ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ

ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ

ಬರಹ

(ನಗೆ ನಗಾರಿ ಸಾಹಿತ್ಯ ಬ್ಯೂರೋ)

ಮಾಜಿ ಕವಿಗಳು, ಹಾಲಿ ಚಿಂತಕರಾದ ಶ್ರೀಯುತ ಪಾಪಣ್ಣನವರು ನಮ್ಮ ವರದಿಗಾರನನ್ನು ಖಾಸಗಿ ನಿವಾಸಕ್ಕೆ ಕರೆಸಿಕೊಂಡು ನೀಡಿದ ಸಂದರ್ಶನದಲ್ಲಿ ‘ನೂರು ವರ್ಷಗಳ ಕಾಲ ಎಲ್ಲಾ ಬಗ್ಗೆಯ ಕಾವ್ಯವನ್ನು ಬ್ಯಾನ್ ಮಾಡಬೇಕು’ ಎಂದು ಸರ್ಕಾರಕ್ಕೆ ಕ್ರಾಂತಿಕಾರಕ ಶಿಫಾರಸ್ಸನ್ನು ಮಾಡಿದ್ದಾರೆ. ಪುಸ್ತಕ, ಪತ್ರಿಕೆ, ಸಿನೆಮಾ, ಸಿನೆಮಾ ಹಾಡು, ಸಿನೆಮಾ ಹಾಡಿನ ಸಾಹಿತ್ಯದಲ್ಲಿ ಸಾಲು ಹೀಗೆ ಯಾವುದಾದರೊಂದನ್ನು ಬ್ಯಾನ್ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹ ಪಡಿಸುತ್ತಾ ಓಡಾಡುತ್ತಿದ್ದ ಪುಡಿ ಸಂಘಟನೆಗಳೆಲ್ಲವೂ ಪಾಪಣ್ಣನವರ ಮಾತನ್ನು ಕೇಳಿ ಬೆಚ್ಚಿ ಬಿದ್ದು ಎದ್ದು ಕುಳಿತಿವೆ.

ತಮ್ಮ ಕ್ರಾಂತಿಕಾರಕ ನಿಲುವಿಗೆ ಕಾರಣವೇನು? ಹಿಂದೆ ನೀವೂ ಅನೇಕಾನೇಕ ಕವನಗಳನ್ನು ಬರೆದಿರುವಿರಿ. ಉತ್ತಮ ಸಾಹಿತಿ ಎಂದು ಹೆಸರು ಪಡೆದಿದ್ದೀರಿ. ನೀವು ಹೀಗೆ ಬಂಡಾಯವೆದ್ದಿರುವುದರ ಹಿಂದಿನ ಚಿಂತನೆ ಯಾವುದು ಎಂದು ನಮ್ಮ ವರದಿಗಾರ ಪ್ರಶ್ನಿಸಿಲಾಗಿ ಪಾಪಣ್ಣನವರು ತಮ್ಮ ಬಿಳಿಯ ಗಡ್ಡದ ನಡುವೆ ಬೆರಳು ಹರಿದಾಡಿಸಿ ಮಾತಿಗೆ ಶುರು ಮಾಡಿದರು, ‘ನೋಡಿ, ನಾನು ನನ್ನ ಕೈ ನಡೆಯುತ್ತಿದ್ದ ಕಾಲದಲ್ಲಿ ಒಂದಷ್ಟು ಕವಿತೆಗಳನ್ನು ಬರೆದಿದ್ದೇನೆ. ಕೆಲವೊಂದನ್ನು ಬರೆಸಿದ್ದೇನೆ -ಅಂದರೆ ನಾನೇ ಹೇಳಿ ಬರೆಸಿದ್ದೇನೆ ಅಂತ ಕಣ್ರೀ- ನನ್ನ ಕವನ ಸಂಕಲನಕ್ಕೆ ಸಹೃದಯರಿಂದ ಭಾರೀ ಗೌರವವೇ ಸಿಕ್ಕಿದೆ. ಕುಳಿತುಕೊಳ್ಳಲು ಪೀಠವೂ ಸಿಕ್ಕಿದೆ. ನನ್ನ ಕವನಗಳನ್ನು ಮಕ್ಕಳು ಪಠ್ಯ ಪುಸ್ತಕಗಳಲ್ಲಿ ಓದುತ್ತಿದ್ದಾರೆ. ಅರ್ಥವಾಗದೆ ಉರು ಹೊಡೆಯುತ್ತಿದ್ದಾರೆ. ಶಿಕ್ಷಕರು ಮೊದಲು ಪಾಠಗಳನ್ನು ಓದಿ ಎಂದು ಸಲಹೆ ಕೊಡುತ್ತಿದ್ದಾರೆ. ವಿಶ್ವ ವಿದ್ಯಾಲಯಗಳಲ್ಲಿ ನನ್ನ ಕವನಗಳ ಪೋಸ್ಟ್ ಮಾರ್ಟಮ್ ನಡೆಸಿದವರಿಗೆ ಡಾಕ್ಟರ್ ಎಂದು ಕರೆಯುತ್ತಿವೆ. ಇದೆಲ್ಲದರ ಬಗ್ಗೆ ನನಗೆ ಯಾವ ತಕರಾರೂ ಇಲ್ಲ. ಅಸಲಿಗೆ ನನ್ನನ್ನು ಕಾರ್ಯಕ್ರಮಗಳಿಗೆ ಕರೆದಾಗ ಕವಿ ಎಂದು ಕರೆದರೆ ಮುದಗೊಳ್ಳುತ್ತೇನೆ. ಕೆಲವರು ನನ್ನನ್ನು ಆಗಾಗ ಮಾಜಿ ಕವಿಗಳು ಎಂದು ಕರೆದಾಗ ಹಾಲಿ ಕೊಲೆಗಾರನಾಗಲಾ ಎಂದು ಹಗಲೂ ರಾತ್ರಿ ಚಿಂತಿಸಿದ್ದೇನೆ.

‘ಅದೆಲ್ಲಾ ಬಿಡಿ. ಈಗ ನನ್ನ ಆಗ್ರಹದ ವಿಷಯಕ್ಕೆ ಬರೋಣ. ಇನ್ನು ನೂರು ವರ್ಷಗಳ ಕಾಲ ಯಾರೂ ಕವನಗಳನ್ನು ಬರೆಯ ಬಾರದು. ಈಗ ಕವನ ಬರೆಯಲು ಶುರು ಮಾಡಿರುವವರು ಕಾವ್ಯ ರಚನೆಗೆ ತಿಲಾಂಜಲಿಯನ್ನಿಡಬೇಕು. ಈಗ ಪ್ರಕಟವಾಗುತ್ತಿರುವ ಕವನ ಸಂಕಲನಗಳನ್ನೆಲ್ಲಾ ಉರುವಲಿಗೆ ಹಾಕಿ ದಿನವೂ ಜನರು ಬಿಸಿನೀರಿನಲ್ಲಿ ಸ್ನಾನ ಮಾಡಬೇಕು. ಹೊಸ ಸಂಕಲನಗಳ್ಯಾವೂ ಪ್ರಕಟವಾಗದ ಹಾಗೆ ಸರಕಾರ ಕಟ್ಟುನಿಟ್ಟು ಮಾಡಬೇಕು. ಕವಿಯು ಸಮಾಜ ವಿದ್ರೋಹಿ ಎಂಬುದನ್ನು ಸಂವಿಧಾನದಲ್ಲಿ ಸೇರಿಸಿ ತಿದ್ದು ಪಡಿ ಮಾಡಬೇಕು. ತಮ್ಮನ್ನು ತಾವು ಕವಿ ಎಂದು ಕರೆದುಕೊಳ್ಳುವವರನ್ನು ಕಂಬಿಗಳ ಹಿಂದೆ ನಿಲ್ಲಿಸಬೇಕು. ಕವಿತೆ ಬರೆಯೋದು, ಓದುವುದು ನನಗಿಷ್ಟ ಎನ್ನುವವರನ್ನು ಹುಚ್ಚು ಬಿಡಿಸುವ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಬೇಕು. ಧರ್ಮಗ್ರಂಥಗಳಲ್ಲಿ ಕವಿತೆ ವಾಚನ ಧರ್ಮ ಬಾಹಿರ ಎಂದು ನಮೂದಾಗುವ ಹಾಗೆ ಧಾರ್ಮಿಕ ಮುಖಂಡರು ಗಮನ ಹರಿಸಬೇಕು. ಇವೆಲ್ಲವುಗಳಿಗೆ ಒತ್ತಾಸೆಯಾಗಿ ಸರಕಾರ ನೂರು ವರ್ಷಗಳವರೆಗೆ ಪೊಯೆಟ್ರಿಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು.’

‘ಅದೆಲ್ಲಾ ಸರಿ. ಸಾರ್ ಆದರೆ ಯಾಕೆ ಬ್ಯಾನ್ ಮಾಡಬೇಕು ಎಂದು ನೀವು ಹೇಳಲೇ ಇಲ್ಲವಲ್ಲ?’ ಪ್ರಶ್ನಿಸಿದ ವರದಿಗಾರ.

‘ ಹೀಗೆ ನೂರು ವರ್ಷ ಪೊಯೆಟ್ರಿಯನ್ನು ಬ್ಯಾನ್ ಮಾಡಿದರೆ ಕವಿಗಳ ಶನಿ ಸಂತಾನ ನಾಶವಾಗುತ್ತದೆ. ಕವಿತೆಯ ಹೆಸರಿನಲ್ಲಿ ಜಂಡು ಬಾಮ್, ಅನಾಸಿನ್ ಮಾರಾಟ ಮಾಡುತ್ತಾ ಮೆಡಿಕಲ್ ಸ್ಟೋರ್‍‌ಗಳಿಗೆ ಲಾಭ ಮಾಡುವ ದಂಧೆಯವರ ಜನಾಂಗಕ್ಕೆ ಅಂತ್ಯ ಬರುತ್ತದೆ. ನೂರು ವರ್ಷ ಕಳೆದು ಬರುವ ಹೊಸ ಜನರೇಶನ್ನಿನಲ್ಲಿ ಕವಿಗಳ ಕೆಟ್ಟ ಸಂಸ್ಕೃತಿ ಇರುವುದಿಲ್ಲ. ಪತ್ರಿಕೆಗಳು ಸ್ಪೇಸ್ ಫಿಲ್ಲರ್‌ಗಳಿಗೆ ಕೊಂಚ ಕಾಲ ಒದ್ದಾಡ ಬಹುದು. ವಾಲಂಟರಿ ರಿಟೈರ್ ಮೆಂಟ್ ತೆಗೆದುಕೊಂಡವರು ನಾಲ್ಕೈದು ಉದ್ಘಾರಗಳನ್ನು ಹೊರಡಿಸಿ ತಮ್ಮನ್ನು ತಾವು ಕವಿ ಎಂದು ಕರೆದು ಸಂಭ್ರಮಿಸಿಕೊಳ್ಳುವುದಕ್ಕೆ ಕೊಂಚ ತೊಂದರೆಯಾಗಬಹುದು. ಉದ್ಯೋಗವಿಲ್ಲದವರು ಶಬ್ಧ ಕೋಶದ ರಸಾಯನ ಮಾಡಿ ತಮ್ಮ ರೆಸ್ಯೂಮಿನಲ್ಲಿ ‘ಖ್ಯಾತ
ಕವಿ’ ಎಂದು ನಮೂದಿಸಿಕೊಳ್ಳುವುದಕ್ಕೆ ಉತ್ಸಾಹಕ್ಕೆ ಹಾನಿಯಾಗಬಹುದು. ಆದರೆ ಲಕ್ಷಾಂತರ ಮರಗಳ ಜೀವ ಉಳಿಯುತ್ತದೆ, ಕವನ ಸಂಕಲನಗಳ ಪ್ರಕಟಣೆ ನಿಲ್ಲುವುದರಿಂದ.’

‘ಒಳ್ಳೆಯ ವಿಚಾರಗಳು ಸಾರ್. ಆದರೆ ಪೊಯೆಟ್ರಿಯನ್ನ ಬರೇ ನೂರು ವರ್ಷ ಬ್ಯಾನ್ ಮಾಡಬೇಕು ಅಂದಿರಿ. ಅಲ್ಲದೆ ಕೇವಲ ಈಗ ನಿಮ್ಮ ನಂತರ ಬರೆದವರ ಕವನ ಸಂಕಲನಗಳನ್ನು ಸುಡಬೇಕು ಎಂದು ಅಪ್ಪಣೆ ಕೊಡಿಸಿದಿರಿ. ಆದರೆ ಹಿಂದಿನದರ ಬಗ್ಗೆ ಮಾತಾಡಿಲ್ಲ. ಏನಿದರ ಮರ್ಮ?’ ಗೊಂದಲ ತಡೆಯಲಾರದೆ ಕೇಳಿದ ವರದಿಗಾರ.

‘ಇದು ನನ್ನ ಆಶಯದ ಬಹು ಮುಖ್ಯ ಅಂಶ. ನೂರು ವರ್ಷ ಕವನಗಳನ್ನು ಬ್ಯಾನ್ ಮಾಡುವುದರಿಂದ ಜನರಿಗೆ ಕವನ ಬರೆಯುವುದು, ಕಾವ್ಯ ಓದುವುದರಲ್ಲಿ ಆಸಕ್ತಿ ಹೊರಟು ಹೋಗುತ್ತದೆ. ಕವಿಗಳ ಕುಲವೇ ಅಸುನೀಗುತ್ತದೆ. ಜನರಿಗೆ ಹೆಚ್ಚು ಹೆಚ್ಚು ಸಮಯದ ಉಳಿತಾಯವಾಗುತ್ತದೆ. ಆಗ ಜನರು ಹೆಚ್ಚು ಹೆಚ್ಚು ದುಡಿಯಲು ಶುರು ಮಾಡುತ್ತಾರೆ. ಹೆಚ್ಚು ಸಂಪಾದಿಸುತ್ತಾರೆ. ದುಡ್ಡು ಕೂಡಿಡುತ್ತಾರೆ. ಮನೆಯನ್ನು ಟಿವಿ, ಫ್ರಿಡ್ಜು, ವಾಶಿಂಗ್ ಮಶೀನು, ಕಂಪ್ಯೂಟರು, ಕಾರು, ಬೈಕು, ಏರೋಪ್ಲೇನುಗಳಿಂದ ತುಂಬಿಸುತ್ತಾರೆ. ಕೊನೆಗೆ ಇದೆಲ್ಲಾ ಇಷ್ಟೆನಾ ಅನ್ನಿಸಲು ಶುರುವಾಗುತ್ತದೆ. ಬದುಕು ಇಷ್ಟು ನಿಸ್ಸಾರವಾ ಎಂದು ಕೇಳಿಕೊಳ್ಳತೊಡಗುತ್ತಾರೆ. ಆಗ ಕವಿತೆಯ ಜೀವಸಾರದ ಗುಟುಕಿಗಾಗಿ ಬಾಯಾರಿ ತತ್ತರಿಸುತ್ತಾರೆ. ಆದರೆ ಆಗ ಯಾವ ಕವನಗಳೂ ಇರುವುದಿಲ್ಲ. ಕವಿಗಳೂ ದಿವಂಗತರಾಗಿರುತ್ತಾರೆ. ಜನರಿಗೆ ಕವಿತೆಗಳೇ ಬದುಕು ಅನ್ನಿಸಲು ಶುರುವಾಗುತ್ತದೆ.’

‘ಇದರಿಂದೇನು ಲಾಭವಾಗುತ್ತೆ ಸಾರ್?’

‘ಆಗ ಉಳಿದವರ್ಯಾರ ಕವನಗಳೂ ಇರೋದಿಲ್ಲ. ನನ್ನವು ಮಾತ್ರ ಇರುತ್ತವೆ. ನಾನು ಬರೆದಿಟ್ಟು ಹೋದ ಕವನಗಳೇ ಸಂಜೀವಿನಿಗಳಾಗುತ್ತವೆ. ನನ್ನ ಖರ್ಚಾಗದ ಕವನ ಸಂಕಲನಗಳು ಹಾಟ್ ಗಾಸಿಪ್ಪಿನ ಹಾಗೆ ಬಿಕರಿಯಾಗುತ್ತವೆ. ನಾನು ಹೇಗೂ ನನ್ನ ಮೊಮ್ಮಕ್ಕಳಿಗೆ ಕಾಸು ಕೂಡಿಟ್ಟಿಲ್ಲ. ಅವರಿಗೆ ಒಂದು ದಾರಿಯಾಗುತ್ತದೆ. ಅದಕ್ಕೇ ನಾನು ಸರ್ಕಾರಕ್ಕೆ ಈ ಕೂಡಲೇ ಕವನಗಳನ್ನು, ಕವಿಗಳನ್ನೂ ನೂರು ವರ್ಷಗಳವರೆಗೆ ಬ್ಯಾನ್ ಮಾಡಬೇಕು ಎಂದು ಆಗ್ರಹಿಸುತ್ತೇನೆ.