ಝೆನ್ ಕಥೆ ೩೨: ಕೌಶಲ ಮತ್ತು ಮನಸ್ಸು

ಝೆನ್ ಕಥೆ ೩೨: ಕೌಶಲ ಮತ್ತು ಮನಸ್ಸು

ಬರಹ
archer
 

ಅನೇಕ ಬಿಲ್ಲುಗಾರಿಕೆಯ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದಿದ್ದ ಅಹಂಕಾರಿ ಯುವಕನೊಬ್ಬ  ಧನುರ್ವಿದ್ಯೆಯಲ್ಲಿ ಪರಿಣತನಾಗಿದ್ದ ಝೆನ್ ಗುರುವಿನ ಬಳಿ ಬಂದು ಪಂದ್ಯ ಕಟ್ಟಿದ.
ಯುವಕ ಚತುರ ಬಿಲ್ಲುಗಾರ. ದೂರದಲ್ಲಿದ್ದ ಗುರಿಗೆ ಸರಿಯಾಗಿ ಬಾಣ ಬಿಟ್ಟ. ಎರಡನೆಯ ಬಾಣದಿಂದ ಮೊದಲ ಬಾಣವನ್ನು ಸರಿಯಾಗಿ ಎರಡು ಭಾಗವಾಗುವಂತೆ ಸೀಳಿದ. "ನಿಮ್ಮ ಕೈಯಲ್ಲಿ ಆಗುವುದೋ ನೋಡಿ" ಎಂದ ಹೆಮ್ಮೆಯಿಂದ.
ಗುರು ವಿಚಲಿತನಾಗಲಿಲ್ಲ. ಹಾಗೆಂದು ಕೂಡಲೆ ಬಿಲ್ಲು ಎತ್ತಿ ಬಾಣ ಬಿಡಲೂ ಇಲ್ಲ. ಬಾ ನನ್ನೊಡನೆ ಎಂದು ಹೇಳಿ ಬೆಟ್ಟ ಏರ ತೊಡಗಿದ. ವೃದ್ಧನ ಉದ್ದೇಶ ಏನಿರಬಹುದೆಂದು ಅಚ್ಚರಿ ಪಡುತ್ತಾ ಯುವಕ ಹಿಂದೆಯೇ ಸಾಗಿದ.
ಬೆಟ್ಟದ ತುದಿ ಬಂದಿತು. ಅಲ್ಲೊಂದು ಆಳವಾದ ಕಮರಿ. ಅದಕ್ಕೆ ಅಡ್ಡಲಾಗಿ ಲಡ್ಡು ಹಿಡಿದಿದ್ದ ಮರದ ತುಂಡೇ ಸೇತುವೆ. ಕಾಲಿಟ್ಟರೆ ಸಾಕು ಅಲುಗಾಡುತ್ತಿತ್ತು. ಗುರು ಆ ಮರದ ದಿಮ್ಮಿಯ ಮಧ್ಯ ಭಾಗಕ್ಕೆ ನಡೆದು ಸ್ಥಿರವಾಗಿ ನಿಂತ. ದೂರ ಮರದಲ್ಲಿದ್ದ ಹಣ್ಣಿಗೆ ಗುರಿ ಇಟ್ಟು ಬಾಣ ಬಿಟ್ಟ. ಹಣ್ಣು ಬಿತ್ತು. " ಮತ್ತೆ ಹಿಂದಿರುಗಿ ಈಗ ನಿನ್ನ ಸರದಿ" ಎಂದ ಯುವಕನತ್ತ ನೋಡುತ್ತಾ.
ಆಳವಾದ ಕಮರಿಯನ್ನು ನೋಡುತ್ತ ಯುವಕ ಭಯ ಭೀತನಾಗಿದ್ದ. ಲಡ್ಡು ಹಿಡಿದ ಮರದ ದಿಮ್ಮಿಯ ಮೇಲೆ ಕಾಲಿಡುವುದಕ್ಕೇ ಅವನಿಗೆ ಧೈರ್ಯವಾಗಲಿಲ್ಲ. ಅಲ್ಲಿ ನಿಂತು ಬಾಣಬಿಡುವ ಮಾತು ದೂರವೇ ಉಳಿಯಿತು.
"ನಿನಗೆ ಬಿಲ್ಲುಗಾರಿಕೆಯ ಕೌಶಲವಿದೆ. ಆದರೆ ಬಾಣವನ್ನು ಎಸೆಯುವ ಬಿಲ್ಲನ್ನೂ, ಬಾಣವನ್ನು ಬಿಡುವ ಕೈಯನ್ನೂ ನಿಯಂತ್ರಿಸುವ ಮನಸ್ಸನ್ನು ನೀನು ಹೇಳಿದಂತೆ ಕೇಳುವಹಾಗೆ ಮಾಡುವ ಕೌಶಲ ಬಂದಿಲ್ಲ" ಎಂದ ಗುರು.

[ಕಾದುವುದು ಕೈದೋ, ಅದನ್ನು ಹಿಡಿದ ಕೈಯೋ, ಅಥವ ಮನಸ್ಸೋ ಎಂದು ಒಬ್ಬ ವಚನಕಾರ ಕೇಳುತ್ತಾನೆ. ಕೌಶಲಗಳಿಗೆ ಕೊಡುವಷ್ಟೇ ಗಮನ ಕೌಶಲವನ್ನೆಲ್ಲ ನಿಯಂತ್ರಿಸುವ ಮನಸ್ಸನ್ನು ಪಳಗಿಸಲೂ ಕೊಡಬೇಕಲ್ಲವೆ]