ಬರುತ್ತಿದೆ ಬಾನ ನಾಟಕ - ಸೂರ್ಯಗ್ರಹಣ

ಬರುತ್ತಿದೆ ಬಾನ ನಾಟಕ - ಸೂರ್ಯಗ್ರಹಣ

ಬರಹ

ಮುಂದಿನ ಶುಕ್ರವಾರ (1.8.2008) ಸಂಜೆ ನಾಲ್ಕರಿಂದ ಐದು ಗಂಟೆಯ ನಡುವೆ ಒಂದು ಸುಂದರ ಬಾನನಾಟಕ ನಿಮಗಾಗಿಯೋ ಎನ್ನುವಂತೆ ನಿಸರ್ಗ ಪ್ರದರ್ಶಿಸಲಿದೆ. ಮೋಡ ಮತ್ತು “ಮುಂಗಾರು ಮಳೆ”ಯ ಕಿರಿಕಿರಿ ಇಲ್ಲದೇ ಹೋದರೆ ನೀವು ಅದನ್ನು ಎಚ್ಚರಿಕೆಯಿಂದ ನೋಡಿ ಆನಂದಿಸಬಹುದು. ಅಂದು ಸಂಜೆ ಸೂರ್ಯನ ಸ್ವಲ್ಪಾಂಶ ಮರೆಯಾಗುವ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಲಿದೆ.
ನಿಮಗೆ ಗೊತ್ತು, ಬೆಳಕು ಪಾರದರ್ಶಕ ಗಾಜಿನ ಮೂಲಕ ಹಾದು ಹೋದರೆ ನೆರಳು ಉಂಟಾಗದು. ಆದರೆ ಅಪಾರದರ್ಶಕ ವಸ್ತುವಿನ ಮೇಲೆ ಪಾತವಾದಾರೆ? ವಸ್ತು ಬೆಳಕನ್ನು ತಡೆಯುತ್ತದೆ - ಇನ್ನೊಂದು ಬದಿಯಲ್ಲಿ ನೆರಳು ಉಂಟಾಗುತ್ತದೆ. ಸೂರ್ಯನ ಬಿಸಿಲಿನಲ್ಲಿ ಗಿಡ ಮರಗಳ ನೆರಳು ಉಂಟಾಗುವುದು ಹೀಗೆಯೇ. ಇವು ಭೂಮಿಯಲ್ಲಿ ಬೆಳಕಿನ ನೆರಳಿನಾಟ. ಇಂಥದೇ ನೆರಳಿನಾಟ ಬಾನಾಂಗಣದಲ್ಲಿ ಸಂಭವಿಸಿದಾಗ ಚಂದ್ರ ಗ್ರಹಣ ಅಥವಾ ಸೂರ್ಯಗ್ರಹಣ ಘಟಿಸುತ್ತದೆ.
ಕತ್ತಲೆ ಕೋಣೆಯಲ್ಲಿ ಮೇಣದ ಬತ್ತಿ ಇದೆ ಎಂದು ಊಹಿಸಿಕೊಳ್ಳಿ. ಅದರೆದುರು ಒಂದು ಅಪಾರದರ್ಶಕ ಚೆಂಡನ್ನು ಹಿಡಿದಿದ್ದೀರಿ. ಚೆಂಡಿನ ನೆರಳು ಬೀಳುತ್ತಿದೆ ಗೋಡೆಯ ಮೇಲೆ. ಮೇಣದ ಬತ್ತಿ ಮತ್ತು ಚೆಂಡನ್ನು ಜೋಡಿಸುವ ರೇಖೆಯ ಭಾಗದಲ್ಲಿ ನೆರಳು ಅತ್ಯಂತ ಗಾಢವಾಗಿದ್ದರೆ, ಉಳಿದ ಭಾಗದಲ್ಲಿ ಅರೆ ನೆರಳು ಮುಸುಕಿರುತ್ತದೆ. ವಿಜ್ಞಾನದ ಭಾಷೆಯಲ್ಲಿ ಗಾಢ ನೆರಳಿನ ಭಾಗವನ್ನು “ಅಂಬ್ರ” ಎಂದೂ, ಅರೆ ನೆರಳಿನ ಭಾಗವನ್ನು “ಪಿನಂಬ” ಎಂದೂ ಕರೆಯುತ್ತೇವೆ. ಅಂಬ್ರದ ಭಾಗದಿಂದ ನಿಮಗೆ ಮೇಣದ ಬತ್ತಿ ಗೋಚರಿಸದು. ಏಕೆಂದರೆ ಮೇಣದ ಬತ್ತಿಯನ್ನು ಚೆಂಡು ಸಂಪೂರ್ಣ ಮರೆಮಾಡಿರುತ್ತದೆ.

ಇದಕ್ಕೆ ಸಂವಾದಿಯಾದದ್ದು ಬಾನಿನಲ್ಲಿ ಉಂಟಾದಾಗ ಗ್ರಹಣಗಳು ಸಂಭವಿಸುತ್ತವೆ. ಮೇಣದ ಬತ್ತಿಯ ಸ್ಥಾನವನ್ನು ಹೊಳೆವ ಸೂರ್ಯ ಅಲಂಕರಿಸಿದೆ. ಚೆಂಡು ಇರುವಲ್ಲಿ ಚಂದ್ರ. ಗೋಡೆಯ ಸ್ಥಾನದಲ್ಲಿ ಭೂಮಿಯನ್ನು ಕಲ್ಪಿಸಿಕೊಳ್ಳಿ. ಸೂರ್ಯನ ಬೆಳಕು ಚಂದ್ರನ ಮೇಲೆ ಪಾತವಾಗುತ್ತಿದೆ ಮತ್ತು ಅದರ ವಿರುದ್ಧ ದಿಶೆಯಲ್ಲಿ ಚಂದ್ರನ ನೆರಳು ಬೀಳುತ್ತಿದೆ. ಈ ನೆರಳಿರುವ ಭಾಗಕ್ಕೆ ಭೂಮಿ ಬಂದಾಗ ಸೂರ್ಯ ಮರೆಯಾಗುತ್ತಾನೆ - ಪೂರ್ಣವಾಗಿ ಅಥವಾ ಅಂಶಿಕವಾಗಿ. ಇದುವೇ ಸೂರ್ಯಗ್ರಹಣ.
ಚಂದ್ರನ ಕಡು ನೆರಳಿನ ಭಾಗ ಭೂಮಿಯ ಯಾವ ಭಾಗದ ಮೇಲೆ ಬೀಳುತ್ತದೋ, ಆ ಭಾಗದ ಜನರಿಗೆ ಹಗಲಿನಲ್ಲಿಯೇ ಸೂರ್ಯ ಮರೆಯಾಗುತ್ತಾನೆ. ತುಸು ಹೊತ್ತು - ಹೆಚ್ಚೆಂದರೆ ಒಂದೆರಡು ನಿಮಿಷಗಳ ಕಾಲ - ಕಗ್ಗತ್ತಲು ಆವರಿಸುತ್ತದೆ. ಇದು ಪೂರ್ಣ ಸೂರ್ಯಗ್ರಹಣ.
ಚಂದ್ರನ ಅರೆ ನೆರಳು ಆವರಿಸಿರುವ ಭಾಗದ ಮಂದಿಗೆ ಸೂರ್ಯನ ಒಂದು ಪಾರ್ಶ್ವವಷ್ಟೇ ಮರೆಯಾಗುತ್ತದೆ. ಮಬ್ಬು ಕತ್ತಲು. ಇದು ಪಾರ್ಶ್ವ ಅಥವಾ ಖಂಡ ಸೂರ್ಯಗ್ರಹಣ. ಅಗೋಸ್ಟ 1ರ ಸಂಜೆ ನಮಗೆ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಲಿದೆ.
ಸೂರ್ಯನ ಬೆಳಕು ಚಂದ್ರನ ಮೇಲೆ ಪಾತವಾಗಿ, ಆ ಬೆಳಕು ಅಲ್ಲಿಂದ ಪ್ರತಿಫಲನಗೊಂಡು ನಮಗೆ ಚಂದ್ರ ಕಾಣಿಸುತ್ತಾನೆ. ಸೂರ್ಯ ಪ್ರಕಾಶದಿಂದ ಚಂದ್ರನ ಅರ್ಧಗೋಳ ಬೆಳಗಿ ನಮಗೆ ಆ ಭಾಗ ಪೂರ್ತಿಯಾಗಿ ಗೋಚರಿಸಿದರೆ ಅದು ಹುಣ್ಣಿಮೆ. ಹೀಗಾಗಬೇಕಾದರೆ ಸೂರ್ಯ, ಭೂಮಿ ಮತ್ತು ಚಂದ್ರ ಸರಿ ಸುಮಾರು ಒಂದೇ ರೇಖೆಯಲ್ಲಿರಬೇಕು. ಅಂದರೆ ಹುಣ್ಣಿಮೆಯ ದಿನದಂದು ಭೂಮಿಯ ನೆರಳು ಚಂದ್ರನಿರುವ ಬದಿಗೆ ಚಾಚಿರುತ್ತದೆ. ಒಂದು ವೇಳೆ ಸೂರ್ಯ ಭೂಮಿ ಮತ್ತು ಚಂದ್ರ ಕರಾರುವಾಕ್ಕಾಗಿ ಒಂದೇ ರೇಖೆಯಲ್ಲಿ ಬಂದರೆ ಏನಾಗಬಹುದು? ಭೂಮಿಯ ನೆರಳು ಚಂದ್ರನ ಬಿಂಬವನ್ನು ಆವರಿಸುತ್ತದೆ ಮತ್ತು ಚಂದ್ರ ಗೋಚರಿಸದು. ಇದು ಚಂದ್ರ ಗ್ರಹಣ. ಆದರೆ ಎಲ್ಲ ಹುಣ್ಣಿಮೆಗಳಲ್ಲಿ ಚಂದ್ರ ಗ್ರಹಣ ಘಟಿಸದು. ಏಕೆಂದರೆ ಭೂಮಿಯ ಸುತ್ತ ಪರಿಭ್ರಮಿಸುತ್ತಿರುವ ಚಂದ್ರನ ಕಕ್ಷೆಯ ತಲ ಮತ್ತು ಸೂರ್ಯನ ಸುತ್ತ ಪರಿಭ್ರಮಿಸುತ್ತಿರುವ ಭೂಮಿಯ ಕಕ್ಷಾ ತಲ ಪರಸ್ಪರ ಒಂದಷ್ಟು (೫ ಡಿಗ್ರಿ) ವಾಲಿಕೊಂಡಿರುವುದರಿಂದ ಭೂಮಿಯ ನೆರಳು ಎಲ್ಲ ಹುಣ್ಣಿಮೆಯ ದಿನಗಳಲ್ಲಿ ಚಂದ್ರನನ್ನು ಆವರಿಸದು; ಗ್ರಹಣ ಸಂಭವಿಸದು.
ಸೂರ್ಯ - ಚಂದ್ರ ಮತ್ತು ಭೂಮಿ ಸರಿಸುಮಾರು ಒಂದೇ ರೇಖೆಯಲ್ಲಿದ್ದಾಗ ಚಂದ್ರನ ಹೊಳೆವ ಭಾಗ ಕಾಣಿಸದು. ಇದು ಅಮಾವಾಸ್ಯೆ. ಒಂದು ವೇಳೆ ಸೂರ್ಯ- ಚಂದ್ರ ಮತ್ತು ಭೂಮಿ ಏಕ ರೇಖಸ್ಥವಾದರೆ, ಆಗ ಚಂದ್ರನ ನೆರಳು ಭೂಮಿ ಮೇಲೆ ಪಾತವಾಗುತ್ತದೆ. ಸೂರ್ಯ ಗ್ರಹಣ ಸಂಭವಿಸುತ್ತದೆ. ಹೇಗೆ ಎಲ್ಲ ಹುಣ್ಣಿಮೆಗಳಲ್ಲಿ ಚಂದ್ರ ಗ್ರಹಣವಾಗುವುದಿಲ್ಲವೂ, ಅದೇ ರೀತಿ ಎಲ್ಲ ಅಮವಾಸ್ಯೆಯ ದಿನಗಳಲ್ಲಿ ಸೂರ್ಯಗ್ರಹಣ ಸಂಭವಿಸದು. ಎಂದೇ ಸೂರ್ಯಗ್ರಹಣ ಅಪರೂಪದ ವಿದ್ಯಮಾನ.
ಸೂರ್ಯಗ್ರಹಣದ ಸಂದರ್ಭದಲ್ಲಿ ಚಂದ್ರನ ಬಿಂಬದ ನೆರಳು ನಿಧಾನವಾಗಿ ಸೂರ್ಯನ ಬಿಂಬವನ್ನು ಆವರಿಸುತ್ತ ಹೋಗುತ್ತದೆ. ಸೂರ್ಯ ಬಿಂಬ ಸಂಪೂರ್ಣವಾಗಿ ಮರೆಯಾಗುವ ಹತ್ತು ಹದಿನೈದು ನಿಮಿಷಗಳ ಮುನ್ನ ಕತ್ತಲಾಗುತ್ತದೆ. ವಾತಾವರಣದ ಉಷ್ಣತೆ ಕಡಿಮೆಯಾಗುತ್ತದೆ. ಬಾನ ಚತ್ತುವಿನಲ್ಲಿ ನಕ್ಷತ್ರಗಳೂ ಮಿಟುಕುತ್ತವೆ. ಪ್ರಾಣಿ, ಪಕ್ಷಿಗಳಿಗೂ ಆಗ ಗೊಂದಲ. ಪಾರ್ಶ್ವ ಸೂರ್ಯಗ್ರಹಣದಲ್ಲಿ ಇಷ್ಟೆಲ್ಲ ಆಗದೇ ಹೋದರೂ ನಿಸರ್ಗದ ಚೋದ್ಯದ ವೀಕ್ಷಣೆಯ ರೋಚಕ ಸಂತಸ ನಮ್ಮದಾಗುತ್ತದೆ.
ಸೂರ್ಯಗ್ರಹಣದ ವೀಕ್ಷಣೆಯಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ಎಚ್ಚರಿಕೆಗಳುಂಟು. ಸೂರ್ಯೋದಯ ಅಥವಾ ಸೂರ್ಯಾಸ್ತವನ್ನು ಹೊರತು ಪಡಿಸಿ ಉಳಿದ ಸಂದರ್ಭದಲ್ಲಿ “ಸೂರ್ಯಪಾನ” ಮಾಡಲು ಸಾಧ್ಯವಾಗದು. ಏಕೆಂದರೆ ಸೂರ್ಯ ಅಷ್ಟೊಂದು ಪ್ರಖರವಾಗಿ ಹೊಳೆಯುತ್ತದೆ. ಆದರೆ ಗ್ರಹಣ ಕಾಲದಲ್ಲಿ ನೆರಳಿನೊಳಗೆ ಅಡಗಿರುವ ಸೂರ್ಯನ ಬಿಂಬವನ್ನು ನೋಡಲು ಸಾಧ್ಯ. ಆದರೆ ನೇರ ನೋಡುವ ಈ ಕ್ರಮ ದುಸ್ಸಹಾಸದ್ದು. ಏಕೆಂದರೆ ಆ ಹೊತ್ತು ಸುತ್ತಲಿನ ಪರಿಸರದಲ್ಲಿ ಬೆಳಕು ಕಡಿಮೆಯಾಗಿರುತ್ತದೆ. ಸೂರ್ಯನ ಬಿಂಬವನ್ನು ನೋಡುತ್ತ ಇಹವನ್ನು ಮರೆತಿರುತ್ತೇವೆ; ಕಣ್ಣಿನ ಪಾಪೆ ಅಗಲವಾಗಿ ತೆರೆದಿರುತ್ತದೆ. ಹಟಾತ್ತನೆ “ಗ್ರಹಣ ಮೋಕ್ಷ” ವಾಗಿ ಸೂರ್ಯನ ಪ್ರಕಾಶ ಬಿಡುಗಣ್ಣ ವೀಕ್ಷಕನ ಕಣ್ಣಿನಾಳಕ್ಕೆ ರಾಚಿದರೆ, ಮತ್ತೆ ಅವನ ದೃಷ್ಟಿಗೆ ಶಾಶ್ವತ ಗ್ರಹಣವೇ.
ಮೂರು ನಾಲ್ಕು ಎಕ್ಸ್-ರೇ ಫಿಲ್ಮನ್ನು ಒತ್ತೊತ್ತಾಗಿ ಜೋಡಿಸಿ ಅವುಗಳ ಮೂಲಕ ಕೆಲವೇ ಸೆಕುಂಡುಗಳ ಕಾಲ ಸೂರ್ಯಗ್ರಹಣವನ್ನು ನೋಡಬಹುದು. ಪಾತ್ರೆಯಲ್ಲಿ ಸೆಗಣಿಯ ನೀರು ಅಥವಾ ಅರಸಿನದ ನೀರು ಹಾಕಿ, ಅದರಲ್ಲಿ ಕಾಣಿಸುವ ಮಂದ ಪ್ರಕಾಶದ ಸೂರ್ಯಬಿಂಬದಲ್ಲಿ ಗ್ರಹಣದ ವೀಕ್ಷಣೆ ಹೆಚ್ಚು ಸುರಕ್ಷಿತವಾದದ್ದು. ದುರ್ಬೀನು ಅಥವಾ ದೂರದರ್ಶಕದಿಂದ ನೇರ ವಿಕ್ಷಣೆ ಸರ್ವಥಾ ಕೂಡದು. ಅವುಗಳಿಂದ ಸೂರ್ಯನ ಬಿಂಬವನ್ನು ಗೋಡೆಯ ಮೇಲೆ ಅಥವಾ ಬಿಳಿಯ ಹಾಳೆಯ ಮೇಲೆ ಬೀಳಿಸುವ ಮೂಲಕ ಗ್ರಹಣದ ವೀಕ್ಷಣೆ ಮಾಡಬಹುದು.
ಅಗೋಸ್ಟ್ 1ರಂದು ನಮಗೆ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಿದರೆ, ಸೈಬೀರಿಯಾ, ಅಮೇರಿಕಾದ ಉತ್ತರ ಭಾಗ, ಮಂಗೋಲಿಯಾ ಮತ್ತು ಚೀನಾದ ಜನರು ಅದೃಷ್ಟಶಾಲಿಗಳು. ಅವರಿಗೆ ಪೂರ್ಣ ಸೂರ್ಯಗ್ರಹಣ ಕಾಣಿಸಲಿದೆ. ಅದು ಕೂಡ ಹೆಚ್ಚು ಹೊತ್ತಿಲ್ಲ - ಎರಡೂವರೆ ನಿಮಿಷ ಮಾತ್ರ. ಇಷ್ಟು ಸಾಕು ಮರೆಯಲಾರದ ಅನುಭವ ನೀಡುವುದಕ್ಕೆ. ಅಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿದೆಯಂತೆ. ಕಡು ಚಳಿಯ ಸೈಬೀರಿಯಾದಲ್ಲಿ ಇದೀಗ ಬೆಚ್ಚಿಗಿನ ಅನುಕೂಲ ವಾತಾವರಣ - ಉಷ್ಣತೆ ಶೂನ್ಯ ಡಿಗ್ರಿಯ ಆಸುಪಾಸಿನಲ್ಲಿದೆ! ಸೂರ್ಯಗ್ರಹಣ ವೀಕ್ಷಣೆಗೆ ಅಲ್ಲೆಲ್ಲ ಪ್ರವಾಸಿಗಳು ತುಂಬಿ ತುಳುಕುತ್ತಿದ್ದಾರೆ.
ಸೂರ್ಯಗ್ರಹಣ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ನೆನಪಾಗುತ್ತಿದೆ. ಹೀಲಿಯಮ್ ಎಂಬ ಮೂಲವಸ್ತುವನ್ನು ಸೌರ ವಾತಾವರಣದಲ್ಲಿ ಜೆನೆಸೆನ್ (1824-1907) ಆವಿಷ್ಕರಿಸಿದ್ದು ಪೂರ್ಣ ಸೂರ್ಯಗ್ರಹಣ ಸಂದರ್ಭದಲ್ಲಿ ನಡೆಸಿದ ಪ್ರಯೋಗದಿಂದ (1868). ಬೆಳಕಿನ ಕಿರಣ ಗುರುತ್ವ ಕ್ಷೇತ್ರದಲ್ಲಿ ಬಾಗುತ್ತದೆಂದು ನಿರೂಪಿಸುವ ಐನ್‌ಸ್ಟೈನರ (1879-1955) ಸಾರ್ವತ್ರಿಕ ಸಾಪೇಕ್ಷತಾ ಸಿಧ್ಧಾಂತಕ್ಕೆ ಪ್ರಾಯೋಗಿಕ ಸಮರ್ಥನೆ ದೊರಕಿದ್ದು ಕೂಡ ಪೂರ್ಣಸೂರ್ಯಗ್ರಹಣದಲ್ಲೆ. (1916, ಮೇ29). ಖಗೋಳವಿದ ಅರ್ಥರ್‌ಎಡಿಂಗ್ಟನ್ (1882-1944) ಮತ್ತು ಸಂಗಡಿಗರು ದೂರದ ನಕ್ಷತ್ರದಿಂದ ಬರುತ್ತಿರುವ ಬೆಳಕಿನ ಕಿರಣ ಸೌರ ಗುರುತ್ವ ಕ್ಷೇತ್ರದಲ್ಲಿ ಬಾಗುವುದನ್ನು ಪ್ರಾಯೋಗಿಕವಾಗಿ ಪತ್ತೆ ಮಾಡಿದರು. ಐನ್‌ಸ್ಟೈನರ ಶಿಷ್ಯೆ ರೊಸೆಂಥಾಲ್‌ಶ್ಚ್ವೆಂಡರ್ ಐನ್‌ಸ್ಟೈನರನ್ನು ಈ ಬಗ್ಗೆ ಅಭಿನಂದಿಸಿದಾಗ ಅವರಂದರಂತೆ “ಸಿಧ್ಧಾಂತ ಸರಿ ಎಂದು ನನಗೆ ಮೊದಲೇ ಅರಿವಿತ್ತು”. ಶಿಷ್ಯೆ ಬಿಡಲಿಲ್ಲ, ಕೆಣಕಿದಳು “ಒಂದು ವೇಳೆ ಸಿಧ್ಧಾಂತ ತಪ್ಪೆಂದು ಸಾಬೀತಾಗಿದ್ದರೆ?” ಐನ್‌ಸ್ಟೈನ್ ತಣ್ಣಗೆ ಉತ್ತರಿಸಿದರು “ನಾನು ಆ ದೇವರ ಬಗ್ಗೆ ವ್ಯಥೆ ಪಡುತ್ತಿದ್ದೆ. ಪುಣ್ಯ, ಸಿಧ್ಧಾಂತ ಸರಿಯಾಯಿತಲ್ಲ!”

ಡಾ.ಎ.ಪಿ.ರಾಧಾಕೃಷ್ಣ, ಪುತ್ತೂರು
apkrishna@gmail.com