ಛೇ.... ಹೀಗಾಗಬಾರದಿತ್ತು ಅಲ್ವಾ...!

ಛೇ.... ಹೀಗಾಗಬಾರದಿತ್ತು ಅಲ್ವಾ...!

ನಾಲ್ಕು ವರ್ಷದ ಹಿಂದಿನ ಕತೆಯಿದು... ಅಲ್ಲಲ್ಲ... ನೈಜ ಘಟನೆ.. ಹಿಂದೆ ಎಂಎಲ್ಸಿಯಾಗಿದ್ದು, ಈಗ ಸಚಿವರಾಗಿರುವವರ ಕತೆಯೂ ಹೌದು.. ವ್ಯಥೆಯೂ ಹೌದು...!
ಸೋಮವಾರ. ಜೂನ್ ೯. ೨೦೦೮. ಬೆಂಗಳೂರಿನ ಬೆನ್ಸನ್ ರಸ್ತೆಯಲ್ಲಿರುವ ಬಿಷಪ್‌ ಬರ್ನಾಡ್ ಮೋರಸ್ ನಿವಾಸಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡುವವರಿದ್ದರು. ಬೆಳಗ್ಗೆ ೧೦ ಗಂಟೆಗೆ ಅಲ್ಲಿಗೆ ಭೇಟಿ ನೀಡುತ್ತಾರೆ ಎಂದ ಸಂದೇಶ ಬಂದ ಕಾರಣ ಸುವರ್ಣ ನ್ಯೂಸ್‌ಗೆ ಸುದ್ದಿ ತರಲು ನಮ್ಮ ತಂಡ ಹೋಗಿತ್ತು. ಅಷ್ಟರಲ್ಲಾಗಲೇ ಮೀಡಿಯಾ ಗೆಳೆಯರು ಅಲ್ಲಿ ಹಾಜರಿದ್ದರು.
ಮೀಡಿಯಾ ಗೆಳೆಯರು ಹೇಳುವಂತೆ ಬಿಜೆಪಿ ಮುಖಂಡ ಸುರೇಶ್ ಕುಮಾರ್ ಪತ್ರಕರ್ತರನ್ನು ನಿಭಾಯಿಸುವಲ್ಲಿ ನಿಪುಣರು. ಅಂದುಕೊಂಡತೆಯೇ ಸುರೇಶ್ ಕುಮಾರ್ ಸ್ಥಳಕ್ಕೆ ಆಗಮಿಸಿದ್ದರು. ಎಲ್ಲ ಮೀಡಿಯಾದ ಗೆಳೆಯರು ಹರಟುತ್ತಿದ್ದಂತೆ ಅಲ್ಲಿಗೆ ಆಗಮಿಸಿದ ಸುರೇಶ್‌ ಕುಮಾರ್ ಎಲ್ಲರಿಗೂ ನಗು ನಗುತ್ತಲೇ ವಿಷ್ ಮಾಡಿದರು.
ಆ ನಗು ಬಹಳ ಹೊತ್ತು ಇರಲಿಲ್ಲ. ಯಾಕೆಂದರೆ ಅವರು ಚುನಾವಣೆ, ಪಕ್ಷದೊಳಗಿನ ಅಸಮಾಧಾನ ಮೊದಲಾದ ಮಾತಿನಲೆಯಲ್ಲಿ ಭೂತಕಾಲಕ್ಕೆ ಹೊರಳಿದ್ದರು....
ಹೌದು ನಾಲ್ಕು ವರ್ಷಗಳ ಹಿಂದೆ.... ಚುನಾವಣೆ ಸಂದರ್ಭ... ಎಂಎಲ್ಸಿ ಆಗಿದ್ದ ನಾನು ರಾಜಾಜಿನಗರದಿಂದ ಚುನಾವಣೆಗೆ ನಿಂತಿದ್ದೆ. ಆಗ ಎಲ್ಲ ಅಭ್ಯರ್ಥಿಗಳಂತೆ ನಾನು ಕೂಡಾ ಪ್ರಚಾರ ಕಾರ್ಯದಲ್ಲಿ ನಿರತನಾಗಿದ್ದೆ.. ಅದೊಂದು ದಿನ ಬೆಳಗ್ಗೆ ಪತ್ರಕರ್ತರು ನನ್ನನ್ನು ಮುತ್ತಿಕೊಂಡು ಪ್ರಶ್ನೆಗಳನ್ನು ಕೇಳಿದರು. ನನಗೆ ನೆನಪಿದೆ....
ಕಾಂಗ್ರೆಸ್ ಮುಖಂಡರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ನಿಮಗೆ ಸೋಲುವ ಭೀತಿ ಇಲ್ಲವೇ ? ಎಂಬ ಪ್ರಶ್ನೆ ಪತ್ರಕರ್ತರಿಂದ ತೂರಿ ಬಂದಿತ್ತು. ಅದಕ್ಕೆ ಕೂಲಾಗಿ ನಾನು ಹೇಳಿದ್ದಿಷ್ಟೇ.. " ಅವರೆಷ್ಟೇ ಪ್ರಚಾರ ಮಾಡಿದರೂ ಜನ ನನ್ನ ಕೈ ಬಿಡಲ್ಲ ಎಂಬ ವಿಶ್ವಾಸ ವಿದೆ".
ಆದರೆ ಸಂಜೆ ಪತ್ರಿಕೆಯೊಂದರಲ್ಲಿ ಬಂದ ವರದಿ ನನ್ನ ರಾಜಕೀಯ ಜೀವನದಲ್ಲಿ ಮರೆಯಲಾಗದ ಪಾಠ ಕಲಿಸಿತು. ಎಸ್‌... ಆ ಹೆಡ್ಡಿಂಗ್‌... " ಬ್ರಹ್ಮ ಬಂದರೂ ನನ್ನನ್ನು ಸೋಲಿಸಲಾರ".. ಎಂಬುದಾಗಿತ್ತು ಅದು.. ಆದರೆ ಇದರ ವರದಿಯೊಳಗೆ ಈ ಹೆಡ್ಡಿಂಗ್‌ ಸಂಬಂಧಿಸಿದ ಯಾವ ಅಂಶವೂ ಇರಲಿಲ್ಲ... ಇದು ಕಾಂಗ್ರೆಸಿಗರಿಗೆ ಒಳ್ಳೆಯ ಅಸ್ತ್ರವಾಯಿತು. ..
ಪತ್ರಿಕೆ ಸೆನ್ಸೇಷನ್ ಮಾಡಲು ಹೊರಟು ನನ್ನ ರಾಜಕೀಯ ಜೀವನಕ್ಕೇ ಕೊಡಲಿ ಏಟು ನೀಡಿತ್ತು. ಇದನ್ನು ಕಾಂಗ್ರೆಸ್‌ನವರು ಜೆರಾಕ್ಸ್‌ ಮಾಡಿ ಕ್ಷೇತ್ರದಲ್ಲಿ ಹಂಚಿ " ದುರಹಂಕಾರಿ ಶಾಸಕನಿಗೆ ಬುದ್ದಿ ಕಲಿಸಿ" ಎಂಬ ಸಂದೇಶವನ್ನು ರವಾನಿಸಿದ್ದರು. ಇದೇ ಕಾರಣಕ್ಕೆ ನಾನು ಕಳೆದ ಚುನಾವಣೆಯಲ್ಲಿ ಸೋತೆ ಕಣ್ರೀ..... ಎಂದು ಹೇಳಿದ ಸಚಿವ ಸುರೇಶ್ ಕುಮಾರ್ ಇದ್ದಕ್ಕಿದ್ದಂತೆ ಅನ್ಯಮನಸ್ಕರಾದರು...
ಛೇ.... ಹೀಗಾಗಬಾರದಿತ್ತು ಅಲ್ವಾ...!

Rating
No votes yet

Comments