ನೀನು ಯಾರೆ

ನೀನು ಯಾರೆ

ಹೊಳೆಯ ಬಂಡೆಯ ಮೇಲೆ ನಾ ನಿನ್ನ ಕಂಡೆ
ನಿನ್ನ ಹೆರಳೊಳಗಿತ್ತು ಮಲ್ಲಿಗೆಯ ದಂಡೆ
ನಿನ್ನ ಹಣೆಯಲ್ಲಿತ್ತು ಕಸ್ತೂರಿ ತಿಲಕ
ಕುಡಿಹುಬ್ಬುಗಳ ನಡುವೆ ಬೈತಲೆಯ ತನಕ

ನೆಚ್ಚಿನ ಕವಿ ನರಸಿಂಹಸ್ವಾಮಿಯವರ ‘ನೀನು ಯಾರೆ’ ಕವಿತೆಯ ೪ ಸಾಲಿದು.

‘ಕರಡಿಹುಬ್ಬ’ನ್ನು ಕುಡಿಹುಬ್ಬು ಮಾಡುವುದಕ್ಕೆ ಈಗ ಹೆಜ್ಜೆಗೊಂದು ಬ್ಯೂಟಿಪಾರ್ಲರ್‌ಗಳಿವೆ. ಈ ಹುಬ್ಬುಗಳನ್ನು ತಿಂಗಳಿಗೊಮ್ಮೆಯಾದರೂ ಬ್ಯೂಟಿಪಾರ್ಲರ್‌ಗೆ ಹೋಗಿ ಸರ್ವಿಸ್ ಮಾಡಿಸದಿದ್ದರೆ, ಊಟದ ಪಂಕ್ತಿಯಂತೆ ೨-೩ ಪಂಕ್ತಿ ಬೆಳೆದು ವಿಚಿತ್ರವಾಗಿ ಕಾಣಿಸುವುದು.

ವಿಷಯ ಅದಲ್ಲ-
ಮೇಲಿನ ಕವಿತೆಯಲ್ಲಿ-
ಈ ಕುಡಿಹುಬ್ಬುಗಳ ನಡುವಿನಿಂದ ಬೈತಲೆಯ ತನಕ ಹಣೆಯಲ್ಲಿದ್ದ- ‘ಕಸ್ತೂರಿ ತಿಲಕ’.

ಜಾನಪದದಲ್ಲೂ-
ಮುತ್ತಿನ ಓಲೆಯನ್ನಿಟ್ಟಳೆ ಮಹಾಲಕ್ಷುಮಿ, ‘ಕಸ್ತೂರಿ ತಿಲಕ’ ಧರಿಸಿದಳೆ..
ಎಂದಿದೆ.
ಬರೀ ಸ್ತ್ರೀಯರು ಮಾತ್ರವಲ್ಲ-
ಪುರಂದರ ದಾಸರುಕೀರ್ತನೆಯೊಂದರಲ್ಲಿ-
ಬತ್ತಲೆ ನಿಂತಿದ್ದವಗೆ ‘ಕಸ್ತೂರಿ ತಿಲಕ’ವೇಕೆ.. ಎಂದಿದ್ದಾರೆ.

ಈ ‘ಕಸ್ತೂರಿ ತಿಲಕ’ ಹೇಗೆ ಮಾಡುತ್ತಿದ್ದರು ಎಂಬಿತ್ಯಾದಿ ವಿವರ ಹುಡುಕುತ್ತಾ(ಸಿಗಲಿಲ್ಲ :( ) ತಲುಪಿದ್ದು ‘ಟಿಬೆಟ್’ಗೆ !!
ಅಲ್ಲಿ ಅಳಿವಿನ ಅಂಚಿನಲ್ಲಿರುವ ಕಸ್ತೂರಿ ಮೃಗದ ಬಗ್ಗೆ ಓದುವಾಗ ಮಹೇಶರ ಪ್ರತಿಕ್ರಿಯೆ ನೆನಪಾಯಿತು.-‘ಬಾಡುತಿನಿಗಳಿಗೆ ಕೋರೆಹಲ್ಲು..’
ಕಸ್ತೂರಿ ಮೃಗದ ಚಿತ್ರ ಗಮನಿಸಿ-

http://www.cites.org/gallery/species/mammal/musk_deer.html

ಕೊಂಬಿಲ್ಲದ ಈ ಪ್ರಾಣಿಗೆರಡು ಸುಂದರ ಕೋರೆಹಲ್ಲುಗಳಿವೆ.ಮಾಂಸಾಹಾರಕ್ಕಲ್ಲ-
ತನ್ನವರೊಂದಿಗೆ ಕಾದಾಡಲು ಮಾತ್ರ ಉಪಯೋಗಿಸುವುದು.
ಗಂಡು ಕಸ್ತೂರಿ ಮೃಗದ ಮೂತ್ರದ್ವಾರದ ಬುಡದಲ್ಲಿ ನಿಂಬೆಗಾತ್ರದ ಕೋಶವಿದೆ.ಒಮ್ಮೆಗೆ ಅರ್ಧದಿಂದ ಎರಡೂವರೆ ತೊಲೆಯಷ್ಟು ‘ಕಸ್ತೂರಿ’ ಸುರಿಸುವುದು.
ಗಾಢವಾದ ಇದರ ಪರಿಮಳ ಮಾಸುವುದಿಲ್ಲವಂತೆ.ಕನ್ನಡ ಕಸ್ತೂರಿ ಎನ್ನುವುದು ಇದೇ ಕಾರಣಕ್ಕೊ?

‘ಕಸ್ತೂರಿ ತಿಲಕ’ ಮತ್ತು ‘ಕನ್ನಡ ಕಸ್ತೂರಿ’ ಬಗ್ಗೆ ಸಂಪದಿಗರಿಂದ ಇನ್ನಷ್ಟು ವಿವರ ಸಿಗಬಹುದೇ?
-ಗಣೇಶ.

Rating
No votes yet