ಶಾಲ್ಮಲೆಯ ತಟದ ಗುಪ್ತಗೆರೆಯ ಜಾಡು ಹಿಡಿದು..

ಶಾಲ್ಮಲೆಯ ತಟದ ಗುಪ್ತಗೆರೆಯ ಜಾಡು ಹಿಡಿದು..

ಬರಹ

‘ಅರಿವೆ ಗುರು’ ಧ್ಯೇಯೋಕ್ತಿ; ನನ್ನ ಅನ್ನ ಗೆಲ್ಲಲು ಯಶಸ್ವಿಯಾಗಿಸಿದ ಮಹಾನ್ ವಿಶ್ವವಿದ್ಯಾಲಯ ಕರ್ನಾಟಕ ವಿಶ್ವವಿದ್ಯಾಲಯ. ಈ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಸುರಿದ ಮಳೆ ನೀರು ಎರಡು ಧಾರೆಯಾಗಿ ಒಂದು ಅರಬ್ಬೀ ಸಮುದ್ರಕ್ಕೂ ಮತ್ತೊಂದು ಬಂಗಾಳ ಕೊಲ್ಲಿಗೂ ಸೇರುತ್ತದೆ!

ಹೇಗೆ ಸಾಧ್ಯ? ಶಾಲ್ಮಲೆ ಕಲಘಟಗಿ ರಸ್ತೆಯ ಶ್ರೀಕ್ಷೇತ್ರ ಸೋಮೇಶ್ವರನ ಅಡಿಯಲ್ಲಿ ಹುಟ್ಟಿ ಈ ಕ್ಯಾಂಪಸ್ಸಿನಲ್ಲಿ ಗುಪ್ತಗಾಮಿನಿಯಾಗಿ ಹರಿದಿದ್ದು ಗೊತ್ತು. ಹಾಗಾಗಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ನಿರತ ವಿದ್ಯಾರ್ಥಿಗಳ ವಸತಿ ಗೃಹಕ್ಕೆ ‘ಶಾಲ್ಮಲಾ ಹಾಸ್ಟೆಲ್’ ಎಂದು ಸಹ ನಾಮಕರಣ ಮಾಡಲಾಗಿದೆ. ೭ ಗುಡ್ಡಗಳು ಹಾಗು ೭ ಕೆರೆಗಳ ಮಧ್ಯೆ ಭವ್ಯವಾಗಿ ಕಂಗೊಳಿಸುವ ವಿಶ್ವವಿದ್ಯಾಲಯ ಪ್ರಕೃತಿ ಸೌಂದರ್ಯದ ಖಣಿ. ಎಲ್ಲರಿಗೂ ಗೊತ್ತಿರುವ ವಿಚಾರವೇ?

ಆದರೆ ವಿಶ್ವವಿದ್ಯಾಲಯದ ಹಿಂದಿನ ಕೊಳ್ಳದಲ್ಲಿ-ಗುಡ್ಡದ ಮೇಲೆ ಹತ್ತಿ-ಇಳಿದು ಈ ಗುಪ್ತ ‘ಜಲವಿಭಜಕ ರೇಖೆ’ ಗುರುತಿಸಿ, ಲೇಖನ ಬರೆಯುವ ಕೆಲಸಕ್ಕೆ ಹಚ್ಚಿದವರು ನಾಡಿನ ಖ್ಯಾತ ಅಭ್ಯುದಯ ಪತ್ರಕರ್ತ ಶ್ರೀ ನಾಗೇಶ್ ಹೆಗಡೆ ಅವರು(ಆಗ ಕರ್ನಾಟಕ ದರ್ಶನದ ಸಂಪಾದಕರು). ಗೆಳೆಯ ಶ್ರೀ ಗಿರೀಶ್ ದೊಡ್ಡಮನಿ (ಈಗ ಪ್ರಜಾವಾಣಿಯಲ್ಲಿ ಕ್ರೀಡಾ ವರದಿಗಾರ) ಆಗ ಬೆಂಗಳೂರಿನಲ್ಲಿ ಪ್ರಾಯೋಗಿಕ ಕಲಿಕೆಗೆ ಎಂದು ಪ್ರಜಾವಾಣಿಗೆ ಪ್ರಶಿಕ್ಷಣಾರ್ಥಿಯಾಗಿ ಸೇರಿದ್ದರು. ನಾನು ಆಗ ಧಾರವಾಡದ ಆಕಾಶವಾಣಿಯಲ್ಲಿ ಪ್ರಶಿಕ್ಷಣಾರ್ಥಿ. ಗಿರೀಶ ತರಬೇತಿ ಮುಗಿಸಿ ಬಂದವನೆ ಆರ್ಕಿಮಿಡಿಸ್ ತರಹ ‘ಯುರೇಕಾ..ಯುರೇಕಾ’ ಎಂದು ವಾರಗಟ್ಟಲೇ ಈ ಕೆಲಸಕ್ಕೆ ನಮ್ಮನ್ನಿಳಿಸಿದ್ದ. ಗೆಳೆಯ (ಬ್ರ್ಯಾಂಡ್ ಮ್ಯಾನೇಜರ್) ಪ್ರವೀಣ್ ಶಿರಿಯಣ್ಣವರ್ ಹಾಗು (ವಿದ್ಯುನ್ಮಾನ ಮಾಧ್ಯಮದ ಉಪಸಂಪಾದಕ) ವೆಂಕಟೇಶಗೌಡ ಆರ್.ಎಸ್. ತಲೆ ಕೆಡಿಸಿಕೊಂಡು, ಕೂದಲು ಕೆದರಿಕೊಂಡು ಬೋಳಾಗುವ ಹಂತ ತಲುಪಿದ್ದೆವು!

ಗಿರೀಶನ ನಕಾಶೆ, ದಿಕ್ಸೂಚಿ, ವಿಶ್ಲೇಷಣೆ ಹಾಗು ಅವನಿಗೆ ಶ್ರೀ ನಾಗೇಶ ಹೆಗಡೆ ಅವರ ಸಕಾಲಿಕ ಮಾರ್ಗದರ್ಶನ, ಸಂಪನ್ಮೂಲ ವ್ಯಕ್ತಿಗಳ ಭೇಟಿ..ಮೇಲೆ ಈ ವಿಷಯ ಗುಪ್ತವಾಗಿಡುವ ‘ಪ್ರಾಮಿಸ್’ ಅಯ್ಯೋ..ನಾವೇ ಅದನ್ನೇ ಪೂರ್ಣಾವಧಿ ಉದ್ಯೋಗ ಮಾಡಿಕೊಂಡಿದ್ದೆವು. ನನ್ನ ತಂಗಿ ದಿವ್ಯಾಳನ್ನು ಛಾಯಾಚಿತ್ರಕ್ಕೆ ‘ಮಾಡೆಲ್’ ಮಾಡುವ ಮಿಲಿಯನ್ ಡಾಲರ್ ವಿಚಾರ ಹೊಳೆದಿದ್ದು ಸಹ ಗಿರೀಶನಿಗೆ. ಕೊನೆಗೆ ಆಕೆಯನ್ನು ಒಪ್ಪಿಸಿದವ ಅವನೇ!

ಅಂತೂ ಆ ‘ಡಿ ಡೇ’ ಬಂದೇ ಬಿಟ್ಟಿತ್ತು. ಆರು ಕೊಡ ನೀರು ಹೊತ್ತು, ಛಾಯಾಗ್ರಾಹಕ ಪ್ರಕಾಶ ಬಡಿಗೇರ್ ಮನವೊಲಿಸಿ ೪ ಕಿಲೊ ಮೀಟರ್ ನಡೆಸಿದ್ದಾಯಿತು. ನಮ್ಮ ಟೀಮ್ ಲೀಡರ್ ಗಿರೀಶ ಒಂದು ಗುಡ್ಡದ ತುದಿಗೆ ಹಾವು ನೋಡಿದವನಂತೆ ಏಕಾಏಕಿ ನಿಂತ. ‘ಇದ ನೋಡ್ರೀಪಾ ಆ ಜಾಗ’ ಅಂದ. ಕಿಸೆಯೊಳಗಿನ ನಕಾಶೆ ಬಿಡಿಸಿ, ಹರಡಿದ. ವಿಜ್ನಾನಿಯ ಹಾಗೆ ಮನವರಿಕೆ ಮಾಡಿಕೊಂಡ. ಕೈಗೆ ಸಿಕ್ಕ ಒಣಗಿದ ಹುಲ್ಲು ಖಡ್ಡಿ ಪೆನ್ಸಿಲ್ ಹಾಗೆ ಹಿಡಿದ. ನಾವು ನಿಂತಿದ್ದ ಜಾಗೆಯಲ್ಲಿ ಗೆರೆ ಎಳೆದ. ‘ಈ ಜಾಗಾದೊಳಗ ನೀರು ಹಾಕಿದರ ಎರಡು ಭಾಗ ಆಗಿ ಬೇರೆ ಬೇರೆ ದಿಕ್ಕಿನ್ಯಾಗ ಹರದು ಹೋಗ್ತಾವ. ಒಂದನ್ನೊಂದು ಎಂದಿಗೂ ಕೂಡುದಿಲ್ಲ’ ಅಂದ.

‘ಈ ಜಾಗಾದಾಗ ನೀರು ಹಾಕಿದ್ರ್ತಎರಡು ಭಾಗ ಆಗಿ, ಬೇರೆ ಬೇರೆ ದಿಕ್ಕಿನ್ಯಾಗ ಹರದ ಹೋಗ್ತಾವ?’ ಅಂತ ನಾನು ಕಾಲೆಳೆಯುವ ಪ್ರಯತ್ನ ಮಾಡಿದೆ. ಥಟ್ ಅಂತ ಪ್ರವೀಣ್ ನನ್ನ ಮಾತು ತುಂಡರಿಸಿ‘ ಅದರಾಗೇನ್ ಮಹಾ ಐತಿ? ಎತ್ತರದ ನೆತ್ತಿಮ್ಯಾಲೆ ನೀರು ಸುರದರ ಎರಡ ಕಡೆ ಹರದು ಹೋಗೋದು ಸಹಜ ಐತಿ. ಅದರೊಳಗೇನು ಜಾದು?’

ಗಿರೀಶನ ತಾಳ್ಮೆ ಪರೀಕ್ಷೆ. ‘ಅಯ್ಯೋ.. ತಡ್ರಿಪಾ, ನಾ ಹೇಳೋದು ಕೇಳ್ರಿ. ಇಲ್ಲಿ ನೈಸರ್ಗಿಕವಾದ ಜಲವಿಭಜಕ ರೇಖೆ ಹಾದು ಹೋಗೈತಿ. ಅದಕ್ಕ ಈ ಪ್ರದೇಶದಾಗ ನೀರು ಬಿದ್ರ ಇಬ್ಭಾಗವಾದ ನೀರು ಬ್ಯಾರೆ ಬ್ಯಾರೇನ ಹರದು ಎರಡು ದಿಕ್ಕಿನೊಳಗ ಬ್ಯಾರೆ ಸಮುದ್ರಗಳನ್ನ ಸೇರ್ತಾವ!’ ಅಂದ.

ಅಲ್ಲಿಯ ವರೆಗೆ ದಾರಿ ತಪ್ಪಿದ ಮಗನಂತೆ ಕಕ್ಕಾಬಿಕ್ಕಿಯಾಗಿ, ದಶದಿಕ್ಕುಗಳಿಗೆ ದೃಷ್ಟಿ ಹಾಯಿಸುತ್ತಿದ್ದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ವೆಂಕಟೇಶಗೌಡನಿಗೆ ಸಿಟ್ಟು ನೆತ್ತಿಗೆ ಏರಿತ್ತು. ‘ಏ ಚೂಡ್ರಾ.. ನಮ್ಮ ಹಾಸ್ಟೆಲ್ ದೊಳಗ ನೆಟ್ಟಗ ನೀರು ಬರಂಗಿಲ್ಲ. ಇನ್ನ ಇಲ್ಲಿ ಬಿದ್ದ ನೀರು ಸಮುದ್ರಕ್ಕ ಹೋಗಿ ಸೇರ್ತದ? ಸುಮ್ಮನ ಏನೇನರ ಹೇಳಬ್ಯಾಡಾ..ಸುಮ್ಮನ ವಾಪಸ್ ಹೋಗೋಣ ನಡಿ’ ಎಂದು ಜಗಳದ ಧಾಟಿಯಲ್ಲಿ ಹೇಳಿದ.

‘ನೀವಿಬ್ರು..ಈಗ ಆ ಕಾವೇರಿ ಜಗಳ, ಆಲಮಟ್ಟಿ ಜಗಳ, ಹೊಗೇನಕಲ್ ಹಟ, ಸಾಲದು ಅಂತ ನಮ್ಮ ಕವಿವಿ ಕ್ಯಾಂಪಸ್ಸಿನ್ಯಾಗ ಹೊಸದೊಂದು ಜಲವಿವಾದ ಹುಟ್ಟು ಹಾಕುವಂಗ ಕಾಣಸ್ತದ..ಮೊದಲು ಫೋಟೊ ಎಲ್ಲಿ ಹೊಡಿಯೋಣು ಹೇಳಬರ್ರಿ’ ಅಂದ ಪ್ರಕಾಶ. ಆಗಲೇ ಕ್ಯಾಮೆರಾ ಬ್ಯಾಗ್ ಕೆಳಗೆ ಇಳಿಸಿ ಆತ ಆಂಗಲ್ ಹುಡುಕತೊಡಗಿದ್ದ.

ಅಲ್ಲಿಯವರೆಗೂ ಮೌನವಾಗಿ ನಮ್ಮನ್ನ ಹಿಂಬಾಲಿಸಿದ್ದ ನಮ್ಮ ರೂಪದರ್ಶಿ ದಿವ್ಯಾ ‘ನಿಮ್ಮ ಮಾತು ಮುಗಸ್ರಿ. ಇನ್ನು ಎಷ್ಟು ದೂರ ಹೋಗಬೇಕು ಅಂತ ಮೊದ್ಲ ಹೇಳ್ರಿ?’ ಗುಡ್ಡ ಹತ್ತಿ ಇಳಿದು ಸುಸ್ತಾಗಿದ್ದ ಆಕೆ ನೀರಿನ ಖಾಲಿ ಕೊಡ ಸೊಂಟದ ಮ್ಯಾಲಿಂದ ಕೆಳಗಿಳಿಸಿ, ಬಾಚಣಿಕೆ ತೆಗೆಯುತ್ತ ಹೇಳಿದ್ಲು. ‘ಕೊಡಾನ ಸಪಾಟ ನೆಲದ ಮ್ಯಾಲೆ ಇಡವಾ ನಮ್ಮವ್ವ..ಇಲ್ಲಂದ್ರ ಉರುಳಿ..ಉರುಳಿ ಅರಬ್ಬಿ ಸಮುದ್ರಕ್ಕ ಹೋದೀತು!’ ಅಂದ ಪ್ರವೀಣ. ಅವನ ಕಣ್ಣುಗಳೆಲ್ಲ ಆ ಕೊಡದ ಮ್ಯಾಲೆ ಇತ್ತು. ನಮ್ಮ ವೆಂಕಟೇಶನ ಸಿಟ್ಟು ಇನ್ನು ಇಳಿದಂತೆ ಕಾಣಲಿಲ್ಲ. ಕೊಡ ಆ ಮಗ್ಗುಲಲ್ಲಿ ಉರುಳಿದರೆ ಬಂಗಾಳ ಉಪಸಾಗರ ಸೇರುತ್ತದೆ ಎಂದು, ಅರಬ್ಬಿ ಸಮುದ್ರವನ್ನಲ್ಲ ಎಂದು ಒತ್ತಿ ಹೇಳಿದ.

ಆ ಕೊಡ ತಮಿಳುನಾಡಿನ ಮೂಲಕವೋ ಅಥವಾ ವ್ಹಾಯಾ ಆಂಧ್ರಪ್ರದೇಶದ ಮೇಲೆ ಸಾಗರ ಸೇರುತ್ತದೆ ಎಂಬ ಚರ್ಚೆ ಕಾವೇರುತ್ತಿದ್ದಂತೆ, ಹೂವಿನಿಂದ ಅಲಂಕೃತಗೊಂಡ ಕೊಡದಲ್ಲಿ ತುಸು ನೀರು ತುಂಬಿ, ಮಾಡೆಲ್ ದಿವ್ಯಾ ಸೊಂಟಕ್ಕೇರಿಳಿಸಿದಳು. ಅವಳು ಜಲರೇಖೆಯ ಮೇಲೆ ನಿಂತು ಅವಳು ನೀರು ಚೆಲ್ಲುವ ಪೋಜು ಕೊಡುತ್ತಿದ್ದಂತೆ ಪ್ರಕಾಶ ಫೋಟೊ ಕ್ಲಿಕ್ಕಿಸಲು ಬ್ಯಾಲೆನ್ಸ್ ಹಿಡಿದು ಹೆಣಗಿದ.

ಪಶ್ಚಿಮ ಘಟ್ಟಗಳ ಯಾವುದೇ ಶಿಖರದ ನೆತ್ತಿಯ ಮೇಲೆ ನೀರು ಸುರಿದರೂ ಹಾಗೇಯೇ ಅದು ಎರಡು ಭಾಗಗಳಾಗಿ ಒಂದು ಪಶ್ಚಿಮಕ್ಕೆ ಇನ್ನೊಂದು ಪೂರ್ವಕ್ಕೆ ಹರಿದು ಹೋಗುತ್ತದೆ. ಆ ಎಲ್ಲ ಘಟ್ಟಗಳ ನೆತ್ತಿಯ ಬಿಂದುಗಳನ್ನು ನಕ್ಷೆಯಲ್ಲಿ ಗುರುತಿಸಿದರೆ ಅದೊಂದು ಅಂಕುಡೊಂಕಿನ ರೇಖೆಯಾಗುತ್ತದೆ. ಅದಕ್ಕೆ ‘ಜಲವಿಭಜಕ ರೇಖೆ’ ಎನ್ನುತ್ತಾರೆ. ಇದು ಪ್ರಕೃತಿ ಸಹಜವಾದದ್ದು. ಭೂಗೋಳ ಶಾಸ್ತ್ರಜ್ನರಿಗೆ ವಿಶೇಷವಾದದ್ದು. ಶ್ರೀಸಾಮಾನ್ಯರಿಗೆ ಅದ್ಭುತ ಎನಿಸುವ ಸಂಗ್ತಿ. ಆದರೆ ಇದು ನಿಸರ್ಗ ಕೌತುಕ ಎಂದರು ವಿಶ್ವವಿದ್ಯಾಲಯದ ಭೂ ವಿಜ್ನಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಬಿ.ಪಿ.ವಾಘಮೋರೆ.

ಗಿರೀಶ ಅಂದ.. ‘ನಕ್ಷೆಯಲ್ಲಿ ತೋರಿಸಿದರ ವಿಶೇಷ ಇರಲಿಕ್ಕಿಲ್ಲ. ಆದರೆ ಈ ಜಲವಿಭಜಕ ರೇಖೆ ‘ಛೋಟಾ ಮಹಾಬಳೇಶ್ವರ’ ಧಾರವಾಡದಲ್ಲಿ, ಅದರಲ್ಲೂ ನಮ್ಮ ಕ್ಯಾಂಪಸ್ಸಿನಲ್ಲಿ ಹಾಯ್ದು ಹೋಗುತ್ತದೆ ಎನ್ನುವುದು ನಮಗೆ ವಿಶೇಷ. ಕರ್ನಾಟಕದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಬಿದ್ದ ನೀರು ಮಾತ್ರ ಅರಬ್ಬಿ ಸಮುದ್ರಕ್ಕೆ ಹೋಗುತ್ತದೆ. ಇತರ ಎಲ್ಲ ವಿಶ್ವವಿದ್ಯಾಲಯಗಳ ಕ್ಯಾಂಪಸ್ಸಿನಲ್ಲಿ ಬಿದ್ದ ಮಳೆಯ ನೀರು ಆಂಧ್ರ, ತಮಿಳುನಾಡು ರಾಜ್ಯಗಳ ಮೂಲಕ ಹಾಯ್ದು ಬಂಗಾಳ ಕೊಲ್ಲಿಗೆ ಸೇರುತ್ತದೆ. ನಮ್ಮ ಕರ್ನಾಟಕ ವಿಶ್ವವಿದ್ಯಾಲಯ ಮಾತ್ರ ಈ ಎರಡೂ ಸಮುದ್ರಗಳ ಮಧ್ಯೆ ತಾರತಮ್ಯ ಮಾಡುವುದಿಲ್ಲ. ಎರಡಕ್ಕೂ ಅಷ್ಟಷ್ಟು ನೀರನ್ನು ಹಂಚಿಕೊಡುತ್ತದೆ.

ಹಾಗೆ ಹಂಚುವ ಭಾರಿ ಧಾರಾಳ ಗುಣದಿಂದಾಗಿಯೇ ಇರಬೇಕು, ಕ್ಯಾಂಪಸ್ಸಿನ ಭೂ ಗರ್ಭ ಖಾಲಿ. ನಮ್ಮ ಇದೇ ಶಾಲ್ಮಲಾ ವಿದ್ಯಾರ್ಥಿನಿಲಯದ ಹಿಂಭಾಗದಲ್ಲಿ ಪ್ರಯೋಗಾರ್ಥವಾಗಿ ಕೊರೆದ ಕೊಳವೆ ಬಾವಿಗಳು ವಿಫಲವಾಗಿವೆ! ಈ ಜಲ ವಿಭಜಕ ರೇಖೆ ಧಾರವಾಡದ ರೈಲು ನಿಲ್ದಾಣ ಪ್ರದೇಶ, ಟೈವಾಕ್ ಕಾರ್ಖಾನೆ, ಕಲ್ಯಾಣ ನಗರ, ‘ನಿಸರ್ಗ’ ಹೌಸಿಂಗ್ ಲೇಔಟ್, ಕವಿವಿ ಆವರಣದಲ್ಲಿಯ ‘ಮಾನಸೋಲ್ಲಾಸ ಅತಿಥಿ ಗೃಹ’ ಮತ್ತು ಶಾಲ್ಮಲಾ ವಿದ್ಯಾರ್ಥಿ ನಿಲಯದ ಹಿಂಭಾಗದ ಮೂಲಕ ಹಾಯ್ದು ಹೋಗಿದೆ.

ಪಶ್ಚಿಮದ ಕಡೆ ಜಾರಿದ ಮಳೆ ನೀರು ಶಾಲ್ಮಲಾ ನದಿಯೊಂದಿಗೆ ಬೇಡ್ತಿ ಹಳ್ಳ ಸೇರುತ್ತದೆ. ಅದೇ ಹಳ್ಳ ಮಾಗೋಡು ಜಲಪಾತದಲ್ಲಿ ಧುಮುಕಿ ತನ್ನ ಹೆಸರನ್ನು ಬದಲಿಸಿಕೊಂಡು ‘ಗಂಗಾವಳಿ’ ನದಿಯಾಗಿ ಅಂಕೋಲಾ ಸಮೀಪ ಅರಬ್ಬಿ ಸಮುದ್ರ ಸೇರುತ್ತದೆ. ಕ್ಯಾಂಪಸ್ಸಿನಿಂದ ಪೂರ್ವಕ್ಕೆ ಹೊರಳಿದ ಮಳೆ ನೀರು ಧಾರವಾಡದ ಬೆಣ್ಣಿ ಹಳ್ಳದ ಮೂಲಕ, ನವಿಲು ತೀರ್ಥ, ಮಲಪ್ರಭಾ ನದಿಯ ಮೂಲಕ ಕೃಷ್ಣಾ ನದಿ ಸೇರಿ ಮುಂದೆ ಬಂಗಾಳ ಉಪಸಾಗರದ ಒಡಲು ಸೇರುತ್ತದೆ’ ಗಿರೀಶನಿಗೆ ಶರಣು ಎನ್ನದೇ ಹಾದಿ ಉಳಿದಿರಲಿಲ್ಲ.!

ನಮ್ಮ ಕವಿವಿ ಕ್ಯಾಂಪಸ್ಸಿಗೂ ಇಲ್ಲಿನ ಭೂ ಲಕ್ಷಣಕ್ಕೂ ವಿಶಿಷ್ಠ ನಂಟಿದೆ. ಹಿಂದೆ ಕೊಯ್ನಾ ಆಣೆಕಟ್ಟಿನಲ್ಲಿ ಭೂಕಂಪ ಸಂಭವಿಸಿದಾಗ ಇಡೀ ಕ್ಯಾಂಪಸ್ ಗಡಗಡ ನಡುಗಿ ಏನೆಲ್ಲ ಅಲ್ಲೋಲಕಲ್ಲೋಲ ಆಗಿತ್ತು. ನಮ್ಮ ಭೂ ವಿಜ್ನಾನ ವಿಭಾಗದ ಗೋಡೆಯೇ ಬಿರುಕು ಬಿಟ್ಟಿತ್ತು ಎಂಬ ಗಾಳಿ ಸುದ್ದು ರೆಕ್ಕೆ-ಪುಕ್ಕ ಪಡೆದು ಕ್ಯಾಂಪಸ್ಸಿನ ತುಂಬ ಅನೇಕ ದಿನಗಳ ಕಾಲ ಹಾರಾಡಿತ್ತು. ಅದರ ಪರಿಣಾಮ ಹೇಗಿತ್ತು ಎಂದರೆ ನಂತರ ಲಾತೂರ್ ಮತ್ತು ಖಿಲ್ಹಾರಿಯಲ್ಲಿ ಭೂಕಂಪ ಸಂಭವಿಸಿದಾಗ ಹಾಸ್ಟೆಲ್ ಹುಡುಗರೆಲ್ಲ ಭಯದಿಂದ ಬಯಲಿಗೆ ಬಂದು ಮಲಗಿದ್ದರು. ಕಡು ಬೇಸಿಗೆಯಲ್ಲಿ ಇಲ್ಲಿ ಆಗೊಮ್ಮೆ ಈಗೊಮ್ಮೆ ಸುಂಟರಗಾಳಿ ಚಕ್ರಾಕಾರವಾಗಿ ಸುತ್ತುತ್ತ ಎಷ್ಟು ಬಿರುಸಾಗಿ ಏಳುತ್ತದೆ ಎಂದರೆ, ಮೇವು ಹುಡುಕುತ್ತ ಅಲೆಯುವ ಎಮ್ಮೆಗಳನ್ನೂ ಅದು ಎತ್ತಿ ಒಗೆಯಬಲ್ಲುದು ಎಂದು ಹಿರಿಯ ವಿದ್ಯಾರ್ಥಿಗಳು ನೆನೆಸಿಕೊಳ್ಳುತ್ತಾರೆ. ಗಿರೀಶನ ಬಾಯಿಂದ ಈ ಮುತ್ತುಗಳು ಉದುರುತ್ತಿದ್ದಂತೆ ವೆಂಕಟೇಶ ಮತ್ತು ನಾನು ಈಗ ಗಡಗಡ ನಡುಗುತ್ತಿದ್ದೆವು!

ಅಂತಹ ಸುಂಟರಗಾಳಿಯ ಮಧ್ಯೆ ಸಿಕ್ಕೂ ನೆಲಕಚ್ಚಿ ನಿಲ್ಲಬಲ್ಲ ತೂಕದ ವ್ಯಕ್ತಿಗಳ ಬಗ್ಗೆ ಒಂದಿಷ್ಟು ಹೆಮ್ಮೆ, ಏನೇನೂ ತೂಕವಿಲ್ಲದವರು(ನನಗೆ ಈ ಬಾಣ) ಏಷ್ಟೆತ್ತರಕ್ಕೆ ಏರುತ್ತಾರೆ? ಎಂಬ ಕುತೂಹಲ, ಕುಹಕಗಳು ಇದ್ದವು.

ಅದಿರಲಿ ಬಿಡಿ. ಸಂಪದಿಗರಿಗೆ ಇದು ಸ್ಪಷ್ಠವಾಗಬೇಕು. ‘ಜಲವಿಭಜಕ ರೇಖೆ’ ಎಲ್ಲಿದೆ ಅಂತ ಗೊತ್ತಾದರೆ ಉಪಯೋಗವೇನು?
ನೇರಪ್ರಯೋಜನ ಏನು ಇಲ್ಲ. ಗಿರೀಶ ಹೇಳುವಂತೆ/ ಬರೆದಂತೆ, ಎರಡು ಸಾಗರಗಳ ಮಧ್ಯೆ ಅಷ್ಟೇ ಅಲ್ಲ, ಎರಡು ನದಿಗಳ ಮಧ್ಯೆ, ಎರಡು ಹಳ್ಳಗಳ ಮಧ್ಯೆ ಕೂಡ ಅಂತಹ ಅಗೋಚರ ರೇಖೆಗಳು ಇರುತ್ತವೆ. ಅವು ಆಯಾ ಜಲಾನಯನ ಪ್ರದೇಶದ ಗಡಿಯನ್ನು ನಿರ್ಧರಿಸುತ್ತವೆ. ಆ ಜಲಾನಯನ ಪ್ರದೇಶದಲ್ಲಿ ಬೀಳುವ ಮಳೆಯ ನೀರನ್ನು ಅಲ್ಲಲ್ಲೇ ನೆಲದೊಳಕ್ಕೆ ಇಂಗಿಸುವಂತಾದರೆ, ವರ್ಷವಿಡಿ ಹಳ್ಳ್ಗಳು ಬತ್ತದಂತೆ ಮಾಡಬಹುದು. ಹೀಗೆ ನಿಮ್ಮ ನಿಮ್ಮ ಊರುಗಳ ಜಲರೇಖೆಗಳನ್ನು ಗುರುತಿಸಿ ಅಲ್ಲಿಂದ ಈಚೆಗೆ ಹರಿದು ಬರಬಹುದಾದ ಹಳ್ಳ-ಕೊಳ್ಳಗಳಿಗೆ ಬೇಸಿಗೆಯಲ್ಲಿ ಕಟ್ಟ, ಒಡ್ಡು, ನಾಲೆ, ಇಂಗು ಗುಂಡಿಗಳನ್ನು ನಿರ್ಮಿಸಿದರೆ, ಮಳೆ ಬಂದಾಗ ನೀರು ನಿಧನವಾಗಿ ಭೂಮಿಯ ಒಡಲು ಸೇರುತ್ತದೆ.; ಅಂತರ್ಜಲ ಸಮೃದ್ಧವಾಗುತ್ತದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸದ್ಯದ ಕುಲಪತಿ, ನಮ್ಮ್ಮವರೆ ಆದ ಡಾ.ಏ.ಮುರಿಗೆಪ್ಪನವರು ಈ ಕಾಯಕಕ್ಕೆ ನಮ್ಮ ಕ್ಯಾಂಪಸ್ಸಿನಲ್ಲಿ ಶೃದ್ಧೆಯಿಂದ ಪ್ರಯತ್ನಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರು ಕೈಜೋಡಿಸಿದ್ದರು. ರಾಜಸ್ಥಾನದ ಜಲಸಾಕ್ಷರ, ಜಲಯೋಧ, ಮ್ಯಾಗ್ಸೆಸ್ಸೆ ಪುರಸ್ಕೃತ ಡಾ.ರಾಜೇಂದ್ರಸಿಂಗ್ ಮಾಡಿದ ಕ್ರಾಂತಿ ನಿಮಗೆ ತಿಳಿದಿದೆ. ನಾವು ಇಂತಹ ಪ್ರಯತ್ನಗಳಿಗೆ ಕೈಜೋಡಿಸೋಣ.

*********************
ಸಂಪದಿಗರಿಗಾಗಿ ಈ ಲೇಖನ ಬರೆಯಲು ಅನುಮತಿ ನೀಡಿದ ಗೆಳೆಯ ಗಿರೀಶ್ ಹಾಗು ಮಾರ್ಗದರ್ಶನ ಮಾಡಿದ ನಾಗೇಶ ಹೆಗಡೆ ಅವರಿಗೆ, ತಂಗಿ ದಿವ್ಯಾಳಿಗೆ, ಗೆಳೆಯ ಪ್ರವೀಣ ಶಿರಿಯಣ್ಣವರ್, ವೆಂಕಟೇಶಗೌಡ ಆರ್.ಎಸ್. ಅವರಿಗೆ ಕೃತಜ್ನತೆಗಳು ಸಲ್ಲಬೇಕು.