ಸೌರಮರ:ಬೀದಿ ದೀಪದಲ್ಲಿ ಹೊಸತನ

ಸೌರಮರ:ಬೀದಿ ದೀಪದಲ್ಲಿ ಹೊಸತನ

ಬರಹ


    ಇಂಗ್ಲೆಂಡಿನ ಪ್ರಸಿದ್ಧ ವಿನ್ಯಾಸಕಾರನ ದೃಷ್ಟಿ ರಸ್ತೆ ಬದಿ ನಿರ್ಲಿಪ್ತವಾಗಿ ಬಿದ್ದ ದಾರಿದೀಪದ ಮ್ಲೆ ಬಿದ್ದಿದೆ.ನಗರಗಳಲ್ಲಿ ಮರಗಳು ರಸ್ತೆ ಬದಿಯಿಂದ ಮಾಯವಾಗುತ್ತಿವೆ.ಬೀದಿ ದೀಪಗಳು ಸ್ವಲ್ಪ ಮಟ್ಟಿಗೆಯಾದರೂ ಮರಗಳಂತೆ ಕಾಣಿಸಿಕೊಳ್ಳುವಂತೆ ವಿನ್ಯಾಸ ಮಾಡಬಾರದ್ಯಾಕೆ ಎಂದು ರಾಸ್ ಲವ್‌ಗ್ರೋವ್ ಯೋಚಿಸಿ,ಅವಕ್ಕೆ ಹೊಸ ರೂಪ ಕೊಡಲು ನಿರ್ಧರಿಸಿದರು.ಸೂರ್ಯನ ಬೆಳಕಿನಿಂದ ವಿದ್ಯುದುತ್ಪಾದಿಸಿ,ಬ್ಯಾಟರಿ ಚಾರ್ಜ್ ಮಾಡಿ,ರಾತ್ರಿ ಬ್ಯಾಟರಿ ನೀಡುವ ಶಕ್ತಿಯಿಂದಲೇ ಬೆಳಕು ಬೀರುವ ಸೌರಬೀದಿದೀಪಗಳು ಮೊದಲಿನಿಂದಲೇ ಇವೆ.ರಾಸ್ ಅವರು ಈ ಬೀದಿದೀಪಗಳ ಕಂಬವನ್ನು ಹಸಿರಾಗಿಸಲು ನಿರ್ಧರಿಸಿದರು.ಜತೆಗೆ solaraಒಂದೇ ಸೌರಫಲಕವನ್ನು ಬಳಸುವ ಬದಲಿಗೆ ಹತ್ತು ಸೌರಫಲಕಗಳನ್ನು ಮರದ ಗೆಲ್ಲುಗಳಂತೆ ವಿನ್ಯಾಸಗೊಳಿಸಿದರು.ಈ ಸೌರಫಲಕಗಳ ಅಡಿಯಲ್ಲಿಯೇ ದೀಪಗಳನ್ನೂ ಅಳವಡಿಸಿ,ರಾತ್ರಿ ಹೊತ್ತಿನಲ್ಲಿ ಹತ್ತು ದೀಪಗಳಿಂದ ಬೆಳಕು ಹೊರಸೂಸುವಂತೆ ಮಾಡಿದರು.ಕಂಬಗಳಂತೆ ನಿರ್ಲಿಪ್ತವಾಗಿ ನಿಲ್ಲದೆ ಇವನ್ನೂ ಮರಗಳಂತೆ ಒನೆದಾಡುವಂತೆ ಮಾಡಿದರೆ ಹೇಗೆ ಎನ್ನುವ ಯೋಚನೆ ಅವರಿಗೆ ಬಾರದೇ ಇರಲಿಲ್ಲ. ಈಗ ಹೊಸ ದೀಪಗಳಲ್ಲಿ ಮೋಟಾರು ಅಳವಡಿಸಿ,ಅವುಗಳಿಗೆ ಚಲನೆಯನ್ನೂ ಒದಗಿಸಿಲಾಯಿತು.ಪರಿಣಾಮವಾಗಿ ಗಾಳಿ ಬಂದಾಗ ಮರಗಳ ಗೆಲ್ಲುಗಳು ತೊನೆದಾಡುವಂತೆ,ಇವೂ ತೂಗುತ್ತವೆ. ಸೂರ್ಯನ ಕಡೆ ಮುಖ ಮಾಡಿ ನಿಲ್ಲಲು ತಮ್ಮ ನಿಲುವನ್ನು ಬದಲಾಯಿಸಿಕೊಂಡು ಜನರಿಗೆ ಮುದ ನೀಡುತ್ತವೆ-ಸೂರ್ಯಕಾಂತಿ ಹೂವುಗಳಂತೆ!ಇಂತಹ ಬೀದಿದೀಪಗಳು ವಿಯೆನ್ನಾದಲ್ಲಿ ಈಗಾಗಲೇ ಸ್ಥಾಪನೆಯಾಗಿ ವರ್ಷವೊಂದು ಉರುಳಿದೆ.ನಾಲ್ಕು ದಿನ ಮೋಡ ಮುಸುಕಿದ ವಾತಾವರಣವಿದ್ದರೂ ಇವು ಕೆಲಸ ಮಾಡುವಷ್ಟು ದಕ್ಷತೆ ಹೊಂದಿವೆ.ಸೌರಮರಗಳು ಸುವಾಸನೆಯನ್ನು ಸೂಸುವ ಶಕ್ತಿಯನ್ನೂ ಹೊಂದಲಿವೆ.ಇವುಗಳಲ್ಲಿವಿದ್ಯುಚ್ಛಕ್ತಿಯಿರುವುದರಿಂದ ಗಾಳಿಯನ್ನು ತಾಜಾಗೊಳಿಸುವ ಸುವಾಸನಾಯುಕ್ತ ಧೂಪವನ್ನು ಹೊರಸೂಸುವಂತೆ ಮಾಡುವುದು ಕಷ್ಟವಲ್ಲ.ಇವುಗಳು ತಂಗಾಳಿಯನ್ನೂ ನೆರಳನ್ನೂ, ನೀಡುವಂತಾಗಲಿ ಎಂದು ನೀವು ಬಯಸುತ್ತೀರೇನೋ?ತಡೆಯಿರಿ-ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ.ವಿಡಿಯೋ ನೋಡಲು ಕುಟುಕಿ:

http://edition.cnn.com/2008/TECH/07/24/solar.trees/index.html#cnnSTCVideo
ಇನ್ನೊಂದು ವಿಕಿಪೀಡಿಯ-ನೋಲ್
    ವಿಕಿಪೀಡಿಯಾ ಜನರೇ ಅಭಿವೃದ್ಧಿ ಪಡಿಸುತ್ತಿರುವ ವಿಶ್ವಕೋಶ.ಇದರಲ್ಲಿ ಇನ್ನೂರಕ್ಕೂ  ಹೆಚ್ಚಿನ ಭಾಷೆಗಳಲ್ಲಿ ಎಂಟು ದಶಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಬರಹಗಳಿವೆ.ಇಂಗ್ಲಿಷಿನಲ್ಲೇ ಎರಡು ದಶಲಕ್ಷ ಬರಹಗಳಿವೆ.ಗೂಗಲ್ ಇಂತಹ ವಿಶ್ವಕೋಶವನ್ನು ಬೆಳೆಸಲು ಮನಸ್ಸು ಮಾಡಿ ಈಗಾಗಲೇ ಆರು ತಿಂಗಳೇ ಉರುಳಿತು. ಪ್ರಯೋಗಾರ್ಥ ಸೀಮಿತವಾಗಿ ಲಭ್ಯವಿದ್ದ ಸೇವೆಯೀಗ ತೆರೆದುಕೊಂಡಿದೆ. ಈಗ http://knol.google.com/k# ಈ ಅಂತರ್ಜಾಲ ವಿಳಾಸದಲ್ಲಿ ನೋಲ್ ಲಭ್ಯವಿದೆ.ಇದರ ವಿಶೇಷತೆಯೆಂದರೆ,ಗೂಗಲ್ ಐಡಿ ಇದ್ದವರು,ಇದರಲ್ಲಿ ಬರಹ ಸೇರಿಸಬಹುದು.ವಿಕಿಯಂತಲ್ಲದೆ ಇಲ್ಲಿ ಬರೆದವರ ಹೆಸರು ಕಾಣಿಸಿಕೊಳ್ಳುತ್ತದೆ.ಬರಹಗಳಿಗೆ ರೇಟಿಂಗ್ ಸಿಗುವುದು ಇಲ್ಲಿನ ಮತ್ತೊಂದು ವಿಶೇಷತೆ. ಜಾಹೀರಾತುಗಳು ಪುಟಗಳಲ್ಲಿ ಕಾಣಿಸಿಕೊಳ್ಳುತ್ತವೆ. ಜಾಹೀರಾತು ಆದಾಯದ ಸ್ವಲ್ಪ ಪಾಲು ಬರಹಗಾರನಿಗೂ ಸಿಗುತ್ತದೆ! ಶೋಧಸೇವೆಯಲ್ಲಿ ಗೂಗಲ್ ಅಗ್ರಗಣ್ಯ ಸ್ಥಾನದಲ್ಲಿರುವುದರಿಂದ ಅದರಲ್ಲೂ ನೋಲ್‌ನ ಬರಹಗಳು ಕಾಣಿಸಿಕೊಳ್ಳದೆ ಇರಲಿಕ್ಕಿಲ್ಲ.ಇನ್ನು ಜನರು ವಿಕಿಯಿಂದಲೇ ಬರಹಗಳನ್ನು ಕದ್ದು ಇಲ್ಲಿ ಸೇರಿಸುವ ತಮಾಷೆಯೂ ನಡೆಯುವ ಸಾಧ್ಯತೆಯಿದೆ.
ಹಳೆಕಾರನ್ನು ವಿದ್ಯುಚಾಲಿತವಾಗಿಸಿ!
    ಕಂಪ್ಯೂಟರಿನ ಕಾರ್ಯನಿರ್ವಹಣಾ ತಂತ್ರಾಂಶ ಬದಲಿಸಿ,ಹಳೆಯ ಯಂತ್ರಾಂಶವನ್ನೇ ಬಳಸುತ್ತಿರುತ್ತೇವೆ. ಇದನ್ನು ಕಾರುಗಳಿಗೂ ಅನ್ವಯಿಸಬಾರದೇಕೆ ಎಂದು ಕಂಪೆನಿಯೊಂದು ಯೋಚಿಸಿದೆ.ಕಾಕತಾಳೀಯವಾಗಿ ಈ ಕಂಪೆನಿ ಫಿನ್ಲೆಂಡಿನದ್ದು. ವಿಂಡೋಸ್ ಓಎಸ್‌ಗೆ ಸ್ಪರ್ಧೆ ನೀಡಿದ ಲಿನಕ್ಸ್ ಓಎಸ್‌ನ ಜನಕ ಕೂಡಾ ಇದೇ ದೇಶದವ.ಹಾಗಾಗಿ ಈ ಪ್ರಯೋಗವನ್ನು ಮುಕ್ತ ತಂತ್ರಾಂಶ ಚಳುವಳಿಗೆ ಹೋಲಿಸಲಾಗುತ್ತಿದೆ!ವಿದೇಶಗಳಲ್ಲಿ ಸುಸ್ಥಿತಿಯಲ್ಲಿರುವ ಕಾರುಗಳನ್ನೂ ಹಳೆಯವು ಎಂದು ಮೂಲೆಗುಂಪು ಮಾಡುತ್ತಾರೆ. ಉತ್ತಮ ಸ್ಥಿತಿಯಲ್ಲಿರುವ ಕಾರುಗಳ ಇಂಜಿನ್ ಬದಲಾಯಿಸಿ,ಅವುಗಳ ಹೊರಮೈಯಿಗೆ ಸೌರಫಲಕಗಳನ್ನು ಅಳವಡಿಸಿ,ಲಿಥಿಯಮ್ ಬ್ಯಾಟರಿಯ ಮೂಲಕ ಶಕ್ತಿ ಪಡೆಯುವ ತಂತ್ರ ಇಲ್ಲಿ ಬಳಕೆಯಾಗಿದೆ.ಪ್ರತಿ ಗಂಟೆಗೆ ನೂರು ಕಿಲೋಮೀಟರ್ ಓಡುವ,ಒಂದು ಸಲಕ್ಕೆ ನೂರೆಂಭತ್ತು ಕಿಲೋಮೀಟರ್ ದೂರ ಕ್ರಮಿಸಬಲ್ಲ ಕಾರುಗಳನ್ನಲ್ಲಿ ಸಜ್ಜುಗೊಳಿಸಲಾಗಿದೆ. ಈಗಾಗಲೇ ಐನೂರು ಕಾರುಗಳಿಗೆ ಗಿರಾಕಿಗಳನ್ನು ಕಂಡುಕೊಳ್ಳಲಾಗಿದೆ.ಕಾರು ಕೊಳ್ಳಲು ಬಂದವರಿಗೆ ಅಂತರ್ಜಾಲ ತಾಣದ ಮೂಲಕ ಬಳಸಿದ ಕಾರು ಖರೀದಿಸಿ,ಅದನ್ನು ನಂತರ ವಿದ್ಯುಚ್ಚಾಲಿತಗೊಳಿಸಲು ಬೇಕಾದ ಮಾರ್ಪಾಡು ಮಾಡುವ ವ್ಯವಸ್ಥೆಗೆ ಕಂಪೆನಿ ಮುಂದಾಗಿದೆ.

ಕೇಬಲ್ ಗೋಜಲಿಗೆ ವಿದಾಯ
    ಡಿವಿಡಿ,ಟಿವಿ ಗೇಮ್ಸ್‌ಗೆ ಅವಕಾಶ ನೀಡುವ ಪ್ಲೇಸ್ಟೇಶನ್,ಸೆಟ್ ಟಾಪ್ ಬಾಕ್ಸ್ ಇವನ್ನೆಲ್ಲಾ ಜತೆಗಿರಿಸಬೇಕಾಗುತ್ತದೆ.ಇವುಗಳನ್ನು ಪರಸ್ಪರ ಸಂಪರ್ಕಿಸಲು ಕೇಬಲ್‌ಗಳ ಬಳಕೆಯಾಗುತ್ತದೆ. ಇಂತಹ ಗೋಜಲನ್ನು ನಿವಾರಿಸಲು ಹಿಟಾಚಿ,ಸೋನಿ,ಸ್ಯಾಮ್‌ಸಂಗ್ ಮುಂತಾದ ಕಂಪೆನಿಗಳು ನಿರ್ಧರಿಸಿವೆ. ನಿಸ್ತಂತು ಹೈಡೆಫಿನಿಶನ್ ಇಂಟರ್‌ಪೇಸ್ ಎನ್ನುವ ವ್ಯವಸ್ಥೆಯ ಮೂಲಕ ನಿಸ್ತಂತು ತರಂಗಗಳ ಮೂಲಕ ಈ ಎಲ್ಲ ಸಾಧನಗಳನ್ನು ಬೆಸೆಯಲು ಸಾಧ್ಯವಾಗಿದೆ.ಸಾಧನಗಳನ್ನು ಒಟ್ಟಿಗೆ ಇಡುವ ತಾಪತ್ರಯವೂ ಇಲ್ಲ.ಬೇರೆ ಬೇರೆ ಕೋಣೆಗಳಲ್ಲಿ ಅವನ್ನಿರಿಸಿದರೂ, ಈ ವ್ಯವಸ್ಥೆಯ ಮೂಲಕ ಅವನ್ನು ಬೆಸೆಯಲು ಸಾಧ್ಯ.ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಟಿವಿಗಳಿದ್ದರೂ ಅವನ್ನು ಈ ವ್ಯವಸ್ಥೆಯ ಮೂಲಕ ಬಳಸಲು ಕೇಬಲ್ ಜಾಲ ಬೇಕಿಲ್ಲ.
ಟ್ಯಾಕ್ಸ್ ರಿಟರ್ನ್ಸ್ ಪಾವತಿಸಲು ಅಂತರ್ಜಾಲ ನೆರವು
    ಜುಲೈ ಮೂವತ್ತೊಂದು ಅಂದ ಕ್ಷಣ ನಮಗೆ ಆದಾಯಕರ ರಿಟರ್ನ್ಸ್ ನೆನಪಿಗೆ ಬರುವುದು ಸಾಮಾನ್ಯ.ಅದರ ಅರ್ಜಿಯನ್ನು ಕೈಯಿಂದ ತುಂಬುವ ಬದಲಿಗೆ ಅಂತರ್ಜಾಲ ತಾಣವೊಂದಕ್ಕೆ ಹೋಗಿ,ಭರ್ತಿ ಮಾಡಿದ ಅರ್ಜಿಯ  ಮುದ್ರಿತ ಪ್ರತಿಯನ್ನು ಪಡೆಯಲು ಬಯಸುವಿರಾದರೆ, https://economictimes.rupeex.com/tax.do  ತಾಣಕ್ಕೆ ಹೋಗಿ. ಇಲ್ಲಿ ಕೇಳಿದ ವಿವರಗಳನ್ನು ಟೈಪಿಸಿ, ನಿಮ್ಮ ಅರ್ಜಿ ಭರ್ತಿಯಾಗುತ್ತದೆ.ಇದನ್ನು ಮುದ್ರಿಸಿಕೊಂಡುಬಿಡಿ.ಆದರೆ ರಿಟರ್ನ್ಸ್ ಅಂತರ್ಜಾಲ ಮೂಲಕ ಆದಾಯಕರ ಇಲಾಖೆಗೆ ಸಲ್ಲಿಸಲು ಡಿಜಿಟಲ್ ಸಹಿಯನ್ನು ಹೊಂದಿರಬೇಕು.ಸಾಮಾನ್ಯ ಜನರು ಡಿಜಿಟಲ್ ಸಹಿಯನ್ನು ಹೊಂದಿರುವುದು ಕಡಿಮೆ. ಇನ್ನು ಖಾಸಗಿ ತಾಣಗಳ ಮೂಲಕ ಸಲ್ಲಿಸಲು ಅವರಿಗೆ ನಿಗದಿತ ಶುಲ್ಕ ನೀಡಬೇಕಾಗುತ್ತದೆ.ಆದರೂ ಈ ರೀತಿ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ,ಈ ವರ್ಷವೀಗಾಗಲೇ ಐದು ಪಟ್ಟು ಹೆಚ್ಚಿದೆ.ಇಪ್ಪತ್ತು ಲಕ್ಷ ಜನ ಅಂತರ್ಜಾಲ ಮೂಲಕ ತಮ್ಮ ರಿಟರ್ನ್ಸ್ ಸಲ್ಲಿಸಿದ್ದಾರೆ.
ಹುಡುಗಿಯರೂ ಲೆಕ್ಕದಲ್ಲಿ ಪಕ್ಕಾ!
    ಹುಡುಗಿಯರಿಗೆ ಗಣಿತ ಎನ್ನುವುದು ಕಬ್ಬಿಣದ ಕಡಲೆ-ಹುಡುಗರಿಗೆ ಅದು ಬಹು ಸುಲಭ ಎಂಬನಿಸಿಕೆ ಸತ್ಯವಲ್ಲವಂತೆ. ಇದು ಸಂಶೋಧಕರ ನುಡಿ.ವಿಸ್ಕೋನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯ ಜಾನೆಟ್ ಹೈದ್ ಈ ಬಗ್ಗೆ ಈ ವರೆಗೂ ಇದ್ದ (ಮೂಢ)ನಂಬಿಕೆಯನ್ನು ಆಧಾರವಿಲ್ಲದ್ದು ಎಂದು ತಳ್ಳಿಹಾಕಿದ್ದಾರೆ.ಲೆಕ್ಕದಲ್ಲಿ ಹುಡುಗಿಯರು ಇಷ್ಟ ಪಡುವುದಿಲ್ಲ.ಹುಡುಗರಿಗೆ ಅದು ಸಲೀಸು ಎನ್ನುವುದು ಹೆಚ್ಚಿನವರ ಅಂಬೋಣವಂತೆ,ಹಿಂದಿನ ಒಂದು ಅಧ್ಯಯನ ವರದಿಯೂ ಇದೇ ವಾದ ಮುಂದಿಟ್ಟಿತ್ತು. ಆದರೆ ಈಗ ವಿಶ್ವವಿದ್ಯಾಲಯಗಳಲ್ಲಿ ಗಣಿತದಲ್ಲಿ ಪದವಿ ಪಡೆಯುವವರ ಪೈಕಿ,ಮಹಿಳೆಯರ ಪ್ರತಿಶತ ಶೇಕಡಾ ನಲ್ವತ್ತೆಂಟು ಎಂದು ಅವರ ವರದಿ ತಿಳಿಸುತ್ತದೆ.ನಮ್ಮ ದೇಶದಲ್ಲಿ ಇಂತಹ ಅಭಿಪ್ರಾಯ ಚಾಲ್ತಿಯಲ್ಲಿತ್ತೇ?
*ಅಶೋಕ್‌ಕುಮಾರ್ ಎ

(ಇ-ಲೋಕ-85)(28/7/2008) 

udayavani

ashokworld