ಬಾಳಿಗೆ ಬೆಳಕು - ಶ್ರೀ ಶಂ.ಬಾ.ಜೋಶಿಯವರ ವಿಚಾರಗಳು

ಬಾಳಿಗೆ ಬೆಳಕು - ಶ್ರೀ ಶಂ.ಬಾ.ಜೋಶಿಯವರ ವಿಚಾರಗಳು

ಬರಹ

( ಹಿಂದೆ ಶಂಬಾರವರ ಯಾವುದೋ ಪುಸ್ತಕಗಳನ್ನು ( ಹೆಸರು ನೆನಪಿಲ್ಲ ) ಓದುತ್ತಿದ್ದಾಗ ನಾನು ಬರೆದಿಟ್ಟುಕೊಂಡ ಕೆಲವು ವಿಚಾರ ಇಲ್ಲಿವೆ)

೫೦ ವರ್ಷಗಳ ಹಿಂದೆ ನನಗೆ ಹೊಳೆಯಿತು . 'ಎರಡಿಲ್ಲದ ಬಾಳ್ವೆಯೇ ಪೂರ್ಣ ಕೃತಿ' . ಆಚಾರ ವಿಚಾರಗಳಲ್ಲಿ ಅಂತರವು ಉಳಿಯದ ಬಗೆಯಲ್ಲಿ ಬಾಳಲು ಯತ್ನ ಮಾಡಬೇಕು. ಸಾಮಾಜಿಕ ಕಲ್ಯಾಣಕ್ಕೆ ಕಾರಣವಾಗಬಲ್ಲ ಯಾವುದೇ ಸಂಕಲ್ಪ , ಅಧ್ಯಯನ ಮತ್ತು ಕಾಲಕಾಲಕ್ಕೆ ನನ್ನ ನುಡಿಗಳ ಪ್ರಾಮಾಣಿಕ ವಿಮರ್ಶೆ ಇವು ನನ್ನನ್ನು ಈವರೆಗೆ ಕಾಪಾಡಿಕೊಂಡು ಬಂದಿವೆ.
..
ಅಗ್ನಿವಿದ್ಯೆ :- ಬಾಳಿಗೆ ಬೆಳಕು ದೊರಕುವದು ಅಗ್ನಿಯಿಂದ . ಚಿದಗ್ನಿ ಪ್ರಜ್ವಲಿಸಿ ಪ್ರಸನ್ನವಾದಾಗ ಅರಿವಿನ ಬೆಳಗು ಮೂಡುತ್ತದೆ. ಮಾನವನಲ್ಲಿ ಹೊತ್ತುವ ಚಿದಗ್ನಿಯು ಎರವಲು ಪಡೆದದ್ದಾಗಿರದೆ ಅಂತರಂಗದಲ್ಲಿ ನಡೆಯುವ ಅರೆದಾಟದಿಂದ ಆಗಿರಬೇಕು. ಪೂರ್ವೋತ್ತರ ಪಕ್ಷಗಳೆಂಬ ಅರಣಿಗಳಿಂದ ಕಿಡಿಯುಂಟು ಮಾಡುವದು ಅಗ್ನಿಹೋತ್ರಿಯ ಕರ್ತವ್ಯ . ಜಿಜ್ಞಾಸೆ , ಕುತೂಹಲ , ಸಂದೇಹ , ಅಸಂತುಷ್ಟಿ ಇವು ಆ ಕಿಡಿಗಳು . ಪರಮ ಶ್ರ್‍ಏಯಸ್ಸನ್ನು ಕೋರುವವರು ಆಜನ್ಮವೂ ಆ ಅಗ್ನಿ ಆರದಂತೆ ನೋಡಿಕೊಳ್ಳಬೇಕು. ಅದು ಹೇಗೆ?

೧. ನೋವಿನ ನೆನಪು ಪಡೆದಿರುವದರಿಂದ -- ತನ್ನಿಂದ ನಲ್ಗೆಲಸ , ಹಿರಿಗೆಲಸ , ಒಳ್ಳೆ ಕೆಲಸ ಆಗಲಿಲ್ಲೆಂಬ ನೋವು , ಜನ್ಮಸಾರ್ಥಕತೆಯ ನೋವು. ಪರಿಪೂರ್ಣತೆಯ ಆದರ್ಶವನ್ನು ಇಟ್ಟುಕೊಳ್ಳುವದರಿಂದ ಸಾಧ್ಯ.

೨. ತನ್ನ ಸಂದೇಹಗಳಿಗೆ ಕಿವಿಗೊಡುವದು. ವಿಸಂಗತಿ ಗುರುತಿಸುವದು, ಕೊರತೆಯನ್ನು ಪರಿಶೀಲಿಸುವದು , ಯುಕ್ತಾಯುಕ್ತತೆ ಅರಿಯುವದು.

೩. ತನ್ನ ಚಿದಗ್ನಿಯ ಪ್ರಜ್ವಲಿಕೆಗೆ ತಾನೇ ಯಜಮಾನನಾಗಿರುವದು.

...

ಅಸಂತುಷ್ಟಿಯೇ ಏಳ್ಗೆಯ ಮೂಲ . ಬೇಕು ಎನ್ನುವದು ಬದುಕು; ಸಾಕು ಎನ್ನುವವನು ಸಾವಿನ ಊರಿನವನು.