ನನ್ನ ಆ 'ಸ್ಕೂಲ್ ಮಾಸ್ಟರ್'!

ನನ್ನ ಆ 'ಸ್ಕೂಲ್ ಮಾಸ್ಟರ್'!

ಬರಹ

ನನ್ನ ಆ 'ಸ್ಕೂಲ್ ಮಾಸ್ಟರ್'!

ಗೆಳೆಯ ಕೆ.ಪುಟ್ಟಸ್ವಾಮಿಯವರು 'ಕನ್ನಡ ಚಿತ್ರರಂಗ-75' ಮಾಲಿಕೆಯಲ್ಲಿ ಬರೆಯುತ್ತಿರುವ ('ವಿಕ್ರಾಂತ ಕರ್ನಾಟಕ' ವಾರಪತ್ರಿಕೆಯಲ್ಲಿ) ಲೇಖನಗಳನ್ನು ಓದುತ್ತಿದ್ದಂತೆ, ನನ್ನ ಬಾಲ್ಯದ ದಟ್ಟ ನೆನಪುಗಳು ನಿಧಾನವಾಗಿ ಬಿಚ್ಚಿಕೊಳ್ಳುತ್ತಿವೆ.

ನನ್ನ ಬಾಲ್ಯದ ಎರಡು ವಿಶೇಷ ಆಕರ್ಷಣೆಗಳೆಂದರೆ ಶಾಲಾ ಪರೀಕ್ಷೆಗಳು ಮತ್ತು ಕನ್ನಡ ಚಲನ ಚಿತ್ರಗಳು! ಏಕೋ ಏನೋ, ಪರೀಕ್ಷೆಗಳು ಎಂದರೆ ನನ್ನೆಲ್ಲ ಸ್ನೇಹಿತರು ಹೆದರಿದಂತೆ ತೋರುತ್ತಿದ್ದರೆ, ನಾನು ಅವುಗಳನ್ನು-ಆಗ ವರ್ಷಕ್ಕೆರಡೇ ಪರೀಕ್ಷೆಗಳು: ಮಧ್ಯವಾರ್ಷಿಕ ಚಿಕ್ಕ ಪರೀಕ್ಷೆ ಮತ್ತು ವರ್ಷಾಂತ್ಯದ ದೊಡ್ಡ ಪರೀಕ್ಷೆ-ಆಕರ್ಷಕ ಸವಾಲುಗಳಂತೆ ಎದುರು ನೋಡುತ್ತಿದ್ದೆ! ಸಂಕ್ರಾಂತಿ ಹಬ್ಬಕ್ಕೆ ರೈತರು ತಮ್ಮ ದನಕರುಗಳನ್ನು ಸಿಂಗರಿಸುವಂತೆ, ನಾನು ವಾರದ ಮೊದಲೇ ನನ್ನ ಪರೀಕ್ಷೆ ರಟ್ಟನ್ನು ಬಣ್ಣದ ಕಾಗದದ ಚೂರುಗಳಿಂದ ಮತ್ತು ನನ್ನದೇ ಕೈಯ್ಯಿನ ಚಿತ್ತಾರಗಳಿಂದ ಸಿಂಗರಿಸುತ್ತಿದ್ದೆ. ನನ್ನ ತಂದೆ ಆಗ ನಮಗೆ ಹಾಗೂ ಮನೆಗೆ ಬರುತ್ತಿದ್ದ ನೆಂಟರಿಷ್ಟರ ಮತ್ತು ಸಹೋದ್ಯೋಗಿಗಳ ಮಕ್ಕಳಿಗೆ ವಿದ್ಯೆಯೊಂದೇ ಬಡತನಕ್ಕೆ ಉತ್ತರ ಎಂದು ಪದೇ ಪದೇ ಹೇಳುತ್ತಿದ್ದುದು, ನಾನು ವಿದ್ಯೆಯನ್ನು-ಪರೀಕ್ಷೆಗಳ ರೂಪದಲ್ಲಿಯೇ ಆದರೂ-ಸವಾಲಾಗಿ ಸ್ವೀಕರಿಸಲು ಪ್ರಚೋದಿಸಿತ್ತೆಂದು ಕಾಣುತ್ತದೆ. ಅವರನ್ನು ವಿದ್ಯೆಯೆಡೆಗೆ ಪ್ರಚೋದಿಸಿದ್ದುದು, ತಮ್ಮ ತಾರುಣ್ಯದಲ್ಲಿ ಕೇಳಿದ್ದ ಗಾಂಧಿ ಭಾಷಣವಂತೆ-ವಿಶೇಷವಾಗಿ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಮಹತ್ವದ ಬಗ್ಗೆ. ಅದನ್ನವರು ತಮಗೂ ಅನ್ವಯಿಸಿಕೊಂಡು ತಮ್ಮ ತಂದೆಯ ವಿರುದ್ಧ ಬಂಡೆದ್ದು, ಕುಲ ಕಸಬು ಬಿಟ್ಟು ಕೂಲಿ ನಾಲಿಯ ಮೂಲಕ ನಾಲ್ಕಕ್ಷರ ಕಲಿಯುವ ಸಾಹಸ ಮಾಡಿ, ಪ್ರಾಥಮಿಕ ಶಾಲಾ ಮಾಸ್ತರಾಗಿದ್ದರು.

ಅದಂತಿರಲಿ, ನನ್ನ ಶಾಲಾ ವಿದ್ಯಾಭ್ಯಾಸದುದ್ದಕ್ಕೂ ಎಲ್ಲ ಪರೀಕ್ಷೆಗಳಲ್ಲಿ ತರಗತಿಗೆ ಮೊದಲಿಗನಾಗಿ ತೇರ್ಗಡೆ ಹೊಂದುತ್ತಿದ್ದುದು, ನಾನು ಈ ಸವಾಲನ್ನು ಯಶಸ್ವಿಯಾಗಿ ಎದುರಿಸುತ್ತಿದ್ದೆ ಎಂಬುದನ್ನು ಸೂಚಿಸುವಂತಿತ್ತು. ಇದು ನಮ್ಮ ತಂದೆಗೆ ಅಪಾರ ತೃಪ್ತಿಯನ್ನು ತರುತ್ತಿತ್ತ್ತಲ್ಲದೆ, ನನ್ನ ಇನ್ನೊಂದು ಆಕರ್ಷಣೆಯಾಗಿದ್ದ ಸಿನಿಮಾ ವ್ಯಾಮೋಹದ ಬಗೆಗೆ ಅವರು ಮೃದುವಾಗಿರಲೂ ಕಾರಣವಾಗಿತ್ತು. ನಾಟಕದ ಮಾಸ್ತರೂ ಆಗಿದ್ದ ನಮ್ಮ ತಂದೆ ಸ್ವತಃ ಸಿನಿಮಾ ಪ್ರಿಯರೇ ಆಗಿದ್ದರೂ, ಹಣಕಾಸಿನ ಮುಗ್ಗಟ್ಟಿನ ಕಾರಣ ಅವರು ಎಲ್ಲ ಸಿನಿಮಾಗಳನ್ನೇನೂ ನೋಡುತ್ತಿರಲಿಲ್ಲ. ಏಕೆಂದರೆ ಅವರು ಹೊರಟರೆ, ಮನೆಯವರೆಲ್ಲರೂ ಹೊರಡುತ್ತಿದ್ದರಲ್ಲ! ನನಗಾದರೋ ಬಂದ ಎಲ್ಲ ಕನ್ನಡ ಸಿನೆಮಾಗಳನ್ನು ನೋಡುವ ಆಸೆ, ಆತುರ. ಬೆಂಗಳೂರಿನಲ್ಲಿ ಓದುತ್ತಿದ್ದ ನಮ್ಮಣ್ಣ ಊರಿಗೆ ಬಂದಾಗಲೆಲ್ಲ ಶಿಫಾರಸ್ ಮಾಡುತ್ತಿದ್ದ ಸಿನೆಮಾಗಳು ಬಂದರಂತೂ ನನಗೆ ಮೊದಲ ದಿನವೇ ನೋಡುವ ಕಾತುರ. ನಮ್ಮ ತಂದೆ ಆದಷ್ಟೂ ನನ್ನ ಆಸೆ-ಆತುರ-ಕಾತುರಗಳನ್ನು ಈಡೇರಿಸುತ್ತಿದ್ದರು.

ಅತ್ತ ಹಳ್ಳಿಯೂ ಅಲ್ಲದ. ಇತ್ತ ಪಟ್ಟಣವೂ ಅಲ್ಲದ ತ್ಯಾಮಗೊಂಡ್ಲು ಎಂಬ ಊರಿನ ಸಂತೆಮಾಳದ ಪಕ್ಕದ ಬಯಲಿನಲ್ಲಿ ವರ್ಷದ ಆರು ತಿಂಗಳು ಅಥವಾ ಅದಕ್ಕೂ ಹೆಚ್ಚು ಕಾಲ ಬೀಡು ಬಿಟ್ಟಿರುತ್ತಿದ್ದ 'ಮಾರುತಿ ಟೂರಿಂಗ್ ಟಾಕೀಸ್'ನಲ್ಲಿ ನಾನು ಅದೆಷ್ಟು ಚಿತ್ರಗಳನ್ನು ನೋಡಿ ಸಂತೋಷ-ಸಂಭ್ರಮ ಪಟ್ಟಿದ್ದೇನೋ! ಈ ವಾರ ಯಾವ ಸಿನೆಮಾ ಎಂದು ತಿಳಿಯುವ ಕುತೂಹಲದಿಂದ ಹೊಸ ಸಿನಿಮಾ ಡಬ್ಬ ಬರುವ ನಮ್ಮೂರಿನ ಕೊನೆಯ ಷಟಲ್ ಬಸ್ಸನ್ನು ಕಾಯುತ್ತಾ, ಮನೆಗೆ ಮಲಗಲು ತಡವಾಗಿ ಬಂದು ನಮ್ಮ ತಂದೆಯಿಂದ ಅದೆಷ್ಟು ಬಾರಿ ಎಷ್ಟು ಏಟು ತಿಂದಿದ್ದೇನೋ ಲೆಕ್ಕವೇ ಇಲ್ಲ! ಆದರೆ ಅದನ್ನು ಆಗಲೇ ಮರೆತು, ಮತ್ತೆ ಮಾರನೆಯ ಬೆಳ್ಳಂ-ಬೆಳಿಗ್ಗೆ ಹೊಸ ಸಿನೆಮಾದ ಪೋಸ್ಟರ್ ನೋಡಲು ಊರಿನ ಸರ್ಕಲ್ ಬಳಿ ಓಡುತ್ತಿದ್ದೆ. ಅಲ್ಲಿ ಟಾಕೀಸ್ ಕೆಲಸಕ್ಕೆ ಸಹಾಯಕರಾಗಿ ಸೇರಿರುತ್ತಿದ್ದ ಹೊಲೇರ ವೆಂಕಟ ಮತ್ತು ಅಂಜನಿ ಎಂಬ ನನ್ನ ಗೆಳೆಯರು ದೊಡ್ಡ ಪೋಸ್ಟರಿನ ನಾಲ್ಕು ಭಾಗಗಳನ್ನು, ಈಗಲೂ ತನ್ನ ಒಗರು ವಾಸನೆಯ ನೆನಪಿನೊಂದಿಗೆ ನನ್ನ ಮೂಗರಳಿಸುವ ಬಿಸಿ ಬಿಸಿ ಪೇಸ್ಟ್ನೊಂದಿಗೆ ಬಿದಿರಿನ ತಡಿಕೆಯಿಂದ ಮಾಡಿದ ವಿಶಾಲ ಬೋರ್ಡಿನ ಮೇಲೆ ತಮ್ಮ ಕೌಶಲ್ಯವನ್ನೆಲ್ಲ ಪ್ರದರ್ಶಿಸುತ್ತಾ ಜೋಡಿಸುತ್ತಿರುತ್ತಿದ್ದರು. ಅವರ ಆ ಕರಾಮತ್ತಿನಲ್ಲ್ಲಿ ಮೂಡುವ ನನ್ನ ನೆಚ್ಚಿನ ನಟ ನಟಿಯರ ಭಾವಪೂರ್ಣ ಚಿತ್ರಗಳನ್ನೂ, ವಿಚಿತ್ರ ವಿನ್ಯಾಸಗಳಲ್ಲಿರುತ್ತಿದ್ದ ಚಿತ್ರದ ಶೀರ್ಷಿಕೆಗಳನ್ನೂ ನೋಡಿ ಸಂತೋಷಪಟ್ಟು ನಮ್ಮ ತಂದೆಯವರಿಂದ ಇನ್ನೊಂದು ಸುತ್ತಿನ ಹೊಡೆತಗಳಿಗೆ ತಯಾರಾಗಿಯೇ ನಾನು ಮನೆಗೆ ಬರುತ್ತಿದ್ದೆ. ಈ ಹೊಡೆತಗಳೆಂದೂ ನನ್ನನ್ನು ಆಗ ಸಿನೆಮಾ ವ್ಯಾಮೋಹದಿಂದ ದೂರ ಸರಿಯುವಂತೆ ಮಾಡಲಿಲ್ಲ. ಹಾಗೇ ನನ್ನ ಆ ಹವ್ಯಾಸವೂ ನಮ್ಮ ತಂದೆಯವರನ್ನು, ನನ್ನನ್ನು ಸಿನೆಮಾಗಳಿಂದ ದೂರ ಇಡುವಂತೆ ಪ್ರೇರೇಪಿಸಲಿಲ್ಲ. ಇದೆಲ್ಲವೂ ದಿನನಿತ್ಯದ ಮಾಮೂಲಿನಂತೆ ನಡೆದುಹೋಗುತ್ತಿತ್ತಷ್ಟೆ!

ಈ ವ್ಯಾಮೋಹದ ಆ ದಿನಗಳಲ್ಲಿ ನಾನು ಅನಿವಾರ್ಯ ಕಾರಣಗಳಿಂದ-ಮನೆಗೆ ನೆಂಟರು ಬಂದಿದ್ದರಿಂದಲೋ, ನಮ್ಮ ತಂದೆ ಊರಿನಲ್ಲಿರಲಿಲ್ಲದಿದ್ದರಿಂದಲೋ, ತೀರಾ ಹಣಕಾಸಿನ ಮುಗ್ಗಟ್ಟಿನಿಂದಾಗಿಯೊ- ನಾನು ಕೆಲವು ಚಿತ್ರಗಳನ್ನು ನೋಡಲಾಗದಿದ್ದ ಬೇಸರ ನನ್ನ ಬಾಲ್ಯದುದ್ದಕ್ಕೂ ನನ್ನನ್ನು ಕಾಡಿಸಿ, ಅವುಗಳ ಹೆಸರುಗಳು ಈಗಲೂ ನನ್ನ ಸ್ಮೃತಿಯಲ್ಲಿ ಉಳಿಯುವಂತೆ ಮಾಡಿವೆ! ಅವೆಂದರೆ, 'ಜಾತಕಫಲ', 'ಮೊದಲ ತೇದಿ', 'ಶಿವಶರಣೆ ನಂಬಿಯಕ್ಕ', 'ಬೆಟ್ಟದ ಕಳ್ಳ', 'ವೀರಕೇಸರಿ' ಇತ್ಯಾದಿ. ಇವುಗಳಲ್ಲಿ ಕೆಲವನ್ನಾದರೂ, ಈಚೆಗೆ ಟಿವಿಯಲ್ಲಿ ನೋಡಿದೆನಾದರೂ, ಆ 'ರುಚಿ' ಸಿಕ್ಕದೆ ನಿರಾಶನಾಗಿದ್ದೇನೆ! ಆಗ ಆ 'ರುಚಿ'ಯಲ್ಲೇ ಸಿನೆಮಾ ನೋಡಿದರೂ, ಸಿನೆಮಾ ಚೆನ್ನಾಗಿತ್ತೋ ಇಲ್ಲವೋ ಎಂಬುದನ್ನು ಮಾತ್ರ ನಮ್ಮ ತಂದೆಯವರನ್ನು ಕೇಳಿ ಖಚಿತಪಡಿಸಿಕೊಂಡಾದ ಮೇಲಷ್ಟೆ ನಾನು ನನ್ನ ಸ್ನೇಹಿತರೊಂದಿಗೆ ಅದರ ಬಗ್ಗೆ ಚರ್ಚೆ ಅಥವಾ ವಾದ ಮಾಡುತ್ತಿದ್ದೆ! ಇದನ್ನು ನೆನೆಸಿಕೊಂಡರೆ, ಸಿನೆಮಾ ಕಡೆ ಆಗ ನನ್ನನ್ನುಅಥವಾ ನನ್ನಂತಹ ಇತರರನ್ನು ಸೆಳೆಯುತ್ತಿದ್ದ ಅಂಶಗಳು ಯಾವುವು ಎಂಬ ಬಗ್ಗೆ ನನ್ನಲ್ಲಿ ಇನ್ನೂ ಕುತೂಹಲ ಉಳಿದೇ ಇದೆ!

ಟೆಂಟ್ ಎಂಬ ಆ ಹಲವಾರು ಕಂಭಗಳು ಮತ್ತು ಹಗ್ಗಗಳ ಸಮತೋಲನದಲ್ಲಿ ಹರಡಿ ನಿಂತಿರುತ್ತಿದ್ದ ಆ ವಿಶಾಲ ಗುಡಾರದ ಕೆಳಗೆ ಆ ಕತ್ತಲೆಯಲ್ಲಿ ಗೋಣಿ ಚೀಲ ಹಾಸಿ, ಕಡಲೆಕಾಯಿ ಮೆಲ್ಲುತ್ತಾ; ವಿಭಿನ್ನ ಚಹರೆಯ, ನಡಾವಳಿಗಳ ನೂರಾರು ಜನರೊಂದಿಗೆ ಸಮನಾಗಿ ಕೂತು (ನಮ್ಮೂರಿನ ಸಾಹುಕಾರ ಶೆಟ್ಟರ ಕುಟುಂಬದವರು ನೆಲದ ಟಿಕೆಟ್ ಪಡೆದು, ಅಲ್ಲಿ ಮನೆಯಿಂದ ತಂದ ಕುರ್ಚಿಗಳನ್ನು ಹಾಕಿಸಿಕೊಂಡು ಕೂರುತ್ತಿದ್ದರು!), ಎದುರಿನ ಎರಡು ಆಯಾಮಗಳ ತೆರೆಯ ಮೇಲೆ ಮೂರು ಆಯಾಮಗಳಲ್ಲಿರುವಂತೆ ಮೂಡುತ್ತಿದ್ದ ಚಿತ್ರಗಳು ಮನ ಮುಟ್ಟುವ ಸಾಹಿತ್ಯ ಮತ್ತು ಮುದ ಕೊಡುವ ಸಂಗೀತಗಳೊಂದಿಗೆ ಕಟ್ಟುತ್ತಿದ್ದ ಒಂದು ನಾಟಕೀಯ ಪ್ರತಿ-ಪ್ರಪಂಚದಲ್ಲಿ ಮುಳುಗಿ ಹೋಗುವ ರೋಮಾಂಚನವೆ ಅದು? ಈಗಲೂ ನನಗೆ ಆ ಹಳೆಯ-ಕಪ್ಪು ಬಿಳುಪು-ಕನ್ನಡ ಚಿತ್ರಗಳನ್ನು ನೋಡುತ್ತಿರುವಾಗ ಆ ಹಳೆಯ ರೋಮಾಂಚನ ಮರುಕಳಿಸುತ್ತದೆ! ನನಗೆ ಗೊತ್ತಿಲ್ಲದೆಯೇ, ಭಾವಾವೇಶಕ್ಕೆ ಸಿಕ್ಕಿ ಕಣ್ಣು ಮಂಜಾಗುತ್ತವೆ. ಕಷ್ಟದ ಆ ದಿನಗಳಲ್ಲಿ ತಮ್ಮ ಮೌಲ್ಯಾದರ್ಶಗಳ ಸಂದೇಶಗಳೊಂದಿಗೆ ನಮ್ಮಲ್ಲಿ ಆಸೆ-ಭರವಸೆಗಳನ್ನು ತುಂಬಿ, ನಮ್ಮನ್ನು ಸಾಂತ್ವನಗೊಳಿಸುತ್ತಿದ್ದ ಆ ಕನಸಿನ ಚೂರುಗಳನ್ನು ಮರೆಯುವುದಾದರೂ ಹೇಗೆ?

ಹಾಗೆ ನನ್ನ ಪಾಲಿಗೆ ಮರೆಯಲಾಗದ ಕೆಲವು ಕನಸಿನ ಚೂರುಗಳೆಂದರೆ, 'ಸ್ಕೂಲ್ ಮಾಸ್ಟರ್', 'ಅಣ್ಣ ತಂಗಿ', ರಣಧೀರ ಕಂಠೀರವ' ಮತ್ತು 'ಭಕ್ತ ಕನಕದಾಸ'. ಇವು ನನ್ನ ವ್ಯಕ್ತಿತ್ವಕ್ಕೆ ಅಡಿಪಾಯ ಹಾಕಿದ ಚಿತ್ರಗಳೆಂದರೂ ನಡೆಯುತ್ತದೆ. ನಾನು ಈ ಐವ್ವತ್ತು ವರ್ಷಗಳಲ್ಲಿ ವಿವಿಧ ಭಾಷೆಗಳ ಜಗತ್ತಿನ ಅತ್ಯುತ್ತಮ ಚಿತ್ರಗಳನ್ನು ನೋಡಿ ಸಂತೋಷಪಟ್ಟು, ಬಹಳಷ್ಟನ್ನು ಮರೆತಿದ್ದೇನೆ. ಆದರೆ ಈ ನಾಲ್ಕು ಚಿತ್ರಗಳು ಮೂಡಿಸಿದ ಪರಿಣಾಮ ನನ್ನ ಮನಸ್ಸಿನ ಮೇಲೆ ಈಗಲೂ ಅಚ್ಚೊತ್ತಿದಂತಿದೆ-ಒಂದೊಂದೂ, ಒಂದೊಂದು ಕಾರಣಕ್ಕೆ. ಆದರೆ ನನ್ನ ಪಾಲಿಗೆ ಇವೆಲ್ಲವುಗಳ ಸಾಮಾನ್ಯ ಆಕರ್ಷಣೆ ಎಂದರೆ, ಸ್ವಾತಂತ್ರ್ಯೋತ್ತರ ಭಾರತದ ಸ್ಫೂರ್ತಿ ಕೇಂದ್ರಗಳನ್ನು ಇವು ಬಹು ಪರಿಣಾಮಕಾರಿಯಾಗಿ ಗುರುತಿಸಿದ್ದುದು. ನನ್ನ ಬಾಳನ್ನು ಕಟ್ಟಕೊಳ್ಳಲು ನನ್ನ ಬಾಲ್ಯದಲ್ಲೇ ಕೆಲವು ಘನ ಮೌಲ್ಯಗಳನ್ನೂ, ಪರಿಣಾಮಕಾರಿ ಸೂಚನೆಗಳನ್ನೂ ನೀಡಿದ್ದುದು.

ಸದ್ಯಕ್ಕೆ ನಾನು 'ಸ್ಕೂಲ್ ಮಾಸ್ಟರ್' ಚಿತ್ರದ ಬಗ್ಗೆಯಷ್ಟೇ ಬರೆಯುವೆ. ಏಕೆಂದರೆ, ಇದು ನನ್ನನ್ನು ರೂಪಿಸಿದ ನನ್ನ ತಂದೆಯನ್ನು, ಅವರ ಸಂದರ್ಭವನ್ನು ಮತ್ತು ಆ ಸಂದರ್ಭವನ್ನು ಸೃಷ್ಟಿಸಿದ ರಾಷ್ಟ್ರೀಯ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಲು ನನಗೆ ಈಗಲೂ ನೆರವಾಗುತ್ತಿರುವ ಸಿನಿಮಾ. ಈ ಚಿತ್ರವನ್ನು ಪ್ರಥಮ ಬಾರಿಗೆ ನೋಡಿ ಈಗಾಗಲೇ 48 ವರ್ಷಗಳಾಗಿವೆ. ಆಗ ನೋಡಿದಾಗ ಯಾವ ಪ್ರಭಾವವನ್ನು ಬೀರಿತ್ತೋ ಅದೇ-ಅಥವಾ ಅದಕ್ಕಿಂತ ಹೆಚ್ಚು-ಪ್ರಭಾವವನ್ನು ಈಗ ಮತ್ತೆ ಮತ್ತೆ ನೋಡಿದಾಗಲೂ ನನ್ನ ಮೇಲೆ ಬೀರುತ್ತಲೇ ಇದೆ. ಕಾರಣ: ಸ್ವಾತಂತ್ರ್ಯ ಸಾಧನೆಯ ಹುರುಪು ದೇಶಾದ್ಯಂತ ಹರಡಿದ್ದ ಹೊಸ ಭರವಸೆಯ, ಹೊಸ ಬದ್ಧತೆಯ ಗಾಳಿ ಈ ಚಿತ್ರದುದ್ದಕ್ಕೂ ಬೀಸುತ್ತಾ, ಇಂದೂ-ಇಂದಿನ ಜಾಗತೀಕರಣದ ದಿನಗಳಲ್ಲಿ-ನಮ್ಮನ್ನು ಕೆಣಕುವಂತಿದೆ. ಮುಖ್ಯವೆಂದರೆ ಈ ಹೊಸ ಭರವಸೆ, ಬದ್ಧತೆಗಳು ವ್ಯಕ್ತವಾಗುವುದು ಈ ರಾಷ್ಟ್ರದ ಸಾಮಾನ್ಯ ಪ್ರಜೆಯೆನಿಸಿದ ಒಬ್ಬ ಪ್ರಾಥಮಿಕ ಶಾಲಾ ಮಾಸ್ತರನ ಮೂಲಕ. ಈತ ತನ್ನ ಹಳ್ಳಿಯನ್ನು, ಆ ಹಳ್ಳಿಯ ಶಾಲೆಯನ್ನು ಕಟ್ಟುವುದರೊಂದಿಗೇ ತನ್ನ ಕುಟುಂಬವನ್ನೂ ಕಟ್ಟುವ ರೀತಿ ಮತ್ತು ಆ ಹಾದಿಯಲ್ಲಿ ಎದುರಾಗುವ ಬಿಕ್ಕಟ್ಟುಗಳನ್ನು ಎದುರಿಸುವಲ್ಲಿ ತೋರುವ ಛಲ, ವಿವೇಕ ಹಾಗೂ ಸಂಯಮಗಳ ಪ್ರತಿ ವಿವರಗಳಲ್ಲೂ, ಈ ಚಿತ್ರ ನವಭಾರತದ ಬೀಜಾಂಕುರದ ಸಂಭ್ರಮ ಮತ್ತು ಹೆರಿಗೆಯ ಸಂಕಟಗಳೆರಡನ್ನೂ ಸರಳ ಲಯದಲ್ಲಿ ಕಟ್ಟಿಕೊಡುತ್ತದೆ. ನಮ್ಮ ಈ 60 ವರ್ಷಗಳ 'ಪ್ರಗತಿ'ಯ ಬಗ್ಗೆ ಒಂದು ಹಿನ್ನೋಟ ಬೀರಲು ಈ ಚಿತ್ರ ಒಂದು ಆಕರ ಬಿಂದುವನಂತಿದೆ ಎಂದರೆ ತಪ್ಪಾಗಲಾರದು.

ಈ ಚಿತ್ರವನ್ನು ಹಾಗೆ ಆಕರ ಬಿಂದುವಿನಂತೆ ನೋಡಿದಾಗಲೇ ನನ್ನ ಕಣ್ಣುಗಳು ಮಂಜಾಗುವುದು: ಎಲ್ಲಿಂದ ಎಲ್ಲಿಗೆ ನಾವು ಬಂದಿದ್ದೇವೆ, ಎಷ್ಟು ಬದಲಾಗಿದ್ದೇವೆ! ಆ ಚಿತ್ರದ ಸ್ಕೂಲ್ ಮಾಸ್ಟರ್ ರಂಗಣ್ಣ ನಮ್ಮ ತಂದೆಯೇ ಅಲ್ಲವೆ? ಹೊರ ರೂಪದಲ್ಲೂ-ಅದೇ ಪೇಟ, ಕೋಟು, ಕಚ್ಚೆ ಪಂಚೆ-ಮತ್ತು ಒಳರೂಪದಲ್ಲೂ-ಕೆಲಸದಲ್ಲಿನ ಅದೇ ಶ್ರದ್ಧೆ, ಕಟ್ಟುನಿಟ್ಟು ಮತ್ತು ಕುಟುಂಬದ ಬಗ್ಗೆ ಬದ್ಧತೆ-ಆ ಸಿನಿಮಾದ ರಂಗಣ್ಣನೇ ಆಗಿದ್ದ ಅವರ ಸರಳ ಅಚ್ಚುಕಟ್ಟು ಮತ್ತು ನಿಷ್ಠುರ ಆದರ್ಶಗಳ ಮೇಲೇ ನಮ್ಮ ಬದುಕನ್ನು ಕಟ್ಟಿಕೊಂಡಿದ್ದು ಅಲ್ಲವೆ? ಇದು ನಮ್ಮದೇ-ನಮ್ಮಂತಹ ಬಹು ಜನರ-ಹಾಡು ಪಾಡಿನ ಕಥೆಯೇ ಅಲ್ಲವೆ? 1958ರಲ್ಲಿ ನನ್ನಣ್ಣನನ್ನು ಬೆಂಗಳೂರಿನ ಕಾಲೇಜೊಂದರಲ್ಲಿ ಪಿಯುಸಿಗೆ ಸೇರಿಸಿ ಈ ಚಿತ್ರವನ್ನು ನೋಡಿ ಬಂದಿದ್ದ ನಮ್ಮ ತಂದೆಯ ಆ ಉತ್ಸಾಹ ನನಗಿನ್ನೂ ಕಣ್ಣಿಗೆ ಕಟ್ಟಿದಂತಿವೆ. ಅವರು ಅಡಿಗೆ ಮನೆಯಲ್ಲಿ ಕೂತು ಚಿತ್ರದ ಕಥೆಯನ್ನು ನಮ್ಮ ತಾಯಿಗೆ ಬಹು ಉಮೇದಿನಿಂದ ಹೇಳುತ್ತಿದ್ದರು. ಜೊತೆಗೆ ಎರಡು ಎಚ್ಚರಿಕೆಗಳನ್ನೂ ಹೇಳಿದ್ದು ನೆನಪಿದೆ. ಒಂದು: ಪಟ್ಟಣಕ್ಕೆ ಓದಲು ಹೋದ ಮಕ್ಕಳ ಬಗ್ಗೆ ಸದಾ ಜಾಗೃತರಾಗಿರಬೇಕು. ಎರಡು: ಹೆಂಗಸರೂ ಅಕ್ಷರ ಕಲಿಯಬೇಕು. ಇವು ನನಗೆ ಇಂದು ಹೊಸದಾಗಿ ಆಧುನಿಕತೆಗೆ ಕಾಲಿಡುತ್ತಿರುವ ಸಮಾಜವೊಂದು ಅಂದು ವಹಿಸಬೇಕಾಗಿದ್ದ ಎರಡು ಪ್ರಾಥಮಿಕ ಎಚ್ಚರಗಳಾಗಿ ಕಾಣುತ್ತಿವೆ. ನಮ್ಮ ತಂದೆ ಆ ಸಿನಿಮಾವನ್ನು ಎಷ್ಟು ಎಚ್ಚರಿಕೆಯಿಂದ ಗಮನಿಸಿದ್ದರು ಎಂದು ಈಗ ನನಗೆ ಆಶ್ಚರ್ಯವಾಗುತ್ತದೆ! ಅವರು ತಮ್ಮ ಬದುಕಿನಲ್ಲಿ ಈ ಎರಡು ಎಚ್ಚರಗಳನ್ನೂ ಪಾಲಿಸಿದರು. ನನ್ನಣ್ಣನನ್ನು ತಮ್ಮೆಲ್ಲ ಎಚ್ಚರದೊಂದಿಗೆ ಬೆಳೆಸಿದರು ಮತ್ತು ನನ್ನ ತಾಯಿಗೆ ಅಕ್ಷರಗಳನ್ನೂ ಕಲಿಸಿದರು. ಹಾಗಾಗಿ ರಂಗಣ್ಣನ ಕುಟುಂಬದಂತೆ ನಮ್ಮ ಕುಟುಂಬ ದುರಂತವನ್ನು ಎದುರಿಸಲಿಲ್ಲ.

ಆದರೆ ಈ ಚಿತ್ರದ ನಿರ್ದೇಶಕ ಮತ್ತು ನಾಯಕ ನಟ ಬಿ.ಆರ್. ಪಂತಲು ತಮ್ಮ ನೆಚ್ಚಿನ ಶಿಷ್ಯ ಶಿವಾಜಿ ಗಣೇಶನ್‌ರ ವಿಶೇಷ ಪಾತ್ರದ ಮೂಲಕ ಈ ಚಿತ್ರದಲ್ಲಿನ ದುರಂತವನ್ನು ಸುಖಾಂತ್ಯ ಮಾಡಿರುವ ರೀತಿ ಒಂದು ವಿಶಿಷ್ಟ melncholyಯನ್ನು ಸೃಷ್ಟಿಸುತ್ತದೆ. ಆ ಮೂಲಕ ನವಭಾರತದ ಯಶಸ್ಸಿನ ಗುಟ್ಟು, ಸಣ್ಣ ಕ್ಷಮೆಗಳಲ್ಲಿದೆ ಎಂಬ ದೊಡ್ಡ ಸತ್ಯವವನ್ನೂ ಹೇಳುತ್ತದೆನಿಸುತ್ತದೆ. ಈ ದೃಷ್ಟಿಯಿಂದಲೂ ಈ ಚಿತ್ರ ಇಂದು ಗಮನಾರ್ಹವೆನಿಸುತ್ತದೆ. ಹಾಗೆ ನೋಡಿದರೆ, ಕನ್ನಡ ಸಿನಿಮಾ ಇರುವವರೆಗೂ ಈ 'ಸ್ಕೂಲ್ ಮಾಸ್ಟರ್'; ಆ ಪಂತಲು, ಆ ರಾಜಮ್ಮ, ಆ ಬಾಲಕೃಷ್ಣ, ಆ ನರಸಿಂಹರಾಜು, ಆ ಢಿಕ್ಕಿ ಮಾಧವರಾವ್, ಆ ಶಿವಾಜಿ ಗಣೇಶನ್ ಮತ್ತು ಆ ಬಿ.ಸರೋಜಾ ದೇವಿ ಅವರೊಂದಿಗೆ ಇದ್ದೇ ಇರುತ್ತಾರೆ. ಹಾಗೇ ಕನ್ನಡದ ಜನ 'ಭಾಮೆಯ ನೋಡಲು ತಾ ಬಂದ', 'ಸೊಂಪಾದ ಸಂಜೆ ವೇಳೆ', 'ಅತಿ ಮಧುರ ಅನುರಾಗ', 'ನಾನೂ ನೀನೂ ಜೋಡಿ ಈ ಜೀವನ ಎತ್ತಿನ ಗಾಡಿ' ಮುಂತಾದ ಸರಳ ಸುಮಧುರ ಗೀತೆಗಳನ್ನು ಗುನುಗುತ್ತಲೇ ಇರುತ್ತಾರೆ!