ಹೆದ್ದಾರಿ ಡಿವಿಜನ್‍ನಲ್ಲಿ ಸಾವು - ಇನ್ನೊಂದು ಮರೆಯಲಾಗದ ಕತೆ

ಹೆದ್ದಾರಿ ಡಿವಿಜನ್‍ನಲ್ಲಿ ಸಾವು - ಇನ್ನೊಂದು ಮರೆಯಲಾಗದ ಕತೆ

ಇತ್ತೀಚೆಗೆ 'ಮಯೂರ' ಮಾಸ ಪತ್ರಿಕೆ ಬಲು ವಿಶಿಷ್ಟವಾಗಿ , ಪ್ರತಿಯೊಂದು ಸಂಚಿಕೆಯೂ ಸಂಗ್ರಾಹ್ಯ ಸಂಚಿಕೆಯಾಗಿ ಬರುತ್ತಿದೆ. ಕನ್ನಡವಷ್ಟೇ ಅಲ್ಲದೆ ದೇಶ ವಿದೇಶಗಳ ಸಾಹಿತ್ಯವನ್ನೂ ಪರಿಚಯಿಸುತ್ತಿದೆ. ಇವತ್ತು 'ಮಯೂರ' ಮಾಡುತ್ತಿರುವ ಕೆಲಸವನ್ನು ಪ್ರಾರಂಭದ ಅನೇಕ ವರ್ಷಗಳ ಕಾಲ ೭೦ರ ದಶಕದಲ್ಲಿ 'ತುಷಾರ' ಮಾಡುತ್ತಿತ್ತು . ಅಂದು ಓದಿದ ಒಂದು ಕತೆ ಇಂದಿಗೂ ನನ್ನ ನೆನಪಲ್ಲಿ ಹಸಿರಾಗಿದೆ.

ಈ ಕತೆಯ ಲೇಖಕರು ಶ್ರೀ ನಾ. ಡಿಸೋಜ ಅವರು . ಕಥಾನಾಯಕ ಒಂದು ಸರಕಾರೀ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಸರಕಾರೀ ಕಚೇರಿಯೆಂದ ಮೇಲೆ ಹೇಳಲೇಬೇಕಿಲ್ಲ ; ಭ್ರಷ್ಟಾಚಾರ , ಇತರೆಲ್ಲ ಅವ್ಯವಹಾರ ರಾಜಾರೋಷವಾಗಿ ನಡೆಯುತ್ತಿದೆ . ನಮ್ಮ ಕಥಾನಾಯಕ ತಲೆ ಕೆಡಿಸಿಕೊಳ್ಳದೆ ನಿರ್ಲಿಪ್ತನಾಗಿ ತಣ್ಣಗೆ ತನ್ನಷ್ಟಕ್ಕೆ ಕೆಲಸಮಾಡಿಕೊಂಡು ಹೋಗುತ್ತಿದ್ದಾನೆ. ಅಲ್ಲಿ ಒಬ್ಬ ಹೊಸಬ ಪ್ಯೂನ್ ಎಂದು ಸೇರಿಕೊಂಡಿದ್ದಾನೆ. ಬಿಸಿರಕ್ತ ; ಸುತ್ತ ನಡೆಯುತ್ತಿರುವದನ್ನು ಸಹಿಸಿಕೊಳ್ಳಲಾಗುತ್ತಿಲ್ಲ; ನಾಯಕನನ್ನು ಹಚ್ಚಿಕೊಂಡಿರುವ ಆತ ಆಗಾಗ ಅವನ ಹತ್ತಿರ ಮಾತಾಡುತಿರುತ್ತಾನೆ. ಹೀಗೆ ಒಂದು ದಿನ ಉದ್ವಿಗ್ನನಾಗಿರುವ ಆತ ' ಇದನ್ನೆಲ್ಲ ಹೇಗೆ ಸಹಿಸಿಕೊಳ್ಳುವದು ಸಾರ್? ಇದೇನು ಆಫೀಸಾ , ಕುಲಗೆಟ್ಟು ಹೋಗಿದೆ ' ಎಂದರೆ ನಾಯಕ ತಣ್ಣಗೆ ಮುಗುಳ್ನಗುತ್ತಾನೆ. ' ನಿಮ್ಮ ಸರ್ವೀಸು ಎಷ್ಟು ಸಾರ್? ಎಂಬ ಪ್ರಶ್ನೆಗೆ ' ಇವತ್ತಿಗೆ ಸರಿಯಾಗಿ ಹತ್ತು ವರ್ಷ ಆಗುತ್ತದೆ' ಎಂಬ ಉತ್ತರ ಪಡೆದು ' ಅವತ್ತಿನಿಂದ ಇದನ್ನೆಲ್ಲ ನೋಡ್ತಲೇ ಬಂದಿದ್ದೀರಾ ? ' ಎಂದು ಕೇಳುತ್ತಾನೆ.

ಆಗ ನಮ್ಮ ನಾಯಕ ' ಇಲ್ಲ ; ನಾನು ಸರ್ವೀಸಿಗೆ ಸೇರಿದ ದಿನಾನೆ ...' ಎಂದು ಏನನ್ನೋ ಹೇಳ ಹೊರಟು ಎದೆನೋವು ಬಂದು ಹೃದಯಸ್ತಂಭನವಾಗಿ ಸತ್ತು ಹೋಗುತ್ತಾನೆ.

ನಂತರ ಆಫೀಸು ಯಥಾಪ್ರಕಾರ ನಡೆಯುತ್ತದೆ . ಆಫೀಸಿನಲ್ಲಿ ನಾಯಕ ಮರಣ ಹೊಂದಿರುವದರಿಂದ ಕಚೇರಿಯವರು ಅವನ ಸಂಸಾರಕ್ಕೆ ಅನುಕೂಲಮಾಡಲು ಪತ್ರವ್ಯವಹಾರ ಮಾಡುತ್ತಾರೆ. ಅವರ ಕೈಗೆ ಪೋಸ್ಟ್‍ಮಾರ್ಟಂ ರಿಪೋರ್‍ಟ್ ಬಂದಾಗ ಅದರಲ್ಲಿ ಮರನದ ತಾರೀಕು ತಪ್ಪಾಗಿರುವದನ್ನು ಗಮನಿಸುತ್ತಾರೆ ಅದು ಹತ್ತು ವರುಷದ ಹಿಂದಿನ ತಾರೀಖು. ಅದು ಅವನು ಕೆಲ್ಸಕ್ಕೆ ಸೇರಿದ ತಾರೀಖು. ' ಈ ಡಾಕ್ಟರು ಅದು ಹೇಗೆ ಬೇಜವಾಬ್ದಾರಿಯಿಂದ ಕೆಲಸ ಮಾಡ್ತಾರೋ ' ಎಂದು ಪೋಸ್ಟ್ಮಾರ್ಟಮ್ ಮಾಡಿದ ಸರಕಾರೀ ಡಾಕ್ಟರ್ ರನ್ನು ಸಂಪರ್ಕಿಸಿದಾಗ ಅವರು ಹೇಳ್ತಾರೆ- ' ಇಲ್ಲ ; ಅವನು ಸತ್ತ ತಾರೀಖು ಸರಿಯಾಗೇ ಇದೆ . ವೈದ್ಯಕೀಯವಾಗಿ ಅವನು ಸತ್ತು ಹತ್ತು ವರ್ಷಗಳೇ ಆಗಿದ್ದವು. ' ಎಂದು ತಾರೀಕು ಬದಲಾಯಿಸಲು ನಿರಾಕರಿಸುತ್ತಾರೆ. ' ಅದು ಹ್ಯಾಗ್ರೀ ಸಧ್ಯ ? ಸತ್ತ ಮನುಷ್ಯ ಹತ್ತು ವರ್ಷ ಕಾಲ ಮಾಮೂಲಿನಂತೆ ಇದ್ದು ಕಚೇರಿಗೆ ಬರಲು ಸಾಧ್ಯವೇ?' ಎಂಬ ಮಾತಿಗೆ 'ಹೌದು ನನಗೂ ಅದನ್ನು ನಂಬಲಿಕ್ಕೆ ಆಗುವದಿಲ್ಲ; ಇದು ನಿಜವಾಗಿಯೂ ಒಂದು ಪವಾಡವೇ ಸರಿ' ಎಂದು ಉತ್ತರಿಸುತ್ತಾರೆ! .

ಎಲ್ಲರಿಗೂ ಅದೇ ಆಶ್ಚರ್ಯ . ಸತ್ತು ಹೋದ ಮನುಷ್ಯ ಮಾಮೂಲಿನಂತೆ ಇದ್ದು ಕಚೇರಿಗೆ ಬಂದು ಕೆಲಸ ಮಾಡಿಕೊಂಡಿರಲು ಸಾಧ್ಯವೇ ಎಂದು ಅನೇಕ ದಿನಗಳಾದರೂ ಆಶ್ಚರ್ಯಪಡುತ್ತಲೇ ಇರುತ್ತಾರೆ. ಆದರೆ ಹೊಸದಾಗಿ ಸೇರಿದ್ದ ಪ್ಯೂನನಿಗೆ ಮಾತ್ರ ದಿನಗಳು ಕಳೆದಂತೆ ಅದು ಹೇಗೆ ಸಾಧ್ಯವೆಂದು ಅರ್ಥವಾಗುತ್ತ ಹೋಗುತ್ತದೆ.

Rating
No votes yet