ಫಲಿಸಿದ ಪ್ರೇಮ

ಫಲಿಸಿದ ಪ್ರೇಮ

ಪುಷ್ಪಳ ಅಳು ನಿಲ್ಲೋ ಹಾಗೆ ಕಾಣ್ತಿರ್ಲಿಲ್ಲ.ನಾವು ಬಂದಾಗಿನಿಂದ ಒಂದೆ ಸಮನೆ ಅಳ್ತಾನೆ ಇದ್ದಾಳೆ.ಅವರ ಮಾವ,ಮಾವನ ಮಗ,ಅಪ್ಪ,ಚಂದ್ರು ಎಲ್ಲರ ಎಲ್ಲಾ ಪ್ರಶ್ನೆಗಳಿಗೂ ಅಳುವೊಂದೆ ಉತ್ತರವಾಗಿತ್ತು.ಪಾ..ಪ..ಅವಳೇನು ಮಾಡಿಯಾಳು..ಪ್ರಶ್ನೆಗಳು ಹಾಗೆ ಇದ್ದವು.ಅವರ ಅಪ್ಪ,'ಪುಷ್ಪ,ನಿನಗೆ ನಾನ್ ಬೇಕಾ ಅವನು ಬೇಕಾ?' ಅಂದ್ರೆ,ಚಂದ್ರು,'ಪುಷ್ಪ,ನೀನು ಬೇಡ ಅಂದ್ರೆ ನಾನು ಹೊರಟೋಗ್ತೀನಿ' ಅಂತ.
ಅಲ್ಲಿ ನಡೀತಾ ಇದ್ದದ್ದು ಪುಷ್ಪ,ಚಂದ್ರಶೆಖರ್ ಮದುವೆ ಮಾತುಕತೆ.ಅದನ್ನೇನು ಮದುವೆ ಮಾತುಕತೆ ಅನ್ನಬೇಕೋ ಅಥವ ಇನ್ನೇನೊ ಗೊತ್ತಿಲ್ಲ.ನಾನು ಏನೋ ಭಂಡ ಧೈರ್ಯ ಮಾಡಿ,ಪುಷ್ಪ,ಚಂದ್ರುವಿಗೆ ಧೈರ್ಯಕ್ಕಾಗಿ ಜೊತೆಯಾಗಿ ಹೋಗಿದ್ದೆ.ಆದರೆ ನಿಜವಾಗಲು,ಅವರಿಬ್ಬರಿಂತ ನಾನೇ ಹೆಚ್ಚು ಹೆದರಿದ್ದೆ.ಪುಷ್ಪ, ನಾನು ಇಲ್ಲಿಗೆ ಬಂದಾಗಲಿಂದ ನನ್ನ ಜೊತೆಗಿದ್ದಾಳೆ.ಚಂದ್ರು,ಪುಷ್ಪಳ ಪ್ರೇಮಿ ಅಂತ ಈವಾಗಾಗ್ಲೆ ನಿಮ್ಮೆಲ್ಲಾರಿಗು ಗೊತ್ತಾಗಿದೆ.ಎಲ್ಲರ ಹಾಗೆ ಅವ್ರಿಬ್ಬರ ಮಧ್ಯೆ ಒಂದು ಪ್ರೇಮ ಕತೆಯಿದೆ.ಪುಷ್ಪಳಿಗೆ ಚಂದ್ರು ಪರಿಚಯವಾದದ್ದು ಶಾಲೆಯ ದಿನಗಳಲ್ಲಿ.ಇಬ್ಬರು ಒಂದೆ ಊರು ಒಂದೇ ಕೇರಿಯಾದ್ದರಿಂದ,ಇಬ್ಬರು ಒಬ್ಬರನ್ನೊಬ್ಬರು ಹೆಚ್ಚೆಚ್ಚು ನೋಡಸಿಗುತ್ತಿದ್ದರಿಂದ,ಆಗಷ್ಟೇ ಪ್ರಾಯಕ್ಕೆ ಬರುತ್ತಲಿದ್ದರಿಂದಲೋ ಏನೋ ಚಂದ್ರುವಿಗೆ ಪುಷ್ಪಳ ಮೇಲೆ ಪ್ರೀತಿ ಬಂದಿದೆ.ಒಂದು ದಿನ ಅವನು ತನ್ನ ಪ್ರೇಮ ನಿವೇದನೆ ಮಾಡಿದ್ದಾನೆ.ಆದ್ರೆ ಪುಷ್ಪ,ಅವನಿನ್ನೂ ಜೀವನದಲ್ಲಿ ಒಂದು ನೆಲೆ ಕಂಡಿಲ್ಲ ಎಂಬ ಕಾರಣ ಕೊಟ್ಟು,ಅವನನ್ನು,ಅವನ ಪ್ರೀತಿಯನ್ನು ತಿರಸ್ಕರಿಸಿದ್ದಾಳೆ.ಅವತ್ತಿಗೆ ಚಂದ್ರು ಅವಳನ್ನ ಮರೆತಿದ್ದರೆ,ಈ ಕತೆ ಇರುತ್ತಿರಲಿಲ್ಲ.ಆದರೆ ಅವನು ಮದುವೆ ಆದ್ರೆ ಅವಳನ್ನೆ ಆಗೋದು ಅಂತ ನಿರ್ಧರಿಸಿದ್ದ.ಚಂದ್ರು ಆಗಿನ್ನೂ ದಿಪ್ಲೊಮಾ ಮುಗಿಸಿದ್ದ.ಅವರ ಮನೆ ಕಡೆ ಅಷ್ಟೊಂದು ಅನುಕೂಲ ಇಲ್ಲದಿದ್ದರಿಂದ,ಕೆಲಸಕ್ಕೆ ಸೇರಬೇಕಾಗಿ ಬಂತು.ಆದ್ರೆ ಅವನಿಗೆ ಗೊತ್ತಿತ್ತು,ಈ ಸಣ್ಣ ಕೆಲಸ ಇಟ್ಟುಕೊಂಡು ಪುಷ್ಪಳಚ್ ಮುಂದೆ ಹೋಗೋದ್ರಿಂದ ಪ್ರಯೋಜನ ಇಲ್ಲ ಅಂತ.ಪಾರ್ಟ್ ಟೈಮ್ ಎಂಜಿನಿಯರಿಂಗ್ ಓದಿದ ನಂತರವಷ್ಟೆ ಅವಳ ಬಳಿ ಬಂದ.ಈ ಸಲ ಅವಳಿಗೆ ಅವನನ್ನ ಬೇಡ ಅನ್ನಲು ಕಾರಣಗಳಿರಲಿಲ್ಲ.ಅವಳು ಅಸ್ತು ಅಂದಳು.ಎಲ್ಲ ಹುಡುಗರ ಹಾಗೆ ಚಂದ್ರು ಕೂಡ ಅವರಮ್ಮನಿಗೆ ತುಂಬ ಹತ್ತಿರ.ತನ್ನೆಲ್ಲಾ ವಿಷಯಗಳನ್ನು ಅಮ್ಮನ ಬಳಿ ಹೇಳಿಕೊಳುತ್ತಿದ್ದ ಚಂದ್ರು ಪುಷ್ಪಳ ಬಗ್ಗೆಯೂ ಹೇಳಿದ್ದ.ಎಲ್ಲಾ ಹುಡುಗರ ಅಮ್ಮಂದಿರ ಹಾಗೆ, ಅವನಮ್ಮನು ಸಹ ಮಗನ ಸಂತೋಷವೇ ತನ್ನ ಸಂತೋಷ ಎಂದು ತುಟಿಯಂಚಿನಲ್ಲಿ ನಕ್ಕು, ಸೆರಗಂಚಿನಲ್ಲಿ ಕಣ್ಣೊರೆಸಿಕೊಂಡಿದ್ದರು.
ಚಂದ್ರುವಿನ ಶ್ರಮಕ್ಕೆ ಪ್ರತಿಫಲ ಸಿಕ್ಕಿತ್ತು.ಇಬ್ಬರಿಗೂ ಇಲ್ಲೇ ಕೆಲಸ ಸಿಕ್ಕಿದ್ದರಿಂದ ಇಬ್ಬರೂ ಇಲ್ಲಿಗೆ ಬಂದರು.ಪುಷ್ಪ ನನ್ನ ರೂಂ ಮೇಟ್ ಆದಳು.ಚಂದ್ರು ತನ್ನ ಗೆಳೆಯರ ಜೊತೆ ರೂಂ ಹಿಡಿದ.ಹೀಗೆ ನನಗೆ ಸಿಕ್ಕ ಪುಷ್ಪ,ಬಿಡುವಿನ ವೇಳೆಯಲ್ಲಿ ನನಗೆ ಬಿಡಿ ಬಿಡಿಯಾಗಿ ಹೇಳಿದ್ದನ್ನೆಲ್ಲಾ ನಿಮಗೆ ಹೇಳಿಯಾಯಿತು.ಇನ್ನು ಮುಂದೇನಾಯ್ತು ಅನ್ನೋದು..
ಇಲ್ಲಿಗೆ ಬಂದ ಇಬ್ಬರು ಕೆಲಸಕ್ಕೆ,ಔಟಿಂಗೆ ಅಂತ ಆರಾಮಾಗಿ ಎರಡು ವರ್ಷ ಕಳೆದರು.ಪುಷ್ಪ ಒಳ್ಳೆಯ ಹುಡುಗಿ.ಹರಳು ಹುರಿದಂತೆ ಮಾತನಾಡುತ್ತಾಳೆ,ಎಲ್ಲರನ್ನು ಮಾತಿಗೆ ಎಳೆಯುತ್ತಾಳೆ.ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳೋದಿಲ್ಲ.ಈಗ ಪುಷ್ಪಳ ಮದುವೆಯ ವಯಸ್ಸು.ಅವಳ ಮನೆಯಲ್ಲಿ 'ವರಾನ್ವೇಷಣೆ' ಶುರುವಾಯಿತು.ಇನ್ನು ತಡ ಮಾಡಲಾಗದೆ,ಪುಷ್ಪ ಮನೆಯಲ್ಲಿ ವಿಷಯ ಹೇಳಿದಳು.ಅದರ ಪರಿಣಾಮವೇ ನಾನೀಗ ಇಲ್ಲಿ ನಿಂತಿರೋದು.ಸುಮಾರು ನಾಲ್ಕು ಗಂಟೆಗಳ ಸತತ ಮಾತುಕತೆಯಿಂದ,ಪುಷ್ಪ ತನ್ನ ತಂದೆ ತಾಯಿ ಜೊತೆ ಊರಿಗೆ ವಾಪಸ್ಸು ಹೋಗೋದು ಅಂತ ತೀರ್ಮಾನವಾಯಿತು.ಇದರಲ್ಲಿ ಮುಖ್ಯ ಪಾತ್ರ ವಹಿಸಿದ್ದು,ಅವರ ಮಾವನ ಮಗನ ಚಾಲಾಕಿತನ .ಅವನೆ ಪುಷ್ಪಳಿಗೆ ಸುಮಾರು ಎರಡು ಗಂಟೆ ರೂಮಿನಲ್ಲಿ ಬೋಧಿಸಿ(ಬಂದಿಸಿ,ಬೆದರಿಸಿ) ನಂತರ ಅವಳು ನಮ್ಮ ಬಳಿ ಬಂದು,'ನೀವಿಬ್ಬರು ಹೊರಡಿ,ನಾನು ಅಪ್ಪನ ಜೊತೆ ಊರಿಗೆ ಹೋಗ್ತೀನಿ.ಆರು ತಿಂಗಳ ನಂತರ ಅಪ್ಪ ಅಮ್ಮನನ್ನು ಒಪ್ಪಿಸಿ ಕಾಲ್ ಮಾಡ್ತೀನಿ' ಎನ್ನುವಂತೆ ಮಾಡಿದ್ದು! ನನಗೆ ಗಾಬರಿ ಆಯ್ತು.ಅಲ್ಲ,ಈಗ ಒಪ್ಪಿಸಲಿಕ್ಕೆ ಆಗದ್ದು ಇನ್ನು ಆರು ತಿಂಗಳು ಕಳೆದ ನಂತರ ಯಾವ ಪವಾಡದಿಂದ ಸಾಧ್ಯ ಅಂತ?ಅಲ್ಲದೆ ಮುಂಚಿಂದ ಇವರಿಬ್ಬರ ಪ್ರೀತಿಗೆ ಬೆಂಬಲ ಸೂಚಿಸುತ್ತಿದ್ದ ಪುಷ್ಪಳ ಅಣ್ಣ ಇಷ್ಟೆಲ್ಲ ಮಾತುಕತೆ ನಡೆಯುವಾಗ ಏನು ಮಾತನಾಡದೆ ಉಳಿದಿದ್ದ.ಅಂದರೆ ಅವನ ಬೆಂಬಲವೂ ಇಲ್ಲ ಎನ್ನುವುದು ಖಾತ್ರಿಯಾದಂತೆಯೇ.ನಾನು ಇದೆನೆಲ್ಲಾ ಯೋಚಿಸುತ್ತಿರಬೇಕಾದರೆ, ಚಂದ್ರು ಆ ಆರು ತಿಂಗಳ ಕರಾರಿಗೆ ಒಪ್ಪಿಯಾಗಿತ್ತು!ಕರಾರಿನ ಪ್ರಕಾರ ಅವರಿಬ್ಬರು ಇನ್ನು ಮುಂದೆ ಭೇಟಿಯಾಗುವುದಾಗಲಿ,ಫೋನ್ ಮಾಡುವುದಾಗಲಿ ಮಾಡುವಂತಿರಲಿಲ್ಲ.ದಿನ ಒಬ್ಬರನ್ನೊಬ್ಬರು ನೋಡದೆ ಇರಲಿಕ್ಕಾಗದವ್ರು,ದಿನಕ್ಕೆ ಹತ್ತು ಸರ್ತಿ ಕಾಲ್ ಮಾಡಿ ಮಾತನಾಡುತ್ತಿದ್ದವರು,ಇಂತಹ ಒಂದು ಕರಾರಿಗೆ ಹೇಗೆ ಒಪ್ಪಿದರೆನ್ನುವುದು ನನಗೆ ಅರ್ಥವಾಗಲೇ ಇಲ್ಲ!ಇನ್ನೇನು ಎಲ್ಲರನ್ನು ಒಪ್ಪಿಸಿ ಮದುವೆ ದಿನ ನಿಶ್ಚಯಿಸಿಯೆ ಬರುವುದೆಂದುಕೊಂಡು ಹೋಗಿದ್ದ ನಾವಿಬ್ಬರು ಪೆಚ್ಚು ಮೋರೆ ಹಾಕಿಕೊಂಡು ಹೊರಗೆ ಬಂದೆವು.ಹಸಿವಿನಿಂದ ಕಂಗೆಟ್ಟಿದ್ದ ಇಬ್ಬರೂ ಏನು ಮಾತನಾಡದೆ,ಹೊಟ್ಟೆಗೆ ಏನಾದರು ಹಾಕಲು ಹತ್ತಿರದಲ್ಲಿದ್ದ ಹೋಟೆಲಿಗೆ ಹೋಗಿ ಕುಳಿತೆವು. ನಾನು ಚಂದ್ರುವಿಗೆ 'ಅಲ್ಲೊ ಮಾರಾಯ...ಯಾವ ನಂಬಿಕೆ ಮೇಲೆ ಆರು ತಿಂಗಳಿಗೆ ಒಪ್ಪಿಕೊಂಡು ಬಂದೆಯೊ?ಅಷ್ಟರೊಳೊಗೆ ಅವರು ಅವಳಿಗೆ ಬೇರೆ ಮದುವೆ ಮಾಡಿಬಿಟ್ಟರೆ ಏನೋ ಮಾಡ್ತೀಯ' ಅಂತೆಲ್ಲ ಕೇಳ್ತಾ(ಕೋರೀತಾ,ಕೆರಳಿಸ್ತಾ) ಇದ್ದೆ.ಅವನು ಏನೂ ಮಾತನಾಡದೆ ಸುಮ್ಮನೆ ತಟ್ಟೆ ನೋಡ್ತಾ ಕೂತಿದ್ದ.ಪಾಪ ಅವನು ತಾನೆ ಏನ್ ಮಾಡ್ತಾನೆ?ಬೆಳಗ್ಗೆ ಇಂದ ಒಂದೇ ಸಮನೆ ಬೈಗುಳಗಳ,ಬುದ್ದಿಮಾತುಗಳ ಮಳೆ ಸುರಿಸ್ಕೊಂಡಿದ್ದಾನೆ.ನಾನು ಸಹ ತಲೆ ತಿನ್ನುವುದು ಬೇಡ ಅಂತ ಸುಮ್ಮನಾದೆ.ಊಟವಾದ ಬಳಿಕ ಇಬ್ಬರು ಅವರವರ ರೂಂ ಸೇರಿಕೊಂಡೆವು.
ಸಂಜೆಯಾಗುತ್ತಲೆ ಪುಷ್ಪ ನನಗೆ ಕಾಲ್ ಮಾಡಿ ಚಂದ್ರುವಿನ ರೂಂ ಬಳಿ ಬರಹೇಳಿದಳು.ನಾನು ಯಾಕೆ ಏನು ಕೇಳಿದರೆ,'ಬೇಗ ಬಾ ತುಂಬ ಅರ್ಜೆಂಟ್' ಎಂದಷ್ಟೆ ಉಸುರಿದಳು.ನನ್ನ ರೂಂ ಇಂದ ಅಲ್ಲಿಗೆ ಹತ್ತು ನಿಮಿಷಗಳ ದೂರ.ನಾನಲ್ಲಿಗೆ ಹೋಗಿ ಏನಾಯಿತೆಂದು ನೋಡಿದರೆ,ಪುಷ್ಪ ಮತ್ತೆ ಅಳಲು ಶುರುವಿಟ್ಟಿದ್ದಳು.ಪುಷ್ಪ ಇಲ್ಲಿಗೆ ಹೇಗೆ,ಯಾಕೆ ಬಂದಳೆನ್ನುವುದು ತಿಳಿಯದೆ ತಬ್ಬಿಬ್ಬಾದೆ.ಚಂದ್ರು ಹೇಳಿದ,ನಾವಿಬ್ಬರು ಬಂದ ಮೇಲೆ,ಪುಷ್ಪಳ ಅಪ್ಪ ಮತ್ತು ಅವರ ಮಾವ ಅವಳಿಗೆ ತುಂಬ ಹೊಡೆದು ಒಂದು ರೂಮಿನಲ್ಲಿ ಬಂಧಿಸಿದ್ದರಂತೆ. ಅವಳ ಅಣ್ಣ ಅವಳ ರೂಮಿನ ಬಾಗಿಲು ತೆಗೆದು,ಅವಳಿಗೆ ಓಡಿ ಹೋಗಲು ಹೇಳಿದರಂತೆ!ನನಗೆ ನನ್ನ ಕಿವಿಗಳನ್ನೆ ನಂಬಲಾಗದೆ,ಮತ್ತೆ ಪುಷ್ಪಳ ಬಾಯಿಂದ ಎಲ್ಲ ಕೇಳಿ,ಸಿನಿಮೀಯ ರೀತಿಯಲ್ಲಿ ಅವಳಿಗೆ ಸಹಾಯ ಮಾಡಿದ ಅವಳ ಅಣ್ಣನಿಗೆ ಮನದಲ್ಲೆ ನಮಿಸಿದೆ.
ಇಂದು ಬೆಳಗ್ಗೆ ಪುಷ್ಪ ಚಂದ್ರುರ ಮದುವೆ.ಅಪ್ಪ,ಅಮ್ಮ,ಬಂಧು,ಬಳಗ ಯಾರು ಇಲ್ಲದೆ,ಕೆಲವೆ ಸ್ನೆಹಿತರ ಮಧ್ಯದಲ್ಲಿ ಮದುವೆಯಾಗುವುದಕ್ಕೆ ಅವರಿಗೆ ಅನಾಥ ಭಾವ ಕಾಡುತ್ತೊ ಇಲ್ಲವೊ,ಪುಷ್ಪ ಇಲ್ಲದ ರೂಮಿನಲ್ಲಿ ನನಗಂತು ಅನಾಥ ಭಾವ. ಅವರಿಬ್ಬರ ಬಾಳು ಹಸನಾಗಿರಲಿ.

Rating
No votes yet

Comments