ಸುದ್ದಿಸೂಳೆಯ ಬೆನ್ನತ್ತಿ ಹೊರಟಿರುವ ಮಾಧ್ಯಮಗಳು!(ಭಾಗ 2)

ಸುದ್ದಿಸೂಳೆಯ ಬೆನ್ನತ್ತಿ ಹೊರಟಿರುವ ಮಾಧ್ಯಮಗಳು!(ಭಾಗ 2)

ಬರಹ

ಮಾಧ್ಯಮಗಳು ಈ ರೀತಿ ವರ್ತಿಸಿದ ಪ್ರಕರಣ ಇದೇ ಮೊದಲೇನಲ್ಲ. ಈ ಹಿಂದೆ ಬಹುಚರ್ಚಿತ ನಿತಾರಿ ಪ್ರಕರಣ, ಜೆಸ್ಸಿಕಾ ಲಾಲ್ ಪ್ರಕರಣದಲ್ಲೂ ಇದೇ ರೀತಿಯಾಗಿಯೇ ನಡೆದುಕೊಂಡಿದ್ದವು ಎಂದು ಹೇಳುತ್ತ ಅವುಗಳ “ಸಚ್ಚಾರಿತ್ರ್ಯ ಚರಿತ್ರೆ”ಯನ್ನು ನೆನಪಿಸಿಕೊಳ್ಳುವ “ಪುಣ್ಯ” ಕಾರ್ಯವನ್ನು ಮಾಡಬಹುದು.

ನಿಜ ಹೇಳಬೇಕೆಂದರೆ, ಸಿಬಿಐ ತಲ್ವಾರ್ ದಂಪತಿಗಳನ್ನು ದೋಷಮುಕ್ತರಾಗಿಸಿದ್ದರಿಂದ ಹೆಚ್ಚಿನ ನಷ್ಟವಾದದ್ದು ಮಾಧ್ಯಮಗಳಿಗೇ. ಹೇಗೆಂದರೆ, ಅಲ್ಲಿಯವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನಾ ತಿರುವುಗಳನ್ನು ವಿಶೇಷ ವರದಿಗಳ ಮೂಲಕ “ಮೊತ್ತ ಮೊದಲ ಬಾರಿಗೆ” ಪ್ರಕಟಿಸುವುದರ ಮೂಲಕ ಹದಿಮೂರು ವರ್ಷದ ಆರುಷಿ ತನ್ನ ತಂದೆ ರಾಜೇಶ್ ತಲ್ವಾರ್ ಹೊಂದಿದ್ದ ಅನೈತಿಕ ಸಂಬಂಧಕ್ಕೆ ಸಾಕ್ಷಿಯಾಗಿದ್ದರಿಂದಾಗಿ ತನ್ನ ತಂದೆಯಿಂದಲೇ ಕೊಲ್ಲಲ್ಪಟ್ಟಳು ಎಂಬ “ವಸ್ತುನಿಷ್ಟ, ಸತ್ಯಸ್ಪಷ್ಟ ವರದಿ”ಯನ್ನು ಒಂದು ಕಡೆ ನೀಡಿದ್ದಲ್ಲದೆ, ಮತ್ತೆ ಕೆಲವು ವಾಹಿನಿಗಳು, ಪತ್ರಿಕೆಗಳು ಆರುಷಿ ನಡತೆಗೆಟ್ಟವಳು, ಆಕೆಗೆ ತನ್ನ ಮನೆಯ ಜವಾನನೊಂದಿಗಿದ್ದ ಅನೈತಿಕ ಸಂಬಂಧವೇ ಈ ಕೊಲೆಗೆ ಮುಖ್ಯ ಕಾರಣ ಎಂಬ “ತನಿಖಾ ವರದಿ”ಗಳನ್ನು ಸಹ ನೀಡಿದ್ದವು. ಇದಕ್ಕೆ ಪೂರಕವಾಗಿ ಪೊಲೀಸ್ ತನಿಖೆ ನಿಂತದ್ದು “ಬೇಲಿಯೇ ಎದ್ದು ಹೊಲ ಮೇದಂತೆ” ಎನ್ನುವ ಗಾದೆಯನ್ನು ಸತ್ಯವಾಗಿಸಿದ್ದರ ಪರಮಾವಧಿಯ ನಿದರ್ಶನವಾಗಿ ನಿಂತಿತ್ತು.

ಕಾನೂನು, ಸಮಾಜ ಹಾಗೂ ಮಾಧ್ಯಮಗಳ ನಡುವಿನ ಸಂಬಂಧವನ್ನು ವಿವರಿಸುವುದು ವಿವರಿಸಲು ಸಾಧ್ಯವಾಗದಷ್ಟು ಸಂಕೀರ್ಣವಾದುದು. ಇಂದಿನ ಕಾಲಘಟ್ಟದಲ್ಲಿ ಒಂದರ ಪ್ರಭಾವ ಮತ್ತೊಂದರ ಮೇಲೆ ಗಾಢವಾದ ಪರಿಣಾಮವನ್ನೇ ಬೀರುವ ಮಟ್ಟಕ್ಕೆ ಬೆಳೆದು ನಿಂತಿದೆ. ಒಂದೆಡೆ ಮುಕ್ತವಿಚಾರಣೆಗಳ ಅವಶ್ಯಕತೆ ಮಾಧ್ಯಮಗಳಿಗೆ ಅನಿರ್ಬಂಧಿತ ಪ್ರವೇಶವನ್ನು ನೀಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಕಾರಣ, ನ್ಯಾಯ ದೊರಕಬೇಕೆನ್ನುವುದು ನ್ಯಾಯಾಂಗ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿರುವಂತೆಯೇ ಹಾಗೆ ನ್ಯಾಯ ಹೇಗೆ ದೊರಕುತ್ತಿದೆ ಎನ್ನುವುದು ಕೂಡ ಈಗ ಜನಸಾಮಾನ್ಯರ ಕಣ್ಣಿಗೆ ಕಾಣಿಸಿಕೊಳ್ಳಬೇಕಿದೆ. ಅದಕ್ಕಾಗಿಯೇ ನಮ್ಮ ಪ್ರಜಾಪ್ರತಿನಿಧಿಗಳು ಹೇಗೆ ನಮ್ಮನ್ನು ಪ್ರತಿನಿಧಿಸುತ್ತಿದ್ದಾರೆಂಬುದು ದೂರದರ್ಶನದ ಮೂಲಕ ಬಿತ್ತರಗೊಳ್ಳುತ್ತಿರುವಂತೆಯೇ ನಮ್ಮ ನ್ಯಾಯಾಂಗ ವ್ಯವಸ್ಥೆ ಎಷ್ಟು ಪಾರದರ್ಶಕವಾಗಿ ತನ್ನ ಕರ್ತವ್ಯ ನಿರ್ವಹಿಸುತ್ತಿದೆ ಎಂಬುದನ್ನು ಕೂಡ ನಾವು ಕಾಣುವಂತಹ ಕಾಲ ಸನ್ನಿಹಿತವಾಗಿದೆ ಎಂದು ನಾವು ಭಾವಿಸಬಹುದು.

ನ್ಯಾಯಾಂಗ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರವನ್ನು ದೂರದೃಷ್ಟಿಯಲ್ಲಿಟ್ಟುಕೊಂಡೇ ನಮ್ಮ ಸಂವಿಧಾನ ರಚನಾಕಾರರು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ನ್ಯಾಯಿಕ ಕಾರ್ಯಕಲಾಪಗಳನ್ನು ವರದಿಗೊಳಿಸುವುದಕ್ಕೆ ಮಾನ್ಯ ಮಾಡಿವೆ. ಈ ಒಂದು ನಿಯಮ ಎಷ್ಟು ಸೂಕ್ಷ್ಮ ಹಾಗೂ ಸಂಕೀರ್ಣವಾದುದೆಂದರೆ, ಸ್ವಲ್ಪ ಆಯತಪ್ಪಿದರೂ ಬಹುದೊಡ್ಡ ಪ್ರಮಾದವೇ ಸಂಭವಿಸುವ ಸಾಧ್ಯತೆಗಳು ಹೆಚ್ಚು. ಮಾಧ್ಯಮ ವಿಚಾರಣೆಯನ್ನು ಎದುರಿಸುತ್ತಿರುವ ಜೀವನ ಮರಣಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಯಾವುದೇ ತೀರ್ಪನ್ನು ನೀಡುವ ಹಕ್ಕನ್ನು ಹೊಂದಿರುವುದಿಲ್ಲ. ಆ ಕಾರಣಕ್ಕಾಗಿಯೇ, ಯಾವುದೇ ನ್ಯಾಯಾಂಗ ಪ್ರಕರಣ ನಡೆಯುತ್ತಿರುವ ಸಂದರ್ಭದಲ್ಲಿ ಆ ಪ್ರಕರಣದ ವರದಿಯನ್ನು ಮಾಡುವ ಹಕ್ಕು ಮಾತ್ರ ಮಾಧ್ಯಮದ್ದಾಗಿರುತ್ತದೇ ಹೊರತು ತಾನು ಯಾವುದೇ ಟೀಕೆಯನ್ನಾಗಲಿ, ಹೇಳಿಕೆಗಳನ್ನಾಗಲಿ ನೀಡುವಂತಿರುವುದಿಲ್ಲ. ಯಾಕೆಂದರೆ, ಅಂತಹ ಪ್ರಕ್ರಿಯೆಯಲ್ಲಿ ವಿಚಾರಣೆಗೊಳಪಡುವ ವ್ಯಕ್ತಿಯ ಚಾರಿತ್ರ್ಯವಧೆಯಾಗುವಂತಹ ಸಾಧ್ಯತೆಗಳು ಹೆಚ್ಚಾಗಿದ್ದು, ಇದು ನ್ಯಾಯಾಂಗ ವ್ಯವಸ್ಥೆಗೆ ಕಳಂಕ ತರುವಂತಹ ನಡೆಯಾಗುತ್ತದೆ. ಆದ್ದರಿಂದಲೇ ಮಾಧ್ಯಮಗಳು ವರದಿಗಾರಿಕೆಯ ಪರಿಧಿಯನ್ನು ದಾಟಿ ಅಪರಾಧದ ಕತೆಯನ್ನು ಹೆಣೆಯುವ ಗೋಜಿಗೆ ಹೋಗದೆ ಇದ್ದಲ್ಲಿ ಔಚಿತ್ಯಪೂರ್ಣವಾಗಿರುತ್ತದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತ ವಿಚಾರಣೆ ಎಷ್ಟು ಮುಖ್ಯವಾದುದೆಂದರೆ, ಅಮೆರಿಕಾದಂತಹ ದೇಶಗಳಲ್ಲಿ ವಿಚಾರಣೆ ನಡೆಯುವಂತಹ ಸಂದರ್ಭಗಳಲ್ಲಿ ಮಾಧ್ಯಮಗಳಿಗೆ ಯಾವುದೇ ಹೇಳಿಕೆಯನ್ನು ನೀಡುವುದಿರಲಿ, ಪ್ರಕರಣ ಇತ್ಯರ್ಥವಾಗುವವರೆಗೆ ಜ್ಯೂರಿಯ ಸದಸ್ಯರು ಹೊರಹೋಗುವುದನ್ನು ಕೂಡ ನಿಷೇಧಿಸಲಾಗಿದೆ.

ನಮ್ಮ ದೇಶ ಮೂಲಭೂತ ಹಕ್ಕುಗಳ ಮಾದರಿಯನ್ನು ಅಮೆರಿಕಾ ಸಂವಿಧಾನದಿಂದ ಎರವಲು ಪಡೆದಿದೆಯಾದರೂ, ಅಲ್ಲಿಯಂತೆ ಇಲ್ಲಿ ಜ್ಯೂರಿ ವಿಚಾರಣಾ ವ್ಯವಸ್ಥೆಯಿಲ್ಲ. ಆದರೂ, ಮಾಧ್ಯಮಗಳು ತಮ್ಮ ವರದಿಗಾರಿಕೆಯ ಮಿತಿಯನ್ನು ದಾಟಿರುವಂತಹ ಉಳಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಧೀಶರು ಮಾಧ್ಯಮಗಳ ವ್ಯಾಪ್ತಿಗೆ ಪ್ರತಿದಿನವೂ ತೆರೆದುಕೊಂಡೇ ಇದ್ದಾರೆ. ನಮ್ಮ ನ್ಯಾಯಾಧೀಶರು ತಾವುಗಳು ಮಾಧ್ಯಮದಿಂದ ಯಾವ ರೀತಿಯ ಪ್ರಭಾವಕ್ಕೂ ಒಳಗಾಗುವುದಿಲ್ಲ ಎಂದು ಹೇಳಬಹುದಾದರೂ, ಮಾಧ್ಯಮಗಳ ವರದಿಗಳು ನಕಾರಾತ್ಮಕವಾಗಿ ಸಾರ್ವಜನಿಕ ಅಭಿಪ್ರಾಯವನ್ನು ಬೆಳೆಸಿ ಕಡೆಗೆ ಪ್ರಕರಣದ ಫಲಿತಾಂಶದ ಮೇಲೇ ಪ್ರಭಾವ ಬೀರುವಷ್ಟು ಮಟ್ಟಿಗೆ ಹೋಗಿಬಿಡುತ್ತವೆ. Power corrupts abosoultely ಎನ್ನುವ ಹಾಗೆ.

ಈ ಹಿಂದೆ ಇದೇ ಸಂಪದದಲ್ಲಿ ಪಲ್ಲವಿಯವರು ಮಾಧ್ಯಮಗಳು ನಮ್ಮ ಖಾಸಗಿತನವನ್ನು ಬಹಿರಂಗಪಡಿಸುವುದರ ವಿರುದ್ಧ, ಮಾಧ್ಯಮಗಳು ಸ್ವಯಂ ನಿಯಂತ್ರಣ ಹೊಂದಬೇಕಾದ ಅಗತ್ಯದ ಕುರಿತು ಲೇಖನ ಬರೆದಿದ್ದನ್ನು ಇಲ್ಲಿ ಹೇಳಲೇಬೇಕಾಗುತ್ತದೆ. ಈಗ ಅದೇ ವಿಷಯವನ್ನು ಮುಂದುವರಿಸುವುದಾದಲ್ಲಿ, ಕಾನೂನು ವ್ಯವಸ್ಥೆಗೆ ಹೊಣೆಗಾರಿಕೆಯ ಸಾಧನವಾಗಿ ಮಾಧ್ಯಮವನ್ನು ಪರಿಗಣಿಸಿರುವ ಸಮಾಜದಲ್ಲಿ ಕಾನೂನನ್ನು ಎದುರಿಸುತ್ತಿರುವ ವ್ಯಕ್ತಿಗಳ ಖಾಸಗಿತನ, ಘನತೆ, ಮರ್ಯಾದೆ ಕಾಪಾಡುವಂತಹ ಸಾರ್ವಜನಿಕ ಹಿತಾಸಕ್ತಿಯ ಹೊಣೆಗಾರಿಕೆ ಕೂಡ ಮಾಧ್ಯಮದ ಮೇಲಿರುತ್ತದೆ. ಆದ್ದರಿಂದಲೇ, ಈ ಕುರಿತು ಒಂದು ಚಿಕ್ಕ ವಿಷಯವನ್ನು ಪ್ರಕಟಿಸಬೇಕಿದ್ದರೂ ಹತ್ತಾರು ಸಲ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಯಾಕೆಂದರೆ, “ಅಡಿಕೆಗೆ ಹೋದ ಮಾನ ಆಣೆ ಕೊಟ್ಟರೂ ಬರುವುದಿಲ್ಲ”, What is done can not be undone. ಈ ಕಾರಣಕ್ಕಾಗಿಯೇ ಮಾಧ್ಯಮಗಳು ಸ್ವಯಂ ನಿಯಂತ್ರಣವನ್ನು ಅನುಸರಿಸಬೇಕಾಗುತ್ತದೆ. ಇಲ್ಲವಾದಲ್ಲಿ, ಆರುಷಿ ಕೊಲೆ ಪ್ರಕರಣದಲ್ಲಿ ಆದಂತಹ ಅವಘಡಗಳು ಸಂಭವಿಸುವ, ಮರುಕಳಿಸುವ ಸಾಧ್ಯತೆಗಳು ಹೆಚ್ಚು.

24X7 ಸೆನ್ಸೇಶನಲ್ ಸುದ್ದಿಗಳನ್ನು ಬಿತ್ತರಿಸಬೇಕೆಂಬ ಏಕೈಕ ಉದ್ದೇಶದಿಂದ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಈ ಖಾಸಗಿ ಸುದ್ದಿವಾಹಿನಿಗಳು, ಇತ್ತೀಚೆಗೆ ಅವುಗಳೊಂದಿಗೆ ಪೈಪೋಟಿಗಿಳಿದಂತೆ ವರ್ತಿಸುತ್ತಿರುವ ನಮ್ಮ ದಿನಪತ್ರಿಕೆಗಳು ಅಂತಹ ಸುದ್ದಿಗಳಿಗಾಗಿಯೇ ಹೊಂಚು ಹಾಕುತ್ತ, ನಾ ಮುಂದು ತಾ ಮುಂದು ಎಂದು ಮುಗಿಬೀಳುತ್ತ, ಸತ್ಯಾಸತ್ಯತೆಗಳ ಪರಿವೆಯೇ ಇಲ್ಲದೆ, ಪೂರ್ವಾಪರ ಆಲೋಚನೆಯಿಲ್ಲದೆ ತನ್ನ ಪ್ರತಿಸ್ಪರ್ಧಿ ಚಾನೆಲ್ಲುಗಳಿಗಿಂತ ಮೊದಲು ಆ ಸುದ್ದಿಯನ್ನು ಬಿತ್ತರಿಸುವ ಮೂಲಕ ಟಿಆರ್ ಪಿ ರೇಟಿಂಗ್ ನಲ್ಲಿ, ಪ್ರಸಾರ ಸಂಖ್ಯೆಯಲ್ಲಿ ಅಗ್ರ ಶ್ರೇಯಾಂಕವನ್ನು ಕಂಡುಕೊಂಡಲ್ಲಿ “ಜನ್ಮ ಸಾರ್ಥಕ” ಎನ್ನುವಷ್ಟು ಹಪಹಪಿಯನ್ನು ಹೊಂದಿವೆ. ಅದರಿಂದಾಗಿಯೇ, 24X7 ಸುದ್ದಿವಾಹಿನಿಗಳಾಗಿದ್ದರೂ, ಸ್ಟಾರ್ ನ್ಯೂಸ್, ಆಜ್ ತಕ್, ಹೆಡ್ ಲೈನ್ಸ್, ನಮ್ಮ ಕನ್ನಡ ಸುದ್ದಿವಾಹಿನಿ ಟಿವಿ 9ನಂತಹ “ಪ್ರಮುಖ ಸುದ್ದಿವಾಹಿನಿಗಳು” ವಸ್ತುನಿಷ್ಟ ವರದಿಗಳಿಗಿಂತ ಹೆಚ್ಚಾಗಿ ಮನರಂಜನಾ ಗಾಸಿಪ್ ಗಳು, ಪೇಜ್ 3 ವಿಷಯಗಳ ನಡುವೆ ಹೆಸರಿಗೆ ಸುದ್ದಿಯನ್ನು ಪ್ರಕಟಿಸುತ್ತಾ “ಜನಪ್ರಿಯತೆ”ಯ ಮಾನದಂಡವನ್ನು ಕಾಪಾಡಿಕೊಳ್ಳುತ್ತ, “ಸಮಾಜದ ಏಳಿಗೆಗಾಗಿ” ಎನ್ನುವ ಸೋಗಿನಲ್ಲಿ ಅತಿ ಹೆಚ್ಚು ಪ್ರೇಕ್ಷಕವರ್ಗವನ್ನು ಸೃಷ್ಟಿಸಿಕೊಳ್ಳುತ್ತ ಮುನ್ನಡೆಯಲು ಸಾಧ್ಯವಾಗಿರುವುದು. ಎಷ್ಟೇ ಆಗಲಿ ನೋಡುಗನ ಅಭಿರುಚಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ಹೆಣೆಯುವುದು ಚಾನೆಲ್ಲುಗಳ ಕರ್ತವ್ಯವಲ್ಲವೇ? ನಮ್ಮ “ನೋಡುಗ ಮಹಾಶಯ”ರ ಅಭಿರುಚಿ ಇಷ್ಟು ಉತ್ಕೃಷ್ಟಗೊಳ್ಳುತ್ತ ನಡೆದಿರುವುದು ಸಂತೋಷಪಡಬೇಕಾದ ವಿಚಾರವೇ! ಒಂದು ಕಾಲದಲ್ಲಿದ್ದ ಕಾರ್ಯಕ್ರಮಗಳ ನಡುವೆ ಜಾಹೀರಾತಿನ ಬದಲು ಜಾಹೀರಾತಿನ ನಡುವೆ ಕಾರ್ಯಕ್ರಮಗಳು ನುಸುಳುವ ಕಾಲ ಕಾಲಿಟ್ಟ ಹಾಗೆಯೇ, ಇಂದು 24X7 ಸುದ್ದಿವಾಹಿನಿಗಳಲ್ಲಿ “ಇಂತಹ” ಪ್ರಮುಖ “ಮನರಂಜನಾ” ಕಾರ್ಯಕ್ರಮಗಳ ನಡುವೆ ಆಗೊಮ್ಮೆ ಈಗೊಮ್ಮೆ ಸುದ್ದಿಗಳು ಬಿತ್ತರಗೊಳ್ಳುತ್ತಲಿವೆ.

ಇದಕ್ಕೆ ಉದಾಹರಣೆ ನೀಡುವುದಾದರೆ, ಆಧುನಿಕತೆ, ತಂತ್ರಜ್ಞಾನ ಬೆಳೆದಂತೆ ಮಾಧ್ಯಮಗಳು ಜನಾಭಿಪ್ರಾಯ ಸಂಗ್ರಹ ಮಾಡುವ ಸಾಧನಗಳು ಕೂಡ ಬದಲಾಗುತ್ತ ಹೋಗುತ್ತವೆ. ಅಂತೆಯೇ, ಇಂದಿನ ಟ್ರೆಂಡ್ SMS. ನೀವು ಯಾರು ಪ್ರಧಾನಿಯಾಗಬೇಕು ಎಂದು ಬಯಸುತ್ತೀರಿ? ಭಾರತ-ಅಮೆರಿಕ ಅಣು ಒಪ್ಪಂದಕ್ಕೆ ಎಡಪಕ್ಷಗಳು ಬೆಂಬಲಿಸಬೇಕೇ ಬೇಡವೇ? ಕತ್ರೀನಾ ಕೈಫ್ ಸಲ್ಮಾನ್ ಖಾನ್ ನನ್ನು ಮದುವೆಯಾಗೇ ಬೇಡವೇ? ಕರೀನಾ ಕಪೂರ್ ಶಾಹಿದ್ ಕಪೂರ್ ನನ್ನು ಬಿಟ್ಟು ಸೈಫ್ ಖಾನ್ ನನ್ನು ಪ್ರೇಮಿಸುತ್ತಿರುವುದು ಸರಿಯೇ? ಹೀಗೇ ಸಮಂಜಸವಾದುದಕ್ಕಿಂತ ಅಸಮಂಜಸವಾದ, ತೀರಾ absurd ಎನಿಸುವಂತಹ ಪ್ರಶ್ನೆಗಳಿಗೆ ನಮ್ಮ ಜನತಾಜನಾರ್ಧನರು ತಾವು ಯಾಕೆ ಹಾಗೆ ಹೇಳಬಯಸುತ್ತೇವೆ ಎಂದೂ ಹೇಳಲಾಗದೆ ಒಂದೇ ಸಾಲಿನಲ್ಲಿಯೂ ಅಲ್ಲ ಕೇವಲ ಹೌದು ಅಥವಾ ಇಲ್ಲ ಎಂದು ಉತ್ತರಿಸುವ ಮೂಲಕ ತಿಳಿಸಬೇಕು. ಅತೀ ಹೆಚ್ಚು ಯಾವುದು ಬರುತ್ತದೋ ಅದೇ ಇಡೀ ಭಾರತದ ಜನಸಂಖ್ಯೆಯ ಅಭಿಪ್ರಾಯ, ಅಭಿಮತ. ಈ ಹಿಂದೆ ಭೈರಪ್ಪನವರ ಬಹುಚರ್ಚಿತ “ಆವರಣ”ದ ವಿವಾದದ ಸಂದರ್ಭದಲ್ಲಿ ನಮ್ಮ ನಾಡಿನ ಪತ್ರಿಕೆಯೊಂದು ಈ ಎಸ್ಎಂಎಸ್ ಮತಸಂಗ್ರಹದ ಮೂಲಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಚಿಂತಕ ಡಾ.ಯು.ಆರ್.ಅನಂತಮೂರ್ತಿಯವರ ತೇಜೋವಧೆ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದರ ಕುರಿತು ಸ್ವತಃ ಅನಂತಮೂರ್ತಿಯವರೇ ತಮ್ಮ ಇತ್ತೀಚಿನ ಪುಸ್ತಕ “ಮಾತು ಸೋತ ಭಾರತ”ದಲ್ಲಿ ವಿಷಾದ ವ್ಯಕ್ತಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಮತ್ತೆ ಮೇಲಿನ ವಿಷಯಕ್ಕೆ ಬರುವುದಾದರೆ, “ಪಾರ್ಲಿಮೆಂಟ್ ದಾಳಿ” ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ಜಲ್ ಗುರುವಿಗೆ ಜೀವಾವಧಿ ಶಿಕ್ಷೆ ನೀಡಬೇಕೋ, ಮರಣ ದಂಡನೆ ಶಿಕ್ಷೆ ವಿಧಿಸಬೇಕೋ ಎಂದು ಹೆಚ್ಚುಕಮ್ಮಿ ಎಲ್ಲಾ ವಾಹಿನಿಗಳು ಮುಗಿಬಿದ್ದು ಇದೇ ಎಸ್ಎಂಎಸ್ ಮತಸಂಗ್ರಹದ ಮೂಲಕ ಬಹುಜನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದವು. ಬಹುಶಃ, ಭಾರತದ ಕಾನೂನು ಇತಿಹಾಸದಲ್ಲಿ ಈ ರೀತಿಯ ಮತ ಸಂಗ್ರಹ ಇದೇ ಮೊದಲನೆಯದು ಎಂದೆನಿಸುತ್ತೆ. ಹೇಗೆ ಇಂತಹ ಜನಾಭಿಮತ ಕಾನೂನು ತೀರ್ಪಿನ ಮೇಲೆ ಪರಿಣಾಮ ಬೀರಬಹುದು ಎನ್ನುವುದಕ್ಕೆ ಸಾಕ್ಷಿಯೆಂಬಂತೆ, ಈ ಪ್ರಕರಣ ನಡೆಸಿದ ನ್ಯಾಯಾಧೀಶರುಗಳು ಸಂಸತ್ತಿನ ಮೇಲೆ ನಡೆದ ದಾಳಿ ಪ್ರಕರಣದ ವಿರುದ್ಧ “ಸಮಾಜದ ಸಮಷ್ಟಿ ಪ್ರಜ್ಞೆ”ಯೇ ಕೆರಳಿದೆ ಎಂದು ಹೇಳುವಂತಾಯಿತು!

ನಾಗರಿಕರ ಮೂಲಭೂತ ಹಕ್ಕುಗಳಿಗೆ ಚ್ಯುತಿ ತರುವುದರ ಜತೆಗೇ ಮಾಧ್ಯಮ ಪತ್ರಿಕೋದ್ಯಮ ನೀತಿನಿಯಮಗಳನ್ನು ಕೂಡ ಗಾಳಿಗೆ ತೂರಿದ್ದು ಆತಂಕಕಾರಿ, ಅವಹೇಳನಕಾರಿ ವಿಚಾರ.

“ಪ್ರೆಸ್ ಕೌನ್ಸಿಲ್ ಆಫ್ ಇಂಡಿಯ” ತನ್ನ ನಡಾವಳಿಯಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಪ್ರಸ್ತುತವೆನಿಸದಿದ್ದಲ್ಲಿ ಯಾವುದೇ ವ್ಯಕ್ತಿ/ಗಳ ಖಾಸಗಿ ವಿಚಾರಗಳನ್ನು ಪ್ರಕಟಿಸಬಾರದೆಂದು ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದೆ. ಇದು ಮಹಿಳೆಯೊಬ್ಬಳ ಶೀಲ ಹಾಗೂ ಖಾಸಗಿತನದ ಕುರಿತು ಶಂಕೆ ಮೂಡಿಸುವಂತಹ ವಿವರಗಳನ್ನು ಬಹಿರಂಗಗೊಳಿಸಬಾರದೆಂಬ ನಿಯಮವನ್ನೂ ಒಳಗೊಂಡಿದೆಯಾದರೂ, ಆರುಷಿ ಕೊಲೆ ಪ್ರಕರಣದಲ್ಲಿ ಇದರ ಉಲ್ಲಂಘನೆಯಾದದ್ದಂತೂ ಸತ್ಯ!

ಮತ್ತೊಂದು, ಮಹಿಳೆಯನ್ನು ಅಗೌರವವಾಗಿ ಪ್ರತಿನಿಧಿಸುವುದಕ್ಕೆ ಸಂಬಂಧಿಸಿದ ಕಾಯ್ದೆ. ಈ ಕಾಯ್ದೆಯಡಿಯಲ್ಲಿ ಪ್ರಕರಣಕ್ಕೊಳಪಟ್ಟಿರುವ ಮಹಿಳೆಯ ಘನತೆಗೆ ಚ್ಯುತಿ ಬಾರದಂತೆ ಜವಾಬ್ದಾರಿಯುತವಾಗಿ ವರದಿಗೊಳಿಸಬೇಕು ಎಂದು ಮಾಧ್ಯಮಗಳಿಗೆ ಸೂಚನೆ ನೀಡುತ್ತದೆ. ಆದರೆ, ಈ ಕಾಯ್ದೆಯು ಕೂಡ ಪ್ರಸ್ತುತ ಪ್ರಕರಣದಲ್ಲಿ ಉಲ್ಲಂಘನೆಯಾಯಿತು. ಎಲ್ಲಾ ಕಾಯ್ದೆಗಳು ಉಲ್ಲಂಘನೆಯಾದಲ್ಲಿ, ಅನುಸರಿಸಲಾದ ಕಾಯ್ದೆಗಳು ಯಾವುವು? ಕಾಯ್ದೆಗಳು ಇರುವುದು ಕೇವರ ಹೆಸರಿಗೆ ಮಾತ್ರವೇ? ಎನ್ನುವ ಪ್ರಶ್ನೆಗಳು ಕಾಡುತ್ತವೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇನ್ನು ಮೇಲಾದರೂ ಕಣ್ತೆರೆದು ಇಂತಹ ಕಾಯ್ದೆಗಳ ಉಲ್ಲಂಘನೆಯನ್ನು ಮಾಡುವ ಮಾಧ್ಯಮಗಳನ್ನು ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತವಾಗಿ ವಿಚಾರಣೆಗೊಳಪಡಿಸಿ, ತಪ್ಪಿತಸ್ಥರಾದಲ್ಲಿ ತೀವ್ರ ದಂಡನೆಗೆ ಗುರಿಪಡಿಸುವ ಮೂಲಕ ಮುಂದಾದರೂ ಇಂತಹ ಪ್ರಮಾದಗಳು ಜರುಗದಂತೆ ತಡೆಗಟ್ಟಬೇಕು.