ಆಮಿಷ ಮತ್ತು ಕುಕ್ಕರ ಹಳ್ಳಿ ಕೆರೆ

ಆಮಿಷ ಮತ್ತು ಕುಕ್ಕರ ಹಳ್ಳಿ ಕೆರೆ

೨೭.೧.೦೬:
ಆಮಿಷವೆಂದರೆ ಮಾಂಸವೆಂದು ಅರ್ಥವಂತೆ. ನನಗೆ ಗೊತ್ತೇ ಇರಲಿಲ್ಲ. ಗೆಳೆಯ ರಾಮು ಹೇಳಿದ್ದು ಅದನ್ನು. ಮಹಾಭಾರತದಲ್ಲಿ ಸೇನಾಪತಿಯಾದ ಭೀಷ್ಮನನ್ನು ಭೇಟಿಯಾಗಲು ಪಾಂಡವರು ಹೋದಾಗ ವ್ಯಾಸ “ಭೀಷ್ಮನು ಹದ್ದುಗಳ ನಡುವೆ ಎಸೆದ ಆಮಿಷವಾದ” ಎಂದು ವರ್ಣಿಸುತ್ತಾನಂತೆ. ಪಾಂಡವರಿಗೆ ಭೀಷ್ಮನ ಬಗ್ಗೆ ಪ್ರೀತಿ ಗೌರವಗಳಾಗಲೀ, ಕೌರವನಿಗೆ ಭಕ್ತಿಯಾಗಲೀ ಇರಲಿಲ್ಲ. ಅವರಿಬ್ಬರಿಗೂ ಬೇಕಾದದ್ದು ಅಧಿಕಾರ, ರಾಜ್ಯ. ಭೀಷ್ಮ ತಮ್ಮವನಾದರೆ ಸಾಕು ಎಂಬ ಹಪಾಹಪಿ. ಅದಕ್ಕೇ ಭೀಷ್ಮನನ್ನು ಹದ್ದುಗಳ ನಡುವೆ ಎಸೆದ ಮಾಂಸ ಅಥವ ಆಮಿಷಕ್ಕೆ ಹೋಲಿಸಿದ್ದಾನೆ ಎಂದು ಗೆಳೆಯ ರಾಮು ವಿವರಿಸಿದ.
ರಾಮು ಹೀಗೆ ವಿವರಿಸಿದಾಗ ನಾನು ಅದೇ ಆಗ ಕುಕ್ಕರಹಳ್ಳಿಯ ಸುತ್ತ ಒಂದು ಸುತ್ತು ಹಾಕಿಕೊಂಡು ಅವರ ಮನೆಗೆ ಹೋಗಿದ್ದೆ. ಟಿವಿಯಲ್ಲಿ ಧರಮಸಿಂಗ್ ಸರ್ಕಾರ ವಿಶ್ವಾಸಮತ ಯಾಚಿಸುವ ಸಂದರ್ಭದ ವಿವರಗಳು ಬರುತ್ತಿದ್ದವು. ಅಧಿಕಾರ ಎಂಬ ಮಾಂಸಕ್ಕೆ ಕಾದಿರುವ ಹದ್ದುಗಳು ಅನಿಸುತ್ತಾರೆ ಎರಡು ಪಾರ್ಟಿಯವರೂ ಅಂತ ರಾಮು ಹೇಳಿದ.


ಬೆಳಗಿನಿಂದ ಆಗಾಗ ಕರ್ತವ್ಯವೆಂಬಂತೆ ಟಿ ವಿ ನೋಡಿ ಸಾಕಾಗಿ ಐದು ಗಂಟೆಯ ವೇಳೆಗೆ ಮನೆಯವರೆಲ್ಲರನ್ನೂ ಕೂಡಿಸಿಕೊಂಡು ಕುಕ್ಕರಹಳ್ಳಿ ಕೆರೆಗೆ ವಾಕಿಂಗ್ ಹೋಗಿದ್ದೆ. ಅಲ್ಲಿ ರಾಜಕೀಯ ಹದ್ದುಗಳು ಅಧಿಕಾರದ ಮಾಂಸಕ್ಕೆ ಕಿತ್ತಾಡುತ್ತಿದ್ದಾಗ ಕುಕ್ಕರ ಹಳ್ಳಿ ಕೆರೆ ಹೇಗಿತ್ತು ಗೊತ್ತೆ? ಕ್ರಾಫರ್ಡ್ ಹಾಲಿನ ಹಿಂಭಾಗದ ಗೇಟಿನಿಂದ ಹೋದಾಗ ಇಳಿ ಬಿಸಿಲಲ್ಲಿ ಹೀಗೆ ಕಾಣಿಸಿತು.
ಚಿತ್ರ ೧

ಕುಕ್ಕರಹಳ್ಳಿ ಕೆರೆ ಪ್ರವೇಶ 
ನಡೆದಾಡಲು ಮಾಡಿರುವ ದಾರಿಯ ನೆಲದ ತುಂಬ ತರಗೆಲೆಗಳು. ಅಕ್ಕ ಪಕ್ಕ ಚಂದಕ್ಕೆಂದು ಬೆಳೆಸಿರುವ ಅಲಂಕಾರ ಗಿಡಗಳು. ಇದೇ ಕೆರೆಯ ಏರಿಯ ಪಕ್ಕ ಗದ್ದಿಗೆ ರಸ್ತೆ, ಅಥವಾ ಗಂಗೋತ್ರಿಗೆ ಹೋಗುವ ರಸ್ತೆ.  ಅಲ್ಲಿ ಮೂವತ್ತು ವರ್ಷದ ಹಿಂದೆ ಎರಡೂ ಬದಿ ದೊಡ್ಡ ದೊಡ್ಡ ಮರಗಳಿದ್ದವು. ಈಗ ರಸ್ತೆ ದೊಡ್ಡದಾಗಬೇಕೆಂದು ಒಂದು ಬದಿಯ ಮರಗಳನ್ನೆಲ್ಲ ಕಡಿದು ಹಾಕಿದ್ದೇವೆ. ನಡೆಯುವುದಕ್ಕೆ ಕಾಲು ಹಾದಿ ಸಾಕು. ಗಿಡ ಮರಗಳ ಗೆಳೆತನ ಬೇಕು, ನೆರಳು ಬೇಕು. ಕಾರು ಬಸ್ಸುಗಳಿಗೆ ಮರಗಳು ಅಡ್ಡಿ, ನೆರಳೂ ಬೇಡ, ವೇಗಕ್ಕೆ ಅಡೆತಡೆ ಇಲ್ಲದ ರಸ್ತೆ ಬೇಕು. ನಿಧಾನ ಸಾಗುವುದರ ಸುಖ ಕಳೆದುಕೊಂಡು ಬೇಗ ತಲುಪಲು ಕಾಲು ಹಾದಿ ಉಪಯೋಗವಿಲ್ಲ. ಬೇಗ ಯಾಕೆ ತಲುಪಬೇಕು? ಟೈಂ ಸೇವ್ ಮಾಡುವುದಕ್ಕೆ? ಬೇಗ ಬೇಗ ತಲುಪಿ ಸೇವ್ ಮಾಡಿದ ಟೈಮನೆಲ್ಲ ಎಲ್ಲಿ ಕೂಡಿಹಾಕಿದ್ದೇವೆ? ಎಷ್ಟು ಟೈಂ ಬಡ್ಡಿಯಂತೆ ನಮಗೆ ದೊರೆತಿದೆ ಹೇಳಿ? ಟೈಂ ಸೇವ್ ಅನ್ನುವುದು ಅತ್ಯಂತ ಪೆದ್ದುಪೆದ್ದಾದ, ಅರ್ಥ ಹೀನ ಕಲ್ಪನೆ. ಅಲ್ಲಿ ಟಿವಿಯಲ್ಲಿ ಕಾಣುತ್ತಿದ್ದ ಶಾಸಕರಿಗೂ ಬೇಗ ಅಧಿಕಾರ ಹಿಡಿಯಬೇಕೆಂಬ ಹಪಾಹಪಿ. ಬೇಗ, ಬೇಗ, ಇನ್ನೂ ಬೇಗ...ಎಲ್ಲಿಗೆ? ಯಾಕೆ? ನಡೆಯುವುದು ನಿಧಾನವಾದಷ್ಟೂ ಮನಸ್ಸಿಗೆ ಶಾಂತಿದೊರೆತೀತಲ್ಲವೆ? ಸಾವಧಾನ, ಸಾವಧಾನ.
ಚಿತ್ರ ೨

ಕುಕ್ಕರಹಳ್ಳಿ ಕೆರೆ ಮತ್ತು ಮರ

ತಪ್ಪು ತಪ್ಪು. ಸಾವಧಾನ ಯಾವಾಗಲೂ ಒಳ್ಳೆಯದಲ್ಲ. ಇಗೋ ಈ ಚಿತ್ರ ನೋಡಿ. ಕೆರೆಯನ್ನು ಕಾಪಾಡಿಕೊಳ್ಳುವುದರಲ್ಲಿ ನಿರ್ಲಕ್ಷ್ಯವೆನಿಸುವಷ್ಟು ಸಾವಧಾನ ನಾವು ತೋರಿರುವುದರಿಂದ ಅಂಚಿನಿಂದ ಹುಲ್ಲು, ಹಾವಸೆ ಬೆಳೆದು ಕೆರೆ ಕುಗ್ಗುತ್ತಲಿಲ್ಲವೇ? ಚಿತ್ರದಲ್ಲಿ ಚಂದವೆಂಬಂತೆ ಕಂಡರೂ ಕೆರೆ ಸಾಯುತ್ತಿದೆ ಅನ್ನಿಸುತ್ತದಲ್ಲ! ನಮ್ಮ ಕೊಡಲಿಗೆ ಸಿಕ್ಕುವ ಮರದಷ್ಟೇ ನಾವು ಅಸಹಾಯಕರೋ, ನಾಶ ಅನಿವಾರ್ಯವೋ...
ಚಿತ್ರ ೩

ಕುಕ್ಕರಹಳ್ಳಿ ಕೆರೆ, ಬಂಗಾರದ ಬೆಳಕು

ನಾಶ ಎಂಬ ಮಾತಿಗೆ ನಿಸರ್ಗದಲ್ಲಿ ಅರ್ಥವಿಲ್ಲವೋ..ಇದೋ ಈ ಸೂರ್ಯ ಇವತ್ತು ಮುಳುಗುವಾಗ ಇಂಥ ಬಂಗಾರ ಬೆಳಕು ಚೆಲ್ಲಿದ್ದಾನೆ. ಇಷ್ಟಿಷ್ಟೆ ಬೀಸುವ ಗಾಳಿಗೆ ನೀರು ಇಷ್ಟಿಷ್ಟೆ ಅಲುಗುತ್ತಿದೆ. ಇಗೋ ಈ ಒಂಟಿ ಹಕ್ಕಿ ಗೂಡಿಗೆ ಹೋಗುತ್ತಿದೆ. ಒಂದೆರಡೇ ಕ್ಷಣ. ಈ ಬಂಗಾರ ಬೆಳಕು ಇರುವುದಿಲ್ಲ, ಈ ಹಕ್ಕಿ ಇರುವುದಿಲ್ಲ. ಆದರೂ ಇವೆಲ್ಲ ಮನಸ್ಸಿಗೆ ತಂದುಕೊಡುವ ಶಾಂತಿ ಇದೆಯಲ್ಲ ಅದು ಸ್ವಲ್ಪ ಹೊತ್ತು ಇರುತ್ತದೆ, ಮತ್ತೆ ಅವೇ ಜಂಜಡಗಳು ಮುತ್ತಿಕೊಳ್ಳುತ್ತವೆ. ಯಾಕೋ! ಹಾ, ಇಲ್ಲಿರುವ ಯಾವುದಕ್ಕೂ ಅಹಂಕಾರವಿಲ್ಲ. ಸುಮ್ಮನೆ ಇವೆ. ಬೆಳಕಿಗೆ ಬಂಗಾರ ಬೆಳಕು ಎಂದು ಕರೆದಾಗ ನಮ್ಮ ಮಾತಿನ ವರಸೆ ಅಷ್ಟೇ ಅಲ್ಲ ಅದು. ಬಂಗಾರದ ಬೆಲೆ, ಅದರ ಬಣ್ಣ, ಚೆಲುವು ಎಂಬ ಕಲ್ಪನೆ ಏನೆಲ್ಲ ಸೇರಿದೆ. ಮರ, ನೀರು, ಬೆಳಕು, ಆಕಾಶ ಇವೆಲ್ಲ ಸುಮ್ಮನೆ ಇವೆ. ನಾವು ಹೇಗೆ ವರ್ಣಿಸಿದರೂ, ಹೇಗೆ ಅರ್ಥ ಮಾಡಿಕೊಂಡರೂ ಅವು “ಏನೂ” ಅಗದೆ ಸುಮ್ಮನೆ “ಇವೆ.” ಅವು ಹೀಗೆ ಹೀಗೆ ಎಂದು ನಾವು ಅರ್ಥಕೊಟ್ಟು ಸುಖವನ್ನೋ ಅಸುಖವನ್ನೋ ಪಡೆದುಕೊಳ್ಳುತ್ತೇವೆ. ಕುವೆಂಪು, ಇದೇ ಕೆರೆಯ ಏರಿಯ ಮೇಲೆ ವಾಕ್ ಬರುತ್ತಿದ್ದ ಕವಿ ಹೇಳುತ್ತಾರಲ್ಲ-“ಅರಿವಾಸೆಯೆ ಮಾಯಾಬಂಧ, ಇರುವುದೆ ಮುಕ್ತಿಯ ಆನಂದ/ ಅರಿವಾಸೆಯ ಬಿಡು, ಇರುವಾಸೆಯ ತೊಡು” ಅಂತ. ಇರುವುದು ಅಂದರೆ ಅರ್ಥದ ಹಂಗಿಲ್ಲದೆ ಮರದ ಹಾಗೆ, ಬೆಳಕಿನ ಹಾಗೆ, ನೀರಿನ ಹಾಗೆ, ಆಕಾಶದ ಹಾಗೆ ಸುಮ್ಮನೆ ಇರುವುದು. ನಿರಾಳವಾಗಿ ಇರುವುದು. ಇಲ್ಲ. ನಾವು ಮನುಷ್ಯರಾದ್ದರಿಂದ ಅರ್ಥವಿರದ ಸ್ಥಿತಿ ಹೆದರಿಕೆ ಎಂದು ಏನೇನೋ ಕಟ್ಟಿಕೊಳ್ಳುತ್ತೇವೆ.

ಕುಕ್ಕರಹಳ್ಳಿಯಲ್ಲಿ ಸಮೀಪಿಸುತ್ತಿರುವ ಸೂರ್ಯಾಸ್ತ

ಕುಕ್ಕರ ಹಳ್ಳಿಯ ಕೆರೆಯ ಸುತ್ತ ಓಡಾಡುವಾಗ ನಾನೇನೂ ಪಕ್ಷಿ ವೀಕ್ಷಕ ಅಲ್ಲದಿದ್ದರೂ ಸುಮಾರು ಹತ್ತು ಹನ್ನೆರಡು ಬಗೆಯ ಪಕ್ಷಿಗಳು ಕಂಡವು, ಕೇಳಿಸಿದವು. ದೇವರ ರುಜುವಿನಂತೆ ಇಲ್ಲೂ ಹಕ್ಕಿ ಸಾಲು ವಕ್ರ ಛಂದದಲ್ಲಿ ಹಾರುತ್ತವೆ. ಅಗೋ ಆ ನಡುಗಡ್ಡೆಯ ಹತ್ತಿರ ಹೋದರೆ ಆ ದೊಡ್ಡ ಹಕ್ಕಿ ರೆಕ್ಕೆ ಬಡಿಯುವ ಫಡ ಫಡ ಶಬ್ದ ಇನ್ನೂರು ಅಡಿ ದೂರದಿಂದ ಕೇಳುತ್ತದೆ. ಕೊಕ್ಕಿನಲ್ಲಿ ಕಡ್ಡಿ ಹೊತ್ತು ಬರುವ ಹಕ್ಕಿ, ಬೇಗ ಹೋಗಲಾರದೆ ಆಯಾಸದಿಂದ ಜೋರಾಗಿ ರೆಕ್ಕೆ ಬಡಿಯಲು ಪ್ರಯತ್ನಿಸುವ ಹಕ್ಕಿ, ನಾಲ್ಕಾರು ಬಾರಿ ರೆಕ್ಕೆ ಬಡಿದು, ಕೊಂಚ ಸುಮ್ಮನಾಗಿ, ರೆಕ್ಕೆ ಮಡಿಸಿಕೊಂಡು, ಕೊಂಚ ಕೆಳಕ್ಕಿಳಿದು, ಮತ್ತೆ ರೆಕ್ಕೆ ಬಡಿಯುತ್ತ, ಮೇಲೆ ಏರಿ ಮುಂದೆ ಸಾಗುವ ಹಕ್ಕಿ, ಎರಡೂ ರೆಕ್ಕೆ ಅಗಲ ಹರಡಿಕೊಂಡು ಕತ್ತೆತ್ತಿ, ಸುತ್ತಲೂ ಕೊರಳು ತಿರುಗಿಸಿ ನೋಡುತ್ತ ನಿಂತ ಹಕ್ಕಿ, ಒಣ ಮರದಲ್ಲಿ ಗುಂಪು ಗುಂಪಾಗಿ ಕೂತ ಕೊಂಚ ಬಿಳಿ ಬೆರೆತ ರೆಕ್ಕೆಯ ಪುಟ್ಟ ಕಪ್ಪು ಹಕ್ಕಿ ಹಿಂಡು... ಬೆಂಗಳೂರಲ್ಲಿ ಸಂಜೆ ಮನೆಗೆ ಮರಳುವ  ಸ್ಕೂಟರು, ಕಾರು, ಬಸ್ಸುಗಳ ಜನ, ಕಾದು ನಿಂತ ಜನ, ದುಗುಡ, ಕಳವಳ ಹೊತ್ತ ಜನ ಇವರನ್ನೆಲ್ಲ ನೋಡಿದಾಗ ಆಗುವುದಕ್ಕಿಂತ ಗೂಡಿಗೆ ಹಕ್ಕಿಗಳು ಮರಳುವುದನ್ನು ನೋಡಿದಾಗ ಖುಷಿಯಾಗುತ್ತದೆ.

 

ಕುಕ್ಕರಹಳ್ಳಿ ಕೆರೆ ಸೂರ್ಯಾಸ್ತ ಆಗಲಿದೆ
ಕುಕ್ಕರಹಳ್ಳಿ ಕೆರೆ,ಹೆಚ್ಚುತ್ತಿರುವ ಕತ್ತಲು

 

ಕತ್ತಲಾಗುತ್ತಿತ್ತು. ನಾಲ್ಕು ಕಿಲೋಮೀಟರ್ ಸುತ್ತಳತೆಯ ಕೆರೆಯ ಇನ್ನೊಂದು ಬದಿಯಲ್ಲಿದ್ದೆ. ದೂರದಲ್ಲಿ ಎಲ್ಲೋ ವಾಹನಗಳ ಮೊರೆತ, ಸಮುದ್ರದದ ಮೊರೆತ ದೂರದಿಂದ ಕೇಳಿದಂತೆ. ಕ್ರಮೇಣ ಎಲ್ಲ ಕಪ್ಪಾಗುತ್ತಿತ್ತು. ನೀರು, ನೆಲ, ಹಕ್ಕಿ, ಮರ, ಎಲ್ಲ ಚಹರೆ ಕಳೆದುಕೊಂಡು ಒಂದಾಗುತ್ತಿದ್ದವು. ಬೆಳಕನ್ನು ಜ್ಞಾನವೆಂದವರು ಯಾರೋ! ಐಕ್ಯಕ್ಕೆ ಕತ್ತಲೆಯೇ ಬೇಕು, ಅಲ್ಲವೆ? ಹಕ್ಕಿಗಳ ಸದ್ದು ಅಡಗುತ್ತಿತ್ತು. ಅಲ್ಲೊಂದು ಹೂವು ನೋಡಿದೆ.

 

 

 

 

ಕುಕ್ಕರಹಳ್ಳಿ ಕೆರೆ ಹೂವು

ಪ್ರೈಮರಿ ಸ್ಕೂಲಿನ ಹೆಣ್ಣು ಮಗು ಬಿಳಿಯ ನಿರಿಗೆ ಲಂಗ ತೊಟ್ಟು ಗರ್ರನೆ ತಿರುಗಿ ಕೂತಾಗ ಉಬ್ಬಿ ಬಲೂನಿನಂತೆ ಮಗುವಿನ ಸುತ್ತಲೂ ಪ್ರಭಾವಳಿಯಾಗಿ ಕೂರುವ ಬಟ್ಟೆಯ ನೆನಪು ಬಂತು, ಅಂಥ ಮಗು ಈ ಹೂವು ಅನಿಸಿತು. ಅದರ ಹೆಸರೇನೋ ಯಾರಿಗೆ ಗೊತ್ತು? ಹೆಸರಿಟ್ಟು ತಿಳಿಯುವುದಕ್ಕಿಂತ ಸುಮ್ಮನೆ ನೋಡಿದೆ. ಅಲ್ಲ, ಈ ಎಲ್ಲ ಏನೂ ಆಗದೆ ಸುಮ್ಮನೆ ತಾವಿರುವಂತೆ ಇವೆಯಲ್ಲ, ಏನೋ ಆಗುವ ಆಸೆಯಿಂದ ಬದುಕನ್ನು ಎಷ್ಟು ಜಟಿಲ ಮಾಡಿಕೊಂಡಿದ್ದೇವೆ! ವಿಶ್ವಾಸಮತವಂತೆ, ಅಧಿಕಾರದ ಮಾಂಸವಂತೆ, ಕಡಮೆ ಬಡ್ಡಿಯ ಸಾಲವಂತೆ, ಹೆಸರಂತೆ, ಕೀರ್ತಿಯಂತೆ, ಸಾಧನೆಯಂತೆ...ಎಲ್ಲ ಕಟ್ಟಿಕೊಂಡ ಅರ್ಥಗಳು ದಟ್ಟವಾಗುತ್ತಿರುವ ಕತ್ತಲೆಯಲ್ಲಿ ಅರ್ಥಹೀನ. ಕತ್ತಲಾಗುತ್ತಿದ್ದಂತೆ ಹಕ್ಕಿಗಳ ಸದ್ದಿಲ್ಲ. ಕತ್ತಲಾದ ಕೂಡಲೆ ಸುಮ್ಮನಾಗುತ್ತವೆ ಹಕ್ಕಿಗಳು. ನಾವೋ ಬೆಳಕನ್ನು ನಡುರಾತ್ರಿಯವರೆಗೆ, ಅಲ್ಲ ಇಡೀ ರಾತ್ರಿ ವಿಸ್ತರಿಸಿಕೊಂಡಿದ್ದೇವೆ. ಬೆಳಕಾದಾಗ ಏಳುವುದು, ಕತ್ತಲಾದಾಗ ಮಲಗುವುದು ಈ ನಿಸರ್ಗ ಚಕ್ರ ನಮಗೆ ಅಪರಿಚಿತ. ನಮ್ಮ ನಮ್ಮ ಅಹಂಕಾರದ ಪ್ರತ್ಯೇಕತೆಯನ್ನು ಸ್ಥಾಪಿಸುವ ಬೆಳಕು ನಮಗೆ ಎಲ್ಲವನ್ನೂ ಕಳೆಯುವ ಕತ್ತಲಿಗಿಂತ ಪ್ರಿಯವಲ್ಲವೇ?
ಕೊನೆಗೆ ಇದೆಲ್ಲ ಸುಳ್ಳು. ಚಿತ್ರಗಳು ನಮಗೆ ಬೇಕಾದ್ದನ್ನು ಮಾತ್ರ ಆಯ್ದುಕೊಳ್ಳುವ ಕಳ್ಳ ದಾರಿಗಳು. ಇಡೀ ಕೆರೆಯ ಕೊಳಕು ನೀರು, ವಾಸನೆ, ಇವು ಯಾವುದೂ ಚಿತ್ರದಲ್ಲಿ ಬಂದಿಲ್ಲ. ಬೇಕಾದ್ದನ್ನು ಮಾತ್ರ ಒಂದಿಷ್ಟು ಕತ್ತರಿಸಿ ಇಟ್ಟುಕೊಳ್ಳುವ ನಮ್ಮ ಸ್ವಭಾವವೇ ಇಡಿಯಾಗಿ ನೋಡಲು ಅಡ್ಡಿಯಾಗಿದೆಯೋ ಏನೋ! ಮನೆಗೆ ಬಂದಾಗ ವಿಶ್ವಾಸ ಮತ ನಡೆಯದೆ ನಾಟಕ ಇನ್ನೂ ಒಂದು ತಿರುವಿಗೆ ಸಿದ್ಧವಾಗಿತ್ತು. ಸುಮ್ಮನೆ ಸುತ್ತುವುದು, ನೋಡುವುದು, ನೋಡಿದ್ದನ್ನು ಬರೆಯುವುದು ನಮ್ಮಂಥವರ ಮನಸ್ಸಿಗೆ ಒಡ್ಡಿದ ಆಮಿಷಗಳೋ!

Rating
No votes yet

Comments