ಆದಾಯ-ಸಂದಾಯ=ಉೞಿತಾಯ

ಆದಾಯ-ಸಂದಾಯ=ಉೞಿತಾಯ

ಬರಹ

ನಮ್ಮ ದುಡಿಮೆಯ ಸಾಫಲ್ಯ ಈ ಮೂಱು ಪದಗಳ ಸರಿಯಾದ ಅಸ್ತಿತ್ವದ ಮೇಲೆ ನಿಂತಿದೆ. ಸ್ವಲ್ಪ ಭಾಷೆಯ ದೃಷ್ಟಿಯಿಂದ ಇದನ್ನು ವಿಶ್ಲೇಷಿಸೋಣ.

ಆದಾಯ:- ಇದು ’ಆಗು’ ಧಾತುವಿಗೆ ’ತಾಯ/ದಾಯ’ ಸೇರಿ ಆದ ಪದ. ಇದು ನಮಗೇನಾದರೂ ಸಿಗುವುದಱ ಬಗ್ಗೆ ಹೇೞುತ್ತದೆ. ಅಂದರೆ ನಮ್ಮ ಲಾಭ.
ಸಂದಾಯ:- ಇದು ’ಸಲ್’ ಧಾತುವಿಗೆ ’ತಾಯ/ದಾಯ’ ಸೇರಿ ಆದ ಪದ. ಇದು ನಮ್ಮಿಂದ ಬೇಱೆಯವರಿಗೆ ಏನಾದರೂ ಸಲ್ಲುವುದಿದ್ದರೆ ಅದಱ ಬಗ್ಗೆ ಹೇೞುತ್ತದೆ. ಇದು ವಿದ್ಯುತ್ ಬಿಲ್, ಫೋನ್ ಬಿಲ್ ಹಾಗೆಯೇ ಯಾರಿಂದಲಾದರೂ ತುರ್ತಕ್ಕೆ ಕೈಗಡ ತೆಗೆದುಕೊಂಡಿದ್ದರೆ ಅಥವಾ credit card ಬೞಸಿದ್ದರೆ ಅವರಿಗೆ ಸಮಯಕ್ಕೆ ಕೊಡಬೇಕಾದ ಹಣ ಇತ್ಯಾದಿ ಸೂಚಿಸುತ್ತದೆ. ಅಂದರೆ ನಮ್ಮ ದುಡಿಮೆಯಲ್ಲಿ ನಮ್ಮದಲ್ಲದ ಹಣವನ್ನು ಕಳೆಯುವುದು.

ಉೞಿತಾಯ:- ಇದು ’ಉೞಿ’ ಧಾತುವಿಗೆ ’ತಾಯ/ದಾಯ’ ಸೇರಿ ಆದ ಪದ. ಮೇಲಿನ ಆದಾಯದಿಂದ ಸಂದಾಯವನ್ನು ಕಳೆದಾಗ ಉೞಿಯುವುದೇ ಈ ಉೞಿತಾಯ. ಇದು ಮಿಗತೆಯಾದರೆ ಜೀವನ ಸುಖ. ಕೊಱತೆಯಾದರೆ ಕಷ್ಟ. ಆಗ ಸಾಲದೆಂಬ ಸಾಲ ನಮ್ಮನ್ನು ದುಃಖಕ್ಕೀಡುಮಾಡುತ್ತದೆ.
ಈ ಮೂಱು ಹೆಚ್ಚಿದಂತೆ ಸುಖ ಹೆಚ್ಚುತ್ತದೆ. ಆದರೆ ಆದಾಯಕ್ಕಿಂತ ಸಂದಾಯ ಕಡಿಮೆಯಿದ್ದರೆ ಜೀವನ ಸೊಗಸು.

ಅದಕ್ಕೆ ಹಿರಿಯರೆಂದರು:

ಇದಮೇವ ಹಿ ಪಾಂಡಿತ್ಯಂ ಚಾತುರ್ಯಮಿದಮೇವ ಹಿ
ಇದಮೇವ ಸುಬುದ್ಧಿತ್ವಂ ಆಯಾದಲ್ಪತರೋ ವ್ಯಯಃ||

ಇದೇ ಪಾಂಡಿತ್ಯ. ಇದೇ ಚಾತುರ್ಯ. ಇದೇ ನಿಜವಾದ ಬುದ್ಧಿವಂತಿಕೆ. ಅದು ಯಾವುದೆಂದರೆ ಆದಾಯಕ್ಕಿಂತ ಸಂದಾಯ ಕಡಿಮೆಯಿರುವುದು. ಅಂದರೆ ಗಳಿಕೆಗಿಂತ ಖರ್ಚು ಕಡಿಮೆ ಮಾಡುವುದು. ಇದನ್ನು ಬಿಟ್ಟು ಬೇಱೆ ಪಾಂಡಿತ್ಯ, ಚಾತುರ್ಯ ಹಾಗೂ ಬುದ್ಧಿವಂತಿಕೆಯಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet