‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
ನಮ್ಮ ಧಾರವಾಡ ಎರಡು ಸಂಗತಿಗಳಿಗಾಗಿ ತುಂಬ ಪ್ರಸಿದ್ಧ. ಒಂದು ಧಾರವಾಡದ ಲೈನ್ ಬಜಾರದ ಬಾಬುಸಿಂಗ ಠಾಕೂರ್ ಅವರ ಪೇಢ ರುಚಿಗಾಗಿ. ಮತ್ತೊಂದು ಬೆಳಗಾವಿ ರಸ್ತೆಯ..ಹುಚ್ಚರ ಆಸ್ಪತ್ರೆಗಾಗಿ!
ಆಕಾಶವಾಣಿಯ ಅಧಿಕಾರಿಯಾಗಿದ್ದ ಹಿರಿಯ ಸಾಹಿತಿ, ಹರಟೆಗಾರ ಹಾಗು ಬೇಂದ್ರೆ ಅವರ ‘ಗೆಳೆಯರ ಗುಂಪಿ’ನ ಪ್ರಮುಖ ಸದಸ್ಯರಾಗಿದ್ದ ದಿವಂಗತ ಎನ್ಕೆ ಒಂದು ಮಾತನ್ನು ಸದಾ ಹೇಳುತ್ತಿದ್ದರು. ಅದು ವರಕವಿ ಬೇಂದ್ರೆ ಅವರ ಹಾಸ್ಯಪ್ರಜ್ನೆ ಬಿಂಬಿಸುತ್ತಿತ್ತು.
‘ಧಾರವಾಡದಾಗ ಯಾರರೆ ನಿಂತು ಕಲ್ಲು ಒಗದರ(ಹೂವಿನ ಬದಲಾಗಿ!) ಅದು, ಕವಿ ಮನೆ (ಅಥವಾ ತಲೆ!), ಸಾಹಿತಿ, ನಾಟಕಕಾರ ಮತ್ತು ಸಂಗೀತಗಾರನ ಮೇಲೆ ಬೀಳುವುದು ಗ್ಯಾರಂಟಿ’ ..ಕವಿ ಮಾತಿಗೆ ವಿರಾಮ ಕೊಡುವ ಮೊದಲೇ ಯಾರು ಅಡ್ಡ ಪ್ರಶ್ನೆ ಕೇಳಿದರು. ‘ಸರ್..ಹುಚ್ಚರ ಮ್ಯಾಲೂ..?’
ಬೇಂದ್ರೆ ಥಟ್ ಅಂತ ಉತ್ತರ ಕೊಟ್ರು..‘ನಾ ಮ್ಯಾಲೆ ಹೇಳಿದ್ರಾಗ ‘ಶಾಣ್ಯಾರ’ ಯಾರು ಕಂಡ್ರ ತಮಗ..?’ ಈ ಸಂಭಾಷಣೆ ಕೊನೆಗೊಳ್ಳುವ ಹೊತ್ತಿಗೆ, ಅವರ ಗೆಳೆಯರ ಗುಂಪು ‘ಈ ಆಸ್ಪತ್ರೆ’ ಮುಂದ ನಿಂತಿದ್ದು ಕಾಕತಾಳೀಯ! ಮತ್ತೆ ನಗೆಗಡಲು ಉಕ್ಕಿ ಹರಿದಿತ್ತು.
ಈ ಹುಚ್ಚರ ಆಸ್ಪತ್ರಯಿಂದ ಸ್ವಲ್ಪ ದೂರ.. ಜಾಣರು ತೆರೆದ ಒಂದು ಫ್ಯಾಕ್ಟರಿಯತ್ತ ಹೋಗೋಣ. ಬೆಳಗಾವಿಗೆ ಹೋಗುವ ರಾಷ್ಟ್ರೀಯ ರಸ್ತೆಯ ಮೇಲೆ ಕೃಷಿ ವಿಶ್ವವಿದ್ಯಾಲಯದ ಸಮೀಪ ಹೋದಂತೆ ಒಂದು ‘ತಂಪು ಪಾನೀಯದ ಫ್ಯಾಕ್ಟರಿ’ ಎಡಬದಿಯಲ್ಲಿ ಕಾಣಸಿಗುತ್ತದೆ. ರಂಗು ರಂಗಾದ ಸ್ಲೋಗನ್, ಪೇಯದ ಬಣ್ಣ ಬಣ್ಣದ ಚಿತ್ರಗಳು..ಬ್ರ್ಯಾಂಡ್ ಅಚ್ಚೊತ್ತುವ ನಯನ ಮನೋಹರ ಗೋಡೆಗಳು ಕಾಣಸಿಗುತ್ತವೆ. ಇಲ್ಲಿ ಎದ್ದು ಕಾಣದ ಒಂದು ಸಂಗತಿ ಇದೆ. ಈ ಫ್ಯಾಕ್ಟರಿಯ ಆವರಣದಲ್ಲಿ ಸುಮಾರು ೨೫ ಬೋರ್ ವೆಲ್ ಗಳನ್ನು ಕೊರೆಯಲಾಗಿದೆ. ಅವುಗಳಲ್ಲಿ ಅರ್ಧದಷ್ಟು ಬೋರ್ ವೆಲ್ ಗಳು ಈಗ ತಮ್ಮ ಅಡಿಯಲ್ಲಿದ್ದ ಲಕ್ಷಾಂತರ ಗ್ಯಾಲನ್ ಅಂತರ್ಜಲ ಎತ್ತಿ ಚೆಲ್ಲಿ ಈಗ ‘ಕೈ’ ಎತ್ತಿವೆ.
ನೀವೇ ಊಹಿಸಿ. ೨೫ ಬೋರ್ ವೆಲ್ ಗಳು ದಿನದ ೨೪ ಗಂಟೆ, ವಾರದ ೭ ದಿನ, ವರ್ಷದ ೩೬೫ ದಿನಗಳ ಕಾಲ ಸತತವಾಗಿ ಈ ತಂಪು ಪಾನೀಯ ಕಂಪನಿಯ ದೈನಂದಿನ ಅವಶ್ಯಕತೆ ಪೂರೈಸುತ್ತ ಬಸವಳಿದರೆ..ಸುತ್ತ ೫-೬ ಕಿಲೊ ಮೀಟರ್ ವ್ಯಾಪ್ತಿ ಪ್ರದೇಶದ ಅಂತರ್ಜಲದ ಪರಿಸ್ಥಿತಿ ಏನಾಗಬೇಡ? ಈಗ ಮತ್ತೆ ಹೊಸ ನಾಲ್ಕಾರು ಬೋರ್ ವೆಲ್ ಗಳನ್ನು ಮತ್ತೆ ಕೊರೆಯಿಸಲು ಆಡಳಿತ ಮಂಡಳಿ ಸಜ್ಜಾಗಿದೆ! ಬಂದಾದ ಬೋರ್ ವೆಲ್ ಗಳ ಕೇಸಿಂಗ್ ತೆಗೆಯಲಾಗಿದೆ. ಹೊಸ ಬೋರ್ ವೆಲ್ ಗಳಿಗೆ ಕೇಸಿಂಗ್ ಅಳವಡಿಸುವ ಕಾರ್ಯ ಭರದಿಂದ ಮುಕ್ತಾಯಗೊಂಡಿದೆ.
ಕೊನೆ ಪಕ್ಷ ಆಡಳಿತ ಮಂಡಳಿ ಮುಂದಾಲೋಚನೆಯಿಂದ ಈ ಸುಮಾರು ೨೫ ಬೋರ್ ವೆಲ್ ಗಳಿಗೆ ಮಳೆ ನೀರಿನ ಅಥವಾ ಇಂಗು ಗುಂಡಿಯ ಅಥವಾ ಛಾವಣಿ ನೀರಿನ ಮರು ಪೂರಣ ವ್ಯವಸ್ಥೆ ಕಲ್ಪಿಸಿದ್ದಲ್ಲಿ, ಈ ತಂಪು ಪಾನೀಯ ಫ್ಯಾಕ್ಟರಿ ಹಾಗು ಸುತ್ತ ೨೦೦ ಮೀಟರ್ ವ್ಯಾಪ್ತಿಯ ಜನವಸತಿ ಪ್ರದೇಶ ಇಂದಿನ ಈ ದಯನೀಯ ಪರಿಸ್ಥಿತಿ ಎದುರಿಸುವ ಪ್ರಸಂಗ ಬರುತ್ತಿತ್ತೆ?
ಹೋಗಲಿ ನಾಲ್ಕಾರು ಬ್ರ್ಯಾಂಡ್ ನ ತಂಪು ಪಾನೀಯ ತಯಾರಿಸಲು ಬಳಸಿ ಹೊರ ಹಾಕಿದ ಸಾವಿರಾರು ಗ್ಯಾಲನ್ ನೀರನ್ನು ಪುನರ್ ಬಳಕೆ ಮಾಡಲು ಏನಾದರೂ ವ್ಯವಸ್ಥೆ ಇದೆಯೇ? ಇದೆ. ಕಣ್ಣುವರೆಸುವ ತಂತ್ರವಾಗಿ. ಆದರೆ ಸಮರ್ಪಕವಾಗಿಲ್ಲ. ಬಳಸಿದ ನೀರನ್ನು ತಕ್ಕ ಮಟ್ಟಿಗೆ ಶುದ್ಧಿಕರಿಸಿ ಫ್ಯಾಕ್ಟರಿಯ ಆವರಣದಾಚೆ ಸಾಗಿಸಲು ಆ ವ್ಯವಸ್ಥೆ ಜಾರಿಯಲ್ಲಿದೆ! ಈ ನೀರು ಹೇಗೋ ಹೋಗಿ ಕೃಷಿ ವಿಶ್ವವಿದ್ಯಾಲಯದ ಎಮ್ಮೆ ಸಾಕಾಣಿಕೆ, ಕೋಳಿ ಸಾಕಾಣಿಕೆ ಕೇಂದ್ರದ ಪಕ್ಕ ನಿಂತು ಕೆಸರಿನ ಹೊಂಡ ನಿರ್ಮಿಸಿದೆ. ಇಲ್ಲಿಯೇ ಕೃಷಿ ವಿವಿಯ ತಜ್ನರು ಕಂಡು ಹಿಡಿದ ಬೆಳೆಗಳ ಅನೇಕ ಹೊಸ ತಳಿಗಳನ್ನು ಪ್ರಾಯೋಗಿಕವಾಗಿ ಬೆಳೆಸುವ ನಿವೇಶನಗಳಿವೆ ಎಂಬುದನ್ನು ನಾವು ಗಮನಿಸಬೇಕು.
ಫ್ಯಾಕ್ಟರಿಯ ಆವರಣದ ಹೊರಗೆ (ಕಂಪೌಂಡಿನ ಸುತ್ತ) ಗಬ್ಬು ನಾಥ..ಅನಾರೋಗ್ಯಪೂರ್ಣ ವಾತಾವರಣ. ಈ ಎಲ್ಲ ಬೆಳವಣಿಗೆಗಳಿಗೆ ಕಲಶಪ್ರಾಯವಾಗಿ ಈ ಗೋಡೆ ಬರಹವಿದೆ. ~“ಸೂಚನೆ. ದಯಮಾಡಿ ಅಪಾಯಕರ ಹಾಗು ಅನಾನುಕೂಲವಾಗುವ ಕಸ, ಹೊಲಸು ಮತ್ತು ತ್ಯಾಜ್ಯ ವಸ್ತುಗಳನ್ನು ಕಂಪೌಂಡ್ ಗೋಡೆಯ ಹತ್ತಿರ ಹಾಕಬಾರದು. ಇಂದ ಎನ್.ಬಿ.ಪಿ.ಎಲ್"! ಇದಲ್ಲವೇ ‘ಉಲ್ಟಾ ಚೋರ್ ಕೋತ್ವಾಲ್ ಕೋ ಡಾಟೆ’ ಲೆಕ್ಕ?
ನೋಡಿ. ಈ ಫ್ಯಾಕ್ಟರಿ ಸುತ್ತ ಮನೆಗಳಿಲ್ಲ. ಇದ್ದರೂ ಇವರು ಬರೆಸಿರುವ ಮಟ್ಟದ ತ್ಯಾಜ್ಯ ಯಾವ ಮನೆಯಿಂದ ಹುಟ್ಟಲು ಸಾಧ್ಯ? ಇನ್ನು ಕೃಷಿ ವಿಶ್ವವಿದ್ಯಾಲಯದವರು ಹೆಚ್ಚೆಂದರೆ ಪ್ರಾಯೋಗಿಕ ತಳಿಗಳಿಗೆ ಕೀಟ ನಾಶಕ ಸಿಂಪಡಿಸಬಹುದು. ರಸಗೊಬ್ಬರ ಹಾಕಬಹುದು. ರಾಸಾಯನಿಕ ದ್ರಾವಣ ಸುರಿಯಬಹುದು. ತಜ್ನರಿಗೆ ಅವುಗಳ ಸಾಧಕ-ಬಾಧಕ, ಪರಿಸರ ಪೂರಕತೆ ಎಲ್ಲ ಗೊತ್ತು. ಇವರನ್ನೆಲ್ಲ ಎಚ್ಚರಿಸಲಂತೂ ಈ ನೋಟೀಸ್ ಅಲ್ಲ. ಅಂದ ಮೇಲೆ ಸುತ್ತ ಮುತ್ತಲೂ ಬೇರೆ ಯಾವ ಇ-ತ್ಯಾಜ್ಯ, ಘನ ತ್ಯಾಜ್ಯ, ಬಿ.ಎಂ.ಡ್ಬ್ಲೂ.ತ್ಯಾಜ್ಯ ಹೊರಸೂಸುವ ದೊಡ್ಡ, ಮಧ್ಯಮ ಹಾಗು ಸಣ್ಣ ಕೈಗಾರಿಕೆಗಳಿಲ್ಲ! ಒಳ ಮರ್ಮ ಅರ್ಥವಾಯಿತು ತಾನೆ? ಕುಂಬಳಕಾಯಿ ಕಳ್ಳ ಮಾತ್ರ ಇಲ್ಲಿ ತನ್ನ ಹೆಗಲು ಮುಟ್ಟಿ ಕೊಂಡಿದ್ದಾನೆ ಎಂಬುದು ಸಾಬೀತಾಯಿತಲ್ಲವೇ? ಒಂದು ವೇಳೆ ಅಂತಹ ತ್ಯಾಜ್ಯ ಆ ಭಾಗದಲ್ಲಿ ಇದೆ ಎಂದಿಟ್ಟುಕೊಳ್ಳೋಣ. ಆ ಅಪಾಯಕರ ತ್ಯಾಜ್ಯವನ್ನು ವಿಲೇವಾರಿ ಮಾಡುವವರು ಎಲ್ಲ ‘ಪ್ರಶಸ್ತ’ ಸ್ಥಳಗಳನ್ನು ಬಿಟ್ಟು ಈ ಕಂಪೌಂಡ್ ಗೋಡೆಗೆ ಏಕೆ ತಂದು ಸುರಿದು ಹೋದಾರು?
ನೀರು ಇನ್ನು ಸಿಗುವುದಿಲ್ಲ. ಈ ತಂಪು ಪಾನೀಯವನ್ನೇ ಸೇವಿಸಿ ತೃಷೆ ಇಂಗಿಸಿಕೊಳ್ಳಿ ಎಂದು ಅಣಕಿಸುತ್ತಿದೆ ಈ ಫ್ಯಾಕ್ಟರಿ. ಇನ್ನು ‘ನೀರು ಕೊಂಡು ಕುಡಿಯಿರಿ’ ಎಂದು ಹೇಳಲು ಶಾರುಖ್ ಖಾನ್, ಆಮೀರ್ ಖಾನ್, ಸಲ್ಮಾನ್ ಖಾನ್, ಸಾಯಿಫ್ ಅಲಿ ಖಾನ್, ಅಕ್ಷಯ ಕುಮಾರ್ ಹೀಗೆ ಹಾಲಿವುಡ್- ಬಾಲಿವುಡ್ ತಾರೆಯರು ಜಾಹಿರಾತುಗಳಲ್ಲಿ (ತಂಪು ಪಾನೀಯಗಳಿಗೆ ಮಾರುಕಟ್ಟೆ ಒದಗಿಸಲು ಅಭಿನಯಿಸಿದಂತೆ!) ಜನತಾ ಜನಾರ್ಧನರಿಗೆ ಮನವರಿಕೆ ಮಾಡಿಸಲು ಪ್ರಯತ್ನಿಸುವ ಕಾಲ ದೂರವಿಲ್ಲ. ಪ್ರತಿ ೧ ಲೀಟರ್ ಬಾಟಲಿಗೆ ನಾವು ತೆತ್ತುತ್ತಿಲ್ಲವೇ? ೧೪-೧೫/- ರುಪಾಯಿಗಳನ್ನು! ಹಾಲಿನಷ್ಟೇ ಬೆಲೆ ನೀರಿಗೂ!
ಮಾಧ್ಯಮಗಳಿಗೆ ಈ ತಂಪು ಪಾನೀಯ ಕಂಪೆನಿಗಳಿಂದ ಲಕ್ಷಾಂತರ ರುಪಾಯಿ ಜಾಹಿರಾತು ಹರಿದು ಬರುತ್ತಿದ್ದು, ಈ ತಂಪು ಪಾನೀಯ ಕಂಪನಿ ವಿರುದ್ಧ ವರದಿ ಮಾಡುವ ಎದೆಗಾರಿಕೆ ಯಾವ ವರದಿಗಾರನಿಗೆ? ವರದಿ ಬರೆದರೂ ಪ್ರಕಟಿಸುವ ಧೈರ್ಯ ಯಾವ ಸಂಪಾದಕನಿಗೆ? ಈ ಸರ್ವಾಂತಯಾಮಿ ಮತ್ತು ಸರ್ವಶಕ್ತ ಕಂಪನಿ ವಿರೋಧ ಕಟ್ಟಿಕೊಳ್ಳುವ ತಾಕತ್ತು ಯಾವ ಮಾಧ್ಯಮಕ್ಕೆ? ಸಿಡಿದೆದ್ದು ಪ್ರತಿಭಟಿಸಲು ನಮ್ಮಲ್ಲಿ ಯಾರಿಗೆ ಹಣ ಮತ್ತು ತೋಳ್ಬಲವಿದೆ?
ಪಾತಕ ಕಂಪೆನಿಗಳು, ಅವುಗಳ ಜಾಹಿರಾತಿನ ಮೇಲೆ ನಮ್ಮ ಮಾಧ್ಯಮಗಳು. ‘ಥ್ಯಾಂಕ್ಸ್ ವನ್; ಫೇತ್ ಲಾಸ್ಟ್’!
********************************************
(ಒಂದು ಮಾತು. ಈ ಬೆಳವಣಿಗೆಗಳನ್ನು ನಾನು ಒಬ್ಬ ಸಂದರ್ಶಕನಾಗಿ ಹೋದಾಗ ನೋಡಿದ್ದೇನೆ. ಎಲ್ಲವನ್ನೂ ಅಲ್ಲ. ಪರಿಸ್ಥಿತಿ ಬಲ್ಲ ಹಾಗು ನನ್ನ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಪಡೆದು, ಕ್ರೋಢಿಕರಿಸಿ ಇಲ್ಲಿ ನೀಡಿದ್ದೇನೆ. ಎಲ್ಲವನ್ನೂ ಈ ಫ್ಯಾಕ್ಟರಿ ಆವರಣದಲ್ಲಿ ಪರಿಶೀಲಿಸಲು ಸಾಧ್ಯವಿಲ್ಲ. ಯಾರಿಗೂ ಇಲ್ಲಿ ಸುಖಾ-ಸುಮ್ಮನೆ ಒಳ ಬಿಡಲಾಗುವುದಿಲ್ಲ. ಬಿಟ್ಟರೂ ಬಂದ ಕೆಲಸಕ್ಕಷ್ಟೆ ನಿಮ್ಮ ಕಣ್ಣುಗಳು ಸೀಮಿತವಾಗಿರಬೇಕು!)
********************************************