ಝೆನ್ ಕಥೆ ೩೧: ಚೆಲುವು
ಸುಪ್ರಸಿದ್ಧ ಝೆನ್ ದೇವಾಲಯವೊಂದರಲ್ಲಿ ಯುವಕ ಸನ್ಯಾಸಿಯೊಬ್ಬನಿಗೆ ತೋಟವನ್ನು ನೋಡಿಕೊಳ್ಳುವ ಕೆಲಸ ಕೊದಲಾಗಿತ್ತು. ಅವನಿಗೆ ಹೂಗಳು, ಗಿಡಮರಗಳು ಎಂದರೆ ಬಹಳ ಪ್ರೀತಿ, ಅದಕ್ಕೇ ಆ ಕೆಲಸ ಕೊಟ್ಟಿದ್ದರು. ಆ ದೇವಸ್ಥಾನದ ಪಕ್ಕದಲ್ಲಿ ಇನ್ನೊಂದು ಹಳೆಯ ಪುಟ್ಟ ದೇವಸ್ಥಾನವಿತ್ತು. ಅಲ್ಲೊಬ್ಬ ವಯಸ್ಸಾದ ಝೆನ್ ಗುರು ಇದ್ದ.
ಒಂದು ದಿನ ಈ ಸುಪ್ರಸಿದ್ಧ ದೇವಾಲಯಕ್ಕೆ ಯಾರೋ ಅತಿಥಿಗಳುಬರುವರಿದ್ದರು. ಯುವಕ ಸನ್ಯಾಸಿ ಹೆಚ್ಚು ಎಚ್ಚರಿಕೆಯಿಂದ ತೋಟದ ಕೆಲಸ ಮಾಡುತ್ತಿದ್ದ. ಕಳೆಗಳನ್ನು ಕಿತ್ತ, ತರಗೆಲೆಗಳನ್ನೆಲ್ಲ ಗುಡಿಸಿದ, ಮುಳ್ಳಿನ ಪೊದೆಗಳನ್ನು ಸವರಿದ, ಸೊಟ್ಟ ಪಟ್ಟ ಬೆಳೆದಿದ್ದ ಬಳ್ಳಿಗಳನ್ನು ನೇರ ಮಾಡಿದ...ಹೀಗೇ. ತೋಟ ಅತ್ಯಂತ ಸ್ವಚ್ಛವಾಗಿಬಿಟ್ಟಿತ್ತು. ಇದನ್ನೆಲ್ಲ ಪಕ್ಕದ ಪುಟ್ಟ ದೇವಾಲಯದ ಮುದುಕ ಸನ್ಯಾಸಿ ಕುತೂಹಲದಿಂದ ನೋಡುತ್ತಿದ್ದ. ಎರಡೂ ದೇವಾಲಯಗಳ ನಡುವೆ ಪುಟ್ಟ ಗೋಡೆ ಇತ್ತು.
ಕೆಲಸ ಮುಗಿಸಿದ ಯುವಕ ಸನ್ಯಾಸಿ ಹೆಮ್ಮೆಯಿಂದ "ಹೇಗಿದೆ? ಚೆನ್ನಾಗಿದೆ ಅಲ್ಲವೇ?" ಎಂದು ಕೇಳಿದ. ವೃದ್ಧ ಸನ್ಯಾಸಿ ತನ್ನ ಕೆಲಸ ಮೆಚ್ಚುವನೆಂಬ ವಿಶ್ವಾಸ ಅವನಿಗೆ.
"ಓಹೋ, ಚೆನ್ನಾಗಿದೆ! ಆದರೆ ಏನೋ ಕೊರತೆ ಅನ್ನಿಸುತ್ತದೆ. ದಯವಿಟ್ಟು ಈ ಗೋಡೆ ಹತ್ತಿ ಬರುವುದಕ್ಕೆ ಸಹಾಯಮಾಡು, ಸರಿ ಮಾಡಿಕೊಡುತ್ತೇನೆ" ಅಂದ ವೃದ್ಧ.
ಕೊಂಚ ಹಿಂಜರಿದರೂ ಯುವಕ ಸನ್ಯಾಸಿ ವೃದ್ಧನು ಗೋಡೆ ಏರಿ ಬರುವುದಕ್ಕೆ ಸಹಾಯ ಮಾಡಿದ. ಸರಿ, ವೃದ್ಧ ನೇರವಾಗಿ ತೋಟದ ನಡುವೆ ಇದ್ದ ಮರದ ಬಳಿಗೆ ಹೋದ. ಜೋರಾಗಿ ಮರವನ್ನು ಹಿಡಿದು ಅಲುಗಿಸಿದ. ದಳದಳನೆ ಮರದೆಲೆಗಳು ಸುತ್ತಲೆಲ್ಲ ನೆಲದ ಮೇಲೆ ಉದುರಿ ಬಿದ್ದವು. "ನೋಡಿದೆಯಾ, ಈಗ ಹೇಗಿದೆ? ಸರಿ, ನನ್ನನ್ನು ಆಚೆಕಡೆಗೆ ಕಳಿಸು" ಎಂದ ವೃದ್ಧ.
[ನಿಸರ್ಗ ಹೇಗಿದೆಯೋ ಹಾಗೆಯೇ ಚೆಲುವಲ್ಲವೇ!]