ರಾಷ್ಟ್ರಪಕ್ಷಿ ನಮ್ಮ ಊರಿನಲ್ಲಿ ‘ರೈತರ ಪರಪುಟ್ಟ’!

ರಾಷ್ಟ್ರಪಕ್ಷಿ ನಮ್ಮ ಊರಿನಲ್ಲಿ ‘ರೈತರ ಪರಪುಟ್ಟ’!

ಬರಹ

‘ನೀವು ನಮ್ಮ ಊರಿಗೆ ಮತ್ತ.. ನಮ್ಮ ಮನಿಗೆ ಬರಾಕ ಬೇಕು..’

ಕಳೆದ ಎರಡು ತಿಂಗಳಿನಿಂದ ದುಂಬಾಲು ಬಿದ್ದಿದ್ದ ನಮ್ಮ ಅಟೆಂಡರ್ ಸದಾನಂದ. ಎಲ್ಲಾರೂ ಕರೆಯೋ ಥರಹ ಇವನೂ ಕರೀತಾನ, ಒಮ್ಮೆ ಸವುಡು ನೋಡಿ ಹೋಗಿ ಬಂದ್ರಾತು’ ಅಂತ ತಿಂಗಳುಗಳ ಗಟ್ಟಲೆ ಮತ್ತೆ ಮುಂದೆ ಹಾಕಿದ್ದಾಯಿತು.

ಕೊನೆಗೆ ತಾಳ್ಮೆ ಮೀರಿ ಹೇಳಿಯೇ ಬಿಟ್ಟ. ‘ಸರ್..ನಮ್ಮ ಊರಾಗ ರೈತರು ಕೋಳಿ ಗೂಡಿನ್ಯಾಗ ನವಿಲಿನ ತತ್ತಿ ಇಟ್ಟು ಮರಿ ಮಾಡಸ್ತಾರಿ. ದೊಡ್ವಾದ ಬಳಿಕ ನಾಯಿ ಕಾಟಕ ಅಂಜಿ ಅಮ್ಮಿನಭಾವಿ ಊರ ಹೊರಗಿನ ಅಯ್ಯಪ್ಪಸ್ವಾಮಿ ಮಠಕ ಬಿಟ್ಟು ಬರ್ತಾರ್ರಿ. ಅಲ್ಲೆ ನಾರಾಯಣಸ್ವಾಮಿ ಅನ್ನೋ ಗುರುಸ್ವಾಮಿ ದೇಖರೇಖಿ ಮಾಡ್ತಾರ್ರಿ. ಈಗರೆ ಬರ್ತೀರೋ ಒಲ್ರೋ?’

ಈ ವಿಷಯ ಕಿವಿಗೆ ಬಿದ್ದಿದ್ದೇ ತಡ, ‘ನಡಿಯೋ ಮಾರಾಯಾ..ಇದ ರವಿವಾರ ಹೋಗೋಣು. ಊಟ ನಿಮ್ಮಮನ್ಯಾಗ ನೋಡಪಾ!’ ಅಂತ ಛೇಡಿಸಿದೆ. ಆತನ ಹೃದಯ ಶ್ರೀಮಂತಿಕೆ ನೆನೆದರೆ ಅದೇ ಒಂದು ನುಡಿಚಿತ್ರವಾದೀತು!

ರಾಷ್ಟ್ರ ಪಕ್ಷಿ ನಮ್ಮ ಊರಿನಲ್ಲಿ ರೈತರ ಪರಪುಟ್ಟ..

ಅಮ್ಮಿನಬಾವಿಯಿಂದ ಸವದತ್ತಿಗೆ ಹೋಗುವ ರಸ್ತೆ. ಅರ್ಧ ಕಿಲೊ ಮೀಟರ್ ದೂರದೊಳಗ ಅಯ್ಯಪ್ಪ ಸ್ವಾಮಿ ಆಶ್ರಮ. ಅಲ್ಲಿ ಕಾಲಿಟ್ಟ ತಕ್ಷಣ ಅಲ್ಲಿನ ಹೂದೋಟ, ಕಾಯಿಪಲ್ಲೆ, ಔಷಧಿ ಸಸ್ಯಗಳ ವನ ನಮ್ಮನ್ನು ಸ್ವಾಗತಿಸಿತು. ಹತ್ತಾರು ಭಕ್ತಾದಿಗಳು ಅತ್ತಿಂದಿತ್ತ-ಇತ್ತಿಂದತ್ತ ಆಶ್ರಮದಲ್ಲಿ ಓಡಾಡುತ್ತ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು.

ಆಶ್ರಮದ ಒಂದು ಕೋಣೆಯಲ್ಲಿ ಗುರು ನಾರಾಯಣ ಸ್ವಾಮಿ ದೂರದಿಂದ ಬಂದ ರೋಗಿಗಳಿಗೆ ತಮ್ಮ ಆಯುರ್ವೇದ ಪದ್ಧತಿ ಚಿಕಿತ್ಸೆ ನೀಡುತ್ತಿದ್ದರು. ಆಶ್ರಮದ ರಾಮಪ್ಪನ ಮೂಲಕ ನಾವು ಬಂದ ವಿಷಯ ಹೇಳಿ ಕಳುಹಿಸಿದೆವು. ಸ್ವಾಮಿಗಳು ಸಂತೋಷದಿಂದ ಒಪ್ಪಿ ಆಶ್ರಮ ತೋರಿಸಲು ಅನುವು ಮಾಡಿಕೊಟ್ಟರು. ಅವರೊಂದಿಗೆ ತುಸು ಉಭಯ ಕುಶಲೋಪರಿ ಸಂವಾದ ನಡೆಸಿದೆವು.

ಒಂದಿಷ್ಟು ಮಾತಾಡಿ ಆಶ್ರಮದ ದೇವಸ್ಥಾನದ ಹೊರಗೆ ಕಾಲಿಟ್ಟಿದ್ದೇ ತಡ, ಕಾಳು ಹೆಕ್ಕಲೆಂದು ನವಿಲೊಂದು ಬಾಗಿಲಿಗೆ ಬಂದು ನಿಂತಿತ್ತು. ರಾಮಣ್ಣ್ಣಹುರುಪಿನಿಂದ ಕಾಳು ಹಾಕಿ ‘ಸಾಹೇಬರು ನಿನ್ನ ಫೋಟೊ ಹೊಡಿತಾರ, ಒಂಚೂರು ಕುಣಿ’ ಅಂದ. ‘ರಾಮಣ್ಣ ಈ ನವಿಲುಗಳಿಗೆ ಮನುಷ್ಯರ ಮಾತು ತಿಳಿತಾವೇನೋ?’ ಎಂದು ನಾನು ಕೇಳುವಷ್ಟರಲ್ಲಿ ನವಿಲು ಗರಿಬಿಚ್ಚಿ ಕೈತೋಟದೊಳಗೆ ಕುಣಿಯಲು ಶುರುಮಾಡಿತು.

ನನ್ನ ಮಾತುಗಳಿಗೆ ಆಗ ವಿರಾಮ. ಗೆಳೆಯ ರಾಜ್ ಕ್ಯಾಮರಾ ಝಳಪಿಸಿದರು. ಫೋಟೊ ಹೊಡೆದಷ್ಟು ಹುರುಪಿನಿಂದ, ಒನಪು ಒಯ್ಯಾರದಲ್ಲಿ ಆ ನವಿಲು ನಮಗ್ರ್ ಪೋಸು ನೀಡಿತು. ನಡುವೆ ಕೂಗು ಹಾಕಿತು. ಆ ಕೂಗಿಗೆ ತೋಟದಲ್ಲಿ ೨ ಹೆಣ್ಣು ಮತ್ತು ೨ ಗಂಡು ನವಿಲುಗಳು ಬಂದು ಸಾಥ್ ನೀಡಿದವು. ಸ್ವರ್ಗ ಭೂಮಿಗೆ ಇಳಿದಿತ್ತು.

ನಮ್ಮ ಖುಷಿ- ಧಾವಂತ ನೋಡಿ ಗುರು ನಾರಾಯಣಸ್ವಾಮಿ ತೋಟಕ್ಕೆ ಬಂದರು. ನವಿಲುಗಳೆಲ್ಲ ಅವರನ್ನು ಖುಷಿಯಿಂದ ಸುತ್ತುವರೆದು ಸ್ವಾಮಿನಿಷ್ಠೆ ಪ್ರದರ್ಶಿಸಿದವು. ಸ್ವಾಮಿಗಳು ಸಹ ಅಷ್ಟೇ ವಿಶ್ವಾಸದಿಂದ, ಪ್ರೀತಿಯಿಂದ ಅವುಗಳ ಮೈದಡವಿದರು. ‘ನೋಡ್ರಿ..ಮನುಷ್ಯನಿಗಿಂತ ಪ್ರಾಣಿ-ಪಕ್ಷಿಗಳ ಸಂಗ ಹೆಜ್ಜೇನು ಸವಿಧ್ಹಾಂಗ. ಅವು ಪರತ ಪಾವತಿ ಎನೂ ಕೇಳಂಗಿಲ್ಲ. ನಿಮ್ಮ ಪಾಲಂತೂ ದೇವ್ರಾಣೆ ಅವಕ್ಕೆ ಬೇಕಿಲ್ಲ. ಭಕ್ತರು ತಂದು ಅವುಗಳನ್ನ ಈ ಆಶ್ರಮದಲ್ಲಿ ಬಿಟ್ಟಾರ. ಅವುಗಳ ಹೊಟ್ಟೆ-ನೆತ್ತಿ ಜವಾಬ್ದಾರಿ ಸಹ ಅವರ ಹೊತ್ತಾರ’ ಎಂದು ನಾರಾಯಣ ಸ್ವಾಮಿ ವಿವರಿಸಿದರು.

ಈ ತೋಟ, ಪ್ರಾಣಿ-ಪಕ್ಷಿಗಳಿಗೆ ಆಗರವಾಗಿರುವ ಆಶ್ರಮದ ಬಗ್ಗೆ ಸ್ವಾಮೀಜಿ ಸೂಚ್ಯವಾಗಿ ನಮಗೆ ವಿವರಿಸಿದ್ದು ಇಷ್ಟು. ಅಮ್ಮಿನಬಾವಿಯ ಜನ ಹೃದಯ ಶ್ರೀಮಂತರು ಎಂದೇ ಮಾತು ಆರಂಭಿಸಿದ ಅವರು, ೧೪ ವರ್ಷಗಳ ಹಿಂದೆ ಅವರು ಮಂಗಳೂರಿನಿಂದ ಕಾಲ್ನಡಿಗೆಯ ಮೂಲಕ ಅಮ್ಮಿನಬಾವಿಗೆ ಬಂದವರು. ಅವರಿಗೆ ಇಲ್ಲಿನ ಅಯ್ಯಪ್ಪ ಸ್ವಾಮಿ ಭಕ್ತರು ಆಶ್ರಮಕ್ಕಾಗಿ ಮೂರುವರೆ ಗುಂಠೆ ಜಾಗೆ ನೀಡಿದರು. ಆ ಜಾಗದಲ್ಲಿಯೇ ಇಂದು ಸುಂದರ ಕೈತೋಟವಿರುವ ಆಶ್ರಮ ಇದೆ. ಅಸ್ತಮಾ, ದಮ್ಮು, ಖೆಮ್ಮು, ವಾತ, ಪಿತ್ತ ಮೊದಲಾದ ರೋಗಗಳಿಗೆ ಔಷಧಿ ಪಡೆಯಲು ಇಲ್ಲಿಗೆ ಜನರು ಬರುತ್ತಾರೆ. ಅವರಿಗೆ ನಾರಾಯಣಸ್ವಾಮಿಗಳೇ ಆಯುರ್ವೇದ ಪದ್ಧತಿಯಲ್ಲಿ ಔಷಧಿ ಕೊಡುತ್ತಾರೆ. ಚಿಕಿತ್ಸೆಗೆ ಬೇಕಾಗುವ ಔಷಧೀಯ ಸಸ್ಯಗಳನ್ನು ಅವರು ಇಲ್ಲಿ ಬೆಳೆದು ಕೊಂಡಿದ್ದಾರೆ.

ಈ ನವಿಲುಗಳು ಪರಪುಟ್ಟವಾಗಿ ಆಶ್ರಮ ಸೇರಿದ ಬಗ್ಗೆ ಅವರ ಉತ್ತರ ಹೀಗಿದೆ. ‘ನವಿಲುಗಳು ಇಲ್ಲಿ ಬಂದು ಸೇರಿಲ್ಲ. ನಾನೇ ಅವುಗಳ ಆಶ್ರಮ ಸೇರೀನಿ!’ ಎನ್ನುವ ವಿನಯ ಅವರದು. ಈ ಭಾಗದಲ್ಲಿ ನವಿಲುಗಳು ಹೆಚ್ಚು. ಕಬ್ಬು, ಭತ್ತದ ಗದ್ದೆಯಲ್ಲಿ ಆಹಾರ ಹೆಕ್ಕಲು ಬಂದು ಅಲ್ಲಿಯೇ ಮೊಟ್ಟೆ ಇಟ್ಟು ಹೊರಟು ಬಿಡುತ್ತವೆ. ಕಟಾವಿನ ಸಂದರ್ಭದಲ್ಲಿ ರೈತರು ತಮಗೆ ಸಿಕ್ಕ ಈ ಮೊಟ್ಟೆಗಳನ್ನು ಜತನದಿಂದ ಮನೆಗೊಯ್ದು, ಕೋಳಿ ಗೂಡಿನೊಳಗಿಟ್ಟು ಮರಿ ಮಾಡುತ್ತಾರೆ. ದೊಡ್ಡವಾಗುವತನಕ ನವಿಲಿನ ಮರಿಗಳು ಕೋಳಿ ಮರಿಗಳ ಜೊತೆಗೆ ಕಾಳು ಹೆಕ್ಕುತ್ತವೆ. ರೆಕ್ಕೆ-ಪುಕ್ಕ ಬಲಿತ ಮೇಲೆ ನಾಯಿಗಳ ಉಪಟಳಕ್ಕೆ ಅಂಜಿ ರೈತರೇ ಅವುಗಳನ್ನು ತಂದು ಆಶ್ರಮಕ್ಕೆ ಬಿಡುತ್ತಾರೆ. ಹಗಲು ಆಶ್ರಮದಲ್ಲಿ ಓಡಾಡಿ ಕೊಂಡಿರುವ ಈ ನವಿಲುಗಳನ್ನು ರಾತ್ರಿಯ ವೇಳೆ ಬೀದಿ ನಾಯಿಗಳಿಂದ ರಕ್ಷಿಸಲು ಮತ್ತೆ ಪಂಜರಕ್ಕೆ ಹಾಕಲೇ ಬೇಕು.

ನವಿಲುಗಳು ಇಲ್ಲಿಗೆ ಬಂದ ಮೇಲೆ ಆಶ್ರಮದ ಸೊಬಗು ಇಮ್ಮಡಿಸಿದೆ. ಇಲ್ಲಿಗೆ ಬರುವ ಭಕ್ತರು, ರೋಗಿಗಳು, ಮಕ್ಕಳು ಎಲ್ಲರೂ ನವಿಲುಗಳ ಉಲಿಯುವಿಕೆ ಹಾಗು ನಲಿದಾಟದಿಂದ ಮನಸೋಲುತ್ತಾರೆ. ಅವುಗಳಿಗೆ ತಿನ್ನಲು ಕಾಳು, ತಿಂಡಿ-ತಿನಿಸುಗಳನ್ನು ಹಾಕಿ ಸಂಭ್ರಮಿಸುತ್ತಾರೆ. ಹಗಲು ನವಿಲುಗಳನ್ನು ಕಾಯಲು ಆಶ್ರಮದಲ್ಲಿ ಸ್ವಯಂಸೇವಕರ ಪಡೆಯೇ ಇದೆ. ಸುತ್ತಲಿನ ಹಳ್ಳಿಗಳಲ್ಲಿ ನವಿಲಿನ ಮರಿ ಹಾಗು ಮೊಟ್ಟೆಗಳು ಎಲ್ಲಿ ಸಿಕ್ಕರೂ ಅವುಗಳನ್ನು ರೈತರು, ರೈತಾಪಿ ಮಹಿಳೆಯರು, ಕೃಷಿ ಕೂಲಿ ಕಾರ್ಮಿಕರು ಜೋಪಾನವಾಗಿ ಆಶ್ರಮಕ್ಕೆ ತಲುಪಿಸಿ ಹೋಗುತ್ತಾರೆ. ಒಂದು ರೀತಿಯಲ್ಲಿ ಇದು ಅಘೋಷಿತ ನವಿಲು ಹತ್ಯಾ ನಿರ್ಭಂಧ ಸ್ತಳವಾಗಿ ಮಾರ್ಪಟ್ಟಿದೆ.

ಈ ನವಿಲುಗಳಿಂದ ಕೃಷಿಗೆ ಅಥವಾ ಆಶ್ರಮದ ಕೈತೋಟಕ್ಕೆ ಯಾವುದೇ ಹಾನಿ ಇಲ್ಲ ಎನ್ನುವ ಗುರುಸ್ವಾಮಿಗಳು, ನವಿಲು ಕೃಷಿಕನ ಮಿತ್ರ. ಆಶ್ರಮದಲ್ಲಿ ಬೆಳೆಯಲಾದ ತರಕಾರಿಗಳು ಅವುಗಳಿಂದಾಗಿ ಕೀಟಮುಕ್ತವಾಗಿವೆ. ಇಲ್ಲಿ ನವಿಲುಗಳು ಮಾತ್ರವಲ್ಲದೇ, ಮೂರು ಮಂಗಗಳು, ಕಟುಕರ ಕತ್ತಿಗೆ ಕೊರಳೊಡ್ದಲಿದ್ದ ನಾಲ್ಕು ಆಕಳುಗಳು, ಅಮ್ಮಿನಬಾವಿ ರಸ್ತೆಯ ಮೇಲೆ ವಾಹನ ಹಾಯ್ದು ಕಾಲು ಮುರಿದುಕೊಂಡ ಎತ್ತು, ಗಿಳಿಗಳು, ೨೦ಕ್ಕೂ ಹೆಚ್ಚು ಮುದ್ದಾದ ಮೊಲದ ಮರಿಗಳಿವೆ. ‘ಈ ಎಲ್ಲ ಪ್ರಾಣಿಗಳ ಬೇಕು-ಬೇಡಗಳನ್ನು ಆಶ್ರಮದ ಭಕ್ತಾದಿಗಳೇ ಪೂರೈಸುತ್ತಾರೆ ಎನ್ನುವಾಗ ನಾರಾಯಣಸ್ವಾಮಿ ಅವರ ಕಣ್ಣುಗಳು ಸಂತೋಷದಿಂದ ಬೆಳಗುತ್ತವೆ.

ಪ್ರಾಣಿ-ಪಕ್ಷಿಗಳ ಸಂಗ, ರೋಗಿಗಳ ಸೇವೆ, ಭಕ್ತಾದಿಗಳ ಭೇಟಿ, ಅಮ್ಮಿನಬಾವಿಯ ಜನರ ಪ್ರೀತಿ ಎಲ್ಲವೂ ರುಣಾಣುಬಂಧ ಎನ್ನುವ ನಾರಾಯಣಸ್ವಾಮಿಗಳು, ಈ ಆಶ್ರಮದಲ್ಲಿ ಒಂದು ಶಾಲೆ, ಆರೋಗ್ಯ ಕೇಂದ್ರ, ಪುನರ್ವಸತಿ ಶಾಲೆ, ಪರಿಸರ ಸ್ನೇಹಿ ಬಾಳುವೆ ಕಲಿಸುವ ತರಬೇತಿ ಕೇಂದ್ರ, ಔಷಧೀಯ ಸಸ್ಯಗಳ ವನ ಆರಂಭಿಸುವ ಉದ್ದೇಶ ಹೊಂದಿದ್ದಾರೆ. ಇದೇ ಸಂಕಲ್ಪವಿರುವ ಭಕ್ತಗಣದ ಬೆಂಬಲವೂ ಅವರಿಗಿದೆ.

ಸುಂದರ ಆಶ್ರಮವನ್ನು ಕಣ್ತುಂಬಿಕೊಂಡು ನಾವು ಮರಳುವಾಗ, ಕೈಚೀಲದಲ್ಲಿ ಕಾಯಿಪಲ್ಲೆ ತುಂಬಿ ‘ಮತ್ತೆ ಬನ್ನಿ’ ಎಂದು ಸ್ವಾಮಿಗಳು ಬೀಳ್ಕೊಟ್ಟಾಗ ಬದುಕಿನಲ್ಲಿ ಹೊಸದೊಂದು ಪಾಠಕಲಿತ ಧನ್ಯತೆ ನಮ್ಮಲ್ಲಿ ಮೂಡಿತ್ತು.