ಬಾಳಿಗೊಂದು ಮುನ್ನೋಟವಿದ್ದಿದ್ದರೆ _________ ?

ಬಾಳಿಗೊಂದು ಮುನ್ನೋಟವಿದ್ದಿದ್ದರೆ _________ ?

ಬರಹ

"ನಾಳೆ ಏನಾಗುತ್ತದೆ ಎಂದು ಇಂದೇ ಗೊತ್ತಾಗುವಂತಿದ್ದರೆ?" ಇದೊಂದು ಸರಳವಾದ ಪ್ರಶ್ನೆ. ಆದರೆ ಉತ್ತರ ಮಾತ್ರ ಅಷ್ಟು ಸರಳವಾಗಿಲ್ಲ. ಇದರ ಬಗ್ಗೆ ಪುಟಗಟ್ಟಲೆ ಬರೆಯಬಹುದು, ದಿನಗಟ್ಟಲೆ ಮಾತನಾಡಬಹುದು, ಚರ್ಚಿಸಬಹುದು. ನಮಗ್ಯಾರಿಗೂ ನಾಳೆಯ ಬಗ್ಗೆ ಅಥವಾ ನಮ್ಮ ಭವಿಷ್ಯದ ಬಗ್ಗೆ ನಿರ್ದಿಷ್ಟವಾದ ಕಲ್ಪನೆ ಇರುವುದಿಲ್ಲ. ನಾಳೆ ಬದುಕಿರುತ್ತೇವೋ ಇಲ್ಲವೊ ಎನ್ನುವುದೇ ತಿಳಿದಿರುವುದಿಲ್ಲ. ಹೀಗಿದ್ದರೂ ಮನುಷ್ಯ ಏನೇನೋ ಯೋಜನೆಗಳನ್ನು ರೂಪಿಸುತ್ತಾನೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡೇ ಹತ್ತು ಹಲವಾರು ನಿರ್ಣಯಗಳನ್ನು ತೆಗೆದುಕೊಳ್ಳುತ್ತಾನೆ. ನಾಳೆಯ ಬಗ್ಗೆ ಚಿಂತಿಸಿ ವರ್ತಮಾನದಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಾನೆ. ಭಯ, ಆತಂಕ, ಆಶಾಭಾವ, ಅನುಮಾನ, ಸಂಭ್ರಮ, ಆಶ್ಚರ್ಯ ಹೀಗೆ ಅದೆಷ್ಟೋ ಹಾವ-ಭಾವಗಳು ನಮ್ಮಲ್ಲಿ ಹುಟ್ಟುವುದು ನಾಳೆ ಏನಾಗುತ್ತದೆಂಬುದರ ಪರಿಜ್ಞಾನ ಇಲ್ಲದದುರಿಂದಲೆ.

ಮನುಷ್ಯ ಏನೇ ಕೆಲಸ ಕೈಗೆತ್ತಿಕೊಂಡರೂ ಅದರಿಂದ ಒಂದು ನಿರ್ದಿಷ್ಟ ಫಲಿತಾಂಶ ಬಯಸುವುದು ಅವನ ಸಹಜ ಸ್ವಭಾವಗಳಲ್ಲೊಂದು. ಇಂತಹ ನಿರೀಕ್ಷೆಗಳೇ ಬಹಳಷ್ಟು ಸಲ ಅವನು ಕೈಗೆತ್ತಿಕೊಳ್ಳುವ ಕಾರ್ಯಗಳಿಗೆ ಪ್ರೇರಣೆ ಎನಿಸಿಕೊಳ್ಳುತ್ತವೆ. ಭವಿಷ್ಯತ್ತಿನಲ್ಲಿ ಏನಾಗುತ್ತದೆ ಎಂಬುದರ ಸ್ಪಷ್ಟ ಚಿತ್ರಣ ವರ್ತಮಾನದಲ್ಲಿ ಸಿಗುವಂತಾಗಿದ್ದಿದ್ದರೆ ಮನುಷ್ಯನಿಗೆ ಪ್ರೇರಣೆಗಳೇ ಬೇಡವಾಗುತ್ತಿದ್ದವು. ಹಾಗೆಯೇ, ಅವನು ಯಾವುದೇ ನಿರೀಕ್ಷೆ ಗಳನ್ನಿಟ್ಟುಕೊಳ್ಳದೆ ಬದುಕುತ್ತಿದ್ದ. ಮುಂದೇನಾಗುವುದು ಎಂದು ತಿಳಿದುಹೋದರೆ, ಮಾಡುವ ಕೆಲಸದಲ್ಲಿ ಯಾವುದೇ ಆಸಕ್ತಿ ಇರುತ್ತಿರಲಿಲ್ಲ. ಭವಿಷ್ಯದ ಬಗ್ಗೆ ಚಿಂತಿಸಿ ಯಾವುದೇ ಲೆಕ್ಕಾಚಾರ ಇಟ್ಟು ಕೊಳ್ಳಬೇಕಾಗಿರಲಿಲ್ಲ. ಮಾನವನಿಗೆ ಯುಕ್ತಿಯ ಅವಶ್ಯಕತೆ ತೀರಾ ಕಡಿಮೆಯಾಗಿರುತ್ತಿತ್ತು. ಎಷ್ಟು ಯೋಚಿಸಿ ಏನೇ ಉಪಾಯ ಹೂಡಿದರೂ ಕೊನೆಗೇನಾಗುವುದೆಂದು ಗೊತ್ತಿರುತ್ತದೆ. ಬುದ್ಧಿಶಕ್ತಿಯ ಬಳಕೆ ಅತ್ಯಲ್ಪವಾಗುತ್ತಿತ್ತು. ಬದುಕಲ್ಲಿ ಯಾರು ಯಾರು ಯಾವಾಗ ಎಲ್ಲಿ ನಮ್ಮನ್ನು ಕೂಡಿ ಎಲ್ಲಿಯವರೆಗೂ ಜೊತೆಗಿರುವರು ಎಂಬುದರ ಕುರಿತು ಮುಂಚಿತವಾಗಿಯೇ ತಿಳಿದುಬಿಡುತ್ತಿತ್ತು. ಜೊತೆ ಬಾಳುವ ವ್ಯಕ್ತಿಗಳು ಇಂತಿಂಥ ದಿನಗಳಂದೆ ನಮ್ಮಿಂದ ದೂರಾಗುತ್ತಾರೆ ಎಂದು ಮೊದಲೇ ತಿಳಿದರೆ ಅವರ-ನಮ್ಮ ನಡುವಿನ ಸಂಬಂಧಗಳಲ್ಲಿ ಯಾವುದೇ ವಿಶೇಷತೆಗಳಿರುತ್ತಿರಲಿಲ್ಲ .

ಎಲ್ಲರದ್ದೂ ಕನಸುಗಳಿಲ್ಲದ ಬದುಕಾಗುತ್ತಿತ್ತು. ಹೂಗಳೇ ಇಲ್ಲದ ಉದ್ಯಾನವನದಂತೆ. ಪರೀಕ್ಷೆಗೆ ಮುನ್ನ ಪ್ರಶ್ನೆಗಳು ಸೋರಿಕೆಯಾಗಿ ಆ ಪ್ರಶ್ನೆಗಳಿಗೆ ಮಾತ್ರ ತಯಾರಿ ನಡೆಸಿ ಉತ್ತೀರ್ಣಗೊಂಡಂತಿರುತ್ತಿತ್ತು ನಾವು ಮಾಡುವ ಪ್ರತಿಯೊಂದು ಕೆಲಸ. ಪರೀಕ್ಷೆಯಲ್ಲಿ ಬರುವ ಪ್ರಶ್ನೆಗಳಿಗೆ ಮಾತ್ರ ತಯಾರಿ ನಡೆಸಿ ಉತ್ತೀರ್ಣನಾದ ವಿದ್ಯಾರ್ಥಿಯ ಬುದ್ಧಿಯ ಮಟ್ಟ ಹೇಗೆ ಬೆಳೆಯುವುದಿಲ್ಲವೋ ಹಾಗೆಯೇ ನಿರೀಕ್ಷಿತ ವಾತಾವರಣದಲ್ಲಿ ಬದುಕುವ ಮನುಷ್ಯನ ಬುದ್ಧಿಯು ಜಡತ್ವದಿಂದ ಆವೃತಗೊಂಡು ಬಹುಶಃ ಅವನು ಮನುಷ್ಯನೆಂದು ಕರೆಸಿಕೊಳ್ಳುತ್ತಿರಲಿಲ್ಲವೇನೋ!!! ಭಾವನೆಗಳಿಲ್ಲದ ಅನ್ಯಜೀವಿಗಳಿಗಿಂತ ಕೊಂಚ ಹೆಚ್ಚು ಬುದ್ಧಿಮತ್ತೆಯುಳ್ಳ ಮತ್ತೊಂದು ಜೀವಿಯಾಗಿರುತ್ತಿದ್ದ ಮನುಷ್ಯ.

ಈ ಅನಿರೀಕ್ಷಿತ ಬದುಕು ಸೃಜನಶೀಲತೆ, ಛಲಗಾರಿಕೆ, ಕಲ್ಪನಾಶಕ್ತಿ, ಸಮಯಸ್ಫೂರ್ತಿ ಇವೇ ಮೊದಲಾದ ಸಾಮರ್ಥ್ಯಗಳು ಮನುಷ್ಯನಲ್ಲಿ ಹುಟ್ಟುವುದಕ್ಕೆ ಎಡೆ ಮಾಡಿಕೊಟ್ಟಿದೆ ಎಂದರೆ ತಪ್ಪಾಗಲಾರದು. ಈ ಸಾಮರ್ಥ್ಯಗಳನ್ನು ದುರುಪಯೋಗಪಡಿಸಿಕೊಂಡು ಮನುಷ್ಯ ಇಲ್ಲಿಯವರೆಗೂ ಲೆಕ್ಕವಿಲ್ಲದಷ್ಟು ದುಷ್ಕೃತ್ಯಗಳನ್ನು ನಡೆಸಿದ್ದಾನೆನ್ನುವುದೂ ಸತ್ಯ. ಜಗತ್ತಿನಲ್ಲಿ ಪ್ರತಿಯೊಂದಕ್ಕೂ ವ್ಯತಿರಿಕ್ತವಾದದ್ದಿಲ್ಲವೆ? ಹಾಗೆಯೆ ಸದ್ಬಳಕೆಗೆ ವ್ಯತಿರಿಕ್ತವಾಗಿ ದುರ್ಬಳಕೆ. ಈ ದುರ್ಬಳಕೆಯೂ ಸಹ ನಾಳೆಗಳ ಅನಿರ್ದಿಷ್ಟತೆಯಿಂದಲೇ. ಇತ್ತೀಚಿನ ದಿನಗಳಲ್ಲಿ ಸದ್ಬಳಕೆಗಿಂತ ದುರ್ಬಳಕೆಗಳ ನಿದರ್ಶನಗಳೇ ಹೆಚ್ಚುತ್ತಿರುವುದು ವಿಷಾದನೀಯ.

ಇರಲಿ. ಒಟ್ಟಿನಲ್ಲಿ ನಾಳೆ ಅಥವಾ ಭವಿಷ್ಯದ ಬಗ್ಗೆ ಮಾಹಿತಿ ನೀಡುವ ದಿವ್ಯದರ್ಶನದ ಸಾಮಾರ್ಥ್ಯವೊಂದೇನಾದರೂ ನಮಗಿದ್ದಿದ್ದಲ್ಲಿ ಅದೆಷ್ಟೋ ಅದ್ಭುತವಾದ ಇತರ ಸಾಮರ್ಥ್ಯಗಳು ಜನ್ಮವೇ ತಾಳುತ್ತಿರಲಿಲ್ಲ. ಮನುಷ್ಯ ಪ್ರಾಣಿಯ ಬದುಕು ರಾಗ-ಲಯ-ತಾಳ ಗಳ ಏರಿಳಿತಗಳಿಲ್ಲದ, ಸ್ವಾರಸ್ಯವಿಲ್ಲದ, ಏಕತಾನತೆಯಿಂದ ಕೂಡಿದ ಸಂಗೀತದಂತಿರುತ್ತಿತ್ತು.

"ಬರುವ ಕ್ಷಣದ ಕನಸಿರಲಿ, ಹೋದ ಕ್ಷಣದ ನೆನಪಿರಲಿ, ಇರುವ ಕ್ಷಣದ ಮಹತ್ವದ ಅರಿವಿರಲಿ"