ತೀರ ಸಾಮಾನ್ಯವಾದ ತೆರೆದಿದೆ ಮನೆ ಓ ಬಾ ಅತಿಥಿ ಕವನವನ್ನು ಕುರಿತು

ತೀರ ಸಾಮಾನ್ಯವಾದ ತೆರೆದಿದೆ ಮನೆ ಓ ಬಾ ಅತಿಥಿ ಕವನವನ್ನು ಕುರಿತು

ಕೆಲವು ದಿನಗಳ ಹಿಂದೆ ಸಂಪದದ ಓದುಗರೊಬ್ಬರು ಕುವೆಂಪು ಅವರ ಈ ಕವಿತೆಯ ಕೆಲವು ಪದಗಳ ಬಗ್ಗೆ ಪ್ರಶ್ನೆಯನ್ನು ಕೇಳಿದ್ದರು. ಆಗ ಕವಿತೆ ಕೈಗೆ ಸಿಕ್ಕಿರಲಿಲ್ಲ, ಸಿಕ್ಕ ಮೇಲೆ ನಾನು ಊರಲ್ಲಿರದೆ ಸಮಯವಾಗಿರಲಿಲ್ಲ. ಈಗ ಯಾರು ಆ ಪ್ರಶ್ನೆ ಕೇಳಿದ್ದರೋ ಹುಡುಕಲು ಆಗದು. ಆದರೆ ಈ ಟಿಪ್ಪಣಿ ಕವಿತೆಯಲ್ಲಿ ಆಸಕ್ತರಾದವರಿಗೆ ಸಹಾಯವಾದೀತೆಂದು ಬರೆದಿರುವೆ.
ಕುವೆಂಪು ಅವರ ಈ ಕವಿತೆ ತೀರ ಸಾಮಾನ್ಯ. ಭಾವಗೀತೆಯಾಗಿ ಸಿನಿಮಾದಲ್ಲಿ ಬಳಕೆಯಾಗಿ ಪ್ರಿಯವಾಗಿದೆ, ಆದರೆ ನಿಧಾನ ಓದಿಗೆ ಹಲವಾರು ಪ್ರಶ್ನೆಗಳನ್ನು ಹಾಗೇ ಉಳಿಸುತ್ತದೆ.
ಇದು ಪ್ರೇಮ ಕಾಶ್ಮೀರ ಸಂಗ್ರಹದ ಕವಿತೆ. ಸಂಗ್ರಹ ಪ್ರಕಟವಾದದ್ದು ೧೯೪೬ರಲ್ಲಿ.

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯ ಹೊಸಬಾಳನು ತಾ ಅತಿಥಿ

ಈ ಸಾಲುಗಳ ನಂತರದ ಸ್ಟಾಂಜಾ ಸಿನಿಮಾದ ಹಾಡುನಲ್ಲಿ ಬಿಟ್ಟು ಹೋಗಿದೆ. ಅದು ಹೀಗಿದೆ:

ಎಲ್ಲಾ ಇದೆ ಇಲ್ಲಿ;
ಉಲ್ಲಾಸವೆ ಹಾ ಕುಡಿಮುರುಟಿದ ಬಳ್ಳಿ!
ದೈನಂದಿನತಿಪರಿಚಯ ಮಂದತೆಯನು ತಳ್ಳಿ
ಬಾ, ಚಿರ ನೂತನತೆಯ ಕಿಡಿ ಚೆಲ್ಲಿ
ಓ ನವಜೀವನ ಅತಿಥಿ

ಕವಿ ಇಲ್ಲಿ ನವ ಜೀವನವನ್ನು ಅತಿಥಿ ಎಂದು ಕರೆದಿದ್ದಾರೆ ಸರಿ. ಆದರೆ ಕುಡಿಮುರುಟಿದ ಬಳ್ಳಿಯಂತಿರುವ ಉಲ್ಲಾಸಕ್ಕೆ ನೂತನತೆಯ "ಕಿಡಿ"ಚೆಲ್ಲುವುದಾದರೆ ಬಳ್ಳಿ ಇನ್ನೂ ಪೂರ್ತಿ ಸುಟ್ಟು ಕರಿಕಾಗದೇ! ಅತಿ ಪರಿಚಯದ ಮಂದತೆಯನ್ನು ನಿವಾರಿಸಿ ಹೊಸತನವನ್ನು ತರುವ ಅತಿಥಿಯನ್ನು ಕುರಿತು ಹೇಳುವಾಗ "ಬಳ್ಳಿ" ಮತ್ತು "ಕಿಡಿ" ಪರಸ್ಪರ ಹೊಂದದು ಅನ್ನಿಸದೇ?

ಆವ ರೂಪದೊಳು ಬಂದರು ಸರಿಯೆ
ಬಾ ಅತಿಥಿ!
ಆವ ವೇಷದೊಲಿ ನಿಂದರು ಸರಿಯೆ
ನೀನತಿಥಿ!
ನೇಸರುದಯದೊಲು ಬಹೆಯಾ? ಬಾ, ಅತಿಥಿ!
ತಿಂಗಳಂದದಿ ಬಹೆಯಾ? ಬಾ, ಅತಿಥಿ!
ಇಷ್ಟಮಿತ್ರರೊಲು? ಬಂಧು ಬಳಗದೊಲು?
ಸುಸ್ವಾಗತ ನಿನಗತಿಥಿ!
ಕಷ್ಟದಂದದಲಿ? ನಷ್ಟದಂದದಲಿ?
ಸ್ವಾಗತವದಕೂ ಬಾ ಅತಿಥಿ!
ಈ ಸ್ಟಾಂಜಾದಲ್ಲಿ ಬಳಕೆ ತಪ್ಪಿರುವ ಪದಗಳ ಬಳಕೆ ಓದುಗರಿಕೆ ಕಷ್ಟ ಕೊಟ್ಟಿದೆ. ಬಹೆಯಾ ಎಂಬುದು ಹಳಗನ್ನಡದ ಪ್ರಯೋಗ. ಹೊಸಗನ್ನಡದಲ್ಲಿ "ಬರುವೆಯಾ" ಎಂದಾಗಿ ಬಳಕೆಯಲ್ಲಿದೆ ಅದು. ಈ ಅತಿಥಿಯು ಸೂರ್ಯನ ಉದಯದಂತೆ ಬರುವುದಾದರೆ, ಬೆಳದಿಂಗಳಿನಂತೆ ಬರುವುದಾದರೆ, ಇಷ್ಟ ಮಿತ್ರರಂತೆ ಬರುವುದಾದರೆ, ಬಂಧು ಬಳಗದಂತೆ ಬರುವುದಾದರೆ, ಕಷ್ಟ ನಷ್ಟಗಳ ರೂಪದಲ್ಲಿ ಬರುವುದಾದರೆ, ಯಾವುದೇ ರೂಪದಲ್ಲಿ ಬರುವುದಾದರೂ ಸ್ವಾಗತ.
ಇಲ್ಲಿನ ಯಾಚನೆ ಅಪೂರ್ವ ಅನಿಸಿದರೂ ಇಡೀ ಕವನದಲ್ಲಿ ಅತಿಥಿಯು ಸುಂದರ ಸ್ವರೂಪದಲ್ಲಿ, ಹಿತಕಾರಿಯಾಗಿಯೇ ಬರಲಿ ಎಂಬ ಆಶಯವೇ ಮುಖ್ಯವಾಗಿರುವುದನ್ನು ಕಂಡಾಗ ಈ ಭಾಗದ ಕೊನೆಯ ಎರಡು ಸಾಲುಗಳು ಸುಮ್ಮನೆ ತೋರಿಕೆಗೆ ಹೇಳಿದ್ದು ಅನಿಸುತ್ತದೆ.
ಇಂತಾದರೂ ಬಾ; ಅಂತಾದರೂ ಬಾ;
ಎಂತಾದರೂ ಬಾ; ಬಾ, ಅತಿಥಿ!
ಬೇಸರವಿದನೋಸರಿಸುವ ಹೊಸ ಬಾಳುಸಿರಾಗಿ,
ಬಾ ಅತಿಥಿ!
ಹಾಡುವ ಹಕ್ಕಿಯ ಗೆಲುವಾಗಿ,
ಬಾ ಅತಿಥಿ!
ಮೂಡುವ ಚುಕ್ಕಿಯ ಚೆಲುವಾಗಿ,
ಬಾ ಅತಿಥಿ!
ಕಡಲಾಗಿ,
ಬಾನಾಗಿ,
ಗಿರಿಯಾಗಿ,
ಕಾನಾಗಿ,
ಚಿರನವಚೇತನ ಝರಿಯಾಗಿ;
ಬೇಸರವನು ಕೊಚ್ಚುತೆ ಬಾ ಅತಿಥಿ!
ಉಲ್ಲಾಸದ ರಸಬುಗ್ಗೆಯ ಚಿಮ್ಮಿಸಿ ಬಾ, ಅತಿಥಿ!
ವಿಷಣ್ಣತೆಯನು ಪರಿಹರಿಸಿ
ಪ್ರಸನ್ನತೆಯಾ ಸೊಡರುರಿಸಿ,
ಮನಮಂದಿರದಲಿ ಮಧುರತಿಯಾರತಿಯೆತ್ತುತೆ ಬಾ ಅತಿಥಿ!

ತೆರೆದಿದೆ ಮನೆ, ಓ ಬಾ ಅತಿಥಿ!
ಹೊಸತಾನದ ಹೊಸಗಾನದ ರಸಜೀವವ ತಾ, ಅತಿಥಿ!

ಈಗ ನೋಡಿ, ಅತಿಥಿ ಹೇಗೆ ಬರಬೇಕೆಂಬುದರ ವಿವರಣೆಯಲ್ಲಿ ಹಿಂದೆ ಹೇಳಿದ ಅತಿಥಿಯ "ನೆಗೆಟಿವ್" ರೂಪಗಳು ಮರೆಯಾಗಿಬಿಡುವುದಿಲ್ಲವೇ? ಮತ್ತೆ, ಮಧುರತಿಯಾರತಿ ಎಂಬ ಮಾತು ಸ್ಪಷ್ಟವಾಗಿಯೇ ಶೃಂಗಾರದ ಭಾವದ್ದಲ್ಲವೇ? ಈ ಕವಿತೆ ಪರಸ್ಪರ ವಿರುದ್ಧ ಭಾವಗಳನ್ನು ಒಳಗೊಂಡಿದ್ದರೂ ಅವನ್ನು ಒಂದಾಗಿ, ಹಿತವಾಗಿ ಬೆಸೆಯಲು ಆಗಿಲ್ಲವೆಂದೇ ಇದು ಸಾಮಾನ್ಯ ಕವಿತೆ ಅನಿಸುತ್ತದೆ ನನಗೆ. ಇದು ಹೊಸಬೆಳಕು ಚಿತ್ರದಲ್ಲಿ ರಂಗರಾಯರ ಗೀತ ಸಂಯೋಜನೆಯಲ್ಲಿ, ಕೆಲವು ಸಾಲುಗಳನ್ನು ಬಿಟ್ಟು ಕೊಟ್ಟು, ಸುಂದರವಾಗಿ ಕೇಳುತ್ತದೆ. ಅತಿಥಿಯನ್ನು ಅಹ್ವಾನಿಸುವ ಯಾಚನೆಯ ದನಿ ಪ್ರಿಯವಾಗುತ್ತದೆ. ಆದರೆ ಕವಿತೆಯನ್ನು ಓದಿದಾಗ ಅರ್ಥದ ದೃಷ್ಟಿಯಿಂದ ಉತ್ತರವಿಲ್ಲದ ಪ್ರಶ್ನೆಗಳನ್ನು ಉಳಿಸುತ್ತದೆ.

Rating
Average: 5 (2 votes)

Comments