ಹಬ್ಬಗಳ ನಡುವೆ ಸಂಪದದ ಹಬ್ಬ

ಹಬ್ಬಗಳ ನಡುವೆ ಸಂಪದದ ಹಬ್ಬ

ಬರಹ

ಸಂಪದದ ಆಮಂತ್ರಣ  - ಗ್ನು/ಲಿನಕ್ಸ್ ಹಬ್ಬ - ಮೈಸೂರು ೨೦೦೮

ಸಾಲು ಸಾಲು ಹಬ್ಬಗಳ ಪಟ್ಟಿ ನಮ್ಮ ಕಣ್ಣ ಮುಂದಿರುವಾಗ ಕೆಲ ಹಿಂದೆ ಸಂಪದ ಬಳಗದ ಗೆಳೆಯರು ಶುರುಮಾಡಿದ ಗ್ನು/ಲಿನಕ್ಸ್ ಹಬ್ಬದ ನೆನಪಾಗಿ, ನಿಮ್ಮೆಲ್ಲರಿಗೆ ಮಾತು ಕೊಟ್ಟಂತೆ ಮತ್ತೆ ಹಬ್ಬವನ್ನ ನಿಮ್ಮೆಲ್ಲರೊಂದಿಗೆ ನಾಡ ಹಬ್ಬ ದಸರಾದ ಸುತ್ತಮುತ್ತ, ಮೈಸೂರಿನಲ್ಲೇ ಆಚರಿಸೋ ಕೆಲಸ ಶುರುವಾಗಿದೆ. ಮುಂದಿನ ತಿಂಗಳ ೨೧ ರಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಈ ಕಾರ್ಯಕ್ರಮ ನೆಡೆಯೋದು ಹೆಚ್ಚು ಕಡಿಮೆ ನಿಶ್ಚಿತವಾಗಿದೆ. ಕಡೆಯ ಬಾರಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ನೆಡೆದ ಕಾರ್ಯಕ್ರಮಕ್ಕೆ ಟೊಂಕ ಕಟ್ಟಿ ನಿಂತು ವಾರಗಟ್ಟಲೆ ಎಲ್ಲ ಕೆಲಸಗಳಲ್ಲಿ ಸಹಾಯ ಮಾಡಿದ ಮೈಸೂರಿನ ಗೆಳೆಯರು ಈ ಬಾರಿ ಅತಿಥೇಯರು, ಹಬ್ಬಕ್ಕೆ ಅಣಿ ಮಾಡುವುದರಲ್ಲಿ ಈ ಬಾರಿ ಅವರದ್ದೇ ಹೆಚ್ಚಿನ ಪಾತ್ರ.

ಕೊನೆಯ ಹಬ್ಬಕ್ಕೆ  ಸಿಕ್ಕ ನಿಮ್ಮೆಲ್ಲರ ಬೆಂಬಲ ನಾವಂದುಕೊಂಡದ್ದನ್ನ ಸಾಧಿಸಲು ಎಷ್ಟೋ ಮಟ್ಟಿಗೆ ಸಾಧ್ಯಮಾಡಿ ಕೊಟ್ಟಿತು. ಹಬ್ಬದ ನಂತರ ತಂತ್ರಜ್ಞಾನ ಕುರಿತ ಚರ್ಚೆಗಳು, ಲೇಖನಗಳು ಕನ್ನಡದಲ್ಲಿ ಕೆಲಮಟ್ಟಿಗಾದರೂ ಹೊರಬರಲಿಕ್ಕೆ ಸಾಧ್ಯಮಾಡಿ ಕೊಟ್ಟಿತು. ಅನೇಕರು ಲಿನಕ್ಸ್ ಅನ್ನ ತಾವೂ ಇನ್ಸ್ಟಾಲ್ ಮಾಡಿ ಕೊಂಡು, ಇತರರಿಗೂ ಇನ್ಸ್ಟಾಲ್ ಮಾಡಿ ಕೊಟ್ಟು ಖುಷಿ ಹಂಚಿಕೊಂಡಿದ್ದಾರೆ. ಲಿನಕ್ಸ್ ನಲ್ಲಿ ಕಂಡು ಕೊಂಡ ಕೆಲವು ತಾಂತ್ರಿಕ ತೊಂದರೆಗಳನ್ನ ತಂಡದೊಂದಿಗೆ ಹಂಚಿಕೊಂಡು ಅದಕ್ಕೆ ಪರಿಹಾರವನ್ನೂ ಕಂಡು ಕೊಂಡಿದ್ದಾರೆ. ಇನ್ನು ಕೆಲವರು ಧೃತಿಗೆಡದೆ ಮತ್ತೆ ಮತ್ತೆ ಪ್ರಯತ್ನಿಸಿ ತಮ್ಮ ಬಳಕೆಗೆ ಲಿನಕ್ಸನ್ನು ಒಗ್ಗಿಸಿಕೊಂಡಿದ್ದಾರೆ. ಇವರೆಲ್ಲರ ಉತ್ಸಾಹ ಕನ್ನಡದಲ್ಲಿ ತಂತ್ರಜ್ಞಾನದ ಅರಿವನ್ನ ಪಸರಿಸುವ ಕೆಲಸಕ್ಕೆ ಉಸಿರನ್ನ ತುಂಬಿದೆ.

ಹಬ್ಬದ ವೆಬ್ ಸೈಟ್ ನಿಮಗಾಗಿ ಮತ್ತೊಮ್ಮೆ ಹಬ್ಬದ ಬಗೆಗಿನ ಸುದ್ದಿಯನ್ನ ಸುರಿಮಳೆಗೈಯಲಿದೆ. ಹಬ್ಬ.ಇನ್ (habba.in) ಗೆ ಭೇಟಿ ಕೊಡೋದನ್ನ ಮರೀಬೇಡಿ. ನೀವೂ ಇದರಲ್ಲಿ ಭಾಗವಹಿಸಬಹುದು. ಹಬ್ಬ.ಇನ್ ನಲ್ಲಿ ನಿಮ್ಮ ಸಂಪದದ ಲಾಗಿನ್ ಉಪಯೋಗಿಸಿ ನಿಮ್ಮ ಬ್ಲಾಗ್ ಇತರೆ ಸಿದ್ದಪಡಿಸಿ ಕೊಳ್ಳಬಹುದು. ಹಾಗೇ ನೀವು ಈ ಬಾರಿಯ ಹಬ್ಬದಿಂದ ಏನನ್ನ ನಿರೀಕ್ಷಿಸುವಿರೆಂದು ತಿಳಿಸಿದರೆ ನಾವೂ ನಮ್ಮ ತಂಡದಿಂದಾಗಬಹುದ್ದನ್ನ ಖಂಡಿತ ನಿಮ್ಮ ಮುಂದಿಡುತ್ತೇವೆ.

ನಮಗೆ ಸಂದೇಶ, ಸಲಹೆ ಇತರೆಗಳನ್ನ ಕಳಿಸಿ ಕೊಡಬೇಕೆ? ಕೆಳಗಿನ ಕೊಂಡಿಯನ್ನ ಉಪಯೋಗಿಸಿ :
http://habba.in/contact

ಇಲ್ಲಿಗೆ ಮೈಲಾಯಿಸ ಬಹುದೂ ಕೂಡ :
tech-volunteers@sampada.net

ಈ ಬಾರಿ ನೆಡೆಯಲಿರುವ ಹಬ್ಬದಲ್ಲಿ ಮತ್ತಷ್ಟು ಹೊಸತಾದದ್ದನ್ನು ಆದಷ್ಟು ಸರಳವಾಗಿ ನಿಮ್ಮೆಲ್ಲರ ಮುಂದೆ ತರುವ ಬಯಕೆ ನಮ್ಮದು. ನೀವೆಲ್ಲರೂ ಮತ್ತೊಮ್ಮೆ ನಮ್ಮೊಡಗೂಡಿ ಹಬ್ಬದ ಸಿಹಿಯೂಟ ಸವಿಯಲಿಕ್ಕೆ ಮೈಸೂರಿಗೆ ತಪ್ಪದೇ ಬಂದು, ಭಾಗವಹಿಸುವಿಸುತ್ತೀರಿ ತಾನೆ?