'ಮುಕ್ತ' ಧಾರಾವಾಹಿ ಮತ್ತು ಚರ್ಚೆ

'ಮುಕ್ತ' ಧಾರಾವಾಹಿ ಮತ್ತು ಚರ್ಚೆ

[:http://sampada.net/user/msanjay75|ಸಂಜಯ್]ರವರ ಬ್ಲಾಗಿನಲ್ಲಿ ಮುಕ್ತ ಧಾರಾವಾಹಿಯ ಬಗ್ಗೆ ದೊಡ್ಡದೊಂದು ಚರ್ಚೆಯೇ ನಡೆಯುತ್ತಿದೆ. ಹಿಂದೊಮ್ಮೆ ಆ ಪುಟವನ್ನು ನೋಡಿದ್ದೆನಾದರೂ ಇಂದು ಅವರು "ಹರಿ, 'ಮುಕ್ತ' ಬಗ್ಗೆ ನನ್ನ ಬ್ಲಾಗಿನಲ್ಲಿ ನಡೆಯುತ್ತಿರೋ ಚರ್ಚೆ ಫಾಲೋ‌ ಮಾಡ್ತಿದ್ದೀರ?" ಎಂದು ಮೇಯ್ಲ್ ಮಾಡಿದ್ದರು. ನೋಡಲು ಹೋದ್ರೆ ೧೧೪ ಕಾಮೆಂಟುಗಳು! ಯಾವುದನ್ನ ಓದೋದು? ಕೊನೆಗೆ ಕೊನೆಯಲ್ಲಿರುವ ಕೆಲವನ್ನು ನೋಡಿ ಬಂದೆ. ;-) ಕನ್ನಡ ದಾರಾವಾಹಿಗಳ ಬಗ್ಗೆ ಚರ್ಚೆ ಮನೆ ಮಂದಿ, ಅಕ್ಕ ಪಕ್ಕದವರ ಮಾತಿನಷ್ಟೇ ಅಲ್ಲದೆ [:http://msanjay.weblogs.us/entries/88/muktha-tn-seetharam|ಅಂತರ್ಜಾಲಕ್ಕೂ‌ ಧಾವಿಸಿರುವುದನ್ನ] ನೋಡಿ ಸಂಪದದಲ್ಲಿ ಕನ್ನಡದಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ನೋಡಿ ಸಂತೋಷಗೊಂಡ ಲೇಖಕರೊಬ್ಬರಂತೆಯೇ ಆಯಿತು.

ಸುಮಾರು ಒಂದು ವರ್ಷದಿಂದ ಟಿ ವಿ ನೋಡೋದು ನನಗೆ ಕ್ರಿಕೆಟ್ ಗೆ ಮಾತ್ರ ಸೀಮಿತ. ಆದರೆ ಇತ್ತೀಚೆಗೆ ಅಮ್ಮ ಅಪ್ಪ ನೋಡಲು ಕುಳಿತಾಗ, ನೋಡಲು ಸಮಯ ಸಿಕ್ಕಾಗ, 'ಮುಕ್ತ'ದಲ್ಲಿ ನಡೆಯುತ್ತಿರುವ ಕೇಸು ಎಲ್ಲಿಯವರೆಗೂ ಬಂದಿದೆ ಎಂದು ನೋಡುತ್ತಿರುತ್ತೇನೆ. ವಾಸ್ತವವಾಗಿ ನಡೆಯುವಂತಹ ಎಷ್ಟೋ ಸಂಗತಿಗಳನ್ನು ಬಹಳ ಚೆನ್ನಾಗಿ ಸೀತಾರಾಂ ತಮ್ಮ ದಾರಾವಾಹಿಯಲ್ಲಿ ಬಿತ್ತರಿಸಿದ್ದಾರೆ. ರಾಜಕೀಯದಲ್ಲಿರುವವರ ಕಪಟತನ, ಪೋಲೀಸರ ಭ್ರಷ್ಟಾಚಾರ, ದುಡ್ಡು ಪಡೆದು ಸಂಪೂರ್ಣ ಉಲ್ಟಾ ತಿರುಗಿಸುವವರ ನರಿ ಬುದ್ಧಿ - ಇವೆಲ್ಲ ಜೀವನದಲ್ಲೊಮ್ಮೆ ಕಂಡಮೇಲೆಯೇ ಎಚ್ಚರಿಕೆಯಿಂದಿರುವ ಛಾಪು ಬಿಟ್ಟು ಹೋಗುತ್ತದೋ ಏನೋ, ಅನುಭವಿಸಿದವರನ್ನು ಮಾನಸಿಕವಾಗಿ ಇನ್ನಷ್ಟು ಗಟ್ಟಿ ಮಾಡುತ್ತದೋ ಏನೋ, ಆದರೆ ಸೀತಾರಾಂ ಅವರ ಧಾರಾವಾಹಿ ಮಾತ್ರ ಇನ್ನೂ ಜೀವನದಲ್ಲಿ ಇದನ್ನೆಲ್ಲ ಅನುಭವಿಸದೇ ಏಟು ತಿನ್ನದೇ ಇರುವವರಿಗೆ ಚೆನ್ನಾಗಿ ಕಣ್ಣುತೆರೆಸುವಂತಹ ingredients ತುಂಬಿಕೊಂಡಿದೆ. ಒಟ್ಟಾರೆ ಸಣ್ಣ ಪರದೆಯ ಮೇಲೆ ಕೆಲವು ಮಹತ್ವದ ಪ್ರಯೋಗಗಳು ಕನ್ನಡದಲ್ಲೇ ಮೊದಲ ಬಾರಿಗೆ ಆಗುತ್ತಿರುವುದು ಬಹಳ ಹೆಮ್ಮೆಯ ವಿಷಯ.

Rating
No votes yet