'ಅಣ್ಣನ ನೆನಪು', 'ಹಸುರು ಹೊನ್ನು'

'ಅಣ್ಣನ ನೆನಪು', 'ಹಸುರು ಹೊನ್ನು'

ಅಣ್ಣನ ನೆನಪು 

ತೇಜಸ್ವಿಯವರೂ ತಮ್ಮ ತಂದೆಯವರಿಗೆ "ಅಣ್ಣ" ಎನ್ನುತ್ತಿದ್ದರಂತೆ. ಅವರ ತಂದೆ ಕುವೆಂಪುರವರ ಕುರಿತ ಅವರ ನೆನಪುಗಳು - 'ಅಣ್ಣನ ನೆನಪು' ಲೇಖನಗಳ ಮಾಲೆ. ಬಹುಶಃ ಅವರು ಇದನ್ನ ಯಾವುದೋ ವೃತ್ತಪತ್ರಿಕೆಗೆ ಬರೆದಿದ್ದರೇನೊ.

ತೇಜಸ್ವಿಯವರು ಬರೆದಿರುವ 'ಅಣ್ಣನ ನೆನಪು' ಪುಸ್ತಕ ಓದುವ ಅವಕಾಶ ದೊರೆತದ್ದು ಮುರಳಿ 'ಹ್ಯಾಪಿ ಬರ್ತ್ ಡೇ' ಎಂದುಕೊಂಡು ಈ ಪುಸ್ತಕವನ್ನು ನನಗೆ ತಂದುಕೊಟ್ಟಿದ್ದರಿಂದ. ಈಗಾಗಲೇ ಓದದೇ ಇಟ್ಟಿರುವ ಪುಸ್ತಕಗಳ ದೊಡ್ಡ ರಾಶಿ ಪ್ರತಿದಿನ ನೋಡುತ್ತಲೇ ಈ ಪುಸ್ತಕವನ್ನು ನಾನು ಈಗಂತೂ ಕೊಂಡುತರುತ್ತಿದ್ದುದು ಬಹುಶಃ ಸಾಧ್ಯವಿರಲಿಲ್ಲ. ಅದ್ಯಾಕೋ ಪುಸ್ತಕದ ಆಕರ್ಷಣೆಯೋ ಅಥವಾ ಕುವೆಂಪುರವರ ಬಗ್ಗೆ ಏನೂ ಹೆಚ್ಚು ತಿಳಿಯದೇ ಇದ್ದದ್ದರಿಂದಲೋ ಅಥವಾ ಹುಟ್ಟಿದ ಹಬ್ಬಕ್ಕೆ ದೊರೆತಿದ್ದ ಉಡುಗೊರೆ ಅಂತಲೊ, ಒಟ್ಟು ಈ ಪುಸ್ತಕವನ್ನು ಸಂಪೂರ್ಣವಾಗಿ ಓದಿಮುಗಿಸಿದ್ದು.

ಈ ಪುಸ್ತಕದಲ್ಲಿ ಕುವೆಂಪುರವರ 'ಸಾಮಾನ್ಯ' ಜೀವನದ ಬಗ್ಗೆ, ತೇಜಸ್ವಿಯವರ ಅಂದಿನ ಲೈಫು, ಕಾರ್ನಾಮೆಗಳು ಇವೆಲ್ಲದರ ಬಗ್ಗೆ ವ್ಯಾಖ್ಯಾನವಿದೆ. ಒಮ್ಮೆ ಸಮಯ ಮಾಡಿಕೊಂಡು ಸಂಪದದಲ್ಲಿ ಈ ಪುಸ್ತಕದ ಬಗ್ಗೆ ವಿವರವಾಗಿ ಬರೆಯುವೆ. :)

ಹಸುರು ಹೊನ್ನು

ಬಿ ಜಿ ಎಲ್ ಸ್ವಾಮಿಯವರ ಹಾಸ್ಯ/ವಿಜ್ಞಾನಗಳ ಫ್ಯೂಶನ್ ಪುಸ್ತಕ. :) ಮೊನ್ನೆ ಅಂಕಿತಕ್ಕೆ ಹೋಗಿದ್ದಾಗ 'ಸ್ವಂತದ ಕಾಪಿ ಒಂದಿರಲಿ' ಎಂದು ಕೊಂಡು ತಂದದ್ದು. ಸಣ್ಣವನಿದ್ದಾಗ ಒಮ್ಮೆ ಓದಿದ್ದೆ.  ಪುಸ್ತಕ  ಬಹಳ ಚೆನ್ನಾಗಿರೋದ್ರಿಂದ, ಜ್ವರ ಬಂದು ಕೆಲಸ ಮಾಡಲಾಗದೆ 'ಸುಮ್ಮನೆ ಕಾಲ ಕಳೆಯೋದ್ ಯಾಕೆ' ಅಂತ ಮತ್ತೆ ಈ ಪುಸ್ತಕವನ್ನ ಓದೋಕೆ ಪ್ರಾರಂಭಿಸ್ದೆ.

ಈ ಪುಸ್ತಕ ಓದುವಾಗ ತಮಾಷೆಯ ವಿಷಯವೊಂದು ಕಂಡುಬಂತು.  ಬಿ ಜಿ ಎಲ್ ಸ್ವಾಮಿಯವರು ಈ ಪುಸ್ತಕದಲ್ಲಿ ಜನಪ್ರಿಯ ಕಾಮಿಕ್ಸ್ [:http://www.kingfeatures.com/features/comics/bbailey/about.htm
|'beetle bailey'] ಯ ಕೆಲವು ಪಾತ್ರಗಳನ್ನ ಪುಸ್ತಕದ illustrationಉಗಳಲ್ಲಿ ಕಾಪಿ ಹೊಡೆದುಬಿಟ್ಟಿದ್ದಾರೆ!

ಬಿ ಜಿ ಎಲ್ ಸ್ವಾಮಿಯವರ ಕಟ್ಟಾ ಅಭಿಮಾನಿ ನಮ್ಮ ಪ್ರಾಣೇಶ್ ಮಾಮ ಮೊನ್ನೆ ಮನೆಗೆ ಬಂದಿದ್ದಾಗ ಇದನ್ನು ತೋರಿಸಿದೆ. ಅವರು "ಏನೋಪ್ಪ, ನಾನು ಕಾಮಿಕ್ಸೇ ಓದೋದಿಲ್ಲ" ಎನ್ನುತ್ತಾ ತಪ್ಪಿಸಿಕೊಂಡು ಬಿಟ್ರು. ಇಸ್ಮಾಯಿಲ್ ಗೆ ಫೋನಾಯಿಸಿದಾಗ ಅವರಿಗೂ ತಿಳಿಸಿದೆ... "ಇಲ್ರೀ, ಅವರೇ ಬರೆದುಕೊಂಡಿದ್ರು ಅನ್ಸತ್ತೆ, ಹಾಗೆ ಮಾಡಿದ್ದೇನೆ ಅಂತ. ಇರಿ, ಒಮ್ಮೆ ನೋಡಿ ಹೇಳ್ತೀನಿ" ಅಂದ್ರು.

ಕನ್ನಡ ಪುಸ್ತಕಗಳನ್ನು ಜನ ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲವೆನ್ನೋದು ನಮಗೆಲ್ಲರಿಗೂ ಗೊತ್ತಿರೋ ಕಟು ಸತ್ಯವೇ, ಆದ್ದರಿಂದ ಬಿ ಜಿ ಎಲ್ ಸ್ವಾಮಿಯವರ ಕೃತಿಗಳನ್ನು ಪಬ್ಲಿಷ್ ಮಾಡಿದವರಿಗೆ ಅಷ್ಟೇನೂ ತೊಂದರೆಯಾಗಲಿಕ್ಕಿಲ್ಲ. ಆದರೆ ಕನ್ನಡದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಪುಸ್ತಕವೊಂದರಲ್ಲಿ ಕಾಪಿ ಮಾಡಿದ illustration ಸರಿ ಕಾಣುವುದಿಲ್ಲ.  

ಜೀವನ ಮೌಲ್ಯ ಮತ್ತು ಕೃತಿಗಳು

ಹೋದ ತಿಂಗಳು ಮೈಸೂರಿಗೆ ಭೇಟಿ ಕೊಟ್ಟಿದ್ದೆವು. ಸ್ನೇಹಿತ ಮುರಳಿ ಯಾವುದೋ ಪುಸ್ತಕ ಬೇಕೆಂದು ಶಾರದಾ ವಿಲಾಸ್ ಕಾಲೇಜಿನ ಹತ್ತಿರ ಎಳೆದುಕೊಂಡು ಹೋಗಿದ್ದ. ಅಲ್ಲಿ ಶಾರದಾ ಪ್ರೆಸ್ ಅಂತ ಮುಂಚೆ ಇತ್ತಂತೆ... ಸಂಸ್ಕೃತದ ನಾಟಕಗಳನ್ನ ಕನ್ನಡೀಕರಿಸಿದ ಪುಸ್ತಗಳನ್ನ ಅವರು ಪ್ರಕಟಿಸುತ್ತಿದ್ದರಂತೆ. ಅಲ್ಲಿಗೆ ಹೋದ ನಮಗೆ ಶಾರದಾ ಪ್ರೆಸ್ ಸಿಗಲಿಲ್ಲ, ಬದಲಿಗೆ 'ಡಿ ವಿ ಕೆ ಮೂರ್ತಿ' ಎಂಬ ಹಿರಿಯರೊಬ್ಬರ ಅಂಗಡಿ/ಮನೆ ಸಿಕ್ತು. ಅವರು ಕನ್ನಡ ಪುಸ್ತಕಗಳ ಪಬ್ಲಿಷರ್ ಎಂದು ಆಮೇಲೆ ತಿಳಿಯಿತು. ನಮ್ಮನ್ನು ಕೂಡ್ಸಿ, ಕಾಫಿ ಕೊಟ್ಟು ತಮ್ಮ ಕೆಲವು ಪುಸ್ತಕಗಳನ್ನ "ಓದಿ, ಹೇಗಿದೆ ತಿಳಿಸಿ" ಎಂದು ಹೇಳಿ ಕೊಟ್ಟಿದ್ದರು. ಕೆಲಸದ ಮಧ್ಯೆ ಓದಲಾಗ್ಲೇ ಇಲ್ಲ. ಆದರೂ ಅವರು ಹೇಳಿದ ಕೆಲವು ಸಂಗತಿಗಳು ಮೊದಲಿಗೆ ಸರಿಯೆನಿಸಿದರೂ ಅದರ ಬಗ್ಗೆ ಆಲೋಚಿಸುತ್ತಾ ಹೋದಾಗ "ವಿಪರೀತವಾಯ್ತು" ಎಂದೆನಿಸತೊಡಗಿತು. ಕಾರಂತರು ಮತ್ತಿತರ ಸಾಹಿತಿಗಳು ತಮ್ಮ ಸಾಹಿತ್ಯ ರಚನೆಯಲ್ಲಿ ಜೀವನ ಮೌಲ್ಯಗಳನ್ನು ಕಥಾವಸ್ತು enrich ಮಾಡಹೋಗಿ ಕಡೆಗಣಿಸಿದ್ದಾರೆ ಎಂಬುದು ಇವರ ಅಭಿಪ್ರಾಯ. ಬರೆಯುವವರಿಗೆ ತಮ್ಮ ಆಲೋಚನೆ ಮಂಡಿಸುವ ಸ್ವಾತಂತ್ರ್ಯವಿರುತ್ತಾದ್ದರಿಂದ ಹೀಗೆ ಹೇಳುವುದು ಎಷ್ಟರಮಟ್ಟಿಗೆ ಸರಿ ಅಂತ ಅನ್ನಿಸಿದರೂ ಈ ತರಹ ಆಲೋಚನೆಗಳೂ ಇದ್ದರೆ ಚೆನ್ನಾಗಿರುತ್ತೆ ಅಂತ ಅನ್ನಿಸಿತು.

Rating
No votes yet