ಬಾಲೇಹೊಸೂರಿನ ನವಿಲುಗಳನ್ನು ಕೊಂದವರು ಮಾಧ್ಯಮದವರು!

ಬಾಲೇಹೊಸೂರಿನ ನವಿಲುಗಳನ್ನು ಕೊಂದವರು ಮಾಧ್ಯಮದವರು!

ಬರಹ

ಶೀರ್ಷಿಕೆ ನೋಡಿ ನೀವು ಹೌಹಾರಿರಲು ಸಾಕು.

ನಾಡಿನ ಬಹುತೇಕ ರಾಜ್ಯ ಹಾಗು ರಾಷ್ಟ್ರಮಟ್ಟದ ಪತ್ರಿಕೆಗಳು ಈ ಸುದ್ದಿಯನ್ನು ಮುಖಪುಟದಲ್ಲಿ ತಮ್ಮ ವರದಿಗಾರರ ‘ಬೈಲೈನ್’ಗಳ ಸಮೇತ ಪ್ರಕಟಿಸಿ ಕ್ರಾಂತಿ ಮಾಡಿದ್ದವು. ‘ಬಾಲೇಹೊಸೂರಿನಲ್ಲಿ ನೂರಾರು ನವಿಲುಗಳ ಮಾರಣಹೋಮ’; ‘ರೈತರ ವಿಷಮಿಶ್ರಿತ ಬೀಜಗಳಿಗೆ ರಾಷ್ಟ್ರಪಕ್ಷಿಗಳ ಬಲಿ’; ‘ಪೀಕಿನ ಆಸೆಗಾಗಿ ನೂರಾರು ನವಿಲುಗಳ ಹತ್ಯೆ’; ಹೀಗೆಯೇ ತರಹೇವಾರಿ ಶೀರ್ಷಿಕೆಗಳನ್ನು ನೀಡಿ ಮಾಧ್ಯಮವೀರರು ಪೌರುಷ ಮೆರೆದು, ರಾಜ್ಯ ಸರಕಾರ, ಜಿಲ್ಲಾಡಳಿತ, ಅರಣ್ಯ ಇಲಾಖೆ, ಪಾಪ ಬಾಲೇಹೊಸೂರಿನ ರೈತರು ಹಾಗು ಸಮುದಾಯದ ಎಲ್ಲರನ್ನು ಹಾದಿ ತಪ್ಪಿಸಿದ್ದರು. ಅಕ್ಷರಶ: ಪತ್ರಿಕಾ ಧರ್ಮದ ಕಗ್ಗೋಲೆ. ಪತ್ರಿಕಾಕರ್ತರ ನೈತಿಕ ಮೌಲ್ಯಗಳ ನಿಚ್ಚಳ ಅಧ:ಪತನ.

ಆದರೆ ಬೆಳಕಿಗೆ ಬರದ ಘೋರ ದುರಂತ! ಕಾರಣ ಬರೆಯುವವರು ಓದಲೇಬೇಕು, ತಿಳಿದುಕೊಳ್ಳಬೇಕು, ಗೊತ್ತಿರದ ಸಂಗತಿಗಳಿಗೆ ತಜ್ನರನ್ನು ಸಂಪರ್ಕಿಸಬೇಕು, ಸಂಪನ್ಮೂಲ ವ್ಯಕ್ತಿಗಳ ವಿಶ್ವಾಸ ಗಳಿಸಿ ಅನುಭವ ಪಡೆಯಬೇಕು ಎಂಬ ನಿಯಮವಿಲ್ಲ! ಇನ್ನು ಬರೆದು, ಹೆಸರಿನ ಸಮೇತ ಅಚ್ಚಾದ ಸುದ್ದಿ..ತಪ್ಪು ಎಂದು ಕಂಡು ಬಂದರೆ? ಸುದ್ದಿ ರಾಷ್ಟ್ರಮಟ್ಟದಲ್ಲಿ, ಸ್ಪಷ್ಠೀಕರಣ ಸ್ಥಳೀಯ ಪುಟದಲ್ಲಿ!

ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ವಿದ್ಯಾರ್ಥಿಯಾಗಿದ್ದ ನನಗೆ ಶ್ರೀ ಪಡ್ರೆ ಅವರು ತರಬೇತಿ ನೀಡುವಾಗ ಒಂದು ಮಾತನ್ನು ಹೇಳಿದ್ದರು. ‘ನೀನು ಬರೆಯುವ ಕೃಷಿ ಸಂಬಂಧಿ ಒಂದು ಲೇಖನದಿಂದ ನೂರಾರು ಅನ್ನದ ಬಟ್ಟಲುಗಳನ್ನು ಕಸಿಯುವಂತಾದರೆ, ಯಾರಾದರೂ ಅವರ ಮಾನಸಿಕ ನೆಮ್ಮದಿ, ಬದುಕು ಕಿತ್ತುಕೊಳ್ಳುವಂತಾದರೆ? ಅಂದಿಗೆ ನೀನು ಬರೆಯುವುದನ್ನು ಬಿಟ್ಟು ಬಿಡಲು ಅಡ್ಡಿ ಇಲ್ಲ’. ಇಂದಿಗೂ ಅಕ್ಷರ ರೂಪಿ ಭಗವಂತನನನ್ನು ಪೂಜಿಸುವ ನಾನು, ಮೈಯೆಲ್ಲ ಕಣ್ಣಾಗಿ, ಆ ಮಾತುಗಳನ್ನು ನೆನೆದು ಬರೆಯುತ್ತೇನೆ. ಬಹುಶ: ಇದನ್ನೇ ಜವಾಬ್ದಾರಿಯುತ ಬರವಣಿಗೆ ಎಂದು ನಾನು ನಂಬಿದ್ದೇನೆ.

ಗದುಗಿನ ಪ್ರಗತಿಪರ ಕೃಷಿಕರು, ಹಿರಿಯರು ಹಾಗು ನನ್ನ ಮಾರ್ಗದರ್ಶಕ ಹಿರಿಯಣ್ಣ ಆರ್.ಎಸ್.ಪಾಟೀಲರ ಕ್ಷಮೆ ಕೋರಿ ನನ್ನ ಮನಸ್ಸಿನ ಬೇಗುದಿಯನ್ನು ಇಲ್ಲಿ ಹೊರಹಾಕುತ್ತಿದ್ದೇನೆ.

ನಾನು ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಫೆಲೋ. ‘ಕ್ಯಾಮ್ ಫೆಲೋ’ ಎಂದು ಹೆಮ್ಮೆಯಿಂದ ಹೇಳಬೇಕು. ಪತ್ರಿಕೋದ್ಯಮದ ಒಬ್ಬ ಜವಾಬ್ದಾರಿಯುತ ಮಾಸ್ತರ್ ಹಾಗು ಬರಹಗಾರನಾಗಿಸಿದ ಶ್ರೇಯ ಕೇಂದ್ರಕ್ಕೆ ಸಲ್ಲಬೇಕು. ಕೇಂದ್ರದ ಮಾರ್ಗದರ್ಶಕರಿಗೆ, ಟ್ರಸ್ಟ್ ವಿಶ್ವಸ್ಥರಿಗೆ ಸಲ್ಲಬೇಕು.

ಏಕಾಏಕಿ ಒಂದು ಬೆಳಿಗ್ಗೆ ನಾಡಿನ ಬಹುತೇಕ ರಾಜ್ಯಮಟ್ಟದ ಪತ್ರಿಕೆಗಳು ಬಾಲೇಹೊಸೂರಿನ ನೂರಾರು ನವಿಲುಗಳ ಮಾರಣ ಹೋಮದ ಸುದ್ದಿ ಹೊತ್ತು ತಂದು ನಮ್ಮನ್ನೆಲ್ಲ ನಿದ್ದೆಗೆಡಿಸಿದವು. ನವಿಲುಗಳ ಬಗ್ಗೆ ಸಂಶೋಧನೆ ಕೈಗೊಂಡು ತಿರುಗುತ್ತಿದ್ದ ನನಗೆ ‘ಕ್ಯಾಮ್’ ಬಾಲೇಹೊಸೂರಿನ ಘಟನೆಯ ಸತ್ಯಶೋಧನೆಯ ಜವಾಬ್ದಾರಿ ಹೊರಿಸಿ(ಸುಮಾರು ಒಂದು ತಿಂಗಳ ನಂತರ), ಹಿರಿಯಣ್ಣ ಆರ್.ಎಸ್.ಪಾಟೀಲರ ಮಾರ್ಗದರ್ಶನದಲ್ಲಿ
ಕಳುಹಿಸಿಕೊಟ್ಟಿತು.

ಗದುಗಿಗೆ ಹೋದೆ. ಪಾಟೀಲರು ಬಿಸಿಲು, ಮಳೆ, ಗಾಳಿ ಲೆಕ್ಕಿಸದೇ ಬಸ್ಸುಗಳ ಅನಾನುಕೂಲತೆ ಲೆಕ್ಕಿಸಿ ದ್ವಿಚಕ್ರ ವಾಹನದ ಮೇಲೆಯೇ ಹೋಗುವುದಾಗಿ ನಿಶ್ಚಯಿಸಿದರು. ಅತ್ತಿಗೆ ನಮಗೆಲ್ಲ ಬುತ್ತಿಯ ಗಂಟು ಕಟ್ಟಿದರು. ಗದುಗಿನಿಂದ ಸುಮಾರು ೮೦ ಕಿಲೋ ಮೀಟರ್ ದೂರದ ಬಾಲೇಹೊಸೂರಿಗೆ ಹೊರಟೆವು. ದಾರಿಯಲ್ಲಿ ಪರಿಚಯಸ್ಥರಿಗೆ ವಿಷಯ ತಿಳಿಸುತ್ತ, ಮಾರ್ಗದರ್ಶನ ಕೋರುತ್ತ, ಆ ಊರಿನಲ್ಲಿ ಪರಿಚಯ ಹುಟ್ಟಿಸಿ ಕೊಟ್ಟರು ಪಾಟೀಲರು.

ಎರಡು ಹಳ್ಳಗಳನ್ನು ಸ್ಥಳೀಯರ ಸಹಾಯದಿಂದ ದಾಟಿ, ಬೀಳುತ್ತ, ಏಳುತ್ತ, ಏರು-ದಿಣ್ಣೆ ಹತ್ತಿ ಇಳಿದು ೧ ತಾಸು ೩೦ ನಿಮಿಷದ ದಾರಿ ಕ್ರಮಿಸಿ ಮುಟ್ಟಿದೆವು. ಸ್ಥಳೀಯ ಪಂಚಾಯ್ತಿ ಸದಸ್ಯರನ್ನು ಭೇಟಿ ಮಾಡಿದೆವು. ಅತ್ಯಂತ ನೋವಿನಲ್ಲಿದ್ದರು. ಮಾಧ್ಯಮದವರು ಇಷ್ಟು ಬೇಜವಾಬ್ದಾರಿಯಿಂದ ನಡೆದುಕೊಳ್ಳಬಾರದಾಗಿತ್ತು ಎಂಬ ಸಹಜವಾದ ಆಕ್ರೋಷ, ಸಿಟ್ಟು, ಬೇಗುದಿ, ಹತಾಷೆ ಮತ್ತು ಜಿಗುಪ್ಸೆ ಏಕಕಾಲದಲ್ಲಿ ಅವರಲ್ಲಿ ಮನೆಮಾಡಿದ್ದವು. ನಮ್ಮ ಕಣ್ಣುಗಳು ಸಹ ಹನಿಗೂಡಿದವು. ನಾವು ಮಾಧ್ಯಮದವರಲ್ಲ ಎಂದು ನಂಬಿಸುವುದೇ ಕಷ್ಟವಾಗಿತ್ತು. ಪಾಟೀಲರು ತಮ್ಮ ಅನುಭವದಿಂದ ನನ್ನ ಸಮಸ್ಯೆಗೆ ಸೂಕ್ತವಾದ ಪರಿಹಾರ ದೊರಕಿಸಿದರು.

ಊರಿನಲ್ಲಿ ನವಿಲುಗಳು ಸತ್ತಿದ್ದು ಸತ್ಯ. ಆದರೆ ಎಷ್ಟು? ಹೇಗೆ? ಕಾರಣಗಳೇನು? ರೈತರ ಪಾಲೇನು? ಪತ್ರಿಕೋದ್ಯಮದ ಮೂಲಭೂತವಾದ ಪಂಚ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೊದಲೇ, ‘ಬೈಲೈನ್’ ಕ್ರೇಜಿನ, ರಾಜ್ಯವ್ಯಾಪಿ ಸಾಧ್ಯವಾದರೆ ರಾಷ್ಟ್ರವ್ಯಾಪಿ ಖ್ಯಾತಿ (ವಿಷಯ/ ಸ್ವತ:) ಪಡೆಯುವ ಹುನ್ನಾರದಿಂದ ಮಾಧ್ಯಮ ಯೋಧರು ಅಪಕ್ವ, ಅಸತ್ಯದಿಂದ ಕೂಡಿದ ವರದಿ ಮಾಡಿ, ಮೂಲ ನಂಬಿ ಕೆಟ್ಟ ದೃಷ್ಠಾಂತವಿದು. ಇವರೆಲ್ಲ ಪ್ರಕಟಿಸಿದಂತೆ ‘ಸತ್ತಿದ್ದು ನೂರಾರು ನವಿಲುಗಳು, ನೂರಾರು ಕಬ್ಬಕ್ಕಿಗಳು, ಇಪ್ಪತ್ತಕ್ಕೂ ಹೆಚ್ಚು ಗಿಳಿಗಳು, ಗೊರವಂಕಗಳು ಹಾಗು ಸತ್ತ ಇವುಗಳನ್ನೆಲ್ಲ ತಿಂದ ಹತ್ತಾರು ನಾಯಿಗಳು!’ ಅಲ್ಲ .

ಮೊದಲು ಸತ್ತಿದ್ದು ಮಾತ್ರ ೭ ನವಿಲುಗಳು. ಪರಿಸ್ಥಿತಿ ಅರಿವಿಗೆ ಬರುತ್ತಲೇ ಸ್ಥಳೀಯರೇ ಉಪಚರಿಸಲು ಮುಂದಾದಾರೂ ಮತ್ತೆ ೫ ನವಿಲುಗಳು ಚಿಕಿತ್ಸೆ ಫಲಿಸದೇ ಕೊನೆಯುಸಿರು ಎಳೆದವು. ಹಾಗಾಗಿ ಒಟ್ಟು ೧೨ ನವಿಲು ಆಕಸ್ಮಿಕವಾಗಿ ಸಾವನಪ್ಪಿದವು. ಮಳೆಯಾದ ಪ್ರಯುಕ್ತ ರೈತರು ರಾಸಾಯನಿಕ ರಸ ಗೊಬ್ಬರ, ದ್ರಾವಣದಲ್ಲಿ ಅದ್ದಿ ಬಿತ್ತಿದ ಬೀಜಗಳನ್ನು ಅವು ತಿಂದಿದ್ದವು. ಗುಡ್ಡಕ್ಕೆ ಹತ್ತಿಕೊಂಡಿರುವ ಹೊಲಗಳ ಬದುವಿನ ಗುಂಟ ಮಿಕಗಳ (ಕೋರೆ ಇರುವ ಕಾಡು ಹಂದಿ, ರೈತರನ್ನು ಸಹ ಅಟ್ಟಿಸಿಕೊಂಡು ಬಂದ ಉದಾಹರಣೆಗಳಿವೆ. ತಿವಿದು ಗಾಯಸಹ ಗೊಳಿಸಿವೆ.) ಬೆಳೆ ಹಾನಿ ತಡೆಯಲು ಕೆಲವರು ವಿಷ ಲೇಪಿತ ಕಾಳುಗಳನ್ನು ಹರಡುತ್ತಾರೆ. ಆಕಸ್ಮಿಕವಾಗಿ ಅದನ್ನು ಸಹ ಹೆಕ್ಕಿ ಕೆಲ ನವಿಲುಗಳು ತಿಂದ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಆದರೆ ಇದು ಉದ್ದೇಶ ಪೂರ್ವಕವಾಗಿ ವಿಷ ಹಾಕಿ ಕೊಂದ ಸೇಡಿನ ಕ್ರಮವಲ್ಲ. ಮಾಧ್ಯಮಗಳ ವರದಿ ಹಾಗೆ ಹೇಳುತ್ತದೆ!

ಬಾಲೇಹೊಸೂರಿನ ಮುಖಂಡರುಗಳ ಪ್ರಕಾರ..‘೮ ವರ್ಷಗಳ ಹಿಂದೆ, ಮೊದಲು ಪಕ್ಕದ ಶಿರಹಟ್ಟಿಯಿಂದ ತಾವೇ ಜೊತೆಯಾಗಿ ಬಂದಿದ್ದು ಎರಡು ನವಿಲುಗಳು. ಊರಿನ ಮೆರಗು ಅವುಗಳಿಂದ ಇಮ್ಮಡಿಸಿತ್ತು. ಇಲ್ಲಿನ ರೈತಾಪಿ ವರ್ಗದಿಂದ ಅವುಗಳಿಗೆ ಯಾವ ತೊಂದರೆಯೂ ಆಗಲಿಲ್ಲ. ಕೃಷಿ ಚಟುವಟಿಕೆಯಲ್ಲಿ ಸಹಕಾರಿಯಾಗಿ ಗುಡ್ಡದಲ್ಲಿ ಬದುಕಿದ್ದವು. ಈ ಮಾತು ಹೇಳುವಾಗ ಅವರ ಕಂಠ ಗದ್ಗದಿತವಾಗುತ್ತದೆ. ಇಲ್ಲಿಯವರೆಗೆ ಸಂತಾನ ಅಭಿವೃದ್ಧಿಯಾಗಿ ೪೭ ನವಿಲುಗಳಿಗೆ ಅದು ಬಂದು ನಿಂತಿತ್ತು. ಸಂಜೆಯ ವೇಳೆ ಅಕ್ಕ-ಪಕ್ಕದ ಊರಿನವರು ಬಂದು ಅವುಗಳ ಕೂಗು, ಓಟ, ನೃತ್ಯ ಸವಿದಿದ್ದಿದೆ. ಬಿತ್ತಿದ ವಿಷ ಬೀಜ ತಿಂದೋ ಅಥವಾ ಮಿಕಗಳಿಗಾಗಿ ಇಟ್ಟಿದ್ದ ವಿಷಲೇಪಿತ ಆಹಾರ ಮೇಯ್ದೋ ಅವು ಸತ್ತಿವೆ. ನಾವೇ ಜೋಪಾನ ಮಾಡಿ ಕೊಲ್ಲಲು ನಾವೇನು ಕಟುಕರಲ್ರೀ!’

‘ನಾವು ಇಲ್ಲೆ ಅವನ್ನ ಬದುಕಿಸಾಕ ಓಡಾಡಿದರ..ಗದಗ ಪೇಪರ್ ಆಫೀಸುಗಳಿಗೆ ಫೋನ್ ಮಾಡಾಕ ಒಂದಷ್ಟು ಮಂದಿ ಗುದ್ಯಾಡಿದಾರ್ರಿ. ಪರಿಸ್ಥಿತಿ ನಮಗ ಗೊತ್ತಾಗೋ ಮೊದಲ, ಇಲ್ಲಿಯವರ ಕಡೆಯಿಂದ ಫೋಟೊ ಹೊಡಿಸಿಕೊಂಡು, ಕುಂತಲ್ಲೇ ತರಿಸಿಕೊಂಡು ಬೇಕಾಬಿಟ್ಟಿ ಸುದ್ದಿ ಹೊಡದು ಬಿಟ್ಟ್ರಿ. ಮಾರನೇ ದಿವಸ ಪೋಲೀಸರು..ಫಾರೆಸ್ಟನವರು ಬಂದು ಯಾರ ಹೊಲದಾಗ ಬಿದ್ದ್ದು ಸತ್ತಿದ್ವಲಾ ಆ ಹೊಲದ ಮಾಲಕನ್ನ ಮತ್ತ, ಕೋರಿಗೆ ತುಗೋಂಡಿದ್ದ ಬಡಪಾಯಿ ರೈತನ್ನ ದನಕ್ಕ ಬಡಧಾಂಗ ಬಡದು ಎಳಕೋಂಡು ಹೋದ್ರಿ. ಪಾಪ ಅವನ ತಾಯಿ, ಹೆಂಡತಿ, ಮಕ್ಕಳು ಕೂಳಿಗೆ ಗತಿಯಿಲ್ಲದ ಸಾಯೋವ್ಹಾಂಗ ಪರಿಸ್ಥಿತಿ ನಿರ್ಮಾಣ ಮಾಡಿ ಬಿಟ್ರಿ. ಇದಕೆಲ್ಲ ಯಾರ ಕಾರಣಾ?’

ಉತ್ತರ ನನಗೆ ಕಷ್ಟವಾಗಿತ್ತು. ಮಾಧ್ಯಮದವರ ಬೇಜವಾಬ್ದಾರಿ ವರದಿಯಿಂದ ಇಡೀ ಊರೇ ನಲುಗಿತ್ತು. ನಮ್ಮ ಗಂಟಲು ಉಬ್ಬಿಬಂದಿತ್ತು. ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಸ್ವತ: ಕಣ್ಣಾರೆ ನೋಡಿರಲಿಲ್ಲ. ಊರಿನ ಮುಖಂಡರನ್ನು ಸಂಪರ್ಕಿಸಿರಲಿಲ್ಲ. ಜಿಲ್ಲಾಡಳಿತಕ್ಕೂ ವಿಷಯ ತಿಳಿಸಿರಲಿಲ್ಲ. ಪೊಲೀಸರು, ಅರಣ್ಯ ಇಲಾಖೆಯವರು, ಕೃಷಿ ಇಲಾಖೆಯವರು ಯಾರನ್ನೂ ಮಾತನಾಡಿಸಿರಲಿಲ್ಲ. ತೋಚಿದ್ದು, ಅನಿಸಿದ್ದು, ಕಲ್ಪಿಸಿಕೊಂಡಿದ್ದು ಗೀಚಿದರು. ನಿಜಾರ್ಥದಲ್ಲಿ ಇವರು ವ‘ರದ್ದಿ’ಗಾರರು!ಇದು ಪಾತಕ ಪತ್ರಿಕೋದ್ಯಮವಲ್ಲವೇ?

ಬರೆಯುವವರು ರೈತನ ಸ್ಥಾನದಲ್ಲಿಯೂ ನಿಂತು ಒಮ್ಮೆ ಪರಿಸ್ಥಿತಿ ಅರಿಯಬೇಕು. ಅನುಭವಿಸಿ ನೋಡಬೇಕು. ಏಕಮುಖಿಯಾಗಿ ಲೇಖನಿ ಓಡಿಸಿದರೆ ಹೇಗೆ? ಸದ್ಯ ಈ ಮಾಧ್ಯಮಗಳ ಜವಾಬ್ದಾರಿ ಎಂದರೆ..ಕಾಡು ಉಳಿಯಬೇಕು. ನಾಡೂ ಬೆಳೆಯಬೇಕು. ಪ್ರಾಣಿ-ಪಕ್ಷಿಗಳೊಂದಿಗೆ ಮನುಷ್ಯ ಸಹಬಾಳ್ವೆ ಮಾಡುವಂತಾಗಬೇಕು. ಪರಸ್ಪರರ ಹಕ್ಕು, ಸ್ವಾತಂತ್ರ್ಯ ಹಾಗು ಗೌರವ ಉಳಿಸಿಕೊಂಡು ‘ಬದುಕಿ, ಬದುಕಲು ಬಿಡಿ’ ಧ್ಯೇಯವಾಗಬೇಕು. ಅಂತಹ ಸೂತ್ರ ನೀಡಲಿ ಈ ಮಾಧ್ಯಮದ ಬುದ್ಧಿವಂತರು. ಆ ಸೂತ್ರ ಅನುಷ್ಠಾನಗೊಳಿಸುವ ಬದ್ಧತೆ ತೋರಿಸಲಿ ನಮ್ಮ ಸರಕಾರಗಳು.

ನಮಗೆ ಇಲ್ಲಿ ರೈತನ ಮಿತ್ರ ನವಿಲೂ ಮುಖ್ಯ. ನಮ್ಮ ಅನ್ನದ ಮೂಲ ರೈತನ ಹಿತವೂ ಮುಖ್ಯ. ಆತನ ಸಮಸ್ಯೆ ನಮ್ಮೆಲ್ಲರ ಸಮಸ್ಯೆ. ಏಕೆಂದರೆ ನಾವು ಡಿಗ್ರಿ ಪಡೆದವರು. ಓದಿದವರು. ಆತನಿಗೆ ದಾರಿ ತೋರಿಸಬೇಕಾದವರೆ ದಾರಿ ತಪ್ಪಿಸಿದರೆ? ನಮ್ಮ ವಿಚಾರಗಳ ಮೂಲಕ ‘ಪಾಲಸಿ’ ತಯಾರಿಸುವವರ ಮೇಲೆ ಪ್ರಭಾವ ಬೀರಬೇಕಿದೆ. ದೀನ-ದುರ್ಬಲರಿಗೆ ಧ್ವನಿಯಾಗಬೇಕಾದ ಮಾಧ್ಯಮ ಕತ್ತು ಹಿಚುಕುವಂತಾದರೆ?

ಈ ಕಾಗದದ ಹುಲಿಗಳ ಪ್ರತಾಪ ಇಲ್ಲಿಗೆ ಮುಗಿಯಲಿಲ್ಲ. ಸತತವಾಗಿ ತಾವು ಬರೆದಿದ್ದೇ ಸತ್ಯ ಎಂದು ಬಿಂಬಿಸಲು ‘ಫಾಲೋಅಪ್’ ವರದಿಗಳ ಬಣ್ಣ ಬಳಿಯುತ್ತ ಹೋದರು. ಆದರೆ ಗದುಗಿನ ಸಣ್ಣ ಹಾಗು ಮಧ್ಯಮ ಪ್ರಸಾರವುಳ್ಳ ಪತ್ರಿಕೆಗಳು, ಟ್ಯಾಬ್ಲಾಯಿಡ್ ಗಳು ವಸ್ತುನಿಷ್ಠ ವರದಿ ಬರೆದಿವೆ ಎಂಬುದೇ ಸಮಾಧಾನ. ಈ ರಾಜ್ಯ ಮಟ್ಟದ ಮತ್ತು ರಾಷ್ಟ್ರಮಟ್ಟದ ದೊಡ್ಡ ಪತ್ರಿಕೆಗಳ ಆರ್ಭಟದಲ್ಲಿ ಅದು ಗಮನ ಸೆಳೆಯಲಿಲ್ಲ. ಆ ಪ್ರತಿಗಳು ನನ್ನಲ್ಲಿವೆ.

ಕೊನೆಗೆ ಎಲ್ಲ ಪತ್ರಿಕೆಗಳ ಸಂಪಾದಕರಿಗೂ ನಾನು ಪತ್ರ ಬರೆದೆ. ಯಾರು ಪ್ರಕಟಿಸಲಿಲ್ಲ! ಸ್ಪಷ್ಠೀಕರಣ ಕೊಡಲಿಲ್ಲ. ಬೇಜವಾಬ್ದಾರಿಯಿಂದ ವರದಿ ಬರೆದ ಯಾರಿಗೂ ಶಿಕ್ಷೆಯಾಗಲಿಲ್ಲ. ಶಿಸ್ತು ಕ್ರಮ ಕೂಡ ಜರುಗಿಸಲಿಲ್ಲ. ಇತ್ತೀಚೆಗೆ ‘ದ ನ್ಯೊ ಇಂಡಿಯನ್ ಎಕ್ಸಪ್ರೆಸ್’ ಪತ್ರಿಕೆಯಲ್ಲಿ ಈ ಘಟನೆಯ ಉಲ್ಲೇಖವಾಗಿತ್ತು. ಕೂಡಲೇ ನಾನು ಮಿಂಚಂಚೆ ರವಾನಿಸಿದೆ. ಸಂಪಾದಕರಿಂದ ಮರು ಓಲೆ ಪಡೆದೆ. ಕ್ರಮ ಜರುಗಿಸುವ ಭರವಸೆ ಸಹ ನೀಡಿದ್ದಾರೆ.