ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.

ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.

ಬರಹ

ಅಂದು ಮಂಗಳವಾರ. ಧಾರವಾಡದ ‘ಸೂಪರ್ ಸಮಸ್ಯೆಗಳ ಕೂಪ’! ಎಂಬ ಅಪಖ್ಯಾತಿಯ ಸುಪರ್ ಮಾರುಕಟ್ಟೆಯಲ್ಲಿ ವಾರದ ಸಂತೆ ನೆರೆದಿತ್ತು. ನೂರಾರು ಜನ ಮಾರಾಟಗಾರರು..ಅಷ್ಟೇ ಸಂಖ್ಯೆಯಲ್ಲಿ ಭಾರ ಹೊರುವವರು.

ಜನ-ದನ ಬೇಧವಿಲ್ಲದೇ ಒಬ್ಬರಿಗೊಬ್ಬರು ಮೈ ಉಜ್ಜುತ್ತ..ಮಾರಾಟಗಾರರ ಹಾಗು ಗಿರಾಕಿಗಳ ಪಲ್ಯ ಕಸಿಯಲು ಹೊಂಚುಹಾಕುವ ಬಿಡಾಡಿ ದನಗಳು ಒಂದೆಡೆ..ಅಲ್ಲಿಯೇ ಕೆಸರಿನಲ್ಲಿ ಹೊರಳಾಡಿ ಎದ್ದ ಆಕಳ ಕರುವಿನ ಗಾತ್ರದ ವರಾಹಗಳು ತಮ್ಮ-ತಮ್ಮ ಕಚ್ಚಾಟದಲ್ಲಿ ಜನರಿಗೆ ಕೆಸರು ಎರಚುವಲ್ಲಿ ತಲ್ಲೀನ! ಪಾಲಿಕೆಗೆ ಹಿಡಿ ಶಾಪ ಹಾಕುತ್ತ ಕ್ಯಾಕರಿಸಿ ಉಗಿಯುತ್ತ, ಖೆಮ್ಮುತ್ತ..ಮೂಗಿಗೆ ಕರವಸ್ತ್ರ ಅಂಟಿಸಿಕೊಂಡು..ಉಸಿರು ಬಿಗಿ ಹಿಡಿದು ಖರೀದಿಯಲ್ಲಿ ಮಗ್ನ ಸಾವಿರಾರು ಜನ.

ತಗಡಿನ ಶೆಡ್ಡುಗಳ ಕಾರಬಾರಿನಲ್ಲಿ ಕೆರೆ ಈಗ ಕೇರಿ! ಇದು ಒಂದು ಕಾಲದಲ್ಲಿ ಹಾಲಗೆರೆ ಹನುಮಂತದೇವರ ಕೆರೆ ಎಂದು ಪ್ರಸಿದ್ಧವಾಗಿತ್ತು. ಸಂಜೀವಿನಿ ಪರ್ವತ ಎತ್ತಿ ಹಿಡಿದ ಆಂಜನೇಯ ಇಂದಿಗೂ ಮೂಕ ಪ್ರೇಕ್ಷಕನಾಗಿ ಈ ಬೆಳವಣಿಗೆಗಳನ್ನು ನೋಡುತ್ತಿದ್ದಾನೆ. ಪಕ್ಕದಲ್ಲಿಯೇ ಗಾಂಧಿ ಚೌಕದ ದತ್ತಾತ್ರೇಯ ದೇವಸ್ಥಾನ. ಅದು ಇಂದಿಗೂ ಇದೆ.

ಇಲ್ಲಿ ಅಚಾನಕ್..ಇರುವೆ ತಿಂದು ಬದುಕುವ ಪ್ಯಾಂಗೋಲಿನ್ ಪ್ರತ್ಯಕ್ಷವಾದರೆ ಹೇಗಿರಬೇಡ. ಇದು ಹಾವನ್ನು ಕಂಡ ಜನರ ಗುಂಪಿನ ಪ್ರತಿಕ್ರಿಯೆಗೆ ಸಮನಾಗಿತ್ತು. ಉದ್ದ ನಾಲಿಗೆ. ನಾಚಿಗೆ ಸ್ವಭಾವ. ಮೈತುಂಬ ಚಿಪ್ಪು. ಜನರನ್ನು ನೋಡಿದರೆ ಬೆದರಿ ಮುದುಡುವ ಮನಸ್ಥಿತಿಯ ಪ್ರಾಣಿ ಇರುವೆ ಭಕ್ಷಕ ಪ್ಯಾಂಗೋಲಿನ್ ಸಂತೆಯಲ್ಲಿ ಸೇರಿದ್ದ ಕೆಲ ಪ್ರಭೃತಿಗಳಿಗೆ ಆಟದ ವಸ್ತುವಾಗಿ ಪರಿಣಮಿಸಿತು. ಗಿಲ್ಲಿ ದಾಂಡು ಆಯಿತು. ಬಾಲ್ ಆಯಿತು. ಫುಟ್ ಬಾಲ್ ಆಯಿತು! ನೋಡಿ ಹೇಗೆ ಹೇಸಿಗೆ ಹುಟ್ಟಿಸುತ್ತದೆ ‘ಬುದ್ಧಿವಂತ ಪ್ರಾಣಿ’ಯ ನಡುವಳಿಕೆ?

ಬಡಿಗೆಯಲ್ಲಿ ಕೆಲವರು ತಿವಿದರೆ, ಬೂಟು..ಚಪ್ಪಲಿ ಕಾಲಿನಲ್ಲಿ ಸ್ಪರ್ಷಿಸಿದವರು ಕೆಲವರು. ಚಿಪ್ಪು ಜಗ್ಗಿ..ಎಳೆದು ಕಿತ್ತಲು ಪ್ರಯತ್ನಿಸಿದ ನಾಟಿಗಳು ಕೆಲವರು. ಕಲ್ಲು..ಇಟ್ಟಿಗೆಗಳಿಂದ ಹೊಡೆದು ಪ್ಯಾಂಗೋಲಿನ್ ನರಳಾಟ ಆನಂದಿಸಿದವರು ಕೆಲವರು. ಕ್ಷಣ ಮಾತ್ರದಲ್ಲಿ ಜನ ಜಾತ್ರೆ. ಪೇಟೆಗೆ ಬಂದ ಉದ್ದೇಶವೇ ಅವರಿಗೆ ಮರೆತಿತ್ತು. ‘ವಾ’ನರರ ನಾಡಿಗೆ ಆಹಾರ ಅರಸುತ್ತ, ಬೇಡಿ ತಿನ್ನುತ್ತ ಬದುಕಲು ಹವಣಿಸಿದ್ದ ಮೂಕ ಪ್ರಾಣಿ ಈ ಕಪಿಗಳ ಮುಷ್ಠಿಯಲ್ಲಿ ಸಿಕ್ಕು ಮೈಉಳಿ ಹೊಡೆತ, ಒದೆತ ತಿಂದು ನಿತ್ರಾಣಗೊಂಡು ಸತ್ತೇ ಹೋಯಿತು.

ಒಂದಿನಿತೂ ಯಾರಿಗೂ ಹಾನಿ ಮಾಡಿರಲಿಲ್ಲ. ಯಾರಿಗೂ ಕಚ್ಚಿರಲಿಲ್ಲ. ಜಾಣರ ವಾಹನದ ಬುಡಕ್ಕೆ ಬಂದು ಕೆಡವಿ ಗಾಯಗೊಳಿಸಿ ಅವರ ಆಕ್ರೋಷಕ್ಕೂ ತುತ್ತಾಗಿರಲಿಲ್ಲ. ಯಾರ ಕಾಯಿ ಪಲ್ಲ್ಯ ಕಸಿದಿರಲಿಲ್ಲ. ದಿನಸಿ ಅಂಗಡಿಗೆ ನುಗ್ಗಿರಲಿಲ್ಲ. ಆದರೂ ಅದ್ಯಾವ ತಪ್ಪಿಗೆ ಮೂಕ ಪ್ರಾಣಿಯ ಪ್ರಾಣ ಹರಣವಾಯಿತು? ನಮ್ಮ ವಾಸಸ್ಥಳವನ್ನು ಅದು ಅತಿಕ್ರಮಿಸಿತ್ತೋ? ಅಥವಾ ಅವುಗಳ ವಾಸಸ್ಥಳವನ್ನು ನಾವು ಅತಿಕ್ರಮಿಸಿದ್ದೇವೆಯೋ?
ಪರಸ್ಪರರ ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯಗಳನ್ನು ಗೌರವಿಸುತ್ತ ಬದುಕುವ ಸಂಧಾನ ಸೂತ್ರ ನಮಗಿಲ್ಲವೇ? ಅಥವಾ ಗೊತ್ತಿಲ್ಲವೇ?

ಕೊಂದ ಕೂಡಲೇ ಶೂರರರಿಗೆ ಮಾಧ್ಯಮಗಳು ನೆನಪಾದವು. ಮೊದಲೇ ಕರೆ ಮಾಡಿದ್ದರೆ ಬದುಕಿಸಬಹುದಿತ್ತು. ಸತ್ತ ಪ್ಯಾಂಗೋಲಿನ ಶವದ ಛಾಯಾಚಿತ್ರ ಕ್ಲಿಕ್ಕಿಸಿದ್ದಾಯಿತು. ಪತ್ರಿಕಾ ಧರ್ಮ ನಿಭಾಯಿಸಿದ್ದಾಯಿತು. ಅಷ್ಟರಲ್ಲಿಯೇ ಯಾವುದೋ ಬಾಲಕ ಜನ ಸಂದಣಿಯಿಂದ ಜಿಗಿದು ಬಂದವನೇ ಗೋಣಿ ಚೀಲದಲ್ಲಿ ಹಾಕಿಕೊಂಡು ಹೋಗಿಯೇ ಬಿಟ್ಟ. ಸಂತೆಗೆ ಬಂದವರಲ್ಲಿ ಒಬ್ಬರಿಗೂ ಅರಿವಿರಲಿಲ್ಲವೇ?

ಬದುಕೆಂಬ ಸಂತೆಯಲ್ಲಿ ನಾವು ಬದುಕಿಲ್ಲವೇ? ಎಲ್ಲ ಅರಿವು, ಜವಾಬ್ದಾರಿ, ಸ್ಪಂದನೆ ಮಾರು ದೂರ ಬಿಟ್ಟು. ಕೆಟ್ಟದ್ದು ಕಣ್ಣಮುಂದೆ ನಡೆಯುತ್ತಿದ್ದರೂ ಪ್ರತಿಭಟಿಸದ ಪ್ರವೃತ್ತಿಗೆ ಹೇಡಿತನ ಎನ್ನದೇ ವಿಧಿ ಇಲ್ಲ. ಕೊಂದವರಿಗಿಂತ ನಿಂತು ನೋಡಿದವರಿಗೆ ಇಲ್ಲಿ ಹೆಚ್ಚಿನ ಶಿಕ್ಷೆಯಾಗಬೇಕು.