ಸಾಹಿತ್ಯ ಸಮ್ಮೇಳನ ಮತ್ತು ಆಕಾಶವಾಣಿ ಸಂಸ್ಕೃತ ವಾರ್ತೆ

ಸಾಹಿತ್ಯ ಸಮ್ಮೇಳನ ಮತ್ತು ಆಕಾಶವಾಣಿ ಸಂಸ್ಕೃತ ವಾರ್ತೆ

ಮತ್ತೊಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಅಥವಾ ಕೇವಲ ಸಾಹಿತ್ಯದ ಸಮ್ಮೇಳನ ನಡೆಯುತ್ತಿದೆ. ಇಲ್ಲಿರುವ ಹತ್ತಾರು ಗೋಷ್ಠಿಗಳ, ವಿಶೇಷ ಉಪನ್ಯಾಸಗಳ ವಿಷಯಗಳನ್ನು ನೋಡಿದರೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಸಮ್ಮೇಳನ ಸಂಘಟಿಸುತ್ತಿರುವವರು ಸಂಪೂರ್ಣ ಸಂವೇದನಾ ಶೂನ್ಯರಾಗಿದ್ದಾರೆಯೇ ಎಂಬ ಅನುಮಾನ ಬರುತ್ತಿದೆ.

ಬಹಳಷ್ಟು ಮಂದಿ ಈಗಾಗಲೇ ಸಾಹಿತ್ಯ ಸಮ್ಮೇಳನ ವಿಷಯ ಸಾಹಿತ್ಯಕ್ಕೆ ಯಾವ ಮಹತ್ವವನ್ನೂ ಕೊಟ್ಟಿಲ್ಲ ಎಂದು ದೂರುತ್ತಿದ್ದಾರೆ. ವಿಷಯ ಸಾಹಿತ್ಯ ಬಿಡಿ ನಮ್ಮ ಸಾಹಿತಿಗಳು ಹೆಮ್ಮೆಯಿಂದ ಹೇಳಿಕೊಳ್ಳುವ ಸೃಜನಶೀಲ ಸಾಹಿತ್ಯದ ಹೊಸ ಟ್ರೆಂಡ್ ಗಳ ಬಗ್ಗೆ ಚರ್ಚಿಸುವ ಒಳ್ಳೆಯ ಗೋಷ್ಠಿ ಇಲ್ಲ. ಹೆಸರಿಗೊಂದು ಇಂಥ ಗೋಷ್ಠಿಯಿದೆಯಾದರೂ ಇದರಲ್ಲಿ ಏನಿರಬಹುದು ಎಂಬುದನ್ನು ಈಗಲೇ ಊಹಿಸಬಹುದು.

ಕನ್ನಡ ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿದಂತೆ ಬಹಳ ಹಳೆಯ ಜೋಕ್ ಒಂದಿದೆ-'ಕಾದಂಬರಿಯ ವಿಷಯದಲ್ಲಿ 'ವಿವರ'ಗಳನ್ನೂ, ಕಥೆಯ ವಿಷಯದಲ್ಲಿ 'ಸೂಕ್ಷ್ಮ'ಗಳನ್ನೂ, ಕವಿತೆಯ ವಿಷಯದಲ್ಲಿ 'ಪ್ರತಿಮೆ'ಗಳನ್ನೂ, ವಿಮರ್ಶೆಯ ವಿಷಯದಲ್ಲಿ 'ಸಂಕೀರ್ಣತೆ'ಯನ್ನೂ ಉಳಿಸಿಕೊಳ್ಳಬೇಕಾದುದು ಅಗತ್ಯ'. ಇದು ಕನ್ನಡ ಸಾಹಿತ್ಯ ವಿಮರ್ಶೆಗೆ ಬರೆದ ಭಾಷ್ಯದಂತೆ ಕಾಣಿಸುತ್ತಿದೆ. ಸಾಹಿತ್ಯ ಸಮ್ಮೇಳನದ ಗೋಷ್ಠಿಯ ವಿಷಯಕ್ಕೆ ಬಂದರಂತೂ ಇದು ಬಹಳ ಸರಿಯಾಗಿ ಒಪ್ಪುತ್ತದೆ.

ಎಲ್ಲಾ ಭಾಷೆಯ ಸಾಹಿತ್ಯವೂ ತನ್ನ ಕಾಲಕ್ಕೆ ಸ್ಪಂದಿಸುತ್ತಾ ಇರುತ್ತದೆ. ಕನ್ನಡ ಸಾಹಿತ್ಯವೂ ಇದಕ್ಕೆ ಹೊರತಲ್ಲ. ವಿವಿಧ ಕಾಲಘಟ್ಟಗಳ ಈ ಸ್ಪಂದನೆಯನ್ನು ಆಯಾ ಕಾಲದ ವಿಮರ್ಶಕರು ಗುರುತಿಸಿದ್ದಾರೆ. ಆದರೆ ಜಾಗತೀಕರಣ ಯುಗದ ಆರಂಭದ ನಂತರದ ಬೆಳವಣಿಗೆಗಳನ್ನು ಗುರುತಿಸಲು ಕನ್ನಡ ವಿಮರ್ಶಕರು ಸಂಪೂರ್ಣವಾಗಿ ಸೋತಿದ್ದಾರೆ. ಹೊಸ ಕಾಲಕ್ಕೆ ಸ್ಪಂದಿಸಿದ ಲೇಖಕರನ್ನು ಅವರು ಅರ್ಥ ಮಾಡಿಕೊಳ್ಳುವಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಪರಿಣಾಮವಾಗಿ ಮಾಹಿತಿ ಕ್ರಾಂತಿಯಂಥ ಮಹಾ ಬದಲಾವಣೆಯನ್ನು ವ್ಯಾಖ್ಯಾನಿಸುವುದಕ್ಕೆ ಪದಗಳೇ ಇಲ್ಲದೆ, ಅರ್ಥ ಮಾಡಿಕೊಳ್ಳಲು ಅಗತ್ಯವಾದ ಪರಿಕರಗಳೂ ಇಲ್ಲದೆ ಸುಮ್ಮನೆ ಬಡಬಡಿಸುತ್ತಾ ಇದ್ದಾರೆ.

ಅದೃಷ್ಟವಶಾತ್ ಹೊಸ ತಲೆಮಾರಿನ ಬರೆಹಗಾರರು ಈ ವಿಮರ್ಶಕರ ಸೋಲನ್ನು ಬಹಳ ಚೆನ್ನಾಗಿ ಅರಿತಿದ್ದಾರೆ. ಹಾಗೆಯೇ ಈ ವಿಮರ್ಶಕರಿಗೊಂದು ಅನನ್ಯತೆಯನ್ನು ಕೊಟ್ಟಿರುವ ಸಾಹಿತ್ಯ ಪರಿಷತ್ ತರಹದ ಸಂಸ್ಥೆಗಳ ಮಿತಿಗಳನ್ನೂ ತಿಳಿದಿದ್ದಾರೆ. ಸಂಪದದಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ನೋಡಿದರೇ ಇದು ಅರ್ಥವಾಗುತ್ತದೆ.

ನನ್ನ ಮಟ್ಟಿಗೆ ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ, ನಡೆಯುದಿರುವ ಚರ್ಚೆಗಳೆಲ್ಲವೂ ಅಪ್ರಸ್ತುತ. ಈ ಪರಿಷತ್ತು, ಅಕಾಡೆಮಿಗಳಲ್ಲೆವೂ ಯಾವುದೋ ಕಾಲಘಟ್ಟದಲ್ಲಿ ಸ್ಥಗಿತಗೊಂಡ ವ್ಯವಸ್ಥೆಯ ಉದಾಹರಣೆಗಳು. ಅಥವಾ ಮ್ಯೂಸಿಯಂನಲ್ಲಿ ಇರುವ ಇತಿಹಾಸವನ್ನು ನೆನಪಿಸುವ ವಸ್ತುಗಳಂಥವು. ಈ ಹಳೆಯ ವಸ್ತುಗಳು ಸಂಗ್ರಹದಲ್ಲಿರುವುದಕ್ಕಷ್ಟೇ ಸೂಕ್ತ. ಇವು ಹೊಸ ಕಾಲಕ್ಕೂ ಬಳಕೆಗೆ ಬರಬೇಕು ಎನ್ನುವುದು ನಮ್ಮ ಹಾರೈಕೆಯಾಗಿರಬಹುದೇ ಹೊರತು ವಾಸ್ತವವಾಗಲು ಸಾಧ್ಯವಿಲ್ಲ. ಸಾಹಿತ್ಯ ಸಮ್ಮೇಳನಕ್ಕಿರುವ ಮಹತ್ವ ಆಕಾಶವಾಣಿಯ ಸಂಸ್ಕೃತ ವಾರ್ತೆಗಿರುವ ಮಹತ್ವವನ್ನು ಮೀರುವುದಿಲ್ಲ.

Rating
No votes yet

Comments