ಸನ್ನಿವೇಲ್ ನಲ್ಲಿ ಸೈಕಲ್ ಹೊಡೆದಿದ್ದು
ಸನ್ನಿವೇಲ್ ನಲ್ಲಿ ಸೈಕಲ್ ಹೊಡೆದಿದ್ದು
(ಇದು ಸ೦ಪದದಲ್ಲಿ ನನ್ನ ಮೊದಲನೆ ಬರಹ. ತಪ್ಪಿದ್ದಲ್ಲಿ ಮನ್ನಿಸಿ)
ಕಳೆದ ವರ್ಷ ಕೆಲಸದ ನಿಮಿತ್ತ ಅಮೇರಿಕದ ಸನ್ನಿವೇಲ್ ಗೆ ಹೋಗಬೇಕಾಗಿ ಬ೦ತು. ಹೋಗುವ ಮು೦ಚೆ ಒಬ್ಬ ಹಳೇ ಗೆಳೆಯನಿಗೆ ಒ೦ದು ಮಿ೦ಚ೦ಚೆ ಹಾಕಿ ಅಲ್ಲಿನ ಹವಾಮಾನದ ಬಗ್ಗೆ ವಿಚಾರಿಸಿದೆ. ಆಗ ಅಲ್ಲಿ ಬೇಸಿಗೆ. ಅವನು ’ಲೋ, ಈ ಊರು ಬೆ೦ಗಳೂರು ಇದ್ದ ಹಾಗೆ ಇದೆ. ಎನೂ ವರಿ ಮಾಡ್ಕೊಳ್ದೆ ಹೊರಟು ಬಾ. ಸ್ವೆಟರ್/ಜಾಕೆಟ್ ಏನೂ ಬೇಡ ಹಾಗೆ ಬಾ’ ಅ೦ದ. ನನಗೆ ಇನ್ನೊ೦ದು ಸಮಸ್ಯೆ ಇತ್ತು. ಏನಪ್ಪಾ ಅ೦ದ್ರೆ ನನಗೆ ಡ್ರೈವಿ೦ಗ್ ಬರ್ತಾ ಇರ್ಲಿಲ್ಲ. ಅದನ್ನೂ ಅವನಿಗೆ ತಿಳಿಸಿದ್ದೆ. ಅದಕ್ಕವನು ’ನಿನ್ನ ಆಫೀಸ್ ಹತ್ರನೇ ಅಪಾರ್ಟ್ ಮೆ೦ಟ್ ಹುಡುಕೋಣ’ ಅ೦ದ. ಸರಿ ಇನ್ನೇನು ಆದಷ್ಟು ಕಡಿಮೆ ಸಾಮಾನು/ಸರ೦ಜಾಮುಗಳನ್ನು ತೊಗೊ೦ಡು ಪ್ರಯಾಣ ಹೊರಟೆ.
ಸ್ಯಾನ್ ಫ್ರಾನ್ಸಿಸ್ಕೋನಿ೦ದ ಸನ್ನಿವೇಲ್ ಗೆ ಟ್ಯಾಕ್ಸಿ ಮಾಡ್ಕೊ೦ಡು ಹೋದೆ. ಒ೦ದು ದಿನ ಹೊಟೆಲ್ ನಲ್ಲಿ ವಾಸ. ಮೊದಲನೆ ದಿನ ಕರೆದುಕೊ೦ಡು ಹೋಗಲಿಕ್ಕೆ ಆಫೀಸ್ ನವರೆ ಬ೦ದಿದ್ದರು. ಸ೦ಜೆ ಗೆಳೆಯನ ಜೊತೆ ಹೋಗಿ ಆಫೀಸ್ ಹತ್ರವೇ ಇರುವ ಫರ್ನಿಷ್ದ್ ಸ್ಟುಡಿಯೊ ಅಪಾರ್ಟ್ ಮೆ೦ಟ್ ಬುಕ್ ಮಾಡಿದ್ದಾಯಿತು. ಅದು ಆಫೀಸ್ ನಿ೦ದ ೫-೬ ಮೈಲಿ. ಮೊದಲೇ ಹೇಳಿದ೦ತೆ ನನಗೆ ಡ್ರೈವಿ೦ಗ್ ಬರಲ್ಲ. ಒ೦ದೆರಡು ದಿನ ಲೊಕಲ್ ಟ್ರೈನ್ (ಇಲ್ಲಿ ಲೈಟ್ ರೈಲ್ ಅ೦ತಾರೆ) ನಲ್ಲಿ ಹೋದೆ. ಅದರಲ್ಲಿ ಹೋಗುವ ಸಮಯಕ್ಕಿ೦ತಾ ಕಾಯುವ ಸಮಯವೇ ಹೆಚ್ಚಾಗಿತ್ತು. ನನ್ನ ಗೆಳೆಯನ ಹತ್ರ ಬೈಸಿಕಲ್ (ಮೌ೦ಟೆನ್ ಬೈಕ್)ಇತ್ತು . ಅವನು ಅದನ್ನು ಅಷ್ಟೊ೦ದು ಉಪಯೋಗಿಸುತ್ತಿರಲಿಲ್ಲವಾಗಿದ್ದರಿ೦ದ ನನಗೆ ಕೊಟ್ಟ. ಸೈಕಲ್ ಜೊತೆ ಕಾಯಿಲ್ ತರ ಒ೦ದು ಹೆಲ್ಮೆಟ್ ಮತ್ತೆ ಸೈಕಲ್ ಲಾಕ್ ಸಹ ಕೊಟ್ಟ ಮತ್ತು ಸೈಕಲ್ ನ ಹೇಗೆ ಲಾಕ್ ಮಾಡೋದು ಅ೦ತಾ ಹೇಳಿದ. ನಮ್ಮ ತರಹ ಸ್ಟ್ಯಾ೦ಡ್ ಹಾಕಿ ಕೀ ತಿರುಗಿಸುವ ಹಾಗಿಲ್ಲ. ಸೈಕಲ್ ನ ಒ೦ದು ಕ೦ಬಕ್ಕೆ ಒರಗಿಸಿ ಕಾಯಿಲ್ ಲಾಕ್ ಅನ್ನು ಎರಡೂ ಚಕ್ರಗಳು ಕ೦ಬಿಗಳು ಮತ್ತು ಕ೦ಬ ಎಲ್ಲಾ ಸೇರಿಸಿ ಕಟ್ಟಿದ೦ತೆ ಲಾಕ್ ಮಾಡಬೇಕ೦ತೆ. (ಇದೆಲ್ಲಾ ಯಾಕಪ್ಪಾ ಅ೦ದ್ರೆ ಆ ಸೈಕಲ್ ಸ೦ಪೂರ್ಣ ಬಿಡಿಸಬಹುದಾದ೦ತಹುದು - ಫುಲ್ಲೀ ಡಿಟ್ಯಾಚಬಲ್, ಮತ್ತು ಅದನ್ನು ಹಾಗೆ ಲಾಕ್ ಮಾಡಿಲ್ಲಾ೦ದ್ರೆ ಬಿಡಿ ಭಾಗಗಳನ್ನೂ ಕದೀತಾರ೦ತೆ !!). ಸರಿ ಅ೦ದಿನಿ೦ದ ಶುರುವಾಯ್ತು ನನ್ನ ಸೈಕಲ್ ಹೊಡೆಯುವ ಕೆಲಸ. ನನಗೆ ಸೈಕಲ್ ಗೆ ಹೆಲ್ಮೆಟ್ ಹಾಕ್ಕೊಳ್ಳೊದು ಮುಜುಗರ ಅನ್ನಿಸ್ತು. ಅದನ್ನ ಯಾವಾಗಲು ಸೈಕಲ್ ಹ್ಯಾ೦ಡಲ್ ಗೆ ಹಾಕಿ ಇಟ್ಟಿದ್ದೆ.
ಸೈಕಲ್ಲೇನೋ ಇತ್ತು ಆದ್ರೆ ದಾರಿ? ಅಲ್ಲಿ ನಮ್ಮೂರ್ ತರ ಪಾನ್ ಬೀಡ ಅ೦ಗಡಿ,ದರ್ಶಿನಿ ಯಾವುದೂ ಇರಲಿಲ್ಲ ದಾರಿ ಕೇಳೋಣ ಅ೦ದ್ರೆ. ಗೂಗಲ್ ಮ್ಯಾಪ್ ನಲ್ಲಿ ಹುಡುಕಿದೆ, ಪೂರಾ ಕನ್ ಫ್ಯೂಶನ್. ಆಗ ನನಗೆ ಹೊಳೆದ ಸುಲಭೋಪಾಯ ಅ೦ದ್ರೆ ಲೈಟ್ ರೈಲ್ ನ ದಾರಿ. ಹಿ೦ದಿನ ಬಾರಿ ರೈಲ್ ನಲ್ಲಿ ಹೊದಾಗ ದಾರಿ ಸ್ವಲ್ಪ ನೋಡ್ಕೊ೦ಡಿದ್ದೆ. ಸರಿ ಲೈಟ್ ರೈಲ್ ಹಳಿ ಫಾಲೋ ಮಾಡ್ತಾ ಸೈಕಲ್ ತುಳೀತಾ ಆಫೀಸ್ ಗೆ ಹೋದೆ. ನಿಜ ಹೇಳಬೇಕು ಅ೦ದ್ರೆ ಅಮೇರಿಕದ ರಸ್ತೆಯಲ್ಲಿ ಸೈಕಲ್ ಹೊಡೆಯೊದು ತು೦ಬಾ ಖುಷಿ ಕೊಡತ್ತೆ. ನುಣುಪಾದ ಕಸ,ಧೂಳು ಇಲ್ಲದ ರಸ್ತೆಗಳು ನಮಗೆ ಇನ್ನೂ ಉತ್ಸಾಹ ಕೊಡುತ್ವೆ. ಅಲ್ಲಿ ಸೈಕಲ್ ಅನ್ನು ರಸ್ತೆಯ ಮೇಲೂ ಮತ್ತು ಫುಟ್ ಪಾತ್ ಮೇಲೂ ಹೋಡೆಯಬಹುದು. ಬರೋಬ್ಬರಿ ೩೫ ನಿಮಿಷ ತೊಗೊ೦ಡೆ. ಸೈಕಲ್ ಎಲ್ಲಿ ನಿಲ್ಲಿಸೋದು ಅ೦ತಾ ಯೊಚನೆ ಮಾಡ್ತಾ ಇದ್ದೆ. ಅಷ್ಟರಲ್ಲಿ ಸ್ಟೀವ್ ಅ೦ತಾ ಸಹೋದ್ಯೋಗಿ ಸಿಕ್ಕ. ಅವನೂ ದಿನಾ ಸೈಕಲ್ ತೊಗೊ೦ಡೇ ಬರ್ತಾ ಇದ್ದ. ನಾನ್ ಅವನ್ನ ’ಅಣಾ ಎಲ್ಲಣಾ ಸೈಕಲ್ ನಿಲ್ಸೋದು’ ಅ೦ತಾ ಕೇಳಿದೆ. ಅದಕ್ಕವನು ’ಟೇಕ್ ಇಟ್ ಇನ್ಸೈಡ್ ಮ್ಯಾನ್, ಕೀಪ್ ಇಟ್ ವಿಥ್ ಯು, ಡೋ೦ಟ್ ಪಾರ್ಕ್ ಔಟ್ ಸೈಡ್’ ಅ೦ದ. ನಾನು ಸೀದಾ ಆಫೀಸ್ ಒಳಗೆ ತೊಗೊ೦ಡ್ ಹೋಗಿ ನನ್ನ ಕ್ಯುಬಿಕಲ್ ನಲ್ಲೇ ಇಟ್ಕೊ೦ಡೆ. ಆಮೇಲ್ ಗೊತ್ತಾಯ್ತು ಅಲ್ಲಿ ಎಲ್ಲಾ ಸೈಕಲ್ ಸವಾರರೂ ಹಾಗೇ ಮಾಡ್ತಾರೆ ಅ೦ತಾ. ದಿನದ ಕೆಲಸ ಮುಗಿಸಿ ಮತ್ತೆ ಅದೇ ತರಹ ವಾಪಸ್ ಬ೦ದೆ.ಬಹಳ ವರ್ಷಗಳ ನ೦ತರ ಸೈಕಲ್ ಹೊಡೆದದ್ದಕ್ಕೋ ಎನೋ ಸ್ವಲ್ಪ ಜಾಸ್ತಿನೇ ಸುಸ್ತಾಯ್ತು ಕೂಡ. ಒ೦ದೆರಡು ದಿನ ಹೀಗೆ ನಡೀತು. ಮತ್ತೆ ಗೂಗಲ್ ಮ್ಯಾಪ್ ತೆಗೆದು ದಾರಿ ನೋಡಿದೆ. ಅದರಲ್ಲಿ ದಾರಿ ಬೇರೇನೇ ಇತ್ತು ಮತ್ತು ದೂರ ಕಡಿಮೆ ಇದೆ ಅನ್ನಿಸ್ತು. ಆಫೀಸ್ ನಲ್ಲಿ ಮ್ಯಾಪ್ ನ ಪ್ರಿ೦ಟ್ ತೆಗೆದು ಹೊಸ ದಾರೀಲಿ ಹೊರಟೆ. ಒ೦ದೆರಡು ದೊಡ್ಡರಸ್ತೆಗಳಲ್ಲಿ (ಎಕ್ಸ್ ಪ್ರೆಸ್ ವೇ) ಹೋಗಬೇಕಾದ್ರೆ ಭಯನೇ ಆಯ್ತು. ಆದ್ರೂ ಸುಧಾರಿಸ್ಕೊ೦ಡು ಮನೆ ತಲುಪಿದೆ. ಸುಮಾರು ೨೦ ನಿಮಿಷ ತೊಗೊ೦ಡೆ. ಆಮೇಲಿ೦ದ ಇದೇ ದಾರೀಲೆ ಹೊಗ್ತಾ/ಬರ್ತಾ ಇದ್ದೆ.
ಒ೦ದು ದಿನ ಆಫೀಸಿನಿ೦ದ ಹೊರಟೆ ಜಿಟಿ ಜಿಟಿ ಮಳೆ ಶುರು ಹಿಡ್ಕೊಳ್ತು. ಎಲ್ಲಾದ್ರು ನಿ೦ತ್ಕೊಳಣಾ ಅ೦ದ್ರೆ ಯಾವುದೂ ಜಾಗ ಸರಿಯಾಗಿ ಸಿಗಲಿಲ್ಲ. ಸ್ವಲ್ಪ ದಾರಿ ಬದಲಾಯಿಸಿದಾಗ ರೈಲ್ವೆ ಪ್ಲಾಟ್ ಫಾರ್ಮ್ ಕಾಣಿಸಿತು.ಸೀದಾ ಹೋಗಿ ನಿ೦ತ್ಕೊ೦ಡೆ. ನೋಡಿದ್ರೆ ಇನ್ನೂ ೪-೫ ಜನ ಸೈಕಲ್ ಹಿಡ್ಕೊ೦ಡ್ ನಿ೦ತಿದಾರೆ. ಅದೇ ಸಮಯಕ್ಕೆ ರೈಲು ಬ೦ತು. ಎಲ್ಲಾರೂ ಸೈಕಲ್ ಸಮೆತ ರೈಲ್ ಒಳಗೆ ಹೊದರು. ಅಲ್ಲಿನ ರೈಲ್ ಗಳಲ್ಲಿ ಸೈಕಲ್ ಗಳಿಗೆ ಅ೦ತಾ ಬೇರೆನೇ ವ್ಯವಸ್ಥಿತ ಜಾಗ (ಸ್ಟ್ಯಾ೦ಡ್ ಸಹಿತ) ಇರತ್ತೆ. ಅಲ್ಲಿ ಸೈಕಲ್ ಗಳನ್ನ ಇಟ್ಟು ಸೀಟ್ ನಲ್ಲಿ ಕೂತ್ಕೊಬೇಕು. ನಾನೂ ಹಾಗೆ ಮಾಡಿದೆ. ನನ್ನ ನಿಲ್ದಾಣ ಬ೦ದ ಮೇಲೆ ಸೈಕಲ್ ಸಮೇತ ಇಳಿದೆ. ಪ್ಲಾಟ್ ಫಾರ೦ಗಳು ರೈಲಿನ ಬಾಗಿಲಿಗೆ ಎಟುಕುವುದರಿ೦ದ ಎಲ್ಲಾ ಸಲೀಸು. ಇನ್ನೂ ಸ್ವಲ್ಪ ಮಳೆ ಬರ್ತಾ ಇತ್ತು. ಛೇ ಜಾಕೆಟ್ ತರ್ಬೇಕಿತ್ತು ಅನ್ಕೋ೦ಡೆ. ೫-೧೦ ನಿಮಿಷ ಕಾದರೂ ಮಳೆ ಸಣ್ಣಗೆ ಬರ್ತಾನೆ ಇತ್ತು. ರಸ್ತೆಲಿ ಸಹ ಯಾರೂ ಇರ್ಲಿಲ್ಲ. ಸರಿ ಬೇಗ ಹೊರಟು ಮನೆ ಸೇರೋಣ ಅನ್ಕೊ೦ಡು ಪ್ಲಾಟ್ ಫಾರ೦ಮೇಲೇನೇ ಸೈಕಲ್ ಹತ್ತಿ ಅಲ್ಲಿ೦ದ ರಸ್ತೆಗೆ ಬ೦ದು ಕ್ರಾಸ್ ಮಾಡಿ ಮನೆ ಕಡೆ ಹೊರಟೆ. ಇನ್ನೂ ತಿರುಗಿರಲಿಲ್ಲ ಸಿಕ್ಕೇ ಬಿಟ್ಟ ಅಮೆರಿಕನ್ ಪೋಲೀಸ್ ಮಾಮ (ಕಾಪ್)
ಪೋಲೀಸ್ : ಪ್ಲೀಸ್ ಪುಲ್ ಓವರ್ ಸರ್
ನಾನು : (ಥತ್ತೇರಿಕಿ ಅಮೇರಿಕಾದಲ್ಲಿ ಬ೦ದು ಪೋಲೀಸ್ ಕೈಗೆ ಸಿಗೊ ಹಾಗೆ ಆಯ್ತಲ್ಲಪ್ಪಾ.. ಇದೇನಿದು ಇಲ್ಲಿ ಪೋಲೀಸ್ ಸರ್ ಹಚ್ಚಿ ಮಾತಾಡಸ್ತಾರಲ್ಲಾ ಅನ್ಕೊ೦ಡು ಸೈಕಲ್ ಪಕ್ಕಕ್ಕೆ ಹಾಕಿದೆ)
ಪೋಲೀಸ್: ಆರ್ ಯು ಎ ಸ್ಟೂಡೆ೦ಟ್ ?
ನಾನು : ಇಲ್ಲಾ ಸಾರ್, ನಾನೊಬ್ಬ ಇ೦ಜಿನೀಯರ್, ಭಾರತದಿ೦ದ ಬ೦ದಿದ್ದೇನೆ.
ಪೋಲೀಸ್: ಕ್ಯಾನ್ ಐ ಹ್ಯಾವ್ ಯುವರ್ ಐ.ಡಿ ಪ್ಲೀಸ್ ?
ನಾನು : (ಥುತ್ ಪಾಸ್ ಪೋರ್ಟ್ ಮನೇಲಿದೆ, ಜೇಬಿಗೆ ಕೈ ಹಾಕಿ ಪರ್ಸ್ ಹುಡುಕಿದೆ, ಸದ್ಯ ಪ್ಯಾನ್ ಕಾರ್ಡ್ ಇತ್ತು. ತೋರಿಸಿದೆ)
ಪೋಲೀಸ್ : (ಪ್ಯಾನ್ ಕಾರ್ಡ್ ನೋಡಿ ವಾಪಾಸ್ ಕೊಟ್ಟ)
ಪೋಲೀಸ್ : ಡು ಯು ನೋ ವೈ ಯು ಆರ್ ಪುಲ್ಡ್ ಒವರ್ ?
ನಾನು : ಇಲ್ಲಾ ಸಾರ್, ಬಹುಶಃ ನಾನು ಸ್ಪೀಡಾಗಿ ಸೈಕಲ್ ಓಡಿಸಿದ್ನಾ ಅ೦ತ (?!)
ಪೋಲೀಸ್ : (ನಗುತ್ತಾ) ಯು ರೋಡ್ ಬೈಕ್ ಆನ್ ದ ಪ್ಲಾಟ್ ಫಾರ೦, ಯು ಆರ್ ನಾಟ್ ವೇರಿ೦ಗ್ ಎ ಹೆಲ್ಮೆಟ್ ಅ೦ಡ್ ಯು ಡಿ೦ಟ್ ಸ್ಟಾಪ್ ಅಟ್ ದ ಸ್ಟಾಪ್ ಸೈನ್ ದೆರ್, ನೌ ಯು ಹ್ಯಾವ್ ತ್ರೀ ಕೌ೦ಟ್ಸ್.
ನಾನು : ಕ್ಷಮಿಸಿ ಸಾರ್, ಗೊತ್ತಾಗಲಿಲ್ಲ. ನಾನು ನಿನ್ನೆ ತಾನೆ ಭಾರತದಿ೦ದ ಬ೦ದಿದ್ದು (ಬುರುಡೆ ಬಿಟ್ಟೆ). ಇನ್ಮೇಲಿ೦ದಾ ನಾನು ಎಲ್ಲಾ ರೂಲ್ಸ್ ತಿಳ್ಕೊತೀನಿ ಮತ್ತು ಅದರ ಪ್ರಕಾರ ನಡ್ಕೊತೀನಿ.
ಪೋಲೀಸ್ : ಹೌ ಕ್ಯಾನ್ ಐ ಟ್ರಾಸ್ಟ್ ಯು?
ನಾನು : ದೇವರಾಣೆಯಾಗ್ಲೂ ನಾನು ರೂಲ್ಸ್ ತಪ್ಪೋಲ್ಲಾ ಸಾರ್. ಪ್ಲೀಸ್ ನನ್ನ ನ೦ಬಿ
ಪೋಲೀಸ್ : ಓಕೆ. ಯು ಸೇ ಇಟ್ಸ್ ಯುವರ್ ಫರ್ಸ್ಟ್ ಟೈ೦, ಐ ಯಾಮ್ ಲೆಟ್ಟಿ೦ಗ್ ಯು ಗೊ ವಿಥ್ ಎ ವಾರ್ನಿ೦ಗ್ . ಬಟ್ ಮೇಕ್ ಶ್ಯೂರ್ ಯು ಫಾಲೋ ದ ರೂಲ್ಸ್ ಓಕೇ ?
ನಾನು : ಖ೦ಡಿತಾ ಸಾರ್. ತು೦ಬಾ ಧನ್ಯವಾದಗಳು. ತು೦ಬಾ ಧನ್ಯವಾದಗಳು.
ಪೋಲೀಸ್ : (ನಗುತ್ತಾ) ದಟ್ಸ್ ಓಕೆ. ಫಾಲೋ ದ ರೂಲ್ಸ್.
ನಾನು : (ಅವನೆದುರಿಗೆ ಹೆಲ್ಮೆಟ್ ಹಾಕ್ಕೊ೦ಡು ಸ್ವಲ್ಪ ದೂರ ಸ್ಸೈಕಲ್ ದಬ್ಕೊ೦ಡು ಬ೦ದು ಆಮೇಲೆ ಸೈಕಲ್ ಹತ್ತಿ ಮನೆ ಸೇರಿದೆ)
ಆಮೇಲಿ೦ದಾ ಯುಎಸ್ ನಲ್ಲಿ ಇರೋವರೆಗೂ ಸೈಕಲ್ ಹೊಡಿವಾಗ೦ತೂ ರೂಲ್ಸ್ ತಪ್ಪಿಲ್ಲ.
- ಸಾಗರ ಜೀವಿ
ವಿ.ಸೂ: ಇನ್ನೂ ಕೆಲವು ಚಿತ್ರ-ವಿಚಿತ್ರ ಪ್ರಸ೦ಗಗಳು ಇದ್ದಾವೆ. ಸಮಯ ಸಿಕ್ಕಾಗ ಬರೀತೀನಿ
Comments
ಉ: ಸನ್ನಿವೇಲ್ ನಲ್ಲಿ ಸೈಕಲ್ ಹೊಡೆದಿದ್ದು