ರಜತೋತ್ಸವ ಭಾಗ ೪

ರಜತೋತ್ಸವ ಭಾಗ ೪

ಭಾಗ - ೪

ಮರು ದಿನ ಅಂದರೆ ಎರಡನೆಯ ದಿನ ಕೆಲಸ ಸ್ವಲ್ಪ ಸುಲಭವಾಗಿತ್ತು. ಅಂದು ಸಮಯಕ್ಕೆ ಸರಿಯಾಗಿ ಊಟಕ್ಕೆ ಹೋಗಿದ್ದೆವು ಮತ್ತು ಸಂಜೆ ೫ ಘಂಟೆಗೆ ಸರಿಯಾಗಿ ಕೆಲಸವೂ ಮುಗಿದಿತ್ತು.

ಫೆಬ್ರವರಿ ತಿಂಗಳ ೨೬ಕ್ಕೆ ನಮಗೆ ಮೊದಲ ಸಂಬಳ ದೊರಕಿತು. ಆ ಸಮಯದಲ್ಲಿ ನಮಗೆ ಪೇ ಸ್ಲಿಪ್ ಎಂದು ಸಂಬಳದ ವಿವರವಿರುವ ಒಂದು ಪತ್ರ ಕೊಡುವರು. ಅಂದು ನಮ್ಮ ನಮ್ಮ ವಿಭಾಗಗಳಲ್ಲಿ ಪೇ ಸ್ಲಿಪ್ ಅನ್ನು ಕೊಟ್ಟಿದ್ದರು. ಆಗ ನನ್ನ ಸ್ನೇಹಿತ ಗಣೇಶ ಹೇಳಿದ ಮಾತುಗಳು ನನಗಿನ್ನೂ ನೆನಪಿದೆ. ' ಈ ಪೇ ಸ್ಲಿಪ್ ಅನ್ನು ಭದ್ರವಾಗಿಟ್ಟುಕೊಳ್ರಪ್ಪ - ಇನ್ನು ನಮ್ಮ ಸರ್ವೀಸ್‍ನಲ್ಲಿ ಇಂತಹ ಪೇ ಸ್ಲಿಪ್ ಸಿಗೋದಿಲ್ಲ', ಎಂದು. ಏಕೆ ಹೇಳಿದ್ದ ಗೊತ್ತೇ? ಅದರಲ್ಲಿ ಏನೊಂದೂ ಕಡಿತವಿರಲಿಲ್ಲ. ಎರಡನೆಯ ತಿಂಗಳಿಂದ ಪ್ರಾವಿಡೆಂಟ್ ಫಂಡ್ ಕಡಿತ ಪ್ರಾರಂಭವಾಗಿತ್ತು. ಇದು ಸೇವೆಯಲ್ಲಿರುವವರೆವಿಗೆ ಇದ್ದೇ ಇರುತ್ತದೆ. ಗಣೇಶನ ಮಾತುಗಳು ಇಂದಿಗೂ ಕಿವಿಯಲ್ಲಿ ಧ್ವನಿಗುಡುತ್ತಲೇ ಇರುತ್ತದೆ.

ಸ್ವಲ್ಪ ದಿನಗಳಲ್ಲೇ ನಾವುಗಳು ಕ್ಯಾಷ್ ಡಿಪಾರ್ಟ್‍ಮೆಂಟಿನಲ್ಲಿ ಕೆಲಸ ಕಲಿತು ಹಳಬರಾಗಿದ್ದೆವು. ೫-೬ ತಿಂಗಳುಗಳು ಕಳೆಯುವುದರೊಳಗೆ ನಮಗೆ ಕೆಲಸ ಚೆನ್ನಾಗಿ ಮಾಡಲು ಬರುತ್ತಿದ್ದು ಮತ್ತೆ ಮತ್ತೆ ಅದೇ ಕೆಲಸವನ್ನು ಮಾಡುವುದು ಸ್ವಲ್ಪ ಬೋರ್ ಎನ್ನಿಸುತ್ತಿತ್ತು. ಆದರೆ ೩ ತಿಂಗಳಿಗೊಮ್ಮೆ ಬೇರೆ ಬೇರೆ ಸೆಕ್ಷನ್ನುಗಳಿಗೆ ಬದಲಿಸುತ್ತಿದ್ದುದರಿಂದ ಹಿರಿಯರೊಂದಿಗೆ ಬೆರೆತು ಹೆಚ್ಚಿನ ವಿಷಯಗಳನ್ನು ಕಲಿಯುವಂತಾಗಿತ್ತು.

ಮೊದಲ ತಿಂಗಳ ಸಂಬಳ ಬಂದ ಮೇಲೆ ಹಾಸ್ಟೆಲ್‍ನಲ್ಲಿ ಇರುವುದು ಸರಿ ಇರುವುದಿಲ್ಲವೆಂದು ಮಲ್ಲೇಶ್ವರದ ೧೮ನೇ ಕ್ರಾಸಿನಲ್ಲಿರುವ ಗಣೇಶ ಭವನದಲ್ಲಿ ರೂಮು ಮಾಡಿದ್ದೆ. ಆದರೂ ಪ್ರತಿ ಶನಿವಾರ ಹಾಸ್ಟೆಲ್‍ಗೆ ಹೋಗ್ತಿದ್ದೆ. ಅಷ್ಟು ವರ್ಷಗಳು ಅಲ್ಲಿದ್ದು ಇದ್ದಕ್ಕಿದ್ದಂತೆ ಅಲ್ಲಿಗೆ ಹೋಗದಿರಲು ಮನಸ್ಸಾಗುತ್ತಿರಲಿಲ್ಲ. ಮತ್ತು ಅಲ್ಲಿನ ಸ್ನೇಹಿತರುಗಳಿಗೆ ಸ್ವಲ್ಪ ಮೋಜು ಮಾಡುವ ಮನಸ್ಸಾಗುತ್ತಿದ್ದು (ಯಾವಾಗಲೂ ಸ್ಟ್ರಿಕ್ಟ್ ಆಗಿ ಇರುತ್ತಿದ್ದ ಹಾಸ್ಟೆಲ್), ನಾನು ಹೋದಾಗಲೆಲ್ಲ ಸಿನೆಮಾಗೆ ಹೋಗೋಣ ಹೊಟೆಲ್‍ಗೆ ಹೋಗೋಣ ಎನ್ನುತ್ತಿದ್ದರು. ಹೇಗಿದ್ದರೂ ನನ್ನಲ್ಲಿ ಹಣವಿದ್ದು, ಅವರುಗಳೊಂದಿಗೆ ಖರ್ಚು ಮಾಡುವುದು ಅವರಿಗೆ ಸಂತಸದ ವಿಷಯವಾಗಿತ್ತು. ಅಲ್ಲಿನ ಸ್ನೇಹಿತರುಗಳು ಯಾರು ಎಂದರೆ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದ ಗಿರಿಶೇಖರ ಕಲ್ಕೂರ, ಬದರೀನಾಥ, ಡೆಂಟಲ್ ಓದುತ್ತಿದ್ದ ಬದರಿಯ ತಮ್ಮ (ಹೆಸರು ನೆನಪಿಗೆ ಬರ್ತಿಲ್ಲ), ಬಿಎಸ್‍ಸಿ ಓದುತ್ತಿದ್ದ ಪುಟ್ಟ (ಅವನ ನಿಜವಾದ ಹೆಸರು ಮರೆತಿರುವೆ), ಐ.ಸಿ.ಡಬ್ಲ್ಯು.ಏ ಓದುತ್ತಿದ್ದ ಪೂರ್ಣಚಂದ್ರ ಭಟ್ಟ, ರಾಜಾರಾಮ ಹೆಗಡೆ, ಸಿಎ ಮಾಡುತ್ತಿದ್ದ ಮಂಜುನಾಥ ಹೆಗಡೆ. ಪ್ರತಿ ಶನಿವಾರ ರಾತ್ರಿ ಷೋಗೆ ಸಿನೆಮಾಗೆ ಹೋಗ್ತಿದ್ದೆವು. ಆಗಾಗ ಗಾಂಧಿಬಜಾರಿನ ವಿದ್ಯಾರ್ಥಿ ಭವನಕ್ಕೆ ತಿಂಡಿ ತಿನ್ನಲು ಹೋಗುತ್ತಿದ್ದೆವು. ಸ್ವಲ್ಪ ಸಮಯಗಳ ನಂತರ ಏನೋ ಗಲಾಟೆ ಆಗಿ ಹಾಸ್ಟೆಲ್ ಅನ್ನು ಮುಚ್ಚಿಬಿಟ್ಟರು. ಈಗ ಹಾಸ್ಟೆಲ್ ಇಲ್ಲ. ಒಮ್ಮೆಯಂತೂ ಹಿಂದಿ ಚಲನಚಿತ್ರ ಪಡೋಸನ್ ಅನ್ನು ಒಂದೇ ವಾರದಲ್ಲಿ ನಾಲ್ಕು ಬಾರಿ ನೋಡಿದ್ದೆವು. ಹಾಗೇ ಮಧುಮತಿ ಚಿತ್ರಕ್ಕೆ ಒಬ್ಬೊಬ್ಬರು ಒಂದೊಂದು ಸಲ ನನ್ನ ಜೊತೆ ಬಂದಿದ್ದು ಅದನ್ನೂ ೫ ಬಾರಿ ನೋಡಿದ್ದೆ.

ಮಲ್ಲೇಶ್ವರದ ಗಣೇಶ ಭವನದಲ್ಲಿ ವಾಸವಿದ್ದರೂ, ಹೆಚ್ಚಿನ ಸಮಯವೆಲ್ಲಾ ಬಸವನಗುಡಿಯಲ್ಲೇ ಕಳೆಯುತ್ತಿದ್ದೆ. ಆಗ ನನ್ನೊಡನೆ ಐ.ಸಿ.ಡಬ್ಲ್ಯು.ಏ ಮಾಡುತ್ತಿದ್ದ ಕೆನರಾ ಬ್ಯಾಂಕ್ ಉದ್ಯೋಗಿ ಎಸ್.ಆರ್. ಹೆಗಡೆ, ಅವನೊಡನೆ ಅವನ ಮನೆಗೆ ಬಂದಿರಲು ಹೇಳಿದ. ಅವನ ಮನೆ ಇದ್ದದ್ದು ಎನ್.ಆರ್.ಕಾಲೋನಿಯಲ್ಲಿ. ಅವನೊಡನಿದ್ದ ಅವನ ಇನ್ನೊಬ್ಬ ಸ್ನೇಹಿತ (ಇಂಡಿಯನ್ ಆಯಿಲ್‍ನಲ್ಲಿ ಎಂಜಿನಿಯರ್) ವರ್ಗವಾಗಿ ಬೇರೆಯ ಊರಿಗೆ ಹೊರಟಿದ್ದ. ಅಲ್ಲಿ ಸ್ವಲ್ಪ ದಿನಗಳಿದ್ದೆ.

ಒಂದೆರಡು ತಿಂಗಳುಗಳಲ್ಲಿ ನನ್ನ ಕಾಲೇಜಿನ ಸಹಪಾಠಿ ಮತ್ತು ನಿಕಟ ಸ್ನೇಹಿತನಾಗಿದ್ದ ಮನೋಹರ ಶರ್ಮನಿಗೆ ಬಹಳ ಕಡಿಮೆ ಬಾಡಿಗೆಗೆ (ತಿಂಗಳಿಗೆ ರೂ. ೧೨೦/-) ಒಂದು ಮನೆ ಸಿಕ್ಕಿತ್ತು. ಖಾಸಗೀ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ಅಷ್ಟು ಹಣ ಕೊಡಲು ಸಾಧ್ಯವಿರಲಿಲ್ಲ. ನನಗೆ ಆ ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳಲು ಹೇಳಿದ. ವಿಶ್ವೇಶ್ವರಪುರದ ಜೈನ್ ದೇವಸ್ಥಾನದ ಬೀದಿಯಲ್ಲಿ ಆ ಮನೆಗೆ ಹೋಗಿದ್ದೆ. ಆಗಲೇ ಹೊಸ ಕುಕ್ಕರ್ ಮತ್ತು ಗ್ಯಾಸ್ ಕನೆಕ್ಷನ್ ತೆಗೆದುಕೊಂಡಿದ್ದೆ. ರೇಷನ್ ಕಾರ್ಡ್ ಕೂಡಾ ಮಾಡಿಸಿದ್ದು ಆಗಲೇ. ಒಂದು ರೀತಿಯಲ್ಲಿ ಸಂಸಾರ ಹೂಡಲು ಸಂಪೂರ್ಣವಾಗಿ ಸಜ್ಜಾಗಿದ್ದೆ. ನಾನು ಮತ್ತು ನನ್ನ ಸ್ನೇಹಿತ ಪ್ರತಿದಿನವೂ ಬೆಳಗ್ಗೆ ಸಂಜೆ ಅಡುಗೆ ಮಾಡುತ್ತಿದ್ದೆವು.

ಒಂದು ದಿನ ಊಟ ಮಾಡುತ್ತಿದ್ದಾಗ ಮೆದುಳಿಗೆ ಷಾಕ್ ತಗುಲಿದ ಹಾಗಾಯಿತು. ಸಾವರಿಸಿಕೊಳ್ಳಲು ಎರಡು ನಿಮಿಷಗಳೇ ಬೇಕಾಯಿತು. ಮುಂದೆ ಅನ್ನವನ್ನು ಬಾಯೊಳಗೆ ಇಡಲಾಗುತ್ತಿರಲಿಲ್ಲ. ದವಡೆಯಲ್ಲಿ ಬಹಳ ನೋವು ಕಾಣಿಸಿಕೊಂಡಿತು. ಹಾಗೆಯೇ ದವಡೆ ಬುರ್ರನೆ ಪೂರಿಯಂತೆ ಉಬ್ಬತೊಡಗಿತು. ನನ್ನ ಸ್ನೇಹಿತ ಶರ್ಮನಿಗೆ ತಿಳಿಸಿದೆ. ಊಟವನ್ನು ಅಷ್ಟಕ್ಕೇ ಬಿಟ್ಟು ತಕ್ಷಣ ಹತ್ತಿರದ ಹಲ್ಲಿನ ವೈದ್ಯರ ಹತ್ತಿರಕ್ಕೆ ಓಡಿದ್ದೆವು. ವೈದ್ಯರು ಹೇಳಿದ್ದು, ಒಂದು ದವಡೆ ಹಲ್ಲು ಹುಳುಕಾಗಿದೆಯೆಂದೂ ತಕ್ಷಣ ಸಿಮೆಂಟ್ ತುಂಬಬೇಕೆಂದೂ. ತಕ್ಷಣವೇ ಅದಾಗಬೇಕೆಂದಿದ್ದರು. ಸರಿ ಎಂದು ಅವರಿಂದಲೇ ಅಲ್ಲೇ ಸಿಮೆಂಟು ತುಂಬಿಸಿದೆ. ಸ್ವಲ್ಪ ದಿನಗಳು ಏನೂ ತೊಂದರೆ ಇರಲಿಲ್ಲ.

ಅಂದೊಂದು ಭಾನುವಾರ ಬೂದುಗುಂಬಳಕಾಯಿ ಕಡಲೆಕಾಳು ಹಾಕಿ ಹುಳಿ ಮಾಡಿದ್ದೆವು. ಮಧ್ಯಾಹ್ನ ಬಹಳ ಖುಷಿಯಾಗಿ ಊಟ ಮಾಡ್ತಿದ್ದಾಗ ಹಲ್ಲಿಗೆ ದಪ್ಪದಾದ ಕಲ್ಲು ಸಿಕ್ಕಿ ಕೊಂಡಂತಾಯ್ತು. ಏನೂ ಅಂತ ನೋಡಿದರೆ, ಅದು ಹಲ್ಲಿಗೆ ತುಂಬಿದ್ದ ಸಿಮೆಂಟು. ತಕ್ಷಣ ವೈದ್ಯರ ಬಳಿಗೆ ಮತ್ತೆ ಓಡಿದ್ದೆ. ಆಗ ಅವರು ಸಿಮೆಂಟು ಸರಿಯಾಗಿ ಹೊಂದಿಕೆ ಆಗ್ತಿಲ್ಲ ಎಂದು ಸಿಲ್ವರ್ ಫಿಲ್ಲಿಂಗ್ ಮಾಡಿದ್ದರು.

Rating
No votes yet