ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೩)

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೩)

ಬರಹ

*****ಭಾಗ ೧೩

ಜಾಲಂಧರ ಬಿಟ್ಟು ಅಪಾಯಕಾರಿಯಾದ ಪರ್ವತ ಮಾರ್ಗವಾಗಿ ಸುಮಾರು ೩೫೦ ಕ್ರ್‍ಓಶಗಳ ದೂರ ಪ್ರಯಾಣದ ನಂತರ ಕುಲೂತ ದೇಶವನ್ನು ಸೇರಿದೆವು. ನನ್ನ ಮಿತ್ರ ಉದ್ದಕ್ಕೂ ತನ್ನ ತಾಳೇಗರಿಗಳಂತಹ ಪತ್ರಗಳ ಮೇಲೆ ಏನನ್ನೋ ಬರೆಯುತ್ತಲೇ ಇದ್ದ. ಕುಲೂತ ದೇಶವನ್ನು ಬಿಟ್ಟು ಸುಮಾರು ೩೫೦ ಕ್ರೋಶಗಳು ದಕ್ಷಿಣದಿಕ್ಕಿನಲ್ಲಿ ನಡೆದ ನಂತರ ಶತಾದ್ರು ನದಿಯ ತೀರದಲ್ಲಿದ್ದ ಶತಾದ್ರು ದೇಶವನ್ನು ತಲುಪಿದೆವು. ಶತಾದ್ರು ಬಿಟ್ಟು ನಋತ್ಯ ದಿಕ್ಕಿನಲ್ಲಿ ೪೦೦ ಕ್ರ್‍ಓಶಗಳ ದೂರ ಸವೆಸಿದ ನಂತರ ಪಾರ್ಯಾತ್ರ ದೇಶವನ್ನು ಸೇರಿ, ಬಳಿಕ ಪೂರ್ವ ದಿಕ್ಕಿನಲ್ಲಿ ೨೫೦ ಕ್ರ್‍ಓಶಗಳ ಪಯಣದ ನಂತರ ಮಥುರಾನಗರಿಯನ್ನು ಸೇರಿದೆವು.

ಈ ಮಥುರಾ ಪ್ರದೇಶವು ಸುಮಾರು ೨೫೦೦ ಕ್ರ್‍ಓಶಗಳ ಸುತ್ತಳತೆ ಹೊಂದಿದೆ. ಮಥುರಾ ನಗರದ ಸುತ್ತಳತೆ ಸುಮಾರು ೧೦ ಕ್ರೋಶಗಳಿದ್ದು, ಈ ಊರು ಮಹಾನದಿಯಾದ ಯಮುನೆಯ ತೀರದಲ್ಲಿದೆ. ಇಲ್ಲಿಯ ನೆಲ ಸಮೃದ್ಧ ಹಾಗು ಫಲವತ್ತಾಗಿದ್ದು ಇಲ್ಲಿ ಬಹು ಮಾತ್ರದಲ್ಲಿ ಆಹಾರ ಧಾನ್ಯ ಬೆಳೆಯಲಾಗುತ್ತದೆ. ಇಲ್ಲಿಯವರು ದೊಡ್ಡ ಮರಗಳನ್ನೂ ಬೆಳೆಯುತ್ತಾರೆ. ಇಲ್ಲಿಯ ಆಮ್ಲ ಕಾಯಿ ಸುಪ್ರಸಿದ್ಧ. ಆಮ್ಲದ ಮರಗಳು ಎರಡೂ ರೀತಿಯವು - ಹಸಿರು ಹಾಗು ಹಳದಿ ವರ್ಣವುಳ್ಳ ಫಲಗಳು.

ಬಹು ಉತ್ಕಟವಾದ ಕಾರ್ಪಸವಲ್ಲದೆ ಪೀತ-ಕನಕವನ್ನೂ ಇಲ್ಲಿ ಉತ್ಪತ್ತಿ ಮಾಡಲಾಗುತ್ತದೆ. ಇಲ್ಲಿಯ ವಾತಾವರಣವು ಸುಖಮಯವಾಗಿರುತ್ತದೆ. ಇಲ್ಲಿಯ ಜನರು ಮೃದು ಸದ್ಭಾವನೆ ಸ್ವಭಾವದವರಾಗಿದ್ದು ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ತೆಗೆದುಕೊಳ್ಳುತ್ತಾರೆ. ವಿದ್ವತ್ತು ಹಾಗು ಸುಶೀಲತೆಯನ್ನು ಬಹಳ ಎತ್ತಿ ಆಡಿಸುತ್ತಾರೆ.

ಬೌದ್ಧರ ಸುಮಾರು ೨೦ ಸಂಘಾರಾಅಮ್ಗಳಿವೆ, ಅವುಗಳಲ್ಲಿ ಸುಮಾರು ೨೦೦೦ ಭಿಕ್ಕುಗಳು. ಅಶೋಕರಾಜನೇ ಕಟ್ಟಿಸಿದ್ದೆಂದು ಪ್ರಖ್ಯಾತಿ ಪಡೆದ ಮೂರು ಬೌದ್ಧ ಸ್ತೂಪಗಳಿವೆ. ಮೂರು ಮಾಸಗಳಿಗೊಮ್ಮೆ ಇವರು ದೊಡ್ಡ ಧರ್ಮ-ಪ್ರದರ್ಶನ ನಡೆಸಿ, ಪ್ರಸಾದಗಳನ್ನು ನೈವೇದ್ಯ ಮಾಡಿ, ಪತಾಕೆ ಲಾಂಛನಗಳೊಂದಿಗೆ ತಮ್ಮ ಉಚ್ಛ ದ್ರವ್ಯಗಳ ಪ್ರದರ್ಶನ ಮಾಡುತ್ತಾರೆ. ಧೂಪದ ಹೊಗೆ ಗಗನಕ್ಕೇರಿ, ಪುಷ್ಪಗಳ ವೃಷ್ಟಿಯನ್ನೇ ಮಾಡುತ್ತಾರೆ. ಇಲ್ಲಿಯ ಆಗಿನ ರಾಜನೂ ಇವರನ್ನು ಹುರಿದುಂಬಿಸುತ್ತಿದ್ದ. ನನ್ನ ಮಿತ್ರ ಇಂತಹ ಒಂದು ಧರ್ಮಾಚರಣೆಯಲ್ಲಿ ಪಾಲ್ಗೊಂಡ, ನಾನೂ ಅಲ್ಲಿಗೆ ವೀಕ್ಷಕಮಾತ್ರನಾಗಿ ಹೋಗಿಬಂದೆ. ಪ್ರತಿ ದಿನದ ಆಗುಹೋಗುಗಳನ್ನೂ ನನ್ನ ಮಿತ್ರ ತನ್ನ ಗರಿಗಳಲ್ಲಿ ಬರೆದುಕೊಳ್ಳುತ್ತಿದ್ದ. ನಾನು ಏನೆಂದು ಕೇಳಿದಾಗ ನಮ್ಮ ದೇಶದ ರೀತಿ ರಿವಾಜುಗಳೆಂದು ಹೇಳಿದ. ಆದರೆ ಬೌದ್ಧ ಧರ್ಮ ರಿವಾಜುಗಳನ್ನು ನಮೂದಿಸುತ್ತಿದ್ದನೇ ವಿನಃ, ಒಂದು ದಿನವಾಗಲಿ ಅವನು ನಮ್ಮ ಧರ್ಮದ ವಿವರ ಕೇಳಬರಲಿಲ್ಲ.

ಮಥುರೆಯಲ್ಲಿ ನಮ್ಮ ಧರ್ಮದ ಕೇವಲ ಐದು ದೇವಾಲಯಗಳಿದ್ದವು. ಆದರೆ ಸಾಮಾನ್ಯ ಮನುಷ್ಯರು ಹೆಚ್ಚಾಗಿ ನಮ್ಮ ದೇವರುಗಳನ್ನವಲಂಭಿಸಿದವರೇ. ಸ್ತೂಪ-ಸಂಘಾರಾಮಗಳಿಗೆ ಆಗಾಗ ಹೋಗುತ್ತಿದ್ದರೂ ಇವರ ಇಷ್ಟ ದೇವತೆ, ಹಾಗು ಪೂಜೆ ನಮ್ಮ ವಿಧಾನದಲ್ಲಿಯೇ. ಅಂತೆಯೇ ನಾವು ಅಲ್ಲಿದ್ದ ಸಮಯದಲ್ಲಿ ಬಂದ ಪರ್ವವೊಂದರಲ್ಲಿ ವ್ರತವನ್ನು ನಾನು ಅಲ್ಲಿಯೇ ಆಚರಿಸಿದೆ. ಬೌದ್ಧರು ನಡೆಸಿದ ಅದ್ದೂರಿ ನಮ್ಮಲ್ಲಿರಲಿಲ್ಲ ಆದರೂ ಭಕ್ತಿಭಾವ ಹಾಗು ಶ್ರದ್ಧೆಗಳ ಕೊರತೆ ಇರಲಿಲ್ಲವೆನಿಸಿತು.

ಊರಿನಿಂದ ಪೂರ್ವ ದಿಕ್ಕಿನಲ್ಲಿ ಸುಮಾರು ೨-೩ ಕ್ರೋಶಗಳ ದೂರದಲ್ಲಿ ಬೆಟ್ಟಗಳ ಮಧ್ಯದಲ್ಲಿ ಒಂದು ಸಂಘಾರಾಮವಿದೆ. ಇದರಲ್ಲಿ ತಥಾಗಥ ಬುಧ್ಧನ ನಖವಿದೆಯಂತೆ. ಬಳಿಯೇ ಒಂದು ಕಲ್ಲಿನ ಮನೆಯಿದೆ. ಶೂದ್ರನಾಗಿ ಹುಟ್ಟಿ, ನಂತರ ಭಿಕ್ಷುವಾಗಿ, ಅರ್‍ಹಟನಾದ ಉಪಗುಪ್ತನು ಇಲ್ಲಿ ಧರ್ಮ ಬೋಧನೆ ಮಾಡುತ್ತಿದ್ದನಂತೆ. ಹತ್ತಿರವೇ ಬುದ್ಧನು ಓಡಾಡಿದ ಸ್ಥಳವೆಂದು ಕಟ್ಟಿಸಿದ ಸ್ತೂಪಗಳು ಇವೆ. ಮಥುರಾ ನಗರವನ್ನು ಬಿಟ್ಟು ಹೊರಟೆವು. ಈಶಾನ್ಯ ದಿಕ್ಕಿನಲ್ಲಿ ಸುಮಾರು ೨೫೦ ಕ್ರೋಶಗಳ ಅಂತರದಲ್ಲಿ ಸ್ಥಾನೇಶ್ವರ ಇದೆ. ಮತ್ತೆ ೨-೩ ದಿನಗಳ ಪ್ರಯಾಣದನಂತರ ಸ್ಥಾನೇಶ್ವರವನ್ನು ಸೇರಿದೆವು.

ಸ್ಥಾನೇಶ್ವರ - ಹರ್ಷ ಚಕ್ರವರ್ತಿಯ ಮೂಲ ದೇಶ. ಈ ಪ್ರದೇಶದ ಸುತ್ತಳತೆ ಸುಮಾರು ೩೫೦೦ ಕ್ರೋಶಗಳು. ಇಲ್ಲಿಯ ನೆಲವೂ ಬಹು ಸಮೃದ್ಧ ಹಾಗು ಫಲವತ್ತಾಗಿದ್ದು ಇಲ್ಲಿ ಬಹುಮಾತ್ರದಲ್ಲಿ ಆಹಾರ ಧಾನ್ಯಗಳು ಬೆಳೆಯುತ್ತವೆ. ವಾತಾವರಣವು ಸ್ವಲ್ಪ ಉಷ್ಣಮಯವಾಗಿರುತ್ತದೆ. ಮೊದಲಿಗೆ ಇಲ್ಲಿಯ ಜನಾಂಗ ಏಕೋ ಸ್ವಲ್ಪ ಶೈತ್ಯ ಹಾಗು ಕುಟಿಲ ಮನೋಭಾವದವರೆನಿಸಿತು. ಆದರೆ ಇವರು ಬಹಳೇಬಹಳ ಶ್ರೀಮಂತರು ಹಾಗು ಆಮಿಷ ಪ್ರಿಯರು. ಮಾಟ ಮಂತ್ರಗಳನ್ನವಲಂಭಿಸಿದ ಇವರುಗಳು ಅಸಾಧಾರಣ ಪ್ರಚಂಡ ಅಳವು ಹೊಂದಿದವರನ್ನು ಆದರಿಸುತ್ತಾರೆ. ಹೆಚ್ಚಿನ ಜನ ಅರ್ಥ-ಕಾಮಗಳನ್ನು ಹಿಂಬಾಲಿಸುತ್ತಾರೆ. ವಿಶ್ವದಾದ್ಯಂತದಿಂದ ಅಪರೂಪ ಹಾಗು ಉಚ್ಛ ದ್ರವ್ಯಗಳು ಇಲ್ಲಿ ಬಂದು ಸೇರಿವೆಯೇನೋ ಎನ್ನುವಷ್ಟು ವೈಭವ!

ಹರ್ಷ ಚಕ್ರವರ್ತಿಯ ನೆಲೆಯವರು ಇಂಥವರೇ ಎನಿಸಿತು. ಸ್ಥಾನೇಶ್ವರದ ವೈಭವವನ್ನು, ಜನರ ಶೀಲ ಗುಣವನ್ನೂ ನನ್ನ ಗೂಢಚರ್ಯೆಯ ದಿನಗಳಲ್ಲಿ ಕೇಳಿ ತಿಳಿದಿದ್ದೆ. ಮೊದಲಿಗೆ ನನಗೆ ಅರ್ಥವಾಗಲಿಲ್ಲ. ನನ್ನ ಮಿತ್ರ ಬಳಿಯಿದ್ದ ಸಂಘಾರಮಕ್ಕೆ ತೆರಳಿದ ಕೂಡಲೆ ನನ್ನ ಜಟೆ-ಜನಿವಾರಗಳನ್ನು ಗುರುತಿಸಿ ನನಗೆ ಆದರದ ಸ್ವಾಗತ ನೀಡಿದರು; ಬ್ರಾಹ್ಮಣರೊಬ್ಬರ ಮನೆಗೆ ಕರೆದೊಯ್ದು ಸತ್ಕಾರ ಮಾಡಿ ಉಪಹಾರಗಳನ್ನಿತ್ತರು. ಭೋಜನಕ್ಕಡ್ಡಿಯಿಲ್ಲವಾದರೂ ಉಪಹಾರಗಳನ್ನು ನಾನು ಸ್ವೀಕರಿಸಲಿಲ್ಲ - ಸ್ವೀಕರಿಸುವಂತಿರಲಿಲ್ಲ. ನನಗೆ ಈಗ ಅರ್ಥವಾಯಿತು. ಇವರು ನನ್ನ ಬುದ್ಧಾನುಯಾಯಿ ಮಿತ್ರನನ್ನು ಕಂಡು ಸ್ವಲ್ಪ ಹಿಂಜರಿದಿದ್ದಿರಬೇಕು. ಈಗ ನನ್ನೊಬ್ಬನನ್ನೇ ಕಂಡು ಸ್ನೇಹಭಾವ ತೋರುತ್ತಿದ್ದರು. ಇಲ್ಲಿ ನಮ್ಮ ಧರ್ಮ ಪ್ರಬಲವಾಗಿತ್ತು; ಬೌದ್ಧರು ಹಿಂದುಳಿದಿದ್ದರು.

ಅಂದು ನನ್ನ ಆತಿಥೇಯರ ಗೃಹದಲ್ಲೇ ತಂಗಿದ್ದೆ. ಉದ್ದಕ್ಕೂ ನಾನು ಯಾವ ಸಂಘಾರಾಮದಲ್ಲೂ ತಂಗುತ್ತಿರಲಿಲ್ಲ, ಭೋಜನ ಮಾಡುತ್ತಿರಲಿಲ್ಲ. ಊರಾಚೆ ಅಥವ ಛತ್ರ-ದೇವಸ್ಥಾನಗಳಲ್ಲಿ ತಂಗುತ್ತಿದ್ದೆ. ಮೊದಲಿನ ಒಪ್ಪಂದದಂತೆ ನನ್ನ ಮಿತ್ರ ಇದ್ಯಾವುದಕ್ಕೂ ಆಕ್ಷೇಪಣೆ ಮಾಡುತ್ತಿರಲಿಲ್ಲ. ಆದರೆ ಇಂದು ನನ್ನ ಮಿತ್ರನಿಗೆ ಇದು ಏಕೋ ಸರಿಯಾಗಿ ಕಾಣಿಸಲಿಲ್ಲ. ಮಾರನೆಯ ದಿನ ಮತ್ತೆ ಸಂಧಿಸಿದಾಗ ಕೋಪಗೊಂಡು ನನ್ನನ್ನು ಸ್ವಲ್ಪ ಖಂಡಿಸತೊಡಗಿದ. ಅವನನ್ನು ಹೀನವಾಗಿ ಕಂಡ ಈ ಸ್ಥಳದ ಜನರ ಮನೆಯಲ್ಲಿ ನಾನು ತಂಗಿದ್ದು ಅವನಿಗೆ ಸ್ವಲ್ಪ ಅವಮಾನಾವೆನಿಸಿರಬಹುದು. ಇವನೊಡನೆ ಈ ಸಮಯದಲ್ಲಿ ಜಗಳವಾಡಲು ಬಯಸದೆ, ನಾನಿದನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ.

ಸ್ಥಾನೇಶ್ವರದಲ್ಲಿ ನಾವು ಒಂದು ವಾರ ಕಳೆಯಬೇಕಾಯಿತು. ಊರಿನ ದೇವಾಲಯವೊಂದರಲ್ಲಿ ಇದ್ದ ವೃದ್ಧರೊಬ್ಬರು ನನ್ನ ಸಂಸ್ಕೃತ ವಾರ್ತೆಯನ್ನು ಕೇಳಿ, ಕೆಲವೇ ಘಳಿಗೆಗಳಲ್ಲಿ ನನ್ನನ್ನು ಬಹಳ ಹಚ್ಚಿಕೊಂಡಿದ್ದರು. ಒಂದು ದಿನ ಅವರು ಈ ಸ್ಥಳದ ಮಹತ್ವವನ್ನು ಹೇಳಿದರು. ನನ್ನ ಮಿತ್ರನೂ ನನ್ನೊಡನೆಯೇ ಇದ್ದ - ಅವರು ಹೇಳುತ್ತಿದ್ದಂತೆ ಅವನು ಎಲ್ಲವನ್ನೂ ಬರೆದುಕೊಳ್ಳುತ್ತಿದ್ದ.

ಊರಿನಿಂದ ಸುಮಾರು ೨-೩ ಕ್ರೋಶಗಳ ದೂರದಲ್ಲಿ ಅಶೋಕರಾಜನೇ ಕಟ್ಟಿಸಿದನೆಂದು ಹೇಳಲ್ಪಡುವ ಸ್ತೂಪವೊಂದಿದೆ. ಬೃಹತ್ ಆಕಾರದ ಈ ಸ್ತೂಪವು ಕೆಂಪು ವರ್ಣದ ಹೊಳೆವ ಶಿಲೆಗಳಿಂದ ಕಟ್ಟಲ್ಪಟ್ಟಿದೆ. ಈ ಸ್ತೂಪದಲ್ಲಿ ನನ್ನ ಮಿತ್ರ ಪ್ರಾರ್ಥನೆ ಮಾಡಿದ ನಂತರ ನಾವು ಸ್ಥಾನೇಶ್ವರವನ್ನು ಬಿಟ್ಟು ಹೊರಟೆವು.