀರು ಭಾಳ ಬೇಕು. ಛೋಲೊ ಚಂದರಕಿ (ರೇಷ್ಮೆ ಹುಳಿ ಗೂಡು ಕಟ್ಟುವ ಮನೆ) ಬೇಕು. ಇಂಬಾದ ತೋಟದ ಮನಿ ಬೇಕು. ಸರಕಾರದವರು ಇಲ್ಲ್ಲೆ ೪-೬ ಮನೆಗಳಿಗೆ ಕಟ್ಟಿಸಿಕೊಟ್ಟಾರ. ಈಗ ಮೊದಲಿನ ರೇಟು ಉಳಿದಿಲ್ಲ. ಖರ್ಚು ವೆಚ್ಚ ರೇಷ್ಮಿ ಮಾರಿ ಬರೋ ದುಡ್ಡಿಗಿಂತ ೧ ಪಟ್ಟು ಹೆಚ್ಚತೈತಿ" ಅಂದು ನಿಟ್ಟುಸಿರುಬಿಟ್ರು.

ರೇಷ್ಮೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಯುವಕ ಮಹಾವೀರ ಚೆನ್ನಾಪ್ಪಾ ಸೊಲ್ಲಾಪುರ ಅವರು "ನಾವೆಲ್ಲ ಭತ್ತ, ಜೋಳ, ಹತ್ತಿ ಮತ್ತ ಸ್ವಲ್ಪ ಕಾಯಿಪಲ್ಲೆ ಬೆಳೀಲಿಕ್ಕೆ ಶುರು ಮಾಡೇವ್ರಿ. ಈ ವರ್ಷದಿಂದ ರೇಷ್ಮಿ ತೋಟ ಮುಂದುವರೆಸೋವ್ಹಂಗ ಕಾಣುದುಲ್ರಿ. ಇಡೀ ಊರಾಗ ಹಿಂಗೈತ್ರಿ. ಅದಕ್ಕ ಕಬ್ಬಿಣದ ಮನಿ (ಚಂದರಕಿ) ಹಿತ್ತಲದಾಗ ಗಿಡಕ್ಕ ಆನಿಸಿ ನಿಲ್ಲಿಸೇವ್ರಿ" ಅಂದ್ರು.

ಅವರಂತೆ ಪ್ರಗತಿಪರ ರೈತರಾದ ನಾಮದೇವ ನೂಲ್ವಿ, ಚಂದ್ರಕಾಂತ, ಅಪ್ಪಣ್ಣ, ನಿಂಗಪ್ಪ, ಬಸವಣ್ಣಿ ದಾದುಗೋಳ, ಶಂಕರ ಕೋರೇದ, ಮಾರುತಿ ಮುತ್ನಾಳ, ಸಂಭಾಜಿ ಮುತ್ನಾಳ, ದುಂಡಪ್ಪಾ ಸೊಲ್ಲಾಪೂರ ಅವರು, ಶ್ರಮವಿದ್ದಲ್ಲಿ ಸಾಧನೆ ಇದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಆದರೆ ಮತ್ತೆ ರೇಷ್ಮೆ ಕೃಷಿ ಕೈಗೊಳ್ಳುವ ಧೈರ್ಯ ಅವರಲ್ಲಿ ಉಳಿದಿಲ್ಲ.

ಚಲವಾದಿಗಳು ಸಾಹಸಿ ಒಲಸಿಗರು: ಮೂಲತ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮ, ನಿಪ್ಪಾಣಿ ನಗರ ಹಾಗು ಸಂಕೇಶ್ವರ ಪಟ್ಟಣದಿಂದ ಈಗ್ಗೆ ಸುಮಾರು ೫೦ ವರ್ಷಗಳ ಹಿಂದೆಯೇ ಈ ದಲಿತರು ಇಲ್ಲಿಗೆ ಉದ್ಯೋಗ ಅರಸಿ ವಲಸೆ ಬಂದಿದ್ದಾರೆ. ಭೀಮಪ್ಪ ನಿಂಗಪ್ಪಾ ಕೋರೆ ಎಂಬುವವರು ಇಲ್ಲಿಗೆ ಈ ದಲಿತ ಕುಟುಂಬಗಳನ್ನು ಕರೆ ತಂದಿದ್ದಾರೆ. ಸರಕಾರ ಇವರಿಗೆ ೬೦೦ ಎಕರೆ ಗೋಮಾಳ ಪ್ರದೇಶವನ್ನು ಉಳುಮೆಗಾಗಿ ನೀಡಿದೆ. ಸರಕಾರ ಕೊಟ್ಟ ಈ ಭೂಮಿಯನ್ನು ಹದಗೊಳಿಸಿ ರೇಷ್ಮೆ ಕ್ರಾಂತಿಯನ್ನು ಹುಟ್ಟುಹಾಕಿದ್ದು ಸಾಹಸಗಾಥೆಯೇ ಸೈ.

ಅಂದು ನಾಲ್ಕಾರು ಕುಟುಂಬಗಳು ಇಲ್ಲಿಗೆ ಬಂದದ್ದರೂ ಈಗ ಅವು ಎಪ್ಪಾತ್ತಾಗಿವೆ. ಕೃಷಿಯಷ್ಟೆ ಇವರು ಶಿಕ್ಷಣಕ್ಕೂ ಪ್ರಾಧಾನ್ಯತೆ ನೀಡಿದ್ದರಿಂದ ಹಾಡಿಯಲ್ಲಿ ಹುಟ್ಟಿದ ಮಕ್ಕಳೆಲ್ಲ ಉತ್ತಮ ಶಿಕ್ಷಣ ಪಡೆದಿದ್ದಾರೆ. ಬೌದ್ಧ ಜಯಂತಿ ಮಾತ್ರ ಇವರು ಆಚರಿಸುವ ಹಬ್ಬ. ತಮ್ಮದೇ ಆದ ಸಂಸ್ಕೃತಿಯನ್ನು ಇವರು ಪರಿಪಾಲಿಸಿಕೊಂಡು ಬಂದಿದ್ದಾರೆ.

ಇವರು ಜಲ ಸಾಕ್ಷರರಲ್ಲ ಎಂಬ ಏಕೈಕ ಕಾರಣ: ಸದ್ಯ ಈ ಗ್ರಾಮದ ಜನತೆಗೆ ನೀರಿನ ಮಹತ್ವ ತಿಳಿಸುವ ಕೆಲಸವಾಗಬೇಕು. ಕೈಯಲ್ಲಿ ಹಣವಿದೆ ಎಂಬ ಏಕ ಮಾತ್ರ ಕಾರಣಕ್ಕೆ ಬೇಕಾಬಿಟ್ಟಿ ಕೊಳವೆ ಬಾವಿಗಳನ್ನು ಕೊರೆಯಿಸಿದ್ದು ಇಂದಿನ ಸ್ಥಿತಿಗೆ ಕಾರಣ. ಜಲ ಮರುಪೂರಣ ವ್ಯವಸ್ಥೆ, ಇಂಗು ಗುಂಡಿಗಳು, ಮಳೆ ನೀರು ಕೊಯ್ಲು ಮುಂತಾದ ಜಲ ಸಂರಕ್ಷಣಾ ತಂತ್ರಜ್ನಾನಗಳನ್ನು ಹೇಳಿಕೊಟ್ಟಲ್ಲಿ ಹಳೆಯ ಸುಭೀಕ್ಷಾ ಕಾಲ ಕಳಸನಕೊಪ್ಪಕ್ಕೆ ಮರಳಬಹುದು. ಗ್ರಾಮಸ್ಥರನ್ನು ಜಲ ಸಾಕ್ಷರರನ್ನಾಗಿಸುವ ತುರ್ತು ಅವಶ್ಯಕತೆ ಇದೆ. ಅಲ್ಲಿನ ಯುವಕರು ಇನ್ನಾದರೂ ಜಲಯೋಧರಾಗಬೇಕಿದೆ. ಬರಡು ಭೂಮಿಯಲ್ಲಿ ಮಳೆ ಆಶ್ರಿತ ಹಿಪ್ಪು ನೇರಳೆ ಹಾಗು ರೇಷ್ಮೆ ಕೃಷಿ ಮಾಡುವ ವಿಧಾನಗಳನ್ನು ಇವರಿಗೆ ಹೇಳಿ ಕೊಡಬೇಕಿದೆ.