‘ಮನೆ ಅಂಗಳದ ಕೈತೋಟ-ವಿಶ್ವ ದಿನಾಚರಣೆ’ (ಆಗಸ್ಟ್ ೨೬) ಇಂದು!

‘ಮನೆ ಅಂಗಳದ ಕೈತೋಟ-ವಿಶ್ವ ದಿನಾಚರಣೆ’ (ಆಗಸ್ಟ್ ೨೬) ಇಂದು!

ಬರಹ

"ನಿನ್ನದು ಒಂದು ವರ್ಷದ ಯೋಜನೆಯಾಗಿದ್ದರೆ-
ಧಾನ್ಯದ ಬೀಜ ಬಿತ್ತು;
ಒಂದು ದಶಕದ ಯೋಜನೆಯಾಗಿದ್ದರೆ-
ಗಿಡ-ಮರ ಬೆಳೆಸು;
ಒಂದಿಡೀ ಪೀಳಿಗೆಯ ಯೋಜನೆಯಾಗಿದ್ದರೆ-
ಶಿಕ್ಷಣ ಕೊಡಿಸು."

ಚೀನಿ ದಾರ್ಶನಿಕ ಕ್ವಾನ್ ತ್ಸು ಉದ್ಧರಿಸಿದ ವಾಕ್ಯಗಳಿವು. ಈ ಚೀನಿ ದಾರ್ಶನಿಕನಿಗೆ ಹಾಗು ಸಿಂಡಿಕೇಟ್ ಬ್ಯಾಂಕ್ ಪ್ರವರ್ತಿತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಸಾರ್ವಜನಿಕ ಸಂಪರ್ಕಾಧಿಕಾರಿ ಉಲ್ಲಾಸ್ ಗುನಗಾ ಅವರಿಗೆ ಏನಾದರೂ ಸಂಬಂಧ?.. ಇದೆ. ಅದು ಬಾದರಾಯಣ ಸಂಬಂಧ! ಬೇಕಾದರೆ.. ಗುನಗಾ ದಂಪತಿ ಹಾಗು ಅವರ ಕರುಳ ಕುಡಿ ಮಧುರಾ ಜಪಾನ್ ದೇಶದ ಸಹಜ ಕೃಷಿಕ ಮಸನೊಬು ಫುಕುವೊಕ ಅವರ ಹತ್ತಿರದ ಸಂಬಂಧಿ ಅಂದರೂ ತಪ್ಪಿಲ್ಲ!

ಇಂದು ಆಗಸ್ಟ್ ೨೬. ‘ಮನೆ ಅಂಗಳದ ಕೈತೋಟ- ವಿಶ್ವ ದಿನಾಚರಣೆ.’ ತನ್ನಿಮಿತ್ತ ಈ ಸಮಾನ ಮನಸ್ಕರ ಸಂಬಂಧದ ಸ್ಮರಣೆ ಸಂಪದದಲ್ಲಿ.

ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿ ಇದೆ ಕೆ.ವಿ.ಜಿ.ಬಿ.ಪ್ರಧಾನ ಕಚೇರಿ. ಮುಂಭಾಗದಲ್ಲಿ ವಿಶಾಲವಾಗಿ ಹರಡಿದೆ ಸಿದ್ಧಾರ್ಥ ಕಾಲೋನಿ. ತಕ್ಕ ಮಟ್ಟಿಗೆ ಇಲ್ಲಿ ಎಲ್ಲರ ಮನೆ ಅಂಗಳದಲ್ಲಿ ಮೆಕ್ಸಿಕನ್ ಲಾನ್ ಜಾಗೆ ಪಡೆದು ಹಬ್ಬಿದೆ. ಅಲ್ಲಿಂದ ಮುಂದೆ ಹೋದರೆ ಮೂಕಾಂಬಿಕಾ ನಗರ. ಮೂಕಾಂಬಿಕಾ ನಗರದ ೨ನೇ ಕ್ರಾಸ್ ನಲ್ಲಿ ೪ನೇ ಮನೆ ನಮ್ಮ ಕಣ್ಮನ ಸೆಳೆಯುತ್ತದೆ. ಮ್ಯಾಕ್ಸಿಕನ್ ಲಾನ್ ಇಲ್ಲಿ ಜಾಗೆ ಪಡೆದಿಲ್ಲ! ಆದರೆ, ಕಳೆದ ಒಂದುವರೆ ವರ್ಷದ ಹಿಂದೆ ಅಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಉಲ್ಲಾಸ್ ಹಾಗು ಸೌ.ಸುಮಾ ಗುನಗಾ ಅವರ ಶ್ರೀನಿವಾಸ ‘ಕಲ್ಯಾಣ’ ಎಲ್ಲರ ವಿಶೇಷ ಆಕರ್ಷಣೆ. ಕಾರಣ ಇಡೀ ಮನೆ ಹಾಗು ಆವರಣ ಹಸುರಿನಿಂದ ಉಸಿರಾಗಿದೆ! ಹಸುರಿನ ಮನೆ, ಹಸುರಿನ ತೋರಣ, ಹಸುರಿನ ಹಬ್ಬ ಏನಾದರೂ ಕರೆಯಿರಿ. ಒಟ್ಟಾರೆ ನಮ್ಮ ಈ ಮನೆ ಮಲೆನಾಡಿನ ಸ್ವಾವಲಂಬಿ ಹೆಗ್ಗಡೆ ಅಥವಾ ಭಟ್ಟರ ಮನೆಗೆ ಸರಿಸಮವಾಗಿದೆ!

ನೀವು ಲೆಕ್ಕ ಹಾಕುತ್ತಿರುವಂತೆ ಮಲೆನಾಡಿನ ಗದ್ದೆಯ ಮನೆ ಅಲ್ಲ ಇದು. ಸುಮಾರು ಎಕರೆಗಳ ವಿಸ್ತೀರ್ಣದಲ್ಲಿ ಮನೆ ಹಬ್ಬಿಲ್ಲ. ಪಟ್ಟಣ ಪ್ರದೇಶದಲ್ಲಿ ನಮ್ಮ-ನಿಮ್ಮ ಮನೆಗಳಿರುವಷ್ಟೇ ಜಾಗೆ ಅಲ್ಲಿದೆ. ಕೇವಲ ೧,೩೦೦ ಚದುರ ಅಡಿಗಳಷ್ಟು ಜಾಗೆಯ ನಿವೇಶನ ಅದು. ೯೦೦ ಚದುರ ಅಡಿಗಳಷ್ಟು ಜಾಗೆಯಲ್ಲಿ ಕಾಂಕ್ರೀಟ್ ಮನೆ ಕಟ್ಟಿದ್ದಾರೆ ಗುನಗಾ ದಂಪತಿ. ಮನೆಯ ಸುತ್ತಮುತ್ತಲಿನ ಕಂಪೌಂಡ್ ಗೋಡೆಯ ಒಳಗಿನ ನಾಲ್ಕು ಬದಿಯ ಸುಮಾರು ೨೦೦ ಚದುರ ಅಡಿ ಜಾಗೆಯಲ್ಲಿ ಕಾಯಿಪಲ್ಲೆ, ತರಕಾರಿ, ಹಣ್ಣು ಹಾಗು ಅಲಂಕಾರಿಕ ಹೂಗಳ ತೋಟ ಇಲ್ಲಿ ನಿರ್ಮಾಣ ಗೊಂಡಿದೆ. ‘ಅಯ್ಯೋ.. ನಾನು ಬೆಳೀಬೇಕು ಅಂತೇನ್ರೀ.. ಆದ್ರ ನಿಮ್ಮಾಂಗ ನಮ್ಮ ಮನಿ ಸುತ್ತ ಖುಲ್ಲಾ ಜಾಗಾ ಇಲ್ರೀ’ ಅಂತ ರಾಗ ಎಳೆಯುವವರಿಗೆ ಗುನಗಾ ದಂಪತಿ ತಮ್ಮ ಸೃಜನಶೀಲತೆಯಿಂದ ಕಟ್ಟಿದ ಮನೆ ಅಂಗಳದ ತೋಟ ತೋರಿಸಿ ಸಣ್ಣ ‘ಶಾಕ್’ ಚಿಕಿತ್ಸೆ ಕೊಡುತ್ತಾರೆ! ಹುಬ್ಬೇರಿಸುವ ಸರದಿ ನಮ್ಮದು ಆಗ.

ಮನೆ ಕಟ್ಟುವಾಗ ಸಿವಿಲ್ ಇಂಜಿನೀಯರ್ ಗೆ ಗುನಗಾ ದಂಪತಿ ‘ಸ್ಟ್ಯಾಂಡಿಂಗ್ ಇನ್ಸ್ಟ್ರಕ್ಷನ್’ ಕೊಟ್ಟಿದ್ದರು. ನೆಲ ಹಾಸು ‘ಟೈಲ್ಸ್’ ಹಾಕುವಾಗ ಕಂಪೌಂಡ್ ಗೋಡೆಯ ಸುತ್ತ ನಾಲ್ಕು ಬದಿಯಲ್ಲೂ ೧.೫ ಅಡಿಯಷ್ಟು ಜಾಗೆಯ ಕಲ್ಲು ಕತ್ತರಿಸುವಂತೆ ನಿರ್ದೇಶಿಸಿದರು. ‘ಕಿಮ್ಮತ್ತಿನ ಟೈಲ್ಸ್ ಕತ್ತರಿಸುವಲ್ಲಿ ಅದ್ಯಾವ ಜಾಣತನವಿದೆ..ಗುನಗಾ ಸರ್..ದಯವಿಟ್ಟು ಆ ಕೆಲಸ ಬೇಡ’ ಎಂದು ಸಲಹೆ ನೀಡಿದ್ದರು ಇಂಜಿನೀಯರ್. ಆದರೂ ಗುನಗಾ ದಂಪತಿ ‘ನಮಗೆ ನಷ್ಟವಾದರೂ ಚಿಂತೆಯಿಲ್ಲ. ಆ ಕಲ್ಲು ಕತ್ತರಿಸಿ ನೇರವಾಗಿ ಭೂಮಿಗೆ ಸಂಪರ್ಕ ಕಲ್ಪಿಸಿ ಬಿಡಿ’ ಎಂದು ನಿಷ್ಠುರವಾಗಿಯೇ ಹೇಳಿದ್ದರು. ಆ ಇಂಜಿನೀಯರ್ ನಕ್ಕು ಆದೇಶ ಪಾಲಿಸಿದ್ದರು. ಇದೊಂದು ಗುನಗಾ ಅವರ ಹುಚ್ಚು ಪ್ರಯೋಗ ಎನಿಸಿರಲೂ ಬೇಕು ಅವರಿಗೆ!

ಅದೇ ೧.೫ ಅಡಿ ಜಾಗೆಯಲ್ಲಿ .೫ ಅಡಿ ಅಡ್ಡಾಡಲು ಜಾಗೆ ಬಿಟ್ಟು ನಾಲ್ಕು ಇಟ್ಟಂಗಿಗಳ ಸಣ್ಣ ಬ್ಲಾಕ್ ನಿರ್ಮಾಣ ಮಾಡಲಾಯಿತು. ಹಾಕು ಮಣ್ಣನ್ನು ತಂದು ಸುರಿದು ಬ್ಲಾಕ್ ತುಂಬಿಸಿದ್ದಾಯಿತು. ನೀರಿನ ವ್ಯವಸ್ಥೆ ಹೇಗೆ? ಬೋರ್ ಹೊಡೆಸುವುದು ಗುನಗಾ ದಂಪತಿ ಒಪ್ಪದ ವಿಚಾರ. ನಮ್ಮ ಅವಶ್ಯಕತೆಗಳಿಗೆ ಭೂಮಿಯ ಒಡಲು ಬಗೆಯುವುದೇಕೆ? ಇರುವವರೆ ಮನೆಯಲ್ಲಿ ೩ ಜನ. ಗುನಗಾ ದಂಪತಿ ಪರಿಸರ ಸ್ನೇಹಿಯಾಗಿ ಬದುಕಲು ಇಚ್ಛಿಸುವವರು. ‘ಪ್ಲಂಬರ್’ ಕರೆದುಕೊಂಡು ಬಂದು ಮನೆಯ ಎಲ್ಲ ಪಾತ್ರೆ ತೊಳೆಯುವ, ಅಡುಗೆ ಮನೆಯ ಹಾಗು ಕೈತೊಳೆಯುವ ಸಿಂಕ್ ಗಳ ಪೈಪ್ ಸಂಪರ್ಕವನ್ನು ಈ ಕೈತೋಟದ ಮಡಿಗೆ ಕಲ್ಪಿಸಲಾಯಿತು.

ಅವಶ್ಯಕತೆಗೆ ತಕ್ಕಂತೆ ವಿಶೇಷ ತಳಿಯ ಜವಾರಿ, ನಾಟಿ ಹಾಗು ಹ್ಹೈಬ್ರೀಡ್ ಮತ್ತು ಕಾಡು ತಳಿಯ ಟೊಮೆಟೋ, ಬದನೆಕಾಯಿ, ಹೀರಿಕಾಯಿ, ಭೆಂಡೆ, ಚವಳೆ ಕಾಯಿ, ಬೀನ್ಸ್, ಕ್ಯಾಬೇಜ್, ಕಾಲಿ ಫ್ಲಾವರ್, ಸುವರ್ಣ ಗಡ್ಡೆ, ಅರಿಷಿಣ, ಅಲ್ಲ, ಮೆಣಸು, ಕೊತ್ತಂಬರಿ, ಕರಿಬೇವು, ಕುಂಬಳ, ಹಾಗಲ, ತೊಗರಿ, ಪುದೀನಾ, ರಾಜಗಿರಿ, ಪುಂಡಿ, ವೀಳ್ಯದೆಲೆ, ಪ್ಯಾಷನ್ ಫ್ರುಟ್ ಇತ್ಯಾದಿ ಕಾಯಿಪಲ್ಲೆ, ತರಕಾರಿ ಬೀಜಗಳನ್ನು, ಗಿಡಗಳನ್ನು ಇಲ್ಲಿ ಊರಲಾಯಿತು. ಜಾಗೆ ಕಮ್ಮಿ. ಗಿಡಗಳು ಹೆಚ್ಚು. ಗುನಗಾ ವಿಚಾರ ಮಾಡಿದರು. ಗಿಡಗಳ ಬೆಳವಣಿಗೆ ಕುಂಠಿತ ಗೊಳ್ಳಬಾರದು. ಹಾಗಾಗಿ ಒಂದೇ ಗಿಡದಲ್ಲಿ ೬ ರಿಂದ ೮ ತರಹದ ಬದನೆ, ಹೀರೆ, ಹಾಗಲ, ಟೊಮೆಟೋ ಪಡೆಯುವ ಗಿಡಗಳಿಗೆ ‘ಕಸಿ ಕಟ್ಟುವ’ ವಿಧಾನ ಜಾರಿಗೆ ತಂದರು. ಜೊತೆಗೆ ಗುಬ್ಬಚ್ಚಿ, ಬುಲ್ ಬುಲ್ ಮುಂತಾದ ಪಕ್ಷಿಗಳಿಗೆ ಆಹಾರ ಸಿಗಲಿ. ಅಂಗಳದಲ್ಲಿ ಸದಾ ಅವುಗಳ ಸಂಗೀತ ಕಚೇರಿ ನಡೆದಿರಲಿ ಎಂದು ಜೋಳವನ್ನು ಸಹ ಹಾಕಿದರು. ಜೋಳದ ದಂಟು ಆಳೆತ್ತರ ಬೆಳೆದಿವೆ. ಹುಲುಸಾಗಿ ಗೊಂಚಲು-ಗೊಂಚಲು ಜೋಳದ ತೆನೆ ಓಲಾಡುತ್ತಿವೆ. ಅವು ಪಕ್ಷಿಗಳಿಗಾಗಿ ಮೀಸಲಿಡಲಾದ ಕಾಳುಗಿಡಗಳು!

ಆಶ್ಚರ್ಯ. ಕೂಡಲ್ ಗಾಂವ್ ಹಾಗು ಉಡಗನಾಗಲಾವಿ ಇಂದ ತಂದ ಕಾಡಿನ ಬದನೆ ತಳಿಯನ್ನು ನಾಡಿನ ಬದನೆಯ ಗಿಡಕ್ಕೆ ಕಸಿ ಮಾಡಿದರು. ಒಂದೇ ಕಾಂಡ. ೬ ರಿಂದ ೮ ಜಾತಿಯ ಕಾಡು-ನಾಡು ಬದನೆ ಆವರಣದಲ್ಲಿ ಕಣ್ಣು ಬಿಟ್ಟವು. ಹಾಗೆಯೇ ಬದನೆ ಗಿಡದ ಕಾಂಡಕ್ಕೆ ಟೊಮೆಟೋ ಗಿಡದ ಚಿಗುರು ತಂದು ಕಸಿ ಮಾಡಿದ ಉಲ್ಲಾಸ್ ಗುನಗಾ ಅವರು ಕಳೆದ ೧ ವರ್ಷದಿಂದ ಫಲ ಪಡೆಯುತ್ತಿದ್ದಾರೆ. ಕಾರಣ ಟೊಮೆಟೋ ಗಿಡದ ಜೀವಿತಾವಧಿ ೩ ರಿಂದ ೪ ತಿಂಗಳು. ಅದಕ್ಕೆ ಬದನೆಯ ಕಾಂಡದ ಕಸಿ ಮಾಡಿರುವುದರಿಂದ ೩ ವರ್ಷವಾದರೂ ಬದುಕುತ್ತದೆ ಎಂಬ ಅವರ ಲೆಕ್ಕಾಚಾರ ನಮ್ಮನ್ನು ಚಿಂತನೆಗೀಡು ಮಾಡುತ್ತದೆ.

ಪತ್ನಿ ಸೌ.ಸುಮಾ ಉಲ್ಲಾಸ್ ಗುನಗಾ ಹಾಗು ಮಗಳು ಮಧುರಾ ಅವರಿಗೆ ಅಲಂಕಾರಿಕ ಮತ್ತು ಹೂವಿನ ಗಿಡಗಳನ್ನು ಬೆಳೆಸುವುದರಲ್ಲಿ ಆಸಕ್ತಿ. ಮನೆಯ ಅಂಗಳದಲ್ಲಿ ಅವರ ಶ್ರಮದ ಫಲವಾಗಿ ಸಾಕಷ್ಟು ಹೂವಿನ ಗಿಡಗಳು, ಸುಂದರ ಬೇಲಿ ಗಿಡಗಳು, ಕ್ಯಾಕ್ಟಸ್ ಜೀವ ತಳೆದಿವೆ. ಮನೆಯವರೆಲ್ಲರ ಕೈತೋಟ ಬೆಳೆಸುವ ಆಸಕ್ತಿ, ಗಿಡಗಳ ಪ್ರತಿ ಪ್ರೀತಿ ಇಂದು ವರ್ಷಪೂರ್ತಿ ಮನೆಗೆ ಬೇಕಾಗುವ ಕಾಯಿಪಲ್ಲೆ ಮನೆಯಲ್ಲಿಯೇ ಬೆಳೆದುಕೊಳ್ಳುವಂತೆ ಮಾಡಿದೆ. ಜೊತೆಗೆ ಪಪ್ಪಾಯಿ ಗಿಡ, ಬಾಳೆಯ ನಾಲ್ಕು ಗಿಡಗಳು ಹಣ್ಣಿನ ಸಮೃದ್ಧತೆಯನ್ನು ತಂದು ಕೊಟ್ಟಿವೆ. ಎಷ್ಟೋ ಬಾರಿ ಮನೆಯವರಿಗೆ ಮಿಕ್ಕಿ ನೆಂಟರ ಮನೆಗೂ ಈ ಹಣ್ಣುಗಳು ಪ್ರವಾಸ ಕೈಗೊಂಡಿವೆ! ಹಾಗೆಯೇ ಗುನಗಾ ಅವರ ಮನೆಗೆ ಭೇಟಿ ನೀಡುವವರಿಗೆ ಪ್ಯಾಷನ್ ಫ್ರುಟ್ ಜ್ಯೂಸ್ ಸದಾ ಲಭ್ಯ. ಅತ್ಯಂತ ಪೌಷ್ಠಿಕ, ಸ್ವಾದಿಷ್ಠ ರಸ್ನಾ ಸವಿಯ ನೈಸರ್ಗಿಕ ಕೇಸರಿ ಬಣ್ಣದ ಪಚನ ಶಕ್ತಿ ವೃದ್ಧಿಸುವ ಸೀಟ್ರಿಕ್ ಆಸಿಡ್ ಪೇಯವದು.

ಇಷ್ಟು ಸಾಲದು ಎಂಬಂತೆ ಗುನಗಾ ದಂಪತಿ (ಟೆರೆಸ್) ತಾರಸಿಯ ಉದ್ಯಾನ ಕೂಡ ನಿರ್ಮಿಸಿದ್ದಾರೆ. ಕೆಳಗಡೆ ಹಾಕಿರುವ ಬೀಜದಿಂದ ಹೀರೆ, ಹಾಗಲ ಹಾಗು ಕುಂಬಳ ಬಳ್ಳಿ ಹಬ್ಬುತ್ತಿದ್ದಂತೆ ‘ವಿಂಡ್ ಟ್ರೀ’ ಗಾಳಿ ಗಿಡಗಳಿಗೆ ದಾರ ಕಟ್ಟಿ ಹಬ್ಬಿಸುತ್ತ ತಾರಸಿಗೆ ತಂದು ಬಿಡುತ್ತಾರೆ. ಈ ಎಲ್ಲ ಕಾಯಿ ಪಲ್ಲೆ ಟೆರೆಸ್ ಮೇಲೆ ಆಧಾರ ಪಡೆದು ಹುಲುಸಾಗಿ ಹಬ್ಬಿ ಪಕ್ಷಿಗಳಿಗೂ ಆಹಾರ ಒದಗಿಸುತ್ತ ಬಂದಿವೆ. ಒಮ್ಮೆ ಮನೆಗೆ ಭೇಟಿ ನೀಡಿದ ಸಿವಿಲ್ ಇಂಜಿನೀಯರ್ ಹೀಗೆ ಮಾಡುವುದರಿಂದ ತಾರಸಿಗೆ ಹೊಡೆತ ಬಿದ್ದು, ಸೋರಲು ಶುರು ಮಾಡುತ್ತದೆ ಎಂದು ಎಚ್ಚರಿಸಿದರಂತೆ. ಹಾಗಂತ ಗುನಗಾ ದಂಪತಿ ತಮ್ಮ ಕಾಯಕ ನಿಲ್ಲಿಸಲಿಲ್ಲ. ಮನೆಯಲ್ಲಿ ಮುರಿದು ಬಿದ್ದ ಟೀಪಾಯ್, ಕಟ್ಟಿಗೆ ಹಾಗು ಕಬ್ಬಿಣದ ಸ್ಟ್ಯಾಂಡ್ ತಾರಸಿ ಏರಿದವು. ಅವುಗಳ ಮೇಲೆ ಇಟ್ಟಂಗಿಗಳು ಮನೆ ಮಾಡಿದವು. ಹಾಕು ಮಣ್ಣು ಹಾಕಿ ತಂತು ಬೇರಿರುವ ಪಲ್ಲೆ ಗಿಡಗಳನ್ನು, ಟೊಮೆಟೋ, ಭೆಂಡೆಕಾಯಿ ಗಿಡಗಳನ್ನು ಬೆಳೆಸಲಾಯಿತು. ಈಗ ತಾರಸಿಗೂ ಹಾನಿ ಇಲ್ಲ.

ತಾರಸಿಯ ಮೇಲೆ ಬಿದ್ದ ಮಳೆ ನೀರು ಸೋಸಿಕೊಂಡು ಪೈಪ್ ಗಳ ಮೂಲಕ ಟ್ಯಾಂಕಿಗೆ ಬಂದು ಬೀಳುತ್ತದೆ. ಹಾಗಾಗಿ ಮಳೆ ನೀರು ಕೊಯ್ಲಿಗೂ ಈ ಮನೆ ಹೆಸರುವಾಸಿ. ಕಾರವಾರದಿಂದ ಜೇನು ಕೂಡ ತಂದು ಗುನಗಾ ಸಾಕಿದ್ದಾರೆ. ಅವುಗಳನ್ನು ಪೆಟ್ಟಿಗೆಯಲ್ಲಿ ಉಳಿಸಿಕೊಳ್ಳಲು ಸಾಕಷ್ಟು ಏಗಿದ್ದಾರೆ. ಹೆಣಗಿದ್ದಾರೆ. ಬಟ್ಟಲಲ್ಲಿ ಬೆಲ್ಲ ಹಾಗು ಸಕ್ಕರೆ ಪಾಕ ಇಟ್ಟು ಬದುಕಿಸುವ ಮಾನವೀಯ ಕಳಕಳಿಯ ಪ್ರಯತ್ನ ಮೊದಲು ಮಾಡಿದ್ದಾರೆ. ಆದರೆ ಪುಷ್ಪಪರಾಗ ಪ್ರೇಮಿ ಜೇನು ನೊಣ ಗುನಗಾ ಅವರಿಗೆ ಕೈಕೊಟ್ಟಿವೆ. ‘ಅಕ್ಕ ಪಕ್ಕ ಹತ್ತು ಹರದಾರಿ ಎಲ್ಲಿಯೂ ಹೂವಿನ ಗಿಡಗಳಿಲ್ಲ..ಹರ್ಷ ಹಾಗಾಗಿ ಅವು ಪಾಪ ಹಾರಿ ಹೋದವು’ ಎಂದು ಬೇಜಾರು ಮಾಡಿಕೊಂಡ ನನಗೆ ಸಾಂತ್ವನ ಹೇಳಿದರು ಗುನಗಾ.

ಮಾಧ್ಯಮಿಕ ಶಾಲೆಯ ನಿವೃತ್ತ ಮಾಸ್ತರರ ಮಗ ಉಲ್ಲಾಸ್ ಗುನಗಾ ಬ್ಯಾಂಕಿನ ಓರ್ವ ಹಿರಿಯ ಅಧಿಕಾರಿ. ಈ ಎಲ್ಲ ಸರ್ಕಸ್ ಅವರಿಗೆ ಬೇಕಿರಲಿಲ್ಲ. ಸಾಕಷ್ಟು ಸಂಬಳ, ಸಾರಿಗೆ ಸಾಲದ್ದಕ್ಕೆ ಸಮಾಜದಲ್ಲಿ ದೊಡ್ಡ ಸ್ಥಾನ-ಮಾನವಿರುವ ಸಾರ್ವಜನಿಕ ಸಂಪರ್ಕ ಅಧಿಕಾರಿ. ಆದರೆ ಒಬ್ಬ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಗಿರಬೇಕು? ಸಾರ್ವಜನಿಕ ಸಂಪರ್ಕ ಎಂದರೇನು? ಎಂಬುದು ಮನದಟ್ಟಾಗಬೇಕಾದರೆ ಧಾರವಾಡದ ನಮ್ಮ ಗುನಗಾ ಅವರನ್ನು ನೀವು ಭೇಟಿ ಮಾಡಬೇಕು. ನನ್ನ ಜೀವನದಲ್ಲಿ ಜೀವನ್ಮುಖಿಯಾಗಿ ಬಾಳಲು ಪ್ರೇರಣೆ ನೀಡಿದವರು ಹಲವರಿದ್ದಾರೆ. ಅವರಲ್ಲಿ ಸದಾ ಮಾದರಿಯಾಗಿ ನಿಲ್ಲುತ್ತಾರೆ ಗುನಗಾ ದಂಪತಿ.

ಇಂದಿಗೂ ಪರಿಸರದೊಂದಿಗೆ ನಿತ್ಯ ಸಖ್ಯ. ಸದಾ ನಗು ಮೊಗ..ನಾನು ಸಿಟ್ಟು ತರಿಸಿದಾಗಲೂ! ಎಲ್ಲ ವಸ್ತುಗಳ ಹಿತ-ಮಿತವಾದ ಬಳಕೆ. ಬೇಕಾಗುವ ದಿನ ಬಳಕೆಯ ಆಹಾರ ಸಾಮಗ್ರಿ ಮನೆಯ ಅಂಗಳದಲ್ಲಿ ಬೆಳೆದುಕೊಂಡ ಸ್ವಾವಲಂಬಿ ಬದುಕು. ಪಕ್ಕದ ಮನೆ ಹಾಗು ಬಡಾವಣೆಯವರಿಗೂ ಪ್ರೇರಣೆ ನೀಡುವ ಜೀವನ. ಮನೆ ಅಂಗಳದ ಕೈತೋಟ- ವಿಶ್ವ ದಿನಾಚರಣೆಯ ಇಂದಿನ ಪ್ರಸ್ತುತ ದಿನದಂದು, ಕೈತೋಟದ ನಿತ್ಯೋತ್ಸವ ಮಾಡಿರುವ ಈ ದಂಪತಿ ನಮಗೆ ಪ್ರೇರಣೆ ಯಾಗಬಲ್ಲರು. ಹಾಗೆ ನಮ್ಮ ನಾಳಿನ ನಾಡಿನ ಸೂತ್ರ ಹಿಡಿಯುವ ಕರುಳ ಕುಡಿ ಮಧುರಾ ಕೂಡ.