ಮುಂಗಾರು ಮಳೆ.. ಮತ್ತೆ ಧಾರವಾಡದಲ್ಲಿ ನವಿಲುಗಳ ನರ್ತನ!

ಮುಂಗಾರು ಮಳೆ.. ಮತ್ತೆ ಧಾರವಾಡದಲ್ಲಿ ನವಿಲುಗಳ ನರ್ತನ!

ಬರಹ

‘ಸಾವಿರ’ದ ಕಣ್ಣುಗಳ ಸರದಾರ. ಆತ ಪಕ್ಷಿಗಳ ರಾಜ. ಎಂತಹ ಕಟುಕನ ಮನಸ್ಸನ್ನೂ ಕರಗಿಸಬಲ್ಲ ಸಮ್ಮೋಹನಶಕ್ತಿ ಈತನಲ್ಲಿ! ಸಾಂಸ್ಕೃತಿಕವಾಗಿ, ಸಾಹಿತ್ತಿಕವಾಗಿ ಮತ್ತು ಐತಿಹಾಸಿಕವಾಗಿ ಆತನಿಗಿರುವ ಮಹತ್ವವೇ ಇಂದು ರಾಷ್ಟ್ರಪಕ್ಷಿಯ ಸಿಂಹಾಸನದಲ್ಲಿ ಕುಳಿತುಕೊಳ್ಳುವಂತೆ ಅನಭಿಷಿಕ್ತವಾಗಿ ದೊರಕಿದೆ.

ಇದು ಪಕ್ಷಿರಾಜ ನವಿಲಿನ ಕುರಿತು ಈ ಪೀಠಿಕೆ ಎಂದು ತಾವು ಊಹಿಸಿರಲಿಕ್ಕೇ ಬೇಕು. ನಮ್ಮ ಭಾರತ ಸರಕಾರದಿಂದ ೧೯೬೩ರಲ್ಲಿ ರಾಷ್ಟ್ರಪಕ್ಷಿ ಎಂದು ಘೋಷಿಸಲ್ಪಟ್ಟ ನವಿಲು; ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ರ ಅಡಿಯಲ್ಲಿ ಸಂರಕ್ಷಿತ ಪಕ್ಷಿ. ಭೂಮಿಯ ಮೇಲೆ ವೇಗವಾಗಿ ಓಡಬಲ್ಲ ಹಾಗು ನಿಂತ ಸ್ಥಳದಿಂದಲೇ ಎಗರಿ ಹಾರಬಲ್ಲ ಅತ್ಯಂತ ಭಾರಯುತವಾದ ಪಕ್ಷಿ ನವಿಲು. ರೆಕ್ಕೆ-ಪುಕ್ಕ ಬಲಿತ ಸುಂದರ ಗಂಡು ನವಿಲು ಹಾರಿದರೆ ವಿಮಾನ ನಭಕ್ಕೆ ಜಿಗಿದು, ಚಿಮ್ಮಿ ಹಾರುತ್ತಿರುವಂತೆ ಭಾಸವಾಗುತ್ತದೆ.

ಈ ಸುಂದರ ಪಕ್ಷಿಯ ಕುರಿತು ಸ್ವಾರಸ್ಯಕರ ವಿಷಯವೆಂದರೆ ಇವು ಧಾರವಾಡದಲ್ಲಿ ಗುಂಪಿನಲ್ಲಿ ಇತ್ತೀಚೆಗೆ ವಿಹರಿಸಲು ಆರಂಭಿಸಿವೆ. ಏಳು ಗುಡ್ಡ ಹಾಗು ಏಳು ಕೆರೆಗಳ ಸ್ವಚ್ಛಂದ ನಾಡು ‘ಛೋಟಾ ಮಹಾಬಳೇಶ್ವರ’ ಖ್ಯಾತಿ ಈ ಧಾರಾನಗರಿಗೆ. ಈ ಸುಂದರ ಗಿರಿ-ಕಾನನದ ಮಧ್ಯೆ ಉಕ್ಕಿ ಹರಿದಿದ್ದಳು ಶಾಲ್ಮಲೆ. ಈ ಶಾಲ್ಮಲೆ ತಟದ ಕೊಳ್ಳ, ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಹಾಗು ನವಿಲೂರು ಸಮೀಪದ ಸತ್ತೂರಿನಲ್ಲಿ ಯಾರ ಭಯವೂ ಇಲ್ಲದೇ, ಸ್ವತಂತ್ರವಾಗಿ ವಿಹರಿಸುವ ನವಿಲುಗಳು ಪಕ್ಷಿಪ್ರಿಯರಿಗೆ ಸ್ವರ್ಗ ‘ಮೂರೇ ಗೇಣು’ ಎಂದು ಸಾರಿ ಹೇಳಿವೆ.

ಇತ್ತೀಚೆಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿಗೆ ನವಿಲೊಂದು ಏಕಾಏಕಿ ಭೇಟಿ ನೀಡಿ ಕುತೂಹಲ ಸೃಷ್ಠಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಐದು ಹೆಣ್ಣು ಹಾಗು ಎರಡು ಗಂಡು ನವಿಲುಗಳಿರುವ ಸುಖಿ ಕುಟುಂಬವದು. ಆರೋಗ್ಯದ ಬಗ್ಗೆ ತುಸು ಕಾಳಜಿ ಇರುವ ಜನ ಬೆಳಿಗ್ಗೆ ಎದ್ದು ಇಂದಿಗೂ ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯೋದ್ಯಾನದಲ್ಲಿ ವಿಹರಿಸುತ್ತಾರೆ. ಈ ಸಂದರ್ಭದಲ್ಲಿ ನವಿಲಿನ ಕೇಕೆ, ಗುಡ್ಡದ ಮೇಲಿನ ಓಟ, ಎಲ್ಲವನ್ನೂ ಇಲ್ಲಿನ ಜನ ಕೇಳಿ, ನೋಡಿ ಖುಷಿ ಪಟ್ಟಿದ್ದಾರೆ. ಸುದೈವಕ್ಕೆ ಈ ಕುಟುಂಬ ಯಾವುದೇ ಬೇಟೆಗಾರರ ಕಣ್ಣಿಗೆ ಬಿದ್ದಿಲ್ಲ. ಸದ್ಯ ವಿಶ್ವವಿದ್ಯಾಲಯದವರೂ ಖಾಸಗಿ ರಕ್ಷಕರನ್ನು ನೇಮಕ ಮಾಡಿಕೊಂಡ ಮೇಲೆ ಪಕ್ಷಿಗಳ ನಿರಂತರ ಹನನ ಹಾಗು ವನ್ಯ ಸಂಪತ್ತು ಲೂಟಿಗೆ ಕಡಿವಾಣ ಬಿದ್ದಿದೆ.

ನವಿಲಿನ ಕುರಿತು: ಗಂಡು ನವಿಲು ನೋಡಲು ಅತ್ಯಂತ ಸುಂದರ. ನಿಸರ್ಗ ನಿಯಮಕ್ಕೆ ವಿರುದ್ಧ ಎಂದು ಭಾಸವಾಗುವಂತೆ ಹೆಣ್ಣು ನವಿಲೇ ಅಂದಗೇಡಿ! ಪುಕ್ಕಗಳನ್ನು ಹಿಡಿದು ಅಳತೆ ಮಾಡಿದರೆ ಗಂಡು ನವಿಲು ಸರಾಸರಿ ೨.೧೨ ಮೀಟರ್ ಅಥವಾ ೭.೩ ಅಡಿಗಳಷ್ಟು ಉದ್ದವಾಗಿರುತ್ತದೆ. ದೇಹದ ಶೇಕಡ ೬೦ರಷ್ಟು ಭಾಗ ಬಣ್ಣದ ಪುಚ್ಚಗಳಿಂದಲೇ ಆವೃತ. ತನ್ನ ಎರಡೂ ರೆಕ್ಕೆಗಳನ್ನು ಹರಡಿದಲ್ಲಿ ೧.೪ ರಿಂದ ೧.೬ ಮೀಟರುಗಳಷ್ಟು ವಿಶಾಲವಾಗಿ ಈ ಪಕ್ಷಿ ಹರಡಿಕೊಳ್ಳಬಲ್ಲುದು. ನಾಲ್ಕರಿಂದ ಐದು ಕಿಲೊ ಗ್ರಾಂ ತೂಗಬಲ್ಲ ಗಂಡು ನವಿಲು ಜಗತ್ತಿನಲ್ಲಿಯೇ ಹಾರಲು ಬಲ್ಲ ಏಕೈಕ ಪಕ್ಷಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಹೆಣ್ಣು ನವಿಲು ಕೇವಲ ೮೬ ಸೆಂ.ಮೀ. ಉದ್ದವಿದ್ದು ೩.೪ ಕಿಲೋ ಗ್ರಾಂ ತೂಗಬಲ್ಲುದು. ಆದರೆ ಪುಕ್ಕಗಳನ್ನು ಹಿಡಿದು ಅಳತೆ ಮಾಡಲಾಗಿ ಅಪರೂಪಕ್ಕೆ ಒಂದು ಮೀಟರ್ ಉದ್ದ ಮೀರಿದ ಉದಾಹರಣೆಗಳಿವೆ.

ಸಂತಾನೋತ್ಪತ್ತಿ:ನವಿಲಿನ ಮರಿಗಳಿಗೆ ಮೂರು ವರ್ಷ ಪ್ರಾಯ ತುಂಬುವವರೆಗೆ ಅವು ಗಂಡೋ? ಹೆಣ್ಣೋ? ಎಂದು ತಿಳಿಯುವುದು ಕಷ್ಟ. ಪುಚ್ಚಗಳು ಮೂಡಿದ ಮೇಲೆಯೇ ನಾವು ಅವುಗಳ ಲಿಂಗ ನಿರ್ಧರಿಸಲು ಸಾಧ್ಯ. ಹೆಣ್ಣು ನವಿಲು ಸಂಜೆ ಮುಳುಗಿ ಕತ್ತಲಾಗುತ್ತಿದ್ದಂತೆ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆ ಇಡುವುದೇ ಎರಡು ದಿನಗಳ ಪ್ರಕ್ರಿಯೆ ಆಗಿರುತ್ತದೆ. ಸಾಮಾನ್ಯವಾಗಿ ನಾಲ್ಕರಿಂದ ಆರು ಮೊಟ್ಟೆಗಳನ್ನು ಇಡುವ ಹೆಣ್ಣು ನವಿಲು, ಎರಡು ದಿನಗಳ ಅಂತರದಲ್ಲಿ ಮೂರರಿಂದ ೧೨ ಮೊಟ್ಟ್ಟೆಗಳನ್ನು ಇಟ್ಟ ದಾಖಲೆ ಇದೆ. ನವಿಲಿನ ಮರಿಗಳಿಗೆ (Peachicks) ಎಂದೂ, ಗಂಡು ನವಿಲಿಗೆ (Peacock) ಹಾಗು ಹೆಣ್ಣು ನವಿಲಿಗೆ (Peahen) ಎಂದು ಕರೆಯಲಾಗುತ್ತದೆ. ಆಕ್ಸಫರ್ಡ್ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಜರ್ನಲ್ `Nature Micron Petrie' ಹೇಳುವಂತೆ, ಹೆಣ್ಣು ನವಿಲುಗಳು ತಮ್ಮ ಸಂಗಾತಿಯನ್ನು ಆಯ್ಕೆಮಾಡುವಾಗ ವಿಶೇಷ ಮುತುವರ್ಜಿವಹಿಸುತ್ತವೆ. ಗಂಡು ನವಿಲಿನ ಉದ್ದ, ಬಣ್ಣದ ತೀಕ್ಷಣತೆ, ಪುಚ್ಚದಲ್ಲಿರುವ ಕಣ್ಣುಗಳು, ಮೈಮಾಟವನ್ನು ಆಯ್ಕೆಯ ಮಾನದಂಡವಾಗಿ ಬಳಸುತ್ತವೆ. ಗಂಡು ನವಿಲು ಸುಂದರವಾಗಿದ್ದಷ್ಟೂ ತನಗೆ ಮುಂದೆ ಹುಟ್ಟಲಿರುವ ಮರಿಗಳು ಭುವನ ಸುಂದರವಾಗಲಿವೆ ಎಂದು ಹೆಣ್ಣು ನವಿಲು ಭಾವಿಸುತ್ತದೆ!

ಈ ಕುರಿತಂತೆ ವ್ಯಾಪಕ ಸಂಶೋಧನೆಗಳು ನಡೆದಿವೆ. ಕಾರಣ ಗಂಡು ನವಿಲುಗಳು ವಸಂತ ಕಾಲದ ನಂತರ ಪುಚ್ಚ ಉದುರಿಸಿಕೊಂಡು ಬೋಳಾಗುತ್ತವೆ. ಮರಿಗಳ ಪಾಲನೆ-ಪೋಷಣೆಯಲ್ಲಿ ಅವು ಕಿಂಚಿತ್ತೂ ಹೆಣ್ಣು ನವಿಲಿಗೆ ಸಹಾಯ ಮಾಡುವುದಿಲ್ಲ. ಗರ್ಭದಾನ ಮಾತ್ರ ಅವುಗಳ ಹಕ್ಕಂತೆ. ಈ ಕುರಿತಂತೆ ಈಗಾಗಲೇ ಸಾಕಷ್ಟು ಸಂಶೋಧನೆಗಳು ನಿಷ್ಕರ್ಷೆಯ ಹಂತಕ್ಕೆ ಬಂದಿವೆ. ಔಪಚಾರಿಕ ಘೋಷಣೆ ಬಾಕಿ ಇದೆ.

ನವಿಲಿನ ಕುಟುಂಬ ಪದ್ಧತಿ ಹಾಗು ಆಹಾರ ಹೆಕ್ಕುವ ಪರಿ: ನವಿಲಿನ ಕುಟುಂಬ ಪದ್ಧತಿಯಲ್ಲಿ ಒಂದು ಗಂಡು ನವಿಲಿಗೆ ೪ ರಿಂದ ೫ ಹೆಣ್ಣು ನವಿಲುಗಳು ಸಂಗಾತಿಗಳಾಗಿರುತ್ತವೆ. ಯಾವತ್ತೂ ಗಂಡು ನವಿಲಿನ ಕೇಕೆ ಆಧರಿಸಿ ಉಳಿದ ಸದಸ್ಯರು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಗುಂಪಿನಲ್ಲಿಯೇ ಸದಾ ಸಂಚರಿಸುವ ನವಿಲುಗಳ ಚಲನವಲನದ ಮೇಲೆ ಗಂಡು ನವಿಲು ಸದಾ ನಿಗಾ ಇಟ್ಟಿರುತ್ತದೆ. ನಿತ್ಯ ಬೆಳಗಿನ ಜಾವ ಹಾಗು ಸೂರ್ಯಾಸ್ತಕ್ಕಿಂತ ಕೊಂಚ ಮುಂಚೆ ಅತ್ಯಂತ ಚಟುವಟಿಕೆಯಿಂದ ಕೂಡಿರುವ ಈ ನವಿಲುಗಳ ಹಿಂಡು ಚುರುಕಿನಿಂದ ಆಹಾರ ಹೆಕ್ಕುತ್ತವೆ. ಹೊಲದಲ್ಲಿ ಬಿತ್ತಿರುವ ಅಥವಾ ಬೆಳೆದು ನಿಂತ ಪೈರಿನಲ್ಲಿಯ ಕಾಳು ಕಡಿ, ಹುಳು-ಹುಪ್ಪಡಿ, ಸಣ್ಣ ಹಾವುಗಳು, ಸಣ್ಣ ಸಸ್ತನಿಗಳು, ಬೀಜವಿಲ್ಲದ ಕಾಯಿಗಳು, ಹೀಚು, ಬೋರೆಹಣ್ಣು, ಎಳಚಿಕಾಯಿ, ಅಂಜೂರು ಹಣ್ಣು ಇವುಗಳಿಗೆ ಇಷ್ಟವಾದ ಆಹಾರ.

ನವಿಲುಗಳ ಜಾತಿ: ಭಾರತ ಹಾಗು ಶ್ರೀಲಂಕಾದಲ್ಲಿ ಕಂಡು ಬರುವ ನೀಲಿ ಬಣ್ಣದ ನವಿಲಿಗೆ (Pavo Cristatus) ಎನ್ನಲಾಗುತ್ತದೆ. ಭಾರತ, ಭರ್ಮಾ ಹಾಗು ಚೀನಾ ದೇಶಗಳಲ್ಲಿ ಕಾಣಸಿಗುವ ಹಸಿರು ಬಣ್ಣದ ನವಿಲಿಗೆ (Pavo mUticus) ಎಂದು ಕರೆಯಲಾಗುತ್ತದೆ. ಇವುಗಳ ಜೊತೆಗೆ Bronze Peafowl, Cameo Peafowl, Opal Peafowal, Purple Peafowl, Spalding Peafowl ಜಾತಿಗೆ ಸೇರಿದ ನವಿಲುಗಳನ್ನು ತಜ್ನರು ಭಾರತದಲ್ಲಿ ಗುರುತಿಸಿದ್ದಾರೆ.

ಇವುಗಳಲ್ಲಿ Spalding Peafowl ಅತ್ಯಂತ ಆಕರ್ಷಣೀಯವಾದ ನವಿಲು. ಗಂಡು ನವಿಲು ಅತ್ಯಂತ ಸುಂದರವಾಗಿದ್ದು, ನಯನ ಮನೋಹರವಾಗಿ ಗೋಚರಿಸುತ್ತದೆ. ಈ ನವಿಲುಗಳ ಕುರಿತು ಕ್ಯಾಲಿಫೋರ್ನಿಯಾದ ನವಿಲು ತಜ್ನೆ ಶ್ರೀಮತಿ ಸ್ಪಾಲ್ಡಿಂಗ್ ವೈಶಿಷ್ಠ್ಯಪೂರ್ಣ ಸಂಶೋಧನೆ ನಡೆಸಿದ್ದರ ಗೌರವಾರ್ಥ `Spalding Peafowl' ಎಂಬ ಹೆಸರನ್ನು ನವಿಲಿಗೆ ಇಡಲಾಗಿದೆ. ಭಾರತದ ನೀಲಿ ಬಣ್ಣದ ನವಿಲು Pavo Cristatus ಅಥವಾ Linnaeus, ಭಾರತ, ಭರ್ಮ ಹಾಗು ಚೈನಾ ದೇಶಗಳಲ್ಲಿ ಕಂಡುಬರುವ ಹಸಿರು ನವಿಲು Pavo Muticus ಗಳ ಕೂಡುವಿಕೆಯಿಂದ ಜನಿಸುವ ಆಕರ್ಷಕ ನವಿಲಿನ ಮರಿಗಳಿಗೆ Spalding Peafoul ಎಂದು ನಾಮಕರಣ ಮಾಡಲಾಗಿದೆ. ಅತ್ಯಂತ ಉದ್ದವಾದ ಕಾಲುಗಳನ್ನು ಹೊಂದಿರುವ ಈ ನವಿಲುಗಳು ೩ ವರ್ಷ ಪ್ರಾಯಕ್ಕೆ ಬರುವವರೆಗೆ ಅಂದಗೇಡಿಗಳು. ನೋಡುಗರಿಗೆ ಯಾವ ಆಕರ್ಷಣೆಯನ್ನು ಮಾಡಲಾರವು. ನಂತರ ಬಣ್ಣದ ಪುಉಕ್ಕಗಳು ಬೇಳೆಯುತ್ತಿದ್ದಂತೆ ಆಕರ್ಷಣೆಯ ಕೇಂದ್ರ ಬಿಂದು!

ಉಳಿದ ಪಕ್ಷಿಗಳಿಗೆ ಹೋಲಿಸಿದರೆ ನವಿಲುಗಳು ಹರಡಿಕೊಂಡಿರುವ ಕ್ಷೇತ್ರ ವಿಶಾಲವಾದುದು. ಭಾರತದ ಉಪ ಖಂಡಾಂತರ ಭಾಗಗಳಲ್ಲಿ, ಸಿಂಧೂ ನದಿ ಕಣಿವೆಯ ದಕ್ಷಿಣ ಹಾಗು ಪಶ್ಚಿಮ ಭಾಗಗಳಲ್ಲಿ, ಸಿಂಧೂ ನದಿ ಕಣಿವೆಯ ದಕ್ಷಿಣ ಹಾಗು ಪಶ್ಚಿಮ ಭಾಗಗಳಲ್ಲಿ, ಜಮ್ಮು ಕಾಶ್ಮೀರ, ಅಸ್ಸಾಂನ ಪೂರ್ವ ಭಾಗ, ಮಿಜೋರಾಂನ ದಕ್ಷಿಣ ತುದಿ ಹಾಗು ಮಿಜೋರಾಂ ದಕ್ಶಿಣ ತುದಿಯಲ್ಲಿ ಮತ್ತು ಭಾರತದ ಕರಾವಳಿಯ ತುಂಬೆಲ್ಲ ವಾಸವಾಗಿವೆ. ಒಟ್ಟಾರೆ ಪಶ್ಚಿಮ ಪಾಕಿಸ್ತಾನದಿಂದ ಹಿಮಾಲಯದವರೆಗೆ, ಭಾರತದ ಹಿಮಾಲಯದಿಂದ ದಕ್ಷಿಣ ಶ್ರೀಲಂಕಾ ವರೆಗೆ ಹಾಗು ಬಾಂಗ್ಲಾದೇಶದಲ್ಲಿಯೂ ನವಿಲುಗಳು ಹಲವಾರು ಜಾತಿಗಳಲ್ಲಿ ಬದುಕಿಕೊಂಡಿವೆ.

ನವಿಲುಗಳ ಉಪಯೋಗ: ನವಿಲುಗಳು ರೈತನ ಮಿತ್ರ. ಪ್ರವಾಸಿ ತಾಣವನ್ನಾಗಿಸುವಲ್ಲಿ ಅವುಗಳ ಕೊಡುಗೆ ಅಪಾರ. ರಾಜಸ್ಥಾನದ ಸಿಟಿ ಪ್ಯಾಲೇಸ್ ಮುಖ್ಯದ್ವಾರ ‘ಪೀಕಾಕೆ ಡೋರ್ ವೇ’ ಜಗತ್ಪ್ರಸಿದ್ದ. ಉತ್ತರ ಭಾರತದ ಚಿತ್ರಕಲೆಗಳಲ್ಲಿ, ಕಾಶ್ಮೀರಿ ಶಾಲುಗಳ ಸೂಕ್ಷ್ಮ ಕುಸುರು ಕಲೆಗಳಲ್ಲಿ ತನ್ನ ಬಲಯುತವಾದ ಛಾಪು ಮೂಡಿಸಿದ ಕೀರ್ತಿ ನವಿಲಿಗೆ. ಜೈನ ಮುನಿಗಳು ಸೇರಿದಂತೆ ಅನೇಕರು ಬಳಸುವ ಪಾವಿತ್ರ್ಯತೆಯ ಸಂಕೇತ. ನವಿಲು ಪುಚ್ಚದ ಬೀಸಣಿಕೆಗಳು, ಜಾನಪದೀಯ ಶೈಲಿ ಚಿತ್ತಾರಗಳಲ್ಲಿ, ಗುಹೆಗಳಲ್ಲಿ ಬಿಡಿಸಲಾದ ಚಿತ್ರಗಳಲ್ಲಿ ನವಿಲುಗಳ ಇರುವಿಕೆಯನ್ನು ಗುರುತಿಸಬಹುದಾಗಿದೆ. ಫ್ರಾನ್ಸ್ ದೇಶದ ಫ್ರೆಂಚ್ ರಾಜ ಮನೆತನದ ಬಿರುದಾವಳಿಗಳ ಲಾಂಛನ ಚಿನ್ಹೆಯಾಗಿ, ಕಲಾತ್ಮಕ ಕಂಬಗಳಲ್ಲಿ, ಭಾರತದ ರಾಷ್ಟ್ರಪತಿಗಳ ದರ್ಬಾರಿನ ವೈಭವಯುತ ಮೇಜಿನ ಮೇಲೆ, ಸೀರೆ, ಚುಡಿದಾರ ಮೊದಲಾದ ಮಹಿಳೆಯರ ಅಂದದ ಉಡುಪುಗಳ ತಯಾರಿಕೆಯಲ್ಲಿ ಇವುಗಳ ಪುಚ್ಚ ಬಳಸಲಾಗುತ್ತದೆ.

ನವಿಲಿನ ಗೋಳು: ನವಿಲಿಗೂ ಇತ್ತೀಚೆಗೆ ನಾಯಿಗಳ ಕಾಟ ಶುರುವಾಗಿದೆ. ಮನುಷ್ಯನ ಉಪದ್ರವದಿಂದ ಕೊಂಚ ನೆಮ್ಮದಿ ದೊರಕಿರುವಾಗ ನಾಯಿಗಳ ಬೇಟೆ ಪ್ರವೃತ್ತಿ, ನವಿಲಿನ ಸಂತಾನ ಅಭಿವೃದ್ಧಿಗೆ ಕೊಡಲಿ ಪೆಟ್ಟು ನೀಡಿದೆ. ದಾಳಿಗೆ ತುತ್ತಾದ ನವಿಲೊಂದು ಸ್ಥಳೀಯರ ಸುಪರ್ದಿಯಲ್ಲಿ ಆರೈಕೆ ಪಡೆಯುತ್ತಿದೆ. ಈ ಭಾಗದ ರೈತರು ಇತ್ತೀಚಿನ ಬಿತ್ತನೆಯಲ್ಲಿ, ಪೈರುಗಳನ್ನು ಕ್ರಿಮಿ ಕೀಟಗಳಿಂದ ರಕ್ಷಿಸಿಕೊಳ್ಳಲು ಅವ್ಯಾಹತವಾಗಿ ರಾಸಾಯನಿಕಗಳನ್ನು ಬಳಸುತ್ತಿದ್ದು, ಹಸಿವಿನಿಂದ ಕಂಗೆಟ್ಟ ನವಿಲುಗಳು ಈ ಕ್ರಿಮಿನಾಶಕ ಲೇಪಿತ ಬಿತ್ತಿದ ಬೀಜಗಳನ್ನು ಹೆಕ್ಕಿ ತಿಂದು ದಾರುಣ ಸಾವುಕಂಡ ಉದಾಹರಣೆಗಳು ಇವೆ. ನವಿಲುಗಳ ವಾಸ ಪ್ರದೇಶವನ್ನು ಅತಿಕ್ರಮಿಸಿ ಪ್ರವೇಶ ಗಿಟ್ಟಿಸಿರುವ ನಾವು, ಅವು ಇಂದು ಆಹಾರ-ವಿಹಾರಕ್ಕಾಗಿ ನಾಡಿಗೆ ಬಂದಾಗ ಜೀವ ತೆರುವ ಪರಿಸ್ಥಿತಿ ನಿರ್ಮಿಸಿದ್ದೇವೆ.

ಹತ್ತಾರು ಬೇಟೆ ನಾಯಿಗಳನ್ನು ಸಾಕಿಕೊಂಡು ‘ಹರಿಣ ಶಿಕಾರಿ’ ಸಮುದಾಯದವರು ಎಂದು ಕರೆಯಿಸಿಕೊಳ್ಳುವ ಬೇಟೆಗಾರರು ನಿರಂತರ ನವಿಲಿನ ಬೇಟೆಯಲ್ಲಿ ತೊಡಗಿದ್ದು ಅವುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದೆ. ನಿಸರ್ಗದ ಕೌತುಕ ನವಿಲಿನಿಂದ ನಮ್ಮ ಭಾಗದ ಒಂದು ಊರಿಗೆ ‘ನವಿಲೂರು’ ಎಂದು ಸಹ ನಾಮಕರಣ ಮಾಡಲಾಗಿದೆ. ನಾವೇ ಮುಂದಾಗಿ ಅವುಗಳ ರಕ್ಷಣೆಗೆ ತುರ್ತು ಕ್ರಮಗಳನ್ನು ಜರುಗಿಸಬೇಕಿದೆ. ಇಲ್ಲದಿದ್ದರೆ ನಿಸರ್ಗದಲ್ಲಿ ಪ್ರತಿಯೊಂದು ಜೀವಿಯ ಪಾತ್ರ ಗಮನಾರ್ಹವಾದುದು. ಜೈವಿಕ ಚಕ್ರದ ಅಸಮತೋಲನದ ಅಡ್ಡ ಪರಿಣಾಮಗಳನ್ನು ಎದುರಿಸಲು ನಾವು ಸಿದ್ಧರಾಗೋಣ?!