ಶಿವಮೊಗ್ಗ ಪ್ರವಾಸ ಕಥನ

ಶಿವಮೊಗ್ಗ ಪ್ರವಾಸ ಕಥನ

ಬರಹ

ನಾವೆಲ್ಲರೂ ನಮ್ಮ ಜೀವನದಲ್ಲಿ ಹಲವಾರು ಪ್ರವಾಸಗಳನ್ನು ಕೈಗೊಂಡಿರುತ್ತೇವೆ - ಆದರೆ ಕೆಲವೊಮ್ಮೆ 'ಅಯ್ಯೊ ಎಷ್ಟೊಂದು ದುಬಾರಿ ಆಗಿ ಹೋಯ್ತು ಪ್ರವಾಸ' ಅಂತನೋ ಅಥವಾ 'ತುಂಬಾ ದೂರವಾಗಿ ಹೊಯ್ತು' ಅಂತ ಅಥವಾ 'ಛೆ! ಕಂಪನಿ ಚೆನ್ನಾಗೆ ಇರಲಿಲ್ಲವಲ್ಲ' ಅಂಥ compromise ಮಾಡಿಕೊಂಡಿರುವ ಹಾಗಾಗಿಬಿಡುತ್ತೆ. ನಮ್ಮ ಕಥೆ ಏನಪ್ಪ ಅಂದಿರಾ? ಸರಿಯಾದ ಸಮಯದಲ್ಲಿ, ಆತ್ಮೀಯ ಗೆಳೆಯರೊಡನೆ ಅತಿ ಹೆಚ್ಚು ಶ್ರಮ ಪಡದೆ ಪ್ರಕೃತಿಯ ಮಡಿಲಲ್ಲಿ ರೊಮಾಂಚನಗೊಳ್ಳುತ್ತ ಅದರ ಮುಂದೆ ಕುಬ್ಜರೆನ್ನಿಸುವ ಅನುಭವದಲ್ಲಿ ಬೆಂಗಳೂರಿನ ನಮ್ಮ ದೈನಂದಿನ ಜೀವನವನ್ನೂ ಅದರ ಜಂಜಾಟಗಳನ್ನೂ Complete ಆಗಿ ಮರೆತೆವು. well only for 3 days you see! ಆದ್ರೂ ಆ ಅನುಭವ ಮರೆಯೋಕ್ಕಾಗುತ್ತದೆಯೆ? No chance!! :-) ಆ ಪ್ರವಾಸದ ಕಥನ ಇಲ್ಲಿದೆ ನೋಡಿ.

೨೦೦೫ ಇಸ್ವಿಯ ಕಡೆಯ ಎರಡು ದಿನಗಳು ಮತ್ತು ೨೦೦೬ ಹೊಸ ವರ್ಷದ ಮೊದಲ ದಿನಗಳನ್ನು ಬೆಂಗಳೂರಿನಿಂದ ದೂರದಲ್ಲಿ ಕಳೆಯುವ ಸುಸಂದರ್ಭ ಒದಗಿ ಬಂತು. ಗೆಳೆಯರೆಲ್ಲ ಒಟ್ಟಿಗೆ ಕಾಲ ಕಳೆಯಬಹುದು, ಕೆಲವು ಹೊಸ ಊರುಗಳನ್ನ ನೋಡಬಹುದು ಎಂದು ಚಿಂತಿಸಿ, ನಮ್ಮ ಕರ್ನಾಟಕದಲ್ಲೇ ನೋಡಲು ಬಹಳ ಸ್ಥಳಗಳಿರುವುದರಿಂದ, ಇಲ್ಲೇ ೩ ದಿನದ ಪ್ರವಾಸ ಕೈಗೊಳ್ಳಲು ನಿರ್ಧರಿಸಿದೆವು. ಗೆಳೆಯ ಮೋಹನ ಶಿವಮೊಗ್ಗ ಜಿಲ್ಲೆ ಸಂದರ್ಶಿಸೋಣ ಎಂದು ಹೇಳಿದಾಗ ಎಲ್ಲರೂ ಸಹಮತದಿಂದ ಒಪ್ಪಿದರು. ಅದೂ, ನಮ್ಮ ಸ್ವಂತ ಕಾರಿನಲ್ಲಿ ಹೋಗೋದು ಅಂತ ನಿರ್ಧರಿಸಿದಾಗ ಸಂತೋಷಕ್ಕೆ ಪಾರವೆ ಇರಲಿಲ್ಲ. ಸರಿ ಬೇಗ ಬೇಗ ರಜೆಗಳಿಗೆ apply ಮಾಡೋವ್ರು ಮಾಡಿ ಸಂಜಯ, ಮಧುಸೂದನ ಮತ್ತು ಮುರಳೀಧರ ಒಪ್ಪಿಗೆ ಕೊಟ್ಟರು. ನವ ವಿವಾಹಿತ ಜೋಡಿಗಳಾದ ಗುರು-ಸುಶ್ಮ ಹಾಗು ಪ್ರದೀಪ-ನಯನ ಕಾರಣಾಂತರಗಳಿಂದ ಈ ಪ್ರವಾಸದಿಂದ ಹೊರಗುಳಿದು, ನಾವು ನಾಲ್ಕು ಜನ ಹೊರಡುವುದು ಅಂತ ನಿರ್ಧಾರವಾಯಿತು.

ಡಿಸೆಂಬರ್ ೩೦ ರಂದು, ಬೆಳಿಗ್ಗೆ ಸರಿಯಾಗಿ ೬ ಘಂಟೆಗೆ ಜಯನಗರದಲ್ಲಿರೋ ಮಧು ಮನೆಯಿಂದ ಹೊರಟೆವು. ಮುಂಜಾನೆಯ ಆ ತಂಪು ವಾತಾವರಣ, ನಿರ್ಜನ ರಸ್ತೆಗಳು, ಮಾಲಿನ್ಯ ರಹಿತ ಗಾಳಿಯನ್ನು ಸೆವಿಸುತ್ತಾ, ತುಮಕೂರು ರಸ್ತೆಗೆ ಬಂದೆವು. ಏಲ್ಲರೂ ಅತ್ಯುತ್ಸಾಹದಿಂದ, ಸಂತೋಷದಿಂದ ಈ ನಮ್ಮ ಪ್ರವಾಸವನ್ನು ಪ್ರಾರಂಬಿಸಿಧೆವು. ('ಇದು ನನ್ನ ನಿನ್ನ ಪ್ರೆಮ ಗೀತೆ ಚಿನ್ನ' - ಖುಷಿಯಲ್ಲಿದ್ದಾಗ ಆವಾಗ ಕೆಳಿದ ಹಾಡು ಹೇಗೆ ನಂತರವೂ ನೆನಪಲ್ಲಿ ಉಳಿಯುತ್ತೆ ಅಲ್ಲವೆ?!) ತುಮಕೂರು ರಸ್ತೆಯ ಟೋಲ್ ಗೇಟಿನಲ್ಲಿ ೨೦ ರೂಪಾಯಿ ಕೊಟ್ಟು, ಆ ರಸ್ತೆಯ ಆನಂದ ಪಡೆಯುತ್ತ, ೧೨೦ ಕಿ ಮಿ ವೇಗದಲ್ಲಿ ( ಅದೂ ಅಲ್ಟೊ ಕಾರಿನಲ್ಲಿ!!), ಈಗ ಓಮ್ ಚಿತ್ರದ ಹಾಡನ್ನು ಕೇಳುತ್ತ, ತಂದಿದ್ದ ಬನ್, ಬ್ರೆಡ್, ರಸ್ಕ್ ತಿನ್ನುತ್ತ ತುಮಕೂರು ದಾಟಿದೆವು. ನಂತರ ಒಂದು ಕಡೆ ಕೆಲವು ಫೋಟೊಗಳನ್ನು ತೆಗೆದುಕೊಂಡೆವು. ಸುಮಾರು ೮.೩೦ರ ಹೊತ್ತಿಗೆ ಕಿಬ್ಬನಹಳ್ಳಿ ಕ್ರಾಸಿನಲ್ಲಿ " ಹೋಟೆಲ್ ಮಯೂರ" ದಲ್ಲಿ ಉಪಹಾರ ಮುಗಿಸಿದೆವು. ತೆಂಗಿನ ನಾಡು, ತಿಪಟೂರನ್ನು ದಾಟಿ ಸ್ವಲ್ಪ ಮುಂದೆ ಬಂದಾಗ, ಗೆಳೆಯ ಸಂಜಯನ ಊರು ಬೈರಾಪುರದ ತಿರುವು ಸಿಕ್ಕಿತು. ಅಲ್ಲಿ ನಿಂತು, ಒಂದೆರಡು ಚಿತ್ರಗಳನ್ನು ತೆಗೆದುಕೊಂಡು ಮುಂದುವರೆದೆವು. ಅರೆ ಬಯಲುಸೀಮೆ, ಅರೆ ಮಲೆನಾಡು ಪ್ರದೇಶಗಳಾದ ಅರಸಿಕೆರೆ, ಕಡೂರು, ಬೀರೂರನ್ನು ದಾಟಿ ಸುಮಾರು ೧೦.೩೦ಕ್ಕೆ ಒಂದು ಚಿಕ್ಕ ವಿರಾಮ ಪಡೆದೆವು. ಮತ್ತೆ ರೈಲಿನದೂ ಸೇರಿ ಎರಡು ಸ್ನ್ಯಾಪ್ಸ್.

ಕೆಲವೊಮ್ಮೆ ದೂರ ಪ್ರಯಾಣ ಬೇಸರ ಅನ್ನಿಸುತ್ತೆ. ಆದರೆ ಪ್ರಯಾಣದ ತಾಣಗಳು ಇಷ್ಟು ಮನೋಹರವಾಗಿರುವಾಗ ಬೇಸರ ಎಲ್ಲಿ? ಅಲ್ಲೇ ಸ್ವಲ್ಪ ಹೊತ್ತು ಇರೋಣ ಅನ್ನಿಸತೊಡಗಿತು. ನಂತರ ಅಲ್ಲಿಂದ ಹೊರಟು ತರೀಕೆರೆ, ಭದ್ರಾವತಿ ಮಾರ್ಗವಾಗಿ ಶಿವಮೊಗ್ಗವನ್ನು ೧೨.೧೦ಕ್ಕೆ ತಲುಪಿದೆವು. ಅಲ್ಲಿ ಮೊದಲ ಕೆಲಸ ಲಾಡ್ಜ್ ಬುಕ್ ಮಾಡೋದು ಆಗಿತ್ತು. ಕೆಲವು ಕಡೆ ಫ಼ುಲ್ ಆಗಿತ್ತು, ಮತ್ತೆ ಕೆಲವು ಒಂದು ದಿನದ ಮಟ್ಟಿಗೆ ಮಾತ್ರ ಸಿಗುವಂತಿತ್ತು. ಆದಕ್ಕೆ ಬೇಡ ಅಂದು, ಮೋಹನನ ಅಜ್ಜಿ ಮನೆಗೆ ಹೋದೆವು. ಅಲ್ಲಿ ತಂಪಾದ ನಿಂಬೆಹಣ್ಣಿನ ರಸವನ್ನು ಕುಡಿದು ಹೊರೆಟೆವು. ಆನಂತರ, "ಮಥುರ ರ್‍ಎಸಿಡೆಂಸಿ" ಎಂಬ ವಸತಿಗೃಹದಲ್ಲಿ ರೂಮನ್ನು ಪಡೆದೆವು. ರ್‍ಊಮು ಅಚ್ಚುಕಟ್ಟಾಗಿತ್ತು..ರ್‍ಊಮ್ ಬಾಯ್‍ಗಳು ಎಷ್ಟು ನಗುನಗುತ್ತಾ ಸಹಾಯ ಮಾಡಿದರು ಗೊತ್ತೆ? ಆಶ್ಚರ್ಯ+ಸಂತೋಷವಾಯಿತು.

ಇದೆಲ್ಲದರ ನಡುವೆ, ಮೋಹನನು ಆಗುಂಬೆಗೆ ರಸ್ತೆ ಹೇಗಿದೆ, ಮುಂತಾದ ವಿವರಗಳನ್ನು ಸಂಗ್ರಹಿಸಿದನು ಹಾಗೂ ಕಾರಿನಲ್ಲೆ ಹೋಗುವುದೆಂದು ನಿರ್ಧರಿಸಿದೆವು. ನಮಗೆ 'ರಸ್ತೆ ತುಂಬ ghat section ಇರುತ್ತಾ?' ಅಂತ ಭಯವಿತ್ತು. ಹಾಗೇನಿಲ್ಲದೆ ಬರಿ ಸ್ವಲ್ಪ ದೂರ ಗುಡ್ಡಗಾಡಾಗಿದ್ದಿತ್ತು. ಮಧ್ಯಾಹ್ನದ ಊಟವನ್ನು ಅದೇ ಹೋಟೆಲಿನಲ್ಲಿ ಮುಗಿಸಿ, ಸುಮಾರು ೨ ಘಂಟೆಗೆ ತೀರ್ಥಹಳ್ಳಿ ರಸ್ತೆಯಲ್ಲಿ ಹೊರೆಟೆವು. ಒಂದು ೧೫ ಕಿಮಿ ದೂರದಲ್ಲಿ ಗಾಜನೂರು ಎಂಬಲ್ಲಿಗೆ ಬಂದೆವು. ಇಲ್ಲಿ ತುಂಗಾ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸಿದ್ದಾರೆ. ಅದರ ಹಿನ್ನೀರಿನ ವೈಭವ, ಸೌಂದರ್ಯಕ್ಕೆ ಮಾರು ಹೋದೆವು. ನಮ್ಮ ಮುಂದಿನ ಗುರಿ ಮಂಡಗದ್ದೆ ಪಕ್ಷಿಧಾಮವಾಗಿತ್ತು. ನಿಜವಾದ ಮಲೆನಾಡಿನ ಪ್ರಕೃತಿಯನ್ನು ಸವಿಯುತ್ತ,.. ರಸ್ತೆಯ ತಿರುವು ಮುರುವನ್ನು ದಾಟುತ್ತಾ, ಮಂಡಗದ್ದೆ ತಲುಪಿದೆವು. ಈ ಋತುವಿನಲ್ಲಿ ಅಲ್ಲಿ ಹೆಚ್ಚಿನ ಪಕ್ಷಿಗಳು ಇರಲಿಲ್ಲ,.. ಆದರೂ ಆ ನದಿಯ ನಡುವಿನಲ್ಲಿ ಇರುವ ದ್ವೀಪಗಳು , ಅಲ್ಲಿ ವಿಶಾಲವಾಗಿ, ದಟ್ಟವಾಗಿ ಹಬ್ಬಿರುವ ಮರಗಳು, ಎಲ್ಲಿಂದಲೋ ಬರುವ ಪಕ್ಷಿಗಳು, ಎಲ್ಲವೂ ವಿಸ್ಮಯ ಮೂಡಿಸಿತು. ಆದರೆ ಅಲ್ಲಿರುವ ವ್ಯವಸ್ಥೆಯನ್ನು ಕಂಡು ಬೇಸರವೆನಿಸಿತು. ಅಲ್ಲದೇ, ಇಷ್ಟು ಸಹಜವೂ ಸುಂದರವೂ ಆಗಿರುವ ಜಾಗ ಎಷ್ಟು ಜನ ಪ್ರವಾಸಿಗಳಿಗೆ ಗೊತ್ತು? ಕರ್ನಾಟಕ ಪ್ರವಾಸೋದ್ಯಮದವರು ಈ ಜಾಗದ ಬಗ್ಗೆ ಏಕೆ ಹೆಚ್ಚು ಪ್ರಚಾರ ಮಾಡಿಲ್ಲವೋ? ಅಲ್ಲಿಂದ ಹೊರಟ ನಾವು ತೀರ್ಥಹಳ್ಳಿ ಮಾರ್ಗವಾಗಿ ಆಗುಂಬೆಯ ದಾರಿ ಹಿಡಿದೆವು. ನಾಲೂರು ಎಂಬಲ್ಲಿ ಒಂದು ದೇವಸ್ಥಾನವನ್ನು ನೊಡಿ, ಸುಮಾರು ೪.೪೦ರ ಹೊತ್ತಿಗೆ ಆಗುಂಬೆಗೆ ತಲುಪಿದೆವು. ಆಲ್ಲಿ ಒಂದು ಆರಕ್ಷಕ ಠಾಣೆ ಮುಂದೆ ಗಾಡಿ ನಿಲ್ಲಿಸಿ, ಅಲ್ಲಿ ಇದ್ದ ಒಬ್ಬರನ್ನು ವ್ಯೂ ಪಾಯಿಂಟ್‍ಗೆ ದಾರಿ ಯಾವುದು ಎಂದು ಕೇಳಿದೆವು. ಈ ಮಲೆನಾಡಿನ ಜನ ಎಷ್ಟು ಸುಸಂಸ್ಕೃತರು ಎಂಬುದನ್ನು ಅಲ್ಲಿ ಇದ್ದ ಒಬ್ಬ ಪೊಲೀಸ್ ಪೇದೆ ತೋರಿಸಿಕೊಟ್ಟರು. ಆವರೇ ನಮ್ಮ ಹತ್ತಿರ ಬಂದು (ನಾವೆಲ್ಲರೂ ಕಾರಿನಲ್ಲಿಯೇ ಕುಳಿತಿದ್ದೆವು!!) ದಾರಿ ತೋರಿಸಿದರು. ಮಧು ಯಾವುದೋ ಧ್ಯಾನದಲ್ಲಿದ್ದ. ಆಮೇಲೆ 'ಯಾರು ಅವರು?' ಪ್ರಶ್ನೆಗೆ ಉತ್ತರ ಕೊಟ್ಟಿದ್ದಕ್ಕೆ,ಅವರ ನಯ ವಿನಯ ಕಂಡಿದ್ದವನು 'Chanceಏ ಇಲ್ಲ!' ಅನ್ನುತ್ತಾ ಕೂತ. ನಾವು ವನಕೆ ಅಬ್ಬೆ ಜಲಪಾತದ ಬಗ್ಗೆ ವಿಚಾರಿಸಿದಾಗ, ಅಲ್ಲಿ ಬಹಳ ಜಿಗಣೆಗಲು ಇರುತ್ತವೆ ಆದ್ದರಿಂದ ಅಲ್ಲಿ ಬೇಡ, ಬೇಕಿದ್ದರೆ ಇನ್ನೊಂದು ಜಲಪಾತವಿದೆ, ಜೋಗಿಗುಂಡಿ, ಸುಮಾರು ೩ ಕಿ ಮಿ ದೂರದಲ್ಲಿ ಅಂತ ಅವರೇ ನಮಗೆ ಸ್ವ-ಆಸಕ್ತಿಯಿಂದ ತಿಳಿ ಹೇಳಿದರು. ಆವರಿಗೆ ಧನ್ಯವಾದ ತಿಳಿಸುತ್ತ, ಅವರು ಹೇಳಿದ್ದನ್ನು ತಪ್ಪಾಗಿ ಗ್ರಹಿಸಿಕೊಂಡು- ಜೋಗಿಗುಂಡಿ ಕಡೆ ಅಂದುಕೊಂಡು ತಪ್ಪು ರಸ್ತೆಯಲ್ಲಿ ಹೊರಟೆವು. ಸ್ವಲ್ಪದರಲ್ಲಿ ತಪ್ಪು ದಾರೀಲಿ ಬಂದಿದ್ದೇವೆ ಅಂತ ಗೊತ್ತಾಗಿ, ಮತ್ತೆ ವಾಪಸ್ಸು ಬಂದು ಸರಿಯಾದ ರಸ್ತೆಗೆ ಕೂಡಿಕೊಂಡಾಗ, ಇಬ್ಬರು ಶಾಲಾ ವಿದ್ಯಾರ್ಥಿಗಳನ್ನು ಎದುರುಗೊಂಡೆವು. ಅವರಲ್ಲಿ ವಿಚಾರಿಸಲು, ದಾರಿ ಹೇಳಿದರು, ಹಾಗೂ ನಮ್ಮ ಆಹ್ವಾನದ ಮೇಲೆ ನಮ್ಮ ಜೊತೆಯಲ್ಲಿ ಬಂದರು. ದಾರಿಯಲ್ಲಿ ಅವರು ಅನಿಲ- ಸುನಿಲ ಎಂದು, ೭ನೆ ತರಗತಿಯಲ್ಲಿ ಓದುತಿರುವರೆಂದು, ಕಾರಿನಲ್ಲಿ ಮೊದಲ ಬಾರಿಗೆ ಕುಳಿತ ಅವರ ಸಂತೋಷ ಅವರ ಮೊಗದಲ್ಲಿ ಎದ್ದು ಕಾಣುತಿತ್ತು. ಆ ಇಬ್ಬರ ಸಹಾಯವಿಲ್ಲದಿದ್ದರೆ ಖಂಡಿತವಾಗಿ ನಾವು ಈ ಅದ್ಬುತ ಪ್ರಕೃತಿಯ ಮಡಿಲಲ್ಲಿ ಇರುವ, ಅದಕ್ಕಿಂತ ಹೆಚ್ಚಾಗಿ ಜನರ ಹುಚ್ಚಾಟಗಳಿಂದ ದೂರವಾದ ಒಂದು ಮನೋಲ್ಲಾಸಪಡಿಸುವ ಜಾಗವನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲಿಗೆ ಹೋಗಲು ಇದ್ದ, ಕಿರಿದಾದ, ಸೂರ್ಯನ ಬೆಳಕೂ ಬೀಳದಂಥ ಮಣ್ಣು ರಸ್ತೆ, ನಂತರದ, ಬೆಟ್ಟ ಹತ್ತಿ ಇಳಿವ ಕಾಲ್ನಡಿಗೆ, ಆ ಜಲಪಾತ ಎಲ್ಲವೂ ನಮ್ಮನ್ನು ಪುಳಕಿತಗೊಳಿಸಿದವು. ಜಲಪಾತದಲ್ಲಿ 'ನೀರೆಲ್ಲಿ!?' ಅಂತ ಹುಡುಕುವ ಪರಿಸ್ಥಿತಿ ಆಗಿದ್ದರೂ ಕೂಡ, 'ವಾಹ್ ಇದೆಂಥ mysterious ಜಾಗಕ್ಕೆ ಬಂದೆವಪ್ಪ' ಅನ್ನಿಸುವಂತಿತ್ತು. ಕ್ಲಿಕ್ ಕ್ಲಿಕ್ ಎಂದಿತು ಕ್ಯಾಮೆರಾ...(ಅನಿಲ-ಸುನಿಲರು ಖುಷಿಯಿಂದ pose ಕೊಟ್ಟ ಚಿತ್ರ ಅವರಿಗೆ ಕಳುಹಿಸಬೇಕು. ಮರೆಯಬಾರದು, ಅಂದು ಅವರ ವಿಳಾಸ ತೆಗೆದುಕೊಂಡಿದ್ದೆವು!)

ಆನಂತರ ಸರಿಯಾಗಿ ೫.೪೫ ರ ಹೊತ್ತಿಗೆ ವ್ಯೂ ಪಾಯಿಂಟ್ ಹತ್ತಿರ ಬಂದೆವು. ವ್ಯೂ ಪಾಯಿಂಟ್ ಗಿಂತ ಎತ್ತರದ ಒಂದು ಬೆಟ್ಟವನ್ನು ಹತ್ತಿ, ಸುರ್ಯಾಸ್ತಕ್ಕೆ ಕಾಯುತ್ತ ಇದ್ದೆವು. ಆಲ್ಲಿ ಕಾಣುತಿದ್ದ ನಿತ್ಯಹರಿದ್ವರ್ಣ ಕಾಡನ್ನು, ಕೆಳಗೆ ಇದ್ದ ಪ್ರಪಾತವನ್ನು, ಹಾವುಗಳೂ ನಾಚಿಕೆ ಪಡುವಂತಹ ತಿರುವುಗಳು ಎಲ್ಲವನ್ನೂ ನೋಡಿ ನಮ್ಮ ಕಣ್ಣು ಹಾಗು ಮನಸ್ಸುಗಳನ್ನು ತುಂಬಿಸಿಕೊಂಡೆವು. ದಕ್ಷಿಣ ಭಾರತದ ಚಿರಾಪುಂಜಿ ಎಂಬ ಹೆಮ್ಮೆ ಇರುವ ಆಗುಂಬೆ ಮನಸೂರೆಗೊಳಿಸಿತು. ಅಷ್ಟರಲ್ಲಿ ಸುರ್ಯಾಸ್ತವಾಗುವುದಕ್ಕೆ ಶುರುವಾಯಿತು,. ಆ ಪಡುವಣ ದಿಕ್ಕು ಪೂರ್ತಿ ಕೆಂಪಗೆ ಹೊಳೆಯುತಿತ್ತು. ಮಂಜಿನ ವಾತಾವರಣವಿದ್ದರಿಂದ, ಸುರ್ಯಾಸ್ತ ನಾವು ಅಂದುಕೊಂಡಷ್ಟು ಪ್ರಭಾವವನ್ನು ಬೀರಲಿಲ್ಲ, ಆದರೂ ಖಂಡಿತ ನಿರಾಶೆಗೊಳಿಸಲಿಲ್ಲ!!. ನಮ್ಮ ಕ್ಯಾಮೆರ ಕಣ್ಣು ಈ ಅದ್ಭುತ ದೃಶ್ಯವನ್ನು ಸೆರೆಹಿಡಿಯಿತು. ನಂತರ ವ್ಯೂ ಪಾಯಿಂಟ್ ಹತ್ತಿರ ಹೋಗಿ ಅಲ್ಲಿನಿಂದ ಕಾಣುವ ಮೈನವಿರೇಳಿಸುವ ಕಾನನವನ್ನು , ನಾಚಿ ಕೆಂಪಾದ ಆಕಾಶವನ್ನು ಆಸ್ವಾದಿಸಿ, ಬಗೆ ಬಗೆಯ ಪೋಸ್‍ಗಳಲ್ಲಿ 'ಸೂರ್ಯಂಗೇ torchಆ?' ಅನ್ನುವ ಹಾಗೆ ನಮ್ಮ ಮೊಗಗಳನ್ನು ತೋರಿ, ಆಗುಂಬೆಯಾ ಪ್ರೆಮಸಂಜೆಯಾ,. ಹಾಡನ್ನು ಗುನುಗುತ್ತ, ಆಗುಂಬೆಗೆ ವಿದಾಯ ಹೇಳಿದೆವು.. ಶಿವಮೊಗ್ಗ ತಲುಪಿದಾಗ ೯.೧೫. ಊಟ ಮುಗಿಸಿ, ೫೦೦ ಕಿ ಮಿ ಪ್ರಯಾಣದ ಆನಂದಾನುಭವ ನೆನೆಯುತ್ತ ಮಲಗಿಕೊಂಡೆವು.

ವರ್ಷದ ಕಡೆಯ ದಿನ, ೩೧ ದಿಸೆಂಬರ್, ಬೆಳಿಗ್ಗೆ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ ಎಲ್ಲರೂ ಹೊರಟಾಗ ೮ ಘಂಟೆ. ಆವತ್ತಿನ ಕಾರ್ಯಕ್ರಮಗಳು ಸಾಗರದ ಸುತ್ತಮುತ್ತಲಿನ ಸ್ತಳಗಳನ್ನು ವೀಕ್ಷಿಸುವುದು. ತ್ಯಾವರೆಕೊಪ್ಪದ ಸಿಂಹಧಾಮದ ಹತ್ತಿರ ಮತ್ತೆ ಲಿಂಗನಮಕ್ಕಿಯಲ್ಲಿ ಉತ್ಪಾದಿಸುವ ವಿದ್ಯುತನ್ನು ಶಿವಮೊಗ್ಗಕ್ಕೆ ಕಳುಹಿಸುವ ಬೃಹದಾಕಾರದ ಕಂಬಗಳ ಹತ್ತಿರ ಚಿಕ್ಕ ವಿರಾಮಗಳು. ಆ ವಿದ್ಯುತ್ ಹರಿಯುವ ಪ್ರಖರತೆ ಎಷ್ಟು ತೀವ್ರವಾಗಿ ಇತ್ತು ಅಂದರೆ ನಮಗೆ ಆ ಗುಯೀ ಎನ್ನುವ ಶಬ್ಧ ಕೇಳಿಸುತ್ತಿತ್ತು!! (ನಮ್ಮ ಅಯ್ಕಳು ಕಾರಿನ ಸುತ್ತ ಗಮ್ಮತ್ತಿನಿಂದ ನಿಂತಿರೋದು ನೋಡಿ!) ಆಯನೂರು, ಕುಂಸಿ, ಆನಂದಪುರ ದಾಟಿ ಬಂದಾಗ ಸಿಕ್ಕ ಒಂದು ಸ್ತಳ ನಿಜವಾಗಿಯೂ ಸ್ವರ್ಗಸದೃಶವಾಗಿತ್ತು. ಯವುದೋ ಬೇರೆಯದೇ ಪ್ರಪಂಚದಲ್ಲಿ ವಿಹರಿಸುತ್ತಿರುವಂತೆ ಭಾಸವಾಗುತಿತ್ತು. ಇಲ್ಲೆಯೇ ಸಂಜಯ ಹಾಗು ಮುರಳಿ ನಮ್ಮ ಪೂರ್ವಜರ ನೆನಪನ್ನು ಮಾಡಿಕೊಟ್ಟಿದ್ದು( ಮರದಲ್ಲಿ ಮಂಗಗಳ ಹಾಗೆ ನೇತಾಡುತ್ತಿದ್ದರು) ಮತ್ತು ನಮ್ಮ ಮಧು ಇದೆಲ್ಲವನ್ನು ಶ್ರದ್ಧೆಯಿಂದ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದನು!! ಆದು ಯಾಕೋ ಮೋಹನ ನಡೆದು ಬರುವ ಒಂದು ಫೊಟೊಗೆ ಮಧು ರವಿ ಬೆಳಗೆರೆ ಸ್ಟೈಲು ಅಂತ ಹೆಸರು ಕೊಟ್ಟಿದ್ದಾನೆ!! ನಿಜವಾಗಿಯೂ ಆ ತಾಣವನ್ನು ಬಿಟ್ಟು ಕದಲುವ ಆಸೆ ನಮಗಿರಲಿಲ್ಲ. ಆದರೆ ರಸ್ತೆ ಕರೆಯುತ್ತಿತ್ತು. Symbolic ಅನ್ನುವಂತೆ ಕಾರಿನಲ್ಲಿ ಬರುತ್ತಿದ್ದ ಹಾಡು 'ನೆನಪಿರಲಿ'! ನೀವು ಆ ಊರಿನ ಕಡೆ ಹೊದಾಗ ಈ ತಾಣ 'ನೆನಪಿರಲಿ'........

ಸಾಗರ ತಲುಪಿದ ಕೂಡಲೆ ನಮ್ಮ ಮತ್ತೊಬ್ಬ ಗೆಳಯ, ಚಿನ್ಮಯನಿಗೆ ಫೊನ್ ಮಾಡಿದೆವು. ಆವನು ನಮ್ಮನ್ನು ಕೆಳದಿಗೆ ಬರುವಂತೆ ತಿಳಿಸಿದನು. ನಾವು ಕೆಳದಿ ತಲುಪುವ ಹೊತ್ತಿಗೆ ಚಿನ್ನಿ ಅಲ್ಲಿ ಬಂದಿದ್ದನು ಹಾಗು ನಮ್ಮನೆಲ್ಲಾ ಆತ್ಮೀಯವಾಗಿ ಸ್ವಾಗತಿಸಿದನು. ಆಲ್ಲೆ ಹತ್ತಿರದಲ್ಲಿ ಇರುವ ತನ್ನ ಅಜ್ಜ-ಅಜ್ಜಿಯ ಮನೆಗೆ ನಮ್ಮನ್ನು ಕರೆದೊಯ್ದನು. ಆದೊಂದು ವಿಶಾಲವಾದ, ತುಂಬು ಹೃದಯದ ಜನರಿರುವ ಒಂದು ಹಳೆಯ ಕಾಲದ ಮಲೆನಾಡಿನ ಮನೆ. ಅಲ್ಲಿ ಅಜ್ಜಿ- ಅಜ್ಜರನ್ನು ಭೇಟಿ ಮಾಡಿದೆವು. (Note: ನಮ್ಮ ಕಡೆ ತಾತ ಅನ್ನುತ್ತೇವೆ. ಅಜ್ಜ ಅನ್ನೋ ನುಡಿ ಎಷ್ಟು ಚೆಂದ ಅಲ್ಲವೇ! :-) ) ಅಷ್ಟೊಂದು ವಯಸ್ಸಾಗಿದ್ದರೂ, ಅವರ ಹುರುಪು, ಜೀವನ ಪ್ರಜ್ಞೆ ಮತ್ತು ಬಾಳ್ವೆಗೆ ನಾವೆಲ್ಲ ತಲೆದೂಗಿಸಿದೆವು. ಮನೆಯ ಹಜಾರದಲ್ಲಿ ಅಡಿಕೆ ಕಾಯಿಸುತ್ತಿರುವುದನ್ನು ನೋಡಿ, ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಉತ್ಸಾಹ ವ್ಯಕ್ತಪಡಿಸಿದಾಗ, ಚಿನ್ನಿ ನಮ್ಮನ್ನು ತೋಟಕ್ಕೆ ಕರೆದೊಯ್ದು, ಸಸಿಯಿಂದ ಅಡಿಕೆ ಕುಯ್ಯೋದರ ತನಕ ನಡೆಯುವ ಪ್ರತಿಯೊಂದು ಕ್ರಿಯೆ ಯನ್ನು ವಿವರಿಸಿದನು. ಆದನ್ನು ನಮ್ಮ ಸಂಜು ಬಹಳ ಚೆನ್ನಾಗಿ, ಅರ್ಥಗರ್ಭಿತವಾಗಿ ತೆಂಗಿಗೆ ಹೋಲಿಸಿದನು. ಮತ್ತೆ ಮನೆಗೆ ಹಿಂದಿರುಗಿ, ಅಡಿಕೆ ಒಣಗಿಸುವ ವಿಧಾನ, ಆ ಮನೆ ಕಟ್ಟಲು ಉಪಯೋಗಿಸಿರುವ ಜಾಣ್ಮೆ ಇತ್ಯಾದಿಯನ್ನು ತಿಳಿದುಕೊಂಡೆವು. ಅಷ್ಟು ಹೊತ್ತಿಗೆ ಮಲೆನಾಡಿನ ಅವಲಕ್ಕಿ, ಎಮ್ಮೆ ಮೊಸರು ಜೊತೆಗೆ ಅಜ್ಜಿಯ ವಾತ್ಸಲ್ಯಭರಿತ ಪ್ರೀತಿ ನಮಗಾಗಿ ಕಾಯುತಿತ್ತು. ಹೊಟ್ಟೆ ತುಂಬಾ ತಿಂದು ಮನೆಯೆಲ್ಲ ಒಂದು ಸುತ್ತು ನೋಡಿ, ಅಲ್ಲಿಂದ ಅಜ್ಜನನ್ನು ಕರೆದುಕೊಂಡು ನಮ್ಮ ಆ ದಿನದ ಸುತ್ತಾಟಕ್ಕೆ ಹೊರೆಟೆವು. ಅಲ್ಲೆ ಪಕ್ಕದ ಮನೆಯಲ್ಲಿ ಕಾಗದದಲ್ಲಿ ಮಾಡಿದ ಅನೇಕ ಅಕರ್ಷಕ ಕಲಾಕೃತಿಗಳನ್ನು ನೋಡಿದೆವು.

ಮೊದಲನೆಯ ಹೆಜ್ಜೆಯಾಗಿ, ಕೆಳದಿಯ ದೇವಸ್ಥಾನಕ್ಕೆ ಬಂದೆವು. ಕೆಳದಿಯು ನಾಯಕ ವಂಶದ ಆಳ್ವಿಕೆಗೆ (೧೬ನೆ ಶತಮಾನ) ಒಳಪಟ್ಟಿತ್ತು ಹಾಗು ಅವರ ಮೊದಲನೆಯ ರಾಜಧಾನಿ ಆಗಿತ್ತು. ಈಗ ಅದೆಲ್ಲರ ಕುರುಹಾಗಿ ಒಂದು ದೇವಸ್ಥಾನ ಮಾತ್ರ ಉಳಿದಿದೆ. ರ್‍ಆಮೇಶ್ವರ, ವೀರಭದ್ರೇಶ್ವರ ಮತ್ತು ಪಾರ್ವತೀದೇವಿಯ ದೇವಸ್ಥಾನಗಳು ಒಂದೇ ಪ್ರಾಂಗಣದಲ್ಲಿ ಇವೆ. ಈ ದೇವಾಲಯವು ಹೊಯ್ಸಳ ಮತ್ತು ದ್ರಾವಿಡ ಶೈಲಿಗಳಲ್ಲಿ ಇವೆ. ಇಲ್ಲಿನ ಕೆತ್ತನೆಗಳು ಬೇಲೂರು ಹಳೇಬೀಡಿನಷ್ಟು ಭವ್ಯವಾಗಿ ಇಲ್ಲದಿದ್ದರೂ ಅದನ್ನ ನೆನಪಿಗೆ ತರುವಷ್ಟು ಸುಂದರವಾಗಿದೆ. ಇಂದಿನ ನಮ್ಮ ಕರ್ನಾಟಕ ರಾಜ್ಯದ ಲಾಂಛನವಾದ ಗಂಡಭೇರುಂಡವು ನಾಯಕರ ಲಾಂಛನವಾಗಿತ್ತು ಹಾಗು ಇಲ್ಲಿಂದಲೀ ಅದನ್ನು ಅಳವಡಿಸಿಕೊಳ್ಳಲಾಗಿದೆ.(ಚಿತ್ರ ನೋಡಿ) ಅಲ್ಲಿಂದ ವಸ್ತು ಸಂಗ್ರಹಾಲಯಕ್ಕೆ ಹೋಗಿ, ಅಲ್ಲಿದ್ದ ಹಳೆಯ ಕಂಚು, ತಾಮ್ರ, ತಾಳೆ ಗರಿ ಬರಹಗಳು, ಆ ಕಾಲದ ಶಸ್ತ್ರಾಸ್ತ್ರಗಳು, ಪೋಷಾಕುಗಲು ಎಲ್ಲವನ್ನೂ ನೋಡಿದೆವು.

ಮತ್ತೆ ಸಾಗರಕ್ಕೆ ಬಂದು, ಚಿನ್ನುವಿನ ಅಣ್ಣ ಮೋಹನನನ್ನು ಭೇಟಿ ಮಾಡಿ, ಅವರ ಒಟ್ಟಿಗೆ ಹೊರಟೆವು. ಅವರು ನಮ್ಮ ಮಾರ್ಗದರ್ಶಕರಾಗಿ ಎಲ್ಲ ಸ್ಥಳಗಳನ್ನು, ಹೆಚ್ಚು ಸಮಯ ವ್ಯರ್ಥ ಮಾಡದ ರೀತಿಯಲ್ಲಿ ಪರಿಚಯಿಸಿದರು. ಸಾಗರದಿಂದ ಹೊರಟು ನಾವು ತಲುಪಿದ್ದು - ಹೆಗ್ಗೋಡು. ಒಬ್ಬ ಕನ್ನಡಿಗನಾಗಿ , ಕನ್ನಡ ನಾಡು, ನುಡಿ , ಸಂಸ್ಕೃತಿ ಬಗ್ಗೆ ಅಭಿಮಾನವುಳ್ಳವನಾಗಿ, ಹೆಗ್ಗೋಡಿಗೆ ಕಾಲು ಇತ್ತ ತಕ್ಷಣ ಮೈಯೆಲ್ಲ ಪುಳಕ ಗೊಂಡಿತು. ಕೆ.ವೀ ಸುಬ್ಬಣ್ಣ ನಂತಹ ಮಹಾನ್ ಚೇತನ ಹುಟ್ಟು ಹಾಕಿದ, ಸಾಕಿ ಸಲುಹಿದ ನೀನಾಸಮ್( ಶ್ರೀ ನೀಲಕಂಠೇಶ್ವರ ನಾಟ್ಯಸೇವಾ ಸಂಘ) ಕಂಡು ಒಂದು ಧನ್ಯಭಾವಕ್ಕೆ ಒಳಗಾದೆವು. ಅಲ್ಲಿನ ಪ್ರಾಂಶುಪಾಲರಾದ ಶ್ರೀ ಮಹಾಬಲೇಶ್ವರರು ನಿಗರ್ವಿ, ಮತ್ತು ಆತ್ಮೀಯ ಮನೋಭಾವನೆಯವರು. ಏನೂ ಅಲ್ಲದ ನಮಗೆ ಅವರು ಎಷ್ಟೊಂದು ಪ್ರೀತಿಯಿಂದ ಅಲ್ಲಿನ ಪ್ರತಿಯೊಂದು ವಿಚಾರದ ಬಗ್ಗೆ, ಪ್ರತಿಯೊಂದು ಜಾಗದ ಬಗ್ಗೆ ಪರಿಚಯ ಮಾಡಿಕೊಟ್ಟರು. ರ್‍ಅಜೆಯ ದಿನಗಳಾದ್ದರಿಂದ, ವಿದ್ಯಾರ್ಥಿಗಳು ಇರಲಿಲ್ಲ. ಇದ್ದಿದ್ದರೆ ಅವರು ಅಭ್ಯಾಸ ಮಾಡುವುದನ್ನು ನೋಡುವ ಸೌಭಾಗ್ಯ ನಮ್ಮದಾಗುತ್ತಿತ್ತು. ನಿಜವಾಗಿಯೂ ಅದರ ಅನುಭವವೇ ಅದ್ಭುತವಾಗಿರುತ್ತಿತ್ತು. ಆ ಕಾರಣಕ್ಕಾಗಿಯಾದರೂ ಮತ್ತೊಮ್ಮೆ ನೀನಾಸಮ್‍ಗೆ ಭೇಟಿ ನೀಡಬೇಕು! ನೀನಾಸಮ್ ನ ಕಛೇರಿ, ಅಭ್ಯಾಸ ಕೊಠಡಿ, ವಸತಿನಿಲಯ, ಬಯಲು ರಂಗಮಂದಿರ, ಶಿವರಾಮ ಕಾರಂತ ರಂಗಮಂದಿರ, ಗ್ರಂಥಾಲಯ, ಎಲ್ಲವನ್ನೂ ಸವಿಸ್ತಾರವಾಗಿ ಪರಿಚಯ ಮಾಡಿಕೊಡಲಾಯಿತು. ನಾವುಗಳೂ ಕೂಡ ಕೆಲವು ಪೋಷಾಕುಗಳನ್ನು ಹಾಕಿಕೊಂಡು ಸ್ವಲ್ಪ ಕಾಲ ಆ ವಾತಾವರಣಕ್ಕೆ ಹೊಂದಿಕೊಂಡು 'ಮಜಾ' ಮಾಡಿದೆವು (ಚಿತ್ರ ನೋಡಿ, ಅದರಲ್ಲೂ ಮುರಳಿ!? ಎಡಗಡೆಯಿಂದ). ಇಷ್ಟೆಲ್ಲ ಹೇಳುವಾಗ ಖಂಡಿತವಾಗಿ ಸುಬ್ಬಣ್ಣ ಅವರ ಬಗ್ಗೆ ಹೆಮ್ಮೆ ಮೂಡುತ್ತದೆ. ಹೆಗ್ಗೋಡಿನಂತಹ ಹಳ್ಳಿಯಲ್ಲಿ ಒಂದು ತಂಡ ಕಟ್ಟಿ, ಪ್ರತಿ ವರುಷ ಹೊಸ ವಿದ್ಯರ್ಥಿಗಳನ್ನ ಆರಿಸಿ, ತರಬೇತಿ ನೀಡಿ, ಅತ್ಯಂತ ಪ್ರಸಿದ್ಧಿ ಪದೆದಿರುವಂತಹ ನೀನಾಸಮ್ ತಿರುಗಾಟವನ್ನು ಪ್ರಾರಂಭಿಸಿದ, ಅದನ್ನು ನ್ಯಾಷನಲ್ ಸ್ಕೂಲ್ ಆಫ಼್ ಡ್ರಾಮ ದ ಮಟ್ಟಿಗೆ ಬೆಳೆಸಿದ ಕೀರ್ತಿಪುರುಷ ಸುಬ್ಬಣ್ಣ ಅವರಿಗೆ ನಮ್ಮ ನಮನಗಳು.

ಅನಂತರ ನಾವು ಚರಕ( ಖಾದಿ ಬಟ್ಟೆಗೆ ಪ್ರಸ್ಸಿದ್ಧಿ ಪಡೆದ ಊರು,. ಆದ್ಯಾಕೊ ನಾವು ಯಾರೂ ಅಲ್ಲಿ ಬಟ್ಟೆ ತೆಗೆದುಕೊಳ್ಳುವ ಬಗ್ಗೆ ಯೊಚಿಸಲೇ ಇಲ್ಲ) ಮೂಲಕ ವರದಾಮೂಲ ತಲುಪಿದಾಗ ಅಲ್ಲಿ ಜಾತ್ರೆ ನಡೆಯುತಿತ್ತು, ಸಣ್ಣ ಹಳ್ಳಿ, ಜನಕ್ಕೆ ದೇವರ ಮೇಲೆ ಇರುವ ಶ್ರದ್ಧೆಯನ್ನು ಆ ಜತ್ರೆ, ಜನಜಂಗುಳಿ ತೊರಿಸಿತು. ವರದ ನದಿಯ ಉಗಮಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ,. ನಾವು ಹೊರಟೆವು, ಇಕ್ಕೇರಿಯ ಕಡೆ.
(ಅಂದ ಹಾಗೆ, ವರದ ಮೂಲದಲ್ಲಿ ನಡೆದ ಮಾತುಕತೆ ಓದಿ.
ಅಜ್ಜ: ಮರಿ ನಿನ್ನ ಅಂಗಿಯ ಹಿಂದೆ ಸಂಖ್ಯೆ ಯಾಕೆ ಬರೆದಿದೆ?
ಮುರಳಿ: ಅದು ಪ್ರಸಿದ್ಧ Football ಪಟು Beckam ನ ಅಂಗಿ.
ಅಜ್ಜ: ಅವನ ಅಂಗಿ ನೀ ಯೇಕೆ ಹಾಕಿಕೊಂಡಿದ್ದೀಯಾ? ನಿನ್ನ ಅಂಗಿಗಳಿಲ್ಲವೆ?
ನಾವೆಲ್ಲರೂ: ಹ ಹ ಹ..
ಮುರಳಿ(ಸ್ವಗತ): ಘರ್ರ್!)

ಇಕ್ಕೆರಿ ಅಂದರೆ ಎರಡು ಕೆರಿ. ಇದೂ ಕೂಡ ಕೆಲವು ಸಮಯ ನಾಯಕರ ರಾಜಧಾನಿ ಅಗಿತ್ತು. ಅದರ ಬಗ್ಗೆ ಯವುದೇ ಕುರುಹುಗಳು ಇಲ್ಲದಿದ್ದರೂ, ಅಲ್ಲಿನ ಅಘೋರೇಶ್ವರ ದೇವಾಲಯ ಅಂದಿನ ಕಾಲದ ವೈಭವವನ್ನು, ಕುಶಲಕರ್ಮಿಗಳ ಚಾಕಚಕ್ಯತೆಯನ್ನು, ಕಲಾ ನೈಪುಣ್ಯತೆಯನ್ನು ಸಾರಿ ಹೇಳುವ ಮೂಕಸಾಕ್ಷಿಗಳಾಗಿ ಉಳಿದಿದೆ.

ಮಧ್ಯಾಹ್ನ ಸಾಗರಕ್ಕೆ ಬಂದು, ಊಟ ಮುಗಿಸಿದ ನಂತರ, ನಾವು ಹೊರಟಿದ್ದು, ನಮ್ಮ ನೆಚ್ಚಿನ, ಬಹಳ ಆಸೆ ಪಟ್ಟು ಬಂದಂತಹ ಲಿಂಗನಮಕ್ಕಿ ಜಲಾಶಯದ ಹಿನ್ನೀರಿಗೆ. ಆ ಜಲರಾಶಿಯ ತಟದಲ್ಲಿ ಸ್ವಲ್ಪ ಕಾಲ ಕಳೆಯಲು ಎಲ್ಲರ ಮನಸ್ಸೂ ಬಯಸುತ್ತಿತ್ತು. ಎಲ್ಲರ ಅಭಿಲಾಶೆಯನ್ನು ಅರಿತ ಮೊಹನರವರು ಹೊನ್ನೇಮರಡುವಿಗೆ ಹೊಗೋಣ, ದೋಣಿವಿಹಾರದ ಅವಕಾಶವೂ ಸಿಗಬಹುದು ಎಂಬ ಅಭಿಪ್ರಾಯ ಸೂಚಿಸಿದಾಗ ಎಲ್ಲರೂ ಹೂಗುಟ್ಟಿದೆವು. ತಾಳಗುಪ್ಪ ದಾಟಿ, ಮಹೇಶ್ ಎಂಬುವರನ್ನು ಜೊತೆಯಲ್ಲಿ ಕರೆದುಕೊಂದು ಹೊರಟೆವು. ಅಗೊ ನೋಡಿ ಆಗ ಬಂತು ಒಂದು ಕಲ್ಲು ಮಣ್ಣಿನ ದಾರಿ. ಪ್ರಾಯಶಃ ನಾವು ಆ ದಾರಿಯಲ್ಲಿ ಕ್ರಮಿಸಿದ್ದು ೧೦ ಕಿ ಮಿ ಅಷ್ಟೆ. ಆದರೆ ತೆಗೆದುಕೊಂಡ ಸಮಯ ಸುಮಾರು ೧ ಘಂಟೆ!! ಅಂತಹ ರಸ್ತೆಯಲ್ಲೂ ಎಲ್ಲೂ ತೊಂದರೆ ಕೊಡದೆ, ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋದ ನಮ್ಮ ಕಾರಿಗೆ ಹೃತ್ಪೂರ್ವಕ ಧನ್ಯವಾದಗಳು!! ಏಲ್ಲರಿಗೂ ಯಾವಾಗ ತಲುಪುತ್ತೀವಿ ಅನ್ನೋ ಬೇಸರ ಮೂಡಲು ಪ್ರಾರಂಭವಾಯಿತು. ಅಂತೂ ಇಂತೂ ಹೊನ್ನೆಮರಡಿಗೆ ತಲುಪಿದಾಗ ೫ ಘಂಟೆ ಆಗಿತ್ತು. ಆದರೆ ಅಲ್ಲಿ ನಮಗೆ ಕಂಡ ಮನೋಹರ ದೃಶ್ಯ, ಆ ನಮ್ಮ ನಿರುತ್ಸಾಹ, ಆಯಾಸವನ್ನು ಒಂದೇ ಕ್ಷಣದಲ್ಲಿ ಮರೆಯಾಗುವಂತೆ ಮಾಡಿತು. ಎಷ್ಟು ವಿಶಾಲವಾದ, ಅಗಾಧ ಜಲರಾಶಿ ನಡುವೆ ನಡುಗಡ್ಡೆಗಳು ಹಾಗು ದ್ವೀಪಗಳು. ದಡದಿಂದ ಒಂದು ಚೂರು ನೀರಿಗೆ ಬಂದರೆ ಅಲ್ಲಿ ೫೦-೬೦ ಅಡಿ ಆಳ!! ಕೆಲವು ಕಡೆ ೨೦೦ ಅಡಿಗೂ ಹೆಚ್ಚು!! ಮತ್ತೆ ಈ ಹಿನ್ನೀರಿನ ವಿಸ್ತಾರ ನಮ್ಮ ಕಲ್ಪನೆಗೂ ಮೀರಿದ್ದು. ನಿಜ ಅರ್ಥದಲ್ಲಿ ಮನಸನ್ನು ಆಹ್ಲಾದಗೊಳಿಸುವ ಜಾಗ. ಏಲ್ಲೂ ಕಸದ ರಾಶಿ ಇರದ, ಅತ್ಯಂತ ಅಚ್ಚುಕಟ್ಟಾದ ನಿರ್ಮಲ ಪ್ರದೇಶ. ಆ ಹೊಳೆವ ನೀಲಿ ನೀರಿನಲ್ಲಿ ಎಲ್ಲರೂ ಮೈಮರೆತು ಹೋದೆವು. ಕೆಲ ಕಾಲ ಮೌನವೆ ಮಾತಾಯಿತು.ಮಹೇಶ್ ಅವರ ನೆರವಿನಿಂದ, ಪರಿಚಯದಿಂದ, ಅಲ್ಲಿ ನಮಗೆ ದೋಣಿ ವಿಹಾರ ಮಾಡುವ ಅವಕಾಶ ಒದಗಿಬಂತು. ಇಲ್ಲಿನ ಇನ್ನೊಂದು ಆಕರ್ಷಣೆ ದ್ವೀಪದಲ್ಲಿ ಒಂದು ರಾತ್ರಿ ಕಳೆಯುವುದು!! ನಮ್ಮನ್ನು ಸಂಜೆ ಹೊತ್ತಿಗೆ ದೋಣಿಯಲ್ಲಿ ಕರೆದುಕೊಂಡು ಹೋಗಿ ಒಂದು ದ್ವೀಪದಲ್ಲಿ ಬಿಟ್ಟು ಬರುತ್ತಾರೆ,.. ಆ ರಾತ್ರಿ ನಾವು ಎಲ್ಲ ರೀತಿಯ ನಾಗರಿಕತೆಯಿಂದ ದೂರವಾಗಿ, ಪ್ರಕೃತಿಯ ಮಡಿಲಲ್ಲಿ ನಲಿದಾಡ ಬಹುದು,. ಈ ಬಾರಿ ಅವಕಾಶ ತಪ್ಪಿ ಹೋದರೂ, ಖಂಡಿತವಾಗಿ ಇನ್ನೊಮ್ಮೆ ಇಲ್ಲಿಗೆ ಬರಬೇಕೆಂದು ಅಲ್ಲೇ ಆಗಲೇ ಎಲ್ಲರೂ ತೀರ್ಮಾನಿಸಿಬಿಟ್ಟೆವು!! ಆ ಪ್ರವಾಸ ಅತಿ ಅಗ್ಗ ಕೂಡ! ಬೆಂಗಳೂರಿನಲ್ಲಿ ಅದರ ವ್ಯವಸ್ಥಾಪಕರಿದ್ದಾರೆ. ಹೆಚ್ಚು ಮಾಹಿತಿಗಾಗಿ: http://www.dreamroutes.org/dreams/nithin_honnemardu.html

ಈ ಅನುಭವವೇ ನಮ್ಮನ್ನು ಧನ್ಯೋಸ್ಮಿ ಅಂತ ಹೇಳುವ ಹಾಗೆ ಮಾಡಿತ್ತು. ಆದರೆ ಮಹೇಶ್ ಅವರ ಬಳಿ ಇನ್ನೂ ಉತ್ತಮವಾದ, ಪದಪುಂಜಕ್ಕೇ ಸಿಗದ ಅನುಭವ ಕೊಡುವ ಇನ್ನೂ ಒಂದು ಚಿಕ್ಕ ಪರ್ಯಟನೆ ಇತ್ತು. ಅದರ ಪ್ರಕಾರ ನಾವು ಅಲ್ಲಿ ಇದ್ದ ಒಂದು ಬೆಟ್ಟವನ್ನು ಹತ್ತಿದೆವು. ಒಂದು ಕಡೆ ದಟ್ಟ ಅರಣ್ಯ, ಮತ್ತೊಂದು ದಿಕ್ಕಿನಲ್ಲಿ ಲಿಂಗನಮಕ್ಕಿ ಅಣೆಕಟ್ಟು, ಮಿಕ್ಕೆಲ್ಲ ಕಡೆ ದಿಗಂತದ ಜೊತೆಗೂಡುವ, ಸಮುದ್ರಕ್ಕೂ ತನ್ನ ಸೌಮ್ಯ ಸ್ವಭಾವದಿಂದ ನಾಚಿಕೆ ತರಿಸುವ ಜಲಸಂಪತ್ತು. ಇದರ ನಡುವೆ, ಸಂಜೆಯಾಗುತ್ತಾ ಸೂರ್ಯ ಮುಳುಗಲು ಪ್ರಾರಂಭಿಸಿದಾಗ ಎಲ್ಲರೂ ಪುಳಕ ಗೊಂಡೆವು. ಅಂತಹ ರಮ್ಯ ಚಿತ್ರ ನಮ್ಮ ಮುಂದೆ ಮೂಡಿತು. ಆಗುಂಬೆಯಲ್ಲಿ ಆದ ಬೇಸರವನ್ನು, ಹೊನ್ನೆಮರಡು ಮರೆಮಾಚಿಸಿ, ಅದಕ್ಕಿಂತ ಸುಂದರವಾದ ಸುರ್ಯಾಸ್ತಕ್ಕೆ ನಮ್ಮನ್ನು ಕರೆದೊಯ್ತು. ವರ್ಷದ ಕೊನೆಯ ಸುರ್ಯಾಸ್ತವನ್ನು ನಿಜ ಪ್ರ್‍ಅಕೃತಿಯಲ್ಲಿ ನೋಡುವ, ಅದನ್ನು ಸೆರೆಹಿಡಿಯುವ ಭಾಗ್ಯ ನಮ್ಮದಾಯಿತು. ವರ್ಷದ ಕೊನೆಯ ಸುರ್ಯಾಸ್ತದ ಇಂತಹ ಸುಂದರ minute by minute ದೃಶ್ಯಾವಳಿ ಸೆರೆ ಹಿಡಿಯಲು ನಮಗೆ ಅವಕಾಶ ಸಿಗುವುದು ಅಂತ ನಾವು ಕಲ್ಪನೆಯೇ ಮಾಡಿಕೊಂಡಿರಲಿಲ್ಲ. ಚಿತ್ರಗಳನ್ನು ನೋಡಿದಾಗ ಆ ಸುಂದರ ದೃಶ್ಯಗಳ ನೆನಪು, ಬೆಳಗಿನ ನೇಸರ ಮೂಡುವಷ್ಟು ಬೆಳಕು ಬೆಳಕಾಗಿಯೇ ಬರುತ್ತದೆ. ಇದೆಲ್ಲದರ ನಡುವೆ ಒಂದು ಯೋಚನಾಲಹರಿಗೆ ನಾನು ಒಳಪಟ್ಟೆ. ಒಂದು ರಾಜ್ಯದ ಸುಖಕ್ಕಾಗಿ, ನೆಮ್ಮದಿಗಾಗಿ, ಪ್ರಗತಿಗಾಗಿ ತಮ್ಮ ಎಲ್ಲವನ್ನು ಬಲಿ ಕೊಟ್ಟ ಇಲ್ಲಿಯ ಜನರಿಗೆ ನನ್ನ ತಲೆ ಬಾಗಿತು. ಅವರ ನಿಸ್ವಾರ್ಥ ತ್ಯಾಗ ಮನೋಭಾವ ಬಹಳ ದೊಡ್ಡದು. ಹೆಸರೇ ಇಲ್ಲದ ಆ ಎಲ್ಲ ಜನರಿಗೂ ನಮ್ಮ ಅನಂತ ಅನಂತ ನಮನಗಳು. ಆನಂತರ ಅಲ್ಲೇ ಸ್ವಲ್ಪ ಹೊತ್ತು ಇದ್ದು, ಕಡಿದಾದ ಹಾಗು ಇಳಿದಾದ ಆ ಬೆಟ್ಟವನ್ನು ಎಚ್ಚರವಾಗಿ ಇಳಿದೆವು.

ಮತ್ತೆ ಆ ಕಲ್ಲುಮಣ್ಣಿನ ರಸ್ತೆಯಲ್ಲಿ ಮಹೇಶ್ ಅವರ ಮನೆ ತಲುಪಿದೆವು. ಅವರ ಆದರಾತಿಥ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನಾವು ಸಂಪೂರ್ಣ ಅಪರಿಚಿತರಾಗಿದ್ದರೂ, ತಮ್ಮ ಮನೆಗೆ (ತಮ್ಮ ಊರಿಗೆ!) ಬಂದಿರುವ ಅತಿಥಿಗಳ ಸತ್ಕಾರದಲ್ಲಿ ಎಲ್ಲಿ ಲೋಪ ಉಂಟಾಗುವುದೋ ಅನ್ನುವ ಕಾಳಜಿಯಿಂದ ಪ್ರೇರಿತರಾಗಿ ನಮಗೆ ಕಾಫಿ ಮತ್ತು ಚಿಪ್ಸ್ ಕೊಟ್ಟು ಉಪಚರಿಸಿದರು. ಉಪಚರಿಸಿದರು? ಅಲ್ಲಿದ್ದ ಅಜ್ಜಿ ಒಬ್ಬರು ನಾವು ಚಿಪ್ಸ್ ತೆಗೆದುಕೊಳ್ಳುವುದರಲ್ಲಿ ನಾಚಿಕೆ ಪಡುತ್ತಿದ್ದಿದ್ದನ್ನು ನೋಡಿ 'ಬೇಗ ತಿಂದು ಖಾಲಿ ಮಾಡ್ರೆಲಾ ಮತ್ತೆ! ಆಗ್ಲಿಂದ ನೋಡ್ತಿದೀನಿ ಏನೂ ಮುಟ್ಟೇ ಇಲ್ಲ!!?' ಎಂದು ಬಯ್ದೇ ಬಿಡುವುದೇ!? ~_~ 'ಹಳೆಯ ಮನೆ ನೋಡಿ ಬನ್ನಿ!!' ಎಂದು ನಮ್ಮನ್ನು ಅವರ ದೊಡ್ಡದಾದ ಮನೆಯಲ್ಲೆಲ್ಲಾ ಓಡಾಡಿಸಿದರು. 'ಖಂಡಿತ ಮತ್ತೊಮ್ಮೆ ಬನ್ನಿ' ಎಂದು ನಗು ನಗುತ್ತಾ ಕಳುಹಿಸಿಕೊಟ್ಟರು. ಎಂಥಾ ನಿಸ್ವಾರ್ಥ ಜನ! ಹೊಸಬರ ಮೇಲೆ ಶಂಕೆಯೇ ಇಲ್ಲ!? (ಅವರಿಗೂ ನಮ್ಮ ಬೆಂಗಳೂರಿನ ಜನಕ್ಕೂ ಬೇಡ ಬೇಡವೆಂದುಕೊಂಡರೂ ಮನಸ್ಸು ಹೋಲಿಸಿ ನೋಡಿತು) ಅಲ್ಲಿಂದ ಹೊರಟು, ಚಿನ್ನು ತಾತ ಮತ್ತು ಅಣ್ಣನನ್ನು ಬೀಳ್ಕೊಟ್ಟು, ನಾವೆಲ್ಲರೂ ಶಿವಮೊಗ್ಗದ ಹಾದಿ ಹಿಡಿದೆವು. ಶಿವಮೊಗ್ಗದಲ್ಲಿ ರಾತ್ರಿ ಊಟ ಮುಗಿಸಿ, ಹೊಸವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡೆವು.

ಹೊಸವರ್ಷದ ಮೊದಲ ದಿನ ನಾವು ಹೊರಟಿದ್ದು ಕಾಡಿನೆಡೆಗೆ, ಅಲ್ಲಿನ ಒಂದು ಬೃಹತ್ ಶಕ್ತಿಯ ಆಟ, ಪಾಟವನ್ನು ನೋಡಲು. ಹೌದು, ಸಕ್ಕರೆಬೈಲು ಎಂಬಲ್ಲಿ, ಆನೆ ತಾಣವಿದೆ. ಆಲ್ಲಿ ಪ್ರತಿದಿನ ಬೆಳಿಗ್ಗೆ, ಆನೆಗಳು ಕಾಡಿನಿಂದ ಬಂದು, ತುಂಗೆಯಲ್ಲಿ ಮಿಂದು, ಆಟವಾಡಿ, ವಿವಿಧ ಪಾಠಗಳನ್ನು ಕಲಿತು, ಕೆಲಸ ಮಾಡುತ್ತವೆ. ಬೆಳಿಗ್ಗೆ ೮ ರಿಂದ ೧೦ ರೊಳಗೆ ಈ ಆನೆಗಳನ್ನು ಪ್ರವಾಸಿಗಳು ನೋಡಬಹುದು. ಈ ಸ್ಥಳಕ್ಕೆ ಬರುವ ಪ್ರವಾಸಿಗಳಲ್ಲಿ ವಿದೇಶಿಯರೇ ಹೆಚ್ಚು! ನಾವಾದರೋ 'ಓಹ್ ಆನೆ ಸ್ನಾನ ಮಾಡುತ್ತಿದೆ. ಸರಿಯಪ್ಪಾ' ಅಂತ ಅಂದುಕೊಳ್ಳುತ್ತೇವೆ. ಆದರೆ ಹೆಚ್ಚಾಗಿ ಈ ರೀತಿ ಹತ್ತಿರದಲ್ಲಿ ಆನೆಗಳನ್ನು ನೋಡುವ ಅವಕಾಶವಿಲ್ಲದಿರುವ ವಿದೇಶಿಗಳಿಗೆ ಇದು ಸ್ವರ್ಗ. 'Ohh!!! Look - an elephant!!!!' :-) ಸುಮಾರು ೨೫ ಆನೆಗಳು ಇಲ್ಲಿ ವಾಸ್ತವ ಹೂಡಿದ್ದಾವೆ, ಆದರೆ ಅಂದು ಸುಮಾರು ೧೦ ಆನೆಗಳು ಮಾತ್ರ ಅಲ್ಲಿದ್ದವು. ಒಂದೊಂದಾಗಿ ನೀರಿಗೆ ಇಳಿದು, ಮನಸೂಇಚ್ಚೆ ಸ್ವಛ್ಛಂದವಾಗಿ ಆಟವಾದಿ, ನಮ್ಮ ಕೈಯಲ್ಲೂ ಬೆನ್ನು ಉಜ್ಜಿಸಿಕೊಂಡು ಸಂತೋಷ ಪಟ್ಟವು!! ಆನೆಗಳ ರಾಜಗಾಂಭೀರ್ಯ, ಮರಿ ಆನೆಯ ಪುಂಡಾಟಗಳು ಎಲ್ಲವನ್ನೂ ನೋಡಿ ನಾವುಗಳೂ ಕೂಡ ಸಂಭ್ರಮ ಪಟ್ಟೆವು. ಆವನ್ನು ಪಳಗಿಸುವ ಮತ್ತು ಪಾಟ ಹೇಳಿಕೊಡುವ ಜಾಗಗಳನ್ನು ನೋಡಿ ಅಲ್ಲಿಂದ ಹೊರಟೆವು. ಮತ್ತೆ ಸಿಂಹಧಾಮಕ್ಕೆ ಹೋಗಲು ಬೇಡವೆನಿಸಿ, ಸ್ವಲ್ಪ ವಿಶ್ರಾಂತಿ ಅಗತ್ಯವೆನಿಸಿ, ಮಿಕ್ಕ ಸಮಯ ಹಾಗೇ ಕಳೆದೆವು.

ನಿಜ, ಶಿವಮೊಗ್ಗದಲ್ಲಿ ಕೆಲವು ಜಾಗ ನೋಡಬಹುದಾಗಿತ್ತು, ಆದರೂ ನಾವು ನೋಡಿದ ಜಾಗಗಳು ನೋಡದ ಜಾಗದ ಸಂತೋಷವನ್ನೂ ಸೇರಿಸಿ ಕೊಟ್ಟಿದ್ದವು. ಮಧ್ಯಾಹ್ನ ಹೊರಟು, ರಾತ್ರಿವೇಳೆಗೆ ಬೆಂಗಳೂರು ತಲುಪಿದೆವು. ತುಮಕೂರಿನ ಹತ್ತಿರ ಕಾಮತ್ ಉಪಚಾರ್‌ನಲ್ಲಿ ರುಚಿಯಾದ ಊಟವನ್ನು ಎಲ್ಲರೂ ಮುಗಿಸಿದ ಮೇಲೆ, ಮೋಹನರವರು ಇನ್ನೇನು ಕುಳಿತಕಡೆಯೇ ನಿದ್ರೆ ಬೀಳಲಿರುವ ನಮ್ಮೆಲ್ಲರನ್ನು ಮನೆಗೆ ಬಿಟ್ಟರು. ಹೀಗೆ ಒಂದು ಪ್ರವಾಸವು ಕೊನೆಗೊಂಡಿತು.

ಹೊಸ ವರ್ಷವನ್ನು ಹೊಸ ರೀತಿಯಲ್ಲಿ ಬರ ಮಾಡಿಕೊಂದಿದ್ದು, ನಗರ ಜೀವನವನ್ನು ಮರೆತು ಕಳೆದ ಆ ೩ ದಿನಗಳು ಅವಿಸ್ಮರಣೀಯವಾಗಿತ್ತು. ಮೂರೆ ದಿನದಲ್ಲಿ ನಿಸರ್ಗ, ನದಿ, ಗುಡ್ಡಗಾಡು,ಮಲೆನಾಡು, ಬಯಲುಸೀಮೆ ಪ್ರದೇಶಗಳು, ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ, ಮನೋರಂಜನಾತ್ಮಕ ಸ್ಥಳಗಳು, ಚಾರಣ, ಪ್ರಯಾಣ, ನೆಮ್ಮದಿ ಕಂಡಂತಹ ಆಹ್ಲಾದಕರ ಪ್ರವಾಸವಾಗಿತ್ತು!!

ಈ ಎಲ್ಲ ದಿನಗಳಂದು ತುಂಬುಹೃದಯದಿಂದ ಸಹಕರಿಸಿದ ಎಲ್ಲ ಗೆಳೆಯರಿಗೂ ನನ್ನ ಕೃತಜ್ನತೆಗಳು. ಮತ್ತು ಇದನ್ನು ಬರೆಯಲು ಪ್ರೇರೆಪಿಸಿದ ಪ್ರದೀಪ್ ಗೂ ವಂದನೆಗಳು.

ಇನ್ನೊಂದು ಮಾತು- ನಮ್ಮ ಕನ್ನಡ ನಾಡು ಎಷ್ಟೊಂದು ಸಂಪದ್ಭರಿತವಾಗಿದೆ. ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಈ ಎಲ್ಲ ತಾಣಗಳನ್ನು ಎಲ್ಲ ರೀತಿಯಿಂದಲೂ ಅಭಿವೃದ್ಧಿಗೊಳಿಸಿ, ಜಾಗತಿಕ ಮಟ್ಟದಲ್ಲಿ ಇವಕ್ಕೆ ಪ್ರಚಾರ ಕೊಟ್ಟು (ಕೇರಳದಿಂದ ಇದನ್ನು ನಾವು ಕಲಿಯಬೇಕು), ಈ ಎಲ್ಲ ಭೂಭಾಗಗಳು ಹೆಚ್ಚಿನ ಪ್ರವಾಸಿಗರನ್ನು, ಪ್ರಶಂಸಕರನ್ನು ಕಾಣಲಿ ಎಂದು ಆಶಿಸೋಣ..

ಮೋಹನ
ಮಧುಸೂದನ.