ಕಾವ್ಯ ಪ್ರೀತಿ

ಕಾವ್ಯ ಪ್ರೀತಿ

ಬರಹ

ನನ್ನೊಳಗಿನ ಮರುಹುಟ್ಟು
ನನ್ನ ಕಾಡುತ್ತಿದೆ.
ಗೆಳೆಯಾ,
ನಿನ್ನೊಂದಿಗೆ ಒಂದೇ ಒಂದು ದಿನ
ಈ ಎಲ್ಲ ಜಂಜಾಟ ಬಿಟ್ಟು
ದೂರ ದೂರ ಕಾಡಲ್ಲಿ
ಓಡುವ ಹುಚ್ಚು.

ಮನೆ, ಮಠ,
ಡ್ಯೂಟಿ, ತೋಟ
ಎಲ್ಲಾ ಮರೆತುಬಿಡುವ
ಮನಸ್ಸಿಗೆ ಮುದ ಕೊಡುವ
ಜಾಗ ಹುಡುಕುತ್ತದೆ.
ಅದೆಲ್ಲಿದೆ ಗೊತ್ತಿಲ್ಲ.
ಹುಡುಕುವ ಬರುತ್ತೀಯಾ
ಕಾವ್ಯದೊಂದಿಗೆ

ನಂಗೊತ್ತು,
ನಿಂಗದು ಬೋರೆಂದು.
ಎಳೆದೊಯ್ಯುವ ಪ್ರೀತಿಗೆ
ಕಾವ್ಯ ಅರಳುವುದಿಲ್ಲ.
ಮತ್ತೆ ಹಾಗೆಂದಾದರೂ
ನಿರ್ಜನಾರಣ್ಯದಲ್ಲಿ
ನಾವುಳಿದರೆ
ನನ್ನೊಳಗಿನ ಮರುಹುಟ್ಟು
ಕಾವ್ಯವಾಗುವುದಿಲ್ಲ
ಪ್ರೀತಿಯಾಗುತ್ತದೆ.

ಮನದೆಲ್ಲ ಕಹಿಕಕ್ಕಿ
ನಿನ್ನೊಂದಿಗೆ ಜಗಳಾಡಿ ಗುದ್ದಾಡಿ, ಬರಲು
ಸಾಗರ ತೀರಕ್ಕೆ
ಹೋಗಬೇಕೆಂದುಕೊಳ್ಳುತ್ತೇನೆ.
ಕನಸಲ್ಲಿದೆ ಆ ತೀರ ಕಾಣುವುದಿಲ್ಲ.
ಹೋದರದೂ ಪ್ರೀತಿಯಾಗುತ್ತದೆ
ಕಾವ್ಯವಾಗುವುದಿಲ್ಲ.
ಮನದ ಭಾರ ಿಳಿಯುವುದಿಲ್ಲ.

ನನ್ನೊಳಗಿನ ಮರುಹುಟ್ಟು
ಅರಸುತ್ತಿದೆ
ಬಯಸುತ್ತಿದೆ ಒಂಟಿತನ
ಪೃಕೃತಿಯೊಂದಿಗೆ
ಗೆಳೆತನ
ಮನ ಹಗುರಾಗುವಷ್ಟು
ಅಳುವ ಹಂಬಲ
ಅದೂ ಸಾಧ್ಯವಿಲ್ಲ.
ಜೊತೆಗೆ ನೀನಿದ್ದೆಯಲ್ಲ.
ಹಾಗಾಗಿ.........
ಹುಟ್ಟುವುದೇ ಇಲ್ಲ
ನನ್ನೊಳಗಿನ ಮರುಹುಟ್ಟು. first | < previous | next > | last