ಒಮ್ಮೊಮ್ಮೆ ಹೀಗೂ ಆಗುವುದು...

ಒಮ್ಮೊಮ್ಮೆ ಹೀಗೂ ಆಗುವುದು...

ಬರಹ

ಅವರಿಬ್ಬರೂ ಬಹಳ ದಿನಗಳಿಂದ ಗೆಳೆಯರು. ಸಿದ್ದು ಮತ್ತು ಅಭಿ. ಸಿದ್ದುಗೆ ಪಾನಿಪುರಿ ಎಂದರೆ ಬಲು ಇಷ್ಟ. ಹಾಗೆ ಅಭಿಗೆ ಗೋಬಿ ಮನ್ಚೂರಿ ಎಂದರೆ ಪ್ರಾಣ. ಇಬ್ಬರ ಮನೆಗಳು ಒಂದರಿಂದ ಇನ್ನೊಂದು ಸ್ವಲ್ಪ ದೂರದಲ್ಲಿದ್ದರೂ ಅವೆರಡಕ್ಕೂ ಹತ್ತಿರವಾಗುವಂತೆ ಒಂದು ಪಾರ್ಕ್ ಇತ್ತು. ಅಲ್ಲಿ ಎರಡು ಗಾಡಿಗಳು. ಒಂದು ಪಾನಿಪುರಿ ಮತ್ತೊಂದು ಗೋಬಿ. ಈ ಇಬ್ಬರೂ ಗೆಳೆಯರು ಹೆಚ್ಚಾಗಿ ಸೇರುತ್ತಿದ್ದು ಅಲ್ಲೇ. ಸಿದ್ದುನ ಜನ್ಮದಿನದಂದು ಅಭಿ ಅವನಿಗೆ ಹೊಟ್ಟೆ ಬಿರಿಯುವಷ್ಟು ಪಾನಿಪುರಿ ತಿನ್ನಿಸುತ್ತಿದ್ದ. ಅದೇ ರೀತಿ ಅಭಿಯ ಹುಟ್ಟಿದ ಹಬ್ಬದಂದು ಸಿದ್ದು ಅವನು "ಸಾಕಪ್ಪಾ ಸಾಕು!!!" ಎನ್ನುವಷ್ಟು ಗೋಬಿ ತಿನ್ನಿಸುತ್ತಿದ್ದ. ಕಾಕತಾಳೀಯವೆಂಬಂತೆ ಆ ಗಾಡಿಯವರಿಬ್ಬರು ಆತ್ಮೀಯ ಗೆಳೆಯರು. ಆ ಜಾಗದಲ್ಲಿ ತುಂಬಾ ಜನಪ್ರಿಯತೆ ಪಡೆದಿದ್ದರು. ಇವರಿಬ್ಬರೂ ಯಾವಾಗಲು ಅಲ್ಲೇ ಹೋಗುತ್ತಿದ್ದರಿಂದ ಆ ಗಾಡಿಯವರು ಚೆನ್ನಾಗಿ ಪರಿಚಯವಾಗಿದ್ದರು.

ಮುಂದೊಂದು ದಿನ ಇಬ್ಬರ ವಿದ್ಯಾಭ್ಯಾಸ ಮುಗಿಯಿತು. ಅಷ್ಟು ವರ್ಷಗಳಿಂದಲೂ ಒಟ್ಟಿಗೆ ಇದ್ದ ಇಬ್ಬರೂ ಉದ್ಯೋಗಕ್ಕಾಗಿ ಬೇರೆ ಬೇರೆ ಕಂಪನಿ ಸೇರಬೇಕಾಯಿತು. ಇಬ್ಬರ ಕಂಪನಿಗಳು ಒಂದೊಂದು ದಿಕ್ಕಿನಲ್ಲಿದ್ದವು. ದಿನಗಳುರುಳಿದಂತೆ ಇಬ್ಬರಿಗೂ ಭೇಟಿಯಾಗಲು ಸಮಯವಿಲ್ಲದ ಪರಿಸ್ಥಿತಿ. ಯಾವಾಗ ನೋಡಿದರೂ ಕೆಲಸ... ಕೆಲಸ... ಕೆಲಸ... ಆಗೊಮ್ಮೆ ಈಗೊಮ್ಮೆ ಒಂದು Phone ಅಥವಾ ಒಂದು SMS. "ಹೇಗಿದ್ದೀಯ? ಕೆಲಸ ಹೇಗೆ ನಡೆಯುತ್ತಿದೆ?" ಇಷ್ಟನ್ನು ಮೀರಿ ಮಾತುಕತೆ ನಡೆಯುತ್ತಿರಲಿಲ್ಲ. Phone ಮಾಡಬೇಕೆನಿಸಿದರು "ಅವನಿಗೆ ಬಿಡುವಿಲ್ಲದಿರಬಹುದೇನೋ, ಮತ್ತೆ ಎಂದಾದರೂ ಮಾತನಾಡಿಸಿದರಾಯಿತು" ಎಂದುಕೊಂಡು ಸುಮ್ಮನಾಗುತ್ತಿದ್ದರು. ಬರುಬರುತ್ತಾ ಅವರಿಬ್ಬರೂ ಭೇಟಿಯಾಗುವುದಿರಲಿ ಮಾತನಾಡುವುದೇ ಅಪರೂಪವಾಗಿ ಹೋಯಿತು. ಯಾವುದೇ ಮನಸ್ಥಾಪ ಇಲ್ಲದಿದ್ದರೂ ಇಬ್ಬರ ನಡುವೆ ಒಡನಾಟವೇ ಇಲ್ಲದಂತಾಯಿತು. ಹೆಚ್ಚು ಕಮ್ಮಿ ಒಬ್ಬರನ್ನೊಬ್ಬರು ಮರೆತೇ ಹೋಗಿದ್ದರು.

ಈ ಮಧ್ಯೆ ಸಿದ್ದುಗೆ ತನ್ನ ಕಂಪನಿಯಿಂದ ವಿದೇಶಕ್ಕೆ ಹೋಗಿ ಕೆಲಸ ಮಾಡುವ ಅವಕಾಶ ದೊರೆಯಿತು. ಅಲ್ಲಿ ಎರಡು ವರ್ಷಗಳ ಕಾಲ ನೆಲೆಸಿದ್ದು ಮತ್ತೆ ತಾಯ್ನಾಡಿಗೆ ಹಿಂದಿರುಗಿದ. ಅದೊಂದು ದಿನ ಯಾರೋ ಪರಿಚಯದವರ ಮದುವೆಗೆಂದು ಹೋಗಿದ್ದ. ಆ ಸಮಾರಂಭದಲ್ಲಿ ದೂರದ ಕುರ್ಚಿಯಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ ಸಿದ್ದುನ ಗಮನ ಸೆಳೆದ. ಎಲ್ಲೋ ನೋಡಿದ ನೆನಪು ಅವನನ್ನು. ಹತ್ತಿರ ಹೋಗಿ ಮಾತನಾಡಿಸಿದ. ಆಗ ತಿಳಿಯಿತು, ಆ ವ್ಯಕ್ತಿ ಬೇರೆ ಯಾರು ಅಲ್ಲ. ಕೆಲ ವರ್ಷಗಳ ಹಿಂದೆ ಸಿದ್ದು ಮತ್ತು ಅಭಿ ಯಾವಾಗಲು ಭೇಟಿ ಕೊಡುತ್ತಿದ್ದ ಪಾನಿಪುರಿ ಗಾಡಿಯವ. ಆ ಮನುಷ್ಯ ಸಿದ್ದುನನ್ನು ಚೆನ್ನಾಗಿ ಜ್ಞಾಪಕ ಇಟ್ಟುಕೊಂಡಿದ್ದ. ಅಲ್ಲೇ ಹಿಂದೆ ಯಾರೊಡನೆಯೋ ಮಾತನಾಡುತ್ತಿದ್ದ ತನ್ನ ಗೆಳೆಯನನ್ನು ಕರೆದ. ಅದೇ, ಗೋಬಿ ಗಾಡಿಯವ. ಅವನಿಗೂ ಸಿದ್ದುನ ನೆನಪು ಚೆನ್ನಾಗಿತ್ತು. ಸಿದ್ದು ಅವರಿಬ್ಬರನ್ನು ವಿಚಾರಿಸಿದಾಗ ತಿಳಿಯಿತು, ಈಗ ಅವರಿಬ್ಬರೂ ಸೇರಿ ಜೊತೆಯಲ್ಲಿ ಒಂದು Hotel ನಡೆಸುತ್ತಿದ್ದಾರೆಂದು. ಆ ಗಾಡಿಯವರಿಬ್ಬರು ಸಿದ್ದುನನ್ನು ಒಟ್ಟಿಗೆ, ಒಂದೇ ದನಿಯಲ್ಲಿ ಒಂದು ಮಾತು ಕೇಳಿದರು. "ಎಲ್ಲಿ ಸರ್, ನಿಮ್ಮ ಗೆಳೆಯ?".
"ಅ...ಅ...ಅಭಿ ನಾ? ಅವನು ಊರಲ್ಲಿಲ್ಲ. ನಾನೊಬ್ಬನೇ ಬಂದಿರೋದು" ಎಂದ ಸಿದ್ದು. ಸಿದ್ದುಗೆ ಮಾತುಗಳು ಗಂಟಲಲ್ಲೇ ನಿಂತಂತಾಯಿತು. ಅವರೊಡನೆ ಮಾತು ಮುಗಿಸಿದ ಮೇಲೆ ಏನೋ ಕಳೆದುಕೊಂಡ ಹಾಗೆ ಅನಿಸತೊಡಗಿತು. ಮದುವೆಯ ಊಟವನ್ನೂ ಮರೆತು ಸರಸರನೆ ಹೊರನಡೆದ. ನೇರ ಅಭಿಯ ಮನೆಯ ಬಳಿ ಬಂದ. ಅಭಿಯ ಮನೆಯಲ್ಲಿ ಬೇರೆ ಯಾರೊ ವಾಸವಾಗಿದ್ದರು. ಅವರನ್ನು ಕೇಳಿದಾಗ ತಿಳಿಯಿತು, ಅಭಿ 3 ತಿಂಗಳ ಹಿಂದೆಯೇ ಮನೆ ಬಾಡಿಗೆಗೆ ಬಿಟ್ಟು ಮುಂಬೈ ಸೇರಿಕೊಂಡಿದ್ದಾನೆಂದು. ಆ ಬಾಡಿಗೆದಾರರಿಂದ ಸಿದ್ದು ಅಭಿಯ ನಂ. ಪಡೆದುಕೊಂಡ. ತಕ್ಷಣ ಫೋನಾಯಿಸಿದ...

"ಹಲೋ..." ಆ ಕಡೆಯಿಂದ ಅಭಿಯ ಧ್ವನಿ ಕೇಳಿ ಬಂತು.

"ಹ... ಹ... ಹಲೋ... ಅಭಿ.... ನಾನು". ಅಭಿ ಒಂದು ಕ್ಷಣ ಯಾರಿರಬಹುದೆಂದು ಯೋಚಿಸಿ...

"ಸಿದ್ದು, ನೀನಾ?"

ಮತ್ತೆರಡು ಕ್ಷಣ ಮಾತೇ ಇಲ್ಲ.

"ಏನೋ ಇಷ್ಟು ದಿನ ಆದ ಮೇಲೆ ನೆನೆಸಿಕೊಂಡಿದ್ದೀಯ... ಹೇಗೋ ಇದ್ದೀಯ? ಎಲ್ಲೋ ಇದ್ದೀಯ ಈಗ?"

ಅಭಿಯ ದನಿಯಲ್ಲಿ ಏನೋ ಹೊಸದನ್ನು ಪಡೆದುಕೊಂಡ ಹರ್ಷ ಇತ್ತು.

ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಲಾರಂಭಿಸಿದ ಅಭಿಯ ಮಾತನ್ನು ಅರ್ಧಕ್ಕೆ ನಿಲ್ಲಿಸಿ ಗದ್ಗದಿತ ದನಿಯೊಂದಿಗೆ ಸಿದ್ದು,

"ಲೋ ಮಗ, ಮುಂದಿನ ಭಾನುವಾರ ನಿನ್ನ ಹುಟ್ಟು ಹಬ್ಬ ಅಲ್ವಾ? ಗೋಬಿ ತಿನ್ನಕ್ಕೆ ಬರೋಲ್ವೇನೋ?"

ಅಭಿಗೇ ಗೊತ್ತಾಗದಂತೆ ಅವನ ಕಣ್ಣಿನ ಅಂಚಿನಿಂದ ಒಂದು ಹನಿ ಹಾಗೆ ಕೆಳಗೆ ಜಾರಿತು.