ಅಮ್ಮ ನ ನೆನಪು ಮತ್ತು ಫಾರಿನ್ನು .:)

ಅಮ್ಮ ನ ನೆನಪು ಮತ್ತು ಫಾರಿನ್ನು .:)

ಅಮ್ಮನಿಗೆ ಮೊಬೈಲ್ ಕಂಡರೆ ಆಗಲ್ಲ.

ಮಗನ ಜತೆ ಮಾತನಾಡಬಹುದು ಅನ್ನುವ ಒಂದು ಕಾರಣ ಇಲ್ಲದೇ ಹೋಗಿರದಿದ್ದರೆ ಅದನ್ನು ಯಾವಾಗಲೋ ಎಸೆದಿರುತಿದ್ದಳು ಅನ್ನಿಸುತ್ತೆ.
ಮೊಬೈಲ್ ನಲ್ಲಿ ಕರೆ ಸ್ವೀಕರಿಸುವ ಗುಂಡಿ ಬಿಟ್ಟರೆ ಬೇರೇನೂ ಒತ್ತಲು ಗೊತ್ತಿಲ್ಲ. ಅದನ್ನೂ ನಾನು ಕರೆ ಮಾಡುವೆ ಎಂಬ ಉದ್ದೇಶದಿಂದಲೇ ಕಷ್ಟಪಟ್ಟು ಕಲಿತದ್ದು . ನನ್ನ ಬಿಟ್ಟರೆ ಬೇರೆ ಯಾರೂ ಕರೆ ಮಾಡದೇ ಹೋದರೂ ಯಾವಾಗಲೋ ಒಮ್ಮೆ ಆ ನಂಬರನ್ನು ನಾನು ಉಪಯೋಗಿಸಿದ್ದನ್ನು ನೆನೆದು ಕೊಂಡು ನನ್ನ ಗೆಳೆಯರು ಮಾಡಿರಬಹುದು ಅಂತ ಊಹೆ ಮಾಡುತ್ತಾಳೆ. ಆ ನಂಬಿಕೆಗೆ ತುಪ್ಪ ಹುಯ್ಯುವಂತೆ ನಾನೂ ಆಗಾಗ್ಗೆ ಬೇರೆ ದನಿಯಲ್ಲಿ ಮಾತಾಡಿ ಕಾಡುತಿರುತ್ತೇನೆ.
ಯಾವಾಗಲೋ ಒಮ್ಮೆ ಬೇರೆ ಯಾರಾದರೂ ಕರೆ ಮಾಡಿದಾಗ ನಾನೇ ಬೇರೆ ದನಿಯಲ್ಲಿ ಮಾತಾಡ್ತಾ ಇದ್ದೇನೆ ಅಂದುಕೊಂಡು ಅವಳ ಬಾಯಲ್ಲಿ ಹಿಗ್ಗಾ ಮುಗ್ಗಾ ಉಗಿಸಿಕೊಳ್ಳುತ್ತಾರೆ ಅನ್ನಿಸುತಿರುತ್ತದೆ.
ಆದರೆ ಹಾಗೆಂದೂ ಆಗಿಲ್ಲ .

ಎಷ್ಟು ಸಲ ಆ ರೀತಿ ಮಾಡಿದರೂ ಮತ್ತೆ ಮತ್ತೆ ಮೋಸ ಹೋಗುತ್ತಾಳೆ. ನನಗೆ ಮೊದಲ ತೊದಲ ಮಾತು ಕಳಿಸಿದ ಋಣ ಮರೆಯದೇ ಎಲ್ಲೂ ನೋವಾಗದಂತೆಯೇ ಮಾತಾಡುವೆ. ಕಾಮಿಡಿ ಟೈಮ್ ಗಣೇಶ್ ತರ ಬೇರೆ ದನಿಯಲ್ಲಿ ಮಾತಾಡಿದ,
ಅಂತ ಎಲ್ಲೆಡೆ ಕುಶೀಯಿಂದ ಹೇಳಿಕೊಳ್ಳಬೇಕು ಹಾಗೆ ಮಾತಾಡುತಿದ್ದೆ.

ಅಪ್ಪ ತೀರಿ ಹೋದ ಮೇಲೆ ಮನೆಯಲ್ಲಿ ಒಬ್ಬಳೇ ಇರುತ್ತಳಲ್ಲ ಅಂತ ಬೇಸರಾಗಿ ನಾನು ಮಾಲ್ಡಿವ್ಸ್ ಗೆ ಬಂದ ಮೇಲೆ ಹೆಚ್ಚು ಕರೆ ಮಾಡುತ್ತೇನೆ. ಕೆಲಸಕ್ಕೆ ಹೋದ ಅಣ್ಣ ಮರಳಿ ಬರುವುದು ರಾತ್ರಿಯೆ. ಅವನ ಬಳಿ ಮೈಲ್ ನಲ್ಲಿ ಮಾತಾಡಬಹುದು.ಹಾಗಾಗಿ ಅವಳು ಧಾರಾವಾಹಿಗಳಿಗೆ ಅಡ್ಡಿಯಾಗದಂತೆ ಸಮಯ ನೋಡಿ ಕರೆ ಮಾಡ್ತಾ ಇರ್ತೇನೆ.
ಒಮ್ಮೆ ಈ ಕೀಟಲೆ ಮನಸ್ಸಿಗೆ ಯಾಕೋ ಅಮ್ಮನ ಜನರಲ್ ನಾಲೆಜ್ ನೋಡಬೆಕನ್ನಿಸಿತು. “ಎಲ್ಲಿದ್ದಾನೆ ಈಗ ನಿಮ್ಮ ಕಿರಿಯ ಮಗ ?”ಅಂತ ಯಾರಾದರೂ ಕೇಳಿದರೆ “ಫಾರಿನಲ್ಲಿದ್ದಾನೆ ” ಅನ್ನಬಲ್ಲಳಾದರೂ ಎಲ್ಲಿ ಅಂತ ಕೇಳಿದರೆ ಎನನ್ನುವಳು ಎಂಬ ಕುತೂಹಲ ನನಗೂ ಇತ್ತು.
ಅಂದೂ ಕರೆ ಮಾಡಿ ವಿಭಿನ್ನ ದನಿಯಲ್ಲಿ ಮಾತು ಶುರು ಮಾಡಿದೆ.
“ಎಲ್ಲಿದ್ದಾನಮ್ಮ ನಿಮ್ಮ ಕಿರೀ ಮಗ?”
“ಮ್..ಅವ ಫಾರಿನ್ನಿಗ್ ಹೋಯ್ದ..”
“ಅಯ್ಯ… ಫಾರೀನ್ ಅಂದ್ರೆ ಎಲ್ಲಿ..?”
“ಮ್..ಅದ್ ಅದ್ .. ಮೋಸ್ಕೋ ಅಂತ್ ಹೇಳಿ ಕಾಣುತ್ತ್… ಸರೀಗೆ ಗೊತ್ತಿಲ್ಲ ಕಾಣಿ..” ಅಂತ ಕೇಳಿದೊಡನೆ ನಗು ತಡೆಯಲಾಗಲಿಲ್ಲ.
ತನ್ನ ಪ್ರೀತಿ ಮುಗ್ಧತೆಯಿಂದ , ಪ್ರೀತಿಯಿಂದ ಸದಾ ನೆನಪಾಗ್ತಾ ಇರ್ತಾಳೆ. ಮಗ ಫಾರಿನ್ನಿಗೆ ಹೋದ ಅಂತ ಒಂದು ಹೆಮ್ಮೆ,,ನನ್ನೆಡೆಗಿನ ಭರ್ಜರಿ ಪ್ರೀತಿ ಬಿಟ್ಟರೆ ಆಕೆಯ ಮನದಲ್ಲಿ ಬೇರೇನೂ ಕಾಣಸಿಗದು.
ತನ್ನ ಹಾಸ್ಪಿಟಾಲಿಟಿಗಾಗಿ ಜಗತ್ತಿಗೇ ಹೆಸರುವಾಸಿಯಾದ ಮಾಲ್ಡಿವ್ಸ್ ಗೆ ಬಂದರೂ ಅಮ್ಮನ ಪ್ರೀತಿ ಸಿಗದಷ್ಟು ದೂರ ಇರುವ ನಾವು ಒಂದು ತರ ಅನಾಥರೆ ಅಲ್ಲವೇ ಎಂಬುದು ಆಗ್ಗಾಗ್ಗೆ ಚುಚ್ಚುತ್ತಾ ಇರುತ್ತದೆ…

Rating
No votes yet

Comments