ಭಾಗ ೩

ಭಾಗ ೩

ಮೊದಲ ದಿನದ ಕಾರ್ಯ ವೈಖರಿಯ ಬಗ್ಗೆ ಒಂದೆರಡು ಮಾತುಗಳನ್ನು ತಿಳಿಸಲಿಚ್ಛಿಸುವೆ.

ಮೊದಲ ದಿನ ಅಂದರೆ ಜನವರಿ ೨೭ನೇ ತಾರೀಖು ಸಮಯಕ್ಕೆ ಸ್ವಲ್ಪ ಮುಂಚಿತವಾಗಿಯೇ ಬ್ಯಾಂಕಿಗೆ ಹೋಗಿದ್ದೆ. ನಾವು ಒಟ್ಟು ೩೩ ಜನ ಉದ್ಯೋಗಿಗಳು. ನಮ್ಮಲ್ಲಿ ಒಬ್ಬರಿಗೆ ದೃಷ್ಟಿ ದೋಷವಿದ್ದುದರಿಂದ ಕ್ಯಾಷ್ ಡಿಪಾರ್ಟ್‍ಮೆಂಟಿಗೆ ಅವರನ್ನು ಪೋಸ್ಟ್ ಮಾಡಿರಲಿಲ್ಲ. ಇನ್ನುಳಿದ ೩೨ ಜನರು ಕ್ಯಾಷ್ ಡಿಪಾರ್ಟ್‍ಮೆಂಟಿನಲ್ಲಿದ್ದ 'ಎಫ್' ಸೆಕ್ಷನ್‍ಗೆ ಪೋಸ್ಟ್ ಮಾಡಿದ್ದರು. ಆ ಸೆಕ್ಷನ್‍ನ ಅಧಿಕಾರಿ ಶ್ರೀ ಮೆಂಡೋಂಝಾ. ಯಾವಾಗಲೂ ಗಂಟಿಕ್ಕಿರುವ ಮುಖದವರು. ಅವರ ಮುಂದೆ ತಮಾಷೆ ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ. ಮೊದಲ ದಿನದಿಂದಲೇ ನಾವು ಎಲ್ಲಿ ಎಲ್ಲಿ ಕುಳಿತು ಕೆಲಸ ಮಾಡಬೇಕೆಂದು ನಿರಧರಿಸಿದ್ದರು.

ಮೊದಲ ದಿನ ಹಳೆಯ ನೋಟುಗಳ ಪ್ಯಾಕೆಟ್ಟನ್ನು ಪರೀಕ್ಷೆಗಾಗಿ ಕೊಟ್ಟಿದ್ದರು. ಹೇಗೆ ಪರೀಕ್ಷಿಸಬೇಕು, ಯಾವ ಯಾವ ನೋಟುಗಳನ್ನು ತಿರಸ್ಕರಿಸಬೇಕು ಇತ್ಯಾದಿಗಳನ್ನೂ, ಹರಿದ ನೋಟುಗಳನ್ನು ಹೇಗೆ ಅಂಟಿಸಬೇಕು ಎಂಬುದನ್ನೂ ಚೆನ್ನಾಗಿ ತಿಳಿಸಿಕೊಟ್ಟಿದ್ದರು. ಅಂದು ಎಲ್ಲರಿಗೂ ಎಲ್ಲ ನೋಟುಗಳೂ ಸಂದೇಹ ತೋರುತ್ತಿದ್ದವು. ಹೀಗಾಗಿ ಮೆಂಡೋಂಝಾ ಅವರಿಗೆ ತಲೆಕೆಡುವಂತಾಗಿತ್ತು. ಮೊದಲಿಗೆ ನಾವು ಒಂದು ಪ್ಯಾಕೆಟ್ಟಿನಲ್ಲಿ ೧೦೦ ನೋಟುಗಳಿವೆಯೇ ಎಂದು ಎಣಿಸಬೇಕು. ಎಲ್ಲೆಲ್ಲಿ ಓಡಿಯಾಡಿ ಬಂದ ನೋಟುಗಳೋ. ಎಲ್ಲ ನೋಟುಗಳು ಒಂದೇ ಕುಟುಂಬದವರಂತೆ, ಪತಿ ಪತ್ನಿಯರಂತೆ 'ಏಕ್ ದೂಜೇ ಕೆ ಲಿಯೇ' ಯಂತಾಗಿದ್ದವು. ಅಂದರೆ ಎಲ್ಲ ನೋಟುಗಳು ಒಂದಕ್ಕೊಂದು ಬೆಸೆದುಕೊಂಡಿದ್ದವು. ಆ ಬೆಸುಗೆ ಬಿಡಿಸಿ ಎಣಿಸಿ, ಒಂದು ಪ್ಯಾಕೆಟ್ಟಿನಲ್ಲಿ ೧೦೦ ನೋಟುಗಳಿವೆ ಎಂದು ಖಾತ್ರಿ ಪಡಿಸಿಕೊಳ್ಳುವುದು ಬಹು ಕಷ್ಟವಾಗಿತ್ತು. ನನಗೆ ಒಂದು ಪ್ಯಾಕೆಟ್ಟಿನಲ್ಲಿ ಒಮ್ಮೆ ೯೯ ಬಂದರೆ ಮರು ಎಣಿಕೆಯಲ್ಲಿ ೧೦೧ ಬರ್ತಿತ್ತು. ಮತ್ತೆ ಮತ್ತೆ ಎಣಿಸಿ ಎಣಿಗಿ ಕೈ ನೋಯುತ್ತಿತ್ತು. ಅದಲ್ಲದೇ ಕೈಯೆಲ್ಲಾ ಗಲೀಜಾಗಿತ್ತು. ಅದಕ್ಕೆಂದೇ ಕೈ ತೊಳೆದುಕೊಳ್ಳಲು ಸಾಬೂನನ್ನು ಇಟ್ಟಿರುತ್ತಾರೆ. ಇನ್ನು ಆ ನೋಟಿನ ಧೂಳಿನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.

ಒಂದು ತಮಾಷೆಯ ವಿಷಯವೆಂದರೆ ಅಂದಿನಿಂದ ಸ್ವಲ್ಪ ಕಾಲ ಎಲ್ಲೇ ಪುಸ್ತಕಗಳು, ನೋಟುಗಳನ್ನು ಕಂಡರೂ ಅಭ್ಯಾಸವಾಗಲೆಂದು ಅವುಗಳನ್ನು ಎಣಿಸುತ್ತಿದ್ದೆ. ಕೆಲವರು ಬಹಳ ಬೇಗ ವೇಗವಾಗಿ ಎಣಿಸಿ ಪರೀಕ್ಷಿಸುತ್ತಿದ್ದರು. ಅವರೊಂದಿಗೆ ಪೈಪೋಟಿಯೂ ನಡೆಯುತ್ತಿತ್ತು. ನಾನು ಯಾವಾಗಲೂ ಅವರೆಲ್ಲರಿಗಿಂದ ಹಿಂದೆ ಬೀಳುತ್ತಿದ್ದೆ. ಅಂದು ಮೊದಲ ದಿನವಾಗಿದ್ದು ಅರ್ಧ ಕೆಲಸವನ್ನು ಮಾತ್ರ ಕೊಟ್ಟಿದ್ದರು. ಆದರೂ ಬೆಳಗಿನ ಕೆಲಸ ಮುಗಿಸುವ ಹೊತ್ತಿಗೆ ಮಧ್ಯಾಹ್ನದ ೨ ಘಂಟೆಯಾಗಿತ್ತು.

ಮತ್ತೆ ಇನ್ನೂ ಅರ್ಧ ಕೆಲಸ ಬಾಕಿ ಇದ್ದುದರಿಂದ ಅರ್ಧ ಘಂಟೆಯೊಳಗೆ ಊಟ ಮುಗಿಸಿ ಬರಬೇಕೆಂದು ನಮ್ಮ ಆಫೀಸರು ಹೇಳಿದ್ದರು. ಸಾಮನ್ಯವಾಗಿ ಮುಕ್ಕಾಲು ಘಂಟೆಯ ಸಮಯವನ್ನು ಊಟಕ್ಕಾಗಿ ಕೊಡಬೇಕಿತ್ತು. ಅವರ ಮಾತಿಗೆ ಎದುರಾಡುವ ಧೈರ್ಯ ಯಾರಿಗೂ ಇರಲಿಲ್ಲ. ಮೇಲಾಗಿ ಆಗಿನ್ನೂ ಬ್ಯಾಂಕಿನೊಳಗೆ ಕಾಲಿಡುತ್ತಿದ್ದೆವು. ಅಷ್ಟು ಹೊತ್ತಿಗಾಗಲೇ ಬ್ಯಾಂಕಿನ ಕ್ಯಾಂಟೀನ್ ಮುಚ್ಚಿತ್ತು. ಎದುರಿಗಿದ್ದ ಕಾಮತ್ ಹೊಟೆಲ್‍ಗೆ ಹೋಗಿ ಬೇಗ ಬೇಗ ಸಿಕ್ಕಿದ್ದನ್ನು ತಿಂದು ಬಂದಿದ್ದೆವು. ಮಧ್ಯಾಹ್ನದ ಕೆಲಸವೂ ಹಾಗೆಯೇ ನಿಧಾನವಾಗಿ ಸಾಗಿತ್ತು. ಅಂದಿನ ಕೆಲಸ ಮುಗಿಯ ಹೊತ್ತಿಗೆ ಸಂಜೆಯ ೭ ಘಂಟೆಯಾಗಿತ್ತು. ಇದೊಂದು ಮರೆಯಲಾರದ ದಿನ.

ಮುಂದಿನ ಭಾಗಕ್ಕೆ ನಿರೀಕ್ಷಿಸಿ ...

Rating
No votes yet