‘ಕಾಮ್’ ವತಿಯಿಂದ ಮಸನೊಬು ಫುಕುವೊಕ- ಒಂದು ನೆನಪು

‘ಕಾಮ್’ ವತಿಯಿಂದ ಮಸನೊಬು ಫುಕುವೊಕ- ಒಂದು ನೆನಪು

"ನನ್ನ ಕೃಷಿಯೆಂದರೆ ನಿಸರ್ಗವನ್ನು ಅರ್ಥ ಮಾಡಿಕೊಳ್ಳುವುದು. ಅದರ ತಾಳಕ್ಕೆ, ಹೆಜ್ಜೆಗೆ, ವಿನ್ಯಾಸಕ್ಕೆ ಹೊಂದಿಕೊಂಡು ಹೆಜ್ಜೆ ಇಡುತ್ತಲೇ ಅನ್ನಾಹಾರಗಳನ್ನೂ, ಆರೋಗ್ಯವನ್ನೂ, ನೆಮ್ಮದಿಯನ್ನು ಪಡೆದುಕೊಳ್ಳುವುದು."- ಮಸನೊಬು ಫುಕುವೊಕ.

ಆತ್ಮದೀಪ ಆರೋಗ್ಯ ಮತ್ತು ಪರಿಸರ ಸಂಘಟನೆ ಹಾಗು ಕೃಷಿ ಮಾಧ್ಯಮ ಕೇಂದ್ರ (ಕಾಮ್) ಇವರ ಆಶ್ರಯದಲ್ಲಿ ‘ಮಸನೊಬು ಫುಕುವೊಕ- ಒಂದು ನೆನಪು’ ಶೃದ್ಧಾಂಜಲಿ ಕಾರ್ಯಕ್ರಮ ಧಾರವಾಡದ ಮಾಳಮಡ್ಡಿಯ ಮಹಿಷಿ ರಸ್ತೆಯ ಬಾಲ ಬಳಗದ ಆವರಣದಲ್ಲಿ ಆಗಸ್ಟ್ ೨೪, ಭಾನುವಾರ ಸಂಜೆ ೪.೩೦ಕ್ಕೆ ಜರುಗಲಿದೆ.

ಹಿನ್ನೆಲೆಯಲ್ಲಿ: ೧೯೭೦ ರ ದಶಕದಲ್ಲಿ ಜಗತ್ತಿನಲ್ಲಿ ರಾಸಾಯನಿಕ ಕೃಷಿ ಬಹಳ ಜನಪ್ರಿಯವಾಗಿದ್ದ ಸಂದರ್ಭದಲ್ಲಿ ಸಹಜ ಕೃಷಿಯನ್ನು ಪ್ರತಿಪಾದಿಸಿದವರು ಮಸನೊಬು ಫುಕುವೊಕ. ಸಸ್ಯರೋಗ ವಿಜ್ನಾನಿಯಾಗಿದ್ದ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಸತತ ೩೦ ವರ್ಷಗಳ ಕಾಲ ತಮ್ಮ ಹೊಲದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ ಯಾವುದೇ ರಾಸಾಯನಿಕ ಅಥವಾ ವಿಷಗಳನ್ನು ಬಳಸದೆಯೇ ಯಶಸ್ವಿಯಾಗಿ ಕೃಷಿ ಮಾಡುವ ತಂತ್ರಗಾರಿಕೆಯನ್ನು ಕಂಡುಕೊಂಡರು.

ಪ್ರಕೃತಿಯಲ್ಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿದ ಫುಕುವೊಕ ಮಣ್ಣಿನ ಫಲವತ್ತತೆಯ ಸುಧಾರಣೆಯ ಜೊತೆಗೆ ಸತ್ವಯುತ ಫಸಲು ಬೆಳೆಯುವುದಕ್ಕಾಗಿ ನಾಲ್ಕು ತತ್ವಗಳನ್ನು ಪ್ರತಿಪಾದಿಸಿದರು. ಅವುಗಳೆಂದರೆ- ಉಳುಮೆ ಮಾಡದಿರುವುದು, ರಸಗೊಬ್ಬರ ಬಳಸದಿರುವುದು, ಕಳೆ ನಿರ್ಮೂಲನ ಮಾಡದಿರುವುದು ಹಾಗು ರಾಸಾಯನಿಕ ಕ್ರಿಮಿನಾಶಕ ಬಳಸದಿರುವುದು. ಈ ವಿಧಾನವನ್ನು ಅವರು ಸಹಜ ಕೃಷಿ ಎಂದು ಕರೆದರು. ಇದು ಕೇವಲ ಕೃಷಿ ವಿಧಾನವಷ್ಟೇ ಆಗಬಾರದು, ನಮ್ಮ ಬದುಕಿನ ಚಿಂತನಾ ಕ್ರಮವೂ ಆಗಬೇಕು ಎಂದರು ಫುಕುವೊಕು. ಅವರ ವಿಚಾರಧಾರೆಯಲ್ಲಿ ಬದ್ಧ ಮತ್ತು ಮಹಾತ್ಮಾ ಗಾಂಧಿ ಅವರ ಪ್ರಭಾವ ನಿಚ್ಚಳ.

೧೯೭೫ರಲ್ಲಿ ಪ್ರಕಟಗೊಂಡ ಫುಕುವೊಕ ಅವರ ‘ಒನ್ ಸ್ಟ್ರಾ ರೆವೊಲ್ಯೊಷನ್’ ಶೀರ್ಷಿಕೆಯ ಪುಸ್ತಕ ಅವರ ಅನುಭವ ಮತ್ತು ಚಿಂತನೆಗಳನ್ನು ಸಾದರ ಪಡಿಸುವುದರ ಜೊತೆಗೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಸಹಜ ಕೃಷಿಯ ಬಗ್ಗೆ ಒಲವು ಮೂಡಿಸಿತು. ಈ ಕೃತಿಯನ್ನು ಕನ್ನಡಕ್ಕೆ ಮೊದಲು ಅನುವಾದಿಸಿದವರು ಮೇಲುಕೋಟೆಯ ಸಂತೋಷ ಕೌಲಗಿ. ೧೯೮೮ರಲ್ಲಿ ಪ್ರಕಟವಾದ ‘ಒಂದು ಹುಲ್ಲಿನ ಕ್ರಾಂತಿ’ ಪುಸ್ತಕ ಬಳಿಕ ಹಲವಾರು ಮುದ್ರಣಗಳನ್ನು ಕಂಡಿದೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕೂಡ ಫುಕುವೊಕ ಚಿಂತನೆಗಳ ಹಿನ್ನೆಲೆಯಲ್ಲಿ ‘ಸಹಜ ಕೃಷಿ- ಒಂದು ಪರಿಚಯ’ ಶೀರ್ಷಿಕೆಯ ಪುಸ್ತಕ ಪ್ರಕಟಿಸಿದ್ದರು. ‘ಫುಕುವೊಕ ತಮ್ಮ ಸಹಜ ಕೃಷಿಯ ಹಿನ್ನೆಲೆಯಲ್ಲಿ ಮಂಡಿಸುವ ತತ್ವ ಮತ್ತು ಸಿದ್ಧಾಂತಗಳು ಕೇವಲ ರೈತರ ಕ್ಸೇತ್ರಕ್ಕೆ ಮಾತ್ರ ಸೀಮಿತವಾಗಿರದೇ ಕಲೆ, ಸಂಗೀತ, ಸಾಹಿತ್ಯ ಮತ್ತು ತತ್ವಮೀಮಾಂಸೆಯ ಮೇಲೆ ತಮ್ಮ ದೂರಗಾಮಿಯಾದ ಪರಿಣಾಮಗಳನ್ನು ಬೀರುವುದರಲ್ಲಿ ಸಂದೇಹವಿಲ್ಲ.’ ಎಂದು ತೇಜಸ್ವಿ ವಿಶ್ಲೇಷಿಸಿದ್ದಾರೆ.

ಈ ಎರಡು ಪುಸ್ತಕಗಳು ೧೯೯೦ರ ದಶಕದಲ್ಲಿ ನಮ್ಮ ರಾಜ್ಯದ ವ್ಯವಸಾಯ ಕ್ಸೇತ್ರದಲ್ಲಿ ಸಂಚಲನ ಸೃಷ್ಠಿಸಿದವು. ವಿವಿಧ ಜಿಲ್ಲೆಗಳಲ್ಲಿ ಅನೇಕ ರೈತರು ರಾಸಾಯನಿಕ ಕೃಷಿಗೆ ವಿದಾಯ ಹೇಳಿ ನಿಸರ್ಗಕ್ಕೆ ಪೂರಕವಾಗಿ ಕೃಷಿ ಮಾಡುವಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡತೊಡಗಿದರು. ಫುಕುವೊಕಾ ಚಿಂತನೆಯಿಂದ ಅನೇಕ ಯುವಕರು ಪ್ರಭಾವಿತರಾಗಿ ಹಳ್ಳಿಗಳತ್ತ ಹೆಜ್ಜೆ ಹಾಕಿದರು.

ಮ್ಯಾಗ್ಸೆಸೆ, ದೇಶಿಕೋತ್ತಮ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಪಾತ್ರರಾಗಿದ್ದ ಮಸನೊಬು ಫುಕುವೊಕಾ ಕಳೆದ ಶನಿವಾರ ನಿಧನಹೊಂದಿದರು. ಅವರಿಗೆ ೯೫ ವರ್ಷ ವಯಸ್ಸಾಗಿತ್ತು.

ಕೃಷಿ ಸೇರಿದಂತೆ ಆಧುನಿಕ ಸಂದರ್ಭದ ನಾನಾ ಸಮಸ್ಯೆಗಳಿಗೆ ಫುಕುವೊಕಾ ಚಿಂತನೆಯಲ್ಲಿ ಉತ್ತರಗಳನ್ನು ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ಒಂದು ಪ್ರಯತ್ನವಾಗಿ ಕೃಷಿ ಮಾಧ್ಯಮ ಕೇಂದ್ರ (ಕಾಮ್), ಧಾರವಾಡ ಈ ಕಾರ್ಯಕ್ರಮ ಆಯೋಜಿಸಿದೆ. ಅಧ್ಯಕ್ಷೆ ಶ್ರೀಮತಿ ಅನಿತಾ ಶಿವರಾಂ ಪೈಲೂರು ಹಾಗು ಡಾ.ಸಂಜೀವ ಕುಲಕರ್ಣಿ ಕರ್ಣಧಾರತ್ವ ವಹಿಸಿದ್ದಾರೆ.

ಗಮನಿಸಿ: ಕಾರ್ಯಕ್ರಮ ನಿಗದಿತ ಸಮಯಕ್ಕೆ ಆರಂಭ. ದಯವಿಟ್ಟು ಬನ್ನಿ. ನಿಮ್ಮ ಸ್ನೇಹಿತರನ್ನೂ ಕರೆತನ್ನಿ.