ಬಸವಣ್ಣನವರ ವಚನಗಳು ಭಾಗ ೧

ಬಸವಣ್ಣನವರ ವಚನಗಳು ಭಾಗ ೧

ಬರಹ

ಸಮುದ್ರ ಘನವೆಂಬೆನೆ? ಧರೆಯ ಮೇಲಡಗಿತ್ತು.
ಧರೆ ಘನವೆಂಬೆನೆ? ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು.
ನಾಗೇಂದ್ರ ಘನವೆಂಬೆನೆ?
ಪಾರ್ವತಿಯ ಕಿಱುಕುಣಿಕೆಯ ಮುದ್ರಿಕೆಯಾಯಿತ್ತು.
ಅಂತಹ ಪಾರ್ವತಿ ಘನವೆಂಬೆನೆ?
ಪರಮೇಶ್ವರನ ಅರ್ಧಾಂಗಿಯಾದಳು.
ಅಂತಹ ಪರಮೇಶ್ವರನ ಘನವೆಂಬೆನೆ?
ನಮ್ಮ ಕೂಡಲ ಸಂಗನ ಶರಣರ
ಮನದ ಕೊನೆಯ ಮೊನೆಯ ಮೇಲಡಗಿದನು ||೧||

ಹಾಲ ತೊಱೆಗೆ ಬೆಲ್ಲದ ಕೆಸಱು, ಸಕ್ಕರೆಯ ಮಳಲು,
ತವರಾಜನ ನೊರೆ ತೆರೆಯಂತೆ,
ಆದ್ಯರ ವಚನವಿರಲು,
ಬೇಱೆ ಬಾವಿಯ ತೋಡಿ ಉಪ್ಪನೀರನುಂಬವನ ವಿಧಿಯಂತೆ
ಆಯಿತ್ತೆನ್ನ ಮತಿ, ಕೂಡಲ ಸಂಗಮದೇವಾ ||೨||

ಎನ್ನಿಂದ ಕಿಱಿಯರಿಲ್ಲ; ಶಿವಭಕ್ತರಿಂದ ಹಿರಿಯರಿಲ್ಲಾ
ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ,
ಕೂಡಲ ಸಂಗಮದೇವಾ, ಎನಗಿದೇ ದಿಬ್ಯ ||೩||

ಮರನನೇಱಿದ ಮರ್ಕಟನಂತೆ
ಹಲವು ಕೊಂಬೆಗೆ ಹಾಯುತಲಿದೆ,
ಬೆಂದ ಮನವ ನಾನೆಂತು ನಂಬುವೆನಯ್ಯಾ?
ಎಂತು ನಚ್ಚುವೆನಯ್ಯಾ?
ಎನ್ನ ತಂದೆ ಕೂಡಲಸಂಗಮದೇವನಲ್ಲಿಗೆ ಹೋಗಲೀಯದಯ್ಯಾ! ||೪||

ಅಂದಣವನೇಱಿದ ಸೊಣಗನಂತೆ-
ಕಂಡೊಡೆ ಬಿಡದು ಮುನ್ನಿನ ಸ್ವಭಾವವನು;
ಸುಡು! ಸುಡು!! ಮನವಿದು ವಿಷಯಕ್ಕೆ ಹರಿವುದು;
ಮೃಡ, ನಿಮ್ಮನನುದಿನ ನೆನೆಯಲೀಯದು.
ಎನ್ನೊಡೆಯ ಕೂಡಲ ಸಂಗಮದೇವಾ,
ನಿಮ್ಮ ಚರಣವ ನೆನೆವಂತೆ ಕರುಣಿಸು,
ಸೆಱಗೊಡ್ಡಿ ಬೇಡುವೆ, ನಿಮ್ಮ ಧರ್ಮ! ||೫||

ಬೆಳೆಯ ಭೂಮಿಯೊಳೊಂದು ಪ್ರಳಯದ ಕಸ ಹುಟ್ಟಿ
ತಿಳಿಯಲೀಯದು, ಎಚ್ಚಱಲೀಯದು!
ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ, ಲಿಂಗತಂದೆ;
ಸುಳಿದೆಗೆದು ಬೆಳೆವೆನು, ಕೂಡಲಸಂಗಮದೇವಾ ||೬||