ನನ್ನ ಹೊಂಗೇ ಮರ...

ನನ್ನ ಹೊಂಗೇ ಮರ...

ಪ್ರತಿ ದಿನವೂ ನಿಲ್ಲುವುದಲ್ಲೇ...ಅದರ ನೆರಳಲ್ಲೇ...!
ಸರಿ ಸುಮಾರು ಮೂರು ವರುಷವಾಯಿತು...
ಅದರ ಬುಡದಲ್ಲೇ ನಾನು ಬೀಡು ಬಿಡುವುದು!
ಅದು ನನ್ನ ಮರ...ನನ್ನ ಹೊಂಗೇ ಮರ...

ಹೆಚ್ಚು ಸಮಯವೂ ಕಳೆಯುವುದಿಲ್ಲ ನಾನು...
ಕೇವಲ ಹತ್ತೇ ನಿಮಿಷ ಇಡೀ ದಿನದಲ್ಲಿ!
ಹತ್ತು ಹಲವಾರೂ ಮರಗಳುಂಟು ಸುತ್ತ ಮುತ್ತ..
ಆದರೂ ಅದು ಮಾತ್ರವೇ ನನಗೆ ಅಚ್ಚು ಮೆಚ್ಚು!
ಅದು ನನ್ನ ಮರ...ನನ್ನ ಹೊಂಗೇ ಮರ...!

ನನ್ನ ಮರದಡಿ ಬೇರೆಯವರಿದ್ದಲ್ಲಿ ಏನೋ ಕಸಿವಿಸಿ!
ಹಲವು ಬಾರಿ ಅವರನ್ನು 'ತಳ್ಳಿದ್ದೂ' ಉಂಟು...
ಒಂದು ದಿನವೂ ನೀರುಣಿಸಿದ್ದಿಲ್ಲ ಅದಕೆ...
ಆದರೂ ಅದೇನೋ ನಂಟು....ಏಕೆಂದರೆ
ಅದು ನನ್ನ ಮರ...ನನ್ನ ಹೊಂಗೇ ಮರ...!

ಬಿಸಿಲಲ್ಲಿ ಬವಳಿದ್ದನ್ನು ಕಂಡಿದ್ದೇನೆ...
ಮಳೆಯಲ್ಲಿ ಮಿಂದಿದ್ದನ್ನೂ ನೋಡಿದ್ದೇನೆ...
ಮಿಂದ ಮರದ ಹಚ್ಚ ಹಸಿರೇ ಮೆಚ್ಚೆನಗೆ
ಗಾಳಿಗೆ ತೂಗುವುದ ನೋಡುವ ಹುಚ್ಚೆನಗೆ!
ಅದು ನನ್ನ ಮರ...ನನ್ನ ಹೊಂಗೇ ಮರ...!

ನನಗಾಗಿ ಅದು ಹೂವ ಹಾಸಿದ್ದುಂಟು...
ಹೊಂಗೆ ಹಾಸ ಮೇಲೆ ನಿಲ್ಲಲೆನಗೆ ಏನೋ ಅಳುಕು...
ಅಳುಕಿನ ಉಳುಕಿನೊಂದಿಗೆ ಅಲ್ಲಿ ನಿಂತು ನಲಿದದ್ದುಂಟು...
ಅದು ನನ್ನ ಮರ...ನನ್ನ ಹೊಂಗೇ ಮರ...!

ಹಲವು ಹಕ್ಕಿಗಳಿಗೆ ನೆಲೆ ನೀಡಿದ್ದನ್ನು ನೋಡಿರುವೆ
ನನ್ನ ಕಣ್ಣೆದುರೇ ರೆಕ್ಕೆ ಜೀವಿಗಳು ಗೂಡ ಕಟ್ಟಿವೆ!
ಕಾವು ಕೊಟ್ಟು ಮರಿ ಮಾಡುವುದ ನೋಡಿರುವೆ!
ಸಾವಿರಾರು ಇರುವೆಗಳ ಮನೆ ಕೂಡ ಇದುವೆ!
ಅದು ನನ್ನ ಮರ...ನನ್ನ ಹೊಂಗೇ ಮರ...!
ಅದು ನನ್ನ ಮರ...ನನ್ನ ಹೊಂಗೇ ಮರ...!

:
:

ನನ್ನ ಮರ ಇಲ್ಲದಾಗುವ ಕಾಲ ಬರುತಿದೆ...
ಇನ್ನೆಷ್ಟು ದಿನವಿರುದೋ ಕಾಣೆ...
ಇರಬಹುದು ಹಲವು ದಿನ/ವಾರ...ಹೆಚ್ಚೆಂದರೆ ಮಾಸ!
ಅದಕ್ಕೆ ತಿಳಿಯದು ಕಾಲ ಬರಲಿಹನೆಂದು...
ಇದು ತಿಳಿದ ಎನಗೆ ವಿಚಿತ್ರ ಹಿಂಸೆ!
ದಿನವೂ ನೋಡುತ್ತೇನೆ....
ಎಂದಿನಂತೆ ಹಾಗೇ ತೂಗುತ್ತದೆ, ನಗುತ್ತದೆ!
ಅದು ನನ್ನ ಮರ...ನನ್ನ ಹೊಂಗೇ ಮರ...

ಇನ್ನೇನು ಬರಲಿರುವ ಮರಕಟುಕ...
ಹೌದು! ಮರ ಕಟುಕನೇ!
ಇನ್ನೇನು ಮರಕಟುಕ ಬರಲಿರುವ...
ನನ್ನ ಮರವ ನನ್ನಿಂದ ಕಸಿಯಲು...
ಇಲ್ಲದಾಗಿಸಲು...

ನನ್ನ ಮರವಾದರೂ ನನಗೆ ಯಾವ ಹಕ್ಕೂ ಇಲ್ಲ
ನನ್ನದಲ್ಲದ ನನ್ನ ಮರದ ಮೇಲೆ...
ನೆರಳಲ್ಲಿ ನಿಲ್ಲುವ ನಲಿವೂ ಅಳಿದಿದೆ ಈಗ....
ಕಾಲನಿಗೆ ಕಾಯುವ ಕಾಟ!
ಬರೀ ಎದೆಯೊಳಗಿನ ಅಳು!
ಅದು ನನ್ನದೇ...ಅದು ನನ್ನದೇ...
ಅದು ನನ್ನದೇ ಮರ...ನನ್ನ ಮೆಚ್ಚಿನ ಹೊಂಗೇ ಮರ...

--ಶ್ರೀ

Rating
No votes yet

Comments