ಲ್ಯಾಪ್‌ಟಾಪಿನಲ್ಲಿ ಅಂತರ್ಜಾಲ: ಬಿ ಎಸ್ ಎನ್ ಎಲ್ ಡೇಟಾಕಾರ್ಡೇ ಸೂಕ್ತ

ಲ್ಯಾಪ್‌ಟಾಪಿನಲ್ಲಿ ಅಂತರ್ಜಾಲ: ಬಿ ಎಸ್ ಎನ್ ಎಲ್ ಡೇಟಾಕಾರ್ಡೇ ಸೂಕ್ತ

ಬರಹ


    ನಿಮ್ಮಲ್ಲಿ ಲ್ಯಾಪ್‌ಟಾಪ್ ಇದೆ.ನೀವು ಪ್ರವಾಸದಲ್ಲಿರುವುದೇ ಹೆಚ್ಚು.ಅಂತರ್ಜಾಲ ಸಂಪರ್ಕ ನಿಮಗೆ ಬೇಕು. ಹೀಗಿದ್ದರೆ ಭಾರತ್ ಸಂಚಾರ್ ನಿಗಮದ ಡೇಟಾಕಾರ್ಡ್ ಬಳಸಿ ಅಂತರ್ಜಾಲ ಸೇವೆ ಪಡೆದುಕೊಳ್ಳುವುದು ನಿಮಗೆ ಸೂಕ್ತವಾಗಬಹುದು.ಇಂತಹ ಡೇಟಾಕಾರ್ಡ್‌ನ್ನು ಇತರ ಖಾಸಗಿ ದೂರಸಂಪರ್ಕ ಕಂಪೆನಿಗಳೂ ನೀಡುತ್ತಿವೆ. ಆದರೆ ಇವರೆಲ್ಲರೂ ಕಾರ್ಡಿಗೆ ವಿಧಿಸುವ ದರ ದುಬಾರಿ.ಬಿಎಸೆನೆಲ್ ಮಾಸಿಕ ನೂರೈವತ್ತು ರುಪಾಯಿ ದರದಲ್ಲೂ ಕಾರ್ಡನ್ನು ಬಾಡಿಗೆ ನೀಡುತ್ತದೆ. ಒಮ್ಮೆಗೇ ಹಣ ನೀಡಿದರೂ ಕಾರ್ಡಿಗೆ ನೀವು ತೆರಬೇಕಾದ ಬೆಲೆ ಎರಡು ಸಾವಿರದ ಎಂಟುನೂರು ಮಾತ್ರಾ.ನೀವೆಷ್ಟೇ ಅಂತರ್ಜಾಲ ಬಳಸಿದರೂ ಮಾಸಿಕ ನೀವು ಪಾವತಿಸಬೇಕಾದ ಶುಲ್ಕ ನಾಲ್ಕುನೂರು ರುಪಾಯಿ ಮಾತ್ರಾ.ಎಷ್ಟೇ ಬಳಸಿದರೂ ಈ ನಿಗದಿತ ದರ ನೀಡಿದರೆ ಮುಗಿಯಿತು. ಇತರ ಕಂಪೆನಿಗಳ ದರ ಒಂಭೈನೂರು ರೂಪಾಯಿಗಿಂತ ಕಡಿಮೆಯಾಗದು. ಬಾಡಿಗೆಗೆ ತೆಗೆದುಕೊಂಡರೆ,ಸೇವೆ ಬೇಡವಾದಾಗ ವಾಪಸ್ಸು ನೀಡಬಹುದು.ಈ ಸೇವೆ ಸಿಡಿಎಂಎ ತಂತ್ರಜ್ಞಾನ ಬಳಸುತ್ತದೆ. ಹೀಗಾಗಿ ಅದರ ಗೋಪುರಗಳು ಇದ್ದಲ್ಲಿ ಸೇವೆ ಲಭ್ಯ. ಮಣಿಪಾಲದಲ್ಲಿ ಇಂತಹ ಗೋಪುರವಿದೆ.ಉಡುಪಿಯಲ್ಲೂ ಸದ್ಯವೇ ಹೊಸ ಗೋಪುರ ಕಾರ್ಯಾರಂಭಿಸಬಹುದು.ಬೇರೆ ರೀತಿಯಲ್ಲಿ ಹೇಳಬೇಕಾದರೆ,ಫಿಕ್ಸೆಡ್ ನಿಸ್ತಂತು ಸೇವೆ ಲಭ್ಯವಿದ್ದೆಡೆ ಇದನ್ನು ಬಳಸಬಹುದು.ಇಂತಹ ಸೇವೆಯ ಮೂಲಕ ಅಂತರ್ಜಾಲ ಪಡೆದಾಗ ಅದರ ವೇಗ  ಪ್ರತಿ ಸೆಕೆಂಡಿಗೆ ಸುಮಾರು ನೂರೈವತ್ತು ಕಿಲೋಬಿಟ್ಸ್ ವೇಗದ ಅಂತರ್ಜಾಲ ಸೇವೆ ಲಭ್ಯ.ಹಳ್ಳಿ ಪ್ರದೇಶಗಳಲ್ಲೂ ಬಳಸಬಹುದು.ಆದರೆ ಇದು ಲ್ಯಾಪ್‌ಟಾಪ್‌ಗೆ ಮಾತ್ರಾ ಸೂಕ್ತವಾಗಿದೆ.
ಗಾಳಿಯಿಂದೋಡುವ ಕಾರುaircar
    ನ್ಯೂಯಾರ್ಕಿನ ಕಂಪೆನಿ ಜೀರೋ ಪೊಲೂಷನ್ ಮೋಟಾರ್ ಸಂಕುಚಿತಗೊಳಿಸಲಾದ ಗಾಳಿಯಿಂದ ಓಡುವ ಪರಿಸರಪ್ರಿಯ ಕಾರನ್ನು ತಯಾರಿಸಲು ಹೊರಟಿದೆ.ಒತ್ತಡದಲ್ಲಿಟ್ಟ ಗಾಳಿಯನ್ನು ಹೊರಬಿಟ್ಟು ಟರ್ಬೈನ್ ತಿರುಗಿಸಿ,ಅದರ ಮೂಲಕ ಕಾರಿನ ಚಲನೆಯನ್ನು ಸಾಧಿಸುವ ತಂತ್ರ ಇದರಲ್ಲಿ ಬಳಕೆಯಾಗಿದೆ. ಗಂಟೆಗೆ ಮೂವತ್ತೈದು ಮೈಲು ವೇಗದಲ್ಲಿ ಓಡುವ ಸಾಮರ್ಥ್ಯ ಇದಕ್ಕಿದೆ ಎಂದು ಕಂಪೆನಿಯ ಮೂಲಗಳು ಹೇಳುತ್ತವೆ. ಆದರೆ, ಇದಕ್ಕೆ ಬೇಕಾದ ಪ್ರತಿ ಅಂಗುಲಕ್ಕೆ ನಾಲ್ಕೂವರೆ ಸಾವಿರ ಪೌಂಡು ಒತ್ತಡದ ಗಾಳಿಯನ್ನು ಪಡೆಯಲು ಬಳಸಬೇಕಾದ ಶಕ್ತಿಯನ್ನು ಗಣನೆಗೆ ತೆಗೆದುಕೊಂಡರೆ, ಈ ಕಾರು ದುಬಾರಿಯಾಗುತ್ತದೆ.ಅಲ್ಲದೆ ಅದನ್ನು ಮಾಲಿನ್ಯ ರಹಿತ ಕಾರು ಎಂದು ಕರೆಯುವುದೂ ತಪ್ಪಾದೀತು. ಕಾರಿನ ವೇಗ ಹೆಚ್ಚಿಸಲು,ಪೆಟ್ರೋಲಿನಂತಹ ಇಂಧನವನ್ನು ಹೆಚ್ಚುವರಿಯಾಗಿ ಬಳಸಬೇಕು. ಆ ಇಂಧನದಿಂದ ಗಾಳಿಯನ್ನು ಬಿಸಿ ಮಾಡಬೇಕು.ಹೀಗೆ ಬಿಸಿ ಮಾಡಿದ ಗಾಳಿಯ ಗಾತ್ರ ಹೆಚ್ಚುವುದರಿಂದ ಅದು ಹೆಚ್ಚಿನ ಒತ್ತಡ ಉಂಟು ಮಾಡುತ್ತದೆ.ಕಾರಿನ ವೇಗ ಹೆಚ್ಚುತ್ತದೆ.ಸದ್ಯ ಕಾರಿನ ಮಾದರಿ ಮಾತ್ರಾ ಲಭ್ಯವಿದ್ದು,ಅತ್ಯಂತ ಹಗುರವಾಗುವಂತೆ ವಿನ್ಯಾಸ ಮಾಡಲಾಗಿದೆ.ಭಾರತದ ಟಾಟಾ ಮೋಟರ್ಸ್ ಕಂಪೆನಿಯೂ ಈ ಕಾರಿನಲ್ಲಿ ಆಸಕ್ತಿ ತೋರಿಸಿದೆ. ಅದರೆ, ಅದರ ತಯಾರಿಗೆ ಯಾವ ಸಮಯ ಸೀಮೆಯನ್ನೂ ನಿಗದಿ ಪಡಿಸಿಲ್ಲವಂತೆ.ಕಾರು ಏಳೆಂಟು ಲಕ್ಷ ರುಪಾಯಿಯಷ್ಟು ದುಬಾರಿಯಾದರೆ ಅಚ್ಚರಿಯಿಲ್ಲ.
ಗೂಗಲ್ ಇನ್ಸೈಟ್:ವ್ಯವಹಾರಸ್ಥರಿಗೆ ನೆರವಾಗುವ ಶೋಧ ಸೇವೆ insight
    ವ್ಯವಹಾರಸ್ಥರಿಗಾಗಿಯೇ ಇರುವ ಶೋಧ ಸೇವೆ ಇನ್ಸೈಟ್ ಅನ್ನು ಗೂಗಲ್ ಇದೀಗ ಒದಗಿಸುತ್ತಿದೆ. ಮೊದಲು ಈ ಸೇವೆಯು ಗೂಗಲ್ ಟ್ರೆಂಡ್ಸ್ ಎಂದು ಲಭ್ಯವಿತ್ತಾದರೂ, ಈಗಿನದು ಸುಧಾರಿತ ಸೇವೆಯಾಗಿದೆ.http://google.com/insights/search/#ನಲ್ಲಿ ಇದರ ಅಂತರ್ಜಾಲ ಪುಟ ಲಭ್ಯವಿದೆ.ಶೋಧ ಅಂಕಣದಲ್ಲಿ "ಉದಯವಾಣಿ" ಎಂದು ನೀಡಿದಾಗ, 2004ರಿಂದ ಈ ತನಕ ಈ ಶಬ್ದವನ್ನು ಶೋಧಿಸಿದವರ ಸಂಖ್ಯೆಯಲ್ಲಿ ಎಷ್ಟು ಏರಿಳಿತವಾಗಿದೆ ಎನ್ನುವ ವಿವರ ನೀಡುವ ನಕ್ಷೆ ಸಿಗುತ್ತದೆ.ಇತ್ತೀಚಿನ ಅವಧಿಯಲ್ಲಿ ಈ ಸಂಖ್ಯೆಯಲ್ಲಿ ವೃದ್ಧಿಯಾಗಿರುವುದನ್ನು ನಕ್ಷೆ ತೋರಿಸುತ್ತದೆ. ಶಬ್ದವನ್ನು ಜಗತ್ತಿನ ಬೇರೆ ಬೇರೆ ಪ್ರದೇಶಗಳಲ್ಲಿ ಅರಸಿದವರ ಬಗ್ಗೆಯೂ ಮಾಹಿತಿ ಸಿಕ್ಕುತ್ತದೆ.ಇಲ್ಲಿ ಸಿಗುವ ಮಾಹಿತಿಯಿಂದ ಸೌದಿಯಲ್ಲಿ ಉದಯವಾಣಿ ಶಬ್ದವನ್ನು ಅರಸಿದವರ ಸಂಖ್ಯೆ ಹೆಚ್ಚಿರುವುದು ತಿಳಿದು ಬರುತ್ತದೆ.ಭಾರತದಲ್ಲಿ ಈ ಪದವು ಯಾವ ರಾಜ್ಯದಲ್ಲಿ ಎಷ್ಟು ಕುತೂಹಲ ಕೆರಳಿಸಿದೆ ಎನ್ನುವ ಮಾಹಿತಿಯೂ ಇಲ್ಲಿ ಲಭ್ಯ.ಅದರ ಪ್ರಕಾರ ಕರ್ನಾಟಕವನ್ನು ಬಿಟ್ಟರೆ,ದೆಹಲಿ,ತಮಿಳ್ನಾಡು ಮತ್ತು ಮಹಾರಾಷ್ಟ್ರದಲ್ಲಿ ಈ ಪದವನ್ನು ಶೋಧಿಸಿದವರ ಸಂಖ್ಯೆ ಹೆಚ್ಚು.ಉದಯವಾಣಿ ಪತ್ರಿಗೆಗಾಗಿ ಹುಡುಕಿದವರು ಬಳಸಿದ ಪದಗುಚ್ಛಗಳನ್ನೂ ಅದು ನೀಡುತ್ತದೆ.ನಕ್ಷೆಯಲ್ಲದೆ ಅಂಕೆ-ಸಂಖ್ಯೆ ಬೇಕಿದ್ದರೆ ಅದೂ ಸಿಗುತ್ತದೆ.
    ಇಂತಹ ಸೇವೆಯಿಂದ ವ್ಯವಹಾರಸ್ಥರು ಲಾಭ ಪಡೆಯುವುದು ಸಾಧ್ಯವಲ್ಲವೇ?ಮಾರ್ಕೆಟಿಂಗ್ ಮಾಡುವವರಿಗೆ ಇಂತಹ ವಿವರಗಳು ಸಹಕಾರಿಯಾಗುತ್ತವಷ್ಟೇ?ಉದಾಹರಣೆಗೆ ಕಾರಿನ ಕಂಪೆನಿಯೊಂದು ಎರಡು ವಿಧದ ಜಾಹೀರಾತನ್ನು,ಬೇರೆ ಬೇರೆ ಪ್ರಾದೇಶಿಕ ಟಿವಿ ಚಾನೆಲ್‍ಗಳಲ್ಲಿ ಪ್ರದರ್ಶಿಸಿದರೆ, ಯಾವ ಜಾಹೀರಾತು ಹೆಚ್ಚು ಪ್ರಭಾವ ಬೀರಿತು ಎನುವುದನ್ನು ತಿಳಿದುಕೊಳ್ಳಬಹುದು. ಆಪಲ್ ಶಬ್ದವನ್ನು ಶೋಧಿಸಿದವರ ಪೈಕಿ ಎಷ್ಟು ಜನ ಆಪಲ್ ಹಣ್ಣಿಗಾಗಿ ಶೋಧಿಸಿದರು ಮತ್ತು ಎಷ್ಟು ಮಂದಿ ಆಪಲ್ ಕಂಪ್ಯೂಟರಿಗೆ ಶೋಧಿಸಿದರು ಎಂಬುದನ್ನು ಕಂಡುಕೊಳ್ಳಬಹುದು.ಅಂದ ಹಾಗೆ ಸದ್ಯಕ್ಕಂತೂ ಈ ಸೇವೆ ಉಚಿತವಾಗಿ ಲಭ್ಯವಿದೆ.ಜನರು ಗೂಗಲ್ ತಾಣದಲ್ಲಿ ನಡೆಸುವ ಹುಡುಕಾಟದ ನೆರವಿನಿಂದ ಈ ವಿವರಗಳನ್ನು ಕಲೆ ಹಾಕುವುದರಿಂದ ಈ ಮಾಹಿತಿಗಳು ನಿಖರವಾಗಿರುತ್ತವೆ. ಆದರೆ ಎಷ್ಟು ಸಂಖ್ಯೆಯಲ್ಲಿ ಹುಡುಕಾಟ ನಡೆಯಿತು ಎಂಬ ವಿವರದ ಬದಲು ಅದನ್ನು ಪ್ರಮಾಣವಾರು ಅಂಕೆ-ಸಂಖ್ಯೆಯಾಗಿ ನೀಡಿ ಖಾಸಗಿತನಕ್ಕೆ ಭಂಗ ಬರದಂತೆ ಗೂಗಲ್ ಮುನ್ನೆಚರಿಕೆ ವಹಿಸಿದೆ.
ಒಲಿಂಪಿಕ್ಸ್ ವೇಳಾಪಟ್ಟಿ ಬೇಕೇ?
    ಬೀಜಿಂಗ್ ಒಲಿಂಪಿಕ್ಸ್ ಅದ್ದೂರಿ ಆರಂಭ ಕಂಡಿದೆ. ಮುಂದಿನ ಎರಡು ವಾರ ಜಗದ ದೃಷ್ಟಿ ಬೀಜಿಂಗಿನತ್ತಲೇ ನೆಟ್ಟಿರುತ್ತದೆ. ಒಲಿಂಪಿಕ್ಸ್ ವೇಳಾ ಪಟ್ಟಿಯು ಅಂತರ್ಜಾಲದಲ್ಲಿ ಲಭ್ಯವಿದೆ. ಯಾವುದೇ ಒಂದು ವಿಭಾಗದ ವೇಳಾಪಟ್ಟಿ ನಿಮಗೆ ಬೇಕಿದ್ದರೆ ಹುಡುಕುವುದು ಸುಲಭ.ನಿಮಗೆ ಹಾಕಿ ಪಂದ್ಯಾಟಗಳ ವಿವರ ಬೇಕಿದ್ದರೆ, olympics hockey ಎಂದು ಗೂಗಲ್ ಅಂತರ್ಜಾಲ ತಾಣದ ಶೋಧ ಕಣದಲ್ಲಿ ಬರೆದು ಶೋಧಿಸಿ.ಮೊಬೈಲ್ ಮೂಲಕವೂ ಈ ಶೋಧ ಸಾಧ್ಯ.
ಚಿತ್ರದ ಯಶಸ್ಸಿಗೆ ಅಂತರ್ಜಾಲ ಸಹಕಾರಿ
    ಅಂತರ್ಜಾಲವನ್ನು ಯುವಕರು ಹೆಚ್ಚು ಹೆಚ್ಚು ಬಳಸುತ್ತಿರುವುದರಿಂದ,ಅಂತರ್ಜಾಲದ ಮುಖಾಂತರ ಯುವಜನರನ್ನು ತಲುಪುವ ಪ್ರಯತ್ನವನ್ನು ಚಲನಚಿತ್ರೋದ್ಯಮದವರೂ ಮಾಡುತ್ತಿದ್ದಾರೆ.ಮಿಲನ,ಗಾಳಿಪಟ,ಅಂತೂ ಇಂತೂ ಪ್ರೀತಿ ಬಂತು ಮುಂತಾದ ಚಿತ್ರಗಳ ಕ್ಲಿಪ್ಪಿಂಗ್‍ಗಳು ಯುಟ್ಯೂಬ್ ತಾಣದ ಮೂಲಕ ಅಧಿಕೃತವಾಗಿಯೇ ಲಭ್ಯವಿದ್ದುವು.ಇವುಗಳನ್ನು ಒಂದು ಲಕ್ಷಕ್ಕೂ ಅಧಿಕ ಸಲ ವೀಕ್ಷಿಸಲಾಗಿದೆ. ಇವುಗಳ ಹಾಡುಗಳು ಜನಪ್ರಿಯವಾದದ್ದರಲ್ಲಿ ಅಂತರ್ಜಾಲದ ತಾಣವೂ ಇದೆಯೆಂದು ಉದ್ಯಮದವರ ಅಭಿಪ್ರಾಯ.
*ಅಶೋಕ್‌ಕುಮಾರ್ ಎ

(ಇ-ಲೋಕ-87)(11/8/2008) 

ashokworld

udayavani