ಬ್ಯಾಂಕಿನಲ್ಲಿ ರಜತೋತ್ಸವ ಭಾಗ ೧

ಬ್ಯಾಂಕಿನಲ್ಲಿ ರಜತೋತ್ಸವ ಭಾಗ ೧

ಮೊದಲು ಶಾಲೆಗೆ ಹೋದ ನೆನಪು, ಕಾಲೇಜಿಗೆ ಹೋದ ನೆನಪು, ಕೆಲಸಕ್ಕೆ ಹೋದ ನೆನಪು, ವಾಸ್ತವ್ಯಕೆ ಹೊಸ ಊರು ಹೊಸ ಭಾಷಿಗರ, ನಡುವಿನ ಹೊಂದಾಣಿಕೆಯ ನೆನಪು, ಹೀಗೆ ಒಂದರ ಹಿಂದೊಂದರಂತೆ ಮೊದಲ ನೆನಪುಗಳ ಸರಮಾಲೆ ಸಾಗುತ್ತಲೇ ಇರುತ್ತದೆ. ತಮಾಷೆಯೆಂದರೆ ಹೊಂದಿಕೊಂಡೆ ಎಂದುಕೊಳ್ಳುವ ಸಮಯಕ್ಕೆ ಸರಿಯಾಗಿ ಕಾಲವನ್ನು ಮತ್ತೆ ಹೊಸ ಸ್ಥಿತಿಯ ಬದಲಾವಣೆಗೆ ಸರಿಪಡಿಸಿಕೊಳ್ಳಬೇಕಾಗುವುದು.

ರಿಸರ್ವ್ ಬ್ಯಾಂಕಿನಲ್ಲಿ ಕೆಲಸ ಸೇರಿ ೨೪ ವರ್ಷಗಳು ಕಳೆದುವು. ೨೫ನೆಯ ವರ್ಷಕ್ಕೆ ಕಾಲಿಟ್ಟ ಸಮಯದಲ್ಲಿ, ಈ ವರ್ಷ ಪೂರ್ತಿ ರಜತೋತ್ಸವ ಆಚರಿಸುವ ಅಭಿಲಾಷೆ ನನಗಿದೆ. ಅಂದರೆ ೨೫ ವರ್ಷಗಳ ಹಳೆಯ ನೆನಪುಗಳನ್ನು ಒಂದೆಡೆ ಬರೆದಿಡುವ ಆಸೆ ಆಗಿದೆ. ಅದರ ಪ್ರಯತ್ನವೇ ಈ ಲೇಖನ.

ಬ್ಯಾಂಕು ಸೇರಿದ್ದು ೧೯೮೨ರ ಜನವರಿ ೨೭ರಂದು. ಇದಕ್ಕೆ ಮುಂಚೆ ನವಂಬರ್ ತಿಂಗಳಲ್ಲಿ ಅಕೌಂಟೆಂಟ್ ಜನರಲ್ ಆಫೀಸಿನಲ್ಲಿ ಆಡಿಟರ್ ಆಗಿ ಕೆಲಸಕ್ಕೆ ಸೇರಿದ್ದೆ. ಐ.ಸಿ.ಡಬ್ಲ್ಯು.ಎ. ಪರೀಕ್ಷೆ ಇದ್ದುದರಿಂದ ಆಡಿಟ್‍ಗಾಗಿ ಹೋಗಿರಲಿಲ್ಲ. ಆಗಲೇ ಡಿಸೆಂಬರ್ ತಿಂಗಳಿನಲ್ಲಿ ಬ್ಯಾಂಕಿನಿಂದ ಮೆಡಿಕಲ್ ಎಕ್ಸಾಮಿನೇಷನ್ನಿಗಾಗಿ ಪತ್ರ ಬಂದಿತ್ತು. ಆಗ ಬ್ಯಾಂಕಿನ ವೈದ್ಯರ ಬಳಿ ಹೋಗಿದ್ದಾಗ ತಿಳಿದ ವಿಷಯವೆಂದರೆ ಸದ್ಯದಲ್ಲೇ ಕೆಲಸದ ಆರ್ಡರ್ ಬರಲಿದೆ - ಸೇರಲು ತಯಾರಿರಬೇಕು ಎಂದು. ಆಡಿಟರ್ ಜನರಲ್ ಆಫೀಸಿನಲ್ಲಿ ಮೊದಲ ಸಂಬಳ ಬಂದದ್ದು ಡಿಸೆಂಬರ್ ೩೧ರಂದು. ಆಗ ಸಂಬಳ ತೆಗೆದುಕೊಂಡರೆ ಮುಂದೆ ಹಿಂದಿರುಗಿಸಬೇಕು ಎಂಬುದು ತಿಳಿದಿರಲ್ಲಿಲ್ಲ. (ಕೆಲಸದಲ್ಲಿ ಖಾಯಂ ಆಗುವವರೆವಿಗೆ ರಿಸೈನ್ ಮಾಡುವಂತ್ತಿದ್ದರೆ, ೩ ತಿಂಗಳ ಗಡುವು ನೀಡಬೇಕು ಇಲ್ಲದಿದ್ದರೆ ೩ ತಿಂಗಳ ಸಂಬಳವನ್ನು ಕಟ್ಟಬೇಕು).

ಎಂದು ಕೆಲಸಕ್ಕೆ ಆರ್ಡರ್ ಬರಬಹುದು ಎಂಬುದರ ಬಗ್ಗೆ ಬ್ಯಾಂಕಿಗೆ ಹೋಗಿ ಕೇಳಲೂ ಹೊಳೆದಿರಲಿಲ್ಲ. ೨೩ನೆಯ ತಾರೀಖು, ಶನಿವಾರ. ಅಂದು ಬೆಳಗ್ಗೆ ೯ಕ್ಕೆ ಆಫೀಸಿಗೆ ಹೊರಟಿದ್ದೆ. ಹೊರಡುವ ಹೊತ್ತಿಗೆ ನನ್ನ ಸ್ನೇಹಿತ ರಾಘವೇಂದ್ರ ಸಿಕ್ಕಿ, ಇನ್ನೊಬ್ಬ ಸ್ನೇಹಿತ ಪಾಂಡುರಂಗನಿಗೆ ಆರ್ಡರ್ ಬಂದಿದೆಯೆಂದೂ, ನಮ್ಮಿಬ್ಬರಿಗೂ ಒಂದೇ ದಿನ ಮೆಡಿಕಲ್ ಎಕ್ಸಾಮಿನೇಷನ್ ಆಗಿದ್ದುದರಿಂದ ನನಗೂ ಆರ್ಡರ್ ಬರಬಹುದೆಂದೂ ತಿಳಿಸಿದ. ತಕ್ಷಣ ಹತ್ತಿರದಲ್ಲೇ ಇದ್ದ ಗವಿಪುರಂ ಗುಟ್ಟಹಳ್ಳಿ ಪೋಸ್ಟ್ ಆಫೀಸಿಗೆ ಹೋಗಿ, ನನಗೆ ಯಾವುದಾದರೂ ರಿಜಿಸ್ಟರ್ ಪೋಸ್ಟ್ ಬಂದಿದೆಯಾ ಎಂದು ಕೇಳಿದಾಗ, ನಮ್ಮ ಏರಿಯಾಗೆ ಬರುವ ಪೋಸ್ಟ್‍ಮನ್ ಬ್ಯಾಂಕಿನಿಂದ ಬಂದಿದ್ದ ಆರ್ಡರ್ ಕೊಟ್ಟಿದ್ದ. ಅದರ ಪ್ರಕಾರ ೨೫ರಂದು ಬ್ಯಾಂಕಿಗೆ ಹೋಗಿ ಸಂಬಂಧಪಟ್ಟ ಕಾಗದಗಳಿಗೆ ಸಹಿ ಹಾಕಿದ ನಂತರ ೨೭ರಂದು ಟ್ರೈನಿಂಗ್ ಪ್ರಾರಂಭವೆಂದೂ ಅಂದು ಬೆಳಗ್ಗೆ ೯ ಘಂಟೆಗೇ ಬರಬೇಕೆಂದೂ ತಿಳಿಸಿದ್ದರು. ಅಂದು ಶನಿವಾರ. ಮಾರನೆಯ ದಿನ ರಜೆಯ ದಿನ. ನಂತರದ ಸೋಮವಾರ ಬ್ಯಾಂಕಿಗೆ ಹೋಗಿ ಕೆಲಸಕ್ಕೆ ಸೇರುವ ಮುಂಚಿನ ಪೂರ್ವಕ್ರಿಯೆಗಳೆಲ್ಲವನ್ನೂ ಮುಗಿಸಬೇಕಿತ್ತು. ನೇರವಾಗಿ ಆಫೀಸಿಗೆ ಹೋಗಿ ಮೊದಲು ಮಾಡಿದ ಕೆಲಸವೆಂದರೆ ಕೆಲಸಕ್ಕೆ ರಾಜೀನಾಮೆ ಕೊಟ್ಟದ್ದು. ಮೊದಲ ಸಂಬಳವನ್ನು ವಾಪಸ್ಸು ಕಟ್ಟಿ ಮಿಕ್ಕ ಎಲ್ಲ ಕಡೆಗಳಿಂದ ಅಂದರೆ ಲೈಬ್ರರಿ, ರಿಕ್ರಿಯೇಷನ್ ಕ್ಲಬ್ ಇತ್ಯಾದಿಗಳಿಂದ ನೋ ಡ್ಯೂ ಸರ್ಟಿಫಿಕೇಟ್ ತೆಗೆದುಕೊಂಡು ಅಡ್ಮಿನಿಸ್ಟ್ರೇಷನ್ನಿನವರಿಗೆ ಕೊಟ್ಟದ್ದು. ಮಧ್ಯಾಹ್ನ ಮೂರು ಘಂಟೆಗೆ ಎಲ್ಲ ಕೆಲಸಗಳೂ ಮುಗಿಯಿತೆನ್ನುವ ಹೊತ್ತಿಗೆ ಸೀನಿಯರ್ ಅಕೌಂಟ್ಸ್ ಆಫೀಸರ್ ನನ್ನನ್ನು ತಮ್ಮ ಕ್ಯಾಬಿನ್ನಿಗೆ ಕರೆಸಿದರು. ನಿವೃತ್ತಿಗೆ ಹತ್ತಿರದ ವಯಸ್ಸಿನ ಗೌರವ ಮೂಡಿಸುವಂತಹ ವ್ಯಕ್ತಿತ್ವ ಅವರದ್ದು. ಅವರು ಮೊದಲು ಕೇಳಿದ ಪ್ರಶ್ನೆ.
'ಯಾಕಪ್ಪಾ ಮರಿ ಕೆಲಸಕ್ಕೆ ಸೇರಿ ಇನ್ನೂ ಎರಡು ತಿಂಗಳಾಗಿಲ್ಲ, ಆಗಲೇ ರಾಜೀನಾಮೆ ಕೊಡ್ತಿದ್ದೀಯೆ. ಎಲ್ಲಾದರೂ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿತಾ?'
ಇಲ್ಲ ಸಾರ್, ಹಾಗೇನಿಲ್ಲ. ಮನೆ ಕಡೆ ಸ್ವಲ್ಪ ತಾಪತ್ರಯವಿದೆ, ಜಮೀನು ನೋಡಿಕೊಳ್ಳಬೇಕು - ಅಂದಿದ್ದೆ (ಹೀಗೇ ಹೇಳಲು ನನ್ನ ಹಿರಿಯ ಸ್ನೇಹಿತರು ಹೇಳಿದ್ದರು. ಇಲ್ಲದಿದ್ದರೆ ಸುಲಭವಾಗಿ ರಿಲೀವ್ ಮಾಡುವುದಿಲ್ಲವೆಂದೂ - ಹೀಗೇ ಹೇಳಿದರೆ ಮಾತ್ರವೇ ಅಂದೇ ಕೆಲಸದಿಂದ ಮುಕ್ತಿ ಸಿಗುವುದು, ಎಂದು ತಿಳಿಸಿದ್ದರು. ಅದಕ್ಕೇ ನಾನು ಹಾಗೆ ಹೇಳಿದ್ದು).
ಮುಖ ನೋಡಿ ನನ್ನನ್ನು ಪೂರ್ಣವಾಗಿ ಅಳೆದಿದ್ದ ಅವರು, 'ಯಾಕೋ ಮರಿ ಸುಳ್ಳು ಹೇಳ್ತೀಯೆ? ಬಿ.ಕಾಂ.ನಲ್ಲಿ ಫಸ್ಟ್ ಕ್ಲಾಸ್ ಬರುವುದು ಕಷ್ಟ. ಅದರಲ್ಲೂ ಸರ್ಕಾರೀ ನೌಕರಿ ಸಿಗೋದು ಇನ್ನೂ ಕಷ್ಟ. ಅದನ್ನು ಕಳೆದುಕೊಳ್ಳುವುದು
ಬಲು ಸುಲಭ. ನನ್ನ ಹತ್ರ ನೀನೇನನ್ನೂ ಮರೆಮಾಚಬೇಡ. ಇಲ್ಲಿಯದಕ್ಕಿಂತ ಒಳ್ಳೆಯ ಕೆಲಸ ಸಿಕ್ಕರೆ ಬಿಟ್ಟು ಹೋಗುವುದೇ ಒಳ್ಳೆಯದು. ಈಗ ಬ್ಯಾಂಕಿನಲ್ಲಿ ಮೊದಲ ಸಂಬಳ ಎಷ್ಟು ಬರುವುದೋ ಅಷ್ಟನ್ನು ನಾನು ೩೦ ವರ್ಷಗಳ ಸರ್ವೀಸ್ ಮಾಡಿ ಪಡೆಯುತ್ತಿರುವೆ. ನಮ್ಮಲ್ಲಿ ಬಡ್ತಿಯ ಅವಕಾಶವೂ ಬಹಳ ಕಡಿಮೆ. ಸುಳ್ಳು ಹೇಳಬೇಡ. ಬ್ಯಾಂಕಿನಲ್ಲಿ ಕೆಲಸ ಸಿಕ್ಕಿದ್ದರೆ ಎಲ್ಲಿ ಅಂತ ಹೇಳು ಅಷ್ಟೆ. ನಾನೇನೂ ನಿನ್ನ ಹಾದಿಗೆ ಅಡ್ಡ ಬರೋಲ್ಲ. ಇನ್ನೂ ನಿನಗೆ ಒಳ್ಳೆಯದಾಗಲೆಂದು ಹಾರೈಸುವೆ' ಎಂದಿದ್ದರು.
ಮೃದು ಮಾತಿನಲ್ಲಿ ಅವರ್‍ಆಡಿದ ಮಾತುಗಳನ್ನು ಕೇಳಿ ನನಗೆ ಅಳುವೇ ಬಂದಂತಾಗಿತ್ತು. ನಮ್ಮ ಮನೆಯಲ್ಲೂ ಯಾರೂ ಹೀಗೆ ಹೇಳಿರಲಿಲ್ಲ. ತಕ್ಷಣ ವಿಷಯವನ್ನೆಲ್ಲಾ ಅರುಹಿದೆ. ಅವರು ತಕ್ಷಣ ಅಲ್ಲಿಯೇ ಇದ್ದ ರಿಲೀವಿಂಗ್ ಆರ್ಡರ್ ಗೆ ಸಹಿ ಹಾಕಿ, ಒಳ್ಳೆಯದಾಗಲೆಂದು ಹಾರೈಸಿದ್ದರು. ನನಗೆ ಅದೇನನ್ನಿಸಿತೋ ಏನೋ, ಅವರಿಗೆ ಸಾಷ್ಟಾಂಗ ನಮಸ್ಕರಿಸಿದ್ದೆ. ಆ ಸಮಯದಲ್ಲಿ ಅವರು ನನ್ನ ತಂದೆಯಂತೆಯೇ ಕಂಡಿದ್ದರು.

ಮುಂದೆ ಸೋಮವಾರದ ದಿನ, ರಿಸರ್ವ್ ಬ್ಯಾಂಕಿಗೆ ಮೊದಲ ಹೆಜ್ಜೆ ಇಟ್ಟಿದ್ದೆ. ಒಳಗೆ ಹೋಗಲು ಬಲು ಭಯ. ರಿಸರ್ವ್ ಪದ ಕೇಳಿಯೇ ರೋಮಾಂಚನವಾಗಿತ್ತು. ಮೊದಲು ನಾನು ಕಂಡದ್ದು ಕ್ಯಾಷ್ ಕೌಂಟರ್ ಗಳನ್ನು. ಅಲ್ಲಿ ಎಲ್ಲ ಕಡೆಯೂ ಬಂದೂಕುಧಾರಿ ಪೊಲೀಸ್ ನಿಂತಿದ್ದರು. ಸಾರ್ವಜನಿಕರ ದೊಡ್ಡ ದಂಡು ನೋಟುಗಳನ್ನು ಬದಲಿಸಲು, ಚಿಲ್ಲರೆ ಹಣವನ್ನು ತೆಗೆದುಕೊಳ್ಳಲು ಸರತಿಯಲ್ಲಿ ನಿಂತಿದ್ದರು. ಇನ್ನು ಮೇಲೆ ನಾನು ಅಲ್ಲಿ ಕೆಲಸ ಮಾಡ್ತೀನಿ ಅಂದ್ರೆ ಎಷ್ಟು ಗರ್ವ ಬಂದಿರಬೇಕು. ಹಾಗೆಯೇ ಅಲ್ಲಿಲ್ಲಿ ಓಡಾಡುತ್ತಿದ್ದ ಸೀನಿಯರ್ ಗಳ ಗುಂಪು, ನನ್ನನ್ನು ನೋಡಿ, ನೋಡ್ರೋ ಯಾವುದೋ ಬಕರಾ ಬಂದಿದೆ, ನಾಳೆಯಿಂದ ಸ್ವಲ್ಪ ದಿನ ಮಜಾ ತಗೋಬಹುದು, ಎಂದಾಗ ಸ್ವಲ್ಪ ಅಳುವೂ ಬಂದಿತ್ತು.
ಅಡ್ಮಿನಿಸ್ಟ್ರ್‍ಏಷನ್ ಸೆಕ್ಷನ್ನಿಗೆ ಹೋಗಿ, ಪತ್ರಗಳಿಗೆಲ್ಲ ಸಹಿ ಹಾಕಿ, ನನ್ನಂತೆಯೇ ಬಂದಿದ್ದ ಇತರರೊಂದಿಗೆ, ಆಫೀಸರ್ ಹೇಳಿದಂತೆ ಪೋಸ್ಟ್ ಆಫೀಸಿನಲ್ಲಿ ಠೇವಣಿ ಹಣ ಜಮೆ ಮಾಡಲು ಹೋಗಿದ್ದೆವು. ಆಗಲೇ ಪೋಸ್ಟ್ ಆಫೀಸು ಮುಚ್ಚುವ ವೇಳೆ ಆಗಿತ್ತು. ಎಲ್ಲರಿಂದಲೂ ಹಣ ತೆಗೆದುಕೊಂಡು ಅಕೌಂಟ್ ತೆಗೆಯುವುದು ಕಷ್ಟವಾಗಿದ್ದರೂ, ಅಂದೇ ಆ ಕೆಲಸ ಮುಗಿಸಬೇಕೆಂದು ಬ್ಯಾಂಕಿನವರು ಹೇಳಿದ್ದರಿಂದ ಅಲ್ಲಿಯ ಆಫೀಸರನ್ನು ಅಡ್ಜಸ್ಟ್ ಮಾಡಿಕೊಳ್ಳುವಂತೆ ಕೇಳಿದ್ದೆವು. ಅಂತೂ ಇಂತೂ ೩.೩೦ರ ವೇಳೆಗೆ ಅಲ್ಲಿಯ ಕೆಲಸ ಮುಗಿದಿತ್ತು. ಈ ಮಧ್ಯೆ ಶ್ರೀಮತಿ ಧೀಮತಿ ಎನ್ನುವವರ ಹೆಸರನ್ನು ಶ್ರೀಮತಿ ಶ್ರೀಮತಿ ಎಂದು ನೋಂದಾಯಿಸಿಕೊಂಡಿದ್ದರು. ಅದಕ್ಕೆ ಅವರ ಗಲಾಟೆ - ಪೋಸ್ಟ್ ಆಫೀಸಿನವರಿಗೆ ಅವರ ಹೆಸರು ಗೊತ್ತಾಗಲು ಸುಮಾರು ಸಮಯವೇ ತೆಗೆದುಕೊಂಡಿತ್ತು.

ಈ ಕೆಲಸ ಮುಗಿದ ಕೂಡಲೇ, ಮತ್ತೆ ಬ್ಯಾಂಕಿಗೆ ಓಡಿ ಬಂದಿದ್ದೆವು. ಪೋಸ್ಟ್ ಆಫೀಸಿನವರು ಕೊಟ್ಟಿದ್ದ ಪಾಸ್ ಬುಕ್ ಅನ್ನು ಬ್ಯಾಂಕಿನ ಸುಪರ್ದಿಯಲ್ಲಿಡಬೇಕಿತ್ತು. ಮತ್ತು ಇನ್ನೂ ಹಲವಾರು ಫಾರಂ‍ಗಳನ್ನು ತುಂಬಿಸಬೇಕಿತ್ತು. ಅದೆಲ್ಲಾ ಮುಗಿಯುವ ಹೊತ್ತಿಗೆ ಸಂಜೆಯ ೬.೩೦ ಆಗಿದ್ದಿತು. ಬೆಳಗ್ಗೆಯಿಂದ ಏನನ್ನೂ ತಿನ್ನಲು ಅವಕಾಶ ಸಿಕ್ಕಿರಲಿಲ್ಲ.

ಜನವರಿ ೨೭ರಿಂದ ಎರಡು ವಾರಗಳ ಟ್ರೈನಿಂಗ್ ಅನ್ನು ಬೆಂಗಳೂರಿನ ಕಛೇರಿಯಲ್ಲೇ ಕೊಟ್ಟಿದ್ದರು. ಅಲ್ಲಿಯವರೆವಿಗೆ ಟ್ರೈನಿಂಗ್‍ಗಾಗಿ ಚೆನ್ನೈ ಅಥವಾ ಮುಂಬೈಗಳಿಗೆ ಕಳುಹಿಸುತ್ತಿದರು. ಇದೇ ಮೊದಲ ಬಾರಿಗೆ, ಕಛೇರಿಯ ಮೂರನೆಯ ಮಹಡಿಯಲ್ಲಿರುವ ಒಂದು ದೊಡ್ಡ ಕೊಠಡಿಯಲ್ಲಿ ೧೯೮೨ರ ಮೊದಲ ಬ್ಯಾಚ್‍ನ ೩೩ ಜನರಿಗೆ ಟ್ರೈನಿಂಗ್. ಆಗ, ೨೦೦ ಜನರ ಸೇರಿಕೆಯಲ್ಲಿ ನಮ್ಮದೇ ಮೊದಲ ಬ್ಯಾಚ್ ಎಂಬ ಹೆಗ್ಗಳಿಕೆ ನಮಗೆ. ಟ್ರೈನಿಂಗ್ ಕೊಡಲೆಂದೇ ಇಬ್ಬರು ಅಧ್ಯಾಪಕ ಆಫೀಸರುಗಳು ಮುಂಬೈನಿಂದ ಬಂದಿದ್ದರು. ಒಬ್ಬರು ಶ್ರೀ ಎಂ.ಕೆ. ಪ್ರಭು ಮತ್ತು ಇನ್ನೊಬ್ಬರು ಕುಮಾರಿ ರಾಜೇಶ್ವರಿ.

ಅಂದು ಬೆಳಗ್ಗೆ ೯ ಘಂಟೆಗೆ ಸರಿಯಾಗಿ ಬ್ಯಾಂಕಿನ ಒಳಗೆ ಠೀವಿಯಿಂದ ಹೋದೆ. ಬಾಗಿಲು ದಾಟುವಾಗ ಸುತ್ತ ಮುತ್ತ ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ - ನಾನೊಬ್ಬ ಮಹರಾಜನಂತೆ ಸಾರೋಟಿನಲ್ಲಿ ಬರುತ್ತಿದ್ದೇನೆ ಎನ್ನುವ ಎಲ್ಲಿಲ್ಲದ ಬಿಗುಮಾನ ಬಂದಿತ್ತು. ಮೊದಲನೆಯ ದಿನ ನಮಗೆಲ್ಲ ಒಂದೊಂದು ನೋಟ್ ಪುಸ್ತಕ, ಪೆನ್ನು ಮತ್ತು ಒಂದೆರಡು ಹ್ಯಾಂಡ್‍ಔಟ್ ಕೊಟ್ಟಿದ್ದರು. ಅಂದು ಮೊದಲ ಕ್ಲಾಸಿನಲ್ಲಿ ಹಿರಿಯ ಅಧಿಕಾರಿಗಳೊಬ್ಬರು ಬಂದು ಎಲ್ಲರನ್ನೂ ಪರಿಚಯ ಮಾಡಿಕೊಂಡು ಹೋಗಿದ್ದರು. ಎರದು ಪೀರಿಯಡ್‍ಗಳಾದ ನಂತರ ಯೂನಿಯನ್ ನಾಯಕರುಗಳು ಬಂದು ತಮ್ಮ ಯೂನಿಯನ್ ಸೇರುವಂತೆ ಅರ್ಜಿಗಳನ್ನು ಕೊಟ್ಟು ಹೋಗಿದ್ದರು.
ಮಧ್ಯಾಹ್ನ ೧ ಘಂಟೆಗೆ ಊಟಕ್ಕೆಂದು ಕ್ಯಾಂಟೀನಿಗೆ ಹೋಗಿದ್ದೆವು. ಒಂದು ತಮಾಷೆಯ ವಿಷಯವೆಂದರೆ ಟ್ರೈನಿಂಗ್ ಮುಗಿಯುವವರೆವಿಗೆ ಎಲ್ಲಿಗೇ ಹೋಗಲಿ ಎಲ್ಲರೂ ಒಟ್ಟಿಗೇ ಹೋಗುತ್ತಿದ್ದೆವು. ಅಂದು ಕ್ಯಾಂಟೀನಿನಲ್ಲಿ ಮೊದಲ ಊಟದ ರುಚಿ. ಅದೇನು ಮಾಡಿದ್ದರೋ ಏನೋ, ನನಗಂತೂ ತುಂಬಾ ರುಚಿಯಾಗಿ ಕಂಡಿತ್ತು. ಅದೇ ಮೊದಲ ದಿನ ಆಚೆ ಕಡೆ ಊಟ ಮಾಡಿದ್ದು. ಅಂದು ಸಂಜೆ ಹಾಸ್ಟೆಲ್ಲಿಗೆ ಹೊರಡುವಾಗ (ಆಗಿನ್ನೂ ಹಾಸ್ಟೆಲ್‍ನಲ್ಲೇ ಇದ್ದೆ. ಮೊದಲ ಸಂಬಳ ಬಂದ ನಂತರ ರೂಮ್ ಮಾಡಿದ್ದು), ಬೆಂಗಳೂರಿಗೆ ಮೊದಲು ಬಂದ, ಊರು ಕಂಡರಿಯದ ಕೆಲವು ಮಿತ್ರರುಗಳಿಗೆ ನಾನೇ ಲೀಡರ್ ಆಗಿ ಅವರವರ ನೆಂಟರಿಷ್ಟರ ಮನೆಗಳಿಗೆ ತಲುಪಿಸಿದ್ದೆ. ಆಗ ನನಗೆ ಪರಮ ಆಪ್ತನಾದ ಸ್ನೇಹಿತನೆಂದರೆ ಧಾರವಾಡದಿಂದ ಬಂದಿದ್ದ ವಿಜಯ ನರೇಂದ್ರ. ಇಂದಿಗೂ ಇವನು ನನಗೆ ಪರಮ ಆಪ್ತ ಸ್ನೇಹಿತ. ವಿಜಯ್ ಅವರ ಚಿಕ್ಕಪ್ಪ ನರೇಂದ್ರ ಅವರು ಸಂಯುಕ್ತ ಕರ್ನಾಟಕದಲ್ಲಿ ಕಾರ್ಟೂನ್ ಬರೆಯುತ್ತಿದ್ದರು. ಬಹಳ ಹೆಸರುವಾಸಿಯಾದ ಮನುಷ್ಯ. ಮೊದಲ ದಿನ ವಿಜಯನನ್ನು ಅವರ ಮನೆಗೆ ಬಿಡುವ ಸಂದರ್ಭದಲ್ಲಿ, ಅವನ ಚಿಕ್ಕಪ್ಪ ಅವರ ಮನೆಗೆ ಹೋಗಿ ಅವರೊಡನೆ ಮಾತನಾಡಿ ಬಂದಿದ್ದೆ.

ಎರಡನೆಯ ದಿನ ಬ್ಯಾಂಕಿಗೆ ಹೋಗುವಾಗ ಎಲ್ಲರಿಗೂ ಕಾಣುವಂತೆ ನೋಟ್‍ಬುಕ್ ಕೈಯಲ್ಲಿ ಹಿಡಿದಿದ್ದೆ. ಯಾಕೆ ಅಂದ್ರೆ ಪುಸ್ತಕದ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂತ ಅಚ್ಚಾಗಿತ್ತು. ಎಲ್ಲರೂ ನೋಡಲಿ, ನೀವು ಅಲ್ಲಿ ಕೆಲಸ ಮಾಡ್ತಿದ್ದೀರಾ? ಅಂತ ಕೇಳಲಿ ಎಂಬಾಸೆ. ಗಾಂಧಿಬಜಾರಿನ ೩೦ನೇ ನಂಬರ್ ಬಸ್ ಸ್ಟಾಪಿಗೆ ಬಂದೆ. ಈಗ ಆ ಬಸ್ ಇಲ್ಲ. ೩೦ ನೇ ನಂಬರ್ ಬಸ್ಸು - ರೋಡ್ ಟ್ರೈನ್ ಆಗಿದ್ದಿತು. ಗಾಂಧಿ ಬಜಾರಿನಿಂದ ಮೇಖ್ರಿ ಸರ್ಕಲ್‍ಗೆ ಹೋಗುತ್ತಿತ್ತು. ನಮ್ಮ ಬ್ಯಾಂಕಿನ ಹತ್ತಿರದ ಮಾರ್ಥಾಸ್ ಆಸ್ಪತ್ರೆಗೆ ೩೦ ಪೈಸೆ ದರವಾಗಿದ್ದಿತು. ನಾನು ಬಸ್ ಸ್ಟಾಪ್ ತಲುಪುವ ವೇಳೆಗೆ ಬಸ್ ಹೊರಟಿತ್ತು. ಓಡೋಡಿ ಬಂದು ಬಸ್ ಹತ್ತುಲು ಹೋಗಿ ಬಸ್ಸಿನ ಬಾಗಿಲು ಹಿಡಿಯಲ್ಲು ಅಸಮರ್ಥನಾಗಿ ಕೆಳಗೆ ಬಿದ್ದೆ. ಮೈ ಕೈ ಎಲ್ಲಾ ತರಚಿ ಗಾಯವಾಗಿತ್ತು. ಅಂದು ತೊಟ್ಟಿದ್ದ ಹೊಸ ಷರ್ಟು ಸ್ವಲ್ಪ ಹರಿದಿತ್ತು. ಹಾಗೆಯೇ ಪ್ಯಾಂತು ಕೂಡಾ ಮೊಣಕಾಲಿನ ಹತ್ತಿರ ಹರಿದಿತ್ತು. ಹಾಗೆಯೇ ಮುಂದಿನ ಬಸ್ಸಿನಲ್ಲಿ ಬ್ಯಾಂಕಿಗೆ ಹೋಗಿದ್ದೆ. ಹಿಂದಿನ ಬಸ್ ತಪ್ಪಿದುದರಿಂದ ಕ್ಯಾಂಟೀನಿಗೆ ಹೋಗಲಾಗಿರಲಿಲ್ಲ. ಯಥಾಪ್ರಕಾರ ಅಂದು ಬೆಳಗ್ಗೆ ಮತ್ತೆ ಉಪವಾಸ.

ಟ್ರೈನಿಂಗಿನಲ್ಲಿ ಪ್ರತಿಯೊಂದು ವಿಭಾಗಗಳ ಕೆಲಸ ಕಾರ್ಯಗಳ ಬಗ್ಗೆ ಚೆನ್ನಾಗಿ ವಿವರಿಸಿಕೊಟ್ಟಿದ್ದರು. ಕಾಲೇಜು ಹುಡುಗರಂತೆ ಅವರು ಹೇಳಿದುದೆಲ್ಲವನ್ನೂ (ಅರ್ಥ ಆಗದಿದ್ದರೂ ಕೂಡಾ) ನಾವು ಎಲ್ಲವನ್ನೂ ಚಾಚೂ ತಪ್ಪದಂತೆ ಬರೆದುಕೊಳ್ಳುತ್ತಿದ್ದೆವು. ಆ ನೋಟ್ ಪುಸ್ತಕ ಈಗಲೂ ನನ್ನ ಬಳಿ ಇದೆ. ಅದರ ಪುಟಗಳನ್ನು ತೆಗೆದು ನೋಡಿದರೆ ಆ ಹಿಂದಿನ ನೆನಪುಗಳಲ್ಲಿ ಮುಳುಗಿಹೋಗುವೆ.

Rating
No votes yet

Comments