ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೫)
***** ಭಾಗ ೫
ಇಷ್ಟು ಹೊತ್ತಿಗೆ ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗುವ ಸಮಯವಾಗಿತ್ತು. ಊರಾಚೆ ಪಾಳುಬಿದ್ದ ಗುಡಿಯ ಬಳಿ ಹೋದೆ. ಎಲ್ಲೆಡೆ ಊರ್ಣನಾಭಗಳು ಬಲೆ ಕಟ್ಟಿ ಬಾಗಿಲ ಅಡ್ಡಕ್ಕೆ ಕಲ್ಲಿನ ಸ್ಥಂಭವೊಂದು ಬಿದ್ದಿತು. ಕುದುರೆಯ ಜೀನು ಬಿಚ್ಚಿ ಅದನ್ನು ತಿರುಗಿಸಿ ಅದರ ಬೆನ್ನ ಮೇಲೆ ಎರಡು ಏಟು ಕೊಟ್ಟೆ. ಕುದುರೆ ಲಾಯಕ್ಕೆ ಓಡಿತು. ನಾನು ಕೆಲ ಕ್ಷಣಗಳ ಕಾಲ ಮರೆಯಲ್ಲಿ ಕಾಯುತ್ತಿದ್ದೆ. ಎಲ್ಲವೂ ನಿಶ್ಯಬ್ಧವೆನೆಸಿದಮೇಲೆ ನಿಧಾನವಾಗಿ ಎದ್ದು ಬಾಗಿಲ ಅಡ್ಡಕ್ಕೆ ಬಿದ್ದ ಸ್ಥಂಭದಿಂದ ನುಸಿದು ಗುಡಿಯೊಳಗೆ ಹೊಕ್ಕೆ.
ಗುಡಿಯೊಳಗೆ ಒಂದು ಕಲ್ಲಿನ ಮೂರ್ತಿ. ಮೂರ್ತಿಯ ಹಿಂದೆ ನಡೆದು ಹೋದೆ. ಅಲ್ಲಿದ್ದ ಒಂದು ಸಣ್ಣ ಗುಬುಟನ್ನು ಒತ್ತಿದಾಗ ನನ್ನ ಕಾರಾಗ್ರಹದ ನೆಲದ ಮೇಲೆ ಬಾಗಿಲು ತೆರೆದಂತೆ ಇಲ್ಲೂ ನೆಲದಲ್ಲಿ ನಿಶ್ಯಬ್ದವಾಗಿ ಒಂದು ಬಾಗಿಲು ತೆರೆಯಿತು. ಇಳಿದುಹೋಗಲು ಮೆಟ್ಟಲುಗಳಿದ್ದವು. ನಿಧಾನವಾಗಿ ಮೆಟ್ಟಲು ಇಳಿದು ಸುರಂಗದೊಳಗೆ ಹೊಕ್ಕೆ. ಒಂದು ಸಣ್ಣ ದೀಪ ಉರಿಯುತ್ತಿತ್ತು. ಒಳಗಿನಿಂದ ನೆಲದ ಬಾಗಿಲು ಮುಚ್ಚುವ ಗುಬುಟು ಒತ್ತಿದೆ. ಸದ್ದಿಲ್ಲದೆ ಬಾಗಿಲು ಮುಚ್ಚಿಕೊಂಡಿತು. ದೀಪವನ್ನೆತ್ತಿಕೊಂಡು ಸುರಂಗದಲ್ಲಿ ನಡೆದು ಹೊರಟೆ.
ಸ್ವಲ್ಪ ಕಾಲ ನಡೆದು ಹೋದೆ. ಉದ್ದಕ್ಕೂ ನಾನು ವಾತಾಪಿ ನಗರದ ಕೆಳಗೆ ಹೋಗುತ್ತಿರಬಹುದೆಂಬ ನಿರೀಕ್ಷೆ. ಕೊನೆಗೆ ಒಂದು ಬಾಗಿಲ ಎದುರಿಗೆ ಬಂದು ನಿಂತೆ. ಬಾಗಿಲನ್ನು ಗುಪ್ತ ಸಂಜ್ಞೆಯಲ್ಲಿ ತಟ್ಟಿದೆ. ಬಾಗಿಲು ತೆರೆಯಿತು; ಒಳಗೆ ಹೋದೆ. ಅಲ್ಲಿ ಹಲವಾರು ಜನ ಕೂಡಿದ್ದರೂ ನನ್ನೊಡನೆ ಮಾತನಾಡಲು ಯಾರೂ ಬರಲಿಲ್ಲ. ಮುಂದೇನೆಂದು ನಿರೀಕ್ಷಿಸುತ್ತಾ ಮೂಲೆಯೊಂದರಲ್ಲಿ ಕಾಯ್ದು ನಿಂತೆ.
"ಹಿಂದೆ ತಿರುಗಬೇಡ. ವರುಣಾಚಾರ್ಯರ ಓಲೆ ತೆಗೆದುಕೊಡು" ಎಂದು ನನ್ನ ಕಿವಿಯಲ್ಲಿ ಯಾರೋ ಹೇಳಿದಹಾಗಾಯಿತು. ಈ ಮೂಲೆಯಲ್ಲಿ ನನ್ನ ಕಿವಿಯೊಳಗೆ ಯಾರಿರಬಹಿದೆಂದು ನನ್ನ ವಸ್ತ್ರಗಳೊಳಗಿಂದ ಓಲೆಯನ್ನು ತೆಗೆದು ಕೈಯಲ್ಲಿ ಹಿಡಿದೆ. ಒಂದು ಕ್ಷಣದಲ್ಲಿ ಮಾಯವಾಯಿತು, ಆದರೆ ಅಷ್ಟರಲ್ಲಿ ನಾನು ಗೋಡೆಯಲ್ಲಿದ್ದ ಸಣ್ಣ ಕಿಂಡಿಯ ಬಾಗಿಲು ಮುಚ್ಚುತ್ತಿರುವುದನ್ನು ನೊಡಿದೆ. ಅದರೊಳಗಿನಿಂದ ಯಾರೋ ಕೈ ಹಾಕಿ ಓಲೆ ತೆಗೆದುಕೊಂಡಿರಬೇಕು ಎಂದುಕೊಂಡೆ.
ಸ್ವಲ್ಪ ಹೊತ್ತಿನ ಬಳಿಕ, ಮಹಾಮಂತ್ರಿಗಳು ಹಾಗು ನನಗೆ ಗೊತ್ತಿಲ್ಲದ ಒಂದಿಬ್ಬರು ಒಟ್ಟಿಗೆ ಬಂದು ಸಭೆಯನ್ನು ಕೂಗಿದರು. ಮಹಾಮಂತ್ರಿಗಳು ನುಡಿದರು "ಮಹಾರಾಜ ಪುಲಿಕೇಶಿ ಸಿಂಹಾಸನವನ್ನೇರಿದ ಮೇಲೆ ಮೊದಲಿಗೆ ಭೀಮಾನದಿ ತೀರದಲ್ಲಿ ಅಪ್ಪಯಕ ಹಾಗು ಗೋವಿಂದರನ್ನು ಸದೆಬಡೆದರು. ಅಪ್ಪಯಕ ಯುದ್ಧಭೂಮಿಯಿಂದ ಹೇಡಿಯಂತೆ ಓಡಿಹೋಗಿ, ಸಾಮಂತ ಗೋವಿಂದ ಶರಣಾಗತನಾದ. ಈ ಯುದ್ಧದಲ್ಲಿ ನೀವೆಲ್ಲ ಸಲ್ಲಿಸಿದ ಸೇವೆ ನೆನೆಸಿಕೊಳ್ಳಿ"
"ನಂತರ ರಾಜ್ಯ ವಿಸ್ತಾರಣಾತ್ಮಕ ಯುದ್ಧಗಳು - ವೈಜಯಂತಿಯ ಅಳಿದುಳಿದ ಕದಂಬರು, ತಲಕಾಡಿನ ಗಂಗರು, ಕರಾವಳಿಯ ಅಳೂಪರನ್ನು ಚಾಳುಕ್ಯ ಸೇನೆಗಳು ಸೋಲಿಸಿದ್ದು ನಿಮ್ಮ ಸಹಾಯದಿಂದಲೆ. ಕೊಂಕಣ ಹಾಗು ಪುರಿ ಬಂದರಿನ ಕಡಲ ಯುದ್ಧದಲ್ಲಿ ಈ ತಂಡದ ಯೋಗದಾನ ಯಾರೂ ಹೇಳಬೇಕಾಗಿಲ್ಲ. ಗುರ್ಜರ ಪ್ರದೇಶದ ಗುರ್ಜರರು, ಲತರು ಹಾಗು ಮಾಲವರು, ಇವರೆಲ್ಲ ಸಾಮಂತರಾಗಲು ಸಹ ನೀವೆಲ್ಲ ಕೆಲಸ ಮಾಡಿದ್ದೀರಿ. ಕೊನೆಗೆ ಕಾಂಚೀಪುರದ ಪಲ್ಲವಾಧೀಶ ಮಹೇಂದ್ರವರ್ಮನ ಪರಾಜಯದ ಪ್ರಕ್ರಿಯೆ ಪ್ರಾರಂಭವಾಗಿದ್ದೂ ಇಲ್ಲಿಂದಲೇ" ಎಂದು ಮೊದಲು ಹುರಿದುಂಬಿಸಿದರು.
"ಈಗ ಉತ್ತರಾಪಥೇಶ್ವರನಾದ ಹರ್ಷ ಚಕ್ರವರ್ತಿಯಕಡೆಯವರು ನರ್ಮದೆಯ ತೀರದಲ್ಲಿ ನಮ್ಮ ಮೇಲೆ ಧಾಳಿ ಮಾಡುವ ಯೋಜನೆ ಹೂಡುತ್ತಿದ್ದಾರೆಂಬ ಸೂಕ್ಷ್ಮ ಸುದ್ಧಿ ತಿಳಿದು ಬಂದಿದೆ. ಹರ್ಷ ಚಕ್ರವರ್ತಿ ಧಾಳಿ ಮಾಡುವ ಮುನ್ನವೇ ನಾವು ಅವರ ಮೇಲೆ ಧಾಳಿ ಮಾಡಬೇಕೆಂಬುದೇ ಮಹಾರಾಜ ಪುಲಿಕೇಶಿಯ ಇಚ್ಚೆ. ನಿಮ್ಮೆಲ್ಲರ ಸಹಕಾರದಿಂದ ಇದು ಸಾಧ್ಯವಾಗಿ ಮಹಾರಾಜ ಪುಲಿಕೇಶಿಗೆ ಜಯ ತರಿಸಿಕೊಡುವಿರಿ ಎಂಬ ನಂಬಿಕೆ ನನಗಿದೆ" ಎಂದು ಮುಂದುವರೆಸಿದರು.
ಇದಾದ ಮೇಲೆ ಮಹಾಮಂತ್ರಿಗಳು ಅಲ್ಲಿ ಸೇರಿದ್ದ ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ಕೆಲಸಕ್ಕೆ ನೇಮಿಸಿದರು. ವೈರಿಯ ಸೇನೆಯ ಸಂಖ್ಯೆಗಳನ್ನು ತಿಳಿಯಲು ಒಬ್ಬ, ಅವರ ಬಿಡಾರಗಳ ಸ್ಥಳ ಗಳನ್ನು ತಿಳಿಯಲು ಮತ್ತೊಬ್ಬ, ಅವರು ಯುದ್ಧ ಭೂಮಿಗೆ ನಡೆದು ಬರುವ ದಾರಿ ತಿಳಿಯಲು, ಅವರ ಶಸ್ತ್ರಾಸ್ತ್ರಗಳ ವರದಿಗೆ, ಅವರಲ್ಲಿ ಒಡಕುಂಟು ಮಾಡುವ ಸಾಧನಗಳನ್ನು ಹೂಡಲು, ಅವರ ರಾತ್ರಿಯ ಕಾವಲು ಪದ್ಧತಿ ಹಾಗು ಕಾವಲುಗಾರರು ಬದಲಾಗುವ ಸಮಯಗಳನ್ನು ತಿಳಿಯಲು, ಹೀಗೆ ಏನೇನೊ ನಾನೆಂದೂ ಯೋಚಿಸದಂತಹ ಕಾರ್ಯಗಳಿಗೆ ಒಬ್ಬೊಬ್ಬರನ್ನು ನಿಯುಕ್ತಿಸಿದರು.
ಕಡೆಗೆ ಎಲ್ಲರೂ ತಮ್ಮ ತಮ್ಮ ಆಜ್ಞೆಗಳನ್ನು ಪಡೆದು ಈ ಕೋಣೆಯಲ್ಲಿದ್ದ ಹಲವಾರು ಬಾಗಿಲುಗಳಿಂದ ಹೊರಟುಹೋದರು. ನಾನಿನ್ನೂ ಅಲ್ಲೇ ಇದ್ದೆ. ಕೊನೆಗೆ ಮಹಾಮಂತ್ರಿಗಳು ನನ್ನನ್ನು ನೋಡಿದರು. "ಯುವಕ, ನಿನ್ನ ಶಿಕ್ಷಣೆ ಮುಗಿದಿದೆ. ವರುಣಾಚಾರ್ಯರು ಕೊಟ್ಟ ಓಲೆಯನ್ನು ನಾನು ಓದಿರುವೆ. ಅವರು ನಿನ್ನನ್ನು ಬಹಳ ಹೊಗಳಿದ್ದಾರೆ, ಆದರೆ ನೀನೊಂದು ತಪ್ಪು ಮಾಡಿದೆ" ಎಂದರು.
"ಏನದು" ಎಂದೆ.
"ನಾನು ಕೇಳಿದಾಗ ನೀನು ಹಿಂದೆ ತಿರುಗದೆ ಓಲೆ ಕೊಡಬೇಕಿತ್ತು. ನೀನು ಹಿಂದೆ ತಿರುಗಿದೆ." ಒಂದು ಕ್ಷಣ ಮೌನ ತಳಿದು ಬಳಿಕ "ಮನೆಯ ಊಟ ರುಚಿಕರ ಅಲ್ಲವೆ?" ಎಂದರು
"ಆ....?" ನಾನು ತಬ್ಬಿಬ್ಬಾದೆ
"ಇರಲಿ, ನೀನು ಮನೆಗೆ ಹೋಗುವುದರಲ್ಲಿ ಸಂಶಯವೇ ಇರಲಿಲ್ಲ. ಈ ಸಂದರ್ಶನದ ಬಗ್ಗೆ ನಿನ್ನ ಅನಿಸಿಕೆಗಳು?" ಎಂದು ಕೇಳಿದರು
"ನಾನು ಏನು ಮಾಡಲು ಬೇಕಾದರೂ ಸಿದ್ಧ" ಎಂದೆ
"ನೀನು ಬ್ರಾಹ್ಮಣ. ನಿನ್ನ ಕೈಯಲ್ಲಿ ಅವರುಗಳು ಮಾಡುವ ಕೆಲಸ ಮಾಡಲಾಗುವುದಿಲ್ಲ. ಅವರುಗಳು ತರುವ ಸೂಚನೆ ಸುದ್ಧಿಗಳನ್ನು ಒಗ್ಗೂಡಿಸಿ, ಶೋಧಿಸಿ, ನಮಗೆ ಸಂಕ್ಷಿಪ್ತವಾಗಿ, ಯಾವ ವಿಷಯವೂ ಬಿಡದಂತೆ ಹೇಳುವುದು ನಿನ್ನ ಕೆಲಸ. ನೀನು ನಮ್ಮೊಡನೆ ನರ್ಮದಾ ತೀರದ ಯುದ್ಧ ಭೂಮಿಗೆ ಹೋಗುವ ಸಿದ್ಧತೆಗಳನ್ನು ಮಾಡಿಕೊ" ಎಂದು ನುಡಿದರು.
"ಸಿದ್ಧತೆಗಳು...?"
"ಏನಿದ್ದರೂ ಮಾಡಿಕೊ. ಇಂದು ರಾತ್ರಿ ಬೇಕಾದರೆ ಇಲ್ಲೇ ತಂಗುವ ಅವಕಾಶವಿದೆ. ನಾಳೆ ಬೆಳಗ್ಗೆ ಹೊರಡುವೆ" ಎಂದು ಹೇಳಿ ಹೊರಟುಹೋದರು.