ಮನಮೋಹನರ ದಟ್ಟ ನೈತಿಕತೆ ಮತ್ತು ಗಟ್ಟಿ ರಾಜಕಾರಣ!

ಮನಮೋಹನರ ದಟ್ಟ ನೈತಿಕತೆ ಮತ್ತು ಗಟ್ಟಿ ರಾಜಕಾರಣ!

ಬರಹ

ಮನಮೋಹನರ ದಟ್ಟ ನೈತಿಕತೆ ಮತ್ತು ಗಟ್ಟಿ ರಾಜಕಾರಣ!

ಈ ಅಂಕಣ ಬರಹವನ್ನು ನೀವು ಓದುವ ಹೊತ್ತಿಗೆ ಮನಮೋಹನ ಸಿಂಗ್ ಅವರ ಸರ್ಕಾರದ ಭವಿಷ್ಯ ನಿರ್ಧಾರವಾಗಿರುತ್ತದೆ. ಸರ್ಕಾರ ಉಳಿದಿದ್ದರೂ, ಅಳಿದಿದ್ದರೂ ಈ ಅಳಿವು ಉಳಿವಿನ ಪರೀಕ್ಷೆಗೆ ಕಾರಣವಾದ ರಾಷ್ಟ್ರೀಯ ಮಹತ್ವದ ಅನೇಕ ಪ್ರಶ್ನೆಗಳು ಮಾತ್ರ ಹಾಗೇ ಉಳಿದಿರುತ್ತವೆ. ಅಷ್ಟೇ ಅಲ್ಲ, ಇನ್ನೂ ಕೆಲವು ಹೊಸ ಪ್ರಶ್ನೆಗಳನ್ನು ಎತ್ತಿರುತ್ತವೆ ಕೂಡ.

ಸರ್ಕಾರದ ಈ ಶಕ್ತಿ ಪರೀಕ್ಷೆಗೆ ಕಾರಣವಾದ ಅಮೆರಿಕಾದೊಡನೆಯ ಅಣು ಒಪ್ಪಂದವನ್ನೇ ತೆಗೆದುಕೊಳ್ಳಿ. ಇದನ್ನು ಬೆಂಬಲಿಸುವವರು, ಇದು ಭಾರತದ ಭವಿಷ್ಯದ ಇಂಧನ ಅಗತ್ಯಗಳನ್ನು ಈಡೇರಿಸುವುದೆಂದೂ ಹಾಗೂ ಇದರಿಂದಾಗಿ ದೇಶದ ಸದ್ಯದ ಅಭೂತಪೂರ್ವ ಪ್ರಗತಿ ದರವನ್ನು ಮುಂದುವರೆಸಿಕೊಂಡು ಹೋಗಿ ಭಾರತ ಒಂದು ಜಾಗತಿಕ ಶಕ್ತಿಯಾಗಿ ಮೂಡಲು ಸಾಧ್ಯಮಾಡುವುದೆಂದು ಹೇಳುತ್ತಿದ್ದಾರೆ. ಆದರೆ ಈ ವಾದ ಎಷ್ಟು ಸಾಧು ಮತ್ತು ವಾಸ್ತವಾಂಶಗಳನ್ನು ಅವಲಂಬಿಸಿದೆ ಎಂಬುದನ್ನು ವಸ್ತುನಿಷ್ಠವಾಗಿ ಪರಿಶೀಲಿಸುವ ಪ್ರಯತ್ನವೇ ಈವರೆಗೆ ಸಾರ್ವಜನಿಕ ವಲಯದಲ್ಲಿ ನಡೆದಿಲ್ಲ. ನಿಜ, ಈ ಒಪ್ಪಂದದ ಒಳ ವಿವರಗಳು ಸಾಮಾನ್ಯ ಪ್ರಜೆಗೆ ಸುಲಭವಾಗಿ ಅರ್ಥವಾಗದಂತಹ ವೈಜ್ಞಾನಿಕ ಹಾಗೂ ತಾಂತ್ರಿಕ ಪರಿಕಲ್ಪನೆಗಳಿಂದಲೂ ಮತ್ತು ಅಂತಾರಾಷ್ಟ್ರೀಯ ಒಪ್ಪಂದಗಳ ಜಟಿಲ ಪರಿಭಾಷೆಯಿಂದಲೂ ಕೂಡಿದೆ. ಆದರೆ, ಇದರ ರಾಷ್ಟ್ರೀಯ ಮಹತ್ವ ಮತ್ತು ದಟ್ಟ ವಿವಾದಾತ್ಮಕತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಥೂಲವಾಗಿಯಾದರೂ ಇದರ ಹಿನ್ನೆಲೆ ಮತ್ತು ಆಶಯ ಮತ್ತು ಶರತ್ತುಗಳನ್ನು ವಿವರಿಸುವ ಪ್ರಯತ್ನ ಮಾಡುವುದು ಸರ್ಕಾರದ ಕರ್ತವ್ಯವಾಗಬೇಕಿತ್ತು. ಏಕೆಂದರೆ, ಸರ್ಕಾರದ ಬಹುಮತಕ್ಕೆ ಕಾರಣವಾಗಿದ್ದ ಎಡ ಪಕ್ಷಗಳೂ ಸೇರಿದಂತೆ, ಹೆಚ್ಚು ಕಡಿಮೆ ಎಲ್ಲ ವಿರೋಧ ಪಕ್ಷಗಳೂ ಈ ಒಪ್ಪಂದ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆಯೆಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ಆದರೆ ಸರ್ಕಾರ ಅಂತಾರಾಷ್ಟ್ರೀಯ ಒಪ್ಪಂದಗಳ ವಿವರಗಳು ಅವು ಅಂತಿಮವಾಗುವವರೆಗೂ ಗುಟ್ಟಾಗಿರಬೇಕೆಂಬ ಇಲ್ಲದ ನೆಪವೊಡ್ಡಿ ಅದರ ವಿವರಗಳನ್ನು ಸಾರ್ವಜನಿಕರಿಂದ ಮುಚ್ಚಿಡುವ ಕೆಲಸ ಮಾಡಿತು. ಇನ್ನು, ತಾವು ಬೆಂಬಲಿಸುತ್ತಿದ್ದ ಸರ್ಕಾರವನ್ನು ಬೀಳಿಸಲು ಮುಂದಾಗುವಷ್ಟರ ಮಟ್ಟಿಗೆ ಈ ಒಪ್ಪಂದದ ಬಗ್ಗೆ ಭಿನ್ನಾಭಿಪ್ರಾಯವನ್ನು ಹೊಂದಿದ್ದ ಎಡ ಪಕ್ಷಗಳು ಕೂಡಾ ಈ ಸಂಬಂಧ ಸರ್ಕಾರದೊಂದಿಗೆ ತನ್ನ ಸಂಧಾನಗಳನ್ನು ಸುಮ್ಮನೆ ಎಳೆಯುತ್ತಾ ಬಂದವೇ ಹೊರತು, ತನ್ನ ನಿಲುವಿನ ಹಿಂದಿರುವ ಆತಂಕಗಳಿಗೆ ಕಾರಣವಾದ ಒಪ್ಪಂದದ ವಿವರಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಮುಂದಾಗಲಿಲ್ಲ. ಮನಮೋಹನ ಸಿಂಗರ ಹಠದಿಂದಾಗಿ ಕೊನೆಗೂ ಕಡಿದು ಬಿದ್ದ ಇವರಿಬ್ಬರ ನಡುವಣ ಮಾತುಕತೆಗಳು ರಾಜಕೀಯ ಅನಿಶ್ಚಿತತೆಯನ್ನು ಸೃಷ್ಟಿಸಿ, ಈ ಒಪ್ಪಂದದ ಭವಿಷ್ಯ ಸದ್ಯಕ್ಕಾದರೂ ನಿರ್ಣಯವಾಗಬೇಕು ಎಂಬ ವಾತಾವರಣ ನಿರ್ಮಾಣವಾದಾಗಷ್ಟೇ ಈ ಒಪ್ಪಂದದ ಬಗ್ಗೆ ಸಾರ್ವಜನಿಕರಿಗೆ ಹಲವು ವಿವರಗಳು ದೊರಕಲಾರಂಭಿಸಿವೆ. ಆಶ್ಚರ್ಯವೆಂದರೆ ತಾಂತ್ರಿಕ ವಿವರಗಳಿಂದಲೇ ತುಂಬಿ ಹೋಗಿರುವ ಈ ಒಪ್ಪಂದದ ಬಗ್ಗೆ ತೀವ್ರ ವಾದ ವಿವಾದಗಳಲ್ಲಿ ತೊಡಗಿರುವವರು ಹೆಚ್ಚಾಗಿ ರಾಜಕಾರಣಿಗಳು ಮತ್ತು ರಾಜಕೀಯ ವಿಶ್ಲೇಷಕರೇ ಆಗಿದ್ದಾರೆ! ಆದರೆ ತಾಂತ್ರಿಕ ವಿವರಗಳೊಂದಿಗೆ ಮಾತಾಡಿರುವ ಇಬ್ಬರು ವಿಜ್ಞಾನಿಗಳೂ ಒಪ್ಪಂದವನ್ನು ಸಾರಾಸಗಟಾಗಿ ವಿರೋಧಿಸಿದ್ದಾರೆ.

ಈ ವಿಜ್ಞಾನಿಗಳು, ಈ ಒಪ್ಪಂದ ಸಕ್ರಿಯಗೊಳ್ಳುವ ಮುನ್ನ ಚರ್ಚೆಯಾಗಬೇಕಾದುದು ಮುಖ್ಯವಾಗಿ ಅದರ ತಾಂತ್ರಿಕ ವಿವರಗಳ ನೆಲೆಯಲ್ಲಿ; ನಂತರವಷ್ಟೇ ಅದರ ರಾಜಕೀಯ ಪರಿಣಾಮಗಳ ನೆಲೆಯಲ್ಲಿ ಎಂದು ಆಗ್ರಹಪಡಿಸುತ್ತಿದ್ದರೂ, ನಾವು ಮಾತ್ರ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕಪಿಲ್ ಸಿಬಾಲ್, ಲಾಲೂ, ಮುಲಾಯಂ, ಅಮರಸಿಂಗ್, ಪ್ರಕಾಶ್ ಕಾರಟ್, ಬರ್ಧನ್, ದೇವೇಗೌಡ, ಮಾಯಾವತಿ, ಅದ್ವಾನಿ, ಯಶವಂತ ಸಿನ್ಹ, ಚಂದ್ರಬಾಬು ನಾಯ್ಡು ಇತ್ಯಾದಿಗಳ ಅಭಿಪ್ರಾಯಗಳ ಆಧಾರದ ಮೇಲೆ ನಮ್ಮ ನಿಲುವನ್ನು ರೂಪಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ! ಇಂತಹ ಪರಿಸ್ಥಿತಿಯಲ್ಲಿ ಈ ಗೊಂದಲದ ಕೇಂದ್ರ ಬಿಂದುವಾಗಿರುವ ಮನಮೋಹನ ಸಿಂಗರು ನಮ್ಮ ರಾಜಕೀಯ ವಿಶ್ಲೇಷಕರಿಗೆ ತಮ್ಮ ವಿಶ್ಲೇಷಣೆಯ ಅನುಕೂಲತೆಗೆ ತಕ್ಕಂತೆ, ಒಮ್ಮೆ ರಾಜಕಾರಣದ ಪಾಪದ ಲೇಪವೇ ಇಲ್ಲದ ಪರಿಶುದ್ಧ ತಂತ್ರಸತ್ತಾಧಾರಿ (Technocrat)ಯಾಗಿ ಕಂಡರೆ, ಇನ್ನೊಮ್ಮೆ ದಟ್ಟ ನೈತಿಕತೆಯ ಗಟ್ಟಿ - ಜನತೆಯಿಂದ ನೇರವಾಗಿ ಆಯ್ಕೆಯಾಗದಿದ್ದರೂ ಸರಿ - ರಾಜಕಾರಣಿಯಾಗಿ ಕಾಣುತ್ತಾರೆ! ರಾಷ್ಟ್ರವೊಂದರ ಪ್ರಧಾನಿ ಸ್ಥಾನದಲ್ಲಿರುವವರ ನೈತಿಕತೆ ನಿರ್ಧಾರವಾಗಬೇಕಿರುವುದು ಅವರ ವೈಯುಕ್ತಿಕ ಬದುಕಿನ ನೆಲೆಯಲ್ಲಲ್ಲ; ಬದಲಿಗೆ ಅವರು ತಮ್ಮ ರಾಜಕಾರಣವನ್ನು ನಿರ್ವಹಿಸುವ ರೀತಿ ನೀತಿಗಳಲ್ಲಿ, ಅದರ ವಿರಗಳಲ್ಲಿ, ದಿಕ್ಕುಗಳಲ್ಲಿ ಎಂಬುದನ್ನು ಇವರಿಗೆ ಹೇಳುವವರಾದರೂ ಯಾರು? ಹಾಗೆ ನೋಡಿದರೆ, ಇಂದಿನ ದುಷ್ಟ ಮತ್ತು ಭ್ರಷ್ಟ ರಾಜಕಾರಣದ ದಿನಗಳಲ್ಲೂ ವೈಯುಕ್ತಿಕ ನೆಲೆಯ ನೈತಿಕತೆಯನ್ನು ಕಾಪಾಡಿಕೊಂಡಿರುವ ಎಷ್ಟು ಜನ ರಾಜಕಾರಣಿಗಳಿಲ್ಲ? ಮನಮೋಹನ ಸಿಂಗರಿಗಷ್ಟೇ ಏಕೆ ಈ ಬಿರುದು?

ಇದು ಮನಮೋಹನ ಸಿಂಗರು ಪ್ರತಿನಿಧಿಸುವ ಜಾಗತಿಕ ರಾಜಕಾರಣದ ಪ್ರಾಯೋಜಕರು ಮತ್ತು ಫಲಾನುಭವಿಗಳಿಬ್ಬರೂ ಸೇರಿ ಈಗ ರಾಷ್ಟ್ರೀಯ ರಾಜಕಾರಣದ ಹೊಸ ಮೌಲ್ಯಗಳನ್ನಳೆಯಲು ಸೃಷ್ಟಿಸಿರುವ ಮಾನದಂಡಗಳ ಫಲ! ಇವರಿಗೆ ಶೇ.10 ಅಥವಾ 11ರ ರಾಷ್ಟ್ರೀಯ ಪ್ರಗತಿ ದರ ಉಂಟು ಮಾಡುತ್ತಿರುವ ರಾಷ್ಟ್ರೀಯ ಅನಾಹುತಗಳ ಪರಿವೆಯೇ ಇಲ್ಲ. ಇವರಿಗೆ ರಾಷ್ಟ್ರ ಮತ್ತು ಪ್ರಗತಿ ಎಂದರೆ, ಕೆಲವರ ಎಗ್ಗಿಲ್ಲದ ಲೌಕಿಕ ಅಭಿವೃದ್ಧಿ. ಈ ಅಭಿವೃದ್ಧಿ ದೇಶದ 83 ಕೋಟಿ ಜನರನ್ನು ಇನ್ನೂ ದಿನವಹಿ 20 ರೂಪಾಯಿಗಳ ಆದಾಯದ ಸ್ಥಿತಿಯಲ್ಲೇ ಇಟ್ಟಿದೆ ಮತ್ತು ಇವರಲ್ಲಿ ಕೆಲವರ ಸ್ಥಿತಿ ಈ ಅಭೂತಪೂರ್ವ ಹಣದುಬ್ಬರದ ದಿನಗಳಲ್ಲಿ ಪ್ರಾಣಿಗಳಿಗಿಂತಲೂ ಕಡೆಯಾಗಿದೆ ಎಂಬುದು ಇವರ ಅರಿವಿಗೆ ಬಂದಂತಿಲ್ಲ. ಇವರ ದೃಷ್ಟಿ ದಿಗಂತವೇ ಸಂಕುಚಿತವಾಗಿದೆ - ತನ್ನ ವರ್ಗದ ಆಸುಪಾಸಿನ ಜನರ ಹೆಚ್ಚುತ್ತಿರುವ ಸುಖ ಸಂತೋಷಗಳೇ ಇವರಿಗೆ ರಾಷ್ಟ್ರೀಯ ಪ್ರಗತಿಯಾಗಿದೆ! ಹೋಗಲಿ, ಇಂತಹ ವರ್ಗೀಯ ಪ್ರಗತಿಯ ಗುಣಮಟ್ಟವಾದರೂ ಯಾವುದು? ಅದು ಒಟ್ಟಾರೆಯಾಗಿ ಮತ್ತು ಆತ್ಯಂತಿಕವಾಗಿ ಎಂತಹ ಸಮಾಜವನ್ನು ನಿರ್ಮಿಸಲು - ಯಾರ್ಯಾರನ್ನು ಏಕೆ ಮತ್ತು ಹೇಗೆ ಸರಣಿ ಸರಣಿಯಾಗಿ ಅಥವಾ ನಿಧ ನಿಧಾನವಾಗಿ ಕೊಲ್ಲಲು - ಹೊರಟಿದೆ ಎಂಬುದರ ಅಂದಾಜಾದರೂ ಇವರಿಗೆ ಇದ್ದಂತಿಲ್ಲ.

ಹಾಗಾಗಿಯೇ ಕರಣ್ ಥಾಪರ್ ಎಂಬ ಸಂದರ್ಶಕನೊಬ್ಬ ಇತ್ತೀಚೆಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೂ, ಅತಿ ಜಾಣ ವಕೀಲರೂ ಆದ ಕಪಿಲ್ ಸಿಬಾಲರೊಡನೆಯ ಮಾತುಕತೆಯಲ್ಲಿ; ಮತ ಪರೀಕ್ಷೆಯಲ್ಲಿ ಸರ್ಕಾರ ಸೋತು ಹೋದರೂ, ಉಸ್ತುವಾರಿ ಸರ್ಕಾರವಾಗಿ ಅದು ಅಣು ಒಪ್ಪಂದದ ವಿಧಿ ವಿಧಾನಗಳನ್ನು ಮುಂದುವರಿಸಬಹುದಲ್ಲವೇ ಎಂದು ಪದೇ ಪದೇ ಕೇಳಿದ್ದಲ್ಲದೆ, ಸೂಚನೆಯನ್ನೂ ನೀಡತೊಡಗಿದ್ದು. ತಾನು ಸಂದರ್ಶಿಸುತ್ತಿರುವವರನ್ನು ಕಾಡುವುದನ್ನೇ ಒಳ್ಳೆಯ ಸಂದರ್ಶನ ಎಂದು ಭಾವಿಸುವ ಈ ಹುಟ್ಟಾ ತಲೆಹೋಕ ಟಿ.ವಿ. ಈ ಸಂದರ್ಶನದಲ್ಲಿ ಮಾತ್ರ ಕಪಿಲ್ ಸಿಬಾಲರನ್ನು, ಅವರ ಮುಜುಗರದ ನಡುವೆಯೂ ತನ್ನ ಸೂಚನೆಯನ್ನು ಪರಿಗಣಿಸುವಂತೆ ಓಲೈಸತೊಡಗಿದ್ದ! ಈತನ ಪ್ರಕಾರ ಸರ್ಕಾರಕ್ಕೆ ಸೋಲುಂಟಾದರೂ, ಅದು ತಾಂತ್ರಿಕ ಸೋಲು ಮಾತ್ರ. ನೈತಿಕ ಜಯ ಸರ್ಕಾರದ್ದೇ. ಏಕೆಂದರೆ, ಮತ್ತೆ ಈತನ ಪ್ರಕಾರವೇ ಬಹಳಷ್ಟು ಲೋಕಸಭಾ ಸದಸ್ಯರು ಮನದಲ್ಲಿ ಒಪ್ಪಂದದ ಪರವಿದ್ದರೂ, ತಂತಮ್ಮ ಪಕ್ಷಗಳ ನಿಲುವಿಗೆ ಕಟ್ಟುಬಿದ್ದು ಸರ್ಕಾರದ ವಿರುದ್ಧ ಮತ ಹಾಕಿರುತ್ತಾರಷ್ಟೆ! ರಾಜಕಾರಣಿಗಳ ರಾಜಕಾರಣವನ್ನೂ ಮೀರಿಸುವ ನಮ್ಮ ಮಾಧ್ಯಮ ಏಜೆಂಟರ ನಿರ್ಲಜ್ಜ ರಾಜಕಾರಣವೆಂದರೆ ಇದೇ!

ಪ್ರಗತಿ ಎಂಬುದು ಕೇವಲ ಒಂದು ಆರ್ಥಿಕ ವಿದ್ಯಮಾನವಲ್ಲ. ಅದು ಸಾಮಾಜಿಕ, ಸಾಂಸ್ಕೃತಿಕ ಮತ್ತು ನೈತಿಕ ಲೆಕ್ಕ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಮಾತ್ರ ನಿಜವಾದ ಪ್ರಗತಿಯೆನಿಸಿಕೊಳ್ಳಬಲ್ಲುದು. ಒಂದು ವರ್ಗದ ಆರ್ಥಿಕ ಪ್ರಗತಿ ಮುಂದೊಂದು ದಿನ ಎಲ್ಲರ ಪ್ರಗತಿಗೂ ಕಾರಣವಾಗಬಲ್ಲುದು ಮತ್ತು ಅದು ಆತ್ಯಂತಿಕವಾಗಿ ಸಮಾಜದಲ್ಲಿ ಸಾರ್ವತ್ರಿಕ ಶಾಂತಿಯನ್ನುಂಟು ಮಾಡಬಲ್ಲುದು ಎಂದು ನಂಬಿರುವವರಿಗೆ, ಮಾರ್ಗವೇ ಗುರಿಯಾಗದ ಹೊರತು, ಗುರಿ ಎಂಬುದು ಮರೀಚಿಕೆಯಾಗಿ ಮಾತ್ರ ಉಳಿಯಬಲ್ಲುದು ಎಂಬ ಚಾರಿತ್ರಿಕ ಸತ್ಯವೇ ಗೊತ್ತಿದ್ದಂತಿಲ್ಲ. ಚರಿತ್ರೆ ಗೊತ್ತಿಲ್ಲದವರು ಭವಿಷ್ಯವನ್ನೂ ನಿರ್ಮಿಸಲಾರರು. ಹಾಗಾಗಿ ಇಂದಿನ ಪ್ರಗತಿ ದರದ ಕಾರಣ ಇಟ್ಟುಕೊಂಡು ಅಣು ಒಪ್ಪಂದವನ್ನು ಬೆಂಬಲಿಸುವುದು ಹೃದಯಹೀನ ಪ್ರಗತಿಯ ಸಮರ್ಥನೆ ಮಾತ್ರ ಆಗುತ್ತದೆ. ಹಾಗೆ ನೋಡಿದರೆ, ಮಾಜಿ ರಾಷ್ಟ್ರಪತಿ ಹಾಗೂ ಕ್ಷಿಪಣಿ ವಿಜ್ಞಾನಿ ಕಲಾಂ ಅವರು ಈ ಅಣು ಒಪ್ಪಂದವನ್ನು ಬೆಂಬಲಿಸುತ್ತಿರುವುದು ಆಶ್ಚರ್ಯವೇನಲ್ಲ. ಏಕೆಂದರೆ ಈ ಮಾಜಿ ರಾಷ್ಟ್ರಪತಿಯೂ ನಮ್ಮ ಸದ್ಯದ ಪ್ರಧಾನ ಮಂತ್ರಿಯಂತೆ, ಏರುತ್ತಾ ಹೋಗುವ ಪ್ರಗತಿ ದರದ ಆಧಾರದ ಮೇಲೆ ಒಂದಲ್ಲ ಒಂದು ದಿನ ಭಾರತ ಒಂದು 'ಜಾಗತಿಕ ಶಕ್ತಿ'ಯಾಗುವ ಕುರುಡು ಹಂಬಲವುಳ್ಳವರು!

ಅದೇನೇ ಇರಲಿ, ನಾವು ಅಣು ಒಪ್ಪಂದದ ಸಾಧಕ - ಬಾಧಕಗಳ ಬಗ್ಗೆ ವಸ್ತುನಿಷ್ಠವಾಗಿ ವಿವೇಚಿಸಲು ಭಾರತದ ಅಣುಶಕ್ತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ವಿಜ್ಞಾನಿಗಳ ಮತ್ತು ತಂತ್ರಜ್ಞರ ವಾದಗಳನ್ನು ಅವಲಂಬಿಸಬೇಕಾಗುತ್ತದೆ. ಈ ದೃಷ್ಟಿಯಿಂದ, ಕಲಾಂರಂತೆ ಯಾವುದೇ ರಾಜಕೀಯ 'ತರಂಗಾಂತರ'ಗಳ ಮಧ್ಯೆ ಸಿಕ್ಕಿಹಾಕಿಕೊಂಡಿರದ ಭಾಭಾ ಅಣು ಸಂಶೋಧನಾ ಸಂಸ್ಥೆಯ ಈ ಹಿಂದಿನ ಇಬ್ಬರು ಅಧ್ಯಕ್ಷರುಗಳಾದ ಡಾ||ಪಿ.ಕೆ. ಐಯ್ಯಂಗಾರ್ ಮತ್ತು ಡಾ||ಎ.ಎನ್. ಪ್ರಸಾದ್ ಅವರು ನೀಡಿರುವ ಅಂಕಿ ಅಂಶಗಳು ಮತ್ತು ಮಂಡಿಸಿರುವ ವಾದ ಸರ್ಕಾರದ ಪರವಾದ ಎಲ್ಲ ವಾದಗಳನ್ನೂ ಪರಿಣಾಮಕಾರಿಯಾಗಿ ಅಲ್ಲಗೆಳೆಯುವಂತಿವೆ ಎಂಬುದನ್ನು ನಾವು ಗಮನಿಸಬೇಕು. ಇವರ ಪ್ರಕಾರ ಒಪ್ಪಂದ ಅದರ ಕಾಲಬದ್ಧತೆಗನುಗಣವಾಗಿಯೇ ಅನುಷ್ಠಾನಗೊಂಡು ಗುರಿ ಮುಟ್ಟಿದರೂ, 2020ರ ವೇಳೆಗೆ ನಮ್ಮ ಪರಮಾಣು ವಿದ್ಯುತ್ ನಮ್ಮ ಒಟ್ಟಾರೆ ವಿದ್ಯುತ್ಪಾದನೆಯ ಶೇ. ಏಳನ್ನು ದಾಟುವುದಿಲ್ಲ. ಹಾಗಾಗಿ ಇದು ಭೂ - ತಾಪಮಾನ ಏರಿಕೆಗೆ ಕಾರಣವಾಗುವ ಕಲ್ಲಿದ್ದಲು ಉರಿಯುವಿಕೆಯಲ್ಲಿ ಭಾರತದ ಪಾಲೇನೂ ಗಣನೀಯವಾಗಿ ಕಡಿಮೆ ಮಾಡುವುದಿಲ್ಲ. ಮೊದಲಾಗಿ ಈ ಒಪ್ಪಂದದ ಗುರಿಯಾದ 2020ರ ವೇಳೆಗೆ 20ಸಾವಿರ ಮೆಗಾವಾಟ್ ಪರಮಾಣು ವಿದ್ಯುತ್ ಉತ್ಪಾದನೆ (ಇದನ್ನೀಗ ಒಪ್ಪಂದಕ್ಕೆ ಬೆಂಬಲ ಕ್ರೋಢೀಕರಿಸಲು ಇದ್ದಕ್ಕಿದ್ದಂತೆ ಮೇಲ್ನೋಟಕ್ಕೇ ಅವಾಸ್ತವಿಕವೆನಿಸುವ 40ಸಾವಿರ ಮೆಗಾವಾಟ್‌ಗೆ ಏರಿಸಲಾಗಿದೆ!) ಅಸಂಭವನೀಯ. ಏಕೆಂದರೆ, ಇದಕ್ಕೆ ಅಗತ್ಯವಾದ ಪರಮಾಣು ಶಕ್ತಿ ಯಂತ್ರಗಳ ವ್ಯಾಪಾರ, ಅವುಗಳ ಸ್ಥಾಪನೆ, ಅವುಗಳ ನಿರ್ವಹಣೆಗೆ ಬೇಕಾದ ಸಿಬ್ಬಂದಿಯ ತರಬೇತಿ ಮತ್ತು ಅವುಗಳಿಗೆ ಬೇಕಾದ ಯುರೇನಿಯಂ ಪಡೆದುಕೊಳ್ಳಲು ಈ ಒಪ್ಪಂದದ ಪ್ರಕಾರವೇ ಹಾದು ಹೋಗಬೇಕಾದ ವಿಧಿ ವಿಧಾನಗಳಿಗೆ ಸಾಕಷ್ಟು ಸಮಯ ಹಿಡಿಯುತ್ತದೆ.

ಮುಂದಿನ ಸರ್ಕಾರವೂ ಮನಮೋಹನ ಸಿಂಗರ ನೇತೃತ್ವದಲ್ಲೇ ರಚಿತವಾಗುತ್ತದೆಂದು ನಂಬಿ, ಅದು ಈ ಎಲ್ಲ ವ್ಯಾಪಾರ, ವ್ಯವಹಾರಗಳನ್ನು ಬಹು ಮುತುವರ್ಜಿಯಿಂದಲೇ ಕೈಗೊಂಡು ಸಕಾಲದಲ್ಲೇ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಿತೆಂದೇ ಇಟ್ಟುಕೊಳ್ಳೋಣ. ಆಗಲೂ, ಅದರ ಖರ್ಚು ವೆಚ್ಚ ಲೆಕ್ಕ ಹಾಕಿದರೆ ಅದು ಸದ್ಯದ ಸಾಂಪ್ರದಾಯಿಕ ವಿದ್ಯುತ್‌ಗಿಂತ ಅಗ್ಗವೇನೂ ಆಗಿರುವುದಿಲ್ಲ. ಬದಲಿಗೆ ಅದು ಬಹು ದುಬಾರಿಯೇ ಆಗಿರುತ್ತದೆ. ಇಂದಿನ ಆರ್ಥಿಕತೆಯ ಮಾನದಂಡಗಳನ್ನೇ ಇಟ್ಟುಕೊಂಡರೂ, ಪ್ರತಿ ಯೂನಿಟ್‌ಗೆ 9 ರೂ ಎಂದು ಲೆಕ್ಕ ಹಾಕಲಾಗಿದೆ. ಇದು ಹತ್ತು ಹದಿನೈದು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಅತ್ಯುತ್ಸಾಹದಿಂದ ಸ್ಥಾಪಿಸಿದ ಅಮೆರಿಕಾ ಮೂಲದ ಎನ್ರೋನ್ ಕಂಪನಿಯ ವಿದ್ಯುತ್ ಸ್ಥಾವರದ ವ್ಯವಹಾರಗಳನ್ನು ನೆನಪಿಗೆ ತಂದರೆ ಆಶ್ಚರ್ಯವಿಲ್ಲ. ಅನೇಕ ಜನಪರ ಸಂಘಟನೆಗಳ ಪ್ರಬಲ ವಿರೋಧದ ನಡುವೆಯೂ, ಶಿವಸೇನೆ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷಗಳ ಕುಮ್ಮಕ್ಕಿನೊಂದಿಗೆ ಸ್ಥಾಪಿಸಿಲಾಗಿದ್ದ ಈ ಸ್ಥಾವರವನ್ನು, ಕೆಲವೇ ವರ್ಷಗಳಲ್ಲಿ ಅದರ ವಿದ್ಯುತ್ ಬೆಲೆಯೂ ಸೇರಿದಂತೆ ಅದರೊಡನೆಯ ಒಪ್ಪಂದದ ಷರತ್ತುಗಳನ್ನು ಭರಿಸಲಾಗದೆ, ಸ್ಥಾಪನೆಯ ವೆಚ್ಚಕ್ಕಿಂತ ಹೆಚ್ಚು ಪರಿಹಾರ ಧನ ನೀಡಬೇಕಾದ ಪರಿಸ್ಥಿತಿಯಲ್ಲಿ ಮುಚ್ಚಿಸಬೇಕಾಯಿತು!

ಇನ್ನೂ ಮುಖ್ಯ ವಿಷಯವೆಂದರೆ, ಈ ಒಪ್ಪಂದ ಬಹುಕಾಲದಿಂದ ಸುವ್ಯವಸ್ಥಿತವಾಗಿ ರೂಪುಗೊಂಡಿರುವ ನಮ್ಮದೇ ಅಣುಶಕ್ತಿ ತಂತ್ರಜ್ಞಾನವನ್ನು ಅಸ್ತವ್ಯಸ್ತಗೊಳಿಸುವ ಅಪಾಯವನ್ನು ಒಳಗೊಂಡಿದೆ ಎನ್ನುವುದು. ಈ ಒಪ್ಪಂದ ನಮ್ಮಲ್ಲಿ ಯುರೇನಿಯಂ ನಿಕ್ಷೇಪ ತುಂಬಾ ಕಡಿಮೆಯಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿದೆ ಎಂದು ಸರ್ಕಾರ ಹೇಳುತ್ತಿದೆಯಾದರೂ, ಈ ವಾಸ್ತವವನ್ನು ತಿಳಿದೇ ನಮ್ಮ ವಿಜ್ಞಾನಿಗಳು ನಮ್ಮಲ್ಲಿ ಸಮೃದ್ಧವಾಗಿ ದೊರೆಯುವ ಥೋರಿಯಂ ಆಧಾರಿತ ತಂತ್ರಜಾನವನ್ನು ಅಭಿವೃದ್ಧಿಪಡಿಸಿ ಅದನ್ನೀಗ ಮತ್ತಷ್ಟು ಸುಧಾರಿಸುವ ಪ್ರಯತ್ನಗಳನ್ನೂ ನಡೆಸಿದ್ದಾರೆ. ಈಗ ಈ ಒಪ್ಪಂದ, ರಾಷ್ಟ್ರದ ಈ ಸ್ವಾವಲಂಬಿ ಅಣುಶಕ್ತಿ ಉತ್ಪಾದನಾ ಯೋಜನೆಯಲ್ಲಿ ತೊಡಗಿರುವ ನಮ್ಮ ವಿಜ್ಞಾನಿಗಳ ನೈತಿಕ ಸ್ಥೈರ್ಯವನ್ನೇ ಉಡುಗಿಸುವಂತಿದೆ. ಇನ್ನು ಬಾಹ್ಯ ದೇಶಗಳ ಪ್ರತಿನಿಧಿಗಳಿಗೆ ನಮ್ಮ ಅಣುಶಕ್ತಿ ಕೇಂದ್ರಗಳ ಪರಿವೀಕ್ಷಣೆ ಮತ್ತು ಅದರ ಆಧಾರದ ಮೇಲೆ ಯುರೇನಿಯಂ ಸರಬರಾಜನ್ನು ನಿಲ್ಲಿಸುವ ನಿರ್ದಿಷ್ಟ ಅಧಿಕಾರಗಳನ್ನೂ ಈ ಒಪ್ಪಂದ ಒಳಗೊಂಡಿರುವುದರಿಂದ, ಈ ಒಪ್ಪಂದದ ಪ್ರಕಾರವೇ ಸ್ಥಾಪಿಸಬೇಕಾದ ಯುರೇನಿಯಂ ಆಧಾರಿತ ಅಣು ಸ್ಥಾವರಗಳ ಮೇಲೆ ನಾವು ಯಾವ ಭರವಸೆಯ ಮೇಲೆ ಕೊಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಬೇಕು? ಇನ್ನೂ ಮುಖ್ಯವಾಗಿ, ನಮ್ಮ ಈಚಿನ ರಕ್ಷಣಾ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ನಮ್ಮದೇ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮದ ಭವಿಷ್ಯ ಈಗ ಎಷ್ಟು ನಿಶ್ಚಿತ? ಇವು ರಾಜಕಾರಣಿಗಳು ಕೇಳುತ್ತಿರುವ ಪ್ರಶ್ನೆಗಳಲ್ಲ. ಈ ಕ್ಷೇತ್ರಗಳಿಗೆ ತಮ್ಮದೇ ವಿಶಿಷ್ಟ ಕೊಡುಗೆ ಸಲ್ಲಿಸಿರುವ ಉನ್ನತ ವಿಜ್ಞಾನಿಗಳು ಮತ್ತು ಆಡಳಿತಗಾರರು ಕೇಳುತ್ತಿರುವ ಪ್ರಶ್ನೆಗಳು.

ಇವರಿಗೆ ಉತ್ತರ ಕೊಡುವ ಸಹನೆಯನ್ನಾಗಲೀ, ವ್ಯವಧಾನವನ್ನಾಗಲೀ ಪ್ರದರ್ಶಿಸದ ಮನಮೋಹನ ಸಿಂಗರ ನೈತಿಕತೆಯ ವ್ಯಾಖ್ಯಾನವಾದರೂ ಯಾವುದು? ಅವರೇಕೆ ಹೀಗೆ ಈ ಒಪ್ಪಂದದ ಪರವಾಗಿ ಇದು ಒಂದು ರಾಷ್ಟ್ರದ ಸಾವು - ಬದುಕಿನ ತುರ್ತು ಪ್ರಶ್ನೆಯೆಂಬಂತೆ ಮುನ್ನುಗ್ಗುತ್ತಿದ್ದಾರೆ? ಅಮೆರಿಕಾವಾದರೂ ಏಕೆ ಹೀಗೆ, ಅಂತಾರಾಷ್ಟ್ರೀಯ ಪರಮಾಣುಶಕ್ತಿ ಕ್ಷೇತ್ರದಿಂದ ತಾನೇ ಬಹಿಷ್ಕೃತಗೊಳಿಸಿದ್ದ ದೇಶದ ಬಗ್ಗೆ ಈಗ ಇದ್ದಕ್ಕಿದ್ದಂತೆ ಒಲವು ಮೂಡಿ, ಅದಕ್ಕೆ ತನ್ನ ಅತ್ಯಾಧುನಿಕ ಅಣು ತಂತ್ರಜ್ಞಾನವನ್ನು ವರ್ಗಾಯಿಸಲು ಇಷ್ಟು ಆಸಕ್ತಿ ತೋರಿಸುತ್ತಿದೆ? ಭವಿಷ್ಯದ ಜಾಗತಿಕ ಶಕ್ತಿ ರಾಜಕಾರಣದಲ್ಲಿ ಭಾರತವನ್ನು ತನ್ನ ಸಹವರ್ತಿಯನ್ನಾಗಿ ಮಾಡಿಕೊಳ್ಳಲಲ್ಲವೆ? ಪ್ರಾದೇಶಿಕ ರಕ್ಷಣೆಯ ಉದ್ದೇಶದಿಂದ ರೂಪುಗೊಂಡ NATO ವ್ಯವಸ್ಥೆಯನ್ನೀಗ ರಷ್ಯಾ ಮತ್ತು ಚೀನಾ ಗಡಿಗಳಲ್ಲಿ ಖಂಡಾಂತರ ಕ್ಷಿಪಣಿಗಳನ್ನು ಸ್ಥಾಪಿಸುವ ಮೂಲಕ 'ಜಾಗತಿಕ ಜನತಾ ವಿಮೋಚನೆ'ಯ ಉದ್ದೇಶಕ್ಕೆ ಒಗ್ಗಿಸುವ ಪ್ರಯತ್ನದಲ್ಲಿ ತೊಡಗಿರುವ ಅಮೆರಿಕಾದ ಸಹವರ್ತಿಯಾಗುವುದೆಂದರೆ ಏನೆಂಬುದರ ಕಲ್ಪನೆ ಈ ಸರ್ಕಾರಕ್ಕಿದ್ದಂತಿಲ್ಲ. ಭಾರತದ ರಾಷ್ಟ್ರೀಯ ಸಾರ್ವಭೌಮತೆಯನ್ನು ಎತ್ತಿ ಹಿಡಿಯುತ್ತಾ ಬಂದಿರುವ ನಮ್ಮ ಅಲಿಪ್ತ ಮತ್ತು ಸ್ವತಂತ್ರ ವಿದೇಶಾಂಗ ನೀತಿಗೆ ಇದೊಂದು ಕೊಡಲಿ ಪೆಟ್ಟು ಮಾತ್ರವಲ್ಲ, ಭವಿಷ್ಯದಲ್ಲಿ ಈ ಸಂಬಂಧ ರಾಷ್ಟ್ರ ಎದುರಿಸಬೇಕಾಗಿ ಬರಬಹುದಾದ ಅಂತಾರಾಷ್ಟ್ರೀಯ ಅನಾಹುತಗಳಿಗೆ ಆಹ್ವಾನವೂ ಹೌದು. ಜೊತೆಗೆ ಈ ಒಪ್ಪಂದ ಪ್ರಸ್ತಾಪಿಸುವ 100 ಶತಕೋಟಿ ಡಾಲರ್‌ಗಳಷ್ಟು ಅಪಾರ ವೆಚ್ಚದ 40 ಪರಮಾಣು ಶಕ್ತಿ ಯಂತ್ರಗಳ ಆಮದು ತೆರೆಯುವ; ಮತ್ತು ಇದರ ಭಾಗವಾಗಿಯೇ ನಮಗೆ ವರ್ಗಾವಣೆಯಾಗುವ ಹೊಸ ಅಣು ತಂತ್ರಜ್ಞಾನದ ಆಧಾರದ ಮೇಲೆ ನಾವು ಆರಂಭಿಸಬಹುದಾದ ಅಣುಶಕ್ತಿ ಯಂತ್ರಗಳ ತಯಾರಿಕೆ ಮತ್ತು ರಫ್ತು ವ್ಯವಹಾರ, ಜಾಗತಿಕ ಶಕ್ತಿ ರಾಜಕಾರಣದಲ್ಲಿ ಅಮೆರಿಕಾದ ಮಿತ್ರರಾಗಿ ಮುಂದೆ ನಮ್ಮನ್ನೆಲ್ಲಿಗೆ ತಲುಪಿಸಬಹುದು ಎಂಬುದರ ಬಗ್ಗೆಯೂ ನಾವೀಗ ಗಂಭೀರವಾಗಿ ಆಲೋಚಿಸಬೇಕಿದೆ. ಏಕೆಂದರೆ, ಈ ಅಣು ಒಪ್ಪಂದ ಅಮೆರಿಕಾದ ವಿದೇಶಾಂಗ ನೀತಿಯ ಹಿತಾಸಕ್ತಿಗಳನ್ನೂ ಕಾಯುವಂತಿರಬೇಕೆಂದು ಈ ಒಪ್ಪಂದದ ಹಿನ್ನೆಲೆಯಲ್ಲಿರುವ ಹೈಡ್ ಕಾಯಿದೆ ಸೂಚಿಸುತ್ತದೆ.

ದಟ್ಟ ನೈತಿಕತೆಯ ಮನಮೋಹನ ಸಿಂಗರ ಈ ರಾಜಕಾರಣ ತಮ್ಮ ಸರ್ಕಾರದ ಅಲ್ಪಾವಧಿ ಉಳಿವಿಗಾಗಿ ರಾಷ್ಟ್ರ ರಾಜಕಾರಣದ ಮೇಲೆ ಉಂಟು ಮಾಡಿರುವ ಒತ್ತಡಗಳ ದೀರ್ಘಕಾಲಿಕ ಪರಿಣಾಮಗಳನ್ನೂ ನಾವು ಗಮನಿಸಬೇಕಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಕಮ್ಯುನಿಸ್ಟ್ ಪಕ್ಷಗಳೂ ಸೇರಿದಂತೆ ರಾಷ್ಟ್ರದ ಎಲ್ಲ ಪಕ್ಷಗಳಲ್ಲೂ ಬಂಡಾಯ ಸ್ಫೋಟಗೊಂಡಿದೆ. ಇನ್ನುಳಿದಿರುವ ಆರೇಳು ತಿಂಗಳುಗಳ ಸಂಸತ್ ಸದಸ್ಯತ್ವಕ್ಕಿಂತ ಎರಡೂ ಕಡೆಯವರು ಒಡ್ಡಿರುವ ಹಣ ಮತ್ತು ಅಧಿಕಾರದ ಆಮಿಷಗಳೇ ಹೆಚ್ಚು ಆಕರ್ಷಕವೆನಿಸಿವೆ. ಇದರಿಂದಾಗಿ ಸಣ್ಣಪುಟ್ಟ ರಾಜಕೀಯ ಪಕ್ಷಗಳ ಮತ್ತು ಪಕ್ಷೇತರರ ನೀತಿ ನೆಲಗಟ್ಟುಗಳೇ ಇದ್ದಕ್ಕಿದ್ದಂತೆ ಬದಲಾಗುತ್ತಾ ಹೋಗಿವೆ! ಸಿ.ಬಿ.ಐ. ರಾಜಕೀಯ ಸೇಡಿನ ಸಾಧನವಾಗಿ ಮತ್ತೊಮ್ಮೆ ತನ್ನ ಘನತೆಯನ್ನು ಕಳೆದುಕೊಳ್ಳುವಂತಾಗಿದೆ. ಕಾಂಗ್ರೆಸ್ ಕಣ್ಣಲ್ಲಿ ಈವರೆಗೆ ದುಷ್ಟ ಮತ್ತು ಭ್ರಷ್ಟ ಜೋಡಿಯೆನಿಸಿದ್ದ ಮುಲಾಯಂ - ಅಮರಸಿಂಗ್, ಈಗ ರಾಷ್ಟ್ರ ಹಿತಾಸಕ್ತಿಯ ರಕ್ಷಕ ಜೋಡಿಯಾಗಿ ಪರಿವರ್ತಿತವಾಗಿದೆ! ಕಾಂಗೆಸ್ಸಿನ ನಿಜವಾದ ದುರಂತವೆಂದರೆ, ಗಾಂಧೀಜಿಯನ್ನು ತನ್ನ ಪರಂಪರೆಯ ಪ್ರತೀಕ ಎಂದು ಇನ್ನೂ ಹೇಳಿಕೊಳ್ಳುತ್ತಿರುವ ಈ ಪಕ್ಷದ ಒಬ್ಬ ಸದಸ್ಯನೂ, ಸಾರಾ ಸಗಟಾಗಿ ನಾವು ಜಾಗತಿಕ ಶಕ್ತಿಯಾಗುವುದೂ ಬೇಡ, ಅದಕ್ಕಾಗಿ ಈ ಪರಮಾಣು ಶಕ್ತಿಯ ರಾಜಕಾರಣವೂ ಬೇಡ ಎಂದು ಹೇಳುವ ವಿವೇಕವನ್ನಾಗಲೀ, ಧೈರ್ಯವನ್ನಾಗಲೀ ಪ್ರದರ್ಶಿಸದೇ ಹೋದದ್ದು. ಕಾಂಗ್ರೆಸ್ ಪೂರ್ತಿಯಾಗಿ ಈಗ ಬೇರೆ ಗಾಂಧಿಗಳನ್ನೇ ತನ್ನ ಪ್ರತೀಕಗಳನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದಂತಿದೆ!

ಇನ್ನು, ತಾನೇ ಆರಂಭಿಸಿದ್ದೆಂದು ಹೇಳಿಕೊಳ್ಳುತ್ತಾ, ಈ ಅಣುಶಕ್ತಿ ಒಪ್ಪಂದವನ್ನು ಮೊನ್ನೆ ಮೊನ್ನೆಯವರೆಗೆ ಸಮರ್ಥಿಸಿಕೊಳ್ಳುತ್ತಿದ್ದ ಬಿಜೆಪಿಯ ಕಣ್ಣುಗಳು ಈಗ ಇದ್ದಕ್ಕಿದ್ದಂತೆ ಅದರ ವಿವರಗಳಲ್ಲಿ ದೋಷಗಳು ಕಾಣುವಷ್ಟು ಸೂಕ್ಷ್ಮವಾಗಿಬಿಟ್ಟವೆ! ಇನ್ನು ನಮ್ಮ ದೇವೇಗೌಡರಿಗೆ 'ಎಡ ಪಕ್ಷಗಳು ನಮ್ಮ ಸಹಜ ಮಿತ್ರರು' ಎಂಬ ಹಳೆಯ ಸತ್ಯ ಮನಮೋಹನ ಸಿಂಗರನ್ನು ಭೇಟಿ ಮಾಡಿ ಬರಿಗೈಲಿ ಹಿಂದಿರುಗಿದ ಮೇಲಷ್ಟೇ ಮತ್ತೆ ನೆನಪಿಗೆ ಬಂದದ್ದು! ಎಡ ಪಕ್ಷಗಳಾದರೋ ಎಲ್ಲ ರಾಜಕೀಯ ಮರ್ಯಾದೆಯನ್ನು ಧಿಕ್ಕರಿಸಿ ಅಣು ಒಪ್ಪಂದ ಮುಸ್ಲಿಂ ವಿರೋಧಿ ಎಂಬ ಅಗ್ಗದ ರಾಜಕೀಯ ಪ್ರಚಾರಕ್ಕೆ ಮುಂದಾದವಲ್ಲದೆ, ಲೋಕಸಭಾಧ್ಯಕ್ಷರ ಸ್ಥಾನಮಾನಕ್ಕೇ ಧಕ್ಕೆ ತರುವ ಘಾತುಕ ರಾಜಕಾರಣಕ್ಕೂ ಕೈಹಾಕಿದವು. ಇದರಿಂದ ಸ್ಫೂರ್ತಿಗೊಂಡಂತೆ, ಇತ್ತೀಚಿನವರೆಗೆ ಇದೇ ಎಡ ಪಕ್ಷಗಳ ಪ್ರಕಾರವೇ ತತ್ವ ದರಿದ್ರವಾದ ಜಾತಿವಾದಿ ರಾಜಕಾರಣ ಮಾಡುತ್ತಿದ್ದ ಮಾಯಾವತಿ ಇದ್ದಕ್ಕಿದ್ದಂತೆ ಅಣುಶಾಸ್ತ್ರ ಮತ್ತು ಧರ್ಮಶಾಸ್ತ್ರ ಸಂಪನ್ನೆಯಾಗಿ ಈ ಒಪ್ಪಂದ ಮುಸ್ಲಿಂ ವಿರೋಧಿಯೆಂಬುದನ್ನು ತಾನೂ ಕಂಡುಕೊಂಡು ಅವರ ಅಮೂಲ್ಯ ಜೊತೆಗಾತಿಯಾಗಿಬಿಟ್ಟಿದ್ದಾರೆ. ಇದರ ಪರಿಣಾಮವಾಗಿ ಅವರು ರಾಷ್ಟ್ರದ ಪ್ರಧಾನಿಯಾಗುವ ತಮ್ಮ ಒಂದಂಶದ ಕಾರ್ಯಕ್ರಮದ ಯಶಸ್ಸಿನ ಸಾಧ್ಯತೆಗಳನ್ನು, ಸರ್ಕಾರ ಉರುಳಿಸುವ ಎಡ ಪಕ್ಷಗಳ ಒಂದಂಶದ ಕಾರ್ಯಕ್ರಮದಲ್ಲಿ ಕಂಡುಕೊಳ್ಳಲಾರಂಭಿಸಿದ್ದಾರೆ!

ಮನಮೋಹನರು ಸೃಷ್ಟಿಸಿರುವ ಇಂತಹ ದಟ್ಟ ನೈತಿಕತೆಯ ಗಟ್ಟಿ ರಾಜಕಾರಣದ ವಾತಾವರಣದಿಂದಾಗಿಯೇ, ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದ ಸುಸ್ಥಿರ ಅಭಿವೃದ್ಧಿಯ ಲಕ್ಷ್ಯಗಳನ್ನೇ ಧಿಕ್ಕರಿಸಿ ರೂಪಿಸಿರುವ ತಮ್ಮ ದಾನ ಪತ್ರವನ್ನು, ರಾಜ್ಯದ ಆಯವ್ಯಯ ಪತ್ರವೆಂದು ಮಂಡಿಸುವ ಧೈರ್ಯ ಮಾಡಿ, ಜನರ ಚಪ್ಪಾಳೆಯನ್ನೂ ಗಿಟ್ಟಿಸಿಕೊಳ್ಳುವಂತಾಗಿರುವುದು! ಅಂದಹಾಗೆ, ಇದು ಜನಕ್ಕೆ ತಕ್ಕ ರಾಜಕಾರಣದ ಕಾಲವಲ್ಲ; ರಾಜಕಾರಣಕ್ಕೆ ತಕ್ಕ ಜನರ ಕಾಲ!! ಇದರರ್ಥ ಇಷ್ಟೆ: ಇಲ್ಲಿ ಪ್ರಜಾಪ್ರಭುತ್ವ ತಲೆಕೆಳಕಾಗತೊಡಗಿದೆ... ಯಾರಿಗಾದರೂ ಈ ಮಾತು ಕೇಳಿಸುತ್ತಿದೆಯೆ?