ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!

ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!

ಬರಹ

"ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು!
ಕೊಂಬು-ಕೊಳಲು ಧ್ವನಿಗಳಿದ್ದು;
ತುಂಬರು ನಾರದರ ಗಾನ ಕೇಳುವ ಹರಿ
ನಂಬಲಾರ ಈ ಢಂಬಕದ ಕೂಗಾಟ;
ಕೇಳನು ಹರಿ ತಾಳನು"//

"ವಾಹ್! ದಾಸರ ಏನ್ ಹಾಡ್ ಹಾಡಿದ್ರಿ! ಈ ದಾಸರ ಪದಕ್ಕ ಸಾಕ್ಷಾತ್ ಹರಿ ಪ್ರತ್ಯಕ್ಷ ಆಧಾಂಗ ಆತು. ಒಂಚೂರು ತಡೀರಿ..ಏ..ಕೃಷ್ಣಾ ನೀ ಹೇಳು, ದಾಸರು ಹಾಡಿದ ಪದದ ರಾಗ ಯಾವುದು?"

ಗಾಯನಗಂಗೆ, ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಕಟಗೇರಿ ದಾಸರ ಗಾಯನ ಕೇಳಿ, ಆನಂದದಿಂದ ಉದ್ಗರಿಸಿದ ವಾಕ್ಯಗಳಿವು. ಗಾಯನಗಂಗೆಯ ಅಪೇಕ್ಷೆಯ ಮೇರೆಗೆ ಅವರ ಮಗಳು ಕೃಷ್ಣಾ ಅವರಿಗೆ ದಾಸರ ಪದಗಳನ್ನು ಕಲಿಸಲು ಹೋದಾಗ ಕಟಗೇರಿ ದಾಸರಿಗೆ ಒದಗಿಬಂದ ಸಂದರ್ಭ ಇದು.

೭೭ ವರ್ಷಗಳ ಜ್ನಾನವೃದ್ಧ ಅನಂತಾಚಾರ್ಯ ಬಾಳಾಚಾರ್ಯ ಕಟಗೇರಿ ದಾಸರು, ದಾಸರ ಪದಗಳ ಖಣಿ. ಗಮಕ ಕಲಾನಿಧಿ. ದಾಸ ಸಾಹಿತ್ಯದ ಅದ್ಭುತ ಭಂಡಾರ. ೩ ಹಗಲು ೩ ರಾತ್ರಿ ಸತತವಾಗಿ ಹಾಡಬಲ್ಲ ದಾಸರ ಪದಗಳ ನಡೆದಾಡುವ ವಿಶ್ವಕೋಶ. ಇದು ಅತಿಶಯೋಕ್ತಿ ಅಲ್ಲ! ಪ್ರತಿಯೊಂದು ಸಂದರ್ಭಕ್ಕೂ, ಪದಕ್ಕೂ ಅವರಲ್ಲಿ ಅರ್ಥಪೂರ್ಣ ಹಾಡುಗಳಿವೆ.

ಆಂಧ್ರಪ್ರದೇಶದ ಗುಂತಕಲ್ ಬಳಿಯ ಚಿಪ್ಪಗೇರಿಯ ವಿಜಯದಾಸರ ಪಟ್ಟದ ಶಿಷ್ಯರಾದ ಕಟಗೇರಿ ದಾಸರು, ದಾಸರು ಹೆಣೆದ ‘ಪದಗಳು’, ನೀಡಿದ ಸುಳುವಿನ ಹಾದಿ ‘ಸುಳಾದಿಗಳು’, ತಪ್ತವಾದಂತಹ ಸಂದರ್ಭದಲ್ಲಿ ಮಾರ್ಗದರ್ಶಿಯಾಗಿ ನೀಡಿದ ಸೂತ್ರಗಳು ‘ಊಗಾಭೋಗ’ ಹಾಗು ವಿಮರ್ಶೆಗೆ ಸ್ವತ: ಒಡ್ಡಿಕೊಳ್ಳುವ- ‘ನಿಂದಾಸ್ತೋತ್ರ’ ಗಳಲ್ಲಿ ಅವರು ಎತ್ತಿದ ಕೈ.

"ಜನರನ್ನ ಮರುಳು ಮಾಡಬ್ಯಾಡ್ರಿ; ಪರಮಾತ್ಮನನ್ನ ಮರುಳು ಮಾಡ್ರಿ. ಅರ್ಥವಿಲ್ಲದ ಮಾತು ಒಡೆದ ಮಡಿಕೆಯ ತೂತು ಇದ್ಧಾಂಗ!’ ಎನ್ನುತ್ತಲೇ ನನ್ನೊಂದಿಗೆ ಹಾಗು ನನ್ನ ಅಣ್ಣ ಸೋಮಣ್ಣ (ಅವರ ಸಂಗೀತ ವಿದ್ಯಾರ್ಥಿ) ಮಾತಿಗಿಳಿದ ದಾಸರು, ‘ಬಿತ್ತುವಾತ ಇಂದ್ರ; ಬೆಳೆಯುವಾತ ಚಂದ್ರ, ಕಳೆ ತೆಗೆಯುವವ ಯಮರಾಜ. ಬಿತ್ತಿದವನು ಬೆಳೆಯಾನು! ಬೆಳೆಸಿದವ ತಿನ್ನಲಾರ! ಕಳೆ ತೆಗೆಯಲಾರ! ಇದು ಬೀಜ ಮಾತು ಪುರುಂದರ ವಿಠ್ಠಲ’ ಇಷ್ಟು ನನಗ ನಮ್ಮ ಗುರುಗಳು ಹೇಳಿ ಕೊಟ್ಟಾರ, ನಂಬಿ ನಡದೇನಿ" ಅಂದ್ರು ವಯೋವೃದ್ಧ ಕಟಗೇರಿ ದಾಸರು.

‘ನಿಮ್ಮ ಬಗ್ಗೆ ಬರೀಬೇಕು ಅಂತ ಮಾಡೇನಿ’ ಅಂದೆ. ‘ಅಲ್ಲೋ..ಹರ್ಷಪ್ಪ ನನ್ನ ಬಗ್ಗ್ಗೆ ಬರೀಬ್ಯಾಡಾ. ದಾಸ ಸಾಹಿತ್ಯದ ಬಗ್ಗೆ ಬರಿ. ದಾಸರ ಬಗ್ಗೆ ಬರಿ’ ಅಂತ ನೇರವಾಗಿ ಹೇಳಿದ ನಿರ್ಲಿಪ್ತ ಸ್ವಭಾವದವರು ಕಟಗೇರಿ ದಾಸರು. ಆದರೂ ಒತ್ತಾಯಕ್ಕೆ ಮಣಿದು ತಮ್ಮ ಜೀವನದ ಏಳು ಬೀಳುಗಳನ್ನು ಯಾವುದೇ ಸಂಕೋಚ, ಬೇಸರ ಅಥವಾ ದು:ಖಗಳಿಲ್ಲದೇ ಸ್ಥಿತಪ್ರಜ್ನರಾಗಿ ವಿವರಿಸಿದರು.

ತಂದೆ ಬಾಳಾಚಾರ್ಯರು ಮೂಲತ: ಆಂಧ್ರಪ್ರದೇಶದ ಕಡಪಾದವರು. ಸಿತಾರ್ ವಾದಕರಾಗಿದ್ದರು. ಪೌರೋಹಿತ್ಯದ ಕೆಲಸ ಮಾಡಿ ಉಪಜೀವನ ಮಾಡುತ್ತಿದ್ದವರು. ತಾಯಿ ವೃಂದಾಬಾಯಿ; ಸದ್ಗುಣ ಸಂಪನ್ನೆ, ಸದ್ಗೃಹಸ್ಥೆ ಆಗಿದ್ದರು. ಹಿಂದಿನ ಕಾಲದಲ್ಲಿ ಜನ ತಿರುಪತಿಯ ತಿರುಮಲನ ದರ್ಶನಕ್ಕೆ ಕಾಲ್ನಡಿಗೆಯ ಮೂಲಕ ಬರುತ್ತಿದ್ದರು. ತೀರ್ಥಯಾತ್ರೆ ಅಂತ ಅದಕ್ಕೆ ಹೆಸರು ಕೊಟ್ಟಿದ್ರು. ಕರ್ನಾಟಕದಿಂದ ಬಂದ ಭಕ್ತಾದಿಗಳು ದಾಸರ ಮನೆಯಲ್ಲಿ ವಾಸ್ತವ್ಯ ಹೂಡ್ತಿದ್ರು.

ದಾಸರಿಗೆ ಇದ್ದ ಪಾಂಡಿತ್ಯ, ಕಂಚಿನ ಕಂಠ ಮತ್ತು ವಿದ್ವತ್ ನೋಡಿ ಭಕ್ತರೇ ಹೊಲ-ಮನಿ ಕೊಡುವುದಾಗಿ ತಿಳಿಸಿ ಬದಾಮಿ ತಾಲೂಕಿನ ಕಟಗೇರಿಗೆ ಕರೆದುಕೊಂಡು ಬಂದ್ರು. ಆ ಉತ್ಪನ್ನ, ಪೌರೋಹಿತ್ಯದ ಹಣದ ಮೇಲೆ ಜೀವನ ಸಾಗಿ ಬಂತು. ಹಾಗಾಗಿ ಕಟಗೇರಿ ದಾಸರು ಅಂತ ಅನಂತಾಚಾರ್ಯರು ಪ್ರಸಿದ್ಧಿ ಪಡೆದರು.

ಬಾಗಲಕೋಟೆಯ ಶಂಕ್ರೆಪ್ಪ ಸಕ್ರಿ ಹೈಸ್ಕೂಲ್ ನಲ್ಲಿ ಮುಲ್ಕಿಹಾಗು ಎಸ್.ಎಸ್.ಸಿ ಪರೀಕ್ಷೆಗಳನ್ನು ದಾಸರು ಪಾಸು ಮಾಡಿದ್ರು. ನಂತರ ೧೯೭೬ರಲ್ಲಿ ಮದುವೆ ಮಾಡಿಕೊಂಡು ಧಾರವಾಡಕ್ಕೆ ಬಂದ್ರು. ಅಕ್ಕ ಶಾಂತಾಬಾಯಿ ಹಾಡು ಕಟ್ಟುವುದರಲ್ಲಿ ಎತ್ತಿದ ಕೈ. ಆ ಹಾಡುಗಳಿಗೆ ಥಟ್ ಅಂತ ರಾಗ ಸಂಯೋಜಿಸುವುದರಲ್ಲಿ ದಾಸರದ್ದು ಎತ್ತಿದ ಕೈ! ‘ಶ್ರವಣದಿಂದ ಸಂಗೀತ ಕಲಿತೆ’ ಅನ್ನುವ ದಾಸರು, ಕಿತ್ತೂರಿನ ವ್ಯಾಸರಾವ್ ಇನಾಂದಾರ್ ಅವರಿಗೆ ದಾಸರ ಪದ ಕಲಿಸುತ್ತಿದ್ದರು. ವಿದ್ವನ್ಮಣಿಗಳಾಗಿದ್ದ ಇನಾಂದಾರ್ ಅವರು ದಾಸರಿಗೆ ರಾಗ-ಲಯ-ತಾಳ ಹಾಗು ಸಂಗೀತದ ಸಾಕಷ್ಟು ಮುಖಗಳ ಪರಿಚಯ ಮಾಡಿಸಿದ್ರು ಅಂತ ವಿನಮ್ರವಾಗಿ ನೆನೆಯುತ್ತಾರೆ ದಾಸರು.

ಸೈಕಲ್ ಮೇಲೆ ಮನೆ-ಮನೆಗಳಿಗೆ ತೆರಳಿ ಮಕ್ಕಳಿಗೆ, ಕಲಿಯಲು ಆಸಕ್ತಿ ಇದ್ದ ಹಿರಿಯರಿಗೆ ದಾಸರ ಪದಗಳನ್ನು ಕಟಗೇರಿ ಅವರು ಕಳೆದ ೫ ದಶಕಗಳಿಂದ ಕಲಿಸುತ್ತಿದ್ದಾರೆ. ಈ ಇಳಿ ವಯಸ್ಸಿನಲ್ಲಿಯೂ ಆ ಕಾಯಕ ಮುಂದುವರೆದಿದೆ. ಆದರೆ ಹಿರಿಯರ ಆಶಯ, ಕಿರಿಯರ ಆಸಕ್ತಿಗಳು ಬದಲಾಗುತ್ತಿರುವ ಬಗ್ಗೆ ದಾಸರಿಗೆ ತೀವ್ರ ಖೇದವಿದೆ.

ಇತ್ತೀಚಿನ ಹಾಡುಗಳು, ಸಾಹಿತ್ಯ ಹಾಗು ರಾಗ ಸಂಯೋಜನೆಯ ಬಗ್ಗೆ ಅವರಿಗೆ ತೀವ್ರ ಅಸಮಾಧಾನವಿದೆ. ಕಟಗೇರಿ ದಾಸರ ಸಾಕಷ್ಟು ಪದಗಳನ್ನು, ರಾಗಗಳನ್ನು ನಕಲು ಮಾಡಿ ಧ್ವನಿ ಸುರುಳಿ ಹೊರಡಿಸಿ ಲಕ್ಷಾಂತರ ರೂಪಾಯಿ ಹಣ ಗಳಿಸಿರುವ ಶಿಷ್ಯೋತ್ತಮರ ಪಡೆಯೇ ಇದೆ! ಆದರೆ ದಾಸರು ಈ ವಿಷಯಗಳ ಪ್ರತಿ ನಿರ್ಲಿಪ್ತ. ವ್ಯಾವಹಾರಿಕ ಜಾಣತನ ಅವರಲ್ಲಿಲ್ಲ.

ಜನರಲ್ಲಿ ದಾಸರ ಪದಗಳ ಬಗ್ಗೆ ತಿಳಿವಳಿಕೆ ಕೊಂಚ ಕಡಿಮೆ. ಆ ತಿಳಿವಳಿಕೆ ಮಟ್ಟ ಹೆಚ್ಚಿಸುವ ಬಗೆ ಹೇಗೆ? ದಾಸರ ಪದಗಳಲ್ಲಿರುವ ಶುದ್ಧ ಕನ್ನಡವನ್ನು ಉಳಿಸಿ ಬೆಳೆಸುವ ಬಗೆ ಹೇಗೆ? ‘ಪ್ರಾಸಾಧಿಕವಾಗಿ’ ಶೈಲಿ ಉಳಿಸುವ ರೀತಿಗಳೇನು? ‘ಯತಿಪ್ರಾಸ’ ಹಾಗು ‘ಯತಿ ಛಂದಸ್ಸ’ನ್ನು ಮುಂದಿನ ಪೀಳಿಗೆಗೆ ನೀಡುವುದು ಹೇಗೆ? ಈ ಚಿಂತೆಗಳೇ ದಾಸರನ್ನು ಸದ್ಯ ಹಣ್ಣು ಮಾಡುತ್ತಿವೆ. ಸಧ್ಯ ಧಾರವಾಡದ ಮದಿಹಾಳ ಬಳಿಯ ಟೊಣಪಿ ಗಲ್ಲಿಯಲ್ಲಿ ವಾಸವಾಗಿರುವ ದಾಸರದ್ದು ಮನೆಯಲ್ಲ! ಶತಮಾನ ಕಂಡಿರುವ ಲಕ್ಷ್ಮೀನಾರಾಯಣ ದೇವರ ಗುಡಿಯನ್ನೇ ಜೀರ್ಣೋದ್ಧಾರ ಮಾಡಿಕೊಂಡು ವಾಸಿಸುತ್ತಿದ್ದಾರೆ.

ಆದರೆ, ದಾಸರು ದೇಶದ ಉದ್ದಗಲಕ್ಕೆ ಸುತ್ತಿ ಖ್ಯಾತನಾಮರ ಮನೆಗಳಲ್ಲಿ ದಾಸವಾಣಿ, ಗಮಕ ಗೋಷ್ಠಿಗಳನ್ನು ನಡೆಸಿದ್ದಾರೆ. ಪುಣೆಯಲ್ಲಿ ಪಂಡಿತ ಭೀಮಸೇನ್ ಜೋಶಿ ಅವರ ನಿವಾಸದಲ್ಲಿ, ಗವಾಯಿ ಪ್ರಭುದೇವ್ ಸರ್ದಾರ್ ಅವರ ನಿವಾಸದಲ್ಲಿ, ಮದ್ರಾಸಿನ ಖ್ಯಾತ ವಿದ್ವಾಂಸ ಧರ್ಮಪ್ರಕಾಶ್ ಮನೆ ಸೇರಿದಂತೆ ಬೆಂಗಳೂರು, ಮುಂಬೈ, ಪುಣೆ, ಹೈದ್ರಾಬಾದ್, ಕಲ್ಕತ್ತಾ, ಚೆನ್ನೈ ಹಾಗು ದೆಹಲಿಯಲ್ಲಿ ದಾಸರು ಕಾರ್ಯಕ್ರಮಗಳನ್ನು ನೀಡಿದ್ದಾರೆ.

೧೯೯೩ರಲ್ಲಿ ಹರಿನಾಮ ಸುಧಾ ಹಾಗು ಇತ್ತೀಚೆಗೆ ದೇವ ಧನ್ವಂತರಿ ೨೦೦೩, ಧ್ವನಿ ಸುರುಳಿ ಹಾಗು ಪಂಡಿತ ರವೀಂದ್ರ ಯಾವಗಲ್ ಸಹಕಾರದಲ್ಲಿ ತಾವೇ ಸ್ವತ: ರಾಗ ಸಂಯೋಜಿಸಿ ಕಟಗೇರಿ ದಾಸರು ದೇವಧನ್ವಂತರಿ ಸಿ.ಡಿ. (೨೦೦೭) ಬಿಡುಗಡೆ ಮಾಡಿದ್ದಾರೆ.

ಸಂಗೀತಾ ಕಟ್ಟಿ, ಕಾಂಚನಾ ಜೋಶಿ, ಮಂಜುಳಾ ಜೋಶಿ, ಸ್ವರೂಪ್ ರಾಣಿ, ಲತಾ ನಾಡಿಗೇರ್, ಮೇಘನಾ ನಾಡಿಗೇರ್, ಅರ್ಚನಾ ಕುಲಕರ್ಣಿ, ಡಾ. ಎಸ್.ಆರ್.ಕುಲಕರ್ಣಿ, ಡಾ.ಎಸ್.ಆರ್.ಕೌಲಗುಡ್ಡ, ಇಂಜಿನೀಯರ್ ಪಿ.ಎಂ.ಕುಲಕರ್ಣಿ, ಉದಯ ದೇಶಪಾಂಡೆ, ಅಮೃತಾ ಹಾಲಗೇರಿ, ಛಾಯಾ ಪಟ್ಟಣಕೋಡಿ ಹಾಗು ರಾಜೇಶ್ವರಿ ಪಟ್ಟಣಕೋಡಿ ಮೊದಲಾದವರು ದಾಸರಲ್ಲಿ ದಾಸವಾಣಿ ಅಭ್ಯಸಿಸಿ ನಾಡಿನ ಖ್ಯಾತ ಗಾಯಕರ ಪಟ್ಟಿಯಲ್ಲಿದ್ದಾರೆ.

ಕನ್ನಡ ಹಾಗು ಸಂಸ್ಕೃತಿ ಇಲಾಖೆ ಕೊಡಮಾಡಿದ ೧,೦೦೦/- ರುಪಾಯಿಗಳ ಮಾಸಾಶನದಲ್ಲಿ ಹಾಗು ನಿತ್ಯ ದಾಸರ ಪದಗಳನ್ನು ಕಲಿಯಲು ಬರುವ ೧೨ ರಿಂದ ೧೭ ವರ್ಷದ ಹತ್ತಾರು ಮಕ್ಕಳ ತಿಂಗಳ ಫೀ ಹಣದಲ್ಲಿ ದಾಸರ ಬದುಕಿನ ಬಂಡಿ ಸಾಗುತ್ತಿದೆ. ಕಟಗೇರಿ ದಂಪತಿಗಳಿಗೆ ಸಂತಾನವಿಲ್ಲ. ‘ನನ್ನ ಶಿಷ್ಯರೇ ನನ್ನ ಚಿರಂಜೀವಿ ಸಂತಾನ’ ಎನ್ನುತ್ತಾರೆ ದಾಸರು.

‘ಕಟಗೇರಿ ದಾಸರು ನಮ್ಮ ನಾಡಿನ ಆಸ್ತಿ. ಅವರ ಜ್ನಾನವನ್ನು ದಾಖಲಿಸಿ ಇಡುವ ಅವಶ್ಯಕತೆ ಇದೆ. ದಾಸರ ಪದಗಳ ಕುರಿತಾದ ಶಾಸ್ತ್ರೀಯ ಅಧ್ಯಯನಕ್ಕೆ ಅನೇಕ ಮಾರ್ಗಗಳು ತನ್ಮೂಲಕ ತೆರೆದುಕೊಳ್ಳಲಿವೆ. ಅವರ ಕಳಕಳಿಗೆ ಮಾನ್ಯತೆ, ಮನ್ನಣೆ ದೊರಕಬೇಕಿದೆ. ಗಮಕ ಕಲಾ ಪರಿಷತ್ತು, ಸರಕಾರೇತರ ಸಂಸ್ಥೆಗಳು ಕೈಜೋಡಿಸಿದರೆ ಸ್ಥಳೀಯರು ಈ ಕೆಲಸಕ್ಕೆ ಎಲ್ಲರೀತಿಯಿಂದಲೂ ಅಧಾರವಾಗಲು ಸಿದ್ಧರಿದ್ದೇವೆ’ ಎನ್ನುತ್ತಾರೆ ಹಿರಿಯ ನ್ಯಾಯವಾದಿ ಎಸ್.ಎಚ್.ಕಾಂತನವರ. ಸಂಗೀತ. ನೃತ್ಯ ಮತ್ತು ನಾಟಕ ಅಕಾಡೆಮಿ, ಜಾನಪದ ಅಕಾಡೆಮಿ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆಕಾಶವಾಣಿ ಮುಂದಾಗಿ, ಗೌರವ ಧನ ನೀಡಿ, ದಾಸರ ಜ್ನಾನದ ಧ್ವನಿ ಮುದ್ರಣ ಮಾಡಿಕೊಳ್ಳಲು, ತನ್ಮೂಲಕ ಮುಂದಿನ ಪೀಳಿಗೆಗೆ ದಾಸ ಸಾಹಿತ್ಯ, ಗಮಕ ಪರಿಚಯಿಸುವ ತುರ್ತು ಕೆಲಸ ಆಗಬೇಕಿದೆ.

"ಹರ್ಷಪ್ಪ..ನಾನು ಅಲ್ಪಮತಿ. ನನಗಿಂತ ತಿಳಿದವರು ಭಾಳ ಜನ ಇದ್ದಾರ. ಅವರ ಭೇಟಿ ಮಾಡಿಸ್ತೇನಿ. ಅದೇನು ಬರೀತಿಯೋ ಬರಿ. ಒಟ್ಟಾರೆ ದಾಸ ಸಾಹಿತ್ಯ ಉಳಿಬೇಕು, ಬೆಳಿಬೇಕು ಹಂಗ ಮಾಡು!" ಅಂತ ಕಟಗೇರಿ ದಾಸರು ಮಾತಿಗೆ ವಿರಾಮ ಹಾಕಿದರು.

"ಕೊಡದೇ ಕೊಡನು ಹರಿ, ಕೊಟ್ಟುದನ್ನು ‘ಅನಂತ’ ಮಡಿ ಮಾಡಿ ಕೊಡುವ" ಕಟಗೇರಿ ದಾಸರ ಬದುಕು ಅದೆಷ್ಟು ಅನ್ವರ್ಥಕ ಈ ಮಾತಿಗೆ?