ಆಗ ಗಟಾರಿನಲ್ಲಿ ಬಂಗಾರ ಹೆಕ್ಕುತ್ತಿದ್ದವರು..ಈಗ ಸೆಲ್ ಫೋನ್ ಗಳಲ್ಲಿ ಹುಡುಕುತ್ತಿದ್ದಾರೆ!

ಆಗ ಗಟಾರಿನಲ್ಲಿ ಬಂಗಾರ ಹೆಕ್ಕುತ್ತಿದ್ದವರು..ಈಗ ಸೆಲ್ ಫೋನ್ ಗಳಲ್ಲಿ ಹುಡುಕುತ್ತಿದ್ದಾರೆ!

ಬರಹ

ಧಾರವಾಡದ ಗಾಂಧಿ ಚೌಕ ಸರಾಫ್ ಕಟ್ಟೆ ಎಂದೇ ಪ್ರಸಿದ್ಧ. ಸುಮಾರು ೨೦೦ ಬಂಗಾರದ ಅಂಗಡಿಗಳಿವೆ. ‘ವಿಶ್ವಕರ್ಮ’ ದೇಸಿ ಪತ್ತಾರರು, ಮಾರವಾಡಿಗಳು, ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು, ದೈವಜ್ನ ಬ್ರಾಹ್ಮಣ ಸಮಾಜದವರು, ಕಾರವಾರಿಗಳು, ಬಂಗಾಲಿಗಳು ಸೇರಿದಂತೆ ಮುಸಲ್ಮಾನರು ಸಹ ಇಲ್ಲಿ ಬಂಗಾರದ ಆಭರಣ ತಯಾರಿಸುವ ಕಾರ್ಖಾನೆಗಳು ಹಾಗು ಶೋ ರೂಂಗಳನ್ನು ಇಟ್ಟು ಕೊಂಡಿದ್ದಾರೆ.

ಈ ಭಾಗದಲ್ಲಿರುವ ಗಟಾರುಗಳಿಗೆ ವಿಶೇಷವಾದ ಸೇವೆ ಸಲ್ಲುತ್ತದೆ. ನಿತ್ಯವೂ ಇಲ್ಲಿ ೮ ರಿಂದ ೧೦ ಕುಟುಂಬಗಳು (ಪತಿ, ಪತ್ನಿ, ವಯಸ್ಸಾದ ತಾಯಿ ಹಾಗು ಚಿಕ್ಕ ಮಕ್ಕಳು) ಕೈಯಲ್ಲಿ ಬ್ರಷ್, ತೆಂಗಿನನಾರಿನ ಕಸಬರಿಗೆ ಹಾಗು ಗಟಾರು ನೀರನ್ನು ಜರಡಿ ಹಿಡಿಯಲು ಸಣ್ಣ ಪ್ರಮಾಣದಿಂದ ದೊಡ್ಡ ಪ್ರಮಾಣದ ಕಣ್ಣುಗಳಿರುವ ಜರಡಿ, ಕಬ್ಬಿಣ ಬುಟ್ಟಿ, ಕೈ ಆಕಾರದಲ್ಲಿರುವ ಕಬ್ಬಿಣ್ದ ಹಿಡಿ ಇಷ್ಟೆಲ್ಲ ಇಟ್ಟುಕೊಂಡು ಕಸದಲ್ಲಿ ರಸ ಹಿಂಡುವ ಕಾಯಕದಲ್ಲಿ ತೊಡಗಿರುತ್ತಾರೆ.

ನಾವು ನಮ್ಮ ಅಡುಗೆಯ ಮನೆಯಲ್ಲಿ ಚಕ್ಕಳ ಬಕ್ಕಳ ಹಾಕಿ ಊಟಕ್ಕೆ ಕುಳಿತಷ್ಟೇ ಸಲೀಸಾಗಿ ಮತ್ತು ಹಾಯಾಗಿ ಗಟಾರಿನಲ್ಲಿ ಕುಳಿತಿರುತ್ತಾರೆ. ಹೊಲಸು, ದುರ್ನಾತ, ಮಲೀನ ನೀರು ಯಾವುದೂ ಲೆಕ್ಕಕ್ಕಿಲ್ಲ. ಅವರಿಗೆ ಅದು ಬಾಧಿಸುವುದೂ ಇಲ್ಲ. ಎಲ್ಲರು ಲೋಕಾಭಿರಾಮವಾಗಿ ಮಾತನಾಡುತ್ತ, ಹರಟುತ್ತ, ಎಲೆ-ಅಡಿಕೆ ಮೆಲ್ಲುತ್ತ ಕಾಲ ಕಾಲಕ್ಕೆ ಬರುವ ಚಹಾ ಅಂಗಡಿಯ ಪೋರನ ೧ ರುಪಾಯಿಯ ಚಹಾ ಹೀರುತ್ತ ಬಂಗಾರ ಕಸದ ಬೇಟೆಯಲ್ಲಿ ನಿರತರಾಗಿರುತ್ತಾರೆ.

ಇಡೀ ದಿನ ಸೋಸಿ ಗುಡ್ಡೆ ಹಾಕಿದ ಗುಂಪಿಯನ್ನು ಸಂಜೆಯ ವೇಳೆ ಎತ್ತಿ ಹಾಕಿಕೊಂಡು ಮನೆಗೆ ಒಯ್ಯುತ್ತಾರೆ. ಅಲ್ಲಿ ದೇಸಿ ರೀತಿಯ ಕುಲುಮೆಯಲ್ಲಿ ಎಲ್ಲವನ್ನು ಸುರಿದು ಕಾಯಿಸುತ್ತಾರೆ. ಅಂತಿಮವಾಗಿ ೪ರಿಂದ ೫ ಗುಂಜಿಯಷ್ಟು ಅಥವಾ ಕೆಲವೊಮ್ಮೆ ಅದೃಷ್ಠ ಖುಲಾಯಿಸಿ ೧ರಿಂದ ೨ ಗ್ರಾಂಗಳ ವರೆಗೆ ಸಹ ಬಂಗಾರ ದೊರಕುತ್ತದೆ. ಹಾಗೆಯೆ ವರ್ಷಕ್ಕೊಮ್ಮೆ ದೀಪಾವಳಿಯ ಸಂದರ್ಭದಲ್ಲಿ ತಮ್ಮ ಗುರುತಿನ ಪತ್ತಾರರ ಮನೆಗೆ ತೆರಳಿ ಅವರು ಕೂಡಿಟ್ಟ ಕಸ ಸಾವಿರಾರು ರುಪಾಯಿಗಳಿಗೆ ಖರೀದಿಸಿ ತರುತ್ತಾರೆ. ಅದನ್ನು ಸೋಸಿ ಬಂಗಾರ ಪಡೆಯುವ ಕೆಲಸ ಮಾಡುತ್ತಾರೆ. ಉಪಜೀವನ ಸಂಪೂರ್ಣ ಈ ಕೆಲಸದ ಮೇಲೆಯೇ ನಿಂತಿದೆ. ಅವರ ಪರಿಶ್ರಮಕ್ಕೆ ಮೆಚ್ಚಿ ಅಂಗಡಿಕಾರರು ಅವರಿಗೆ ಹೊಸ ಬಟ್ಟೆ ಸಹ ಮಾನವೀಯತೆಯ ಆಧಾರದ ಮೇಲೆ ಹೊಲಿಸಿ ಕೊಟ್ಟದ್ದಿದೆ.

ಅತ್ಯಂತ ಕಡು ಬಡತನ ಹಾಗು ಹಿಂದುಳಿದ ಜಾತಿಗೆ ಸೇರಿದ ಇವರ ಶೈಕ್ಷಣಿಕ ಮಟ್ಟ, ಆರ್ಥಿಕ ಮಟ್ಟ ಹಾಗು ಮಕ್ಕಳ ಭವಿಷ್ಯ ಶೋಚನೀಯವಾಗಿದೆ. ಕೆಲವೊಮ್ಮೆ ಪೊಲೀಸರು ಸುಖಾಸುಮ್ಮನೆ ಬಂಗಾರ ಕಳುವು ಮಾಡಿದ ಆರೋಪ ಹೊರಿಸಿ ಬಡಿದು-ಹೊಡಿದು ಲಾಕಪ್ಪಿಗೆ ತಳ್ಳಿದ್ದಿದೆ. ಇವರಿಂದಲೇ ವಸೂಲಿ ಸಹ ಮಾಡಿದ್ದಿದೆ. ಈ ಕಿರಿಕಿರಿ ಪತ್ತಾರರಿಗೂ ತಪ್ಪಿಲ್ಲ. ತುಡುಗಿನ ಬಂಗಾರ ಖರೀದಿಸಿದ್ದಾರೆ ಎಂದು ಆರೋಪಿಸಿ, ಯಾರೋ ಕಳ್ಳ ಇವರ ಅಂಗಡಿ ತೋರಿಸಿದ ಎಂಬ ಕಾರಣಕ್ಕೆ ಒದ್ದು, ಎರಡು ಪಟ್ಟು ಹಣ, ಬಂಗಾರ ಪೊಲೀಸರು ವಸೂಲಿ ಮಾಡಿದ್ದಿದೆ. ಕಳೆದುಕೊಂಡದಷ್ಟೇ ನಮ್ಮ ಧಾರವಾಡದಲ್ಲಿ ಸುದ್ದಿಯಾಗುತ್ತದೆ. ಸಿಕ್ಕಿದ್ದು, ವಸೂಲಿ ಮಾಡಿದ್ದು, ಸಂಬಂಧಪಟ್ಟವರಿಗೆ ತಲುಪಿದ್ದು ಯಾವುದೂ ಸುದ್ದಿಗೆ ಯೋಗ್ಯವಲ್ಲ! ಎಂದು ಆ‘ರಾಕ್ಷಸರು ಕ್ಷಮಿಸಿ ಆರಕ್ಷಕರು ತಿಳಿದಿದ್ದಾರೆ.

ಅದಿರಲಿ. ಈಗ ಕೇಳಿ. ನೀವು ಮೊಬೈಲ್ ಅಥವಾ ಸೆಲ್ ಫೋನ್ ಬಳಸಿ ಬಿಸಾಕುವ ಮೊದಲು ಸ್ವಲ್ಪ ಯೋಚಿಸಬೇಕಾದ ಸಂದರ್ಭಬಂದಿದೆ. ಕಾರಣ ಈಗ ಬಳಸಿ ನೀವು ಬಿಸಾಡುವ ವಿದ್ಯುನ್ಮಾನ ಉಪಕರಣಗಳಲ್ಲಿ ಬಂಗಾರ, ಬೆಳ್ಳಿ, ತಾಮ್ರ ಇದೆ! ಹಾಗಾಗಿ ಗಟಾರುಗಳಲ್ಲಿ ಬಂಗಾರ ಸೋಸುತ್ತಿದ್ದವರು ಈಗ ಮೊಬೈಲ್ ಗಳಲ್ಲಿ ಹುಡುಕಲು ಆರಂಭಿಸಿದ್ದಾರೆ. ತಜ್ನರು ಈ ಬೆಳವಣಿಗೆಗೆ ಈಗಾಗಲೇ ತಾಂತ್ರಿಕ ಶಬ್ದ ಟಂಕಿಸಿದ್ದಾರೆ. ‘ಪಟ್ಟಣದಲ್ಲಿ ಗಣಿಗಾರಿಕೆ!’ (ಅರ್ಬನ್ ಮೈನಿಂಗ್!)

ಹಳೆಯ ಇ-ಉಪಕರಣಗಳಲ್ಲಿ ಬಂಗಾರ ಹಾಗು ಇರೇಡಿಯುಮ್ ಲೋಹಗಳಿರುವುದರಿಂದ, ಜಗತ್ತಿನಾದ್ಯಂತ ಈ ಲೋಹಗಳ ಬೆಲೆ ರಾಕೆಟ್ ಸದೃಶ ಏರಿಕೆ ಕಂಡಿರುವುದರಿಂದ ಈ ‘ಇ-ಕಬಾಡಿಕಾ ದುಕಾನ’ ಗಣನೀಯ ಸಂಖ್ಯೆಯಲ್ಲಿ ಬೆಳೆಯುತ್ತಿವೆ. ಈ ಜನ ಸಂಗ್ರಹಿಸಿ ಕೊಟ್ಟ ಲೋಹಗಳನ್ನು ಮತ್ತೆ ವಿದ್ಯುನ್ಮಾನ ಉಪಕರಣಗಳಲ್ಲಿ ಮರು ಬಳಕೆ ಮಾಡಲಾಗುತ್ತದೆ. ಜೊತೆಗೆ ಮೌಲ್ಯಯುತ ಲೋಹಗಳಾದ ಬಂಗಾರ, ತಾಮ್ರವನ್ನು ಬಂಗಾರದ ಆಭರಣಗಳ ತಯಾರಕರಿಗೆ ಸೋಸಿ ಮಾರಾಟ ಮಾಡಲಾಗುತ್ತದೆ. ಜೊತೆಗೆ ಈ-ಉಪಕರಣಗಳ ತಯಾರಕರು ಸಹ (ಮೊಬೈಲ್ ತಯಾರಿಕ ಕಂಪನಿಗಳು ವಿಶೇಷವಾಗಿ) ತಾಮ್ರದ ಬದಲು ಈ ಪುನರ್ ಬಳಕೆಗೆ ಅಣಿಗೊಂಡ ಸೋಸಿದ ಚಿನ್ನ ಬಳಸಲು ತುದಿಗಾಲ ಮೇಲೆ ನಿಂತಿದ್ದಾರೆ! ಕಾರಣ ತಾಮ್ರಕ್ಕಿಂತ ಬಂಗಾರ ವಿದ್ಯುತ್ತಿನ ಸುಗಮ ಹಾಗು ಪ್ರಭಾವಿ ವಾಹಕ!

'It can be precious or minor metals, we want to recycle whatever we can' ಎನ್ನುತ್ತಾರೆ Tadhiko Sekigawa. ಅವರು Eco- System Recycling Co. ಚೇರಮನ್ನರು. ಆ ಕಂಪನಿಯ ಮಾಲೀಕತ್ವ ಹೊಂದಿರುವವರು ಜಪಾನ್ ದೇಶದ Dowa Holdings Co.Ltd.

ಕಾರಣ ಇಷ್ಟೆ ಮುಂದುವರೆದ ರಾಷ್ಟ್ರಗಳಲ್ಲಿ ಇ-ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸದ್ಯ ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿ ಸಮಸ್ಯೆ ಬೆಳವಣಿಗೆಯ ಹಂತದಲ್ಲಿದೆ. ಉದಾಹರಣೆಗಾಗಿ ಹೇಳುವುದಾದರೆ, ಬಂಗಾರದ ಗಣಿಗಳಲ್ಲಿ ಒಂದು ಟನ್ ಖನಿಜ ಎತ್ತಿ, ಶೋಧಿಸಿ, ಭಟ್ಟಿ ಇಳಿಸಿದಾಗ ನಾವು ಪಡೆಯಬಹುದಾದ ಅಪ್ಪಟ ಚಿನ್ನದ ಪ್ರಮಾಣ ಸರಾಸರಿ.. ಕೇವಲ ೫ ಗ್ರಾಂ! ಆದರೆ ಬಳಸಿ ಬಿಸಾಡಿದ ೧ ಟನ್ ಮೊಬೈಲ್ ಗಳಿಂದ ಸುಮಾರು ೧೫೦ ಗ್ರಾಂ ಅಥವಾ ಅದಕ್ಕಿಂತ ಹೆಚ್ಚು ಬಂಗಾರ ಪಡೆಯಬಹುದಾಗಿದೆ ಎಂದು ಪುನರ್ ಬಳಕೆ ಸಲಹಾ ಕಂಪನಿ ಯೋಕೋಹೋಮಾ ಲೋಹ ಸಂಶೋಧನಾ ಸಂಸ್ಥೆ ನಿಯಮಿತ ಅಧಿಕೃತವಾಗಿಯೇ ಘೋಷಿಸಿದೆ. ಜೊತೆಗೆ ಬಿಸಾಕಲಾದ ಅದೇ ಪ್ರಮಾಣದ ಮೊಬೈಲ್ ಗಳಿಂದ ೧೦೦ ಕಿಲೋ ತಾಮ್ರ, ೩ ಕಿಲೋ ದಷ್ಟು ಬೆಳ್ಳಿ ಬಂಗಾರದ ಜೊತೆಗೆ ಪಡೆಯಬಹುದಾಗಿದೆ!

ಈ ಇ-ತ್ಯಾಜ್ಯದ ಪುನರ್ ಬಳಕೆ ಕಂಡು ಹಿಡಿಯಲು ಜಗತ್ತಿನ ಬಹುತೇಕ ಕಂಪೆನಿಗಳು ತಮ್ಮ ತುದಿಗಾಲ ಮೇಲೆ ನಿಂತಿವೆ. ಈಗಾಗಲೇ ಈ ಎಲ್ಲ ಬಹು ಬೇಡಿಕೆಯ ಲೋಹಗಳ ಬೆಲೆ ಗಗನಚುಂಬಿಸುತ್ತಿರುವುದರಿಂದ ಪುನರ್ ಬಳಕೆ ಸಲಹಾ ಕಂಪೆನಿಗಳಿಗೆ ಶುಕ್ರ ದೆಸೆ ಪ್ರಾರಂಭವಾಗಿದೆ.

ಆದರೆ ಈ ಇ-ತ್ಯಾಜ್ಯದ ಪುನರ್ ಬಳಕೆ ಜಪಾನ್ ದಂತಹ ದೇಶಗಳಿಗೆ ಯೋಗ್ಯ ಎಂಬುದು ತಜ್ನರ ಅಂಬೋಣ. ಏಕೆಂದರೆ ಅಲ್ಲಿ ನೈಸರ್ಗಿಕ ಸಂಪನ್ಮೂಲಗಳ ಕೊರತೆ ತೀವ್ರವಿದೆ. ಜೊತೆಗೆ ‘ಟೆಕ್ನೋ ಸೇವಿ’ ಜನ ಪ್ರತಿ ವರ್ಷ ಮಿಲಿಯನ್ ಗಟ್ಟಲೆ ನೂತನ ವಿದ್ಯುನ್ಮಾನ ಉಪಕರಣಗಳನ್ನು ಖರೀದಿಸಿ, ಬಳಸಿ ಹೊಸದನ್ನು ಕೊಳ್ಳುವ ತವಕದಲ್ಲಿ ಬಿಸಾಡುತ್ತಾರೆ. ಆದರೆ ಭಾರತದಲ್ಲಿ ನಾವು ಉಮೇದಿಯಿಂದ ಖರೀದಿಸಿದ ಒಂದು ಮೊಬೈಲ್ ಅಂದಾಜು ೫ ವರ್ಷ ಬಳಸುತ್ತೇವೆ.