ಸಿಟಿಯ ಮೇಲಣ ಗುಳ್ಳೆ

ಸಿಟಿಯ ಮೇಲಣ ಗುಳ್ಳೆ

ಸಿಡ್ನಿಯಲ್ಲಿ ಹಾಡುತ್ತಲೋ, ಯಾವುದಾದರೂ ವಾದ್ಯ ನುಡಿಸುತ್ತಲೋ, ಅಥವಾ ವೇಷ ಹಾಕಿಕೊಂಡೋ, ಸರ್ಕಸ್ ಮಾಡುತ್ತಲೋ ಬಸ್ಕ್ ಮಾಡುವುದು ಸದಾ ನೋಡುತ್ತೇವೆ.

ಒಂದು ದಿನ ಒಬ್ಬ ದೊಡ್ಡ ದೊಡ್ಡ ಸೋಪ್ನೀರಿನ ಗುಳ್ಳೆ ಮಾಡಿ ಹಾರಿ ಬಿಡುತ್ತಾ ಬಸ್ಕ್ ಮಾಡುತ್ತಿದ್ದ.

 

 

 

 

 

 

 

 

 

 

ಒಂದು ದೊಡ್ಡ ಪ್ಲಾಸ್ಟಿಕ್ ಮರಿಗೆಯಲ್ಲಿ ಸೋಪ್ನೀರು ಇಟ್ಟುಕೊಂಡು, ಕೈಯಲ್ಲಿ ಒಂದು ದೊಡ್ಡ ಕಬ್ಬಿಣದ ಬಳೆ ಹಿಡಿದು ಅದರಿಂದ ನೀರೆತ್ತಿ ಗಾಳಿಯಲ್ಲಿ ದೊಡ್ಡ ಗುಳ್ಳೆ ಮಾಡಿ ತೂರಿ ಬಿಡುತ್ತಿದ್ದ.

ಸಣ್ಣದೊಡ್ಡವರೆನ್ನದೆ ಎಲ್ಲರೂ ಮಕ್ಕಳಂತೆ ಕಣ್ಣರಳಿಸಿ ಆ ಗುಳ್ಳೆಗಳನ್ನೇ ಕಣ್ಮರೆಯಾಗುವವರೆಗೂ ನೋಡುತ್ತಿದ್ದರು.

ಆ ಗುಳ್ಳೆಯೋ ತೇಲಿಕೊಂಡು ಜನರ ನಡುವಲ್ಲೇ ಹಾಯುವಾಗ ಗುಂಡಾಗಿ ಉಳಿಯುತ್ತಿರಲಿಲ್ಲ. ಜೀವ ಬಂದಿದೆಯೋ ಎಂಬಂತೆ ಬಳಕುತ್ತ ಹೆಬ್ಬಾವಿನ ಹಾಗೆ ಹರಿದಾಡುತ್ತಿತ್ತು.

ಎತ್ತೆತ್ತಲಿಂದಲೋ ಅದರಿಂದ ಹಾಯುತ್ತಿದ್ದ ಬೆಳಕನ್ನು ಒಡೆಒಡೆದು ಬಣ್ಣಬಣ್ಣದ ತಿರುಳನ್ನು ಪಡೆದುಕೊಳ್ಳುತ್ತಿತ್ತು.

ಅದರೊಳಗಿಂದ ಗಟ್ಟಿಮುಟ್ಟಾಗಿ ನಿಂತಿದ್ದ ಕಟ್ಟಡಗಳೂ ನಾಚಿಕೆಯಿಂದ ಬಳಕುವಂತೆ ತೋರುತ್ತಿತ್ತು.

ಯಾರದೋ ಕೈತಗುಲಿಯೋ, ಜೋರಾಗಿ ಹಾದು ಹೋದ ಕಾರು ಬಸ್ಸಿನ ಗಾಳಿಸುಳಿಯಿಂದಲೋ ಠಪ್ಪನೆ ಒಡೆದು ಒಂದು ನಾಕು ಹನಿ ನೀರಷ್ಟೆ ನೆಲಕ್ಕೆ ಉದುರುತ್ತಿತ್ತು...

 

 

 

 

 

 

 

 

 

 

ತಲೆಯನ್ನು ಯಾವುದೋ ವಿಷಯದಲ್ಲಿ ನೆಟ್ಟು ನಡೆವಂತೆ ಕಾಣುವ ಮಂದಿಯ ಮನಸ್ಸಲ್ಲಿ ಹರಿದಾಡುವ ಭಾವನೆಗಳಂತೆ, ಇದ್ದಕ್ಕಿದ್ದಂತೆ ಹುಟ್ಟಿ ಮಾಯವಾಗುವಂತೆ - ಇದು ತೋರುತ್ತಿತ್ತು...

ಎಂದೋ ಕಟ್ಟಿದ ಈ ನಗರದ ಕಟ್ಟಡವೆಲ್ಲಾ ಜಂಬದಿಂದ ನಿಂತಿರುವುದನ್ನು ಕುಹಕ ಮಾಡುತ್ತಿದೆಯೇನೋ ಎಂಬಂತೆಯೂ ಕಾಣುತ್ತಿತ್ತು...

Rating
No votes yet