ಇವತ್ತು ಅಳಬಾರದು

ಇವತ್ತು ಅಳಬಾರದು

ಇವತ್ತು ಅಳಬಾರದು.

ಯಾರು ಹೇಳಿದರು, ಕಣ್ಗಳಿರುವುದೇ ಅಳಲೆಂದು. ಅದು ಸುಳ್ಳು. ಕಣ್ಗಳಿರುವುದು ನೋಡಲು. ಅಷ್ಟೇ.

ನೋಡಿದ ನಂತರ ಏನಾಗುತ್ತದೆ? ಅದು ಮನಸ್ಸಿನಲ್ಲಿ ದಾಖಲಾಗುತ್ತದೆ. ಸುಳ್ಳು, ಅದು ಮೆದುಳಲ್ಲಿ ದಾಖಲಾಗುತ್ತದೆ.

ಮುಂದೆ?

ಮೆದುಳು ಆ ದಾಖಲೆಯನ್ನು ಇನ್ಯಾವುದೋ ನೆನಪುಗಳೊಂದಿಗೆ ತಳುಕು ಹಾಕುತ್ತದೆ. ಅಲ್ಲೊಂದು ಪ್ರತಿಕ್ರಿಯೆ ಹುಟ್ಟುತ್ತದೆ. ಆ ಪ್ರತಿಕ್ರಿಯೆಗೆ ಇನ್ಯಾವುದೋ ಸೇರಿಕೊಂಡು ಭಾವನೆಯನ್ನು ನಿರ್ಮಿಸುತ್ತದೆ.

ಸರಿ.

ಆ ಭಾವನೆ, ಮೆದುಳಿನ ಇನ್ಯಾವುದೋ ಭಾವನೆಯೊಂದಿಗೆ ಸಂಘರ್ಷಕ್ಕೆ ಇಳಿಯುತ್ತದೆ. ಅದು ಹೊಂದಾಣಿಕೆಯಾದರೆ, ಖುಷಿ. ಇಲ್ಲದಿದ್ದರೆ ನೋವು.

ಆಗ ಕಣ್ಗಳು ಅಳುತ್ತವಂತೆ.

ಹೌದೆ?

ಗೊತ್ತಾಗುತ್ತಿಲ್ಲ. ಏಕೋ, ಸುಮ್ಮನಿರಲೂ ಆಗುತ್ತಿಲ್ಲ. ಹಳೆಯದೇನೋ ತೇಲಿ ಬಂದಂತೆ, ಪಕ್ಕಕ್ಕೆ ನಿಂತಂತೆ, ಮತ್ತಿನ್ನೇನೋ ನೆನಪಿಸಿದಂತೆ, ಎಲ್ಲಾ ತರ್ಕವನ್ನು ಸರಿಸಿ, ನಾನು ಏನಾಗಿದ್ದೆನೋ ಅದನ್ನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತ ಗೊಂದಲಕ್ಕೆ ಈಡು ಮಾಡುತ್ತದೆ.

ಇದು ಖಿನ್ನತೆಯಾ? ನೋವಾ? ಗೊಂದಲವಾ? ಒಂಟಿತನವಾ? ತಬ್ಬಲಿ ಭಾವನೆಯಾ?

ಊಹೂಂ. ಒಂದೂ ಗೊತ್ತಾಗುತ್ತಿಲ್ಲ. ಬೇರೆ ಯಾರಿಗಾದರೂ ಹೀಗೆ ಆಗುತ್ತದಾ? ಆದರೆ ಅವರು ಅದನ್ನು ಹೇಗೆ ಎದುರಿಸುತ್ತಾರೆ?

ಧಾರವಾಡದಲ್ಲೀಗ ನವಿಲುಗಳು ಕುಣಿಯುತ್ತಿವೆ ಎಂದು ಸಂಪದ ಮಿತ್ರ ಹರ್ಷವರ್ಧನ ಶೀಲವಂತರ ಬರೆದಿದ್ದಾರೆ. ನಿಜ, ನವಿಲುಗಳು ಕುಣಿಯುತ್ತಿವೆ. ಆದರೆ, ಅವು ಏಕೆ ಕುಣಿಯುತ್ತವೆ ಎಂಬ ವೈಜ್ಞಾನಿಕ ಸತ್ಯ ಗೊತ್ತಿರುವುದರಿಂದ, ಅವುಗಳ ಕುಣಿತ ಆಸಕ್ತಿ ಹುಟ್ಟಿಸುತ್ತಿಲ್ಲ. ನಿಜ, ಅವು ಸಂತಸಗೊಂಡಿವೆ. ಆದರೆ, ಇದೇನು ನನ್ನ ಮನಸ್ಸಿನಲ್ಲಿ ಈ ಪರಿ ಖಿನ್ನತೆ.

ಔಷಧಗಳ ಹಂಗಿಲ್ಲದೇ ಗೆಲ್ಲಲು ಹೊರಟಿದ್ದೇನಲ್ಲ, ನಾನು ಗೆಲ್ಲುತ್ತೇನಾ? ಸೋಲುತ್ತೇನಾ? ಹೀಗೇ ನವೆಯುತ್ತ, ಬರೆದು ಹಗುರವಾಗಲು ಯತ್ನಿಸುತ್ತ ಹೋಗಿಬಿಡುತ್ತೇನಾ?

ಒಂದೂ ಗೊತ್ತಾಗುತ್ತಿಲ್ಲ.

ಮೋಡ ಬಿಗಿದುಕೊಂಡಿದೆ. ಬೆಳಕು ಮಾಯವಾಗಿದೆ. ನಾಳೆ ಗ್ರಹಣವಂತೆ. ಆಗಲೇ ಮಧ್ಯರಾತ್ರಿ. ಮನಸ್ಸಿನ ಗ್ರಹಣ ಬಿಚ್ಚಿಕೊಳ್ಳುವುದು ಯಾವಾಗ?

ಕಾಯುತ್ತಿದ್ದೇನೆ, ಹೀಗೇ. ಸುಮ್ಮನೇ.

ಇಲ್ಲ, ಇವತ್ತು ಅಳಬಾರದು. ಮೋಡ ಕಟ್ಟಿಕೊಂಡರೂ ಸರಿ, ಗ್ರಹಣ ಬಿಚ್ಚಿಕೊಂಡರೂ ಸರಿ. ಈ ತೆರೆ ಸರಿಯುತ್ತದೆ. ಈ ಮೋಡ ಚದುರುತ್ತದೆ. ಹಾಗೇ, ಈ ಖಿನ್ನತೆ.

ಹೌದು. ನಾನು ಅಳಬಾರದು. ಕನಿಷ್ಠ ಇವತ್ತಿನ ಮಟ್ಟಿಗಾದರೂ. ಅಳುವುದೇ ಆದರೆ, ಮುಂದೊಂದು ದಿನ ಅತ್ತೇನು. ಅತ್ತು ಹಗುರವಾದೇನು.

- ಪಲ್ಲವಿ ಎಸ್‌.

Rating
No votes yet

Comments