ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ

ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ

ಬರಹ

ನಿಮಗೊಂದು ಚೂರು ಮಾಹಿತಿ ತಿಳಿದಿದೆ. ಮತ್ತೊಬ್ಬರಿಗೊಂಚೂರು ಮಾಹಿತಿ ತಿಳಿದಿದೆ. ಈ ಮಾಹಿತಿಗಳ ಚೂರುಗಳನ್ನು ಒಂದೆಡೆ ಬೆಸೆದು, ಅತ್ತಿತ್ತ ಓದುತ್ತ, ಅಲ್ಲಿಲ್ಲಿ ಕೇಳಿದ್ದನ್ನು ಬೆಸೆಯುತ್ತ ಜೊತೆಗೂಡಿಸಿ ಸೇರಿಸುತ್ತ ಹೋದರೆ ಏನಾಗುತ್ತದೆ? ಅದು ವಿಕಿಪೀಡಿಯ. ಕೇಳಿದವರಿಗೆಲ್ಲ ನಾವು ವಿಕಿಪೀಡಿಯ ಒಂದು ಮುಕ್ತ ವಿಶ್ವಕೋಶ ಎಂದು ಹೇಳುತ್ತೇವೆ. ಅದು ಯಾರೊಬ್ಬರೂ ಓದಬಹುದಾದ, ಹಾಗೂ ಎಡಿಟ್ ಮಾಡಬಹುದಾದ ವಿಶ್ವಕೋಶ ಎನ್ನುತ್ತೇವೆ. ಆದರೆ ಇದು ನಿರ್ಮಿತಗೊಳ್ಳುತ್ತಿರುವ ವಿಶ್ವಕೋಶ. ಇನ್ನೂ ಬರೆದು ಮುಗಿಸಿಲ್ಲದ ಪುಸ್ತಕದಂತೆ. ಈ ಜ್ಞಾನ ಭಂಡಾರ ನಿರ್ಮಾಣದಲ್ಲಿ ಎಲ್ಲರಿಗೂ ತಮ್ಮ ಜ್ಞಾನ ಕೂಡಿಡಲು ಒಂದು ಮುಕ್ತ ಅವಕಾಶ.

ಮಾಹಿತಿ ಹುಡುಕುತ್ತ ಹೋದವರಿಗೆ ಅಲ್ಲಿಲ್ಲಿ ಸಿಕ್ಕ ಮಾಹಿತಿಯ ಸತ್ಯಾಸತ್ಯತೆಯನ್ನು ಅಳಿಯಬೇಕೆಂಬ ಅರಿವು ಇರುತ್ತದೆ. ಎಲ್ಲೆಲ್ಲೂ ಸಿಗುವ ಮಾಹಿತಿ ಸತ್ಯವಿರಬೇಕಿಲ್ಲ, ನಾವುಗಳು ಸತ್ಯವೆಂದುಕೊಂಡು ನಂಬಿ ಮುನ್ನುಗುತ್ತೇವೆಯೇ ಹೊರತು ಸತ್ಯ ಹಾಗೂ ಸತ್ಯವಲ್ಲದ್ದನ್ನು ಅಳಿಯುತ್ತ ಸತ್ಯ-ಅಸತ್ಯದ ನಡುವಿನ ಹಂದರ ಕಂಡುಹಿಡಿಯಲು ಹೊಡೆದಾಡುವುದು ಜೀವನ ಪರ್ಯಂತ ಇದ್ದದ್ದೇ ಅಲ್ಲವೆ?

ಈಗ ವಿಕಿಪೀಡಿಯದಲ್ಲಿರುವ ಮಾಹಿತಿ ಎಷ್ಟರಮಟ್ಟಿಗೆ ಬಳಸಿಕೊಳ್ಳಬಹುದು? ವಿಕಿಪೀಡಿಯ ಹುಟ್ಟುಹಾಕಿದವರಲ್ಲಿ ಒಬ್ಬನಾದ ಜಿಂಬೋ ವೇಲ್ಸ್ ಸ್ವತಃ ತಿಳಿಸುವಂತೆ - ಮಾಹಿತಿಯ ಸಂಶೋಧನೆಗೆ ಇದೊಂದು starting point.

ಸಂಶೋಧನೆ ನಡೆಸುತ್ತಿರುವಂತೆ ಅಲ್ಲಿಲ್ಲಿ ಕಂಡ ನಂಬಲರ್ಹ ಮಾಹಿತಿ ಬೇರೆಲ್ಲೋ ಬರೆದಿಡುವುದಕ್ಕಿಂತ ಇಲ್ಲಿ ಮುಕ್ತವಾದ ಮಾಧ್ಯಮದಲ್ಲಿ ಬರೆದಿಡುವುದು ಮಾಹಿತಿ ನಿಯಂತ್ರಿಸಿ ನೀಡಿದವರ ವಿರುದ್ಧ ಅಸ್ತ್ರವಾಗಬಹುದು ಎಂಬುದು ಹಲವರ ಅಂಬೋಣ. ಮಾಹಿತಿ ಅರಸಿ ಹೋದವರಿಗೆ ತಪ್ಪಿರುವ ಮಾಹಿತಿಯೆಂದರೆ ಆಗದು. ಸಿಟ್ಟು ಬರುವಂಥದ್ದು. ಅದನ್ನು ಎಡಿಟ್ ಮಾಡಿ ಸರಿ ಮಾಡುವಂತಹ ಅವಕಾಶ ಕೊಟ್ಟರೆ ಏನು ಮಾಡುತ್ತಾರೆ ಹೇಳಿ?
ಹೀಗೆ ಒಬ್ಬರು ಬರೆದದ್ದನ್ನು ಮತ್ತೊಬ್ಬರು ಸರಿಪಡಿಸಿ, ಮತ್ಯಾರೋ ಉತ್ತಮಪಡಿಸಿ, ಇನು ಯಾರು ಯಾರೋ ಮಾಹಿತಿ ಸೇರಿಸುತ್ತ ಹೋಗುವ collaborative ಕೆಲಸ ವಿಶ್ವದಾದ್ಯಂತ ನಡೆಯುತ್ತ ಬಂದರೆ ಅಲ್ಲಿ ಸೇರುವ ಕಲೆಕ್ಟಿವ್ ಮಾಹಿತಿ ಜಗತ್ತಿನಲ್ಲಿರುವ ಯಾವುದೇ ವಿಶ್ವಕೋಶವನ್ನೂ ಮೀರಬಲ್ಲುದು! ಯಾವುದೇ ವಿಶ್ವಕೋಶಕ್ಕಿಂತ ಹಲವು ಹೆಜ್ಜೆ ಮುಂದೆ ಹೋಗಬಲ್ಲುದು.

ಆದರೆ ವಿಕಿಪೀಡಿಯಕ್ಕೆ ತನ್ನದೇ ಆದ ಸವಾಲುಗಳಿವೆ. ಆ ಸವಾಲುಗಳನ್ನು ಉದ್ದೇಶಿಸುವುದು ಸಿನಿಕತನ ಎನ್ನುವುದು ಸುಲಭ. ಉದ್ದೇಶಿಸದೆ ಇರುವುದು ಬೇಜವಾಬ್ದಾರಿತನ. ವಿಕಿಪೀಡಿಯ ಎಷ್ಟು ಚೆಂದ, ಇದರಿಂದ ಏನೆಲ್ಲ ಆಗಬಲ್ಲುದು ಎಂಬ ದಿವ್ಯವಾದ ಕಣ್ಚುಚ್ಚುವ ಪ್ರಕಾಶಮಾನ ಬೆಳಕಿನಲ್ಲಿ ಬೇರೇನೂ ಕಾಣದಾಗುವುದೂ ಸಹಜ.

ವಿಕಿಪೀಡಿಯ ಪ್ರಾರಂಭವಾದದ್ದಾಯಿತು. ಅದರಲ್ಲಿ ಮಿಲಿಯನ್ ಗಟ್ಟಲೆ ಬುದ್ಧಿಜೀವಿಗಳು ಪಾಲ್ಗೊಂಡದ್ದಾಯಿತು, ಮತ್ತಷ್ಟು ಬುದ್ಧಿಜೀವಿಗಳು ಸೇರಿಕೊಂಡದ್ದಾಯಿತು. ಸಂಶಯ ಬೇಡ, ಅದನ್ನು ಹೇಗೆ ಉತ್ತಮಪಡಿಸುವುದು, ವಿಕಿಪೀಡಿಯ ಎದುರಿಸುತ್ತಿರುವ ಸವಾಲುಗಳಿಗೆ ಉತ್ತರವೇನೇನು ಎಂಬುದನ್ನು ಆಲೋಚಿಸುವುದಕ್ಕೂ ಲಕ್ಷಾನುಗಟ್ಟಲೆ ಜನರಿದ್ದಾರೆ, ಈ ಕ್ಷಣದಲ್ಲು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಇದನ್ನು ನಿರ್ವಹಿಸಲೆಂದು ಹುಟ್ಟುಹಾಕಿದ ಒಂದು ಸಂಸ್ಥೆಯಿದೆ. ಅದು ಒಂದಷ್ಟು ಜನರಿಗೆ ಉದ್ಯೋಗ ನೀಡಿದೆ. ಪ್ರತಿವರ್ಷ ಮಿಲಿಯನ್ನುಗಟ್ಟಲೆ ಬಜೆಟ್ ಇರುವ, ಅಷ್ಟೇ ಹಣವನ್ನು ಸಂಗ್ರಹಿಸುತ್ತಿರುವ ಸಂಸ್ಥೆ ಇದು. ಥೇಟ್ ಅಮೇರಿಕದ ನಾನ್ ಪ್ರಾಫಿಟ್ಟುಗಳ ಥರಾನೇ ನಡೆಯುವ ಸಂಸ್ಥೆಯಿದು.
(ಅಮೇರಿಕದ ನಾನ್ ಪ್ರಾಫಿಟ್ಟುಗಳ ಬಗ್ಗೆ ಅಥವ ಭಾರತದಲ್ಲೇ ಹುಟ್ಟಿಕೊಂಡಿರುವ, ಹುಟ್ಟಿಕೊಳ್ಳುತ್ತಿರುವ ಕಾರ್ಪೋರೇಟ್ ವೈಖರಿಯ ಬಗ್ಗೆ ಗೊತ್ತಿಲ್ಲದವರಿಗೆ ಪರಿಚಯ ಮಾಡಿಕೊಡುವ ಗೋಜಿಗೆ ಇಲ್ಲಿ ನಾನು ಹೋಗುವುದಿಲ್ಲ).

ವಿಕಿಪೀಡಿಯದಲ್ಲಿ ಸೇರಿಸಲ್ಪಟ್ಟ ಮಾಹಿತಿಯ ಸ್ವತ್ತು ಯಾರದ್ದು? ಸೇರಿಸಲ್ಪಟ್ಟ ಮಾಹಿತಿ ಅಯಾ ಮಾಹಿತಿಯನ್ನು ಸೇರಿಸಿದವರ ಕಾಪಿರೈಟ್. ಆದರೆ ಒಟ್ಟಾರೆ ವಿಕಿಪೀಡಿಯ GNUFDL ಅಂದರೆ GNUರವರ ಫ್ರೀ ಡಾಕ್ಯುಮೆಂಟೇಶನ್ ಲೈಸೆನ್ಸಿನಡಿ ಲಭ್ಯ. ಈ ಲೈಸೆನ್ಸ್ ಮೂಲತಃ ಸ್ವತಂತ್ರ ತಂತ್ರಾಂಶ (ಅಥವ Free Software) ಡಾಕ್ಯುಮೆಂಟ್ ಮಾಡಲೆಂದು ಡ್ರಾಫ್ಟ್ ಮಾಡಿದ ಲೈಸೆನ್ಸು.

ಈ ಲೈಸೆನ್ಸಿನಡಿ ಇರುವ ಪುಟಗಳನ್ನು ಯಾರು ಬೇಕಾದರೂ ಕಾಪಿ ಮಾಡಬಹುದು, ಬದಲಾಯಿಸಬಹುದು, ಹಂಚಬಹುದು. ಆದರೆ ಕೆಲವು ಬದ್ಧತೆಗಳಿವೆ.
ಅಲ್ಲದೆ ಈ ಲೈಸೆನ್ಸಿನಡಿ ಇರುವ ಪುಟಗಳನ್ನು ಯಾರು ಬೇಕಾದರೂ ವಾಣಿಜ್ಯವಾಗಿ ಬಳಸಿಕೊಳ್ಳಲೂಬಹುದು (ಅಂದರೆ ಅದನ್ನು ಉತ್ಪನ್ನದೊಂದಿಗೆ ಮಾರಿದರೆ ಅಥವ ನೇರವಾಗಿ ಮಾರಿದರೂ ಏನೂ ಅಡೆತಡೆಗಳಿರವು).

ವಿಕಿಪೀಡಿಯದಲ್ಲಿ ಬರೆದವರು ಬರೆದದ್ದನ್ನು ಯಾರಾದರೂ ಬದಲಾಯಿಸಬಹುದೆಂಬುದನ್ನು ಅರಿತು ಬರೆಯಬೇಕು. ಇಲ್ಲಿಯ ಲೇಖನ ಲೇಖನವಲ್ಲ, ಬದಲಿಗೆ ಮಾಹಿತಿಪುಟ. ನಿರಂತರ ಶೇಖರಿಸಲ್ಪಡುವ ಮಾಹಿತಿಪುಟ. ನಮ್ಮ ಪರಂಪರೆಯಲ್ಲಿ ಬರೆಯಲಾಗುವ "ಲೇಖನ"ವೆಂಬಂತೆ ಬರೆಯಲು ಹೊರಟವರಿಗೆ ಇದು ಜಾಗವಲ್ಲ ಎಂಬುದು ತಿಳಿದಿರಲಿ. ವಿಕಿಪೀಡಿಯ ಅಭಿಪ್ರಾಯಗಳನ್ನು ದಾಖಲು ಮಾಡಲು ಛಾವಡಿಯಲ್ಲ. ಹಾಗೇನಾದರೂ ಅಭಿಪ್ರಾಯ ದಾಖಲಿಸಿದ್ದರೆ ಯಾವತ್ತಾದರೂ ಯಾರಿಂದಾದರೂ ತೆಗೆದುಹಾಕಲ್ಪಡುತ್ತದೆ ಎಂಬುದು ನೆನಪಿರಲಿ. ಬೇರೊಬ್ಬರು ಹಾಗೆ ಅಭಿಪ್ರಾಯ ದಾಖಲು ಮಾಡಿದರೆ ನೀವು ತೆಗೆದುಹಾಕಬಹುದು ಕೂಡ. ಆದರೆ ತೆಗೆದುಹಾಕಿದ್ದನ್ನು ಅವರು ಮತ್ತೆ ಹಾಕಿದರೆ? ಮತ್ತೆ ತೆಗೆದುಹಾಕಿ. ಮತ್ತೊಮ್ಮೆ ಹಾಕಿದರೆ? ಮತ್ತೊಮ್ಮೆ ತೆಗೆದುಹಾಕಿ! ಮತ್ತೆ ಮತ್ತೆ ಹೀಗೆ ಹಾಕುತ್ತಿದ್ದರೆ? (ಮಾತಿನ) ಕತ್ತಿ, ಚೂರಿ ಮಸೆಯಲು ರೆಡಿಯಾಗಿ. :-)

ಮತ್ತಷ್ಟು:

  • [http://www.smh.com.au/news/web/pms-staff-edited-wikipedia/2007/08/23/1187462443308.html|(ಆಸ್ಟ್ರೇಲಿಯದ) P M ವಿಕಿಪೀಡಿಯ ಎಡಿಟ್ ಮಾಡಿಸಿದಾಗ]
  •  [http://xkcd.com/214/|ವಿಕಿಪೀಡಿಯದ ಪ್ರಾಬ್ಲಮ್ಮು]

ವಿಕಿಪೀಡಿಯದಲ್ಲಿ ಬರೆಯುವ ಒಬ್ಬರಿಗೆ ಅದು ಕಂಡುಬಂದದ್ದು ಹೀಗೆ:

ಚಿತ್ರ ಕೃಪೆ: [:http://www.qwghlm.co.uk/blog/2007/08/29/what-wikipedia-would-look-like-if-on-paper-broken-down/|qwghlm]