ಧಾರವಾಡದಲ್ಲೀಗ ರಾಗಿ ಫೇಡೆ

ಧಾರವಾಡದಲ್ಲೀಗ ರಾಗಿ ಫೇಡೆ

ಬರಹ

ಸಿಹಿ-ಖಾರಾ ಕ್ರಾಂತಿಯೊಂದು ಧಾರವಾಡ-ಹುಬ್ಬಳ್ಳಿಯ ಮಧ್ಯಮವರ್ಗದ ಮಹಿಳೆಯರ ಮನೆಯಲ್ಲಿ ಸದ್ದಿಲ್ಲದೇ ಬೀಸತೊಡಗಿದೆ.

ಮನೆಯಲ್ಲಿಯೇ ಹೊಸ ಬಗೆಯ ತಿನಿಸುಗಳನ್ನು ಮಾಡುವುದಲ್ಲದೇ ಅವನ್ನು ಬೇಡಿದ ಪ್ರಮಾಣಕ್ಕೆ ತಾಜಾ ರೂಪದಲ್ಲಿ ಪೂರೈಸುವ ಹೊಸದೊಂದು ಉದ್ಯಮ ಇಲ್ಲೆಲ್ಲ ಸದ್ದಿಲ್ಲದೇ ಬೆಳೆಯತೊಡಗಿದೆ.

ಹುಬ್ಬಳ್ಳಿಯ ಹಳೆಹುಬ್ಬಳ್ಳಿ ಪ್ರದೇಶದಲ್ಲಿರುವ ಸರೋಜಿನಿ ಫುಡ್ ಇಂಡಸ್ಟ್ರೀಸ್ ರಾಗಿಯಿಂದ ಫೇಡೆ ತಯಾರಿಸಿ ಅದ್ಭುತ ಯಶಸ್ಸು ಗಳಿಸಿದ್ದು ಮಹಿಳೆಯರಿಗೆ ಪ್ರೇರಣೆ ನೀಡಿದೆ. ಮಧುಮೇಹ ರೋಗಿಗಳಿಗೆಂದೇ ಸಕ್ಕರೆ ರಹಿತ, ಆದರೆ ಗ್ಲುಕೋಸ್ ಇಲ್ಲದ ಜೈವಿಕ ಸಿಹಿ ಪದಾರ್ಥ ಬಳಸಿ ಸಿಹಿ ತಿನಿಸುಗಳನ್ನು ತಯಾರಿಸುವುದು ಒಂದು ವಿಶೇಷತೆಯಾದರೆ, ಈ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡು, ಗೃಹ ಕೈಗಾರಿಕೆಯನ್ನು ದೊಡ್ಡ ಕೈಗಾರಿಕೆಯಾಗಿಸುವತ್ತ ದಾಪುಗಾಲಿಟ್ಟಿರುವುದು ಇನ್ನೊಂದು ವೈಶಿಷ್ಠ್ಯತೆ.

ಸೀಮಿತ ಬಂಡವಾಳ: ಒಂದು ಕೆಜಿ ರಾಗಿ ಫೇಡೆಗೆ ಮಾರುಕಟ್ಟೆಯಲ್ಲಿ ರೂ.೧೦೦ ಬೆಲೆ ಇದೆ. ಆದರೆ ಸಾಮಾನ್ಯವಾಗಿ ದೊರೆಯುವ ಹಾಲಿನ ಖೋವಾದಿಂದ ತಯಾರಿಸಿದ ಫೇಡೆ ಬೆಲೆ ರೂ.೧೫೦ಕ್ಕೂ ಹೆಚ್ಚು. ಅತಿ ಹೆಚ್ಚು ಪ್ರಮಾಣದಲ್ಲಿ ಸಕ್ಕರೆ ಹಾಗೂ ತುಪ್ಪವನ್ನು ಹೊಂದಿರುವ ಈ ಫೇಡೆ ಎಂದರೆ ಮಧುಮೇಹಿಗಳು ಬೆದರುತ್ತಾರೆ. ಅಲ್ಲದೇ ನಾಲ್ಕೈದು ದಿನಗಳಿಂತ ಹೆಚ್ಚು ಕಾಲ ಖೋವಾ ಫೇಡೆ ಇಡುವುದು ಸಾಧ್ಯವಿಲ್ಲ ಎಂಬುದೂ ಅವರ ದೂರು.

ಈ ಹಿನ್ನೆಲೆಯಲ್ಲಿ ಉದರಮಿತ್ರ ರಾಗಿಯಿಂದ ಫೇಡೆ ತಯಾರಿಸುವ ಸಾಹಸಕ್ಕೆ ಕೈ ಹಾಕಿದರು ಹಳೆ ಹುಬ್ಬಳ್ಳಿಯ ಸರೋಜಿನಿ ಫುಡ್ ಇಂಡಸ್ಟ್ರೀಸ್ ಎಂಬ ಗೃಹ ಕೈಗಾರಿಕೆಯ ಮಾಲೀಕ ಖಂಡೇರಾವ್ ಕಾಟ್ಕರ್. ಪ್ರಾರಂಭದಲ್ಲಿ ಮೂಗು ಮುರಿದವರ ಸಂಖ್ಯೆಯೇ ಅಧಿಕ. ಹಾಲಿನ ಫೇಡೆಗೆ ಪ್ರಖ್ಯಾತವಾದ ಧಾರವಾಡದಲ್ಲಿ ರಾಗಿಯಿಂದ ಮಾಡಿದ ಫೇಡೆ ತಿನ್ನುವವರಾದರೂ ಯಾರು? ಎಂಬ ಟೀಕೆ ಕೇಳಿ ಬಂತು.

ಆದರೆ ಖಂಡೇರಾವ್ ಹಿಂಜರಿಯಲಿಲ್ಲ. ಮಧುಮೇಹ ಹೊಂದಿರುವ ಪರಿಚಯದ ವ್ಯಕ್ತಿಗಳಿಗೆ ಮೊದಲ ಬಾರಿ ರಾಗಿ ಫೇಡೆ ತಯಾರಿಸಿ ನೀಡಿದರು. ಫಲಿತಾಂಶ ಅದ್ಭುತವಾಗಿತ್ತು. ಪರಿಚಯದ ವಲಯದ ಬೇಡಿಕೆ ಹೆಚ್ಚತೊಡಗಿದಂತೆ ರಾಗಿ ಫೇಡಾ ದೊಡ್ಡ ಪ್ರಮಾಣದಲ್ಲಿ ತಯಾರಾಗತೊಡಗಿತು.

ಮಧುಮೇಹಿ ರೋಗಿಗಳಿಗೆಂದೇ ಹಬ್ಬದ ದಿನಗಳಲ್ಲಿ ದೊಡ್ಡ ಪ್ರಮಾಣದ ಗ್ಲುಕೋಸ್ ರಹಿತ, ಆದರೆ ಕೃತಕ ಸಿಹಿ ಹೊಂದಿರುವ ತಿನಿಸುಗಳು ಸರೋಜಿನಿ ಫುಡ್ ಇಂಡಸ್ಟ್ರೀಸ್‌ನಲ್ಲಿ ತಯಾರಾಗುತ್ತವೆ. ಖಂಡೇರಾವ್ ಮಡದಿ ಸರೋಜಿನಿ, ಇಬ್ಬರು ಸೊಸೆಯಂದಿರು ಹಾಗೂ ಇಬ್ಬರು ಮೊಮ್ಮಕ್ಕಳು ಸೇರಿ ನಿರಂತರವಾಗಿ ಕೆಲಸ ಮಾಡುತ್ತಾರೆ. ರಾಗಿ ಫೇಡಾ, ಚಟ್ನಿ, ವಿವಿಧ ಬಗೆಯ ಹೋಳಿಗೆಗಳು, ಖಾರಾ, ಕರಿಂಡಿಯಂತಹ ತಿನಿಸುಗಳನ್ನು ನಿಯಮಿತವಾಗಿ ಖರೀದಿಸುವ ಬೇಕರಿಗಳು ಹುಬ್ಬಳ್ಳಿ ಹಾಗೂ ಧಾರವಾಡ ನಗರಗಳಲ್ಲಿ ಇರುವುದರಿಂದ ಮಾರುಕಟ್ಟೆಯ ಚಿಂತೆ ಇಲ್ಲ.

ಕೇವಲ ತಾಜಾ ತಿನಿಸು: ಪ್ರತಿಯೊಂದು ಬೇಕರಿ ಹಾಗೂ ಮನೆಗೂ ತಾಜಾ ತಿನಿಸನ್ನು ತಯಾರಿಸಿ ಕೊಡುವುದು ಈ ಗೃಹ ಕೈಗಾರಿಕೆಯ ವೈಶಿಷ್ಠ್ಯತೆ. ಮನೆಯಲ್ಲಿ ಖಾಲಿ ಕೂಡಲಾಗದೇ ನಾಲ್ಕು ವರ್ಷಗಳ ಹಿಂದೆ ಪ್ರಾರಂಭಿಸಲಾದ ಈ ಉದ್ಯಮ ಇವತ್ತು ಮನೆ ಮಂದಿಗೆಲ್ಲ ಕೆಲಸ ಕೊಟ್ಟಿದೆ. ನೆಮ್ಮದಿಯುತ ಆದಾಯ ಕೊಟ್ಟಿದೆ. ಹಬ್ಬದ ದಿನಗಳಲ್ಲಿ ದೊಡ್ಡ ಪ್ರಮಾಣದ ಬೇಡಿಕೆ ಇರುವುದರಿಂದ ಅದು ಇವರಿಗೆ ದುಡಿಯುವ ಸೀಜನ್ ಕೂಡ ಹೌದು. ಸರೋಜಿನಿ ಫುಡ್ ಇಂಡಸ್ಟ್ರೀಸ್‌ನ ಮಾದರಿಯನ್ನು ಹಳೆ ಹುಬ್ಬಳ್ಳಿಯ ಕೆಲ ಮನೆಗಳೂ ಅನುಸರಿಸುತ್ತಿರುವುದರಿಂದ, ಇಲ್ಲೆಲ್ಲ ಗೃಹ ಕೈಗಾರಿಕೆಗಳು ಸದ್ದಿಲ್ಲದೇ ಬೆಳೆಯತೊಡಗಿವೆ.

ರಾಗಿ ಫೇಡಾದ ಜತೆಗೆ ರಾಗಿ ಉಂಡೆ (ಲಡ್ಡು), ಹೆಸರು ಬೇಸನ್ ಉಂಡೆ, ಅಂಟಿನುಂಡೆ, ಬೇಸನ್ ಉಂಡೆ, ಕರ್ಚಿಕಾಯಿ, ಶೇಂಗಾ, ಎಳ್ಳು, ಕಡಲೆ ಹಾಗೂ ಕಾಯಿ ಹೋಳಿಗೆಗಳು, ರವಾ ಉಂಡೆಗಳು, ವಿವಿಧ ರೀತಿಯ ಚಟ್ನಿ ಪುಡಿ, ಮಸಾಲೆ ಪುಡಿ, ಮೆಂತ್ಯ ಹಿಟ್ಟು, ಕರಿಂಡಿ, ಉಪ್ಪಿನ ಕಾಯಿಗಳು, ಖಾರಾ ಪದಾರ್ಥಗಳನ್ನು ಇಲ್ಲಿ ತಯಾರಿಸಲಾಗುತ್ತಿದ್ದು, ನಿಯಮಿತ ಗ್ರಾಹಕರು ಹಾಗೂ ಅಂಗಡಿಗಳಿಂದ ಇವಕ್ಕೆ ಬೇಡಿಕೆಯಿದೆ.

ಯಾವುದೇ ರೀತಿಯ ರಾಸಾಯನಿಕ ಪದಾರ್ಥಗಳನ್ನು ಇಲ್ಲಿಯ ವಸ್ತುಗಳಲ್ಲಿ ಬೆರೆಸುವುದಿಲ್ಲ. ಕೃತಕ ಬಣ್ಣ, ವಾಸನೆ ಹಾಗೂ ರುಚಿ ಇಲ್ಲಿಯ ವಸ್ತುಗಳಲ್ಲಿ ಕಾಣಸಿಗುವುದಿಲ್ಲ. ಎಲ್ಲ ವಸ್ತುಗಳೂ ತಾಜಾ, ಸರಳ ಹಾಗೂ ಉದರಸ್ನೇಹಿ. ಮನೆಯಲ್ಲಿಯೇ ತಯಾರಿಸಲ್ಪಡುವುದರಿಂದ ವಿಶಿಷ್ಠ ಸೊಗಸು ಇವಕ್ಕಿದೆ. ಹೀಗಾಗಿಯೇ ಇವಕ್ಕೆ ಬೇಡಿಕೆ ಹೆಚ್ಚು.

ಆಸಕ್ತರು ಖಂಡೇರಾವ್ ಕಾಟ್ಕರ್ ಅವರನ್ನು ಸರೋಜಿನಿ ಫುಡ್ ಇಂಡಸ್ಟ್ರೀಸ್, ಡಾ. ಹಿಟ್ಟಣಗಿ ಕ್ಲಿನಿಕ್ ಹತ್ತಿರ, ಹಳೆ ಹುಬ್ಬಳ್ಳಿ, ಹುಬ್ಬಳ್ಳಿ, ದೂರವಾಣಿ ೦೮೩೬-೫೫೭೬ ೮೬೭ ನಲ್ಲಿ ಸಂಪರ್ಕಿಸಬಹುದು.

- ಚಾಮರಾಜ ಸವಡಿ